ಪ್ರಶಸ್ತಿಯ ಮಾನ ಕಳೆದ ಅಕಾಡೆಮಿ
– ರಾಕೇಶ್ ಶೆಟ್ಟಿ
ಕೆಲವು ವ್ಯಕ್ತಿಗಳು ಪ್ರಶಸ್ತಿಗಳನ್ನು ಮೀರಿ ಬೆಳೆದಿರುತ್ತಾರೆ.ಅವರ ವ್ಯಕ್ತಿತ್ವದ ಮುಂದೆ ಪ್ರಶಸ್ತಿಯೂ ಕುಬ್ಜವೆನಿಸುತ್ತದೆ. ಮಹಾತ್ಮ ಗಾಂಧೀಜಿಗೆ ನೊಬೆಲ್ ಶಾಂತಿ ಪ್ರಶಸ್ತಿ ಅಥವಾ ನೇತಾಜಿ ಸುಭಾಷ್ ಅವರಿಗೆ ಭಾರತ ರತ್ನವನ್ನು ಕೊಟ್ಟರೇ,ಪ್ರಶಸ್ತಿಗಳೇ ಕುಬ್ಜವಾಗಿ ಬಿಡುತ್ತವೆ.ಇನ್ನೊಂದಿಷ್ಟು ವ್ಯಕ್ತಿತ್ವಗಳು ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸುತ್ತವೆ.ಡಿ.ವಿ.ಜಿ,ಕುವೆಂಪು,ಕಾರಂತರಂತಹ ಶ್ರೇಷ್ಟ ಸಾಹಿತಿಗಳು ‘ಸಾಹಿತ್ಯ ಅಕಾಡೆಮಿ’ ಪ್ರಶಸ್ತಿಗೆ ಭಾಜನಾರಾಗಿ ‘ಪ್ರಶಸ್ತಿ’ಗೆ ಮೆರುಗು ತಂದವರು.
೨೦೧೩ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಪಟ್ಟಿ ನೋಡಿದರೇ,ಈ ಹಿಂದೆ ಪ್ರಶಸ್ತಿ ಸ್ವೀಕರಿಸಿದ ಮಹಾನ್ ಚೇತನಗಳಿಗೇ ಅವಮಾನ ಮಾಡುವಂತಿದೆ. “ಶ್ರೀರಾಮ ಅಪ್ಪನಿಗೆ ಹುಟ್ಟಿದವನಲ್ಲ;ಕುಂತಿ ಮಕ್ಕಳನ್ನು ಹೆತ್ತಿದ್ದು ಕೂಡಾ ವ್ಯಭಿಚಾರದಿಂದ; ಭಗವದ್ಗೀತೆಯನ್ನು ಸುಡಬೇಕು;ಒಕ್ಕಲಿಗರಿಗೆ ಸಾಮಾಜಿಕ ಪ್ರಜ್ಞೆಯಿಲ್ಲ” ಹೀಗೆ ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುವ,ಒಂದು ಸಮುದಾಯವನ್ನು ಹಿಂಸೆಗೆ ಪ್ರಚೋದಿಸುವಂತಹ ಬೇಜವಬ್ದಾರಿ ಹೇಳಿಕೆಗಳನ್ನು ಒಂದು ವರ್ಷದಿಂದೀಚೆಗೆ ನೀಡುತ್ತ ಬಂದಿರುವ ಪ್ರೊ.ಭಗವಾನ್ ಅವರನ್ನು ಆಯ್ಕೆ ಮಾಡುವ ಮೂಲಕ ರಾಜ್ಯ ಸರ್ಕಾರವೂ ಸಹ ಇಂತ ಶಾಂತಿ ಭಂಗ ತರುವ ಹೇಳಿಕೆಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ಘೋಷಿಸಿದಂತಿದೆ.ಅಷ್ಟಕ್ಕೂ ಭಗವಾನ್ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ಕೃತಿಗಳಿಂದ ಹೆಸರು ಮಾಡಿದವರಲ್ಲ ಬದಲಿಗೆ ‘ಬೈಗುಳ’ಗಳಿಂದ ಚಾಲ್ತಿಗೆ ಬಂದವರು.ಭಗವಾನರ ಬಡಬಡಿಕೆಗಳನ್ನೇ ವೈಚಾರಿಕತೆ ಎಂದು ಬಿಂಬಿಸುವುದು ರಾಜ್ಯದ ವೈಚಾರಿಕ ಪರಂಪರೆಗೂ ಅವಮಾನ.