ಕಾಂಗ್ರೆಸೀ – ಚೀನೀ ಭಾಯಿ ಭಾಯಿ, ದೇಶ ಬಡಿದುಕೊಳ್ಳಬೇಕಿದೆ ಬಾಯಿ ಬಾಯಿ!
– ಪ್ರೇಮಶೇಖರ
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಮತ್ತು ಚೈನೀಸ್ ಕಮ್ಯೂನಿಸ್ಟ್ ಪಾರ್ಟಿಗಳ ನಡುವೆ ಹನ್ನೆರಡು ವರ್ಷಗಳ ಹಿಂದೆ ಅಂದರೆ 2008ರಲ್ಲಿ ರಹಸ್ಯ ಒಪ್ಪಂದವೊಂದಾಗಿದೆಯಂತೆ. ವರದಿಗಳ ಪ್ರಕಾರ ಆ ಒಪ್ಪಂದಕ್ಕೆ ಸಹಿ ಹಾಕಿದ್ದು ಕಾಂಗ್ರೆಸ್ ಪರವಾಗಿ ಆಗಿನ ಜನರಲ್ ಸೆಕ್ರೆಟರಿ ಶ್ರೀ ರಾಹುಲ್ ಗಾಂಧಿ ಮತ್ತು ಸಿಸಿಪಿ ಪರವಾಗಿ ಆಗಿನ ಚೀನೀ ಉಪಾಧ್ಯಕ್ಷ ಷಿ ಜಿನ್‍ಪಿಂಗ್. ಈ ‘ರಹಸ್ಯೋತ್ಪಾಟನೆ’ ಇದುವರೆಗೆ ನಮ್ಮನ್ನು ಕಾಡುತ್ತಿದ್ದ ಹಲವಾರು ಪ್ರಶ್ನೆಗಳಿಗೆ ಉತ್ತರ ಒದಗಿಸುವಂತಿದೆ. ಈ ಪ್ರಶ್ನೆಗಳು ಮತ್ತು ಉತ್ತರಗಳು ಏನು ಎನ್ನುವ ಮೊದಲು ಇದನ್ನೊಮ್ಮೆ ಓದಿ-
“ಚೀನೀಯರ ಜತೆಗಿನ ನಿಮ್ಮ ಆತ್ಮೀಯ ಸ್ನೇಹಸಂಬಂಧಗಳನ್ನು ಉಪಯೋಗಿಸಿಕೊಂಡು, (ಮಸೂದ್ ಅಜ಼ರ್ ವಿಷಯದಲ್ಲಿ) ಭಾರತಕ್ಕೆ ಹಿತಕಾರಿಯಾಗಿ ನಡೆದುಕೊಳ್ಳುವಂತೆ ಚೀನಾವನ್ನು ನೀವು ಮನವೋಲಿಸಬಹುದಾಗಿತ್ತಲ್ಲ? ಹಾಗೇಕೆ ಮಾಡಲಿಲ್ಲ? ಬದಲಾಗಿ, ಇಂದು ಚೀನಾ ನಮ್ಮ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಬಗ್ಗೆ ನಿವು ಖುಷಿ ಪಡುತ್ತಿದ್ದೀರಲ್ಲ? ಚೀನೀ ನಡವಳಿಕೆಯನ್ನು ನಿಮ್ಮ ಮೋದಿ-ವಿರುದ್ಧದ ರಾಜಕೀಯ ಹಿತಾಸಕ್ತಿಗಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದೀರಲ್ಲ?” ಎಂದು ರವಿಶಂಕರ್ ಪ್ರಸಾದ್ ಮತ್ತು ಅರುಣ್ ಜೇಟ್ಲಿ ಕೇಳುವ ಪ್ರಶ್ನೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಚೀನಾ ಕುರಿತಾಗಿ ರಾಹುಲ್ ಗಾಂಧಿವರ ನೀತಿಗಳನ್ನು ಅವಲೋಕಿಸೋಣ.
ಜೂನ್-ಆಗಸ್ಟ್ 2017ರ ದೊಕ್ಲಾಮ್ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಹುಲ್ ಗಾಂಧಿ ನವದೆಹಲಿಯಲ್ಲಿನ ಚೀನೀ ದೂತಾವಾಸಕ್ಕೆ ಭೇಟಿ ನೀಡಿ, ಚೀನೀ ರಾಯಭಾರಿಯ ಜತೆ ಮಾತುಕತೆ ನಡೆಸಿದ್ದರು. “ಈ ದೇಶದ ಒಬ್ಬ ನಾಯಕನಾಗಿ ದೊಕ್ಲಾಮ್ ಬಗ್ಗೆ ವಿವರಗಳನ್ನು ಪಡೆದುಕೊಳ್ಳಲು ನನಗೆ ಹಕ್ಕಿದೆ” ಎಂದವರು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದರು. ಆದರೆ ಆ ಭೇಟಿಯಲ್ಲಿ ದೊಕ್ಲಾಮ್ ಬಗ್ಗೆ ಯಾವುದೇ ಮಾತುಕತೆ ನಡೆಯಲಿಲ್ಲ ಎನ್ನುವ ಸೂಚನೆ ವರ್ಷದ ನಂತರ ರಾಹುಲ್ ಗಾಂಧಿಯವರಿಂದಲೇ ಬಂತು! ಸೆಪ್ಟೆಂಬರ್ 2018ರಲ್ಲಿ ಲಂಡನ್‌ನಲ್ಲಿ ಪತ್ರಕರ್ತರ ಸಮಾವೇಶದಲ್ಲಿ “…ನೀವು ಅಧಿಕಾರದಲ್ಲಿದ್ದರೆ ದೊಕ್ಲಾಮ್ ವಿವಾದವನ್ನು ಹೇಗೆ ನಿಭಾಯಿಸುತ್ತಿದ್ದಿರಿ?” ಎಂಬ ಪ್ರಶ್ನೆ ಬಂದಾಗ ರಾಹುಲ್ ಗಾಂಧಿ “ದೊಕ್ಲಾಮ್ ಬಗ್ಗೆ ನನ್ನಲ್ಲಿ ವಿವರಗಳಿಲ್ಲ. ಹೀಗಾಗಿ ಈ ಪ್ರಶ್ನೆಗೆ ಉತ್ತರಿಸಲು ನನ್ನಿಂದಾಗದು” ಎಂದುತ್ತರಿಸಿದರು. ಇದರರ್ಥ ವರ್ಷದ ಹಿಂದೆ ಅವರು ದೊಕ್ಲಾಮ್ ಬಗ್ಗೆ ಮಾತಾಡುವ ನೆಪದಲ್ಲಿ ಚೀನೀ ರಾಯಭಾರಿಯನ್ನು ಭೇಟಿಯಾದಾಗ ಅವರು ಮಾತಾಡಿರುವುದು ಬೇರೆಯೇ ವಿಷಯ! ಇದು ಸೂಚಿಸುವುದು ಚೀನೀಯರ ಜತೆ ರಾಹುಲ್ ಗಾಂಧಿ ಹೊಂದಿರಬಹುದಾದ, ಭಾರತ-ಚೀನಾ ಸಂಬಂಧಗಳಿಂದ ಬೇರೆಯಾದ, ಹೊಕ್ಕುಬಳಕೆಯ ಬಗ್ಗೆ. ಇದರ ಸೂಚನೆ ಮತ್ತೊಂದು ಪ್ರಕರಣದಲ್ಲೂ ದೊರೆಯುತ್ತದೆ. ಕಳೆದ ಸೆಪ್ಟೆಂಬರ್‌ನಲ್ಲಿ ರಾಹುಲ್ ಗಾಂಧಿ ಕೈಲಾಶ್ ಮಾನ್‌ಸರೋವರ್ ಯಾತ್ರೆಯ ಮೊದಲ ಹಂತವಾಗಿ ಕಾಠ್ಮಂಡುಗೆ ಹೊರಟಾಗ ಅವರನ್ನು ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬೀಳ್ಕೊಡಲು ನವದೆಹಲಿಯಲ್ಲಿನ ಚೀನೀ ರಾಯಭಾರಿ ಬಯಸಿದ್ದರು. ಭಾರತ ಸರ್ಕಾರದ ಅನುಮತಿ ಸಿಗದೇಹೋದದ್ದರಿಂದ ಅದು ಸಾಧ್ಯವಾಗಲಿಲ್ಲ.