ನೆಹರೂ,ಗಾಂಧಿಗೊಂದು ನ್ಯಾಯ, ಸಾವರ್ಕರ್’ರಿಗೊಂದು ನ್ಯಾಯವೇ?
- ರಾಕೇಶ್ ಶೆಟ್ಟಿ
ಸಾವರ್ಕರ್ ಅವರ ಹೆಸರು ಕೇಳಿದರೆ ದ್ವೇಷಕಾರುವ ಸಿದ್ದರಾಮಯ್ಯನವರು, ಸುಳ್ಳುಗಳೇ ತುಂಬಿರುವ ಲೇಖನವೊಂದನ್ನು ಬರೆದು ಮುಖ್ಯಮಂತ್ರಿಗಳನ್ನು ಚರ್ಚೆಗೆ ಕರೆದಿದ್ದಾರೆ. ಮಾಜಿ ಮುಖ್ಯಮಂತ್ರಿಯೊಬ್ಬರು ಹೀಗೆ ಆಧಾರ ರಹಿತ ಸುಳ್ಳುಗಳ ಸರಮಾಲೆಯನ್ನು ಹೇಗೆ ಬರೆಯಲು ಸಾಧ್ಯ? ಅವರ ಲೇಖನದ ಕೆಲವು ಪ್ರಶ್ನೆಗಳು, ಸುಳ್ಳುಗಳ ಬಗ್ಗೆ ಮಾತನಾಡುತ್ತಲೇ, ಸಾವರ್ಕರ್, ಗಾಂಧಿ, ನೆಹರೂ ಅವರ ಜೈಲುವಾಸಗಳ ಬಗ್ಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಳ್ಳಬೇಕು.

10 ಡಿಸೆಂಬರ್ 1934 – ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಜವಹರಲಾಲ್ ನೆಹರೂ ಅವರ ಜೈಲುವಾಸದ ಬಗ್ಗೆಯೊಂದು ಚರ್ಚೆಯಾಗುತ್ತದೆ. ಸದಸ್ಯರಾದ ಹಾರಾಲ್ದ್ ಹೇಲ್ಸ್ ಅವರು, ನೆಹರೂ ಅವರ ಪತ್ನಿ ಕಮಲಾ ನೆಹರೂ ಅವರ ಅನಾರೋಗ್ಯದ ಸ್ಥಿತಿಯನ್ನು ಗಮನಿಸಿ, ಜವಹರಲಾಲ್ ನೆಹರೂ ಅವರನ್ನು ಶೀಘ್ರ ಬಿಡುಗಡೆ ಮಾಡುವ ಬಗ್ಗೆ ಪರಿಶೀಲಿಸುವಂತೆ ಆಗ್ರಹಿಸುತ್ತಾರೆ.
ಅದಕ್ಕೆ ಉತ್ತರವಾಗಿ, ಅಂದಿನ ಬ್ರಿಟಿಷ್ ಭಾರತದ ಅಧೀನ ಕಾರ್ಯದರ್ಶಿಯಾಗಿದ್ದ ಬಟ್ಲರ್ ಉತ್ತರಿಸುತ್ತಾ : ಅವರ ಹೆಂಡತಿಯನ್ನು ನೋಡಿಕೊಳ್ಳಲಿ ಎನ್ನುವ ಕಾರಣಕ್ಕಾಗಿಯೇ, ಕಳೆದ ಬೇಸಿಗೆಯಲ್ಲಿಯೇ ಅವರನ್ನು ಕೆಲವು ದಿನಗಳ ಕಾಲ ಬಿಡುಗಡೆ ಮಾಡಿದ್ದೆವು. ಈಗ ಅವರನ್ನು ಆಸ್ಪತ್ರಗೆ ಹತ್ತಿರ ಇರುವ ಜೈಲಿಗೆ ವರ್ಗಾವಣೆ ಮಾಡಲಾಗಿದ್ದು, ವಾರದಲ್ಲಿ ಒಂದು ಅಥವಾ ಎರಡು ದಿನ ವೈದ್ಯರ ಸಲಹೆಯಂತೆ ಅವರು ಹೋಗಿ ನೋಡಿಕೊಂಡು ಬರಲು ಅನುಮತಿ ನೀಡಲಾಗಿದೆ.
ಸರ್ಕಾರದ ವಿರುದ್ಧದ ಪಿತೂರಿಯ ಆರೋಪದಲ್ಲಿ ನೆಹರೂ ಎರಡು ವರ್ಷಗಳ ಸಾಮಾನ್ಯ ಶಿಕ್ಷೆಗೆ ಗುರಿಯಾಗಿದ್ದರು. ಆ ಜೈಲು ಶಿಕ್ಷೆಯ ಅವಧಿಯ ಕುರಿತು ನಡೆದ ಚರ್ಚೆಯಿದು. ಕೇಸ್ ದಾಖಲಾಗಿ ಬಂಧನವಾದ ನಂತರ, ನೆಹರೂ ಅವರ ಭಾವನೆಗಳಿಗೆ ಘಾಸಿ(!)ಯಾಗುವುದಾದರೆ ಪ್ರಕರಣದ ವಿಚಾರಣೆಯನ್ನು ಖಾಸಗಿಯಾಗಿಯೇ ಮಾಡುವ ಆಫರ್ ಅನ್ನು ಬ್ರಿಟಿಷ್ ಅಧಿಕಾರಿ ನೀಡುತ್ತಾರೆ! ಕಡೆಗೆ, 6 ತಿಂಗಳ ಮೊದಲೇ ಬಿಡುಗಡೆ ಮಾಡುತ್ತದೆ ಬ್ರಿಟಿಷ್ ಸರ್ಕಾರ. ನೆಹರೂ ಅವರ ಮೇಲೆ ಇಂತಹ ಪ್ರೀತಿಯನ್ನು ಇದೇ ಮೊದಲ ಬಾರಿಯೇನೂ ಬ್ರಿಟಿಷ್ ಸರ್ಕಾರ ತೋರಿಸಿದ್ದಲ್ಲ.
ಅಕ್ಟೋಬರ್ 24 ,1930 ರಂದು ಕೂಡ ಎರಡು ವರ್ಷಗಳ ಸಾಮಾನ್ಯ ಶಿಕ್ಷೆಗೆ ಗುರಿಯಾದಗಲೂ, ಅವರನ್ನು ಕೇವಲ 97 ದಿನಗಳಲ್ಲೇ ಬಿಡುಗಡೆ ಮಾಡಿತ್ತು ಬ್ರಿಟಿಷ್ ಸರ್ಕಾರ. ಬ್ರಿಟಿಷರಿಗೆ ನೆಹರೂ ಅವರ ಮೇಲೆ ಅದಿನ್ನೆಂತಹ ಪ್ರೀತಿ! ಅಥವಾ ನೆಹರೂ ಅವರು ಜೈಲಿನ ಒಳಗಿದ್ದರೂ, ಹೊರಗಿದ್ದರೂ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅಪಾಯಕಾರಿಯಲ್ಲ ಅಂತಲೇ? ನೆಹರೂ ಅವರ ರಾಜಕೀಯ ಜೀವನದಲ್ಲಿ, ಒಂದೇ ಕೇಸಿನಲ್ಲಿ ಗರಿಷ್ಟ ಜೈಲು ವಾಸ ಅಂತ ಅವರಿಗೆ ಆಗಿದ್ದು ಕ್ವಿಟ್ ಇಂಡಿಯಾ ಎಂಬ Failed ಚಳವಳಿಯಲ್ಲಿ. 2 ವರ್ಷ 8 ತಿಂಗಳ ಸೆರೆವಾಸವದು. ಹಾಗೆಂದು ನೆಹರೂ ಅವರ ಸೆರೆವಾಸಗಳೇನು ಸೆಲ್ಯುಲಾರ್ ಜೈಲಿನಂತೆ ಒಂಟಿಯಾಗಿ, ಕತ್ತಲೆ ಹಾಗೂ ಕೆಟ್ಟ ಸೆಲ್ಲಿನೊಳಗಿನ ವಾಸವೇನು ಆಗಿರಲಿಲ್ಲ. ಮೇಲಿನ ಉದಾಹರಣೆಯಂತೆ ಬ್ರಿಟಿಷರ ಉದಾರತೆ ಹೇಗಾದರೂ ನೆಹರೂ ಅವರಿಗೆ ಸಿಗುತ್ತಿತ್ತು. ಉದಾಹರಣೆಗೆ, ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ನಂತರ ನೆಹರೂ ಅವರನ್ನು ನೈನಿಯಲ್ಲಿ ಜೈಲಿಗೆ ಹಾಕಿದರು. ಜೈಲಿನಲ್ಲಾದರೂ ಬಡಪಾಯಿ ನೆಹರೂ ಅವರಿಗೆ ಹೆಚ್ಚೇನು ಸೌಲಭ್ಯ ಸಿಗಲಿಲ್ಲ. ಅಬ್ಬಬ್ಬಾ ಎಂದರೆ ಒಬ್ಬ ಖೈದಿಯನ್ನು ಅವರ ಅಡುಗೆಯವನನ್ನಾಗಿ ನೇಮಿಸಲಾಯಿತು, ಗಾಳಿ ಬೀಸಲು ಮತ್ತೊಬ್ಬ ಖೈದಿ ನಿಯುಕ್ತಿಯಾದ. ಜೈಲಿನ ಊಟ ತಿಂದು ನಾಲಗೆ ಜಡ್ಡುಗಟ್ಟದಿರಲೆಂದು ಮನೆಯ ಊಟ, ಹಣ್ಣು ಹಂಪಲು ತರಿಸಿಕೊಳ್ಳುವ ಅವಕಾಶ ನೀಡಲಾಗಿತ್ತು.ನೆಹರೂ ಅವರ ದರ್ಶನಕ್ಕೆಂದು ಬರುತ್ತಿದ್ದ ಖೈದಿಗಳು ಬೇಕಾದ ಸಣ್ಣಪುಟ್ಟ ಸೇವೆಗಳನ್ನು ಮಾಡಿಕೊಡುತ್ತಿದ್ದರು. ತೀರಾ ನೆಹರೂ ಅವರ ಭಾಷೆಯಲ್ಲಿಯೇ ಹೇಳುವುದಾದರೆ, ಶೇ.95 ರಾಜಕೀಯ ಖೈದಿಗಳಿಗೆ ಇಂತಹ ಸೌಲಭ್ಯಗಳು ಸಿಗುತ್ತಿರಲಿಲ್ಲ. ನೆಹರೂ-ಗಾಂಧಿಯಂತವರು 5% ನೊಳಗಿದ್ದವರು. ಬ್ರಿಟಿಷರ ಪಾಲಿಗೆ ನಿರುಪದ್ರವಿಗಳಾಗಿರಬಹುದೇ?
ಮತ್ತಷ್ಟು ಓದು
ಭಾರತ ಮತ್ತೊಂದು ಪಾಕಿಸ್ತಾನವಾಗಬಾರದು ಎಂದರೆ…
– ರಾಕೇಶ್ ಶೆಟ್ಟಿ
ಜೂನ್ 28ರ ಮಧ್ಯಾಹ್ನ ರಾಜಸ್ಥಾನದ ಉದಯಪುರದಲ್ಲಿ ನಡೆದ ಭೀಕರ ಹತ್ಯೆಯ ಘಟನೆಯಿಂದ ಸಾಮಾನ್ಯ ಹಿಂದೂ ತಲ್ಲಣಗೊಂಡಿದ್ದಾನೆ, ಆಕ್ರೋಷಿತನಾಗಿದ್ದಾನೆ. ‘ನಂಬಿಸಿ ಕತ್ತು ಕೊಯ್ಯುವುದು’ ಎಂದರೇನು ಎನ್ನುವುದನ್ನು ಇಸ್ಲಾಮಿಕ್ ಉಗ್ರರು ಕಮಲೇಶ್ ತಿವಾರಿಯ ನಂತರ, ಉದಯಪುರದ ಬಡ ಟೈಲರ್ ಕನ್ನಯ್ಯ ಲಾಲ್ ಅವರ ಹತ್ಯೆಯ ಮೂಲಕ ತೋರಿಸಿಕೊಟ್ಟಿದ್ದಾರೆ. ಕಮಲೇಶ್ ತಿವಾರಿಯವರ ಹಂತಕರಾದ ಫರಿದುದ್ಡೀನ್ ಶೇಖ್, ಅಶ್ಫಾಖ್ ಶೇಖ್ ಅವರು ತಮ್ಮನ್ನು ಹಿಂದೂಗಳೆಂದು ಫೇಸ್ಬುಕ್ಕಿನಲ್ಲಿ ಪರಿಚಯ ಮಾಡಿ, ಸ್ನೇಹ ಸಂಪಾದಿಸಿ, ಕೇಸರಿ ಕುರ್ತಾ ಧರಿಸಿ, ಸ್ವೀಟ್ ಬಾಕ್ಸಿನೊಳಗೆ ರಿವಾಲ್ವರ್ ಹಾಗೂ ಚಾಕು ಹಿಡಿದು ಬಂದಿದ್ದರು. ಕಮಲೇಶ್ ತಿವಾರಿಯವರ ಸಹಾಯಕನನ್ನು ಸಿಗರೇಟ್ ತರುವಂತೆ ಕಳುಹಿಸಿ, ಏಕಾಂಗಿಯಾಗಿದ್ದ ಕಮಲೇಶ್ ತಿವಾರಿಯರ ಮೇಲೆ ಎರಗಿ ಕತ್ತು ಸೀಳಿ, ಗುಂಡು ಹಾರಿಸಿ ಕೊಲ್ಲಲಾಗಿತ್ತು. ಮರಣೋತ್ತರ ವರದಿಯ ಪ್ರಕಾರ 15 ಬಾರಿ ಚುಚ್ಚಿ ಕೊಲ್ಲಲಾಗಿತ್ತು. 1926ರಲ್ಲಿ ಅಬ್ದುಲ್ ರಶೀದ್ ಕೂಡ ಹೀಗೆಯೇ ಸಂಭಾವಿತನಂತೆ ಬಂದು, ಸಹಾಯಕನನ್ನು ನೀರು ತರಲು ಕಳುಹಿಸಿ ಸ್ವಾಮಿ ಶ್ರದ್ದಾನಂದರನ್ನು ಗುಂಡಿಕ್ಕಿ ಕೊಂದಿದ್ದ.

ಕನ್ನಯ್ಯ ಲಾಲ್ ಅವರ ಹತ್ಯೆ ನಡೆದಿದ್ದೂ ಹೀಗೆಯೇ. ಬಟ್ಟೆ ಹೊಲಿಸುವವರ ಸೋಗಿನಲ್ಲಿ ಬಂದ ಮೊಹಮ್ಮದ್ ಗೌಸ್ , ಮೊಹಮ್ಮದ್ ರಿಯಾಜ್ , ಅಳತೆ ತೆಗೆದುಕೊಳ್ಳುವಾಗ ಕನ್ನಯ್ಯಲಾಲ್ ಅವರ ಕತ್ತು ಕೊಯ್ದರು. 21 ಬಾರಿ ಚುಚ್ಚಿ ಕೊಲ್ಲಲಾಗಿದೆ ಎಂದಿದೆ ಮರಣೋತ್ತರ ವರದಿ. ಬಹುಶಃ ಹಂತಕರು ವಿಡಿಯೋವನ್ನು ವೈರಲ್ ಮಾಡದೇ ಇದ್ದಿದ್ದರೆ, ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಇದಕ್ಕೊಂದು ಬೇರೆ ಕತೆ ಕಟ್ಟಿ ಮುಗಿಸುತ್ತಿತ್ತು. ನಂತರ ತಿಳಿದು ಬಂದ ವಿಷಯದ ಪ್ರಕಾರ, ಕನ್ನಯ್ಯ ಲಾಲ್ ಅವರು ಕೇವಲ ನೂಪುರ್ ಶರ್ಮ ಅವರನ್ನು ಬೆಂಬಲಿಸಿದ ಕಾರಣಕ್ಕೆ ಬಂಧನವಾಗಿ, ಬಿಡುಗಡೆಯಾಗಿ ಬಂದ ನಂತರ, ತನ್ನ ಪ್ರಾಣಕ್ಕೆ ಅಪಾಯವಿದೆ ಎಂದು ಪೋಲಿಸ್ ರಕ್ಷಣೆ ಕೋರಿದ್ದರು. ಒಬ್ಬ ಬಡವನ ಮನವಿಯನ್ನು ಪೋಲಿಸರು ಹೇಗೆ ತಾತ್ಸಾರದಿಂದ ಸ್ವೀಕರಿಸುತ್ತಾರೋ, ಹಾಗೆಯೇ ಸ್ವೀಕರಿಸಿ ಕಸದ ಬುಟ್ಟಿಯ ಜಾಗ ತೋರಿಸಿದರು. ಅಂದ ಹಾಗೆ, ಕನ್ನಯ್ಯ ಲಾಲ್ ಅವರ ಕುರಿತ ಮಾಹಿತಿಯನ್ನು ಹಂಚಿಕೊಂಡವನು ಯಾರೋ ಅನಾಮಿಕನಲ್ಲ. ಕನ್ನಯ್ಯ ಅವರ ಪಕ್ಕದ ಮನೆಯ ನಜೀಂ. ನಜೀಮನಿಗೆ ನೆರೆ ಮನೆಯವನ ಸ್ನೇಹಕ್ಕಿಂತ ಆತನ ಇಸ್ಲಾಂ ಮುಖ್ಯವಾಗಿತ್ತು. ನಂಬಿ ಕೆಟ್ಟವನು ಕನ್ನಯ್ಯ. ಕಾಶ್ಮೀರದ ಪಂಡಿತರ ಹತ್ಯೆಯಲ್ಲೂ ನೆರೆಮನೆಯವರೇ ಹೇಗೆ ಸಹಾಯ ಮಾಡಿದ್ದರು ಎನ್ನುವುದನ್ನು, ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಇಡೀ ಭಾರತವೇ ನೋಡಿದೆ. ಜೊತೆಗಿದ್ದವರಿಗೆ ಮೂಹೂರ್ತ ಇಡುವ ಧೂರ್ತ ಮನಸ್ಥಿತಿಯನ್ನು ಇವರು ಕಲಿಯುವುದು ಎಲ್ಲಿಂದ?
ಮತ್ತಷ್ಟು ಓದು
ಸ್ವದೇಶ, ಸ್ವಧರ್ಮ, ಸ್ವಾತಂತ್ರ್ಯಗಳ ನೈಜದನಿ ವೀರ್ ಸಾವರ್ಕರ್
ಲೇಖಕರು : ಬಿ ಎಸ್ ಜಯಪ್ರಕಾಶ ನಾರಾಯಣ
ಪತ್ರಕರ್ತರು, ಖ್ಯಾತ ಅನುವಾದಕರು
ವೈಭವ್ ಪುರಂದರೆಯವರ ವೀರ್ ಸಾವರ್ಕರ್ ಪುಸ್ತಕವನ್ನು ಕನ್ನಡಕ್ಕೆ ತಂದಿದ್ದಾರೆ.
ಸಾವರ್ಕರ್ ಜನ್ಮದಿನ (ಮೇ 28)
ವಿನಾಯಕ ದಾಮೋದರ ಸಾವರ್ಕರ್ ಎನ್ನುವ ಹೆಸರೇ ಮೈಮನಗಳಲ್ಲಿ ದೇಶಹಿತದ ಸಂಕಲ್ಪವನ್ನು ತಾಳುವಂತೆ ಮಾಡುವಂಥದ್ದು! ಇಂದು ಅವರಿದ್ದಿದ್ದರೆ 140ನೇ ವಸಂತಕ್ಕೆ ಕಾಲಿಡುತ್ತಿದ್ದರು. ವ್ಯವಸ್ಥಿತ ಅಪಪ್ರಚಾರ ಮತ್ತು ಕ್ಷುಲ್ಲಕ ಶಕ್ತಿಗಳು ಸೃಷ್ಟಿಸಿರುವ ವಿಸ್ಮೃತಿಯಲ್ಲಿ ಸಾವರ್ಕರ್ ಅವರ ಕ್ಷಾತ್ರತೇಜಸ್ಸಿಗೆ ಅನ್ಯಾಯವೆಸಗಲಾಗಿದೆ. ಅವರ ಹುಟ್ಟುಹಬ್ಬದ ನೆಪದಲ್ಲಿ ಇಲ್ಲಿ ಅನಾವರಣಗೊಂಡಿದೆ, ಸಾವರ್ಕರ್ ಅವರ ಸಾಚಾ ಕಥನ!
ಸ್ವತಂತ್ರ ಭಾರತದ ಇತಿಹಾಸದಲ್ಲಿ ತುಂಬಾ ವ್ಯವಸ್ಥಿತವಾಗಿ ಹಲವು ವಿಸ್ಮೃತಿಗಳನ್ನೂ ಹೇವರಿಕೆಗಳನ್ನೂ ಸೃಷ್ಟಿಸಲಾಗಿದೆ. ಇದಕ್ಕಾಗಿ, ನಮ್ಮನ್ನು ಬಹುಕಾಲ ಆಳಿದ ಸರಕಾರಗಳು ಸೆಕ್ಯುಲರಿಸಂ, ಧರ್ಮನಿರಪೇಕ್ಷತೆ, ಮೈನಾರಿಟಿಯಿಸಂ ಇತ್ಯಾದಿ ವಿಭ್ರಮೆಗಳನ್ನು ಜನರ ಮನಸ್ಸಿನಲ್ಲಿ ಬಿತ್ತಿವೆ; ತಮ್ಮ ಹಿಡನ್ ಅಜೆಂಡಾ ಸಾಧಿಸಲು ಅವು ರಾಜಕೀಯ ಅಧಿಕಾರ, ಅಕಾಡೆಮಿಕ್ ಸೌಖ್ಯ, ತಾವೇ ಹುಟ್ಟುಹಾಕಿದ ನೂರಾರು ಸಂಘ ಸಂಸ್ಥೆಗಳು/ವಿಶ್ವವಿದ್ಯಾಲಯಗಳನ್ನು ನಿರ್ಲಜ್ಜವಾಗಿ ದುರ್ಬಳಕೆ ಮಾಡಿಕೊಂಡಿವೆ. ಇಷ್ಟೇ ಅಲ್ಲ, ಈ ಕುತಂತ್ರಗಳ ಮೂಲಕ ಸ್ವಧರ್ಮ ಮತ್ತು ಸ್ವದೇಶಗಳ ಬಗ್ಗೆ ಅಸಹ್ಯದ/ಕೀಳರಿಮೆಯ ಭಾವನೆ ಬರುವಂತೆ ಮಾಡುವಲ್ಲಿ ಈ ಶಕ್ತಿಗಳು ನಿರತವಾಗಿದ್ದವು. ಜತೆಯಲ್ಲೇ, ಭಾರತದ ಚರಿತ್ರೆಯ ಕ್ಷಾತ್ರ ತೇಜಸ್ಸಿನ ಉಜ್ಜ್ವಲ ಅಧ್ಯಾಯಗಳನ್ನು ಮರೆಮಾಚುವ ವಿಕೃತಿಯನ್ನು ಇವು ಮೈಗೂಡಿಸಿಕೊಂಡಿದ್ದವು. ದುರಂತವೆಂದರೆ, ನಾಲ್ಕೈದು ದಶಕಗಳ ಕಾಲ ಈ ʼಅತೀ ಬುದ್ಧಿವಂತಿಕೆ’ಯ ಮತ್ತು ಆತ್ಮನಾಶಕವಾದ ಕೆಲಸಗಳೆರಡೂ ಪ್ರಶ್ನಾತೀತವಾಗಿದ್ದವು!
ಭಾರತದ ಇತಿಹಾಸದಲ್ಲಿ ಇಂತಹ ವ್ಯವಸ್ಥಿತ ಅನ್ಯಾಯಕ್ಕೊಳಗಾದವರಲ್ಲಿ `ಸ್ವಾತಂತ್ರ್ಯವೀರ’ ವಿನಾಯಕ ದಾಮೋದರ ಸಾವರ್ಕರ್ ಕೂಡ ಒಬ್ಬರು. ಮಹಾರಾಷ್ಟ್ರದ ನಾಸಿಕ್ ಬಳಿಯ ಭಾಗೂರಿನಲ್ಲಿ ತಮ್ಮ ಚಿಕ್ಕಂದಿನಲ್ಲೇ `ಮಿತ್ರಮೇಳ’ವನ್ನು ಕಟ್ಟುವ ಮೂಲಕ, ಸಾವರ್ಕರ್ ದೇಶಾಭಿಮಾನದ ಎರಕದಲ್ಲಿ ಬೆಳೆದು ಬಂದವರು. ವಯಸ್ಕರಾದ ಮೇಲೆ, ಆ ಕಾಲದ ಎಲ್ಲ ಪ್ರತಿಭಾವಂತರಂತೆಯೇ ಲಂಡನ್ನಿಗೆ ಹೋಗಿ ಬ್ಯಾರಿಸ್ಟರ್ ಪದವಿ ಪಡೆದ ಅವರು, ತಮ್ಮ ಹೆಚ್ಚಿನ ಸಮಕಾಲೀನರಂತೆ ಲೌಕಿಕ ಸುಖದ ಹಾದಿಯಲ್ಲಿ ಹೋಗಲಿಲ್ಲ. ಬದಲಿಗೆ, ಅದನ್ನು ಪ್ರಜ್ಞಾಪೂರ್ವಕವಾಗಿ ನಿರಾಕರಿಸಿ, ಬ್ಯಾರಿಸ್ಟರ್ ಪದವಿಗೆ ಓದುತ್ತಿದ್ದ ದಿನಗಳಲ್ಲೇ ದೇಶದ ಸ್ವಾತಂತ್ರ್ಯಪ್ರಾಪ್ತಿಗಾಗಿ ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಹೋರಾಟದ ಮಾರ್ಗದಲ್ಲಿ ಹೊರಟರು. ತಮ್ಮ ಪ್ರಖರ ವಿಚಾರಗಳ ಮೂಲಕ ಮದನ್ ಲಾಲ್ ಧಿಂಗ್ರಾ ತರಹದ ಕ್ರಾಂತಿಕಾರಿಗಳನ್ನು ಅವರು ರೂಪಿಸಿದರು. ಲಂಡನ್ನಿನಲ್ಲಿದ್ದ `ಇಂಡಿಯಾ ಹೌಸ್’ ಅನ್ನು ತಮ್ಮ ಚಟುವಟಿಕೆಗಳ ಆಡುಂಬೊಲವನ್ನಾಗಿ ಮಾಡಿಕೊಂಡು, ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದರು. ಅದಕ್ಕೂ ಮೊದಲು, ಭಾರತದಲ್ಲಿ ಓದುತ್ತಿದ್ದಾಗ ಲೋಕಮಾನ್ಯ ಬಾಲಗಂಗಾಧರ ತಿಲಕರ ಅನುಯಾಯಿಯಾಗಿ ಸ್ವದೇಶಿ ಚಳವಳಿಯನ್ನು ಸಂಘಟಿಸಿ, ಸಂಚಲನ ಸೃಷ್ಟಿಸಿದ್ದರು. ಅವರು ಲಂಡನ್ನಿನಲ್ಲಿದ್ದ ದಿನಗಳಲ್ಲಿ ತಾಯಿ ಭಾರತಿಯ ಸ್ವಾತಂತ್ರ್ಯಕ್ಕಾಗಿ ನಡೆಸಿದ ಚಟುವಟಿಕೆಗಳ ವೃತ್ತಾಂತವೇ ರೋಮಾಂಚಕ! ದೇಶವಾಸಿಗಳು ಸ್ವಾತಂತ್ರ್ಯಕ್ಕಾಗಿ 1857ರಲ್ಲಿ ನಡೆಸಿದ ಹೋರಾಟವನ್ನು `ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟ’ ಎಂದು ಬಣ್ಣಿಸಿ, ಅದರ ಬಗ್ಗೆ ಸಮಗ್ರ ಗ್ರಂಥವನ್ನು ಬರೆದ ಹೆಗ್ಗಳಿಕೆ ಸಾವರ್ಕರ್ ಅವರದು. ವಾಸ್ತವವಾಗಿ, ಆ ದಿನಗಳಲ್ಲಿ ಲಂಡನ್ನಿನಲ್ಲಿ ಇವರಂತೆಯೇ ಬ್ಯಾರಿಸ್ಟರ್ ಪದವಿಗೆ ಓದುತ್ತಿದ್ದ ಜವಾಹರಲಾಲ್ ನೆಹರು ಕೂಡ ಈ ಗ್ರಂಥವನ್ನು ಅಪಾರವಾಗಿ ಮೆಚ್ಚಿಕೊಂಡು, ತಮ್ಮ ತಂದೆ ಮೋತಿಲಾಲ್ ನೆಹರು ಅವರಿಗೆ ಪತ್ರ ಬರೆದಿದ್ದಕ್ಕೆ ಪುರಾವೆಗಳಿವೆ. ವಿಷಾದದ ಸಂಗತಿಯೆಂದರೆ, ಲಂಡನ್ನಿನಿಂದ ಭಾರತಕ್ಕೆ ವಾಪಸ್ ಬಂದಮೇಲೆ, ನೆಹರು ಅವರು ಸಾವರ್ಕರ್ ಬಗ್ಗೆ ವಿರೋಧ ಬೆಳೆಸಿಕೊಂಡು ಬಿಟ್ಟರು. ಇದು ಕೊನೆಗೆ ಎಲ್ಲಿಯವರೆಗೆ ಹೋಯಿತೆಂದರೆ, ತುಷ್ಟೀಕರಣದ ರಾಜಕಾರಣ ಮತ್ತು ದೇಶವಿಭಜನಗಾಗಿ ಮುಸ್ಲಿಂ ಲೀಗ್ ಮಾಡುತ್ತಿದ್ದ ಆಗ್ರಹಗಳನ್ನು ವಿರೋಧಿಸುತ್ತಿದ್ದ ಸಾವರ್ಕರ್ ಅವರಿಗೆ ಕೋಮುವಾದಿ, ಮೂಲಭೂತವಾದಿ, ದೇಶ ವಿಭಜಕ, ಗಾಂಧಿಯವರ ಹತ್ಯೆಯ ಹಿಂದಿನ ಪಾತ್ರಧಾರಿ ಎನ್ನುವ ರೋಗಗ್ರಸ್ತ ಹಣೆಪಟ್ಟಿಗಳನ್ನು ಹಚ್ಚಲಾಯಿತು. ಹಾಗಾದರೆ, ಸಾವರ್ಕರ್ ನಿಜಕ್ಕೂ ಏನಾಗಿದ್ದರು?
ಸಾವರ್ಕರ್ ಬಗ್ಗೆ ರಾಜಕೀಯ ವಿರೋಧಿಗಳು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆಯೇನೂ ಇಲ್ಲ ಎನ್ನುತ್ತಿದ್ದಾರೆ. ಅಂಡಮಾನಿನ ಜೈಲಿನಲ್ಲಿ ಅವರು ಕರಾಳ `ಕಾಲಾಪಾನಿ’ ಶಿಕ್ಷೆ ಅನುಭವಿಸುತ್ತಿದ್ದಾಗ ಬ್ರಿಟಿಷರಿಗೆ ಬರೆದ ಕ್ಷಮಾಪಣಾ ಧಾಟಿಯ ಜಾಣ್ಮೆಯ ಪತ್ರಗಳನ್ನಿಟ್ಟುಕೊಂಡು ಅವರನ್ನು ದೇಶದ್ರೋಹಿಯೆಂದು ಬಿಂಬಿಸಿದ್ದಾರೆ. ಅವರೊಬ್ಬ ಬ್ರಾಹ್ಮಣವಾದಿಯಾಗಿದ್ದರು ಎಂದು ರಚ್ಚೆ ಮಾಡುತ್ತಿರುವವರ ಸಂತತಿಯೂ ಇದೆ. ಹಾಗಾದರೆ, ಇವುಗಳ ಸತ್ಯಾಸತ್ಯತೆ ಏನು? ಇಂತ ಮಿಥ್ಯೆಗಳನ್ನು ಸತ್ಯದ ಒರೆಗಲ್ಲಿಗೆ ಹಚ್ಚಿ, ಭಗ್ನಗೊಳಿಸಲು ಇದು ಸಕಾಲ. ಈ ದೃಷ್ಟಿಯಿಂದ ನೋಡಿದರೆ, ಇದು ಭಾರತದ ನೈಜ ಚರಿತ್ರೆಯು ವಿಕೃತಿ ಮತ್ತು ವಿಸ್ಮೃತಿಗಳ ಪೊರೆಯನ್ನು ಕಿತ್ತೆಸೆದು, ವಸ್ತುನಿಷ್ಠ ಆಕೃತಿಯನ್ನು ಪಡೆದುಕೊಳ್ಳುತ್ತಿರುವ ನಿರ್ಣಾಯಕ ಕಾಲಘಟ್ಟವಾಗಿದೆ.
ದೇಶದಲ್ಲಿ ಇಂದು ʼಹಿಂದುತ್ವʼದ ಅಲೆ ಪ್ರಖರವಾಗಿದೆ. ಇದರ ಕೀರ್ತಿಯಲ್ಲಿ ಹೆಚ್ಚಿನ ಪಾಲು ಸಲ್ಲಬೇಕಾದ್ದು ಸಾವರ್ಕರ್ ಅವರಿಗೆ! ಏಕೆಂದರೆ, ಈ ಪರಿಕಲ್ಪನೆ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ವ್ಯಾಪಕವಾಗಿ ಮುನ್ನೆಲೆಗೆ ತಂದವರೇ ಅವರು. ಇದರ ಜತೆಗೆ ಅವರು, ಹಿಂದೂ ಮಹಾಸಭಾದ ಅಧ್ಯಕ್ಷರಾಗಿ ದೇಶದಲ್ಲಿ ಎಬ್ಬಿಸಿದ ಹಿಂದೂ ಅಸ್ಮಿತೆಯ ನಂದಾದೀಪ ಈಗ ಜಾಜ್ವಲ್ಯಮಾನವಾಗಿ ಬೆಳಗುತ್ತಿದೆ. ಅದರ ಪ್ರಭೆಯ ಮುಂದೆ ಬಣ್ಣಬಣ್ಣದ ತರಹೇವಾರಿ ಸಿದ್ಧಾಂತಗಳ ವೇಷ ಕಳಚಿ ಬಿದ್ದಿದೆ.
ಸಾವರ್ಕರ್ ಅವರ ಬಹುಮುಖಿ ಮತ್ತು ಸಮಾಜಪರ ವ್ಯಕ್ತಿತ್ವದ ಇನ್ನೊಂದಿಷ್ಟು ಆಯಾಮಗಳನ್ನು ಇಲ್ಲಿ ನೆನೆಯಬೇಕು. ನಮಗೆಲ್ಲ ಗೊತ್ತಿರುವಂತೆ, ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಪಕ್ಷ ಮತ್ತು ಅದರ ಬೆರಳೆಣಿಕೆಯಷ್ಟು ನಾಯಕರು ಮಾತ್ರ ಶ್ರಮಿಸಿದರು ಎನ್ನುವ ಚಿತ್ರಣ ಹಲವು ತಲೆಮಾರುಗಳ ಜನರಲ್ಲಿ ಬೇರೂರಿದೆ. ಅಂದಂತೆ, ಕಾಂಗ್ರೆಸ್ ಪಕ್ಷವು ಬ್ರಿಟಿಷರಿಂದ ಭಾರತಕ್ಕೆ ಪೂರ್ಣಸ್ವಾತಂತ್ರ್ಯಕ್ಕಾಗಿ ದನಿಯೆತ್ತಿದ್ದು 1929ರಷ್ಟು ತಡವಾಗಿ! ಅಲ್ಲಿಯವರೆಗೂ ಆ ಪಕ್ಷದ ನಾಯಕರೆಲ್ಲ ಭಾರತವು ಬ್ರಿಟಿಷರ ಅಧೀನದಲ್ಲೇ (ಡೊಮಿನಿಯನ್ ಸ್ಟೇಟ್) ಮುಂದುವರಿಯುವುದರ ಪರವಾಗಿದ್ದರು. ಆದರೆ, ಸಾವರ್ಕರ್ ಇದಕ್ಕೂ 20 ವರ್ಷಗಳ ಮುಂಚೆಯೇ -1909ರಲ್ಲೇ- `ಸಂಪೂರ್ಣ ಸ್ವಾತಂತ್ರ್ಯವು ನಮ್ಮ ಹಕ್ಕು! ಇದರಲ್ಲಿ ಗುಲಗಂಜಿಯಷ್ಟು ಕಡಿಮೆಯಾದರೂ ನಾವು ಅದನ್ನು ಒಪ್ಪುವುದಿಲ್ಲ!!’ ಎಂದು ಘರ್ಜಿಸಿದ್ದರು. ಇದನ್ನು ಸಹಿಸದ ಬ್ರಿಟಿಷರು, ಸಾವರ್ಕರ್ ಅವರನ್ನು ಅಂಡಮಾನ್ ಜೈಲಿಗೆ ತಳ್ಳಿ, 50 ವರ್ಷಗಳ ಜೀವಾವಧಿ ಶಿಕ್ಷೆಯನ್ನು ವಿಧಿಸಿದರು. ಅಲ್ಲಿ ಈ `ಸ್ವಾತಂತ್ರ್ಯವೀರ’ ಅನುಭವಿಸಿದ ಯಮಯಾತನೆ ವರ್ಣಿಸಲಸದಳ.
ಅಂಡಮಾನಿನಿಂದ ಬಿಡುಗಡೆಯಾಗಿ ಬಂದಮೇಲೂ ಸಾವರ್ಕರ್ ಅವರಿಗೆ ಇತರರಂತೆ ಮುಕ್ತವಾಗಿ ಓಡಾಡಲು ಬ್ರಿಟಿಷರು ಅವಕಾಶ ಕೊಡಲಿಲ್ಲ. ಬದಲಿಗೆ, ಮಹಾರಾಷ್ಟ್ರದ ರತ್ನಗಿರಿಯಲ್ಲಿ ಅವರನ್ನು 14-15 ವರ್ಷಗಳ ಕಾಲ ನಿರ್ಬಂಧಿತ ವಾಸದಲ್ಲಿ ಇಡಲಾಗಿತ್ತು! ಆದರೂ ಭಾರತದ ಶ್ರೇಯಸ್ಸಿಗೆ ತುಡಿಯುತ್ತಿದ್ದ ಅವರು ಆ ಇತಿಮಿತಿಗಳನ್ನು ಮೆಟ್ಟಿ ನಿಂತು, ಹಲವು ಶ್ರೇಯಸ್ಕರವಾದ ಉಪಕ್ರಮಗಳನ್ನು ಕೈಗೊಂಡರು. ಈ ನಿಟ್ಟಿನಲ್ಲಿ ಮೊದಲು ಅವರು ಕೈಗೆತ್ತಿಕೊಂಡಿದ್ದು, ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯ ನಿವಾರಣೆಯ ಕೆಲಸ. ಇದಕ್ಕಾಗಿ ಅವರು ದಲಿತ ಸಮುದಾಯಕ್ಕೆ ಸೇರಿದ ಮಹಾಡ್ ದಂಪತಿಗಳ ಪಾದಪೂಜೆ ಮಾಡಿದರು. ದೇವಸ್ಥಾನದ ಗಣೇಶೋತ್ಸವಗಳಲ್ಲಿ ದಲಿತರಿಗೆ ಅಗ್ರಮನ್ನಣೆ ಕೊಡಿಸಿದರು. ಜಾತಿಪಂಥಗಳ ಭೇದವಿಲ್ಲದ ಭಜನಾ ಮಂಡಲಿಗಳನ್ನು ಏರ್ಪಡಿಸಿದರು. ಶಾಲೆಗಳನ್ನು ಕಟ್ಟಿಸಿದರು. ದಲಿತರ ಮಕ್ಕಳಿಗೆ ಪುಸ್ತಕಗಳನ್ನು ಹಂಚಿದರು. ಇವೆಲ್ಲಕ್ಕೂ ಕಲಶವಿಟ್ಟಂತೆ, ದಲಿತರಿಗೆ ದೇವಸ್ಥಾನ ಪ್ರವೇಶದ ಮುಕ್ತ ಹಕ್ಕು ಎಷ್ಟೊಂದು ಅಗತ್ಯವೆನ್ನುವುದನ್ನು ಮನಗಂಡಿದ್ದ ಅವರು, ಅವರಿಗೆಂದೇ `ಪತಿತ ಪಾವನ ಮಂದಿರ’ವನ್ನೇ ಕಟ್ಟಿಸಿದರು!
ಎಲ್ಲವೂ ಅವರು ಅಂದುಕೊಂಡಂತೆಯೇ ನಡೆದಿದ್ದರೆ, ಬಾಬಾಸಾಹೇಬ್ ಅಂಬೇಡ್ಕರರೇ ಈ ಮಂದಿರವನ್ನು ಉದ್ಘಾಟಿಸಬೇಕಿತ್ತು. ಆದರೆ, ಪೂರ್ವನಿಗದಿತ ಕಾರ್ಯಕ್ರಮಗಳಿಂದಾಗಿ ಅವರು ಬರಲಾಗಲಿಲ್ಲ. ಆದರೇನಂತೆ, ಅಸ್ಪೃಶ್ಯತೆ ನಿವಾರಣೆಯ ನಿಟ್ಟಿನಲ್ಲಿ ಸಾವರ್ಕರರ ಪ್ರಾಮಾಣಿಕ ಕಳಕಳಿಯನ್ನು ಮನಗಂಡಿದ್ದ ಅವರು, `ಸಾವರ್ಕರರಂಥ ಹತ್ತು ಮಂದಿ ಇದ್ದರೆ, ಒಂದೆರಡು ದಶಕಗಳಲ್ಲಿ ಈ ದೇಶದಿಂದ ಅಸ್ಪೃಶ್ಯತೆ ನಾಮಾವಶೇಷವಾಗಿ ಹೋಗಲಿದೆ!’ ಎಂದು ಉದ್ಗರಿಸಿದ್ದರು.
ಈ ಉಪಕ್ರಮವನ್ನು ಮತ್ತಷ್ಟು ವಿಸ್ತರಿಸಿದ ಸಾವರ್ಕರ್, ಅಂತರ್ಜಾತೀಯ ಭೋಜನ ಕೂಟಗಳನ್ನು ಏರ್ಪಡಿಸಿದರು. ಅಂತರ ಜಾತೀಯ ವಿವಾಹಗಳ ಜತೆಗೆ ಅಂತರಪ್ರಾಂತೀಯ ವಿವಾಹಗಳನ್ನು ಪ್ರೋತ್ಸಾಹಿಸಿದರು. ನಿಜ ಹೇಳಬೇಕೆಂದರೆ, ಇವೆಲ್ಲವನ್ನೂ ಅವರು ಮಾಡಿದ್ದು ಗಾಂಧೀಜಿಯವರು ಅಸ್ಪೃಶ್ಯತೆ ನಿವಾರಣೆಗೆ ಕರೆ ಕೊಡುವುದಕ್ಕೂ ಎಷ್ಟೋ ವರ್ಷಗಳ ಮುಂಚೆಯೇ! ಆದರೆ, ಗಾಂಧೀಜಿಯವರು ದಲಿತರ ಕೇರಿಗೆ ಹೋಗಿ ಮಲ ಎತ್ತಿದ್ದನ್ನು ಮಾತ್ರ ಹೇಳುವ `ಅನುಕೂಲಸಿಂಧು ಶಕ್ತಿಗಳು’, ಸಾವರ್ಕರರ ಈ ಸೇವೆಯನ್ನು ಮತ್ತು ಅವರು ರವಾನಿಸಿದ ಪರಿವರ್ತನೆಯ ಸಂಕೇತಗಳನ್ನು ನೇಪಥ್ಯಕ್ಕೆ ಸರಿಸಿರುವುದು ನಮ್ಮ ದೇಶದಲ್ಲಿ ಬೇರೂರಿರುವ `ಬೌದ್ಧಿಕ ಅಪ್ರಾಮಾಣಿಕತೆ’ಗೊಂದು ನಿದರ್ಶನವಷ್ಟೆ. ಇದಿಷ್ಟೇ ಅಲ್ಲ, ಹಿಂದೂಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ನಗರೀಕರಣದ ಪ್ರಜ್ಞೆಗಳು ಹೆಚ್ಚುವುದರಿಂದ ಭಾರತ ಅಖಂಡವಾಗಿ ಉಳಿಯಲಿದೆ ಎಂದು ಅಚಲವಾಗಿ ನಂಬಿದ್ದ ಅವರು, ದಲಿತರ ಆಹಾರದ ಹಕ್ಕಿನ ವಿಚಾರದಲ್ಲಿ ಆ ಸಮುದಾಯದ ಪರವಾಗಿ ನಿಂತಿದ್ದರು! ಇದಕ್ಕಾಗಿ ಅವರು, ಮೇಲ್ಜಾತಿಗಳ ಮೇಲೆ ವೈಚಾರಿಕ ಪ್ರಹಾರವನ್ನೇ ನಡೆಸಿದರು.
ಇನ್ನು, ಸಾವರ್ಕರ್ ಅವರೊಬ್ಬ `ಮುಸ್ಲಿಂ ವಿರೋಧಿ’ ಎನ್ನುವ ವಿಚಾರಕ್ಕೆ ಬರೋಣ. ಇಂಥವರಿಗೆ ಚರಿತ್ರೆಯ ಪ್ರಜ್ಞೆ ಎಷ್ಟೊಂದು ಅಳ್ಳಕವಾಗಿದೆ ಎನ್ನುವುದಕ್ಕೆ ಇದು ಇನ್ನೊಂದು ಉದಾಹರಣೆ. ಏಕೆಂದರೆ, ಸಾವರ್ಕರ್ ತಮ್ಮ ಬದುಕಿನ ಪೂರ್ವಾರ್ಧದಲ್ಲಿ ಪ್ರಾಮಾಣಿಕವಾಗಿ ಹಿಂದೂ-ಮುಸ್ಲಿಂ ಐಕ್ಯತೆಗೆ ಶ್ರಮಿಸಿದವರು. ಅವರ ಈ ಪ್ರತಿಪಾದನೆಯನ್ನು ಸ್ವತಃ ಗಾಂಧೀಜಿಯೇ ಮೆಚ್ಚಿಕೊಂಡಿದ್ದರು. ವಿಲಕ್ಷಣ ಸಂಗತಿಯೆಂದರೆ, ಇವತ್ತಿನ ಗಾಂಧೀವಾದಿಗಳಿಗೆ ಇದು ಗೊತ್ತಿಲ್ಲ! ಆದರೆ, ದೂರದ ಟರ್ಕಿಗೆ ಸಂಬಂಧಿಸಿದ ವಿದ್ಯಮಾನವಾಗಿದ್ದ ಖಿಲಾಫತ್ ಚಳವಳಿಯ ಬಗ್ಗೆ ಅತಾರ್ಕಿಕವಾದ ಸಹಾನುಭೂತಿಯನ್ನು ಹೊಂದಿದ್ದ ಒಂದು ವರ್ಗ/ಪಕ್ಷವು ಬಿತ್ತತೊಡಗಿದ ಪ್ರತ್ಯೇಕತೆಯ ಭಾವನೆಯನ್ನು ನೋಡಿದ ಮೇಲೆ ಸಾವರ್ಕರ್, ಮುಂದಿನ ಅಪಾಯವನ್ನು ಗ್ರಹಿಸಿ ನಿಷ್ಠುರವಾಗಿ ಮಾತನಾಡತೊಡಗಿದರು. ಅಲ್ಲಿಯವರೆಗೂ ಬ್ರಿಟಿಷರ ಸೇನೆಯಲ್ಲಿ ತೀರಾ ಅತ್ಯಲ್ಪ ಪ್ರಮಾಣದಲ್ಲಿದ್ದ ಹಿಂದೂಗಳು ಹೆಚ್ಚುಹೆಚ್ಚಾಗಿ ಸಂಖ್ಯೆಯಲ್ಲಿ ಸಶಸ್ತ್ರ ಪಡೆಗಳಿಗೆ ಸೇರುವ ಕೆಲಸವನ್ನು ಆಂದೋಲನದಂತೆ ನಡೆಸಿದರು. ಜಾಗತಿಕ ಮಟ್ಟದಲ್ಲಿ ಬೆಳಗುತ್ತಿರುವ ಭಾರತದ ಈ ಚರಿತ್ರೆಯನ್ನು ನಾವೆಲ್ಲರೂ ಅರಿಯಬೇಕು.
ಸಾವರ್ಕರ್ ಎಂದರೆ ಇಷ್ಟೇ ಅಲ್ಲ, ಭಾರತದ ತ್ರಿವರ್ಣ ಧ್ವಜದಲ್ಲಿ ಇಂದು ಸಾರನಾಥದ ಧರ್ಮಚಕ್ರವಿದ್ದರೆ ಅದಕ್ಕೆ ಕಾರಣರಾದವರೂ ಇವರೇ! ಇಂತಹ ಉದಾತ್ತ ಚಿಂತನಗಳ ಜತೆಯಲ್ಲೇ ಅವರು, ತಮ್ಮ ಕಾಲದ ಜಾಗತಿಕ ನಾಯಕರೊಂದಿಗೆ ಭಾರತದ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ಪತ್ರ ವ್ಯವಹಾರಗಳನ್ನು ನಡೆಸುತ್ತಿದ್ದರು. ಅಂಬೇಡ್ಕರ್, ನೆಹರು, ಶಾಮಪ್ರಸಾದ್ ಮುಖರ್ಜಿ ಅವರಷ್ಟೆ ಅಲ್ಲದೆ, ಕಮ್ಯುನಿಸ್ಟರು ಮತ್ತು ಸಮಾಜವಾದಿಗಳಂತೆಯೇ ಇವರು ಕೂಡ `ಕ್ವಿಟ್ ಇಂಡಿಯಾ’ ಚಳವಳಿಯನ್ನು ನಿರಾಕರಿಸಿದ್ದರು. ದೇಶ ವಿಭಜನೆಯ ಪ್ರಸ್ತಾಪವನ್ನು ಎಲ್ಲರಿಗಿಂತಲೂ ಮೊದಲೇ ವಿರೋಧಿಸಿದ್ದರು. ಹಾಗೆಯೇ, ಈ ದೇಶದ ಬಹುಸಂಖ್ಯಾತರನ್ನು ಮಾತ್ರ ಸದಾ ನೈತಿಕ ಬಿಕ್ಕಟ್ಟಿಗೆ ದೂಡುತ್ತಿದ್ದ ಕುಟಿಲ ರಾಜಕಾರಣವನ್ನು ಅವರು ತಿರಸ್ಕರಿಸುತ್ತ, `ಮಾತೃಭೂಮಿ’ ಮತ್ತು `ಪಿತೃಭೂಮಿ’ಗಳ ರಚನಾತ್ಮಕ ಪರಿಕಲ್ಪನೆಗಳನ್ನು ಮುಂಚೂಣಿಗೆ ತಂದರು.
ಬಹುಸಂಖ್ಯಾತರ ಪರವಾಗಿ ಮಾತನಾಡುವುದೇ ಅಪರಾಧವೆನ್ನುವ ದುಷ್ಟಕಾಲ ನಮ್ಮಲ್ಲಿ ಇತ್ತೀಚಿನವರೆಗೂ ತಾಂಡವವಾಡುತ್ತಿತ್ತು. ಅದರ ಪಳೆಯುಳಿಕೆಗಳು ಈಗಲೂ ಇವೆ. ಆದರೆ, ದೇಶದ ಪುಣ್ಯಸಂಚಯ ದೊಡ್ಡದಿದೆ. ಹೀಗಾಗಿ, ಸಾವರ್ಕರ್ ಮತ್ತು ಅವರಂತಹ ಇನ್ನೂ ಅನೇಕರ ವಿಚಾರಗಳು ಈಗ ಪುನರುಜ್ಜೀವನಗೊಂಡು, ಪ್ರಖರವಾಗಿ ಗೊತ್ತಾಗುತ್ತಿವೆ. ಇಂತಹ ದ್ರಷ್ಟಾರರ ವಾರಸುದಾರರಾಗಿರುವುದಕ್ಕೆ ಭಾರತೀಯರೆಲ್ಲರೂ ಹೆಮ್ಮೆ ಪಡಬೇಕು!
ರಷ್ಯಾ-ಉಕ್ರೇನ್ ಕದನ: ಮಾನವ ಹಕ್ಕು ಹೋರಾಟಗಾರರು ಎಲ್ಲಿ ಅಡಗಿ ಕುಳಿತಿದ್ದಾರೆ?
– ರಾಘವೇಂದ್ರ ಅಡಿಗ ಎಚ್ಚೆನ್.
ಯುದ್ಧ …
ಕಳೆದ ಒಂದು ವಾರದಿಂದ ಭಾರತ ಸೇರಿ ಜಗತ್ತಿನ ನಾನಾ ರಾಷ್ಟ್ರಗಳ ಜನರಲ್ಲಿ ಆತಂಕ, ದುಗುಡಕ್ಕೆ ಕಾರಣವಾಗಿರುವುದು ರಷ್ಯಾ-ಉಕ್ರೇನ್ ಯುದ್ಧ. ಉಕ್ರೇನ್ ನ್ಯಾಟೋ ರಾಷ್ಟ್ರಗಳ ಜತೆ ಕೈಜೋಡಿಸಲಿದೆ, ಯುರೋಪಿಯನ್ ಯೂನಿಯನ್ ಜತೆಯಾಗಿ ತನ್ನ ಕಮ್ಯುನಿಸ್ಟ್ ಸಿದ್ಧಾಂತ ಆಧಾರಿತ ವ್ಯವಸ್ಥೆಯ ಪ್ರಭಾವದಿಂದ ದೂರವಾಗಲಿದೆ ಎಂಬ ಕಾರಣದಿಂದ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದೆ. ರಷ್ಯಾ ಕಳುಹಿಸಿದ ಯುದ್ಧ ವಾಹನಗಳ ಮೇಲೆ *Z* ಸಂಕೇತವನ್ನು ರಷ್ಯಾ ಸೂಚಿಸಿದ್ದು, ಇದರ ಸೂಚನೆ ಎಂದರೆ 8 ಗಣರಾಜ್ಯಗಳನ್ನು ರಷ್ಯಾಕ್ಕೆ ಸೇರಿಸುವ ಮೂಲಕ ರಷ್ಯಾವನ್ನು ವಿಸ್ತರಿಸುವ ದೂರ ದೃಷ್ಠಿ ಹಾಗೂ ಮುಂದಾಲೋಚನೆ ಈ ಸೇನಾ ಕಾರ್ಯಾಚರಣೆಯ ಹಿಂದಿದೆ ಎನ್ನಲಾಗುತ್ತಿದೆ. ಎಂದರೆ ಇದರ ಪರಿಣಾಮ ಭವಿಷ್ಯದಲ್ಲಿ ಜಗತ್ತಿನ ಭೂಪಟವನ್ನೇ ಬದಲಾಯಿಸಲಿದೆ, ಕೆಲವೊಂದು ರಾಷ್ಟ್ರಗಳನ್ನು ಪ್ರಪಂಚದ ನಕಾಶೆಯಿಂದಲೇ ಅಳಿಸಿ ಹಾಕಲಾಗುತ್ತದೆ!
ಆದರೆ ಇದೀಗ ನಮ್ಮ ಮುಂದಿರುವ ಪ್ರಶ್ನೆ ಎಂದರೆ ಜಗತ್ತಿನಲ್ಲಿ ಶಾಂತಿ ನೆಲೆಗೊಳಿಸಿ ಎಲ್ಲವೂ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿಯೊಂದಿಗೆ ಹುಟ್ಟಿಕೊಂಡ ವಿಶ್ವಸಂಸ್ಥೆ ರಷ್ಯಾ-ಉಕ್ರೇನ್ ಯುದ್ಧ ವಿಷಯದಲ್ಲಿ ಏಕೆ ಗಟ್ಟಿ ನಿರ್ಧಾರವನ್ನು ತಾಳದೆ ಹೋಗಿದೆ? ಹೌದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್-ರಷ್ಯಾ ಯುದ್ಧದ ವಿರುದ್ಧ ನಿರ್ಣಯ ತೆಗೆದುಕೊಳ್ಳಲಾಗಿದೆ. ಉಕ್ರೇನ್ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ರಷ್ಯಾ ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಿ ವಿಶ್ವಸಂಸ್ಥೆ ಕೈಗೊಂಡ ನಿರ್ಣಯದ ಪರ ಒಂದು ಡಜನ್‌ಗೂ ಹೆಚ್ಚು ದೇಶಗಳ ರಾಯಭಾರಿಗಳು ದನಿ ಎತ್ತಿದ್ದಾರೆ. ಐದು ದಿನಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಉಕ್ರೇನ್ ಅಪಾರ ನಷ್ಟ ಅನುಭವಿಸಿದೆ. ಸಾವಿರಾರು ಅಮಾಯಕ ಜೀವಗಳು ಹಾರಿ ಹೋಗಿವೆ. “ಈ ಅನಾಹುತ ಇಲ್ಲಿಗೆ ಕೊನೆಗೊಳಿಸಿ. ಮನುಷ್ಯತ್ವದ ಕಡೆ ಹೆಜ್ಜೆ ಹಾಕಿ” ಎಂದು ವಿಶ್ವಸಂಸ್ಥೆ ಸಲಹೆ ನೀಡಿದೆ. ಅದರೆ ರಷ್ಯಾದಂತಹಾ ಬಲಿಷ್ಟ, ವಿಸ್ತರಣಾದಾಹ್ಹಿ, ಕಮ್ಯುನಿಸ್ಟ್ ಸಿದ್ದಾಂತದ ಪ್ರತಿಪಾದಕ ರಾಷ್ಟ್ರವೊಂದಕ್ಕೆ ಇಂತಹಾ ಕೇವಲ ಸಲಹೆ ಸೂಚನೆಗಳು ಸಾಕಾಗುತ್ತದೆಯೆ? ಒಂದೊಮ್ಮೆ ಈ ಯುದ್ಧದಲ್ಲಿ ಉಕ್ರೇನ್ ಸೋಲೊಪ್ಪಿದ್ದಾದರೆ ಭವಿಷ್ಯದಲ್ಲಿ ನ್ಯಾಟೋ ರಾಷ್ಟ್ರಗಳೂ ಸಹ ರಷ್ಯಾವನ್ನು ಎದುರಿಸಲಾರವು. ಅಲ್ಲದೆ ವಿಶ್ವಸಂಸ್ಥೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯವೂ ಇದೆ. ಒಟ್ತಾರೆ ಜಗತ್ತಿನ ಯಾವುದೇ ರಾಷ್ಟ್ರ ರಷ್ಯಾವನ್ನು ಮುಖಾಮುಖಿಯಾಗಿ ಎದುರಿಸಲು ವಿಫಲವಾಗಲಿದೆ.
ಇದಷ್ಟೇ ಅಲ್ಲದೆ ಜಗತ್ತಿನಾದ್ಯಂತ ಇರುವ ಮಾನವ ಹಕ್ಕು ಹೋರಾಟ(ಹಾರಾಟ)ಗಾರರು, ಬುದ್ದಿಜೀವಿಗಳು ರಷ್ಯಾ-ಉಕ್ರೇನ್ ನಡುವಿನ ಈ ಯುದ್ಧದ ಬಗ್ಗೆ ಏಕೆ ಯಾವ ಹೇಳಿಕೆಯನ್ನು ನೀಡುತ್ತಿಲ್ಲ? ಪ್ರತಿಭಟನೆ ನಡೆಸುತ್ತಿಲ್ಲ? ಭಾರತದಂತಹಾ ಸರ್ವಮತ ಸಹಬಾಳ್ವೆ ಇರುವ ದೇಶದಲ್ಲಿ ಅದೆಲ್ಲೋ ಒಂದು ಗುಂಪು ಹತ್ಯೆ ನಡೆದಿದೆ, ಇನ್ನೆಲ್ಲೋ ಗುಂಪುಗಳ ನಡುವೆ ಸಂಘರ್ಷ ನಡೆದಿದೆ ಎನ್ನುವ ಕಾರಣಕ್ಕೆ ಮಾನವ ಹಕ್ಕು ಉಲ್ಲಂಘನೆ, ಭಾರತದಲ್ಲಿ ಯಾವುದೂ ಸರಿಯಿಲ್ಲ ಎಂದು ಬೊಬ್ಬಿಡುವ ಜಗತ್ತಿನ ಪ್ರಚಂಡ ಮಾನವ ಹಕ್ಕು ಪ್ರತಿಪಾದಕರು ಇಂದು ಎಲ್ಲಿ ಹೋಗಿದ್ದಾರೆ? ರಷ್ಯಾ ಉಕ್ರೇನ್ ನ ಹಲವಾರು ಸೈನಿಕರನ್ನು ಮಾತ್ರವಲ್ಲದೆ ಅಮಾಯಕ ನಾಗರಿಕರ ಮೇಲೆ ಸಹ ದಾಳಿ ಮಾಡುತ್ತಿದೆ. ಈ ದಾಳಿಯ ನಡುವೆ ಕರ್ನಾಟಕದ ಹಾವೇರಿಯ ವೈದ್ಯ ವಿದ್ಯಾರ್ಥಿ ನವೀನ್ ಎನ್ನುವವ ಸಹ ದುರಂತ ಸಾವಿಗೆ ಈಡಾಗಿದ್ದಾನೆ. ಇಷ್ಟೆಲ್ಲಾ ಘಟಸುತ್ತಿದ್ದರೂ ಬುದ್ದಿಜೀವಿಗಳೆನಿಸಿಕೊಂಡವರು ಯಾರೂ ರಷ್ಯಾ ನಡೆಯನ್ನು ಟೀಕಿಸುವ ಮಾತನಾಡುತ್ತಿಲ್ಲ ಏಕೆ? ಕೇವಲ ನರೇಂದ್ರ ಮೋದಿ, ಕೇಂದ್ರ ಸರ್ಕಾರ ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸಬೇಕಿದೆಯೆ?
ಕಳೆದ ವರ್ಷಗಳಲ್ಲಿ “ಟೂಲ್ ಕಿಟ್” ಮೂಲಕ ಭಾರತದಲ್ಲಿ ಅಸಮಾನತೆ ಇದೆ, ಅಸಹಿಷ್ಣುತೆ, ಮಾನವ ಹಕ್ಕು ಉಲ್ಲಂಘನೆ ಸತತ ಆಗುತ್ತಿದೆ ಎನ್ನುತ್ತಿದ್ದ ಜಾಗತಿಕ ಹೋರಾಟಗಾರ್ತಿಯರಾರೂ ಇದೀಗ ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ತುಟಿ ಪಿಟಿಕೆನ್ನುತ್ತಿಲ್ಲ. ಇದಷ್ಟೇ ಅಲ್ಲ ಕಳೆದ ತಿಂಗಳಲ್ಲಿ ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಕುರಿತು ವಿವಾದ ಏರ್ಪಟ್ಟ ಸಮಯದಲ್ಲಿ ಅಮೆರಿಕಾ, ಪಾಕಿಸ್ತಾನ ಸೇರಿ ಜಗತ್ತಿನ ನಾನಾ ರಾಷ್ಟ್ರಗಳ ನಾಯಕರು ಅಲ್ಲದೇ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮಲಾಲಾಳಂತಹಾ ವ್ಯಕ್ತಿಗಳು ಭಾರತದಲ್ಲಿ ಪರಿಸ್ಥಿತಿ “ಭಯಂಕರವಾಗಿದೆ” ಅಂತ ಅಂದಿದ್ದರು. ಆದರೆ ಇದೀಗ ಅವರಾರೂ ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಹಾಗೂ ಅದರಿಂದಾಗುತ್ತಿರುವ ಜೀವಹಾನಿ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ.
ಇದೆಲ್ಲದರಿಂದ ತಿಳಿದುಬರುತ್ತಿರುವುದೇನೆಂದರೆ ವಿಶ್ವದ ಬಲಾಡ್ಯ ರಾಷ್ಟ್ರಗಳು ತಾವೇನು ಮಾಡಿದರೂ ಅದೆಲ್ಲವೂ ಸರಿಯಾಗಿಯೇ ಇರುತ್ತದೆ. ಆದರೆ ಭಾರತದಂತ ಕೆಲವು ರಾಷ್ಟ್ರಗಳು ಮಾತ್ರ ಅವರ ಅಣತಿಯ ಪ್ರಕಾರವೇ ನಡೆಯಬೇಕು! ಉದಾಹರಣೆಗಾಗಿ ಹೇಳುವುದಾದರೆ ರಷ್ಯಾ-ಉಕ್ರೇನ್ ಮೇಲೆ ದಾಳಿ ನಡೆಸಿದ್ದಂತೆ ಭಾರತವೇನಾದರೂ ಪಾಕಿಸ್ತಾನದ ಕರಾಚಿ, ಲಾಹೋರ್ ಮೇಲೆ ದಾಳಿ ನಡೆಸಿದ್ದರೆ ಆಗ ಅಮೆರಿಕಾ ಸೇರಿ ಜಾಗತಿಕ ಶಕ್ತಿಗಳು ಹೀಗೆಯೇ ಸುಮ್ಮನೆ ಕುಳಿತಿರುತ್ತಿದ್ದವೆ? ಖಂಡಿತಾ ಇಲ್ಲ. ಭಾರತದ ವಿರುದ್ಧ ವಿಷ ಕಾರುತ್ತಿದ್ದವು.
ಇನ್ನು ಇಂದಿನ ಯುದ್ಧ ಪರಿಸ್ಥಿತಿಯಲ್ಲಿ ಭಾರತ ತಟಸ್ಥ ಧೋರಣೆ ತಾಳಿದೆ. ಇದಕ್ಕೆ ಕಾರಣ ಕೂಡ ಇದೆ. ರಷ್ಯಾ ನಮ್ಮ ಅನಾದಿ ಕಾಲದ ಮಿತ್ರರಾಷ್ಟ್ರ. ಅಂತಹಾ ದೇಶದ ವಿರುದ್ಧ ನಿಲುವು ತೆಗೆದುಕೊಳ್ಳುವುದು ಅಷ್ಟೇನೂ ಸುಲಭವಲ್ಲ. ಇನ್ನೊಂದು ಸಂಗತಿ ಎಂದರೆ ಭಾರತಕ್ಕೆ ಅಮೆರಿಕಾ ಸಹ ಮಿತ್ರರಾಷ್ಟ್ರವೇ ಆಗಿದ್ದರೂ ಅಮೆರಿಕಾದ ಭಾರತ ಪರ ನಿಲುವು ಎಲ್ಲಾ ಕಾಲದಲ್ಲಿ ಏಕಪ್ರಕಾರವಾಗಿ ಇರುವುದಿಲ್ಲ. ಹಾಗಾಗಿ ಇಂದು ಅಮೆರಿಕಾ ಮಾತುಕೇಳಿ ರಷ್ಯಾ ವಿರುದ್ಧ ಹೋದರೆ ನಾವು ಒಬ್ಬ ಆಪ್ತಮಿತ್ರನನ್ನೇ ಕಳೆದುಕೊಳ್ಳುತ್ತೇವೆ. ಹಾಗೆಂದ ಮಾತ್ರಕ್ಕೆ ರಷ್ಯಾ ನಡೆಸಿರುವ ಈ ಯುದ್ಧಕ್ಕೆ ಭಾರತದ ಸಮ್ಮತಿ ಇದೆ ಎಂದೂ ಅರ್ಥವಲ್ಲ. ಭಾರತ ಪ್ರಧಾನಿ ರಷ್ಯಾ ಅಧ್ಯಕ್ಷ ಪುಟಿನ್ ಗೆ ಪದೇ ಪದೇ ಕರೆ ಮಾಡಿ ಯುದ್ಧ ನಿಲ್ಲಿಸುವ ಮನವಿ ಮಾಡುತ್ತಿದ್ದಾರೆ. ಅಲ್ಲದೆ ಉಕ್ರೇನ್ ನಲ್ಲಿ ಸಿಲುಕಿದ್ದ ನಮ್ಮ ದೇಶವಾಸಿಗಳನ್ನು ಮರಳಿ ಕರೆತರುತ್ತಿದ್ದಾರೆ. ಆದರೆ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವಂತೆ ರಷ್ಯಾ ಮೇಲೆ ಭಾರತ ಒತ್ತಡ ಹಾಕುವುದು ಸಾಧ್ಯವಿಲ್ಲ. ಮತ್ತು ವಿಶ್ವಸಂಸ್ಥೆಯಲ್ಲಿಯೂ ಸಹ ಯುದ್ಧದ ವಿರುದ್ಧ ಮತ ಚಲಾವಣೆ ಅಸಾಧ್ಯ. ಏಕೆಂದರೆ ರಷ್ಯಾದಂತೆ ಉಕ್ರೇನ್ ನಮಗೆ ಹಳೇ ಮಿತ್ರನಲ್ಲ. ಇದೀಗ ತನ್ನ ಮೇಲೆ ರಷ್ಯಾ ಎಲ್ಲಾ ದಿಕ್ಕುಗಳಿಂದ ಆಕ್ರಮಣ ನಡೆಸಿದೆ. ನನ್ನ ಪರವಾಗಿ ರಷ್ಯಾ ಅಧ್ಯಕ್ಷರೊಂದಿಗೆ ಮಾತನಾಡಿ ತಕ್ಷಣವೇ ಯುದ್ಧ ನಿಲ್ಲಿಸಲು ಮಧ್ಯ ಪ್ರವೇಶಿಸುವಂತೆ ಹಾಗೂ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧ ಬೆಂಬಲಿಸುವಂತೆ ಉಕ್ರೇನ್ ಸರ್ಕಾರವು ಭಾರತವನ್ನು ಅಂಗಲಾಚುತ್ತಿದೆ. ಆದರೆ ಇದೇ ದೇಶ ಈ ಹಿಂದೆ ಹಲವು ಬಾರಿ ಭಾರತದ ವಿರುದ್ಧ ನಿರ್ಣಯ ತೆಗೆದುಕೊಂಡ ಉದಾಹರಣೆಗಳು ನಮ್ಮ ಮುಂದಿದೆ. 1998ರಲ್ಲಿ ಅಂದಿನ ಆಟಲ್ ಬಿಹಾರಿ ವಾಜಪೇಯಿ ಸರ್ಕಾರ ‘ಆಪರೇಷನ್ ಶಕ್ತಿ’ ಹೆಸರಿನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ, ಪಾಕಿಸ್ತಾನ-ಭಾರತ ಯುದ್ಧ ಸಮಯದಲ್ಲಿ, ವಿಶ್ವಸಂಸ್ಥೆಯ ಭದ್ರಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯಲು ಭಾರತ ಪ್ರಯತ್ನಿಸುತ್ತಿದ್ದ ಸಮಯ, ಕಾಶ್ಮೀರ ವಿಷಯದಲ್ಲಿ ಸಹ ಉಕ್ರೇನ್ ಭಾರತದ ವಿರುದ್ಧ ನಿರ್ಣಯ ತೆಗೆದುಕೊಂಡಿದೆ. ಹೀಗಿರುವಾಗ ಇಂದು ಉಕ್ರೇನ್ ಪರ ಭಾರತ ನಿರ್ನಯ ತೆಗೆದುಕೊಳ್ಳಲಾಗುತ್ತದೆಯೆ?
ಒಟ್ಟಾರೆಯಾಗಿ ಹೇಳುವುದಾದರೆ ಯುದ್ಧ ಎಂದಿಗೂ ಒಳ್ಳೆಯದಲ್ಲ. ಮಾನವ ವಿಕಾಸದ ಇತಿಹಾಸದಲ್ಲಿ ಅಳಿಸಲಾಗದ ಕಠೋರ ಕಪ್ಪು ಕಲೆ ಎಂದರೆ ಅವು ಯುದ್ಧದ ಕಲೆಗಳು. ಹಾಗಾಗಿ ಇಂದೂ ಸಹ ಕೋಟ್ಯಾಂತರ ಜೀವಹಾನಿಗೆ ಪ್ರೇರಣೆಯಾಗಿರುವ ಯುದ್ಧ ತಕ್ಷಣ ನಿಲ್ಲಲೇಬೇಕು, ಜಗತ್ತು ಶಾಂತಿ ಸೌಹಾರ್ದತೆಯಿಂದ ನಡೆಯುವಂತಾಗಬೇಕು ರಷ್ಯಾ-ಉಕ್ರೇನ್ ಕದನ ಶೀಘ್ರವೇ ಮುಕ್ತಾಯವಾಗಲಿ, ಅದಕ್ಕಾಗಿ ನಮ್ಮೆಲ್ಲರ ಪ್ರಾರ್ಥನೆ ಇರಲಿ.
ಕಮ್ಯುನಿಸಂನ ಅಭದ್ರತೆ ಮತ್ತು ಅಸಹನೆಯೇ ಚೀನಾ ಆಕ್ರಮಣದ ಮೂಲ
– ಅಜಿತ್ ಶೆಟ್ಟಿ ಹೆರಂಜೆ
ಯಾವುದೇ ದೇಶ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಪ್ರಭುತ್ವ ಸ್ಥಾಪಿಸಬೇಕಾದರೆ ಅದು ವ್ಯಾಪಾರ ನಡೆಸುವ ಮಾರ್ಗ ಸುರಕ್ಷಿತವಾಗಿರಬೇಕು ಮತ್ತು ಬಹುತೇಕ ಅದು ಆ ದೇಶದ ನಿಯಂತ್ರಣದಲ್ಲಿ ಇರಬೇಕು. ಈ ಭೂಮಿಯ ಮೇಲೆ ಶತಮಾನಗಳಿಂದಲೂ ಅಂತಾರಾಷ್ಟ್ರೀಯ ವ್ಯಾಪಾರ ಬಹುತೇಕ ಸಮುದ್ರ ಮಾರ್ಗದ ಮುಖಾಂತರವೇ ನೆಡೆದಿದ್ದು. ಇದರ ನಿಯಂತ್ರಣ ಯಾರ ಕೈಯಲ್ಲಿ ಇರುತ್ತದೆಯೋ ಅವರು ಜಗತ್ತಿನ ರಾಜಕೀಯವನ್ನು ನಿಯಂತ್ರಿಸುತ್ತಾರೆ. ಇದಕ್ಕೆ ಇತಿಹಾಸದಲ್ಲಿ ಅನೇಕ ಉದಾಹರಣೆಗಳು ಸಿಗುತ್ತವೆ. ನೆಪೋಲಿಯನ್ ಬೊನಪಾರ್ಟೆ ಇಂಗ್ಲೆಂಡನ್ನು ಸಾಮರಿಕವಾಗಿ ಬಗ್ಗುಬಡಿಯಲು ಆಗದ ಸಂದರ್ಭದಲ್ಲಿ ಅದರ ಆರ್ಥಿಕತೆಯ ನರಮಂಡಲವಾಗಿದ್ದ ಸಮುದ್ರ ವ್ಯಾಪಾರ ಮಾರ್ಗದ ಮೇಲೆ ದಿಗ್ಭಂಧನವನ್ನು ಹಾಕುತ್ತಾನೆ. ಇದು ಆ ಕಾಲದಲ್ಲಿ ಇಂಗ್ಲೆಂಡಿಗೆ ಬಲವಾದ ಹೊಡತವನ್ನೇ ಕೊಟ್ಟಿತ್ತು. ಯೂರೋಪ್ ಮತ್ತು ಪೂರ್ವ ರಾಷ್ಟ್ರಗಳ ನಡುವೆ ವಾಣಿಜ್ಯ ವ್ಯವಹಾರಗಳ ಸಂಪರ್ಕದ ಕೊಂಡಿಯಾಗಿದ್ದ ಕಾಂನ್‌ಸ್ಟಾಂಟಿನೋಪಲನ್ನು ಒಟ್ಟೋಮನ್ ತುರ್ಕರು ವಶಪಡಿಸಿಕೊಂಡಾಗ ಯುರೋಪಿಯನ್ನರಿಗೆ ಪೂರ್ವದ ಜೊತೆಗೆ ವ್ಯವಹಾರ ಮಾಡಲು ಹೊಸ ಮಾರ್ಗದ ಅನ್ವೇಷಣೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಹಾಗೆಯೆ ಇವತ್ತು ಚೀನಾ ಇಂತಹುದೇ ಒಂದು ಕೃತ್ಯಕ್ಕೆ ಕೈ ಹಾಕಿ ಕೈ ಸುಟ್ಟುಕೊಳ್ಳುತ್ತಿದೆ.
ಕಳೆದ ಕೆಲವು ದಿನಗಳಿಂದ ಲಡಾಕಿನ ಗಲ್ವಾನ್ ಸರೋವರದ ತೀರದಲ್ಲಿ ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಉಪದ್ರವ ಚೀನಾ ಇಡೀ ಜಗತ್ತಿನಲ್ಲಿ ತಾನು ವಿಶ್ವದ ಆರ್ಥಿಕ ಜಗತ್ತಿನ ಅನಭಿಶಕ್ತ ದೊರೆಯಾಗಬೇಕು ಎನ್ನುವ ಕೂಟ ನೀತಿಯ ಒಂದು ಚಿಕ್ಕ ಭಾಗ. ಇದು ಭಾರತ ಮತ್ತು ಚೀನಾದ ಒಂದು ಸಣ್ಣ ಗಡಿ ವಿವಾದ ಎಂದು ಭಾವಿಸಿದರೆ ಖಂಡಿತ ತಪ್ಪಾಗುತ್ತದೆ.
ಕೊರೊನಾ ಯುದ್ಧ – ವಿಶ್ವಕ್ಕೆ ಭಾರತ ತೋರಿಸಿದ ಹಾದಿಯೇನು?
ಭಾರತೀಯ ಜೀವನ ಪದ್ಧತಿ, ನಮಸ್ಕಾರ, ಯೋಗ ಮತ್ತು ಆಯುರ್ವೇದ ಇತ್ಯಾದಿಗಳು ವಿಶ್ವವ್ಯಾಪಿ ಮಹತ್ವ ಪಡೆಯುತ್ತಿವೆ
ಭಾರತವನ್ನು ಅರಿಯಲು ಶ್ರೀ ಅರವಿಂದರೆನ್ನುವ ಕೀಲಿ ಕೈ
– ಡಾ. ರೋಹಿಣಾಕ್ಷ ಶಿರ್ಲಾಲು
ಕರ್ನಾಟಕ ಕೆಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ
ಭಾರತೀಯರೆಲ್ಲಾ ಭಾರತವನ್ನು ಅರ್ಥಮಾಡಿಕೊಂಡಿದ್ದಾರೆಯೇ? ಹೀಗೊಂದು ಪ್ರಶ್ನೆ ಕೇಳಿದರೆ ಅಪ್ರಸ್ತುತವಾದೀತೆ? ಸೂಕ್ಷ್ಮವಾಗಿ ಗಮನಿಸಿದರೆ ಈ ಪ್ರಶ್ನೆ ಸಕಾರಣವಾಗಿದೆ. ಹೌದಲ್ಲಾ ನಮಗೆ ಭಾರತವೆಷ್ಟು ಅರ್ಥವಾಗಿದೆ? ಅರ್ಥಮಾಡಿಕೊಳ್ಳಲು ಬಳಸಿದ ಆಕರಗಳೇನು? ಈ ಆಕರಗಳ ಅಧಿಕೃತತೆಯೇನು? ಅಥವಾ ನಮ್ಮ ಆಕರಗಳೇ ಪರಕೀಯವೇ? ಪರಕೀಯ ಎಂದಾದರೆ ನಿಜದ ಭಾರತವನ್ನು ತಿಳಿಯುವುದಾದರೂ ಹೇಗೆ? ಹೀಗೆ ಪ್ರಶ್ನೆಗಳ ಸರಮಾಲೆಯೇ ಹುಟ್ಟಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತದೊಳಗೇ ಇರುವ ಒಂದು ಸಣ್ಣ ಗುಂಪು ಇಲ್ಲಿನ ಭೌತಿಕ – ಲೌಖಿಕ ಅನುಕೂಲತೆಗಳೆಲ್ಲವನ್ನು ಪಡೆದುಕೊಂಡೂ ಬೇರೊಂದು ದೇಶಕ್ಕೆ ಜಯಕಾರವನ್ನು ಹಾಕುವ, ತನ್ನ ದೇಶವನ್ನೆ ಭಂಜಿಸುವ, ತುಂಡರಿಸುವ ಕಾರ್ಯೋದ್ದೇಶವನ್ನೇ ಬಹಿರಂಗವಾಗಿ ಸಾರುವ ಪ್ರವೃತ್ತಿಯನ್ನು ತೋರಿಸುತ್ತಿದೆ. ಹಾಗಾದರೆ ಈ ಬಗೆಯ ಪ್ರವೃತ್ತಿಗೆ ಮೂಲ ಕಾರಣವಾದರೂ ಏನು ಎಂದು ಯೋಚಿಸಿದರೆ ಈ ವಿಕೃತಿ ಮೆರೆವ ಮನಸುಗಳಿಗೆ ಭಾರತ ಅರ್ಥವಾಗಿಲ್ಲ ಎನ್ನುವುದು ಸ್ಪಷ್ಟ. ಅಥವಾ ಭಾರತವನ್ನು ಭಾರತೀಯ ಕಣ್ಣುಗಳಿಂದ ನೋಡುವ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ ಎನ್ನಬೇಕು. ಹಾಗೆಂದು ಈ ದೇಶವನ್ನು ಅರ್ಥೈಸಿಕೊಳ್ಳಲು ಮಾಡಿದ ಪ್ರಯತ್ನಕ್ಕೂ ನೂರಾರು ವರ್ಷಗಳ ಇತಿಹಾಸವಿದೆ. ಅಂತಹ ಹಲವು ಪ್ರಯತ್ನಗಳ ಪರಿಣಾಮವಾಗಿಯೇ ಭಾರತ ಉಳಿದಿದೆ. ಇಂದಿನ ತಲೆಮಾರಿಗೆ ಭಾರತವನ್ನು ಅದರ ಮೂಲ ಸ್ವರೂಪದಲ್ಲೇ ಗ್ರಹಿಸಲು ಇರುವ ಜ್ಞಾನದ ಆಕರಗಳನ್ನು ಶೋಧಿಸಲು ಹೊರಟರೆ ಕಣ್ಮುಂದೆ ಕಾಣಿಸಿಕೊಳ್ಳುವ ಜ್ಞಾನನಿಧಿ ಸ್ವರೂಪದ ಶಿಖರಗಳಲ್ಲಿ ಶ್ರೀ ಅರಬಿಂದೋ ಅವರ ವಿಚಾರಧಾರೆಯೂ ಒಂದು.
ಒಂದು ಶತಮಾನದ ಹಿಂದೆ ಅಂದರೆ 1920ರಲ್ಲಿ ಪ್ರಕಟವಾದ ಶ್ರೀ ಅರಬಿಂದೋ ಅವರ ಒಂದು ಕಿರು ಗ್ರಂಥ ‘The Renaissance in India’ ಇಂದಿಗೂ ದೃಷ್ಟಿ ಕಳೆದುಕೊಂಡ ಭಾರತೀಯರಿಗೆ ಭಾರತವನ್ನು ಕಾಣಿಸುವ ಜ್ಞಾನದ ಕನ್ನಡಕದಂತಿದೆ. ಈ ಕೃತಿ ಮೂಲತಃ ನಾಲ್ಕು ಪ್ರಬಂಧಗಳ ಸಂಕಲನ. 1920ರಲ್ಲಿ ಪರಿಷ್ಕೃತಗೊಂಡು ಗ್ರಂಥ ರೂಪದಲ್ಲಿ ಪ್ರಕಟವಾಗುವ ಪೂರ್ವದಲ್ಲಿ 1918ರಲ್ಲಿ ‘ಆರ್ಯ’ ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಮಿ. ಜೇಮ್ಸ್ ಕಝಿನ್ಸ್ ಎಂಬ ವಿದ್ವಾಂಸರು ಬರೆದ ಭಾರತದ ನವೋತ್ಥಾನ ಎನ್ನುವ ವಿಚಾರಪೂರ್ಣ ಗ್ರಂಥದ ಹಿನ್ನೆಲೆಯಲ್ಲಿ ಈ ಪ್ರಬಂಧ ಸರಣಿ ಹುಟ್ಟಿಕೊಂಡು, ಈ ಸರಣಿ ಬೆಳೆದು ಶ್ರೀ ಅರವಿಂದ ವಿಚಾರಧಾರೆಯು ತುಂಬಿ ಹರಿಯಿತು.
ಅಥೆನ್ಸ್‌ನಲ್ಲಿಲ್ಲದ ಒಂದು ಅಯೋಧ್ಯೆಯಲ್ಲಿತ್ತು! ಅದೇ ಧರ್ಮ
– ಸಂತೋಷ್ ತಮ್ಮಯ್ಯ
ಆಧುನಿಕ ವಾಸ್ತು ಪ್ರಾಕಾರಗಳಲ್ಲಿ ಅತ್ಯಂತ ಜನಪ್ರೀಯತೆಯನ್ನು ಗಳಿಸಿರುವ ಶೈಲಿಗಳಲ್ಲಿ ಗ್ರೀಕ್ ಶೈಲಿಯೂ ಒಂದು. ಅಮೆರಿಕಾದ ವೈಟ್ ಹೌಸಿನಿಂದ ಹಿಡಿದು ಕರ್ನಾಟಕದ ಮಹಾನಗರಗಳ ಪುರಭವನಗಳವರೆಗೂ ಗ್ರೀಕ್ ವಾಸ್ತುಶೈಲಿ ತನ್ನ ಛಾಪನ್ನು ಒತ್ತಿದೆ. ಬೃಹದಾಕಾರದ ಉದ್ದನೆಯ ಕಂಬಗಳು, ಏನೋ ಒಂದು ಗಾಂಭೀರ್ಯವನ್ನೂ ರಾಜಕಳೆಯನ್ನೂ ಒಡಲಲ್ಲಿಟ್ಟುಕೊಂಡ ಈ ಶೈಲಿಯ ಕಟ್ಟಡಗಳು ಕೊಂಚ ಅಧ್ಯಾತ್ಮದ ಭಾವವನ್ನೂ, ಕೊಂಚ ಭೀತಿಯ ಲಕ್ಷಣವನ್ನೂ ಸೂಸುತ್ತಿರುವಂತೆ ಕಾಣಿಸುತ್ತವೆ. ಇಂಥ ಕಟ್ಟಡಗಳು ಇಂದು ಜಗತ್ತಿನ ಸಾಮಾಜಿಕ ಸಂರಚನೆಯನ್ನೂ ಮೀರಿ, ರಾಜಕೀಯ ವಾತಾವರಣವನ್ನೂ ದಾಟಿ, ಪ್ರಾದೇಶಿಕತೆಯ ಶೈಲಿಗಳೆಡೆಯಲ್ಲೂ ಜನಪ್ರೀಯತೆಯನ್ನು ಪಡೆದುಕೊಂಡಿವೆ. ಪುರಾತನ ಗ್ರೀಕ್ ಸಂಸ್ಕೃತಿಗೆ ಮೆರುಗನ್ನೂ ಆಧುನಿಕ ವಾಸ್ತುಶೈಲಿಗೆ ಸವಾಲನ್ನೂ ಒಡ್ಡಿರುವ ಈ ಶೈಲಿ ಗ್ರೀಕ್ ನಾಗರಿಕತೆ ಅಳಿದರೂ ತಾನು ಅಳಿಯದೆ ಉಳಿದುಕೊಂಡಿದೆ. ಅಷ್ಟೇನೂ ಸೂಕ್ಷ್ಮತೆಯಿಲ್ಲದ, ನಾಜೂಕುತನವಿಲ್ಲದ, ಹೆಚ್ಚೇನೂ ಕೌಶಲ್ಯವಿಲ್ಲದಂತೆ ಕಾಣುವ ಗ್ರೀಕ್ ಶೈಲಿ ತನ್ನ ಸರಳತೆಯಿಂದಲೂ ಯೂರೋಪನ್ನು ದಾಟಿ ದೂರದ ಕೊಡಗು-ಚಿಕ್ಕಮಗಳೂರಿನ ಕಾಫಿ ಪ್ಲಾಂಟರುಗಳ ಬೃಹತ್ ಬಂಗಲೆಗಳಲ್ಲೂ ಪ್ರಾತಿನಿಧ್ಯವನ್ನು ಪದೆದುಕೊಂಡಿವೆ. ಜಗತ್ತಿನ ಚಿತ್ರರಂಗದ ಸಿನೆಮಾ ಸೆಟ್ಟುಗಳಲ್ಲಿ, ಕಾವ್ಯ-ಕಥೆಗಳಲ್ಲಿ ರೂಪಕದಂತೆಯೂ ಬಳಕೆಯಾಗಿದೆ. ಭಗ್ನ ಪ್ರೇಮದ ಸಂಕೇತಗಳಂತೆಯೂ ಬಳಕೆಯಾಗಿದೆ ಎಂದರೆ ಅದರ ಜನಪ್ರೀಯತೆಯನ್ನು ಅಂದಾಜಿಸಬಹುದು. ವಸಹಾತುಷಾಹಿ ಬುದ್ಧಿಯ ಬ್ರಿಟಿಷ್,ಫ್ರೆಂಚ್,ಡಚ್ ಜನಗಳ ಕಡಲು ದಾಟಿ ಮೆರೆಯುವ ಜಾಯಮಾನಗಳಿಂದ ಆ ಶೈಲಿ ವಿಶ್ವವ್ಯಾಪಿಯಾಗಿದ್ದೇನೋ ನಿಜ. ಆದರೆ ಅದನ್ನು ಜಗತ್ತು ಗುರುತಿಸುವುದು ಗ್ರೀಕ್ ಶೈಲಿ ಎಂದೇ.
ಇಂಥಾ ವಿಖ್ಯಾತ ವಾಸ್ತು ಶೈಲಿಯ ಮೂಲವಿರುವುದು ಪುರಾತನ ಅಥೆನ್ಸಿನ ಪಾರ್ಥೆನಾನ್ ದೇವಿ ಮಂದಿರದಲ್ಲಿ. ತನ್ನ ಶೈಲಿ ಜಗತ್ತಿನಾದ್ಯಂತ ಹರಡಿದ್ದರೂ ಇಂದಿಗೂ ಪಾರ್ಥೆನಾನ್ ಒಂದು ಮುರುಕು ಮಂಟಪವೇ. ತನ್ನತನವನ್ನು ಜಗತ್ತಿಗೆ ಹರಡಿದ ಮೇಲೆ ಇನ್ನು ಕೆಲಸವೇನಿದೆ ಎಂಬಂತೆ ಒಂದು ಕಾಲದ ಪಾರ್ಥೆನಾನ್ ಅದೇ ಗ್ರೀಸಿನ ಅಕ್ರೊಪೊಲೀಸ್ ಬೆಟ್ಟದ ಮೇಲೆ ನಿಡುಸುಯ್ಯುವಂತೆ ಬಿದ್ದುಕೊಂಡಿದೆ. ಇಷ್ಟೇ ಆಗಿದ್ದರೆ ಅದರಲ್ಲೇನೋ ವಿಶೇಷವಿರುತ್ತಿರಲಿಲ್ಲ. ಕೇವಲ ವಾಸ್ತು ಶಾಸದ ಶೈಲಿಯೊಂದರ ಬಣ್ಣನೆ ಸದ್ಯದ ಆವಶ್ಯಕತೆಯಂತೂ ಖಂಡಿತಾ ಅಲ್ಲ.
ಪುಲ್ವಾಮ ದಾಳಿ: ಭಾರತ ಕಲಿತ ಪಾಠ
– ವರುಣ್ ಕುಮಾರ್
ಫೆಬ್ರವರಿ ೧೪ನೇ ತಾರೀಖು ಭಾರತದ ಸೈನಿಕರ ಪಾಲಿಗೆ ಅತ್ಯಂತ ಕರಾಳ ದಿನ. ಕಳೆದ ದಶಕದಲ್ಲಿಯೇ ನಡೆದ ಅತ್ಯಂತ ಘೋರ ಉಗ್ರರ ದಾಳಿ ಅಮಾಯಕ ಸೈನಿಕರ ಸಾವಿಗೆ ಕಾರಣವಾಗಿ ಇಡೀ ದೇಶವೇ ಮಮ್ಮಲ ಮರುಗಿತು. ಪ್ರಪಂಚದೆಲ್ಲೆಡೆಯಿಂದ ಈ ಘಟನೆಯ ಬಗ್ಗೆ ಖಂಡನೆ ವ್ಯಕ್ತವಾಗಿ ಭಾರತದ ಜೊತೆ ನಾವಿದ್ದೇವೆ ಎಂಬ ಸಂದೇಶವನ್ನು ರವಾನಿಸಿ ಬೆಂಬಲವನ್ನು ವ್ಯಕ್ತಪಡಿಸಿದರು. ಈ ದಾಳಿಯ ಬಳಿಕ ಭಾರತದಲ್ಲಿ ನಡೆದ ಬೆಳವಣಿಗೆಗಳ ಹಾಗೂ ಈ ದಾಳಿಯಿಂದ ಭಾರತ ಕಲಿಯಬೇಕಾದ ಪಾಠಗಳೇನು ಎಂಬುದಾಗಿ ವಿಶ್ಲೇಷಿಸೋಣ.
ಭಾರತದೊಳಗಿನ ಉಗ್ರರು:
ಹೌದಲ್ಲವೇ, ನಮಗೆ ಈ ಉಗ್ರರದಾಳಿಯ ಬಳಿಕ ಹಲವಾರು ಉಗ್ರರು ನಮ್ಮ ದೇಶದೊಳಗೆ ಅಣಬೆಗಳಂತೆ ಹುಟ್ಟಿಕೊಳ್ಳತೊಡಗಿದರು. ಪಾಕಿಸ್ತಾನ್ ಜಿಂದಾಬಾದ್, ಇದು ನಿಜವಾದ ಸರ್ಜಿಕಲ್ ಸ್ಟ್ರೈಕ್ ಇತ್ಯಾದಿ ಬರಹಗಳನ್ನು ಒಳಗೊಂಡ ಅನೇಕ ದೇಶದ್ರೋಹಿ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾರಂಭಿಸಿದರು. ಪಂಜಾಬ್ ಎಂದಿಗೂ ದೇಶಪ್ರೇಮಿಗಳನ್ನು ಕೊಟ್ಟಂತಹ ರಾಜ್ಯ ಆದರೆ ಅದೇ ರಾಜ್ಯದ ಸಚಿವನಾದ ಸಿಧುರವರು ಪಾಕಿಸ್ತಾನದ ಜೊತೆ ಮಾತುಕತೆ ಭಾರತ ಮುಂದಾಗಬೇಕು ಎಂದು ಸಲಹೆ ನೀಡಿದರು. ಇದರ ಬೆನ್ನಿಗೆ ಸಮಯಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವ ಪ್ರಕಾಶ್ ರೈ ಒಂದು ಹಂತದಲ್ಲಿ ಭಾರತದ ಜೊತೆ ನಾವಿದ್ದೇವೆ ಎಂದು ಬೆಂಬಲ ನೀಡಿದರು. ಆದರೆ ಮರುದಿನ ಬಿಜೆಪಿಯ ಬಗ್ಗೆ ಮೋದಿಯವರ ಬಗ್ಗೆ ಟೀಕಿಸಿ ಘಟನೆಯನ್ನು ರಾಜಕೀಯಗೊಳಿಸಿದರು. ಕಮಲ್ ಹಾಸನ್ ಅಂತಹ ಸ್ವಯಂಘೋಷಿತ ನಾಯಕರು ಸೈನಿಕರು ಸಾಯಲೆಂದೇ ಸೇನೆಗೆ ಸೇರುತ್ತಾರೆ ಎಂದು ಹೇಳಿಕೆಗಳನ್ನು ಕೊಟ್ಟಾಗ ಇದು ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ಯಾವ ರೀತಿ ನೋವಾಗಬಹುದು ಎಂಬ ಕಾಳಜಿಯಿಲ್ಲದೆ ಮಾತನಾಡಿದರು. ಮತ್ತಷ್ಟು ಓದು
ವಿವಾಹೇತರ ಸಂಬಂಧ ಹಾಗೂ ಶಬರಿಮಲೈ ಕುರಿತ ಸುಪ್ರೀಂ ತೀರ್ಪು
– ವಿನಾಯಕ ಹಂಪಿಹೊಳಿ
ಬ್ರಿಟೀಷರ ಕಾಲದಲ್ಲಿ ಕ್ರಿಶ್ಚಿಯಾನಿಟಿಯಿಂದ ಎತ್ತಿ ತಂದ ಹಲವಾರು ಕಾನೂನುಗಳಲ್ಲಿ ಅಡಲ್ಟ್ರೀ ಕೂಡಾ ಒಂದು. ಈ ಕಾನೂನು ವಿವಾಹೇತರ ಸಂಬಂಧವನ್ನು ಅಪರಾಧವನ್ನಾಗಿ ಕಾಣುವ ಕಾನೂನಾಗಿತ್ತು. ವಿವಾಹೇತರ ಸಂಬಂಧದಲ್ಲಿ ಮಹಿಳೆ ಹಾಗೂ ಪುರುಷ ಪರಸ್ಪರ ಒಪ್ಪಂದದಿಂದ ತೊಡಗಿದ್ದರೆ, ಈ ಕಾನೂನಿನ ಅಡಿಯಲ್ಲಿ ಅವರನ್ನು ಶಿಕ್ಷಿಸಲಾಗುತ್ತಿತ್ತು. ಪುರುಷನು ಒತ್ತಾಯಿಸಿದ್ದರೆ ಅದು ಅತ್ಯಾಚಾರವೆಂದು ಪರಿಗಣಿಸಲಾಗುತ್ತಿತ್ತು. ಈ ಕಾನೂನು ಮುಂಚೆ ಬ್ರಿಟೀಷರಲ್ಲಿ ಇತ್ತು. ಅದು ಭಾರತಕ್ಕೂ ಬಂದಿತು.
ಯುರೋಪಿನಲ್ಲಿ ಪ್ರೊಟೆಸ್ಟಂಟ್ ಕ್ರಿಶ್ಚಿಯಾನಿಟಿಯ ವಿಚಾರಗಳು ಪಸರಿಸಿದಂತೆ ಇದನ್ನು ಅಪರಾಧವನ್ನಾಗಿ ನೋಡಬಾರದು ಹಾಗೂ ಅವರವರ ಖಾಸಗೀ ಆಯ್ಕೆಯನ್ನಾಗಿ ಕಾಣಬೇಕು ಎಂಬ ನಿರ್ಧಾರಕ್ಕೆ ಅಲ್ಲಿನ ಸರ್ಕಾರಗಳು ಬಂದವು ಹಾಗೂ ಈ ಕಾನೂನನ್ನು ರದ್ದುಪಡಿಸಿಕೊಂಡವು. ಎಲ್ಲದರಲ್ಲೂ ಪಾಶ್ಚಿಮಾತ್ಯರನ್ನೇ ಅನುಸರಿಸುವ ನಮ್ಮ ಸಂವಿಧಾನ, ಸರ್ಕಾರ ಹಾಗೂ ನ್ಯಾಯಾಲಯಗಳಲ್ಲಿ ಪ್ರೊಟೆಸ್ಟಂಟ್ ವಿಚಾರಗಳು ಪಸರಿಸಿದಂತೆ ಈ ಕಾನೂನು ಇಲ್ಲಿಯೂ ರದ್ದಾಯಿತು. ಆದರೆ ಭಾರತೀಯ ಜನಸಾಮಾನ್ಯರಿಗೆ ಈ ರೀತಿಯ ಕಾನೂನು ಇದೆ ಎಂಬುದರ ಅರಿವೂ ಅಷ್ಟಕ್ಕಷ್ಟೇ ಇತ್ತು.
ಪ್ರಪಂಚದ ಎಲ್ಲ ಸಮಾಜಗಳಂತೇ ನಮ್ಮ ದೇಶದ ಸಮಾಜಗಳಲ್ಲಿಯೂ ವಿವಾಹೇತರ ಸಂಬಂಧಗಳು ಕದ್ದು ಮುಚ್ಚಿ ನಡೆಯುತ್ತ ಬಂದಿವೆ. ಆದರೆ ಹಾಗೆ ಮಾಡುವವರು ಈ ಕಾನೂನಿಗೆ ಹೆದರಿಕೊಂಡು ಕದ್ದು ಮುಚ್ಚಿ ಸಂಬಂಧ ಇಟ್ಟುಕೊಳ್ಳುತ್ತಿರಲಿಲ್ಲ. ಅದಕ್ಕೆ ಕಾರಣವೇ ಬೇರೆ. ಹಾಗೆಯೇ ದಾಂಪತ್ಯವ್ರತಕ್ಕೆ ನಿಷ್ಠರಾಗಿ ಆದರ್ಶ ಸತಿಪತಿಗಳಾಗಿ ಬದುಕಿದವರಿಗೂ ನಮ್ಮ ಸಮಾಜಗಳಲ್ಲಿ ಕೊರತೆಯಿಲ್ಲ. ಅವರೇನೂ ಈ ಕಾನೂನನ್ನು ಪಾಲಿಸಬೇಕು ಎಂಬ ಕಾರಣಕ್ಕೆ ದಾಂಪತ್ಯವ್ರತಕ್ಕೆ ನಿಷ್ಠರಾಗಿ ಬದುಕಿರಲಿಲ್ಲ. ಅವರು ಹಾಗೆ ಬದುಕಿದ್ದಕ್ಕೂ ಕಾರಣವು ಬೇರೆಯೇ.
ಹೀಗಾಗಿ ಜನರಿಗೆ ಅಷ್ಟಾಗಿ ಪರಿಚಯವೇ ಇರದ ಕಾನೂನೊಂದನ್ನು ತೆಗೆದು ಹಾಕಿದ ಮಾತ್ರಕ್ಕೆ ಸಮಾಜವು ಹಾಳಾಗಿ ಹೋಗುತ್ತದೆ ಎನ್ನುವದು ಸಂಪೂರ್ಣ ಸತ್ಯವಲ್ಲ. ಆದರೆ ಈಗಿನ ಸಮಾಜವು ಎತ್ತ ಸಾಗುತ್ತಿದೆ ಎಂಬ ಹಿರಿಯರ ಕಳಕಳಿಯನ್ನೂ ಕೂಡ ಸಂಪೂರ್ಣವಾಗಿ ತೆಗೆದು ಹಾಕಲು ಬರುವದಿಲ್ಲ. ಪಶ್ಚಿಮದಲ್ಲಿ ಈ ಸಂಬಂಧಗಳನ್ನು ಹೇಗೆ ನೋಡಲಾಯಿತು ಎಂಬುದಕ್ಕಿಂತ ನಮ್ಮ ಪೂರ್ವಜರು ಈ ಸಂಬಂಧಗಳನ್ನು ಹೇಗೆ ವಿಶ್ಲೇಷಿಸಿದರು ಎಂಬುದನ್ನು ಗಮನಿಸಿದರೆ ಇವೆಲ್ಲಕ್ಕೂ ಉತ್ತರ ದೊರಕಬಹುದು.