ಮದ್ದರೆಯದಿದ್ದರೆ ಈ ಮಾವೋವ್ಯಾಧಿ ನಿದ್ದೆಗೆಡಿಸಲಿದೆ ಎಚ್ಚರ!
– ರೋಹಿತ್ ಚಕ್ರತೀರ್ಥ
ಎರಡು ಸುದ್ದಿಗಳಿವೆ. ಒಂದು – ಉರಿ ಸೇನಾನೆಲೆಯ ಮೇಲೆ ನಾಲ್ಕು ಮಂದಿ ಮುಸ್ಲಿಂ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 17 ಸೈನಿಕರು ಹತರಾಗಿದ್ದಾರೆ. ಎರಡು – ಭಾರತದ ನಕ್ಸಲ್ ಉಗ್ರರು ಜಗತ್ತಿನ ಭಯೋತ್ಪಾದನೆಯ ಪಟ್ಟಿಯಲ್ಲಿ ಕಂಚಿನ ಪದಕವನ್ನು ಜಸ್ಟ್ ಮಿಸ್ ಮಾಡಿಕೊಂಡು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಇವೆರಡರಲ್ಲಿ, ನಕ್ಸಲರ ಸಮಸ್ಯೆಯೇ ದೊಡ್ಡದು ಅನಿಸಿದ್ದರಿಂದ ಅದನ್ನು ಈ ವಾರದ ಅಂಕಣಕ್ಕೆ ಆಯ್ದುಕೊಂಡಿದ್ದೇನೆ. ಯಾಕೆಂದರೆ ಹೊರಗಿನ ಶತ್ರುಗಳನ್ನು ಪ್ರತಿದಾಳಿ ಮಾಡಿಯೋ ಯುದ್ಧ ಘೊಷಿಸಿಯೋ ತಹಬದಿಗೆ ತರಬಹುದೆನ್ನೋಣ; ಆದರೆ, ತಾಯ್ನಾಡಿನ ಒಳಗೇ ಇದ್ದುಕೊಂಡು ಒರಲೆಯಂತೆ ದೇಶವನ್ನು ಕೊರೆದು ಪುಡಿಗುಟ್ಟುವ ಆಂತರಿಕ ಶತ್ರುಗಳನ್ನು ಬಗ್ಗುಬಡಿಯುವುದು ಹೇಗೆ? 2015ರಲ್ಲಿ ಭಾರತದಲ್ಲಿ ನಡೆದ 791 ಭಯೋತ್ಪಾದನಾ ಕೃತ್ಯಗಳಲ್ಲಿ 43% ಅನ್ನು ನಕ್ಸಲೈಟ್ ಸಂಘಟನೆಗಳೇ ಮಾಡಿವೆ ಎಂದು ಅಂತಾರಾಷ್ಟ್ರೀಯ ವರದಿಯೊಂದು ಹೇಳುತ್ತಿದೆ. ಒಂದೇ ವರ್ಷದಲ್ಲಿ ಇವರು ನಡೆಸಿರುವ ದಾಳಿಗಳು 343; ಇವರ ಅಟ್ಟಹಾಸಕ್ಕೆ ಬಲಿಯಾಗಿ ಶವವಾಗಿ ಮಲಗಿದ ಅಮಾಯಕರ ಸಂಖ್ಯೆ 176. 2010ರಿಂದ 2015ರವರೆಗಿನ ಅವಧಿಯಲ್ಲಿ ದೇಶದೊಳಗೆ ನಡೆದ ಭಯೋತ್ಪಾದನಾ ಕೃತ್ಯಗಳಲ್ಲಿ 2162 ನಾಗರಿಕರು, 802 ಭದ್ರತಾ ಸಿಬ್ಬಂದಿ ಹತರಾಗಿದ್ದಾರೆಂದು ಕೇಂದ್ರದ ಗೃಹಸಚಿವಾಲಯದ ವರದಿ ಹೇಳುತ್ತಿದೆ. ಜಗತ್ತಿನಲ್ಲಿ ತಾಲಿಬಾನ್, ಐಸಿಸ್ ಮತ್ತು ಬೊಕೋ ಹರಾಮ್ ಎಂಬ ಉಗ್ರಗಾಮಿ ಸಂಘಟನೆಗಳ ನಂತರದ ಸ್ಥಾನವನ್ನು ಭಾರತದ ನಕ್ಸಲ್ ಚಳವಳಿ ತನ್ನ ಮುಡಿಗೇರಿಸಿಕೊಂಡಿದೆ. ಭಾರತ ಪ್ರಪಂಚದೆದುರು ತಲೆ ತಗ್ಗಿಸುವಂಥ ವಿಚಾರವಿದು. ಕರ್ನಾಟಕದ ಸಂದರ್ಭದಲ್ಲಿ ನಕ್ಸಲೈಟ್ ಚಳವಳಿಯ ನೆಲೆ-ಬೆಲೆಗಳೇನು ಎಂಬುದನ್ನು ವಿಮರ್ಶಿಸುವುದೇ ಪ್ರಸ್ತುತ ಲೇಖನದ ಉದ್ದೇಶ. ಮತ್ತಷ್ಟು ಓದು