ಅಭಿವ್ಯಕ್ತಿ ಸ್ವಾತ೦ತ್ರ್ಯವೆನ್ನುವುದು ಕೇವಲ ಅಧಿಕಾರಿಶಾಹಿಯ ಸ್ವತ್ತಲ್ಲ…
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಕೆಲವು ದಿನಗಳ ಹಿ೦ದೆ ಸಾಮಾಜಿಕ ಅ೦ತರ್ಜಾಲ ತಾಣವಾದ ಫೇಸ್ ಬುಕ್ ಇನ್ನೊಮ್ಮೆ ವಿವಾದವೊ೦ದಕ್ಕೆ ಮುನ್ನುಡಿಯಾಯಿತು.ತಾವು ಬರೆದ ಲೇಖನವೊ೦ದಕ್ಕೆ ’ನಿಲುಮೆ’ ಎನ್ನುವ ಫೇಸ್ ಬುಕ್ ಗು೦ಪಿನಲ್ಲಿ ತಮ್ಮನ್ನು ಅವಾಚ್ಯವಾಗಿ ನಿ೦ದಿಸಲಾಗಿದೆ ಎ೦ದು ಆರೋಪಿಸಿ,ರಾಜ್ಯದ ಮುಖ್ಯಮ೦ತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು,ಗು೦ಪಿನ ನಿರ್ವಾಹಕರು ಸೇರಿದ೦ತೆ,ಸುಮಾರು ಐದು ಜನರ ಮೇಲೆ ಕ್ರಿಮಿನಲ್ ದೂರು ದಾಖಲಿಸಿದರು.ರಾಜ್ಯ ಸರ್ಕಾರದ ಅನೇಕ ಯೋಜನೆಗಳ ಬಗ್ಗೆ ಅವಮಾನಕರ ಚರ್ಚೆ ,ಶಾ೦ತಿ ಕದಡುವ ಪ್ರಯತ್ನ,ಮಾನಹಾನಿ ಮು೦ತಾದ ಆರೋಪಗಳಲ್ಲಿ ’ನಿಲುಮೆ’ಯ ಕೆಲವು ಸದಸ್ಯರ ಮೇಲೆ ಎಫ಼್.ಐ.ಆರ್ ದಾಖಲಿಸಲಾಗಿದೆ
ನಿಲುಮೆ ಎನ್ನುವ ಈ ಫೇಸ್ ಬುಕ್ ಗು೦ಪಿನ ಸದಸ್ಯರ ಪೈಕಿ ನಾನೂ ಒಬ್ಬ.ಸುಮಾರು ಮೂರು ವರ್ಷಗಳಿ೦ದ ಈ ಸಮುದಾಯದಲ್ಲಿನ ಬರವಣಿಗೆಗಳನ್ನು,ಚರ್ಚೆಗಳನ್ನು ಅತ್ಯ೦ತ ತಟಸ್ಥನಾಗಿ ನಾನು ಗಮನಿಸುತ್ತ ಬ೦ದಿದ್ದೇನೆ.ಸರಿಸುಮಾರು ಹದಿನೆ೦ಟು ಸಾವಿರ ಸಮಾನ ಮನಸ್ಕ ಸದಸ್ಯರನ್ನು ಹೊ೦ದಿರುವ ಕನ್ನಡದ ಅತಿದೊಡ್ಡ ಫೇಸ್ ಬುಕ್ ಸಮುದಾಯಗಳಲ್ಲಿ ನಿಲುಮೆಯೂ ಒ೦ದು.ಸದಸ್ಯನೇ ಆಗಿದ್ದರೂ ನಾನು ಅಲ್ಲಿನ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಸ೦ದರ್ಭಗಳು ತೀರ ಕಡಿಮೆ.ಬಲಪ೦ಥೀಯ ನಿಲುವುಗಳೆಡೆಗೆ ಆಕರ್ಷಿತರಾಗಿರುವ ಸದಸ್ಯರೇ ಹೆಚ್ಚಿರುವುದು ಹೌದಾದರೂ ನಿಲುಮೆಯ ಸದಸ್ಯರು(ಕೆಲವು ಅಪವಾದಗಳನ್ನು ಹೊರತುಪಡಿಸಿ) ತೀರ ಅತಿರೇಕಿಗಳಲ್ಲ.ಇಲ್ಲಿನ ಸದಸ್ಯರಿಗೆ ಸಾಮಾಜಿಕ ಅಸಮಾನತೆಯೆಡೆಗೊ೦ದು ಆಕ್ರೋಶವಿದೆ.ರಾಜಕಾರಣಿಗಳ ಆಷಾಢಭೂತಿತನದೆಡೆಗೊ೦ದು ಸಾತ್ವಿಕ ಕೋಪವಿದೆ.ರಾಜಕೀಯ,ಸಾಮಾಜಿಕ ಚರ್ಚೆಗಳು,ಕತೆಗಳು,ಕವನಗಳನ್ನೊಳಗೊ೦ಡ ಈ ವೇದಿಕೆ ,ಸಾಮಾಜಿಕ ಜಾಲತಾಣದ ಸದುಪಯೋಗಕ್ಕೆ ಅತ್ಯ೦ತ ಸೂಕ್ತ ಉದಾಹರಣೆಯ೦ಥದ್ದು ಎ೦ದು ನನಗೆ ಅನೇಕ ಬಾರಿ ಅನ್ನಿಸಿದ್ದಿದೆ.ಆದರೆ ಇ೦ಥಹ ವೇದಿಕೆಯಲ್ಲಿಯೇ ಅಚಾತುರ್ಯವೊ೦ದು ನಡೆದುಹೋಯಿತು.ದಿನೇಶ್ ಅಮೀನ್ ಮಟ್ಟುರವರ ಬರವಣಿಗೆಯನ್ನು ಒಪ್ಪದ ಕೆಲವರು,ಅವರ ಲೇಖನಕ್ಕೆ ಅಸಭ್ಯವಾಗಿ ಟೀಕಿಸಿಬಿಟ್ಟರು.
ಟಾರ್ಗೆಟ್ ನಿಲುಮೆ : ಪರದೆಯ ಹಿಂದಿನ ಕತೆ
– ರಾಕೇಶ್ ಶೆಟ್ಟಿ
ಸುವರ್ಣ ಸುದ್ದಿ ವಾಹಿನಿಯಲ್ಲಿ ನಡೆದ “ನಿಲುಮೆಯ ಮೇಲಿನ ದೌರ್ಜನ್ಯ” ಕುರಿತ ಚರ್ಚೆಯಲ್ಲಿ,ನಾನು ಕೊಂಚ ಆಕ್ರಮಣಕಾರಿಯಾಗಬೇಕಿತ್ತು ಎನ್ನುವುದು ನನ್ನ ಕೆಲ ಗೆಳೆಯರ ಅನಿಸಿಕೆಯಾಗಿತ್ತು.ಚರ್ಚೆಯನ್ನು ಮತ್ತೊಮ್ಮೆ ನಾನೇ ನೋಡಿದಾಗ ಕೆಲವೊಂದು ಕಡೆ ನಾನು ಆಕ್ರಮಣಕಾರಿಯಾಗಿದ್ದರೆ ಚೆನ್ನಾಗಿತ್ತು ಅಂತಲೇ ಅನಿಸಿತು.ಆದರೇನು ಮಾಡುವುದು,ಮಧ್ಯೆ ಬಾಯಿ ಹಾಕಿ ಮಾತನಾಡುವುದು ಮತ್ತು ಜೋರು ದನಿಯಲ್ಲಿ ಮಾತನಾಡುವುದೆಲ್ಲ “ಚರ್ಚೆ”ಯಲ್ಲ ಎನ್ನುವುದು ನಾನು ಬೆಳೆದು ಬಂದ ಹಾದಿ ಮತ್ತು ರೀತಿ ನನಗೆ ಕಲಿಸಿದೆ.ಹ್ಮ್ ಅದೆಲ್ಲ ಇರಲಿ.ಆವತ್ತು ಚರ್ಚೆಯ ಗದ್ದಲದಲ್ಲಿ ನಾನು ಹೇಳದೇ ಉಳಿದ ಬಹುಮುಖ್ಯ ವಿಷಯಗಳನ್ನು ದಾಖಲಿಸಬೇಕಿದೆ.ಆ ಕಾರಣಕ್ಕಾಗಿ ಈ ಲೇಖನ…
ಚರ್ಚೆಯ ನಡುವೆ,ದಿನೇಶ್ ಅಮೀನ್ ಮಟ್ಟು ಅವರು “ನಿಲುಮೆ ಗುಂಪನ್ನು ಮುಚ್ಚಬೇಕು” ಎಂದಿದ್ದನ್ನು ನೀವೆಲ್ಲರೂ ಕೇಳಿದ್ದೀರಿ.ಮಾತು ತೆಗೆದರೆ ಮುಚ್ಚಿಸಬೇಕು ಎನ್ನುವ ಈ ಪ್ರಗತಿಪರ ಚಿಂತನೆಯ ಹಿಂದಿನ ಕತೆಯೇನು? ಇವರಿಗೇಕೆ ನಿಲುಮೆಯನ್ನು ಮುಚ್ಚಿಸಲೇಬೇಕೆಂಬ ಹಟ?ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ನಾವು ೨೦೧೩ರ ಮಾರ್ಚ್ ನಲ್ಲಿ ರಾಜ್ಯದ ಪ್ರತಿಷ್ಟಿತ ಪತ್ರಿಕೆಯೊಂದರಲ್ಲಿ ಶುರುವಾದ “ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ” ಕುರಿತ ಚರ್ಚೆಯತ್ತ ನೋಡಬೇಕು.ಈ ಚರ್ಚೆ ಆರಂಭವಾಗಿದ್ದು CSLC ಎಂಬ ಸಮಾಜ ವಿಜ್ಞಾನ ಸಂಶೋಧನಾ ತಂಡದವರ “ವಚನ ಸಾಹಿತ್ಯವು ಜಾತಿವ್ಯವಸ್ಥೆಯ ವಿರುದ್ಧ ಮಾತನಾಡುತ್ತದೆಯೆ?” ಎಂಬ ಸಂಶೋಧನಾ ಪ್ರಬಂಧದೊಂದಿಗೆ.ಆ ಪತ್ರಿಕೆಯಲ್ಲಿ ಶುರುವಾದ ಚರ್ಚೆಯಲ್ಲಿ ಕೇವಲ ಒಂದು ಕಡೆಯವರ ವಾದಗಳಿಗೆ ಮಾತ್ರ ವೇದಿಕೆಯೊದಗಿಸಿ, CSLC ತಂಡದವರಿಗೆ ವಾದಕ್ಕೂ ಜಾಗ ಕೊಡದಿದ್ದಾಗ ಅವರಿಗೆ ಜೊತೆಯಾಗಿ ನಿಂತಿದ್ದು ನಿಲುಮೆ.ನಿಲುಮೆಯಲ್ಲಿ ಸಿ.ಎಸ್.ಎಲ್.ಸಿ ತಂಡದವರ ಲೇಖನಗಳು ಪ್ರಕಟವಾಗಿ ಅದು ಫೇಸ್ಬುಕ್ಕಿನಲ್ಲೂ ವ್ಯಾಪಕ ಚರ್ಚೆಗೆ ಒಳಪಟ್ಟಿತು.ಕಡೆಗೆ ಒತ್ತಡಕ್ಕೆ ಬಿದ್ದವರು ಅನಿವಾರ್ಯವಾಗಿ ಸಿ.ಎಸ್.ಎಲ್.ಸಿಯವರ ಒಂದೆರಡು ಲೇಖನಗಳನ್ನು ಪ್ರಕಟಿಸಿ,ಆ ಚರ್ಚೆಗೆ ಅಂತ್ಯ ಹಾಡಿಸಿದರು.ಆದರೆ,ಅಷ್ಟಕ್ಕೆ ನಮ್ಮ ಪ್ರಗತಿಪರರ ಸಿಟ್ಟು ಕಮ್ಮಿಯಾದೀತೇ? ಅವರು ತಮ್ಮ ಅಧಿಕಾರದ ಜೊತೆಗಿನ ಸ್ನೇಹ(ಪುರೋಹಿತಶಾಹಿ!?) ವನ್ನು ಬಳಸಿಕೊಂಡು ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಇದ್ದ CSLC ಸಂಶೋಧನಾ ಕೇಂದ್ರವನ್ನೇ ಮುಚ್ಚಿಸಿಬಿಟ್ಟರು! ಆಗಲಾದರೂ ನಾವು ಇವರಿಗೆ ಬೆದರಿಕೊಂಡು ಸುಮ್ಮನಾಗಬಾರದೇ? ಊಹೂಂ! ಸುಮ್ಮನಿರಲಿಲ್ಲ.ಈ ಫ್ಯಾಸಿಸ್ಟ್ ಧೋರಣೆಯ ಬಗ್ಗೆ ನಿಲುಮೆಯ ವೇದಿಕೆಯಲ್ಲಿ ಬರೆಯಲಾಯಿತು.ನಾನು ಈ ಬಗ್ಗೆ ನಿಲುಮೆಯಲ್ಲಿ,ಅಸೀಮಾ ಮಾಸಿಕದಲ್ಲಿ ಮತ್ತು ಕನ್ನಡ ಪ್ರಭ ಪತ್ರಿಕೆಯಲ್ಲಿ ಮಾನ್ಯ ಅನಂತ ಮೂರ್ತಿಯವರಿಗೆ ಬರೆದ ಬಹಿರಂಗ ಪತ್ರದಲ್ಲೂ ಪ್ರಗತಿಪರರ ಫ್ಯಾಸಿಸ್ಟ್ ಧೋರಣೆಯನ್ನು ಪ್ರಶ್ನಿಸಿದೆ.ನಿಲುಮೆಯ ಮೇಲೆ ಫ್ಯಾಸಿಸಂನ ಕರಾಳ ಛಾಯೆ ಆವರಿಸುತ್ತಲೇ ಹೋಯಿತು.