ಮಹಾಪಂಡಿತ ರಾಹುಲ ಸಾಂಕೃತ್ಯಾಯನರ ಲೇಖನ – ಡಾ.ಅನಂತರಾಮ ಭಟ್ಟರ ದುರಂತ ಕಥನ
ಮಹಾಪಂಡಿತ ರಾಹುಲ ಸಾಂಕೃತ್ಯಾಯನ (1893-1963)ರ ಬದುಕು ಮತ್ತು ಬರಹ ಒಬ್ಬ ಲೇಖಕನ ಸಾಧ್ಯತೆಗಳ ಬಗ್ಗೆ ಇರುವ ಇದುವರೆಗಿನ ಕಲ್ಪನೆಗಳಿಗೊಂದು ದೊಡ್ಡ ಸವಾಲು. ಈ ಜಗತ್ತು ಕಂಡ ಅಪರೂಪದ ‘ಮಹಾಕಾವ್ಯಾತ್ಮಕ’ ವ್ಯಕ್ತಿತ್ವ ಅವರದು. ಧರ್ಮ-ದರ್ಶನ, ರಾಜಕೀಯ, ಇತಿಹಾಸ, ಪುರಾತತ್ವ, ಸಾಹಿತ್ಯ ಭಾಷೆ, ಸಂಶೋಧನೆ-ಇತ್ಯಾದಿ ನಾನಾ ಕ್ಷೇತ್ರಗಳಲ್ಲಿ ಅದ್ಭುತ ಕೊಡುಗೆಯನ್ನಿತ್ತ ರಾಹುಲ್ ಒಂದು ಮಹಾವಿಸ್ಮಯ. ಅವರಿಗೆ ಮುವತ್ತಾರು ಭಾಷೆಗಳು ತಿಳಿದಿದ್ದುವು. ನೂರೈವತ್ತಕ್ಕೂ ಮಿಕ್ಕಿ ಅವರ ಕೃತಿಗಳು ಪ್ರಕಟವಾಗಿದ್ದರೆ, ಅಪ್ರಕಟಿತ ಸಾಕಷ್ಟಿವೆ. ಒಬ್ಬ ವ್ಯಕ್ತಿಯಾಗಿ ಒಂದು ವಿಶ್ವವಿದ್ಯಾಲಯಕ್ಕೂ ಅಸಂಭವವೆನಿಸುವಂತೆ ನಾಲ್ಕು ಕೋಶಗ್ರಂಥಗಳನ್ನು ರಚಿಸಿದವರು ರಾಹುಲರು (ಶಾಸನ ಶಬ್ದಕೋಶ, ಟಿಬೇಟ್ ಹಿಂದಿಕೋಶ್, ಟಿಬೇಟ್ ಸಂಸ್ಕೃತಕೋಶ್, ರಾಷ್ಟ್ರ ಭಾಷಾಕೋಶ್). ತ್ರಿಪಿಟಕಗಳ ಹಾಗೂ ಬೌದ್ಧದಾರ್ಶನಿಕ ಕೃತಿಗಳ ಮಹಾನ್ ಸಂಪಾದಕರು. ‘ದರ್ಶನ ದಿಗ್ದರ್ಶನ’ ಅವರು ಬರೆದ ತತ್ವಶಾಸ್ತ್ರದ ಮೇರುಕೃತಿ. ಕಾಶಿಯ ವಿದ್ಯಾಪೀಠವೇ ಇವರ ಅಗಾಧ ಸಂಸ್ಕೃತ ಪಾಂಡಿತ್ಯಕ್ಕೆ ‘ಮಹಾಪಂಡಿತ’ ಎಂಬ ಬಿರುದನ್ನಿತ್ತಿದೆ. ಶ್ರೀಲಂಕಾ ಬೌದ್ಧ ವಿಶ್ವವಿದ್ಯಾಲಯ ‘ತ್ರಿಪಿಟಕಾಚಾರ್ಯ’ ಎಂಬ ಪ್ರಶಸ್ತಿಯನ್ನಿತ್ತು ಗೌರವಿಸಿತ್ತು. ಮಹಾನ್ ಪರ್ಯಟಕ, ಪುರಾತತ್ವವೇತ್ತ, ಸಾಹಿತ್ಯ ವಾಚಸ್ಪತಿ, ಪದ್ಮವಿಭೂಷಣ, ಮಹಾಪಂಡಿತ ರಾಹುಲ ಸಾಂಕೃತ್ಯಾಯನರ ಕೃತಿಗಳ ಸಂಖ್ಯೆ ಅಗಾಧ. 1994ರಲ್ಲಿ ಡೆಲ್ಲಿಯ ರಾಧಾಕೃಷ್ಣ ಪ್ರಕಾಶನವು ದೊಡ್ಡ ಗಾತ್ರದ ಐವತ್ತು ಖಂಡಗಳಲ್ಲಿ ರಾಹುಲರ ಕೃತಿಗಳನ್ನು ಪ್ರಕಟಿಸಿದೆ. ಆದರೆ, ಅಪ್ರಕಟಿತ ಇನ್ನೂ ಸಾಕಷ್ಟಿವೆ. ಖೇದದ ವಿಷಯವೆಂದರೆ ಪ್ರಕಟಿತ ಖಂಡಗಳಲ್ಲಿ ಹಲವು ಈಗ ಉಪಲಬ್ಧವಿಲ್ಲ.
ಪ್ರಸ್ತುತ ಲೇಖನ ಖಂಡ 2 ಭಾಗ 1 (ಜೀವನ ಚರಿತ್ರೆ ಮತ್ತು ಸಂಸ್ಮರಣ)ದ “ಜಿನ್‍ಕಾ ಮೈ ಕೃತಜ್ಞ್” ಮಾಲೆಯಲ್ಲಿ 34ನೇ ಲೇಖನ ಡಾ| ಅನಂತರಾಮ ಭಟ್ಟರ ದುರಂತ ಕಥನ. ಇದು ಪುಟ 685 ರಿಂದ 692ರಲ್ಲಿದೆ. ಅದರ ಪೂರ್ತಿ ಕನ್ನಡ ಅನುವಾದ ತಮ್ಮ ಮುಂದಿದೆ.
ಹಿಂದಿ ಮೂಲ: ಮಹಾಪಂಡಿತ ರಾಹುಲ ಸಾಂಕೃತ್ಯಾಯನ
ಕನ್ನಡಕ್ಕೆ : ಡಾ| ಜಿ. ಭಾಸ್ಕರ ಮಯ್ಯ
ಕೊಡವೂರು ಶ್ರೀ ಅನಂತರಾಮ ಭಟ್ಟರನ್ನು ನಾನು ಮೊದಲು ಭೇಟಿಯಾದದ್ದು 1928ನೆಯ ಇಸವಿಯಲ್ಲಿ. ಕೊಲೊಂಬೋದಲ್ಲಿ. ಒಬ್ಬ ಪಂಡಿತ ಭಿಕ್ಷು ನನ್ನೊಡನೆಂದ – ‘ನಮ್ಮಲ್ಲಿ ಜಂಬೂ ದ್ವೀಪದ ಒಬ್ಬ ಪಂಡಿತರು ಇದ್ದಾರೆ.’ ಇದನ್ನು ಕೇಳಿ ನಾನು ಅಲ್ಲಿಗೆ ಹೋದೆ. ಇಪ್ಪತ್ತು ವರ್ಷದ ಒಬ್ಬ ತರುಣನೊಂದಿಗೆ ನನ್ನ ಭೇಟಿಯಾಯ್ತು – ಅನಂತರಾಮ ಹುಟ್ಟಿದ್ದು ಫೆಬ್ರವರಿ 7, 1908. ಆತ ಸಂಸ್ಕೃತವನ್ನು ಮಾತೃಭಾಷೆಯ ಹಾಗೆ ಮಾತನಾಡುತ್ತಿದ್ದ. ಆನಂತರ ಪರಸ್ಪರ ಭೇಟಿಯಾಗುತ್ತಿದ್ದೆವು. ಅದು ಆಳವಾದ ಮೈತ್ರಿಯನ್ನೇ ಉಂಟುಮಾಡಿತು.
ಅನಂತರಾಮ ಮದ್ರಾಸಿನ ದಕ್ಷಿಣಕನ್ನಡ ಜಿಲ್ಲೆಯ ಉಡುಪಿಯವರಾಗಿದ್ದರು.ಅವರ ಮಾತೃಭಾಷೆ ಕನ್ನಡ. ಮಾಧ್ವ ಸಂಪ್ರದಾಯದ ವೈಷ್ಣವ ಬ್ರಾಹ್ಮಣ. ಅವರು ಬಾಲ್ಯದಿಂದಲೇ ಸಂಸ್ಕೃತ ಓದಿದವರು. ಸಾಹಿತ್ಯದಲ್ಲಿ ವಿಶೇಷ ಪಾಂಡಿತ್ಯ ಪಡೆದವರು. ಮೈಸೂರಿನಲ್ಲಿ ಓದು ಮುಗಿಸಿದ ನಂತರ ಅವರಿಗೆ ಅನ್ನಿಸಿದ್ದೇನೆಂದರೆ ಸಂಸ್ಕೃತ ವಿದ್ವಾಂಸನಿಗೆ ಮಾರುಕಟ್ಟೆಯಲ್ಲಿ ಯಾವ ಬೆಲೆಯೂ ಇಲ್ಲ. ಇಂಗ್ಲಿಷ್ ಓದಿದರೆ ಬೆಲೆ ಹೆಚ್ಚಾಗುತ್ತದೆ. ಇಂಗ್ಲಿಷ್ ಓದಿ ಮೆಟ್ರಿಕ್ ಪರೀಕ್ಷೆಗೆ ಕುಳಿತರು. ಆದರೆ ತೇರ್ಗಡೆಯಾಗಲಿಲ್ಲ. ಮುಂದಿನ ವರ್ಷವೂ ಇದೇ ಗತಿ ಎಂದು ಅನ್ನಿಸಿತು. ಯಾರೋ ಹೇಳಿದರು … ಸಿಲೋನಿನಲ್ಲಿ ನೇರವಾಗಿ ಲಂಡನ್ ಯುನಿವರ್ಸಿಟಿಯ ಪರೀಕ್ಷೆಗೆ ಕುಳಿತುಕೊಳ್ಳಲಿಕ್ಕಾಗುತ್ತದೆ. ಅದರ ಬೆಲೆ ಭಾರತೀಯ ಡಿಗ್ರಿಗಳಿಗಿಂತ ಹೆಚ್ಚು. ಹೇಗೋ ಮಾಡಿ ಅವರು ಸಿಲೋನಿಗೆ ಬಂದರು. ಸಿಲೋನಿನ ಮಹಾಸ್ಥವಿರ ಧರ್ಮಸ್ಕಂಧರನ್ನು ಭೇಟಿ ಮಾಡಿದರು. ಅವರು ಅನಂತರಾಮ ಅವರನ್ನು ತಮ್ಮ ಬಳಿ ಸೇರಿಸಿಕೊಂಡರು. ಮಹಾಸ್ಥವಿರರದ್ದು ಒಂದು ಸಣ್ಣ ವಿಹಾರ. ಅದರಲ್ಲಿ ನಾಲ್ಕಾರು ಭಿಕ್ಷುಗಳು ವಾಸಿಸುತ್ತಿದ್ದರು. ಭಟ್ಟರ ವಿದ್ಯೆಯ ಪೂರ್ಣ ಉಪಯೋಗ ಅಲ್ಲಿ ಆಗುತ್ತಿರಲಿಲ್ಲ. ಆದರೆ, ಅಲ್ಲಿ ಇರುವುದರಿಂದ ವಾಸ ಮತ್ತು ಊಟದ ಚಿಂತೆ ನೀಗಿತು. ಮಹಾಸ್ಥವಿರರು ಆಗಾಗ್ಗೆ ಒಂದು ನಾಲ್ಕು ಪುಟದ ಸಂಸ್ಕೃತದ ಪತ್ರಿಕೆ ಪ್ರಕಟಿಸುತ್ತಿದ್ದರು. ಭಟ್ಟರು ಅದರಲ್ಲಿ ಬರೆಯ ತೊಡಗಿದರು.
ಮತ್ತಷ್ಟು ಓದು