ತೇಜಸ್ವಿ ಲೋಕದಲ್ಲಿ ನನ್ನ ವಿಹಾರ
– ಪ್ರೇಮಶೇಖರ
ನನ್ನ ಅತ್ಯಂತ ಇಷ್ಟದ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಬಗ್ಗೆ ಎರಡು ವರ್ಷಗಳ ಹಿಂದೆ ಬರೆದಿದ್ದ ಲೇಖನ
ಶ್ರೀ ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ಬಗ್ಗೆ, ಅವರ ಬರಹಗಳ ಬಗ್ಗೆ ಟಿ. ಪಿ. ಅಶೋಕರ ತೇಜಸ್ವಿ ಕಥನ, ಡಿ. ವಿ. ಪ್ರಹ್ಲಾದ್ ಸಂಕಲಿಸಿರುವ ತೇಜಸ್ವಿ ಲೋಕ ಸೇರಿದಂತೆ ಹಲವು ಪುಸ್ತಕಗಳು ಬಂದಿವೆ. ನೂರೊಂದು ಬಿಡಿಬಿಡಿ ಲೇಖನಗಳು ಪತ್ರಿಕೆಗಳಲ್ಲಿ, ವಿಮರ್ಶಾಸಂಕಲನಗಳಲ್ಲಿ ಪ್ರಕಟವಾಗಿವೆ. ಅವುಗಳ ಸಾರಾಂಶವನ್ನು ಸಂಗ್ರಹಿಸುವ ಪ್ರಯತ್ನ ಇದಲ್ಲ. ಅವುಗಳಲ್ಲಿನ ಅಭಿಪ್ರಾಯಗಳನ್ನು ಪುನರುಕ್ತಿಸುವ ಪ್ರಯತ್ನವೂ ಇಲ್ಲಿಲ್ಲ. ನನ್ನ ಅತ್ಯಂತ ಪ್ರೀತಿಯ ಲೇಖಕ ತೇಜಸ್ವಿಯವರ ಬಗ್ಗೆ ನನ್ನ ವೈಯುಕ್ತಿಕ ಅನಿಸಿಕೆಗಳನ್ನು ನನ್ನ ಸರಳ ಭಾಷೆಯಲ್ಲಿ (ಕ್ಲಿಷ್ಟ, ಗ್ರಾಂಥಿಕ ಕನ್ನಡ ನನಗೆ ಗೊತ್ತಿಲ್ಲ) ನಿಮ್ಮೊಡನೆ ಹಂಚಿಕೊಳ್ಳುವ ಒಂದು ಪುಟ್ಟ ಪ್ರಯತ್ನ ಇದು.
ಐದು ವರ್ಷಗಳ ಹಿಂದೆ ಇಂಥದೇ ಏಪ್ರಿಲ್ ಅಂತ್ಯದ ಒಂದು ದಿನ ಮಂಗಳೂರಿನ ಗೆಳೆಯ ಡಾ. ಜಯರಾಜ್ ಅಮೀನ್ ಅವರು ತೇಜಸ್ವಿಯವರ “ಮಾಯಾಲೋಕ”ವನ್ನು ತಂದುಕೊಟ್ಟಾಗ ನಾನು ಓದುವ ಆ ಮಹಾನ್ ಲೇಖಕನ ಕೊನೆಯ ಪುಸ್ತಕ ಅದಾಗಬಹುದೆಂದು ನಾನು ನೆನಸಿರಲಿಲ್ಲ. ಅದಾಗಿ ಒಂದು ವರ್ಷದಲ್ಲಿ ಅವರು ಕಣ್ಮರೆಯಾದಾಗ ನನ್ನಲ್ಲುಂಟಾದ ಶೂನ್ಯತೆಗೆ ಹಲವು ಆಯಾಮಗಳಿದ್ದವು. ಅವರ ಬರಹಗಳನ್ನು ಮತ್ತೆ ಮತ್ತೆ ಓದುವುದಲ್ಲದೇ ಅವರ ಬಗ್ಗೆ ಇತರರ ಬರಹಗಳನ್ನು ಕಾಯುವುದಷ್ಟೇ ನನಗೆ ಉಳಿದದ್ದು.
ಎರಡುಮೂರು ವಾರಗಳ ಹಿಂದೆ ವಿಜಯಕರ್ನಾಟಕದಲ್ಲಿ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರು ಬರೆದಿರುವ ನನ್ನ ತೇಜಸ್ವಿ ಕೃತಿಯ ಬಗ್ಗೆ ಶ್ರೀಮತಿ ವಿ. ಎನ್. ವೆಂಕಟಲಕ್ಷ್ಮಿಯವರ ಬರಹವನ್ನು ಓದಿದೊಡನೇ ಪ್ರೊ. ಶ್ರೀರಾಂ ಅವರಿಗೆ ಫೋನ್ ಮಾಡಿ ಪುಸ್ತಕದ ಪ್ರತಿಯೊಂದನ್ನು ನನಗಾಗಿ ತೆಗೆದಿಡುವಂತೆ ಕೇಳಿಕೊಂಡೆ. ಕಳೆದವಾರ ನನ್ನ ಪುಸ್ತಕದ ಬಿಡುಗಡೆಯ ಪ್ರಯುಕ್ತ ಮೈಸೂರಿಗೆ ಹೋದಾಗ ಅವರ ಮನೆಗೆ ಹೋಗಿ ಆ ಪುಸ್ತಕದ ಜತೆ ಪುಸ್ತಕ ಪ್ರಕಾಶನ ಅತ್ಯಾಕರ್ಷಕ ಶೈಲಿಯಲ್ಲಿ ಹೊರತಂದಿರುವ ಮಾಯೆಯ ಮುಖಗಳು ಎಂಬ ತೇಜಸ್ವಿಯವರ ಚಿತ್ರ – ಲೇಖನಗಳ ಸುಂದರ ಸಂಕಲನವನ್ನೂ ಕೊಂಡುತಂದು ಓದಿದೆ. ತೇಜಸ್ವಿಯವರ ಬರಹಗಳು, ಅವರ ಬಗೆಗಿನ ಇತರರ ಬರಹಗಳ ಬಗ್ಗೆ ನನಗಿರುವ ಇಂಗದ ದಾಹವೇ ಈ ಪುಸ್ತಕಗಳನ್ನು ನನ್ನದಾಗಿಸಿಕೊಳ್ಳುವುದರ ಹಿಂದಿನ ಕಾರಣ.