ವಿಷಯದ ವಿವರಗಳಿಗೆ ದಾಟಿರಿ

Posts tagged ‘ಬಿಜೆಪಿ’

10
ನವೆಂ

ಅಯೋಧ್ಯೆ : ಸೆಕ್ಯುಲರ್ ಮಾರೀಚರಿಗೆ ಸುಪ್ರೀಂ ರಾಮಬಾಣ

ರಾಕೇಶ್ ಶೆಟ್ಟಿ

ನವೆಂಬರ್ ೯,೨೦೧೯ರ ಶನಿವಾರದ ದಿನಕ್ಕೂ,ಸೆಪ್ಟಂಬರ್ ೩೦,೨೦೧೦ರ ಗುರುವಾರದ ದಿನಕ್ಕೂ ಸಾಮ್ಯತೆಯಿದೆ. ಆ ಎರಡು ದಿನಗಳು ೪೯೧ ವರ್ಷಗಳಷ್ಟು ಹಳೆಯದಾದ ರಾಮಜನ್ಮಭೂಮಿಯ ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದ ಕೇಸಿನ ತೀರ್ಪು ಬರುವ ದಿನಗಳಾಗಿದ್ದವು.

“ವಿವಾದಿತ 2.7 ಎಕರೆ ಭೂಮಿಯನ್ನು ಯಾವುದೇ ಒಂದು ಪಂಗಡಕ್ಕೆ ನೀಡದೆ ಮೂರು ಹೋಳುಗಳನ್ನಾಗಿ,ಪ್ರಸ್ತುತ ರಾಮಲಲ್ಲಾ ಇರುವ ಸ್ಥಳ ರಾಮಮಂದಿರ ನಿರ್ಮಾಣಕ್ಕೆ,ಅದರ ಹೊರಗಿನ ಜಾಗ ಬಾಬ್ರಿ ಮಸೀದಿ ಕ್ರಿಯಾ ಸಮಿತಿಗೆ ಸೇರಬೇಕು ಮತ್ತು ಉಳಿದ ಮೂರನೇ ಒಂದು ಭಾಗವನ್ನು ನಿರ್ಮೋಹಿ ಅಖಾಡಕ್ಕೆ ನೀಡಬೇಕು” ಎಂದು ಅಲಹಾಬಾದ್ ಹೈಕೋರ್ಟ್ ೨೦೧೦ರಲ್ಲಿ ನೀಡಿದ ತೀರ್ಪು ಯಾವ ಗುಂಪಿಗೂ ಒಪ್ಪಿಗೆಯಾಗಲಿಲ್ಲ.ಆ ನಂತರ ೨೦೧೧ರ ಅಕ್ಟೋಬರ್ ತಿಂಗಳಿನಲ್ಲಿ,ಸುಪ್ರೀಂ ಕೋರ್ಟು,ಅಲಹಬಾದ್ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಿತ್ತು.

ಅದಾದ ನಂತರ ಈ ಕೇಸಿಗೆ ಪೂರಕವಾಗಿ ಬಂದ ಮತ್ತೊಂದು ಬಹುಮುಖ್ಯ ತೀರ್ಪು, 1994ರ ಅಲಹಾಬಾದ್ ಹೈಕೋರ್ಟ್ ಆದೇಶದಂತೆ, ಇಸ್ಲಾಂ ಪ್ರಕಾರ ಮಸೀದಿಯ ಮಹತ್ವ ಹಾಗೂ ನಮಾಜ್ ಮಾಡಲು ಅದೇ ಜಾಗ ಆಗಬೇಕೆಂದೇನಿಲ್ಲ, ಬಯಲು ಪ್ರದೇಶವೊಂದರಲ್ಲೂ ಪ್ರಾರ್ಥನೆ ಸಲ್ಲಿಸಬಹುದು ಎಂಬ ತೀರ್ಪನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದ್ದು ಹಾಗೂ ಈ ವಿವಾದ ವಿಚಾರಣೆಗೆ ಸಾಂವಿಧಾನಿಕ ಪೀಠದ ಅಗತ್ಯವಿಲ್ಲ ಎನ್ನುವುದಾಗಿತ್ತು.

ಇದಾದ ನಂತರ ಅರ್ಜಿದಾರರು ಹಾಗೂ ಮಧ್ಯಸ್ಥಿಕೆದಾರರ ಜೊತೆಗೂಡಿ ಸಮಸ್ಯೆಗೆ ಸೌಹಾರ್ದಯುತ ಪರಿಹಾರಕ್ಕೂ ಸುಪ್ರೀಂ ಕೋರ್ಟ್ ಮಾರ್ಚ್ ತಿಂಗಳಲ್ಲಿ ಅವಕಾಶ ನೀಡಿತ್ತು. ಅಂತಿಮವಾಗಿ ಸತತ ೪೦ ದಿನಗಳ ಮ್ಯಾರಥಾನ್ ವಿಚಾರಣೆ ನಡೆಸಿತ್ತು.ಕಡೆಯ ದಿನ ಮತ್ತಷ್ಟು ಸಮಯ ಕೋರಿದ ಅರ್ಜಿದಾರರಿಗೆ,ಮುಖ್ಯನ್ಯಾಯ ಮೂರ್ತಿಗಳಾದ ರಂಜನ್ ಗೋಗೋಯ್ ಅವರು ‘Enough is Enough’ ಎಂದಿದ್ದರು.ಎಲ್ಲರ ಚಿತ್ತ ನವೆಂಬರ್ ತಿಂಗಳಲ್ಲಿ ಬರಲಿರುವ ತೀರ್ಪಿನ ಮೇಲೆಯೇ ಇತ್ತು. ನವೆಂಬರ್ ೯ನೇ ತಾರೀಕು ಐತಿಹಾಸಿಕ ತೀರ್ಪು ಹೊರಬಿದ್ದಿದೆ. ವಿವಾದಿತ ೨.೨೭ ಎಕರೆ ಜಾಗವು ರಾಮ್ ಲಲ್ಲಾನಿಗೆ ಸೇರಿದ್ದು ಎಂದು ಕೋರ್ಟ್ ತೀರ್ಪಿತ್ತಿದೆ. ಸುನ್ನಿ ವಕ್ಫ್ ಬೋರ್ಡಿಗೆ ಬೇರೆ ಜಾಗದಲ್ಲಿ ೫ ಎಕರೆ ಭೂಮಿಯನ್ನು ಇನ್ನು ೩-೪ ತಿಂಗಳಲ್ಲಿ ನೀಡುವಂತೆಯೂ ಸೂಚಿಸಿದೆ. ಮಂದಿರ ನಿರ್ಮಾಣದ ಹೊಣೆಯನ್ನು ಹಾಗೂ ನಿರ್ವಹಣೆಗಾಗಿ ಟ್ರಸ್ಟ್ ರಚನೆಯ ಹೊಣೆಯನ್ನು ಕೇಂದ್ರ ಸರ್ಕಾರಕ್ಕೆ ವಹಿಸಿದೆ.ಬಾಬ್ರಿ ಮಸೀದಿಯು ಖಾಲಿ ಜಾಗದಲ್ಲಿ ನಿರ್ಮಾಣವಾಗಿಲ್ಲ ಎನ್ನುವುದನ್ನು ಕೋರ್ಟ್ ಒಪ್ಪಿದೆಯಾದರೂ, ಮಂದಿರವನ್ನು ಕೆಡವಿ ಕಟ್ಟಿರುವುದುಕ್ಕೆ ಪುರಾವೆ ಇಲ್ಲವೆಂದಿದೆ.ಹಾಗೆಯೇ ಮಸೀದಿಯ ಕೆಳಗೆ ಎಎಸ್ಐ ಉತ್ಖನನ ನಡೆಸಿ ನೀಡಿದ ವರದಿಯನ್ನು ಪುರಸ್ಕರಿಸಿ ಅಲ್ಲಿ ಇಸ್ಲಾಮೇತರ ಮಂದಿರದ ಅವಶೇಷ ಸಿಕ್ಕಿರುವುದನ್ನು ಒಪ್ಪಿಕೊಂಡಿದೆ. ಜೊತೆಗೆ ವಿವಾದಿತ ಜಾಗವು ರಾಮ ಜನ್ಮಸ್ಥಳ ಎನ್ನುವ ಹಿಂದೂಗಳ ವೈಯುಕ್ತಿಕ ನಂಬಿಕೆಯು ವಿವಾದರಹಿತವಾದದ್ದು ಎಂದಿದೆ.ಇದಿಷ್ಟು ತೀರ್ಪಿನ ಸಾರಾಂಶ.

ಮತ್ತಷ್ಟು ಓದು »

14
ಜೂನ್

ಕೆಲವು ವ್ಯಕ್ತಿತ್ವಗಳು ಅರ್ಥವಾಗಬಾರದು, ಅಮಿತ್ ಶಾರಂತೆ!

– ಸಂತೋಷ್ ತಮ್ಮಯ್ಯ

೨೦೧೫ರ ಅಕ್ಟೋಬರಿನಲ್ಲಿ ದೆಹಲಿಯ ಶ್ಯಾಮ್‌ಪ್ರಸಾದ್ ಮುಖರ್ಜಿ ಅಧ್ಯಯನ ಕೇಂದ್ರ ಯುವ ಬರಹಗಾರರನ್ನು ಕರೆಸಿ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಆಯೋಜಿಸಿತ್ತು. ದೇಶದ ಮೂಲೆಮೂಲೆಗಳಿಂದ ಆಗಮಿಸಿದ್ದ ಬರಹಗಾರರು ದೆಹಲಿಯ ಪಾಲಿಕಾ ಭವನದಲ್ಲಿ ಕಿಕ್ಕಿರಿದು ತುಂಬಿದ್ದರು. ಎರಡು ದಿನ ಪೂರ್ತಿ ರಾಷ್ಟ್ರೀಯತೆ, ರಾಜಕೀಯ ಸಿದ್ಧಾಂತಗಳು, ರಾಷ್ಟ್ರೀಯತೆಯ ಸವಾಲುಗಳು ಮತ್ತು ಅಪಾಯಗಳ ಬಗೆಗಿನ ಗೋಷ್ಠಿಗಳು ನಡೆದವು. ಅನಿರ್ಬನ್ ಗಂಗೂಲಿ, ವಿವೇಕ್ ಅಗ್ನಿಹೋತ್ರಿ, ಆರೆಸ್ಸೆಸ್ಸಿನ ನಂದಕುಮಾರ್ ಮುಂತಾದ ಖ್ಯಾತ ಚಿಂತಕರ ಗೋಷ್ಠಿಗಳು ಜರುಗಿದವು. ಸಮಾರೋಪ ಸಮಾರಂಭಕ್ಕೆ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಶಾರವರು ಆಗಮಿಸಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಲಾಯಿತು. ಅಲ್ಲಿಯವರೆಗೂ ವೈಚಾರಿಕತೆಯ ಗುಂಗಲ್ಲಿದ್ದ ಕೆಲ ಯುವ ಬರಹಗಾರರು ಸಣ್ಣಗೆ ಗೊಣಗಲಾರಂಭಿಸಿದರು. ಇಷ್ಟು ಹೊತ್ತು ಚಿಂತಕರಿಂದ ಉಪನ್ಯಾಸ ಮಾಡಿಸಿದ ಕೇಂದ್ರದವರು ಈಗ ರಾಜಕಾರಣಿಯನ್ನೇಕೆ ಕರೆಸಿದ್ದಾರೆ? ಅದೂ ರಾಜಕಾರಣ ಮತ್ತು ರಾಜಕೀಯ ಸಿದ್ಧಾಂತಗಳ ಬಗ್ಗೆ ಅಮಿತ್ ಶಾರೇನು ಮಾತಾಡಬಲ್ಲರು? ಹೆಚ್ಚೆಂದರೆ ಜನಸಂಘದ ಒಂದೆರಡು ಕಥೆಗಳನ್ನು ಹೇಳಿ ಮುಗಿಸಬಲ್ಲರಷ್ಟೆ ಎಂದುಕೊಂಡರು. ಸಂಜೆಯಾಯಿತು. ಎಂದಿನಂತೆ ಮುಖ ಗಂಟಿಕ್ಕಿಕೊಂಡ ಅಮಿತ್ ಶಾ ವೇದಿಕೆಗೆ ಹತ್ತಿದರು. ಪೋಡಿಯಂ ಮುಂದೆ ನಿಂತರು.ಇದ್ದಕ್ಕಿದ್ದಂತೆ ಪಿಸುಗುಡುತ್ತಿದ್ದ ಪಾಲಿಕಾ ಭವನದ ಸಭಾಂಗಣ ಸೂಜಿ ಬಿದ್ದರೂ ಸದ್ದಾಗುವಷ್ಟು ಮೌನವಾಯಿತು, ಗಡಸು ಧ್ವನಿಗೆ ಸಭೆ ಸಮ್ಮೋಹನಕ್ಕೊಳಗಾಯಿತು. ಮುಂದಿನ ಒಂದೂವರೆ ಗಂಟೆ ಅಮಿತ್ ಶಾ ಅದೆಂಥಾ ವಾಗ್ಝರಿ ಹರಿಸಿದರೆಂದರೆ ತಿಲಕರು, ಸಾವರ್ಕರರು ಬಂದುಹೋದರು. ಗಾಂಧಿ ಚಳವಳಿ ಮತ್ತು ಸ್ವಾತಂತ್ರ್ಯಪೂರ್ವದ ಕಾಂಗ್ರೆಸಿನ ವಿಶ್ಲೇಷಣೆಯಾಯಿತು. ಲೋಹಿಯಾ ವಾಕ್ಯಗಳ ಉಲ್ಲೇಖವಾಯಿತು. ಜೆಪಿ ನುಸುಳಿದರು, ಹಳೆಯ ಯುಎಸ್‌ಎಸ್‌ಆರ್‌ನ ಪ್ರಾರಬ್ಧಗಳ ಮಂಡನೆಯಾಯಿತು. ನೆಹರೂ ಯುಗದ ಅದ್ವಾನಗಳು ಎಳೆಎಳೆಯಾಗಿ ಬಿಚ್ಚಲ್ಪಟ್ಟವು. ಮುಖರ್ಜಿ, ಉಪಾಧ್ಯಾಯರ ಆದರ್ಶಮಯ ಸಿದ್ಧಾಂತಗಳು ತೇಲಿಬಂದವು. ಅಟಲ್-ಅಧ್ವಾನಿಯವರ ರಾಜಕೀಯ ಬದ್ಧತೆಯವರೆಗೂ ಮಾತು ಸಾಗಿತು. ಕೆಲ ಚಿಂತಕರು ಘನಗಂಭೀರವಾಗಿ ತಲೆತೂಗುತಿದ್ದರೆ, ಇನ್ನು ಕೆಲವರು ಟಿಪ್ಪಣಿ ಮಾಡಿಕೊಳ್ಳತೊಡಗಿದರು! ಅಂದರೆ ಅಮಿತ್ ಶಾ ಸಂಶೋಧಕರಂತೆ, ಇವೆಲ್ಲಕ್ಕೂ ಪುರಾವೆ ಅಂಗೈಯಲ್ಲಿದೆ ಎನ್ನುವಂತೆ ಅಧಿಕಾರಯುತವಾಗಿ ಮಾತಾಡುತ್ತಿದ್ದರು. ಅವರು ಕಮ್ಯುನಿಸ್ಟ್ ಸಿದ್ಧಾಂತವನ್ನು, ಸಮಾಜವಾದವನ್ನು, ರಾಷ್ಟ್ರೀಯತೆಯ ಮಜಲುಗಳೆಲ್ಲವನ್ನೂ ಅರೆದು ಕುಡಿದಿದ್ದರು. ಅವರ ಅಂದಿನ ಮಾತುಗಳು ಸಭಿಕರಲ್ಲಿ ಎಂಥಾ ಗುಂಗು ಹಿಡಿಸಿತ್ತೆಂದರೆ ಭಾಷಣದ ನಂತರ ಆಯೋಜಕರು ಪ್ರಶ್ನೆಗಳಿಗೆ ಅವಕಾಶವಿದೆ ಎಂದು ಘೋಷಿಸಿದರು. ಆದರೆ ಯಾರಲ್ಲೂ ಪ್ರಶ್ನೆಗಳು ಉಳಿದಿರಲಿಲ್ಲ.

ಹಾಗೆ ನೊಡಿದರೆ ಅಮಿತ್ ಶಾ ಅಂದು ಹಾಗೆ ಕಂಡಿದ್ದು ನಮಗೆ ಮಾತ್ರವೇನೂ ಅಲ್ಲ, ಅವರು ಹಾಗೆ ಕಾಣುವುದು ಮೊದಲೂ ಆಗಿರಲಿಲ್ಲ!

ಮತ್ತಷ್ಟು ಓದು »

3
ಜನ

ಮೋದಿರಾಗಾ ಸರಿಸಿ ಮತ ಹಾಕಲು ಮತ್ತೊಂದು ಹೆಸರು ಹೇಳುವಿರಾ?

– ಗೋಪಾಲಕೃಷ್ಣ
ಚಿಕ್ಕಮಗಳೂರು

4CE0D6B8-390C-4E23-889C-7727E2BCC073ಹಾಗೆ ಒಮ್ಮೆ ಕಲ್ಪಿಸಿಕೊಳ್ಳಿ; 2014ರಲ್ಲಿ ನರೇಂದ್ರ ಮೋದಿಯವರಿಗೆ ಬಹುಮತ ಸಿಗದೇ ಇದ್ದಿದ್ದರೆ, 18 ಸ್ಥಾನಗಳನ್ನು ಗೆದ್ದಿದ್ದ ಶಿವಸೇನೆ, 16 ಸದಸ್ಯರನ್ನು ಹೊಂದಿದ್ದ ಚಂದ್ರಬಾಬು ನಾಯ್ಡು, 37 ಸ್ಥಾನ ಹೊಂದಿದ್ದ ಎಐಎಡಿಎಂಕೆ ಹೇಗೆಗೆಲ್ಲಾ ‘ಪೊಲಿಟಿಕಲ್ ಬ್ಲಾಕ್‍ಮೇಲ್’ ಮಾಡಬಹುದಿತ್ತು! ಅಂದು ಎನ್‍ಡಿಎ ಮೈತ್ರಿಕೂಟದ 336 ಸದಸ್ಯರಲ್ಲಿ 282 ಸ್ಥಾನಗಳೊಂದಿಗೆ ಬಿಜೆಪಿ ಸ್ಪಷ್ಟ ಬಹುಮತ ಪಡೆದಿತ್ತು. ಬಿಜೆಪಿ ಎನ್ನುವುದಕ್ಕಿಂತಲೂ ನರೇಂದ್ರ ಮೋದಿಯವರಿಗಾಗಿ ದೇಶ ನೀಡಿದ್ದ ಸ್ಪಷ್ಟ ಜನಾದೇಶವದು. ಹೀಗಿದ್ದರೂ ಶಿವಸೇನೆ ಪ್ರತಿಬಾರಿಯೂ ಕಿತಾಪತಿ ಮಾಡುತ್ತಲೇ ಬರುತ್ತಿದೆ. ಚಂದ್ರಬಾಬು ನಾಯ್ಡು ಅತ್ತಲಿಂದ ಇತ್ತ ಇತ್ತಲಿಂದ ಅತ್ತ ಜಿಗಿಯುತ್ತಲೇ ಇದ್ದಾರೆ. ಇನ್ನು ಜಯಲಲಿತಾ ಬದುಕಿದ್ದಿದ್ದರೆ ಅದು ಇನ್ನೊಂದು ರೀತಿಯ ರಾಜಕಾರಣವಾಗುತ್ತಿತ್ತು ಬಿಡಿ. ಮತ್ತಷ್ಟು ಓದು »

21
ಡಿಸೆ

ಮೋದಿ ಮತ್ತೊಮ್ಮೆ ಎನ್ನುವುದಕ್ಕಿಂತ, ಮೋದಿ ಮತ್ತೆ ಮತ್ತೆ ಎನ್ನಿ!

– ಸಾಗರ ಮುಧೋಳ

4CE0D6B8-390C-4E23-889C-7727E2BCC073ಕಳೆದ ಒಂದು ದಶಕದ ಹಿಂದೆ ಯಾರಾದರೂ ಒಬ್ಬ ವಿದ್ಯಾರ್ಥಿ ಅಥವಾ ಯುವಕ ತಾನೂ ಜೀವನದಲ್ಲಿ ಉನ್ನತವಾದುದನ್ನು ಸಾಧಿಸಬೇಕು ಅಂದುಕೊಂಡಿದ್ದರೆ, ಅದು ಅವನ ದೃಷ್ಟಿಯಲ್ಲಿ ವಿಜ್ಞಾನಿ, ಅಧ್ಯಾಪಕ, ಅಧಿಕಾರಿ, ವೈದ್ಯ ಹೀಗೆ ಹಲವು ಬಗೆಯಲ್ಲಿ ಯೋಚಿಸುತ್ತಿದ್ದ. ಆದರೆ, ತಪ್ಪಿಯೂ ನಾನೊಬ್ಬ ರಾಜಕಾರಣಿಯಾಗಬೇಕೆಂದು ಚಿಂತಿಸುತ್ತಿರಲಿಲ್ಲ. ರಾಜಕಾರಣವೆಂದರೆ ಅದೊಂದು ಸಮಾಜದ ಬಹು ಜನರ ಆಶೋತ್ತರಗಳಿಂದ ಅಸ್ಪೃಶ್ಯವಾಗಿಯೇ ಉಳಿದ ಕ್ಷೇತ್ರ. ಅಲ್ಲಿ ಮಾನವೀಯತೆ, ಪ್ರಾಮಾಣಿಕತೆ, ಒಳ್ಳೆಯತನಕ್ಕೆ ಬೆಲೆಯೇ ಇಲ್ಲ. ರಾಜಕಾರಣವಿರುವುದೇ ದುಡ್ಡು ಮಾಡುವುದಕ್ಕೆ, ಜನರನ್ನು ಮೋಸ ಮಾಡುವುದಕ್ಕೆ ಎನ್ನುವುದು ನಾಡಿನ ಹಲವರಿಂದ ಅಸ್ಖಲಿತವಾಗಿ ಹೊಮ್ಮುತ್ತಿದ್ದ ವಾಣಿ. ಯಾರೊಬ್ಬರೂ ಊಹಿಸಿರಲಿಲ್ಲ! 2014 ರ ಸಂದರ್ಭದಿಂದ ಈ ದೇಶದಲ್ಲಿ ಬಾಲಿವುಡ್, ಕ್ರಿಕೆಟ್ ಗಿಂತ ಅತಿ ಹೆಚ್ಚು ಚರ್ಚೆ ಮತ್ತು ಮೆಚ್ಚುಗೆ ಪಡೆದ ವಿಷಯ ರಾಷ್ಟ್ರದ ರಾಜಕೀಯವೇ ಆಯಿತು. ಮೋದಿ ಎಂದರೆ ಅವರೊಬ್ಬ Political leader ಅಲ್ಲ, ಬದಲಾಗಿ ದೇಶದ ಬ್ರಾಂಡ್! ಮೋದಿ ಟೀ,ಮೋದಿ ಕುರ್ತಾ,ಮೋದಿ ಜಾಕೆಟ್ ಎಲ್ಲವೂ ಬ್ರಾಂಡ್. ಮೋದಿಗೆ ಸಂಬಂಧಿಸಿರುವುದೆಲ್ಲವು ಬ್ರಾಂಡ್. ಹಿಂದೆ ಅಪ್ಪ -ಅಮ್ಮ ಮನೆಯಲ್ಲಿ ರಾತ್ರಿ ನ್ಯೂಸ್ ನೋಡುತ್ತಿರಬೇಕಾದರೆ, ತಮ್ಮನ್ನು ಇಂದಿನ ಕ್ರಿಕೆಟ್ ಮ್ಯಾಚನ್ನು ನೋಡುವುದರಿಂದ ತಪ್ಪಿಸಿರುವವರ ಕಡೆ ಮಕ್ಕಳು ಶಪಿಸುತ್ತಾ ಮೂಗು ಮುರಿಯುತ್ತಿದ್ದರು. ಆದರೆ ಮೋದಿ ಎಂಟ್ರಿ ಕೊಟ್ಟ ಮೇಲೆ ಸಕುಟುಂಬ ಸಮೇತರಾಗಿ ಮನೆಯ ಟಿ.ವಿ. ಪರದೆಯ ಮೇಲೆ ಮೋದಿ ಗಾಥೆಯನ್ನು ನೋಡಲು ಶುರುಹಚ್ಚಿದರು. 2014 ರಲ್ಲಿ ಮೋದಿ ಗೆಲ್ಲುವುದು ಅನಿವಾರ್ಯ ಮಾತ್ರವಲ್ಲ, ಅಂತಿಮವಾದ ಪೂರ್ವ ನಿಯೋಜಿತ ತೀರ್ಮಾನವಾಗಿತ್ತು. Breaking news ಗಾಗಿ ಹಪಹಪಿಸುತ್ತಿದ್ದ ನ್ಯೂಸ್ ಚಾನೆಲ್ ಗಳಿಗೆ ಮೋದಿಯಿಂದ ಪ್ರತಿದಿನ Breaking news ಸಿಗುವ ಹಾಗಾಯಿತು. ಕೊನೆಗೆ ಮೋದಿ ಸುನಾಮಿಯ ಎದುರು ಪ್ರತಿಪಕ್ಷಗಳು ಕೊಚ್ಚಿಕೊಂಡು ಹೋದವು. ಅತ್ತ ನಾಯಕತ್ವವುಯಿಲ್ಲದೆ, ಇತ್ತ ಧ್ಯೇಯೋದ್ದೇಶಗಳು ಇಲ್ಲದ ಪ್ರತಿಪಕ್ಷಗಳು ಮೋದಿಯ ವಿಜಯಕ್ಕೆ ತಲೆ ಬಾಗಲೇ ಬೇಕಾಯಿತು. ಮೋದಿ ಈ ದೇಶದ ಪ್ರಧಾನಮಂತ್ರಿ ಎಂದು ಜನ ಹೇಳುತ್ತಿರುವಾಗ, ” ನಾನು ಈ ದೇಶದ ಪ್ರಧಾನಮಂತ್ರಿಯಲ್ಲ, 125 ಕೋಟಿ ಭಾರತೀಯರ ಪ್ರಧಾನ ಸೇವಕ” ಎಂದ ಮೋದಿಯ ಕೃತಜ್ಞತಾ ಭಾವಕ್ಕೆ ಇಡೀ ದೇಶ ಶರಣೆಂದಿತು. ಮತ್ತಷ್ಟು ಓದು »

21
ನವೆಂ

ನಿಂದಕರಿಂದಲೇ ಸಂತೋಷ, ನಿಂದಕರಿದ್ದರೆ ಸಂತೋಷ

– ಬಿದರೆಪ್ರಕಾಶ್

“ನಿಂದಕರಿರಿಬೇಕು, ನಿಂದಕರಿರಬೇಕು
ದುಷ್ಟ ಜನರು ಸೃಷ್ಟಿಯೊಳಿದ್ದರೆ
ಶಿಷ್ಟ ಜನರಿಗೆಲ್ಲಾ ಕೀರ್ತಿಗಳು”

ಎಂದು ಅಂದು ಹಾಡಿದ ಪುರಂದರ ದಾಸರ ನುಡಿಗಳು ಎಂದಿಗೂ ಎಂದೆಂದಿಗೂ ಪ್ರಸ್ತುತವೆಂದು ಇತ್ತೀಚೆಗಿನ ಕೆಲವು ಹಿದ್ಯಮಾನಗಳಿಂದ ವೇದ್ಯವಾಗುತ್ತದೆ.. ಹೌದು, ಪುರಂದರದಾಸರ ವಾಣಿಯಂತೆ ದುಷ್ಟ ಜನರಿಂದಲೇ ಶಿಷ್ಟ ಜನರಿಗೆ ಕೀರ್ತಿಗಳು ಲಭ್ಯವಾಗಿವೆ. ಹಾಗೆಂದು ಈ ಶಿಷ್ಟ ಜನರು ಕೀರ್ತಿಗಾಗಿ ಆಸೆ ಪಟ್ಟವರಲ್ಲ, ಪರರ ತಂಟೆಗೆ ಹೋದವರಲ್ಲ, ಕರ್ತವ್ಯಮುಖಿಯಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಈ ಇಬ್ಬರು ವ್ಯಕ್ತಿಗಳು ಇಂದು ಖ್ಯಾತಿಗೆ, ಕೀರ್ತಿಗೆ ಭಾಜನರಾಗುತ್ತಿದ್ದಾರೆಂದರೆ ಅದಕ್ಕೆ ಕಾರಣ ಈ ನಿಂದಕರೇ. ಬಹುಷಃ ಈ ನಿಂದಕರಿರದಿದ್ದರೆ ಈ ಇಬ್ಬರು ವ್ಯಕ್ತಿಗಳು ಇಂದಿಗೂ ತೆರೆಮರೆಯಲ್ಲಿಯೇ ಇರುತ್ತಿದ್ದರೇನೋ. ಹಿನ್ನೆಲೆಯಲ್ಲೇ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಈ ಇಬ್ಬರನ್ನು ಮುನ್ನಲೆಗೆ ತಂದು ನಿಲ್ಲಿಸಿರುವುದು ಈ ನಿಂದಕರೇ. ಅದಕ್ಕಾಗಿಯೇ ಈ ನಿಂದಕರಿಗೆ ಧನ್ಯವಾದ ಹೇಳಲೇಬೇಕು.

ಸಮಾಜಕ್ಕೋಸ್ಕರ ತಮ್ಮ ಜೀವನವನ್ನು ಕೊಟ್ಟು ಪ್ರಚಾರಕರಾಗಿ,ರಾಜ್ಯ ಬಿಜೆಪಿಯಲ್ಲಿ ಕೇಂದ್ರ ಬಿಂದುವಿನಂತೆ ಕಳೆದ ಹತ್ತು ವರ್ಷಗಳಿಂದ ತಮಗೆ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಬಿ.ಎಲ್.ಸಂತೋಷ್(ಸಂತೋಷ್‌ಜೀ)ರವರು ಒಬ್ಬರಾದರೆ,ಪತ್ರಕರ್ತರಾಗಿ ಅಂಕಣಕಾರರಾಗಿ ರಾಷ್ಟ್ರೀಯ ವಿಚಾರಗಳನ್ನು ಪ್ರತಿಪಾದಿಸುತ್ತಾ, ಜೀವನಕ್ಕಿಂತ ಅಧ್ಯಯನಕ್ಕೇ ಆದ್ಯತೆ ಕೊಟ್ಟು, ಕಾರ್ಯನಿರ್ವಹಿಸುತ್ತಿರುವ ಸಂತೋಷ್ ತಮ್ಮಯ್ಯ ಮತ್ತೋರ್ವರು. ಸಂತೋಷ್‌ಜೀರವರು ರಾಜಕೀಯ ಕ್ಷೇತ್ರದಲ್ಲಿದ್ದರೂ ಎಂದಿಗೂ ಪ್ರಚಾರ ಪ್ರಿಯರಾಗಲಿಲ್ಲ. ತಮ್ಮಲ್ಲಿರುವ ಅಗಾಧ ಸಂಘಟನಾ ಸಾಮರ್ಥ್ಯವನ್ನು ಕಳೆದ ಹತ್ತು ವರ್ಷಗಳಿಂದ ಬಿಜೆಪಿಯನ್ನು ಕಟ್ಟುವುದಕ್ಕಾಗಿಯೇ ಧಾರೆ ಎರೆಯುತ್ತಿರುವ ಇವರು ಮತ್ತು ಇವರ ಸಾಮರ್ಥ್ಯ ಬಿಜೆಪಿಯ ಒಳಗಿರುವವರಿಗೆ ಮತ್ತು ಪರಿವಾರದ ಕಾರ್ಯಕರ್ತರುಗಳಿಗೆ ಮಾತ್ರ ಪರಿಚಯವಿತ್ತು.ಅದೇ ರೀತಿ ಅಸೀಮ ಪತ್ರಿಕೆಯ ಸಂಪಾದಕರಾಗಿ,ಹೊಸದಿಗಂತ ಪತ್ರಿಕೆಯ ಅಂಕಣಕಾರರಾಗಿ ಓದು ಮತ್ತು ಬರಹಗಳನ್ನು ಮಾತ್ರ ಅಂಟಿಸಿಕೊಂಡು, ಅಧ್ಯಯನದ ಮೂಲಕ ಅಗಾಧ ಬರವಣಿಗೆಯ ಸಾಮರ್ಥ್ಯವನ್ನು ಹೊಂದಿದ್ದ, ಸಂಕೋಚ ಸ್ವಭಾವದ ಸಂತೋಷ್ ತಮ್ಮಯ್ಯ ಸಹ ಎಂದೂ ಮುನ್ನಲೆಗೆ ಬಂದವರಲ್ಲ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಮಗಿರುವ ಶಕ್ತಿಯನ್ನು ವಿನಿಯೋಗಿಸಿ ತೆರೆಮರೆಯಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದ ಈ ಇಬ್ಬರನ್ನೂ ನಿಂದಕರುಗಳು ಜನರ ಮುಂದೆ ತಂದು ನಿಲ್ಲಿಸಿಬಿಟ್ಟಿದ್ದಾರೆ. ಈ ಕಾರಣದಿಂದಾಗಿಯೇ ಸಂತೋಷ್‌ಜೀ ಮತ್ತು ಸಂತೋಷ್ ತಮ್ಮಯ್ಯ ಇಬ್ಬರ ಹೆಸರು ಜನಜನಿತಾಗುತ್ತಿದೆ. ಇವರಿಬ್ಬರ ಸಾಮರ್ಥ್ಯದ ಅರಿವು ಜನರಿಗೆ ಆಗತೊಡಗಿದೆ. ಅದಕ್ಕೇ ಅಂದು ಪುರಂದರ ದಾಸರು ಹೇಳಿದ ’ಶಿಷ್ಟ ಜನರ ಕೀರ್ತಿಗಳಿಗೆ ನಿಂದಕರಿರಬೇಕು, ನಿಂದಕರಿರಿಬೇಕು’ ಎಂಬ ನುಡಿ ಇಂದೂ ಪ್ರಸ್ತುತವೆಂಬುದು ರುಜುವಾತಾಗಿಬಿಟ್ಟಿದೆ.

ಬಿ.ಎಲ್.ಸೋತೋಷ್, ಬಹಳಷ್ಟು ಜನರು ಸಂತೋಷ್‌ಜೀ ಎಂದು ಆತ್ಮೀಯವಾಗಿ, ಗೌರವಪೂರ್ವಕವಾಗಿ ಕರೆಸಿಕೊಳ್ಳುವ ಇವರು ಬಿಜೆಪಿಯಲ್ಲಿ ’ಸಂಘಟನಾ ಕಾರ್ಯದರ್ಶಿ’ ಎಂದರೆ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿ ಬಿಜೆಪಿಯ ಸಂಘಟನೆಗಾಗಿ ತಮ್ಮ ಜೀವನವನ್ನು ಸಮರ್ಪಿಸಿ ಕಾರ್ಯನಿರ್ವಹಿಸುತ್ತಿರುವವರು.ಬಿಜೆಪಿಯನ್ನು ಸಂಘಟನಾತ್ಮಕವಾಗಿ ಶಕ್ತವಾಗಿಸುವಲ್ಲಿ ಸಂತೋಷ್‌ಜೀಯವರ ಪಾತ್ರ ಅಸದಳವಾದುದು ಎಂಬುದನ್ನು ಬಿಜೆಪಿಯಲ್ಲಿ ಅವರನ್ನು ಸಹಿಸಿಕೊಳ್ಳದವರೂ ಒಪ್ಪಿಕೊಳ್ಳುತ್ತಾರೆ.

ಮತ್ತಷ್ಟು ಓದು »

21
ಆಗಸ್ಟ್

ಅಜಾತ ಶತ್ರುವಿನ ನೆಪದಲ್ಲಿ ಆಂಧ್ರದ ಬೃಹಸ್ಪತಿಯ ನೆನೆಯುತ್ತ…

– ರಾಕೇಶ್ ಶೆಟ್ಟಿ

ಬದುಕಲಿಕ್ಕೆಂದೇ ದಿನ ಸಾಯುವವರು,ಬೇಗ ಸತ್ತರೆ ಸಾಕೆಂದು ಬದುಕುವವರ ನಡುವೆ, ಸತ್ತು ಬದುಕುವುದು ಹೇಗೆ ಎಂದು ತೋರಿಸಿಕೊಟ್ಟ ಪುಣ್ಯಾತ್ಮರಿಗೆ ಈ ದೇಶದಲ್ಲಿ ಕೊರತೆಯಿಲ್ಲ. ಅದು ಹದಿಹರೆಯದಲ್ಲೇ ನೇಣಿಗೆ ಕೊರಳೊಡ್ಡಿ ಬ್ರಿಟಿಷರ ನಿದ್ದೆಗೆಡಿಸಿದ ಭಗತನಿರಬಹುದು,ಮೈ ಆಜಾದ್ ಹೂಂ ,ಆಜಾದ್ ಹೀ ರಹೂಂಗ ಎಂದು ಬ್ರಿಟಿಷರ ಕೈಗೆ ಕಡೆಯವರೆಗೂ ಸಿಗದೇ ಹುತಾತ್ಮರಾದ ಚಂದ್ರ ಶೇಖರ್ ಆಜಾದ್ ಅವರಿರಬಹುದು,ದೇಶ ಬಿಟ್ಟು ಪರದೇಶದಲ್ಲೊಂದು ಸೈನ್ಯ ಕಟ್ಟಿ ಭಾರತವನ್ನು ದಾಸ್ಯ ಮುಕ್ತ ಮಾಡುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನಿಗೂಢ ಕಣ್ಮರೆಯಿರಬಹುದು (ಅವರು ವಿಮಾನಾಪಘಾತದಲ್ಲಿ ಸಾಯಲಿಲ್ಲವೆಂದೇ ಬಲವಾಗಿ ನಂಬುವವನು ನಾನು), ೬೫ರ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿ,ಗಾಂಧಿಯವ ಥಿಯರಿಗಳನ್ನೇ,ವಾಸ್ತವದಲ್ಲಿ ಪಾಲಿಸುವಂತೆ ಬದುಕಿದ ಸಂತ ಲಾಲ್ ಬಹಾದ್ದೂರ್ ಶಾಸ್ತ್ರಿಗಳಿರಬಹುದು,ನೆಹರೂ ಕಾಲದ ಅಡಾಲೆದ್ದು ಹೋದ ಭಾರತದ ಅರ್ಥ ವ್ಯವಸ್ಥೆಯನ್ನು ಬದಲಿಸಿ ಭಾರತದ ಆರ್ಥಿಕ ಪಥವನ್ನೇ ಬದಲಿಸಿ ನಿಲ್ಲಿಸಿದ ಪಿವಿ ನರಸಿಂಹರಾವ್ ಅವರಿರಬಹುದು,ಸ್ವಾತಂತ್ರ್ಯ ಬಂದಾಗಿನಿಂದ ಅದೇ ಕಿತ್ತು ಹೋದ,ಡಾಂಬರು ಕಾಣದ ರಸ್ತೆಗಳನ್ನು ಸುವರ್ಣ ಚತುಷ್ಪತ,ಪ್ರಧಾನ್ ಮಂತ್ರಿ ಗ್ರಾಮೀಣ್ ಸಡಕ್ ಯೋಜನೆಗಳ ಮೂಲಕ ರಾವ್ ಅವರು ಹಾಕಿಕೊಟ್ಟ ಆರ್ಥಿಕ ತಳಹದಿಯ ಮೇಲೆ ನವಭಾರತ ನಿರ್ಮಾಣಕ್ಕೆ ಶರವೇಗ ನೀಡಿದ ಕವಿಹೃದಯಿ ಅಟಲ್ ಬಿಹಾರಿ ವಾಜಪೇಯಿಯವರಿರಬಹುದು… ಹೀಗೆ ಸತ್ತು ಬದುಕುವುದು ಹೇಗೆಂದು ಹೇಳಿಕೊಟ್ಟವರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ರಾಜಕಾರಣಿಯೊಬ್ಬ ಸತ್ತರೆ ಜನ ಸಾಮಾನ್ಯನೊಬ್ಬನಿಗೆ ತನ್ನದೇ ಕುಟುಂಬದ ಸದಸ್ಯನೊಬ್ಬ ಹೊರಟು ಬಿಟ್ಟನಲ್ಲ ಎನ್ನುವಷ್ಟು ದುಃಖವಾಗುತ್ತದೆಯೆಂದರೇ ಅದು ನಿಜಕ್ಕೂ ಬದುಕಿನ ಸಾರ್ಥಕತೆಯೇ ಸರಿ. ಕವಿ ಹೃದಯದ,ವಾಗ್ದೇವಿಯ ವರಪುತ್ರನಂತೆ ಮಂತ್ರಮುಗ್ಧ ವಾಗ್ಮಿಯಾಗಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಅಂತಹದ್ದೊಂದು ಬದುಕನ್ನು ಬದುಕಿ ಉದಾಹರಣೆಯಾಗಿ ಇಲ್ಲಿಂದ ಮುಂದಕ್ಕೆ ಹೊರಟಿದ್ದಾರೆ. ಆಗಸ್ಟ್ ೧೭ರ ಎಲ್ಲಾ ಪತ್ರಿಕೆ,ಚಾನೆಲ್ಲುಗಳ ತುಂಬಾ ವಾಜಪೇಯಿಯವರ ಜೀವನ ಚರಿತ್ರೆ, ಭಾಷಣಗಳು,ವ್ಯಕ್ತಿಚಿತ್ರಣ ತುಂಬಿ ಹೋಗಿತ್ತು.ಈಗಾಗಲೇ ವಾಜಪೇಯಿಯವರ ಬಗ್ಗೆ ಹಲವಾರು ಲೇಖನಗಳು ಬಂದಿವೆ,ಇನ್ನು ಅವರ ಬಗ್ಗೆ ಬರೆಯಲಿಕ್ಕೆ ಉಳಿದಿರುವುದಾದರೂ ಏನು ಅನ್ನಿಸುತ್ತದೆ.ಆದರೆ ಮಹಾನ್ ವ್ಯಕ್ತಿಗಳು ಬದುಕಿದ್ದಾಗ ಮಾತ್ರವಲ್ಲ,ಮರಣದಲ್ಲೂ ಸಂದೇಶಗಳನ್ನು ಬಿಟ್ಟು ಹೋಗುತ್ತಾರೆ ಅಥವಾ ಅವರ ಶಿಷ್ಯರು ಆ ಕೆಲಸವನ್ನು ಮಾಡುತ್ತಾರೆ. ವಾಜಪೇಯಿಯವರ ಅಂತಿಮ ಯಾತ್ರೆ ಅಂತಹದ್ದೊಂದು ಗಟ್ಟಿಯಾದ ಸಂದೇಶವನ್ನು ದೆಹಲಿ ರಾಜಕಾರಣದಲ್ಲಿ ಘಂಟಾಘೋಷವಾಗಿ ಮೊಳಗಿಸಿದೆ. ಅಂತಿಮ ಯಾತ್ರೆಯ ಐದು ಕಿಲೋಮಿಟರ್ರುಗಳನ್ನು ಪ್ರಧಾನಿ ನರೇಂದ್ರ ಮೋದಿ,ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ನಡೆದುಕೊಂಡೇ ಸಾಗಿದರು. ರಸ್ತೆಯ ತುಂಬೆಲ್ಲಾ ಜನಸಾಗರ ಸೇರಿತ್ತು. ರಾಜೀವ್ ಗಾಂಧೀಯವರ ಅವರ ಹತ್ಯೆಯಾಗಿ ಅಂತಿಮ ಯಾತ್ರೆ ನಡೆದಾಗ ಸೇರಿದ್ದು ಬಿಟ್ಟರೆ ದೆಹಲಿ ಮತ್ತೆ ಇಷ್ಟು ಜನರನ್ನು ನೋಡಿದ್ದು ಈಗಲೇ ಎನ್ನುವ ಮಾತುಗಳು ಕೇಳಿಬಂದವು.ನಿಜವಾಗಿಯೂ ದೆಹಲಿಗೆ ೧೪ ವರ್ಷಗಳ ಹಿಂದೆಯೇ ಅಂತಹದ್ದೊಂದು ದಿನ ಬಂದಿತ್ತು.ಅದು ಪಿ.ವಿ ನರಸಿಂಹರಾವ್ ಅವರು ಮರಣ ಹೊಂದಿದ್ದ ದಿನ. ನೆಹರೂ ಕಾಲದ ಹಳಿತಪ್ಪಿ ಅಡಾಲೆದ್ದು ಹೋಗಿದ್ದ ಅರ್ಥಿಕ ನೀತಿಯನ್ನೇ ೯೦ರ ದಶಕದವರೆಗೂ ನಡೆಸಿಕೊಂಡು ಭಾರತವನ್ನು ಜಗತ್ತಿನ ಬಲಾಢ್ಯ ರಾಷ್ಟ್ರಗಳ ಮುಂದೆ ಮಂಡಿಯೂರಿ ದೈನೇಸಿ ಸ್ಥಿಯಲ್ಲಿ ಕುಳಿತಿರುವಂತೆ ಮಾಡಲಾಗಿತ್ತಲ್ಲ,ಆ ಸ್ಥಿತಿಯನ್ನು ಬದಲಿಸಿ ಭಾರತದ ನವ ಆರ್ಥಿಕತೆಯಾ ರೂವಾರಿ,ಆಂಧ್ರದ ಜನರ ಪ್ರೀತಿಯ ಬೃಹಸ್ಪತಿ,ಮಾಜಿ ಪ್ರಧಾನಿ ಪಿ.ವಿ ನರಸಿಂಹರಾವ್ ಅವರು ೨೦೦೪ರಲ್ಲಿ ತಮ್ಮ ದೇಹವನ್ನು ತ್ಯಜಿಸಿದರು. ಆದರೆ,ದೇಶದ ಜನರಿಗೆ ಅಂತಹದ್ದೇನೂ ನಡೆಯಲೇ ಇಲ್ಲ,ಅಸಲಿಗೆ ಆ ವ್ಯಕ್ತಿಯ ಸಾವು ಒಂದು ಸುದ್ದಿಯೇ ಅಲ್ಲವೆನ್ನುವಂತೆ ಮಾಡಿಸುವಲ್ಲಿ ನೆಹರೂ ಪರಿವಾರ ಮತ್ತು ಅವರ ಸಾಕು ನಾಯಿಗಳಂತೆ ವರ್ತಿಸುವವರು ಮಾಡಿದ್ದರು.

ಮತ್ತಷ್ಟು ಓದು »

22
ಮೇ

ಕರ್ನಾಟಕದ ರಮಣರು,ಬಿಜೆಪಿಯೆಂಬ ಯು.ಜಿ ಕೃಷ್ಣಮೂರ್ತಿ

– ರಾಕೇಶ್ ಶೆಟ್ಟಿ

ಕಳೆದೊಂದು ವಾರದಲ್ಲಿ ರಾಜ್ಯದ ಜನ ಸಾಕ್ಷಿಯಾಗಿದ್ದ ರಾಜಕೀಯ ಹಗ್ಗ-ಜಗ್ಗಾಟಕ್ಕೆ ತಾತ್ಕಾಲಿಕ ಪರದೆ ಬಿದ್ದಿದೆ. ರಾಜಕಾರಣಿಗಳ ಬೃಹನ್ನಾಟಕದಿಂದಾಗಿ ಟಿಆರ್ಪಿ ಕಳೆದುಕೊಂಡಿದ್ ಮೆಗಾ ಸಿರಿಯಲ್ಲುಗಳ ನಿರ್ಮಾಪಕರು ನಿಟ್ಟುಸಿರು ಬಿಟ್ಟಿರಬಹುದು.ಗೋವಾದ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಯಿಂದ ಹಲ್ವಾ ತಿಂದಿದ್ದ ಕಾಂಗ್ರೆಸ್ ಕರ್ನಾಟಕದಲ್ಲಿ ಮತ್ತೆ ಅಂತ ಉದಾಸೀನಕ್ಕೆ ಜಾರಲಿಲ್ಲ.ಜಾರಲಿಲ್ಲ ಎನ್ನುವುದಕ್ಕಿಂತಲೂ ಮುಖ್ಯವಾಗಿ ಕಾಂಗ್ರೆಸ್ ಅಧಿಕಾರದಲ್ಲಿ ಉಳಿಯಬಹುದಾದ ಸಾಧ್ಯತೆಯಿರುವ ದೇಶದ ದೊಡ್ಡ ರಾಜ್ಯಗಳಲ್ಲಿ ಕರ್ನಾಟಕ ಮಾತ್ರವೇ ಉಳಿದಿದ್ದರಿಂದ,ಕರ್ನಾಟಕವೆನ್ನುವುದು ಕಾಂಗ್ರೆಸ್ ಪಾಲಿಗೆ ಅಸ್ತಿತ್ವದ ಪ್ರಶ್ನೆಯೂ ಆಗಿತ್ತು. PIN ಇಲ್ಲದ ATMನಂತಾಗಿರುವ ರಾಜ್ಯವನ್ನು ಅವರಾದರೂ ಹೇಗೆ ಬಿಟ್ಟುಕೊಟ್ಟಾರು ಹೇಳಿ?

ಚುನಾವಣಾ ಪ್ರಚಾರದಲ್ಲಿ, ಕುಮಾರಸ್ವಾಮಿಯವರ ಬಗ್ಗೆ ‘ಅವರಪ್ಪನಾಣೆ ಮುಖ್ಯಮಂತ್ರಿಯಾಗಲ್ಲ” ಎಂದು ಪದೇ ಪದೇ ಹೀಯಾಳಿಸಿದ್ದ ಸಿದ್ಧರಾಮಯ್ಯನವರೇ ಖುದ್ದಾಗಿ ಮುಂದೆ ಬಂದು ನೀವೇ ನಮ್ ಸಿಎಂ ಎಂದೂ ನಡುಬಗ್ಗಿಸಿ ನಿಲ್ಲಬೇಕಾದ ಸ್ಥಿತಿಗೆ ತಂದು ನಿಲ್ಲಿಸಿದ್ದು ಚುನಾವಣಾ ಫಲಿತಾಂಶ.ಕಳೆದ ೫ ವರ್ಷಗಳಲ್ಲಿ ಉಡಾಫೆ,ಅಹಂಕಾರವೇ ಮೈವೆತ್ತಂತೆ ವರ್ತಿಸುತ್ತಿದ್ದ ವ್ಯಕ್ತಿಗೆ ಮತದಾರ ಮಹಾಪ್ರಭು ಭರ್ಜರಿ ಏಟನ್ನೇ ಕೊಟ್ಟಿದ್ದಾನೆ. ಚಾಮುಂಡೇಶ್ವರಿಯಲ್ಲಿ ಸಿದ್ಧರಾಮಯ್ಯನವರು ದೊಡ್ಡ ಮಟ್ಟದ ಅಂತರದಲ್ಲಿ ಸೋತಿದ್ದಾರೆ, ಇನ್ನು ಬಾದಾಮಿಯಲ್ಲಿ 2000 ದಷ್ಟು NOTA ಚಲಾವಣೆಯಾಗಿದೆ,ಸಿದ್ಧರಾಮಯ್ಯ ಗೆದ್ದಿರುವುದು 1600 ಚಿಲ್ಲರೆ ಮತಗಳ ಅಂತರದಲ್ಲಿ ಮಾತ್ರ.ಎರಡು ಕಡೆ ಏಕೆ ನಿಲ್ಲುತ್ತಿದ್ದೀರಿ ಎನ್ನುವ ಪ್ರಶ್ನೆಗೆ ಸಿದ್ಧರಾಮಯ್ಯನವರು ನಿಂತರೆ ಆ ಭಾಗದಲ್ಲಿ ಹೆಚ್ಚು ಸೀಟು ಗೆಲ್ಲಬಹುದು ಎನ್ನುತ್ತಿದ್ದರು ಅವರ ಬೆಂಬಲಿಗರು. ಬಾಗಲಕೋಟೆ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು 2 ಮಾತ್ರ ಉಳಿದೆಲ್ಲವೂ ಬಿಜೆಪಿಯ ಪಾಲಾಗಿದೆ? ಎಲ್ಲೋಯ್ತು ಸಿದ್ಧರಾಮಯ್ಯನವರ ಪ್ರಭಾವಳಿ? ಖುದ್ದು ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿಯೇ ಸೋತಿದ್ದು ಆಡಳಿತ ವಿರೋಧಿ ಅಲೆಯ ಸಂದೇಶ ಅಲ್ಲವೇ? ಸಿದ್ಧರಾಮಯ್ಯನವರ ಸಂಪುಟದ 16 ಸಚಿವರು ಸೋತು ಮನೆ ಸೇರಿದ್ದಾರೆ.ಸಿದ್ಧರಾಮಯ್ಯ ಆಪ್ತ ಬಳಗದಲ್ಲಿದ್ದ ಮಹದೇವಪ್ರಸಾದ್,ಆಂಜನೇಯ,ಉಮಾಶ್ರಿಯಂತವರು ಸೋಲಿನ ರುಚಿ ಸವಿದಿದ್ದಾರೆ.ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೂ ಕಾಂಗ್ರೆಸ್ ಮೂಲೆ ಸೇರಿದೆ.

ಮತದಾರರಿಂದ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡ ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆಯಿದ್ದಿದ್ದರೆ ವಿರೋಧ ಪಕ್ಷದಲ್ಲಿ ಕೂರಬೇಕಾಗಿತ್ತು. ಆದರೆ ಪಕ್ಷದ ಅಳಿವು-ಉಳಿವಿನ ಪ್ರಶ್ನೆಯಾದ್ದರಿಂದ, “ಕೋಮುವಾದಿಗಳನ್ನು ದೂರವಿಡಲು,ಸೆಕ್ಯುಲರಿಸಂ ರಕ್ಷಿಸಲು’ ಎಂಬ ತಗಡು ಸ್ಲೋಗನ್ ಇಟ್ಟುಕೊಂಡು ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಮುಂದಾಗಿವೆ. ತುಘಲಕ್ ಸರ್ಕಾರವನ್ನು ಜನರು ತಿಪ್ಪೆಗೆ ಎಸೆದರೂ, ತಿಪ್ಪೆಯಿಂದ ಎದ್ದು ಬಂದು ಜೆಡಿಎಸ್ ಜೊತೆ ಕೈಜೋಡಿಸಿ ಕಾಂಗ್ರೆಸ್ ಉಸಿರಾಡುತ್ತಿದೆ,ಜೆಡಿಎಸ್ ಪಕ್ಷದ ಕತೆಯೂ ಅಸ್ತಿತ್ವ ಉಳಿಸಿಕೊಳ್ಳುವ ವಿಚಾರದಲ್ಲಿ ಕಾಂಗ್ರೆಸ್ಸಿಗಿಂತ ಭಿನ್ನವಾಗೇನೂ ಇಲ್ಲ. ಹತ್ತು ವರ್ಷಗಳಿಂದ ಅಧಿಕಾರದಿಂದ ದೂರ ಇರುವ ಪಕ್ಷ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಇನ್ನೇನೂ ಮಾಡೀತು ಹೇಳಿ?ಚುನಾವಣೆಗೆ ಮೊದಲು ಕಾಂಗ್ರೆಸ್ ಸರ್ಕಾರದ ಅಧ್ವಾನಗಳ ಬಗ್ಗೆ ಮಾತನಾಡಿ ಮತ ಪಡೆದ ಜೆಡಿಎಸ್ ಇಂದು ಕಾಂಗ್ರೆಸ್ ಜೊತೆ ಕೈ ಜೋಡಿಸಿದೆ. ಈಗ ಇಬ್ಬರೂ ಸೇರಿಕೊಂಡು ಪ್ರಜಾಪ್ರಭುತ್ವ ಉಳಿಸುವ ತುತ್ತೂರಿ ಊದಿದರೆ ಜನರಿಗೆ ಸತ್ಯ ಅರ್ಥವಾಗುವುದಿಲ್ಲವೇ?

ಮತ್ತಷ್ಟು ಓದು »

11
ಮೇ

ದಲಿತರನ್ನು ರಾಜಕೀಯವಾಗಿ ಬಳಸಿಕೊಳ್ಳುವ ಹುನ್ನಾರ ಇನ್ನೆಷ್ಟು ದಿನ ಮುಂದುವರೆಯುವುದು?

– ಶಿವಾನಂದ ಸೈದಾಪೂರ

ಪಿ.ಜಿ ಡಿಪ್ಲೊಮಾ ಇನ್ ಅಂಬೇಡ್ಕರ್ ಸ್ಟಡಿಸ್

ಬೆಳಗಾವಿ.

ಈಗಲೇ ಎರಡು ದಿನಗಳಲ್ಲಿ ನಡೆದ ಘಟನೆಗಳು; ನೂರಕ್ಕೆ ನೂರರಷ್ಟು ಮತದಾನದ ಜಾಗೃತಿಗಾಗಿ ಊರೂರುಗಳಿಗೆ ಸಂಪರ್ಕ ಮಾಡುತ್ತಿರುವ ಹೊತ್ತಲ್ಲಿ ಆದ ಸ್ವಂತ ಅನುಭವ. ದಲಿತರ ಓಣಿಗಳನ್ನು ಪ್ರವೇಸಿಸುವಾಗ ನಡೆದಂತದ್ದವುಗಳು. ಘಟನೆ  ಓಣಿಯ ಪ್ರವೇಶಕ್ಕೂ ಮೊದಲು ಗಮನಿಸಿದಾಗ ಕಣ್ಣಿಗೆ ರಾಚುವಂಥದ್ದು; ಈ ಕೇರಿಯಲ್ಲಿ ಕಾಂಗ್ರೆಸ್ ಒಂದನ್ನು ಬಿಟ್ಟು ಬಿಜೆಪಿಯವರಿಗೆ ಪ್ರವೇಶವಿಲ್ಲ! ಈ ರೀತಿ ಫಲಕ ನೇತಾಡುತಿತ್ತು. ಇಂತಹ ವಾತಾವರಣ ಇನ್ನೂ ಯಾಕೆ ಹೀಗಿದೆ? ಚುನಾವಣೆ ಸಂದರ್ಭದಲ್ಲಿಯೇ ಯಾಕೆ ಹೀಗೆ? ಇದನ್ನು ಏನು ಅಂತ ತರ್ಕಿಸಬಹುದು? ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ಯಾಕೆ ಈ ವಾತಾವರಣ? ಅಸ್ಪೃಶ್ಯತೆ ನಿವಾರಣೆಗಾಗಿ ಒಂದು ಕಡೆ ಹೋರಾಟಗಳು ನಡೆಯುತ್ತಿದ್ದರೆ, ಮತ್ತೊಂದು ಕಡೆ ಅವರನ್ನು ಸ್ವೃಶ್ಯ ಸಮಾಜ ವಾಸಿಯಾಗಲು ಬಿಡದೆ ನಡೆಸುತ್ತಿರುವ ರಾಜಕೀಯ ಷಡ್ಯಂತ್ರವೇ ಬಹಳಷ್ಟಿವೆ.

ಘಟನೆ ಎರಡು; ರಾಯಬಾಗ ತಾಲ್ಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದೇ ಹೆಸರಾದ ಹಿಡಕಲ್ ನಲ್ಲಿ ನಡೆದದ್ದು. ಇದೇ ಒಂದು ವಾರದಲ್ಲಿ ನಡೀದಿದೆ. ದಲಿತರ ಓಣಿಯಲ್ಲಿ ಮಹಿಳೆಯೊಬ್ಬಳು ಬೈಗುಳಗಳುಳ್ಳ ವಿಡಿಯೋವೊಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿರುವುದೇನು ಸಾಮಾನ್ಯ ಸಂಗತಿಯೇನಲ್ಲ. ಹಾಲಿ ಶಾಸಕ ಮತ್ತು ಈ ಸಲದ ಕುಡಚಿ ಮತ  ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ರಾಜು ಅವರನ್ನು ಅತ್ಯಂತ ಕೀಳು ಮಟ್ಟಕ್ಕಿಳಿದು ಬಾಯಿಗೆ ಬಂದಂತೆ ನಿಂದಿಸುತ್ತಿರುವುದು. ಸ್ವತಃ ತಾನು ಒಬ್ಬ ಹೆಣ್ಣು ಅನ್ನೋದನ್ನು ಮರೆತು ಪಿ.ರಾಜು ಅವರ ತಾಯಿಯನ್ನು ಬೈಯುತ್ತಿರುವುದು.  ಹೇಳುವುದಕ್ಕೆ ಸಾಧ್ಯವೇ ಇಲ್ಲದ ಕನಿಷ್ಠ ಮಟ್ಟದ ಶಬ್ದಗಳನ್ನು ಬಳಸಿ ಬೈಯುತ್ತಿರುವುದನ್ನು ನೋಡಿದರೆ ಎಂಥವರಿಗಾದರೂ ಮೈ ಬೆವರುತ್ತದೆ. ಆ ಕೀಳುಮಟ್ಟದ ಶಬ್ದಗಳನ್ನು ಕೇಳಿದರೆ ಯಾವ ಸ್ತ್ರೀ ಪುರುಷರು ಅಸಹ್ಯ ಪಡುವದರಲ್ಲಿ ಎರಡು ಮಾತಿಲ್ಲ. ಇಷ್ಟಕ್ಕೂ ಆ ವಿಡಿಯೋದಲ್ಲಿ ಮಹಿಳೆ ಮಾಡುತ್ತಿರುವುದಾದರೇನು ಗೊತ್ತೇ? ಈ ಸಲದ ಕುಡಚಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಅಮಿತ್ ಘಾಟಗೆ ಪರ ಪ್ರಚಾರ ಮಾಡುತ್ತಿದ್ದಾಳೆ. ಸ್ವತಃ ಅವಳೇ ಹೇಳುತ್ತಾಳೆ ದಲಿತಕೇರಿಗಳಲ್ಲಿ ಅಮಿತ್ ಘಾಟಗೆ ಮತ್ತು ಸಿದ್ದರಾಮಯ್ಯನವರನ್ನು ಬಿಟ್ಟರೆ ಬೇರೆ ಯಾರೂ ಬರಬಾರದಂತೆ!  ಉಳಿದವರ್ಯಾರು ದಲಿತ ಕೇರಿಯ ಸಮೀಪ ಕೂಡ ಸುಳಿಬಾರದಂತೆ! ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಲ್ಲಿ ಐವತ್ತಕ್ಕೂ ಅಧಿಕ ವರ್ಷಗಳ ಕಾಲ ಈ ದೇಶವನ್ನು ಆಳಿದ್ದು ಕಾಂಗ್ರೆಸ್ ಸರ್ಕಾರವೇ. ಆದರೆ ಅಭಿವೃದ್ಧಿಗಿಂತ ಜನಸಾಮಾನ್ಯರಲ್ಲಿ ಯಾವ ರೀತಿ ಜಾತಿಯತೆಯನ್ನು ಬಿತ್ತಿ ಬೆಳೆಸಿದೆ ಎಂಬುವುದು ಇದರಿಂದಲೇ ಸ್ಪಷ್ಟವಾಗುತ್ತದೆ.

ಮತ್ತಷ್ಟು ಓದು »

31
ಆಕ್ಟೋ

ದೇವರ ನಾಡಿನಲ್ಲಿ ನಾ ಕಂಡ ಮನುಷ್ಯರು

– ಅನಿಲ್ ಚಳಗೇರಿ

ದೇವರ ನಾಡಿನಲ್ಲಿ ನಾ ಕಂಡ ಮನುಷ್ಯರು – 1

ಕೈಯಲ್ಲಿ ಉದ್ದನೇಯ ಕೋಲು, ಹೆಗಲಿಗೊಂದು ಚೀಲ, ಕಾಲಲ್ಲಿ ಸ್ಪೋರ್ಟ್ಸ್ ಶೂಸ್ ಹಾಕಿಕೊಂಡ ಹಿರಿಯರೊಬ್ಬರು ಆಗಲೇ ನಮ್ಮ ಜೊತೆ 23 ಕಿಲೋ ಮೀಟರಿನಿಂದ ನಡೆದುಕೊಂಡು ಬಂದಿದ್ದರು (ಹತ್ತಾರು ಸಾವಿರ ಕಾರ್ಯಕರ್ತರ ಮಧ್ಯೆ ಅದೆಲ್ಲೋ ಹತ್ತಿಪತ್ತನೇ ಸಾಲಿನಲ್ಲಿ ಯಾರಿಗೂ ಕಾಣದೆ), ನಾವು ಅವರನ್ನು ಕುತೂಹಲದಿಂದ ನೋಡುತ್ತಿರುವದನ್ನು ಗಮನಿಸಿದ ಅವರು, ತಮ್ಮನ್ನು ತಾವು ಪರಿಚಯಿಸಿಕೊಂಡರು. ” I am captain Pillai, retired army officer, I am 71 years young and I have been walking from the day one and covered 150 kms today” ಅಂತ ಹೇಳಿದರು. ನಿಮಗೆ ಪ್ರೇರಣೆಯೇನು ? ನಿಮ್ಮ ಅಥವಾ ಮೇಲೆ ಏನಾದ್ರೂ ಅಟ್ಯಾಕ್ ಆಗಿತ್ತಾ?, ಅಂತ ಕೇಳಿದರೆ, “ನಾನು ದೇಶಕ್ಕೋಸ್ಕರ ದುಡಿದವನು, ನನಗೆ ಕಳ್ಳ ಕಮ್ಯುನಿಸ್ಟರ ನರಿ ಬುದ್ಧಿಯ ಬಗ್ಗೆ ತುಂಬಾ ಚೆನ್ನಾಗಿ ಗೊತ್ತು, ” ನನ್ನ ಕೊನೆಯ ಉಸಿರಿರುವವರೆಗೆ ಅವರನ್ನು ವಿರೋಧಿಸುವೆ” ಅಂದಾಗಲೇ ನೆನಪಾಗಿದ್ದು ಅಕ್ಷಯ್ ಕುಮಾರ್ ನಟಿಸಿದ ” ಹಾಲಿಡೇ” ಚಿತ್ರ. “a soldier never takes rest” ಶೀರ್ಷಿಕೆ…. ಮುಂದೆರಡು ದಿನ ಎಪ್ಪತ್ತರ ಹರೆಯದ ಆ ಮಾಜಿ ಸೈನಿಕನ ದಿಟ್ಟ ಹೆಜ್ಜೆಗಳೇ ನಮ್ಮೆಲ್ಲರ ನಡಿಗೆಗೆ ಪ್ರೇರಣೆಯಾಯಿತು … ಮತ್ತಷ್ಟು ಓದು »

27
ಆಕ್ಟೋ

ಜನರಕ್ಷಾಯಾತ್ರೆ : ಕಮ್ಯುನಿಸ್ಟ್ ರಕ್ತಚರಿತ್ರೆಯ ಅಂತ್ಯದ ಆರಂಭ

– ರಾಕೇಶ್ ಶೆಟ್ಟಿ

True Strength is in the Soul and Spirit. Not in Muscles ಅಂತೊಂದು ಮಾತಿದೆ. ಕೇರಳದ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಮತ್ತು ಸಂಘಟನೆಗೆ ಅನ್ವಯವಾಗುವ ಮಾತಿದು. ಕಮ್ಯುನಿಸ್ಟರ 48 ವರ್ಷಗಳ ನಿರಂತರ ರಕ್ತಪಾತ,300ಕ್ಕೂ ಹೆಚ್ಚು ಸ್ವಯಂ ಸೇವಕರ ಹತ್ಯೆಗಳು,ಮಾರಣಾಂತಿಕ ಹಲ್ಲೆಗಳ ನಂತರವೂ, ಪ್ರಸ್ತುತ ನಡೆಯುತ್ತಿರುವ ಜನರಕ್ಷಾಯಾತ್ರೆಯಲ್ಲಿ ಸಾವಿರಾರು ಜನರು ಸ್ವಯಂ ಸ್ಫೂರ್ತಿ, ಮತ್ತು ಧೈರ್ಯದಿಂದ ಪಾಲ್ಗೊಳ್ಳುವುದನ್ನು ನೋಡಿದರೆ, ಕೇರಳದ ಜನತೆ, ಅನ್ಯಾಯ,ಹಿಂಸಾಚಾರವನ್ನು ಪ್ರತಿಪಾದಿಸುವ ಸರ್ವಾಧಿಕಾರಿ ಕಮ್ಯುನಿಸ್ಟ್ ಪಕ್ಷದ ಆಡಳಿತ ಕೊನೆಯಾಗಲೇಬೇಕೆಂದು ಆಶಿಸುತ್ತಿರುವ ಸ್ಪಷ್ಟ ಸಂದೇಶದಂತಿದೆ.

ಅಕ್ಟೊಬರ್ 3ಕ್ಕೆ ಪಯ್ಯನೂರಿನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರಿಂದ ಆರಂಭವಾಗಿ, 15 ದಿನಗಳ ಕಾಲ ಕೇರಳಾದಾದ್ಯಂತ ಸಂಚರಿಸಿ, ಅಕ್ಟೊಬರ್ 17ಕ್ಕೆ ಅಮಿತ್ ಷಾ ಅವರಿಂದಲೇ ತಿರುವನಂತಪುರಂನಲ್ಲಿ ಯಾತ್ರೆ ಕೊನೆಗೊಂಡಿದೆ.ಯಾತ್ರೆ ಆರಂಭವಾದ ದಿನ ಕಮ್ಯುನಿಸ್ಟರ ರಾಜಕೀಯ ಹಿಂಸಾಚಾರದ ಮೂಲಸ್ಥಾನ (ಕೇರಳದ ಇಂದಿನ ಮುಖ್ಯಮಂತ್ರಿಯ ತವರು) ಕಣ್ಣೂರಿನ 84 ಬಲಿದಾನಿಗಳ ಕುಟುಂಬದವರು ಪಾಲ್ಗೊಳ್ಳುವ ಮೂಲಕ ಶುರುವಾದ ಯಾತ್ರೆ, ಕಣ್ಣೂರು ಅದರಲ್ಲೂ ಮುಖ್ಯವಾಗಿ ಪಿಣರಾಯಿಯಂತಹ ಕಮ್ಯುನಿಸ್ಟ್ ನಟೋರಿಯಸ್ ಪಾರ್ಟಿ ವಿಲೇಜುಗಳನ್ನು ಹಾದು ಹೋಗಿದೆ. ಮುಖ್ಯಮಂತ್ರಿಯ ಪಿಣರಾಯಿಯನ್ನೇಕೆ ನಟೋರಿಯಸ್ ಎನ್ನುತ್ತಿದ್ದೇನೆ ಎಂದು ತಿಳಿದುಕೊಳ್ಳಬೇಕೆಂದರೆ ಕಮ್ಯುನಿಸ್ಟ್ ಪಾರ್ಟಿ ವಿಲೇಜುಗಳ ಬಗ್ಗೆ ತಿಳಿದುಕೊಳ್ಳಬೇಕು.

ಮತ್ತಷ್ಟು ಓದು »