ವಿಷಯದ ವಿವರಗಳಿಗೆ ದಾಟಿರಿ

Posts tagged ‘ಭ್ರಷ್ಟಚಾರ’

26
ಮೇ

ಸುಳ್ಸುದ್ದಿ : “ಭ್ರಷ್ಟಾಚಾರ ಮುಕ್ತ ಭಾರತ” ಮಾಡುತ್ತೇವೆ ಎನ್ನುವವರಿಗೆ ಕಂಕನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇವೆ

ಪ್ರವೀಣ್ ಕುಮಾರ್, ಮಾವಿನಕಾಡು

sulsuddi (1)ಇತ್ತೀಚಿನ ಕೆಲವು ವರ್ಷಗಳಲ್ಲಿ ಭಾರತದಲ್ಲಿ “ಭ್ರಷ್ಟಾಚಾರ ಮುಕ್ತ ಭಾರತ” ಎನ್ನುವ ಘೋಷಣೆ ಟ್ರೆಂಡ್ ಆಗಿ ಬೆಳೆದಿದ್ದು ಮೊನ್ನೆ ನಡೆದ ಪಂಚ ರಾಜ್ಯಗಳ ಚುನಾವಣೆಗಳ ಬಳಿಕ ಈ ಘೋಷಣೆ ಇನ್ನಷ್ಟು ಜೋರಾಗಿ ಕೇಳಿಬರುತ್ತಿದೆ. ಇದನ್ನೇ ನೆಪವಾಗಿಟ್ಟುಕೊಂಡು ನಮ್ಮ ‘ಸುಳ್ಸುದ್ದಿ’ ವಾಹಿನಿಯ ತಂಡ “ಭ್ರಷ್ಟಾಚಾರ ಮುಕ್ತ ಭಾರತ ಎನ್ನುವ ಘೋಷಣೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಎನ್ನುವ ಪ್ರಶ್ನೆಯನ್ನು ಹಲವು ನಾಯಕರ ಬಳಿ ಕೇಳಿತು. ನಮ್ಮ ಪ್ರಶ್ನೆಗೆ ಉತ್ತರಿಸಿದ ಕೆಲವು ರಾಜಕೀಯ ನಾಯಕರ ಉತ್ತರಗಳನ್ನು ನಿಮಗಾಗಿ ಇಲ್ಲಿ ನೀಡಲಾಗಿದೆ. Read more »

Advertisements
27
ಏಪ್ರಿಲ್

ಮನುಷ್ಯನಾಗುವುದೆಂದರೇನು?

-ರಾಜಕುಮಾರ.ವ್ಹಿ.ಕುಲಕರ್ಣಿ, ಮುಖ್ಯಗ್ರಂಥಪಾಲಕ
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ

36374889-corruption

ಮೊನ್ನೆ ನನ್ನೂರಿನ ಆ ಹಳ್ಳಿಗೆ ಹೋಗಿದ್ದೆ. ಊರ ಹೆಬ್ಬಾಗಿಲಲ್ಲಿ ಪರಿಚಿತರೋರ್ವರು ಭೇಟಿಯಾದರು. ಅದು ಇದು ಮಾತನಾಡುತ್ತ ತಮ್ಮ ಅಣ್ಣನ ಮಗನಿಗೆ ಸರ್ಕಾರಿ ಕೆಲಸ ಸಿಕ್ಕ ವಿಷಯ ತಿಳಿಸಿದರು. ವಿಷಯ ಕೇಳಿ ತುಂಬ ಸಂತೋಷವಾಯಿತು. ಬಾಲ್ಯದಿಂದಲೂ ಬಡತನದಲ್ಲೇ ಬೆಳೆದ ಹುಡುಗ ಪರಿಶ್ರಮ ಪಟ್ಟು ಓದಿ ಡಿಪ್ಲೋಮ ಡಿಗ್ರಿ ಸಂಪಾದಿಸಿದ್ದ. ಆತನ ಅರ್ಹತೆಗೆ ತಕ್ಕುದಾದ ಹುದ್ದೆ ಲೋಕೋಪಯೋಗಿ ಇಲಾಖೆಯಲ್ಲಿ ಲಭಿಸಿತ್ತು. ನನ್ನ ಪರಿಚಿತರು ತಮ್ಮ ಅಣ್ಣನ ಮಗನ ಕುರಿತು ಅಭಿಮಾನದಿಂದ ಮಾತನಾಡಿದರು. `ನೋಡ್ರಿ ಅವ್ನಿಗಿ ಭಾಳ ಛಲೋ ಡಿಪಾರ್ಟ್‍ಮೆಂಟ್ ಸಿಕ್ಕಾದ. ಇನ್ನ ಮುಂದ ಅವ್ನಿಗಿ ಯಾರೂ ಹಿಡಿಯೋ ಹಂಗಿಲ್ಲ. ಯಾಕಂದ್ರ ಮುಂದ ಸುರಿಯೋದೆಲ್ಲ ರೊಕ್ಕದ ಮಳಿನಾ. ಬ್ಯಾಡ ಅಂದ್ರೂ ಮಂದಿ ಮನಿಗಿ ಬಂದು ರೊಕ್ಕ ಕೊಡ್ತಾರ. ರೊಕ್ಕ ಎಣಿಸಾಕ ಅಂವ ಒಂದು ಆಳ ಇಟ್ಕೊಬೇಕಾಗ್ತದ. ಎರ್ಡ ವರ್ಷದಾಗ ಅಂವ ಹ್ಯಾಂಗ ಮನಷ್ಯಾ ಆಗ್ತಾನ ನೋಡ್ರಿ’ ಒಂದು ಕ್ಷಣ ಕಾಲ ಸ್ತಬ್ಧವಾದಂತಾಯಿತು. ಹಾಗಾದರೆ ಅವರ ದೃಷ್ಟಿಯಲ್ಲಿ ಮನುಷ್ಯನಾಗುವುದೆಂದರೇನು. ಸರ್ಕಾರಿ ನೌಕರಿಗೆ ಸೇರಿ ಲಂಚ ಹೊಡೆಯುತ್ತ, ಬಂಗ್ಲೆ ಮೇಲೆ ಬಂಗ್ಲೆ ಕಟ್ಟಿಸಿ, ಹವಾನಿಯಂತ್ರಿತ ಕಾರುಗಳಲ್ಲಿ ಓಡಾಡುತ್ತ ಐಷಾರಾಮಿ ಬದುಕು ನಡೆಸುವಾತನೇ ನಿಜವಾದ ಮನುಷ್ಯ ಎನ್ನುವ ಅವರ ಯೋಚನಾ ಲಹರಿ ಅರೇ ಕ್ಷಣ ನನ್ನನ್ನು ನಾನು ಯಾರು? ಎನ್ನುವ ಯೋಚನೆಗೆ ಹಚ್ಚಿತು. ಒಂದಿಷ್ಟು ಶೃದ್ಧೆ, ನಿಷ್ಟೆ, ಪ್ರಾಮಾಣಿಕತೆಯ ನೆರಳಲ್ಲಿ ಬದುಕು ನೂಕುತ್ತಿರುವ ಜನ ಮನುಷ್ಯರೇ ಅಲ್ಲ ಎನ್ನುವ ಅಭಿಪ್ರಾಯ ಅವರ ಮಾತಿನುದ್ದಕ್ಕೂ ಇಣುಕುತ್ತಿತ್ತು. Read more »

7
ಏಪ್ರಿಲ್

ಮತ್ತೊಮ್ಮೆ ಚೆಕಾಫ್

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

anton-chekhov-1-728ಮಧ್ಯಾಹ್ನದ ಸಮಯವದು. ತೀಕ್ಷ್ಣ ಕಂಗಳ,ಎತ್ತರದ ನಿಲುವಿನ ನಡುವಯಸ್ಕ ವಾಲ್ಡೆರೆವ್ ಕಚೇರಿಯ ಬಾಗಿಲಲ್ಲಿ ನಿಂತಿದ್ದ .ಧರಿಸಿದ್ದ ಮೇಲಂಗಿಯನ್ನು ಸರಿಪಡಿಸಿಕೊಳ್ಳುತ್ತ ನಿಂತಿದ್ದ ಆತ ಮಟ್ಟಸವಾಗಿ ತಲೆ ಬಾಚಿದ್ದ.ತನ್ನ ರೇಷ್ಮೆಯ ರುಮಾಲಿನಲ್ಲಿ ಹುಬ್ಬನ್ನೊರಿಸಿಕೊಳ್ಳುತ್ತ ಆ ಸರಕಾರಿ ಕಚೇರಿಯನ್ನು ಪ್ರವೇಶಿಸಿದ್ದ ಅವನ ನಡಿಗೆಯೂ ಕೊಂಚ ವಿಭಿನ್ನತೆಯಿಂದ ಕೂಡಿತ್ತು. ಸರಕಾರಿ ಕಚೇರಿಯಲ್ಲಿ ಎಂದಿನ ಸೋಮಾರಿತನದ ವಾತಾವರಣ.ಒಂದು ಹರಿವಾಣದ ತುಂಬ ಹತ್ತಾರು ಗ್ಲಾಸುಗಳನ್ನಿಟ್ಟುಕೊಂಡು ಗಡಿಬಿಡಿಯಲ್ಲಿ ನಡೆಯುತ್ತಿದ್ದ ಜವಾನನೊಬ್ಬನನ್ನು ತಡೆದು ನಿಲ್ಲಿಸಿ,’ನಾನೊಂದು ಮಾಹಿತಿಯನ್ನು ಪಡೆಯಬೇಕಿತ್ತು.’ಎಂದು ಪ್ರಶ್ನಿಸಿದ.ಕ್ಷಣಕಾಲ ವಾಲ್ಡೆರೆವ್ ನನ್ನು ದಿಟ್ಟಿಸುತ್ತ ನಿಂತಿದ್ದ ಜವಾನನ್ನು ಗಮನಿಸಿದ ವಾಲ್ಡೆರೆವ್ ಮತ್ತೊಮ್ಮೆ ” ಸರ್ ನಾನು ತುಂಬ ಅಗತ್ಯವಾದ ಮಾಹಿತಿಯೊಂದನ್ನು ಪಡೆದುಕೊಳ್ಳಬೇಕಿತ್ತು.ಹಾಗೆಯೇ ಮಂಡಳಿ ಪಾಸು ಮಾಡಿದ ಗೊತ್ತುವಳಿಯ ಪ್ರತಿಯೊಂದನ್ನು ಪಡೆದುಕೊಳ್ಳಬೇಕಿತ್ತು.ಇದನ್ನೆಲ್ಲಿ ವಿಚಾರಿಸಬೇಕೆನ್ನುವುದನ್ನು ದಯವಿಟ್ಟು ತಿಳಿಸಿ”ಎಂದು ಪ್ರಶ್ನಿಸಿದ. Read more »

16
ಆಕ್ಟೋ

ತಮಿಳ್ ಮಕ್ಕಳನ್ನು ಆತಂಕದ ಗುಮ್ಮನ ಕೈಗಿತ್ತ ‘ಅಮ್ಮ’!

– ತುರುವೇಕೆರೆ ಪ್ರಸಾದ್

Jayalilthaತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ 18 ವರ್ಷಗಳ ನಂತರ ಅವರ ಅಕ್ರಮ ಆಸ್ತಿ ಗಳಿಕೆ ಆರೋಪ ಸಾಬೀತಾಗಿದ್ದು ಇದೀಗ ಶಿಕ್ಷೆಯಾಗಿದೆ. ಅಧಿಕಾರ ಹಾಗೂ ಕೀರ್ತಿಯ ಉತ್ತುಂಗದಲ್ಲಿದ್ದಾಗಲೇ ಅವರು ಜೈಲು ಸೇರುವಂತಾಗಿದೆ. ಹಾಲಿ ಮುಖ್ಯಮಂತ್ರಿಯೊಬ್ಬರು ಭ್ರಷ್ಟಾಚಾರ ಹಾಗೂ ಅಕ್ರಮ ಸಂಪತ್ತು ಗಳಿಕೆ ಆರೋಪದ ಮೇಲೆ ಜೈಲು ಸೇರುತ್ತಿರುವುದೂ ಇದೇ ಮೊದಲ ಬಾರಿಯಾದ್ದರಿಂದ ಈ ಪ್ರಕರಣ ಭಾರೀ ಮಹತ್ವ ಹಾಗೂ ಪ್ರಚಾರ ಪಡೆದಿದೆ. ಎಲ್ಲಾ ತತ್ವ, ಸಿದ್ಧಾಂತ,ಕಾನೂನಿನ ನಿಯಂತ್ರಣ ಮೀರಿ ಅಪರಾಧೀಕರಣಗೊಳ್ಳುತ್ತಿರುವ ರಾಜಕೀಯ ಕ್ಷೇತ್ರಕ್ಕೆ ನ್ಯಾಯಾಲಯದ ತೀರ್ಪು ಒಂದು ಎಚ್ಚರಿಕೆಯ ಗಂಟೆ ಎಂದರೆ ತಪ್ಪಾಗಲಾರದು. ಇದು ಜಯಲಲಿತಾ ವಿರೋಧಿಗಳಿಗೆ ಸಿಕ್ಕ ಜಯವೂ ಹೌದು, ಹಾಗೆಯೇ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸತ್ಯ, ನ್ಯಾಯಕ್ಕೆ ಸಿಕ್ಕ ಜಯವೂ ಹೌದು.

ಆದರೆ ಈ ಪ್ರಕರಣದ ಹಿನ್ನಲೆಯಲ್ಲಿ ಕೆಲವೊಂದು ಅಂಶಗಳನ್ನು ಯೋಚಿಸಬೇಕಿದೆ. ಜಯಲಲಿತಾ ಅವರಿಗೆ ಅಕ್ರಮ ಸಂಪತ್ತು ಗಳಿಕೆ ಆರೋಪದ ಹಿನ್ನಲೆಯಲ್ಲಿ ಶಿಕ್ಷೆಯಾಗಿರುವುದರಿಂದ ಇನ್ನು ಮುಂದಾದರೂ ನಮ್ಮ ರಾಜಕೀಯ ಕ್ಷೇತ್ರ ಶುದ್ಧೀಕರಣಗೊಳ್ಳುತ್ತದೆ ಎಂದು ನಂಬುವ ಹಾಗಿಲ್ಲ. ಯಾಕೆಂದರೆ ಜಯಲಲಿತಾ ಅವರ ಅಕ್ರಮ ಅಸ್ತಿ ಪ್ರಮಾಣ ಕೇವಲ 66 ಕೋಟಿ. ಆದರೆ ಸಾವಿರಾರು ಕೋಟಿ ಅಕ್ರಮ ಆಸ್ತಿ ಮಾಡಿ, ಸ್ವಿಸ್ ಬ್ಯಾಂಕಿನಲ್ಲಿ ಕೋಟ್ಯಂತರ ರೂಪಾಯಿ ಇಟ್ಟಿರುವ ನೂರಾರು ರಾಜಕಾರಣಿಗಳು, ಉದ್ಯಮಿಗಳು ಹಾಗೂ ಅಧಿಕಾರಿಗಳು ಇದ್ದಾರೆ. ಅವರೆಲ್ಲರ ವಿರುದ್ಧ ನಮ್ಮ ಕಾನೂನು ಏನೂ ಮಾಡಲಾಗಿಲ್ಲ. ಸ್ವಾತಂತ್ಯ್ರ ಬಂದ ನಂತರ ದೇಶದಲ್ಲಿ ನಡೆದಿರುವ ಒಟ್ಟಾರೆ ಹಗರಣಗಳಲ್ಲಿ ರೂ.91063323430000 ರಷ್ಟು ದೊಡ್ಡ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂದು ಹೇಳಲಾಗಿದೆ. ಈ ಅಕ್ರಮ ಹಣದ ಫಲಾನುಭವಿಗಳಲ್ಲಿ ಎಷ್ಟು ಮಂದಿಗೆ ಶಿಕ್ಷೆ ಆಗಿದೆ? ಯಾಕೆ ಆಗಿಲ್ಲ? ಎಂದು ಯೋಚಿಸಬೇಕಿದೆ.

ಹಾಗಾದರೆ ಜಯಲಲಿತಾ ಅವರಿಗೆ ಶಿಕ್ಷೆ ಆಗಿದ್ದೇಕೆ? ಜಯಲಲಿತಾ ಅನುಭವದ ಕೊರತೆ ಹಾಗೂ ಮಿತಿ ಮೀರಿದ ಉದ್ಧಟತನದಿಂದ ಎಲ್ಲಾ ತೊಂದರೆಗಳನ್ನು ತಾವೇ ಆಹ್ವಾನಿಸಿಕೊಂಡರು. 1991-96 ರ ಅಧಿಕಾರಾವಧಿಯಲ್ಲಿ ಅವರು ತೆಗೆದುಕೊಂಡ ತಪ್ಪು ನಿರ್ಧಾರಗಳಿಗೆ ಅವರು ಈಗ ಭಾರೀ ಬೆಲೆ ತೆರುವಂತಾಗಿದೆ. ಆ ಅವಧಿಯಲ್ಲಿ ಅವರಿಗೆ ರಾಜಕೀಯ ಪ್ರಬುದ್ಧತೆ ಇರಲಿಲ್ಲ, ರಾಜಕೀಯಕ್ಕೆ ಬೇಕಾದ ಸೂಕ್ಷ್ಮತೆ, ದೂರಾಲೋಚನೆ , ಅನುಭವ ಯಾವುದೂ ಅವರಿಗಿರಲಿಲ್ಲ. ಹೋಗಲೆಂದರೆ ಅವರಿಗೆ ಆ ಸಮಯದಲ್ಲಿ ಸೂಕ್ತ ಮಾರ್ಗದರ್ಶನವೂ ಸಿಗಲಿಲ್ಲ. ಅವರ ಬಂಧುಗಳು ಅಧಿಕಾರದಲ್ಲಿ ಭಾರೀ ಹಸ್ತಕ್ಷೇಪ ನಡೆಸಿದರು.ನೂರಾರು ಕೋಟಿ ರೂಗಳ ಅಕ್ರಮ ನಡೆಯಿತು. ಜೊತೆಗೆ ಜಯಲಲಿತಾ ತಮ್ಮ ರಾಜಕೀಯ ಜೀವನದುದ್ದಕ್ಕೂ ವಿರೋಧಿಗಳನ್ನೇ ಸೃಷ್ಟಿಸಿಕೊಳ್ಳುತ್ತಾ ಹೋದರು. ಸುಬ್ರಹ್ಮಣ್ಯಸ್ವಾಮಿ, ಟಿ.ಎನ್.ಶೇಷನ್, ಚಿದಂಬರಂ ಎಲ್ಲರನ್ನೂ ಎದುರು ಹಾಕಿಕೊಂಡರು. ಪ್ರಜಾಪ್ರಭುತ್ವದಿಂದ ಬಂದ ಅಧಿಕಾರವನ್ನು ಸರ್ವಾಧಿಕಾರಿಯ ಧೋರಣೆಯಿಂದ ನಡೆಸಿದರು.ಅವರಲ್ಲಿ ಅಹಂ ತುಂಬಿ ತುಳುಕುತ್ತಿತ್ತು. ವಿರೋಧಿಗಳೊಂದಿಗೆ ರಾಜಕೀಯ ದ್ವೇಷಕ್ಕೆ ಮೀರಿದ ವೈಯಕ್ತಿಕ ಸೇಡಿನ ಮನೋಭಾವ ಬೆಳೆಸಿಕೊಂಡರು. ಯಾರನ್ನೂ ಬೇಕಾದರೂ ದುಡ್ಡು ಚೆಲ್ಲಿ ಕೊಂಡುಕೊಳ್ಳಬಲ್ಲೆ ಎಂಬ ದರ್ಪ ಮೆರೆದರು.

Read more »

8
ಆಕ್ಟೋ

ಭ್ರಷ್ಟ ಜಯಲಲಿತಾ ಯಾವೆಲ್ಲದರ ಫಲಿತಾಂಶ?

– ಚೇತನಾ ತೀರ್ಥಹಳ್ಳಿ    

Jayalilthaಅಧಿಕೃತವಾಗಿ ತನ್ನ ಸ್ವಂತದವರೆಂದು ಹೇಳಿಕೊಳ್ಳಲು ಮತ್ತೊಂದು ಜೀವ ಜೊತೆಗಿರದ ಜಯಲಲಿತಾ ಇವೆಲ್ಲವನ್ನೂ ಮಾಡಿಟ್ಟಿದ್ದು ಯಾಕಾಗಿ? ತನ್ನ ನೆಲದ ಬಡ ಜನರಿಗೆ ರೂಪಾಯಿಗೊಂದು ಇಡ್ಲಿ, ಕುಡಿಯುವ ನೀರು, ಸೂರು ಎಂದೆಲ್ಲ ಜನಪರ – ಜನಪ್ರಿಯ ಯೋಜನೆಗಳನ್ನು ರೂಪಿಸಿದ ಜಯಲಲಿತಾ ಅದೇ ಜನರ ತೆರಿಗೆ ಹಣವನ್ನು ನುಂಗಿ ಕೂತಿರುವುದು ಯಾಕೆ? ನಿಜಕ್ಕೂ ಈ ಪರಿಯ ಹಪಾಹಪಿ ಅವರಲ್ಲಿದೆಯೇ? ತುಸು ಜಂಭದ, ಆದರೆ ಅಪ್ರಮಾಣಿಕತೆ ಕಾಣದ ಅವರ ಮುಖ ಹಾಗೂ ನಿಲುವಿನಲ್ಲಿ ಮೋಸವಿದೆಯೇ? ಇಂದು ನಾವು ನೋಡುತ್ತಿರುವ ಭ್ರಷ್ಟ ರಾಜಕಾರಣಿ ಜಯಲಲಿತಾ ರೂಪುಗೊಂಡಿದ್ದು ಹೇಗೆ?

ಬದುಕನ್ನು ಗಂಡು – ಹೆಣ್ಣೆಂಬ ಭೇದ ಮೀರಿದ ದೃಷ್ಟಿಕೋನದಿಂದ ನೋಡಬೇಕೆನ್ನುವುದು ನಿಜವಾದರೂ ಅದರ ಹೊರಳಾಟಗಳನ್ನು ನೋಡುವಾಗ ಈ ಭೇದದ ಊರುಗೋಲು ಅಗತ್ಯವಾಗಿಬಿಡುತ್ತದೆ. ಏಕೆಂದರೆ, ಬದುಕು ಒಂದೇ ಆದರೂ ಅದನ್ನು ಹೆಣ್ಣು ಎದುರುಗೊಳ್ಳುವ ಬಗೆಯೇ ಬೇರೆ ಮತ್ತು ಗಂಡು ಒಳಗೊಳಿಸಿಕೊಳ್ಳುವ ಬಗೆ ಬೇರೆ. ಏಕೆಂದರೆ, ನಾಗರಿಕತೆಯ ಆರಂಭಕಾಲದಿಂದಲೂ ಗಂಡು ಹೆಣ್ಣಿಗೆ ಕೊಡಲಾಗಿರುವ ಅವಕಾಶಗಳು ಹಾಗಿವೆ.

ಸದ್ಯದ ಭಾರತೀಯ ರಾಜಕಾರಣದ ಮುಖ್ಯಧಾರೆಯಲ್ಲಿರುವ ಐವರು ಹೆಣ್ಣುಗಳ ಬದುಕು ಮತ್ತು ಸಾಧನೆಗಳು ವಿಶಿಷ್ಟವೇ. ಅವರ ಹಗರಣಗಳೂ ಕೂಡಾ. ಭ್ರಷ್ಟಾಚಾರದ ವಿಷಯಕ್ಕೆ ಬಂದಾಗ ಅಲ್ಲಿ ಕೂಡ ಲಿಂಗ ತಾರತಮ್ಯ ಇರುವುದಿಲ್ಲ. ವಿಚಾರಣೆ, ಶಿಕ್ಷೆ, ಪರಿಣಾಮಗಳಿಗೆ ಸಂಬಂಧಿಸಿದಂತೆ ಅದನ್ನು ತರತಮವಿಲ್ಲದೆಯೇ ನೋಡಬೇಕಾಗುತ್ತದೆ. ಈ ಸಾಮಾಜಿಕ ಆಯಾಮವನ್ನು ಮೀರಿ, ಮಾನಸಿಕ ಸ್ತರದಲ್ಲಿ ನೋಡುವಾಗ, ಮಾನವೀಯ ಚಿಂತನೆಗೆ ಹಚ್ಚಿ ನೋಡುವಾಗ ಬಿಚ್ಚಿಕೊಳ್ಳುವ ದೃಶ್ಯಗಳೂ ಬೇರೆಯೇ ಇರುತ್ತವೆ. ಅಲ್ಲಿ ಮಾಯಾವತಿಯ ಮೂರ್ತಿಗಳಿಗೆ, ಚಿನ್ನದ ಕತ್ತಿಗಳಿಗೆ ಬೇರೆಯೇ ಅರ್ಥ ಕಾದಿರುತ್ತದೆ. ಹಿಂಜಿಹೋದ ಕಾಟನ್‌ ಸೀರೆಯನ್ನಷ್ಟೆ ಉಡುವ ಮಮತಾ ಬ್ಯಾನರ್ಜಿಯ ಹೆಸರು ಯಾಕೆ ಚೀಟಿ ವ್ಯವಹಾರದಂಥದರಲ್ಲಿ ಕಾಣಿಸುತ್ತದೆ ಎಂಬುದರ ಅರಿವಾಗುತ್ತದೆ. ಯಾಕೆ ಉಮಾ ಭಾರತಿ ಹಾಗೆ ರಚ್ಚೆ ಹಿಡಿದ ಮಗುವಿನಂತಾಡುತ್ತಾರೆ ಎಂದರೆ ಅವರ ಸೋತ ಹೃದಯದ ನೋವು ಕೇಳಿಸುತ್ತದೆ. ಸೋನಿಯಾರ ನಗುವಿಲ್ಲದ ಮುಖವೂ ಅವರ ಪರಿವಾರದೊಂದಿಗೆ ಹೆಣೆದುಕೊಂಡ ಹಗರಣಗಳು, ಹಣದ ವ್ಯವಹಾರಗಳು ಮತ್ತೊಂದೇ ಕಥೆ ಹೇಳತೊಡಗುತ್ತವೆ. ಈ ಎಲ್ಲವನ್ನು ಆ ಎಲ್ಲರ ಅಪರಾಧಗಳ ಸಮರ್ಥನೆಗಾಗಿ ಖಂಡಿತ ಬಳಸಬಾರದು. ಆದರೆ ಅರ್ಥೈಸಿಕೊಳ್ಳಲು ಮತ್ತು ನಮ್ಮನಮ್ಮ ಸ್ತರಗಳಲ್ಲಿ ಅವನ್ನು ಅನ್ವಯಿಸಿಕೊಂಡು ನೋಡಲು ಇವು ಬೇಕಾಗುತ್ತವೆ.
Read more »

12
ಮೇ

ರಾಜಕೀಯದ ‘ಬಂಡವಾಳ’

– ಸಂದೀಪ ಫಡ್ಕೆ, ಮುಂಡಾಜೆ

ಪಾರ್ಟಿ ಫಂಡ್ಅಧಿಕಾರದ ಚುಕ್ಕಾಣಿ ಹಿಡಿಯಲು, ರಾಜಕೀಯ ಪಕ್ಷಗಳಿಗೆ ಜನರ ಬೆಂಬಲ ಅವಶ್ಯಕ. ವಿವಿಧ ಆಶೋತ್ತರಗಳನ್ನು ಈಡೇರಿಸುವ ವಾಗ್ದಾನ ಮಾಡುವ ಇವರಿಗೆ, ಕಿಂಚಿತ್ತು ಸಹಾಯ ಮಾಡುವ ಅವಕಾಶ ನಮ್ಮ ಸಂವಿಧಾನ ಕೊಟ್ಟಿದೆ. ಪ್ರಜಾಪ್ರಭುತ್ವದ ದೃಷ್ಟಿಯಿಂದಲೂ, ನಾಗರಿಕರ ಹಕ್ಕು ಕೇವಲ ಮತದಾನಕಷ್ಟೇ ಸೀಮಿತವಾಗಬಾರದು. ಹಾಗಾಗಿ ಅರ್ಹ ವ್ಯಕ್ತಿ ಯಾ ಪಕ್ಷಕ್ಕೆ ದೇಣಿಗೆಯ ರೂಪದಲ್ಲಿ ಹಣದ ನೆರವನ್ನು ನೀಡಬಹುದು. ಆದರೆ, ಇತ್ತೀಚೆಗೆ ಸಂತ್ರಸ್ತರ ಪರಿಹಾರ ನಿಧಿಗೆ ಅಥವಾ ಸಮಾಜ ಸೇವೆಗೆ ಸಂದಾಯವಾಗುವ ಹಣಕ್ಕಿಂತ ಹೆಚ್ಚು ರಾಜಕೀಯ ಪಕ್ಷಗಳ ಪಾಲಾಗುತ್ತಿದೆ. ಸ್ವಾರ್ಥ ರಕ್ಷಣೆಗಾಗಿ, ಬೃಹತ್ ಉದ್ದಿಮೆದಾರರ ಕಪಿಮುಷ್ಠಿಯಲ್ಲಿ ಪಕ್ಷಗಳು ನಲುಗುತ್ತಿವೆ. ಇದರ ಇನ್ನೊಂದು ಮುಖವೆಂಬಂತೆ ಅಭ್ಯರ್ಥಿ ಯಾ ಪಕ್ಷಕ್ಕೆ ಹಣದ ಹೊಳೆ ಹರಿಯುತ್ತಿದೆ.

ಸ್ವಾತಂತ್ರ್ಯ ಪೂರ್ವದಲ್ಲೂ, ಉದ್ಯಮರಂಗ ಚುನಾವಣೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿತ್ತು. ಸದಸ್ಯತ್ವ ಶುಲ್ಕ ಮತ್ತು ವೈಯುಕ್ತಿಕ ದೇಣಿಗೆಯಿಂದ ಚುನಾವಣೆಯ ವೆಚ್ಚ ಭರಿಸಲು ಪಕ್ಷಗಳಿಗೆ ಸಾಧ್ಯವಾಗದೇ ಇದ್ದುದ್ದು ಇದಕ್ಕೆ ಪ್ರಮುಖ ಕಾರಣ. ಕಾಲಕ್ರಮೇಣ ಚುನಾವಣೆಯ ಸಿದ್ಧತೆ ಮತ್ತು ಕಾರ್ಯಗತಗೊಳಿಸುವುದು ದುಬಾರಿಯಾಗುತ್ತಾ ಹೋಯಿತು. 2009ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗೆ ಸರ್ಕಾರ ಸುಮಾರು 1120 ಕೋಟಿ ರೂಪಾಯಿ ವ್ಯಯಿಸಿದೆ. ಅಲ್ಲದೇ, ವಿವಿಧ ಅಭ್ಯರ್ಥಿ ಮತ್ತು ಪಕ್ಷಗಳು ಒಟ್ಟು ಸುಮಾರು 14 ಸಾವಿರ ಕೋಟಿ ಖರ್ಚು ಮಾಡಿರುವುದು ಅಂದಾಜಿಸಲಾಗಿದೆ. ಹೀಗಾಗಿ, ರಾಜಕೀಯ ಪಕ್ಷಗಳು ಹೆಚ್ಚಿನ ಹಣವನ್ನು ಕಂಪನಿಗಳಿಂದ ಪಡೆಯುತ್ತಿವೆ. ಈ ಸಲುವಾಗಿ, 1960ರಲ್ಲಿ ಕಂಪನಿ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಕಂಪನಿಗಳು ನಿಗದಿತ ಮೊತ್ತದಷ್ಟು ಹಣವನ್ನು ಪಕ್ಷಗಳಿಗೆ ನೀಡಬಹುದೆಂದು ಕಾಯ್ದೆ ಉಲ್ಲೇಖಿಸಿತ್ತು. ಆದರೆ ಇದು ಸಣ್ಣ ಮತ್ತು ಮಧ್ಯಮ ಉದ್ಯಮಿಗಳ ಕೆಂಗಣ್ಣಿಗೆ ಗುರಿಯಾಯಿತು. ಸರ್ಕಾರ ಕೇವಲ ತನಗೆ ಸಹಕರಿಸಿದ ಬೃಹತ್ ಉದ್ದಿಮೆದಾರರ ಹಿತ ಕಾಪಾಡುವಲ್ಲಿ ಶಾಮೀಲಾಯಿತು. ಹೀಗೆ ಟೀಕೆಗೊಳಪಟ್ಟ ಕಾಯ್ದೆಗೆ 1969ರಲ್ಲಿ ತಿದ್ದುಪಡಿ ತರಲಾಯಿತು. ಈ ತಿದ್ದುಪಡಿ, ರಾಜಕೀಯ ಪಕ್ಷಗಳಿಗೆ ಹಣ ಪೂರೈಸುವುದು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಿತು. ಆದರೆ, ಈ ‘ದೇಣಿಗೆ’ಯಿಂದ ಪಕ್ಷ ಮತ್ತು ಕಂಪನಿಗಳಿಗೆ ಪ್ರಯೋಜನವಿತ್ತು. ಆದ್ದರಿಂದ, ಅಕ್ರಮವಾಗಿ ಹಣ ರವಾನಿಸುವ ಚಟುವಟಿಕೆಗಳು ಶುರುವಾದವು. 1985ರಲ್ಲಿ ಮತ್ತೊಂದು ತಿದ್ದುಪಡಿ ತರಲಾಯಿತಾದರೂ ಪರಿಣಾಮ ಬೀರಲಿಲ್ಲ.

Read more »

5
ಮೇ

ರಾಜಕೀಯ ಪಕ್ಷಗಳಿಗೆ ಬೇಕು, RTI ಬ್ರೇಕು!

– ತುರುವೇಕೆರೆ ಪ್ರಸಾದ್           

RTI Political partiesನಾವು ಮತ್ತೊಂದು ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿದ್ದೇವೆ.ರಾಜಕೀಯ ಪಕ್ಷಗಳು ತಮ್ಮ ಮಾಮೂಲಿ ಬೂಟಾಟಿಕೆ ಹಾಗೂ ಡೋಂಗಿ ಮಾತುಗಳೊಂದಿಗೆ ಮತದಾರರನ್ನು ಸೆಳೆಯಲು ಕಸರತ್ತು ನಡೆಸಿವೆ. ಆಶ್ವಾಸನೆಗಳ ಸುರಿಮಳೆಯನ್ನೇ ಸುರಿಸುತ್ತಿವೆ. ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತದ ಭರವಸೆಗಳ ಮಹಾಪೂರವೇ ಹರಿಯುತ್ತಿದೆ. ಆದರೆ 9ತಿಂಗಳ ಹಿಂದೆ ಕೇಂದ್ರೀಯ ಮಾಹಿತಿ ಆಯೋಗ (ಸಿಐಸಿ) ಕಾಂಗ್ರೆಸ್, ಬಿಜೆಪಿ,ಸಿಪಿಐ, ಸಿಪಿಐ-ಎಂ, ಬಿಎಸ್ಪಿಷ ಹಾಗೂ ಎನ್ಸಿಿಪಿ-ಈ 6ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಯಡಿ ಸಾರ್ವಜನಿಕ ಸಂಸ್ಥೆಗಳು ಎಂದು ಘೋಷಿಸಿತ್ತು. ಸಿಐಸಿಯ ಆ ಆದೇಶವನ್ನು ಎಲ್ಲಾ ರಾಜಕೀಯ ಪಕ್ಷಗಳು ಧಿಕ್ಕರಿಸಿವೆ. ಆ ಬಗ್ಗೆ ಚಕಾರವೆತ್ತದೆ ಮತದಾರರೂ ಎಲ್ಲಾ ಮರೆತಂತಿದ್ದಾರೆ.

ಮಾಹಿತಿ ಹಕ್ಕು ಕಾರ್ಯಕರ್ತರಾದ ಸುಭಾಷ್ ಅಗರ್ವಾದಲ್ ಮತ್ತು ಅನಿಲ್ ಬೈರ್ವಾೋಲ್ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಸಿಪಿಐ-ಎಂ ಪಕ್ಷಗಳ ದೇಣಿಗೆ ಸ್ವೀಕೃತಿ ಹಾಗೂ ಖರ್ಚು-ವೆಚ್ಚಗಳ ಮಾಹಿತಿ ಕೋರಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ ತಾವು ಸಾರ್ವಜನಿಕ ಸಂಸ್ಥೆಗಳಲ್ಲ ಹಾಗೂ ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಯಡಿ ಬರುವುದಿಲ್ಲ ಎಂದು ತಿಳಿಸಿದ್ದವು. ಆದರೆ ಮಾಹಿತಿ ಹಕ್ಕು ಕಾರ್ಯಕರ್ತರು ರಾಜಕೀಯ ಪಕ್ಷಗಳನ್ನೂ ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ 2(ಎಚ್) ಅಡಿ ಸಾರ್ವಜನಿಕ ಸಂಸ್ಥೆಗಳೆಂದು ಘೋಷಿಸಬೇಕೆಂದು ಸಿಐಸಿಗೆ ಮನವಿ ಮಾಡಿದ್ದರು.ಅದರಂತೆ ಆಯೋಗದ ಪೂರ್ಣ ಪೀಠ ಜೂನ್ 3, 2013ರಂದು ಮೇಲಿನ 6ರಾಜಕೀಯ ಪಕ್ಷಗಳು ಸಾರ್ವಜನಿಕ ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ಅವು ಉತ್ತರದಾಯಿತ್ವ ಹೊಂದಿವೆ ಎಂದು ಆದೇಶ ನೀಡಿತು. ಅದಕ್ಕೆ ಸಿಐಸಿ ಕಾರಣಗಳನ್ನೂ ನೀಡಿತ್ತು. ಎಲ್ಲಾ 6ರಾಜಕೀಯ ಪಕ್ಷಗಳು ಪರೋಕ್ಷವಾಗಿ ಕೇಂದ್ರ ಸರ್ಕಾರದಿಂದ ಸಹಾಯ ಧನ ಪಡೆದಿದ್ದವು. ದೆಹಲಿಯ ಹೃದಯ ಭಾಗದಲ್ಲಿ ಅತಿ ಕಡಿಮೆ ಅಥವಾ ಪುಕ್ಕಟೆಯಾಗಿ ನಿವೇಶನ/ಕಟ್ಟಡಗಳನ್ನು ಪಡೆದಿದ್ದವು. ಎಲ್ಲಾ ಪಕ್ಷಗಳಿಗೂ ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ರೂ.28.56ಲಕ್ಷ ಮೌಲ್ಯದ ಉಚಿತ ಪ್ರಸಾರ ಸೇವೆ ನೀಡಲಾಗಿತ್ತು. 2006-09ರ ಅವಧಿಯಲ್ಲಿ ಎಲ್ಲಾ ಪಕ್ಷಗಳಿಗೆ ಒಟ್ಟಾರೆ 510ಕೋಟಿ ಆದಾಯ ಕರ ವಿನಾಯತಿಯನ್ನು ನೀಡಲಾಗಿತ್ತು.

Read more »

11
ಡಿಸೆ

ಎಎಪಿ ಗೆಲುವಿನ ಗುಂಗಿನಲ್ಲಿ ‘ಪೊರಕೆ’ ಹಿಡಿಯಲು ಹೊರಟವರು

ರಾಕೇಶ್ ಶೆಟ್ಟಿ

AAPಮಿನಿ ಲೋಕಸಭಾ ಚುನಾವಣೆ ಎಂದೇ ಪರಿಗಣಿತವಾಗಿದ್ದ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಸಮೀಕ್ಷೆಯಂತೆಯೇ ೪ ರಾಜ್ಯಗಳಲ್ಲಿ ಬಿಜೆಪಿ ಮತ್ತು ೧ ರಾಜ್ಯದಲ್ಲಿ ಕಾಂಗ್ರೆಸ್ಸ್ ತನ್ನ ಮುದ್ರೆಯೊತ್ತಿದೆ.ಆದರೆ,ಆಮ್ ಆದ್ಮಿ ಪಕ್ಷಕ್ಕೆ ೨೮ ಸ್ಥಾನಗಳನ್ನು ನೀಡುವ ಮೂಲಕ ಅಚ್ಚರಿಯ ಫಲಿತಾಂಶ ನೀಡಿದ್ದು ದೆಹಲಿಯ ಮತದಾರರು.

ಎಲ್ಲಾ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಎಎಪಿ ಪಕ್ಷ ೧೦-೧೫ ಸೀಟು ಪಡೆಯಬಹುದು ಮತ್ತು ಆ ಮೂಲಕ ಸರ್ಕಾರ ರಚಿಸುವಲ್ಲಿ ನಿರ್ಣಾಯಕ ಪಾತ್ರವಹಿಸಬಹುದು ಅನ್ನುವ ಅಭಿಪ್ರಾಯಗಳೇ ಬಂದಿತ್ತು.ಆದರೆ ಮತದಾರಪ್ರಭು ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷದೆಡೆಗೆ ಹೆಚ್ಚು ಉದಾರಿಯಾಗಿದ್ದಾನೆ.’ರಾಜಕಾರಣಿಗಳೆಲ್ಲ ಭ್ರಷ್ಟರು’ ಅನ್ನುತಿದ್ದ ಕೇಜ್ರಿವಾಲ್ ತಾವೇ ಒಂದು ರಾಜಕೀಯ ಪಕ್ಷ ಸ್ಥಾಪಿಸುತ್ತೇವೆ ಅಂತ ಹೊರಟು ನಿಂತು ಪ್ರಸಕ್ತ ರಾಜಕೀಯ ಪಕ್ಷಗಳಿಗಿಂತ ವಿಭಿನ್ನವಾಗಿ ಅದನ್ನು ಕಟ್ಟಿಕೊಳ್ಳುತ್ತ ಹೊರಟಾಗ ಯಾವ ರಾಜಕಾರಣಿಗಳು ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ. ದೆಹಲಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸ್ ನಡುವೆ ನೇರಾನೇರ ಹಣಾಹಣಿ ನಡೆಯಲಿದೆ ಅನ್ನುವಷ್ಟು ನಿರ್ಲಕ್ಷ್ಯದಲ್ಲಿದ್ದ ಶೀಲಾ ದಿಕ್ಷೀತ್ ಕೂಡ,ಕೇಜ್ರಿವಾಲ್ ಮುಂದೆ ಸೋತು ಸುಣ್ಣವಾಗಿದ್ದಾರೆ.

Read more »

20
ಆಕ್ಟೋ

ಬಿಜೆಪಿಯ ಅಪಸ್ವರಕ್ಕೆ ‘ಆರ್.ಎಸ್.ಎಸ್’ನದ್ದೇ ಟ್ಯೂನ್

– ರಾಕೇಶ್ ಶೆಟ್ಟಿ

ಅಂದು ಪಾಕಿಸ್ತಾನದ ನೆಲದಲ್ಲಿ ನಿಂತು “ಜಿನ್ನಾ ಜಾತ್ಯಾತೀತರಾಗಿದ್ದರು” ಅನ್ನುವ ಸತ್ಯ ಹೇಳಿದ್ದೆ ಆ ಹಿರಿಯ ಮಾಡಿದ ದೊಡ್ಡ ತಪ್ಪು(!).ಆ ಒಂದು ಮಾತು ಅವರು ಅಲ್ಲಿವರೆಗೂ ದೇಶದ ಮೂಲೆ ಮೂಲೆಗೆ ಹೋಗಿ ಅವರು ಪಕ್ಷಕಟ್ಟಲು ಪಟ್ಟ ಶ್ರಮ,೨ ಸೀಟಿನಿಂದ ಅಧಿಕಾರದ ಚುಕ್ಕಾಣಿ ಹಿಡಿಯುವವರೆಗೂ ಪಕ್ಷ ಸಾಗಿ ಬಂದ ಹಾದಿಯಲ್ಲಿ ಅವರು ವಹಿಸಿದ ಜವಬ್ದಾರಿ ಎಲ್ಲವನ್ನು ಮರೆಸಿಹಾಕಿತ್ತು.ಧುತ್ತನೆ ಅವರ ಮಾತೃ ಸಂಘಟನೆಗೆ ಈ ಹಿರಿಯ ನಾಯಕ ಮತ್ತು ಮುಂದಿನ ಲೋಕಸಭೆ ಚುನಾವಣೆಯ ಪ್ರಧಾನಿ ಅಭ್ಯರ್ಥಿಯಾಗಿದ್ದವರಿಗೆ ವಯಸ್ಸಾಯಿತು ಅನ್ನುವ ಜ್ನಾನೋದಯ ಅರ್ಧ ರಾತಿಯಲ್ಲಿ ಆಗಿಬಿಟ್ಟಿತ್ತಲ್ಲ,ಅಷ್ಟೇ ಸಾಕಿತ್ತು ಅವಮಾನಕಾರಿಯಾಗಿ ಅವರನ್ನು ಪಕ್ಕಕ್ಕೆ  ತಳ್ಳಿ,ಅಲ್ಲಿಯವರೆಗೂ ಮಹಾರಾಷ್ಟ್ರ ಬಿಟ್ಟು ಹೊರಗೆ ಹೆಸರೇ ಕೇಳಿರದ ‘ಯುವ ನಾಯಕ(?)’ ನನ್ನು ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.

ಇವತ್ತಿಗೆ ‘ಆ ಹಿರಿಯ’ರನ್ನು ಮರೆತು ಮುಂದೆ ಹೋದ ಆ ಪಕ್ಷದ ಪಾಡು, ಅಹಂಕಾರದಿಂದ ಕೃಷ್ಣ ಪರಮಾತ್ಮನನ್ನು ಬಿಟ್ಟು ಬಿಲ್ವಿದ್ಯೆ ಮರೆತು ನಿಂತ ‘ಅರ್ಜುನ’ನಂತೆಯೇ ಆಗಿದೆ.ಕೂದಲು ಬೆಳೆಯೋ ಜಾಗವೆಲ್ಲ ತಲೆ ಅಂದುಕೊಂಡವರಂತೆ ಆ ಪಕ್ಷದಲ್ಲಿರುವ ಜನರೆಲ್ಲಾ ತಾವೇ ‘ಪ್ರಧಾನಿ ಅಭ್ಯರ್ಥಿ’ಗಳು ಅಂದುಕೊಂಡಿದ್ದಾರೆ.ಅಂದ ಹಾಗೆ,ಆ ಹಿರಿಯರ ಹೆಸರು ಲಾಲ್ ಕೃಷ್ಣ ಅಡ್ವಾಣಿ,ಪಕ್ಷ ಬಿಜೆಪಿ,ಮಾತೃ ಸಂಘಟನೆಯ ಹೆಸರು ‘ಆರ್.ಎಸ್.ಎಸ್’ ಮತ್ತೆ ಆ ಯುವನಾಯಕ(?) ಮೊನ್ನೆ ಮೊನ್ನೆ ತಾನೇ ಎಕರೆಗಟ್ಟಲೆ ರೈತರ ಜಮೀನು ಸ್ವಾಹ ಮಾಡಿದ್ದಾರೆ ಅನ್ನುವ ಆರೋಪ ಹೊತ್ತ ನಿತಿನ್ ಗಡ್ಕರಿ.

Read more »