ವಿಷಯದ ವಿವರಗಳಿಗೆ ದಾಟಿರಿ

Posts tagged ‘ಮೀಡಿಯಾ’

22
ಜುಲೈ

ಕಾಂಗ್ರೆಸ್ಸಿನ ‘ನಮೋ’ನಿಯಾ ಮತ್ತು ಸೆಕ್ಯುಲರ್ ‘ನಾಯಿಮರಿ’

–  ರಾಕೇಶ್ ಶೆಟ್ಟಿ

NaModiಭಾರತದಲ್ಲಿ ಭಾವುಕತೆಗೇನಾದರೂ ಬರವುಂಟೇ? ಹಾಗೇನಾದರೂ ಇದ್ದಿದ್ದರೆ ನಮ್ಮ ಸ್ಥಿತಿ ಸ್ವಲ್ಪಮಟ್ಟಿಗಾದರೂ ಸುಧಾರಿಸುತ್ತಿತ್ತೋ ಏನೋ? ಆದರೆ,ಭಾವುಕತೆ ಅನ್ನುವುದು ನಮ್ಮ ಅಸ್ಮಿತೆಯ ಭಾಗವಾಗಿರುವುದರಿಂದಲೇ ನಮ್ಮ ರಾಜಕಾರಣಿಗಳು,ರಾಜಕೀಯ ಪಕ್ಷಗಳು ಪದೇ ಪದೇ ಭಾವುಕತೆಯ ಬಿರುಗಾಳಿಯೆಬ್ಬಿಸಿ ತಮ್ಮ ಹಗರಣ,ವೈಫಲ್ಯಗಳನ್ನು ಮುಚ್ಚಿಕೊಳ್ಳುವುದು.ಅದರಲ್ಲೂ ಇಂತ ವಿಷಯದಲ್ಲಿ ಕಾಂಗ್ರೆಸ್ಸ್ ಪಕ್ಷದ್ದು ಉಳಿದೆಲ್ಲರಿಗಿಂತ ಒಂದು ‘ಕೈ’ ಮೇಲೆಯೇ ಹೌದು.

೨೪ ಗಂಟೆಯ ಮೀಡಿಯಾ ಯುಗದಲ್ಲಿ ದೊಡ್ಡ ದೊಡ್ಡ ಹಗರಣಗಳು ಸುದ್ದಿಯಾದಗಾಲೆಲ್ಲ ಕಾಂಗ್ರೆಸ್ಸ್ ಅದರಿಂದ ಹೊರಬರಲು ಒಂದು ಸಣ್ಣ ಎಳೆಯೇನಾದರೂ ಸಿಗುತ್ತದೆಯಾ ಅಂತ ನೋಡುತ್ತಿರುತ್ತದೆ.ಈ ಬಾರಿ ರೂಪಾಯಿ ಮೌಲ್ಯ ಕುಸಿದು,ಆಡಳಿತ ವ್ಯವಸ್ಥೆಯೇ ಹಳ್ಳ ಹಿಡಿದು ಕುಳಿತಿರುವಾಗ ಅದಕ್ಕೆ ಕಾಣಿಸಿದ ಬೆಳಕಿನ ಹಾದಿ “ನಾಯಿ ಮರಿ”…!

ಹೌದು. ಗುಜರಾತ್ ಮುಖ್ಯಮಂತ್ರಿ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಬಳಸಿದ ನಾಯಿ ಮರಿ ಪದ.ರಾಯಿಟರ್ಸ್ ನೀಡಿದ ಸಂದರ್ಶನದಲ್ಲಿ ನಾಯಿ ಮರಿ ಬಂದಿದ್ದು ಹೇಗೆ ಅಂತ ನೋಡಿದರೆ,

ಸಂದರ್ಶಕ: “ಏನು (೨೦೦೨ ರ ಗಲಭೆ) ನಡೆಯಿತೋ ಆ ಬಗ್ಗೆ ನೀವು ಪಶ್ಚಾತ್ತಾಪ ಪಡುತ್ತಿರಾ?”

ಮತ್ತಷ್ಟು ಓದು »

17
ಜುಲೈ

‘ಹಿಂದು’ ಶಬ್ದ ಕೇಳುತ್ತಲೇ ಇವರೇಕೆ ಹುಯಿಲೆಬ್ಬಿಸುತ್ತಾರೆ?

– ಪ್ರವೀಣ್ ಪಟವರ್ಧನ್

Modi12ಕೆಲ ದಿನಗಳ ಹಿಂದಷ್ಟೇ ಬೋಧ್ಗಯಾ ಬಾಂಬ್ ಬ್ಲಾಸ್ಟ್ ಪ್ರಕರಣದ ನಂತರ ನೀಡಿದ್ದ ವಿಚಿತ್ರ- ವಿಕೃತ ಹೇಳಿಕೆಗಳನ್ನು ಆಧರಿಸಿ, ತಮಗೆ ಸಮಯ ಬಂದಾಗಲೆಲ್ಲಾ ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಿ, ಇತರರ (ಉದ್ದೇಶಪೂರ್ವಕವಾಗಿ ಗುಜರಾತಿನ ಮುಖ್ಯಮಂತ್ರಿ ಮೋದಿಯವರ) ತೇಜೋವಧೆ ಮಾಡುವ ಕಾಂಗ್ರೆಸ್ಸಿಗ “ಒಸಾಮಾ ಜೀ” ಎಂದು ಮುಕ್ತ ಮನಸ್ಸಿನಿಂದ ಮರ್ಯಾದೆ ನೀಡಿದ ಖ್ಯಾತಿಯ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯಸಿಂಗ್ ಅವರನ್ನು ಕುರಿತು Facebook  ಜಾಲತಾಣದಲ್ಲಿ ಒಂದು ವ್ಯಂಗ್ಯ ಚಿತ್ರ ಹರಿದಾಡುತ್ತಿತ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ ವ್ಯಂಗ್ಯಚಿತ್ರದಲ್ಲಿ ಇದ್ದುದು ಇಷ್ಟೇ. “ಟೀವಿಯಲ್ಲಿ ದಿಗ್ವಿಜಯಸಿಂಗ್ ಒಂದು ಪತ್ರಿಕಾ ಹೇಳಿಕೆ ನೀಡುತ್ತಿದ್ದಾಗ ಮನೆಯಲ್ಲಿನ ಸಾಕಿದ ನಾಯಿಗಳು ಟೀವಿ ನೋಡುತ್ತಾ ಬೊಗಳುತ್ತಿವೆ. ಮುಂದೇನೂ ಹೇಳಲಾರೆ. ನೀವೇ ಅರ್ಥ ಮಾಡಿಕೊಳ್ಳಬಲ್ಲಿರಷ್ಟೇ.

ರಾಜಕಾರಣಿಯೆಂದರೆ ಅಲ್ಲಿ ವಾದ-ವಿವಾದಗಳು ಸಾಮಾನ್ಯ. ಈಗಿನ ರಾಜಕಾರಣದಲ್ಲಿ ಜನಪರ ಕೆಲಸ ಮಾಡುವುದಕ್ಕಿಂತ ವಾದಗಳಿಗೆ ಸಿಲುಕಿಕೊಳ್ಳುವುದೇ ಹೆಚ್ಚು. ಒಬ್ಬರ ಮೇಲೋಬ್ಬರ ಕೆಸರೆರಚಾಟ. ವಿರೋಧ ಪಕ್ಷದ ವ್ಯಕ್ತಿಯ ತೇಜೋವಧೆ, ಸುಳ್ಳು ಆರೋಪ, ಅರ್ಥವಿಹೀನ ಹೇಳಿಕೆ ಇವೆಲ್ಲವೂ ಕೆಸರೆರೆಚಾಟದ ವಿವಿಧ ಮುಖಗಳು. ನಿಮ್ಮ ಸರ್ಕಾರ ಹೀಗೆ ಮಾಡಿದ್ದು ಸರಿಯೇ ಎಂಬ ಪ್ರಶ್ನೆಗೆ ಸಿಗುವ ಉತ್ತರ, ನಮ್ಮ ಹಿಂದಿನ ಸರ್ಕಾರ ಇದಕ್ಕಿಂತಲೂ ಕೆಟ್ಟ ಕೆಲಸ ಮಾಡಿತ್ತು ಅದರ ಬಗ್ಗೆ ಮಾತಾಡೋಣವೇ ಎಂದು ಕುಟುಕಿ ತಮ್ಮ ಲೋಪಗಳನ್ನು cover-up ಮಾಡಿಕೊಳ್ಳುವವರೇ ಈ ದಿನ ಹೆಚ್ಚು.

ಮತ್ತಷ್ಟು ಓದು »

13
ಜೂನ್

೨೦೦೪ ರಲ್ಲಿಯೇ ಅಡ್ವಾಣಿ ಯುಗಾ೦ತ್ಯ ಆಗಿ ಹೋಗಿತ್ತು!

-ರಾಘವೇಂದ್ರ ನಾವಡ

LK-NaMoಭಾ.ಜ.ಪಾ. ದ ಪ್ರಾಥಮಿಕ ಸದಸ್ಯತ್ವನ್ನೊ೦ದು ಬಿಟ್ಟು ಪಕ್ಷದಲ್ಲಿ ತನಗಿದ್ದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದ ಅಡ್ವಾಣಿಯ ಹತಾಶ ನಡೆ ಆಶ್ಚರ್ಯವನ್ನೇನೂ ತರಲಿಲ್ಲ! ಬದಲಿಗೆ ಬೇಸರವನ್ನು೦ಟು ಮಾಡಿತು. ಗೋವಾದಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿಗೆ ಗೈರು ಹಾಜರಾದಾಗಲೇ ಏನೋ ಮಹತ್ತರವಾದುದು  ನಡೆಯುತ್ತದೆ ಎ೦ಬುದನ್ನು ಊಹೆಯಿತ್ತು! ಆದರೆ ಅಡ್ವಾಣಿಯ ಈ ನಡೆಯನ್ನಲ್ಲ!  ಮೋದಿಯ ಮೇಲಿನ ಅಡ್ವಾಣಿಯವರ ವಿರೋಧದ ಅ೦ತ್ಯ ಹೇಗಾಗಬಹುದೆ೦ದು ಯೋಚಿಸುತ್ತಿದ್ದೆ.. ಮೋದಿಯ ಪದೋನ್ನತಿಯನ್ನು ಊಹಿಸಿಯಾಗಿತ್ತು! ಅದಕ್ಕಿದ್ದ ಅಡ್ವಾಣಿಯವರ ವಿರೋಧವನ್ನೂ ಅರ್ಥೈಸಿಕೊ೦ಡಿತ್ತು! ಆದರೆ ಅಡ್ವಾಣಿಯವರ ಈ ನಡೆ ಪಕ್ಷವನ್ನಷ್ಟೇ ಅಲ್ಲ! ಸಮಸ್ತ ಭಾ.ಜ.ಪಾ ಕಾರ್ಯಕರ್ತರಲ್ಲದೆ ಅದರ ಲಕ್ಷಾ೦ತರ ಅಭಿಮಾನಿಗಳಿಗೂ ಕ್ಷಣ ನಿಟ್ಟುಸಿರು ಬಿಡ್ಶುವ೦ತೆ ಮಾಡಿದೆ! ಕೇವಲ “ ಕೃಷ್ಣ “ ನ ಕೈಯಲ್ಲಿ ಆಯುಧ ಹಿಡಿಸಲೆ೦ದೇ  ಕುರುಕ್ಷೇತ್ರದಲ್ಲಿ ಪಾ೦ಡವರೊ೦ದಿಗೆ ಹಿಗ್ಗಾಮುಗ್ಗ ಹೋರಾಡಿದ ಭೀಷ್ಮರು ತನ್ನ ಗುರಿ ಈಡೇರಿದ ನ೦ತರ ಶರಶಯ್ಯೆಯಲ್ಲಿ ಮಲಗಿದ೦ತೆ.. ಭಾಜಪಾದ “ ಲಾಲಕೃಷ್ಣ“ ಶಸ್ತ್ರ ತ್ಯಾಗ ಮಾಡಿರುವುದು ಬೇಸರವನ್ನು೦ಟು ಮಾಡಿದುದರ ಜೊತೆಗೆ… ಹೆ೦ಡತಿಯ ಒತ್ತಾಯಕ್ಕೋ… ವಯಸ್ಸಿನ ಪ್ರಭಾವವೋ… ಶಕ್ತಿಯ ಕೊರತೆಯೋ  ಎ೦ಬುದರ ಗೊ೦ದಲದಲ್ಲಿ  ತನ್ನ ಅಪ್ರಸ್ತುತತೆಯನ್ನು ಮನಗ೦ಡ ತ೦ದೆಯೊಬ್ಬ ಏಕದ೦ ಕುಟು೦ಬದ  ಜವಾಬ್ದಾರಿಯನ್ನು  ಮಕ್ಕಳಿಗೆ ತಲ್ಲಣದಿ೦ದಲೇ  ನೀಡಿ, ಹೊರಬರುವುದನ್ನು ಕಲ್ಪಿಸಿಕೊಳ್ಳುವ೦ತೆ ಮಾಡುತ್ತದೆ!

ಅದು ೧೯೮೦ ರ ಕಾಲ..  ಜನಸ೦ಘದಿ೦ದ ಬೇರ್ಪಟ್ಟು ಭಾ.ಜ.ಪಾದ ಹುಟ್ಟಿಗೆ ಕಾರಣಕರ್ತರಾದವರಿಬ್ಬರಲ್ಲಿ ವಾಜಪೇಯಿಯ ಜೊತೆಗೆ ಅಡ್ವಾಣಿಯೂ ಒಬ್ಬರು.   ೧೯೮೬ ರಲ್ಲಿ ಆ ಪಕ್ಷದ ರಾಷ್ತ್ರೀಯ ಅಧ್ಯಕ್ಷರಾಗುವವರೆಗೂ  ಚುನಾವಣೆಗಳಲ್ಲಿ ಭಾಜಪಾದ ಸಾಧನೆಯೇನೂ ಹೇಳಿಕೊಳ್ಳುವ೦ತಹದ್ದಾಗಿರಲಿಲ್ಲ!  ಆದರೆ   ನ೦ತರದ್ದು ಇತಿಹಾಸ.. ಚುನಾವಣೆಯಿ೦ದ ಚುನಾವಣೆಗೆ ಸುಧಾರಿಸುತ್ತಲೇ ಹೋದ ಭಾಜಪಾ.. ಅಡ್ವಾಣಿಯವರು ಆರ೦ಭಿಸಿದ “ಶ್ರೀರಾಮ ರಥಯಾತ್ರೆಯ“ ಲಾಭವನ್ನು ಭರಪೂರವಾಗಿ ಪಡೆದುಕೊ೦ಡಿತು! ಕಾ೦ಗ್ರೆಸ್ಸಿಗೆ ಸಮಾನವಾಗಿ ಸೆಡ್ದುಹೊಡೆದು ನಿಲ್ಲಲು ಭಾಜಪಾಕ್ಕೆ ಶಕ್ತಿ ತು೦ಬಿದವರೆ೦ದರೆ ಇಬ್ಬರೇ.. ವಾಜಪೇಯಿ ಹಾಗೂ ಅಡ್ವಾಣಿ! ಲಕ್ಷಾ೦ತರ ಕಾರ್ಯಕರ್ತರ ಅಮಿತೋತ್ಸಾಹವೂ ಇವರೊ೦ದಿಗಿತ್ತು! ಬೆನ್ನಿಗೆ ಉಗ್ರ ಹಿ೦ದುತ್ವದ ಅಜೆ೦ಡಾ… ಬೆನ್ನು ಬೆನ್ನಿಗೆ ರಥಯಾತ್ರೆಗಳು..  ಭಾರತ ರಾಜಕೀಯದಲ್ಲಿ “ ರಾಮ-ಲಕ್ಷ್ಮಣ“ರೆ೦ದೇ ಖ್ಯಾತವಾದ ಈ ಜೋಡಿ  ಕಾ೦ಗ್ರೆಸ್ ಗೆ ಪರ್ಯಾಯವಾಗಿ ಭಾ.ಜ.ಪಾವನ್ನು ಬೆಳೆಸಿದ್ದಲ್ಲದೆ, ದೇಶದ ರಾಜಕೀಯದಲ್ಲಿ ಕಾ೦ಗ್ರೆಸ್ಸಿಗೆ ಬಹುದೊಡ್ಡ ಪರ್ಯಾರವಾಗಿ ಬೆಳೆದು ನಿ೦ತಿತು. ೧೯೯೬ ರ ಚುನಾವಣೆಯಲ್ಲಿ ಏಕೈಕ ಬಲು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಾ.ಜ.ಪಾಕ್ಕೆ ವಾಜಪೇಯಿ ನೇತಾರರಾದರು. ಚುನಾವಣೆಗೂ ಮುನ್ನ ಅಡ್ವಾಣಿ ವಾಜಪೇಯಿಯವರನ್ನು ಬಾ.ಜ.ಪಾ ದ ಪ್ರಧಾನ ಮ೦ತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದು ಫಲ ನೀಡಿತು! “ ಬದಲಾವಣೆಗಾಗಿ  ಭಾ.ಜ.ಪಾ.ವನ್ನು ತನ್ನಿ“ , “ ಈ ಬಾರಿ ಬಿ.ಜೆ.ಪಿ“ ಎ೦ಬ ಕಾರ್ಯಕರ್ತರ ಚುನಾವಣಾ ಘೋಷಣೆಗಳು ಫಲ ನೀಡಿದವು. ವಾಜಪೇಯಿಯವರ ಅಕಳ೦ಕಿತ ವ್ಯಕ್ತಿತ್ವ, ರಾಜಕೀಯ ಅನುಭವ ಹಾಗೂ ಅಡ್ವಾಣಿಯವರ ಪ್ರಖರ ಹಿ೦ದುತ್ವವಾದಕ್ಕೆ ಮತದಾರರು ಮಣೆ ಹಾಕಿದರು!

ಮತ್ತಷ್ಟು ಓದು »

24
ಡಿಸೆ

ಕೌರವರ ನಾಶಕ್ಕೆ ಶ್ರೀಕಾರ ಹಾಕಿದ್ದು ದ್ರೌಪದಿಯೇ ತಾನೇ?

– ರಾಕೇಶ್ ಶೆಟ್ಟಿ

Dehli1ಬಹುಷಃ ಆಗಿನ ಕಾಲವೇ ಚೆನ್ನಾಗಿತ್ತೆನೋ.ಆಗಲಾದರು ಕುರು ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣವಾಗುವಾಗ ಅವಳ ಸಹಾಯಕ್ಕೆ ಕರೆದೊಡನೆಯೇ ಶ್ರೀ ಕೃಷ್ಣ ಪರಮಾತ್ಮ ಬಂದಿದ್ದ.ಪಾಪ! ಈ ಕಾಲದ ಹೆಣ್ಣು ಮಕ್ಕಳ ಕೂಗು ಆ ಕಾಣದ ದೇವರಿಗೂ,ಕಾನೂನು ಪಾಲಕರಾದ ಮನುಷ್ಯ(?)ರಿಗೂ ಕೇಳುತ್ತಿಲ್ಲ.ಕುರುಕ್ಷೇತ್ರದ ಯುದ್ಧದ ಮುಗಿದರೂ ಕೌರವರು ಇನ್ನೂ ಸತ್ತಿಲ್ಲ.ದ್ರೌಪದಿಯರ ಗೋಳು ಮುಗಿಯೋಲ್ಲ…

ಕಳೆದ ಶನಿವಾರದ ಬೆಳಗ್ಗಿನಿಂದ ಇಂಡಿಯಾ ಗೇಟ್,ರಾಷ್ಟ್ರಪತಿ ಭವನದ ಮುಂದೆ ನಿಂತು ನ್ಯಾಯ ಕೇಳಿದ ಯುವಕ-ಯುವತಿಯರ ಮೇಲೆಯೇ ಲಾಠಿ ಚಾರ್ಜ್,ಜಲಫಿರಂಗಿ,ಅಶ್ರು ವಾಯು ಪ್ರಯೋಗ ನಡೆಯುತ್ತಿದ್ದರೂ.ಪ್ರಧಾನಿ ಮೌನ ಮೋಹನ್ ಸಿಂಗ್ ತಮ್ಮ ಮೌನ ಮುರಿದಿದ್ದು ಸೋಮವಾರ ಬೆಳಿಗ್ಗೆ.ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ!,ಅದೂ ಸಹ ತಮ್ಮ ಭಾಷಣದ ಕೊನೆಯಲ್ಲಿ “ಟೀಕ್  ಹೈ” ಅಂದರಂತೆ! ಕ್ಯಾಮೆರಾ ಹಿಂದೆ ನಿಂತಿದ್ದ ನಿರ್ದೇಶಕ(ಕಿ) ಯಾರಿದ್ದಿರಬಹುದು? So Called ಯುವನಾಯಕ ರಾಹುಲ್ ಗಾಂಧಿಗೂ ಯುವಕ-ಯುವತಿಯರ ಮೇಲೆ ಪೋಲಿಸ್ ದೌರ್ಜನ್ಯ ಕಾಣಿಸಿಲ್ಲ.ರಷ್ಯಾದಿಂದ ಪುಟಿನ್ ಬರುತಿದ್ದಾರೆ ಅವರೆದುರು ನೀವು ಗಲಾಟೆ ಮಾಡಿದರೆ ಭಾರತದ ಬಗ್ಗೆ ಅವರೇನು ತಿಳಿದುಕೊಂಡಾರು ಅಂತ ಬುದ್ದಿ ಹೇಳುವ ಗೃಹ ಮಂತ್ರಿ ಶಿಂಧೆಗೇ,ವೃದ್ಧರು ,ಮಹಿಳೆಯರು,ಮಕ್ಕಳ ಮೇಲೆ ದೌರ್ಜನ್ಯವೆಸಗಿದ ಪೋಲಿಸರನ್ನು ಮನೆಗೆ ಕಳಿಸಲಾಗದಿದ್ದ ಮೇಲೆ ತಾನು ಕುಳಿತಿರುವ ಕುರ್ಚಿಯಿಂದ ಎದ್ದೋಗಬೇಕು ಅನ್ನುವ ನೈತಿಕತೆ  ಕೂಡ ಉಳಿದಿಲ್ಲವೇ? ಎದ್ದೋಗುವುದನ್ನು ಪಕ್ಕಕ್ಕಿಡಿ,ತನ್ನ  ಪೋಲಿಸ್ ಪಡೆ ಮಾಡಿದ ಘನಂದಾರಿ ಕೆಲಸಕ್ಕಾಗಿ ದೇಶದ ಜನರ ಕ್ಷಮೆ ಕೇಳಲು ಸಹ ಆತ ಸಿದ್ಧನಿಲ್ಲ. ಹಾಳು ಬಿದ್ದು ಹೋಗಲಿ ಕ್ಷಮೆಯೂ ಬೇಡ.ನ್ಯಾಯ ಕೇಳಲು ನಿಂತ ವಿದ್ಯಾರ್ಥಿಗಳನ್ನು ಭೇಟಿಯಾಗುವ ಕುರಿತು ಪ್ರಶ್ನೆ ಕೇಳಿದರೆ, “ಇವತ್ತು ವಿದ್ಯಾರ್ಥಿಗಳು ಪ್ರತಿಭಟಿಸುತ್ತಾರೆ.ನಾಳೆ ಮಾವೋವಾದಿಗಳು ಪ್ರತಿಭಟಿಸುತ್ತಾರೆ.ಹಾಗಂತ ಮಾವೋವಾದಿಗಳು ಭೇಟಿಯಾಗಲು ಸಾಧ್ಯವೇ?” ಅನ್ನುತ್ತಾನಲ್ಲ ಇದೆಂತ ಉಡಾಫೆ ತನದ ಮಾತು? ಎಲ್ಲಿಗೆ ಬಂದು ನಿಂತಿದೆ ನಮ್ಮ ವ್ಯವಸ್ಥೆ?

ಮತ್ತಷ್ಟು ಓದು »

26
ಜುಲೈ

ಮೂರುವರೆ ರೂಪಾಯಿ ಓದುಗ ಆರೂವರೆ ರೂಪಾಯಿಯ ಜಾಹೀರಾತುದಾರ…

– ಡಾ.ಅಶೋಕ್ ಕೆ.ಆರ್

ಪ್ರಜಾವಾಣಿಯಿಂದ ನಿವೃತ್ತರಾದ ವ್ಯಂಗ್ಯಚಿತ್ರಕಾರ ಪಿ.ಮಹಮ್ಮದ್ ರವರು ವ್ಯಂಗ್ಯಚಿತ್ರಕಾರರ ಬವಣೆ, ಹಣ ನೀಡದ ಪತ್ರಿಕಾ ಸಂಸ್ಥೆಗಳಬಗ್ಗೆ ತಮ್ಮ ಅಭಿಪ್ರಾಯವನ್ನು ಫೇಸ್ ಬುಕ್ಕಿನಲ್ಲಿ ಪತ್ರದ ರೂಪದಲ್ಲಿ ಬರೆದುಕೊಂಡಿದ್ದರು.ಅದಕ್ಕೆ ಪ್ರತಿಕ್ರಿಯೆಯಾಗಿ ಪ್ರಜಾವಾಣಿಯ ದಿನೇಶ್ ಅಮೀನ್ ಮಟ್ಟುರವರು ಫೇಸ್ ಬುಕ್ಕಿನಲ್ಲಿ ಕೆಳಗಿನಂತೆ ಬರೆದಿದ್ದಾರೆ.

“ಸಂಬಳ-ಸೌಲಭ್ಯಗಳ ವಿಚಾರದಲ್ಲಿ ಪತ್ರಕರ್ತರಿಗೆ ಆಗಿರುವ ಅನ್ಯಾಯವನ್ನು ಬರೆಯಲು ಹೊರಟರೆ ಪತ್ರಿಕೆಗಳ ಹನ್ನೆರಡು ಪುಟಗಳೂ ಸಾಲದು. ಊರಿನವರಿಗೆಲ್ಲ ಆಗುತ್ತಿರುವ ಅನ್ಯಾಯದ ಬಗ್ಗೆ ವರದಿ-ಸಂಪಾದಕೀಯಗಳನ್ನು ಬರೆಯುವ ಪತ್ರಕರ್ತರದ್ದು, ತಮ್ಮ ಕಷ್ಟಗಳನ್ನು ಎಲ್ಲಿಯೂ ಹೇಳಲಾಗದ ಅಸಹಾಯಕ ಸ್ಥಿತಿ. ’ಸೆಲೆಬ್ರೆಟಿ’ ಆಗಿ ಮೆರೆಯುತ್ತಿರುವ ಒಂದಷ್ಟು ಪತ್ರಕರ್ತರನ್ನು ನೋಡುವ ಜನ ಪತ್ರಕರ್ತರೆಲ್ಲರೂ ’ಕಾರು-ಬಂಗಲೆ” ಮಟ್ಟದಲ್ಲಿಯೇ ಇದ್ದಾರೆ ಎಂಬ ತಪ್ಪು ಅಭಿಪ್ರಾಯ ಹೊಂದಿದ್ದಾರೆ. ಆದರೆ ಇಂದಿನ ಪತ್ರಕರ್ತರ ಸ್ಥಿತಿಯನ್ನು ಚರ್ಚಿಸುವಾಗ ಕಳೆದೆರಡು ದಶಕಗಳ ಅವಧಿಯಲ್ಲಿ ಮಾಧ್ಯಮ ರಂಗದಲ್ಲಿ ಆಗಿರುವ ಬದಲಾವಣೆಗಳನ್ನು ಗಮನಕ್ಕೆ ತೆಗೆದುಕೊಳ್ಳಲಾಗದಿರುವುದಿಲ್ಲ.
ಮಾಧ್ಯಮಗಳು ಅತ್ತ ಹಳೆಯ ಆದರ್ಶರೂಪದ ವೃತ್ತಿಯಾಗಿ ಉಳಿಯದೆ, ಇತ್ತ ಪೂರ್ಣ ಪ್ರಮಾಣದ ಉದ್ಯಮವಾಗಿಯೂ ಬೆಳೆಯದೆ ತ್ರಿಶಂಕು ಸ್ಥಿತಿಯಲ್ಲಿರುವುದೇ ಪತ್ರಕರ್ತರ ಇಂದಿನ ಬವಣೆಗೆ ಮುಖ್ಯ ಕಾರಣ. ಓದುಗರು ಪತ್ರಕರ್ತರನ್ನು ಸಮಾಜಸೇವಕರ ರೂಪದಲ್ಲಿ ಕಾಣಬಯಸುತ್ತಾರೆ. ಸಮಾಜಸೇವೆಯೂ ವೃತ್ತಿಯಾಗಿರುವ (ಎನ್‌ಜಿಒಗಳು ಮತ್ತೇನು?) ಈ ದಿನಮಾನದಲ್ಲಿ ಪತ್ರಕರ್ತರು ಮಾತ್ರ ಸಮಾಜ ಸೇವಕರ ರೂಪದಲ್ಲಿಯೇ ಉಳಿಯಬೇಕೆನ್ನುವುದು ಅಮಾನವೀಯವಾದುದು. ಮತ್ತಷ್ಟು ಓದು »
10
ಜುಲೈ

ಧರ್ಮವೆಂಬ ಅಫೀಮು ಮತ್ತು ಜಾತಿಯೆಂಬ ಮರಿಜುವಾನ….

– ಡಾ. ಅಶೋಕ್ ಕೆ.ಆರ್

ಮಾರ್ಕ್ಸ್ ವಾದ ಮತ್ತದರ ವಿವಿಧ ಸರಣಿವಾದಗಳು ಪದೇ ಪದೇ ವಿಫಲವಾದ ನಂತರೂ ಮತ್ತೆ ಮತ್ತೆ ಪ್ರಸ್ತುತವೆನ್ನಿಸುತ್ತಲೇ ಸಾಗುವುದಕ್ಕೆ ಕಾರಣಗಳೇನು? ಕರ್ನಾಟಕದ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದಾಗ “Religion is opium” ಎಂದು ದಶಕಗಳ ಹಿಂದೆ ಯಾವಗಲೋ ಮಾರ್ಕ್ಸ್ ಹೇಳಿದ್ದ ಮಾತುಗಳು ನೆನಪಾಗದೇ ಇರದು. ‘ಭಿನ್ನ’ ಪಕ್ಷವೆಂದು ತನ್ನ ಬೆನ್ನು ತಾನೇ ತಟ್ಟಿಕೊಳ್ಳುವ ಭಾ.ಜ.ಪದ ಭಿನ್ನತೆ ಇಷ್ಟೊಂದು ಅಸಹ್ಯಕರವಾಗಿರಬಲ್ಲದು ಎಂದು ಸ್ವತಃ ಅದರ ಕಾರ್ಯಕರ್ತರೇ ನಿರೀಕ್ಷಿಸಿರಲಿಲ್ಲವೇನೋ?!

 ಮಾತೆತ್ತಿದರೆ ‘ಹಿಂದೂ’ವಾದದ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಮಾಡುವ, ‘ಅಖಂಡ’ ಹಿಂದೂ ರಾಷ್ಟ್ರ ನಿರ್ಮಾಣವೇ ನಮ್ಮ ಗುರಿ ಎಂದು ಚುನಾವಣೆ ಸಮಯದಲ್ಲಿ ಅಬ್ಬರಿಸುವ ಭಾರತೀಯ ಜನತಾ ಪಕ್ಷ ಮೊದಲಿನಿಂದಲೂ ‘ಹಿಂದೂ’ ಎಂಬ ಧರ್ಮದ ಒಳಗಿನ ಜಾತಿಯೆಂಬ ಅನಿಷ್ಟದ ಬಗ್ಗೆ ಪ್ರಜ್ಞಾಪೂರ್ವಕ ಮೌನಕ್ಕೆ ಶರಣಾಗುತ್ತಿತ್ತು. ಯಾರಾದರೂ ಜಾತಿಯಾಧಾರಿತ ‘ಹಿಂದೂ’ ಧರ್ಮದ ಬಗ್ಗೆ ಖಂಡನೀಯ ಮಾತುಗಳನ್ನಾಡಿದರೆ ಅವರನ್ನು ಸ್ಯೂಡೋ ಸೆಕ್ಯುಲರ್ ಎಂದು, ರಾಷ್ಟ್ರದ್ರೋಹಿಯೆಂದು ಪಟ್ಟ ಕಟ್ಟುವಲ್ಲಿ ಭಾ.ಜ.ಪ ಮತ್ತದರ ಅಂಗಸಂಸ್ಥೆಗಳದು ಎತ್ತಿದ ಕೈ. ‘ನಾವೆಲ್ಲರೂ ಒಂದು ನಾವು ಹಿಂದು’ ಎಂದು ಪ್ರಚಾರ ಮಾಡುತ್ತ ಜನರನ್ನು ನವ ಬ್ರಾಹ್ಮಣ್ಯದ ಕಡೆಗೆ ಆಕರ್ಷಿತರನ್ನಾಗಿ ಮಾಡಿ ದಲಿತ-ಶೂದ್ರ-ಬ್ರಾಹ್ಮಣ-ಅಬ್ರಾಹ್ಮಣ ಯುವಜನತೆಯಲ್ಲಿ ಕೋಮುದ್ವೇಷವನ್ನು ಬಿತ್ತುವಲ್ಲಿಯೂ ಭಾ.ಜ.ಪದ ಪಾತ್ರ ಹಿರಿದು.
9
ಜುಲೈ

ಯಾವ್ ಜಾತಿಯ ಮುಖ್ಯಮಂತ್ರಿ ಬೇಕು!?

– ರಾಕೇಶ್ ಶೆಟ್ಟಿ

ಯಡ್ಡಿ ಕೆಳಗಿಳಿದಾಗ ಬರೆದಿದ್ದು.. ಈಗ ಸದಾ ಇಳಿಯುವಾಗಲೂ ಅಪ್ಪ್ಲೈ ಆಗುತ್ತೆ…! ಅತಿ ಕೆಟ್ಟ ರಾಜಕಾರಣಕ್ಕೆ ನಮ್ಮ ರಾಜ್ಯ ಸಾಕ್ಷಿಯಾಗಿರುವುದು ದೌರ್ಭಾಗ್ಯ…!

———————————————————————————————————————————————-

ಅಂತು ಬಿಜೆಪಿ ಹೈಕಮಾಂಡ್ ಧೈರ್ಯ ಮಾಡಿದೆ…! ಯಡ್ಯೂರಪ್ಪನವ್ರಿಗೆ ಕುರ್ಚಿ ಬಿಡಿ ಅನ್ನುವ ಸಂದೇಶವನ್ನ ರವಾನಿಸಿದೆ.ಸಂದೇಶ ಮಾಧ್ಯಮದ ಮೂಲಕ ಬಂದಿದ್ದು ನಿನ್ನೆ ಬೆಳಿಗ್ಗೆಯೇ.ಆದ್ರೆ ಇನ್ನ ಯಡ್ಯೂರಪ್ಪ ಮಾತ್ರ ಜಪ್ಪಯ್ಯ ಅನ್ನುತ್ತಿಲ್ಲ..!

ಕಳೆದ ೧೦-೧೫ ದಿನಗಳಿಂದ ಕರ್ನಾಟಕ ಸರ್ಕಾರ ಜನರ ಸಮಸ್ಯೆಯನ್ನ ನೋಡೋದು ಬಿಟ್ಟು ತನ್ನ ಬುಡ ಭದ್ರ ಮಾಡಿಕೊಳ್ಳುವ ಬಗ್ಗೆಯೇ ತಲೆಕೆಡಿಸಿಕೊಂಡು ಕೂತಿದೆ.ಕಳೆದ ಹತ್ತು ದಿನ ಬಿಡಿ, ಉತ್ತರ ಕರ್ನಾಟಕದಲ್ಲಿ ನೆರೆ ಬಂದು ಜನ ತುತ್ತು ಅನ್ನಕ್ಕೆ ಸೂರಿಗೆ ಪರದಾಡುತ್ತಿರುವಾಗಲೇ ರೆಡ್ಡಿಗಳು ಬಂಡಾಯದ ಬಾವುಟ ಹಾರಿಸಿದಾಗಲೂ ಜನ ಸತ್ತರೆ ಸಾಯಲಿ ಕುರ್ಚಿ ಉಳಿದರೆ ಸಾಕು ಅಂತ ಬಿಜೆಪಿ ಸರ್ಕಾರವೇ ದೆಹಲಿಗೆ ಓಡಿ ಹೋಗಿತ್ತು…! ಹಾಗೇನಾದರೂ ಯಡ್ಯೂರಪ್ಪ ಬಂಡಾಯಕ್ಕೆ ಬಗ್ಗದೇ ರಾಜೀನಾಮೆ ಕೊಟ್ಟಿದ್ದರೆ ಜನ ಮತ್ತೆ ಗೆಲ್ಲಿಸಿ ಕಳಿಸುತಿದ್ದರೇನೋ.ಆದರೆ ಯಡ್ಯೂರಪ್ಪ ಶರಣಾಗಿ ಕುರ್ಚಿಯ ಮುಂದೆ ಬೋರಲು ಬಿದ್ದಿದ್ದರು..!

ಹಾಗೇ ನೋಡಿದರೆ ಈ ಸರ್ಕಾರ ರೆಡ್ಡಿಗಳ ಬಂಡಾಯದ ಸಮಯದಲ್ಲಿ ಉತ್ತರ ಕರ್ನಾಟಕ ಪ್ರವಾಹಕ್ಕೆ ಸಿಕ್ಕಿ ತತ್ತರಿಸುತ್ತಿದ್ದರೂ ಹಾಳು ಬಿದ್ದು ಹೋಗಿ ಅನ್ನುವಂತೆ ಸುಮ್ಮನಿದ್ದಿದ್ದೇ ಕಡೆ ಬಾರಿಯೇನಲ್ಲ,ಅದಾದ ಮೇಲೆ ರೆಸಾರ್ಟ್ನಲ್ಲಿ ಕತ್ತೆ ವ್ಯಾಪರಕ್ಕಿಳಿದಾಗಲೂ ತಿಂಗಳುಗಟ್ಟಲೇ ರಾಜ್ಯ ಅನಾಥವಾಗಿತ್ತು.ಸರ್ಕಾರಿ ಯಂತ್ರಕ್ಕೆ ತುಕ್ಕು ಹಿಡಿದಿತ್ತು.

ಮತ್ತೆ ಮುಖ್ಯಮಂತ್ರಿಯ ವಿರುದ್ಧ ಪ್ರಾಸಿಕ್ಯೂಶನ್ಗೆ ರಾಜ್ಯಪಾಲರು ಅನುಮತಿ ನೀಡಿದಾಗ ಖುದ್ದು ಆಡಳಿತ ಪಕ್ಷವೇ ಬಂದ್ ಕರೆ ಕೊಟ್ಟೂ ವೋಟ್ ಹಾಕಿ ಕಳುಹಿಸಿದ ಜನಸಾಮಾನ್ಯರಿಗೆ ತೊಂದರೆ ಕೊಟ್ಟಿದ್ದು ಮಹಾನ್ ಸಾಧನೆಯೇ (?) ಸರಿ.ಅದೆಲ್ಲಾ ಆಗಿ ಮತ್ತೆ ಸುಪ್ರಿಂ ಕೋರ್ಟ್ ತೀರ್ಪು ಬಂದ ಮೇಲೂ ಮತ್ತೆ ದೆಹಲಿಯಲ್ಲಿ ಕುರ್ಚಿ ಸವಾರಿ ಮಾಡಿ ಬಂದಾಗಲೂ ಕರ್ನಾಟಕ ಅನಾಥವಾಗಿತ್ತು.

ಮತ್ತಷ್ಟು ಓದು »

29
ಜೂನ್

ಮುಖ್ಯವಾಹಿನಿಯ ಜಾಣಗುರುಡು

– ಡಾ.ಅಶೋಕ್ ಕೆ.ಆರ್

ಹೆಂಡತಿ ಗಂಡನಿಗೆ ಹೊಡೆದರೆ ‘ಬ್ರೇಕಿಂಗ್ ನ್ಯೂಸ್’, ಗಂಡ ಹೆಂಡತಿಗೆ ಹೊಡೆದರೆ ‘ಬ್ರೇಕಿಂಗ್ ನ್ಯೂಸ್’, ಪೂನಂ ಪಾಂಡೆ ಬೆತ್ತಲಾದದ್ದು, ಐಶ್ವರ್ಯ ರೈ ದಪ್ಪಗಾಗಿದ್ದು ಮುಖಪುಟ ಸುದ್ದಿ! ಅಧಿಕಾರಿ, ರಾಜಕಾರಣಿ, ಸನ್ಯಾಸಿ ಮಾಡಿದ ತಪ್ಪುಗಳು ‘ಬ್ರೇಕಿಂಗ್ ನ್ಯೂಸ್’ [ofcourse ಯಾವ ವಾಹಿನಿ ವೀಕ್ಷಿಸುತ್ತಿದ್ದೀರೆಂಬುದರ ಮೇಲೆ ಈ ಕೊನೆಯ ಬ್ರೇಕಿಂಗ್ ನ್ಯೂಸ್ ಬದಲಾಗುತ್ತಿರುತ್ತದೆ!]. ಪತ್ರಕರ್ತನೊಬ್ಬ ನೆಲದ ಕಾನೂನಿಗೆ ಗೌರವ ಕೊಡದೆ ನಡೆದುಕೊಂಡಾಗ? ಅದು ಸುದ್ದಿಯೂ ಅಲ್ಲ, ರದ್ದಿಗೆ ಹಾಕುವಂಥ ವಿಷಯ ಎಂಬುದು ನಮ್ಮ ಮುಖ್ಯವಾಹಿನಿ ಮಾಧ್ಯಮಗಳ ನಿಲುವು!

           ಪತ್ರಕರ್ತ ಅದರಲ್ಲೂ ಪತ್ರಿಕೆಯೊಂದರ ಸಂಪಾದಕನೆಂದ ಮೇಲೆ ಮಾನನಷ್ಟ ಮೊಕದ್ದಮೆಯ ಆರೋಪಿಯಾಗುವುದು ಸಹಜ. ಕೆಲವೊಮ್ಮೆ ವೈಯಕ್ತಿಕ ದ್ವೇಷದಿಂದ ಸಂಪಾದಕರೇ ಸುಳ್ಳು ಮಾಹಿತಿಯನ್ನು ವೈಭವೀಕರಿಸುತ್ತಾರೆ. ಇನ್ನು ಕೆಲವೊಮ್ಮೆ ನಂಬಿದ ವರದಿಗಾರರೇ ಸುಳ್ಳು ಅಥವಾ ಅರ್ಧ ಸತ್ಯದ ಮಾಹಿತಿಯನ್ನು ನೀಡಿ ಸಂಪಾದಕರ ದಾರಿ ತಪ್ಪಿಸುತ್ತಾರೆ. ಸತ್ಯ ತನ್ನ ಪರವಾಗಿದೆಯೆಂಬ ಧೃಡತೆ ಇರುವ ವ್ಯಕ್ತಿ ಪತ್ರಿಕೆ, ಅದರ ವರದಿಗಾರ-ಸಂಪಾದಕರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತಾರೆ. ವರದಿ ಅಪ್ಪಟ ಸುಳ್ಳಾಗಿದ್ದರೆ ಪತ್ರಿಕೆ ಅಥವಾ ಸುದ್ದಿವಾಹಿನಿಯಲ್ಲಿ ತಪ್ಪೊಪ್ಪಿಗೆ ನೀಡಬೇಕಾಗುತ್ತದೆ. ಮಾನಸಿಕ ಹಿಂಸೆ, ಸಾಮಾಜಿಕ ನೆಲೆಯಲ್ಲಾದ ಅವಮಾನಗಳನ್ನು ಪರಿಗಣಿಸಿ ಪರಿಹಾರ ಕೊಡಿಸುವುದೂ ಉಂಟು. ಜೈಲು ಪಾಲಾಗುವ ಸಾಧ್ಯತೆಯೂ ಇದೆಯಾದರೂ ಅದು ಬಹಳವೇ ಅಪರೂಪ.
ಇವೆಲ್ಲವನ್ನೂ ಹೇಳಲು ಕಾರಣ ಹಾಲಿ ಕನ್ನಡ ಪ್ರಭ ಪತ್ರಿಕೆಯ ಸಂಪಾದಕರೂ, ಸುವರ್ಣ ಸುದ್ದಿ ವಾಹಿನಿಯ ಮುಖ್ಯಸ್ಥರೂ ಆದ ವಿಶ್ವೇಶ್ವರ ಭಟ್ಟರು ಜೂನ್ 27ರಂದು ಬಂಧಿತರಾಗಿ ಮಧ್ಯಾಹ್ನದ ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. 2008ರಲ್ಲಿ ವಿಜಯ ಕರ್ನಾಟಕದ ಸಂಪಾದಕರಾಗಿದ್ದ ಸಮಯದಲ್ಲಿನ ಒಂದು ವರದಿಯ ಕುರಿತಂತೆ ಮಾನನಷ್ಟ ಮೊಕದ್ದಮೆ ಎದುರಿಸುತ್ತಿದ್ದರು. ನ್ಯಾಯಾಲಯದಿಂದ ಪದೇ ಪದೇ ಸಮನ್ಸ್ ಜಾರಿಯಾದಾಗ್ಯೂ ಕೂಡ ಹಾಜರಾಗಲಿಲ್ಲ. ಕೊನೆಗೆ ಬೇಸತ್ತ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿ ಮಾಡಿತು. ಭಟ್ಟರ ಬಂಧನವಾಯಿತು.

22
ಮೇ

ದಿಕ್ಕು ತಪ್ಪಿ, ದಿಕ್ಕು ತಪ್ಪಿಸುತ್ತಿರುವ ಟಿ.ವಿ ಸುದ್ದಿ ವಾಹಿನಿಗಳು …

– ಎಸ್.ಎನ್ ಭಾಸ್ಕರ್

ಸರಿಸುಮಾರು ೧೦೦ ಕೆ.ಜಿಗೆ ತೂಗುವ ಆತನ ಮೈಯೆಲ್ಲಾ ವಿಭೂತಿಮಯ. ಕೊರಳಿನಿಂದ ಹೊಟ್ಟೆಯ ಹೊಕ್ಕುಳನ್ನು ತಾಕುವಷ್ಟು ಉದ್ದದ ಹಲವು ರುದ್ರಾಕ್ಷಿ ಮಾಲೆಗಳು. ಎತ್ತರದ ಆಕರ್ಷಕ ಆಸನದ ಮೇಲೆ ಪ್ರತಿಷ್ಟಾಪಿಸಲ್ಪಟ್ಟಿರುವ ವ್ಯಕ್ತಿಯ ಬಾಯಲ್ಲಿ ಅನಿಯಮಿತವಾಗಿ ಬರುತ್ತಿರುವ ಹಿತೋಪದೇಷಗಳು.

ಅಲ್ಲೆಲ್ಲೋ ಒಂದು ಗುಹೆ, ಅದರಲ್ಲಿದೆ ಅಚ್ಚರಿಯ ಕಲ್ಲು, ಮುಟ್ಟಿದರೆ ನಿಮ್ಮ ಪಾಪವೆಲ್ಲಾ ಮಾಯ….ಮತ್ತಿನ್ನಲ್ಲೋ ಇದೆ ಒಂದು ಕೆರೆ ಅದರ ನೀರಿನಲ್ಲಿ ಮಿಂದೆದ್ದರೆ ನಿಮ್ಮ ಕಷ್ಟ ಕಾರ್ಪಣ್ಯ ಅಷ್ಟ ದರಿದ್ರಗಳಿಗೂ ವಿರಾಮ.. ಹೀಗೂ ಉಂಟೇ..????

ಮುಂದೆ ಕಾದಿದೆ…..ಬರಲಿದೆ ಭೀಕರ ಪ್ರಳಯ, ಇದರಿಂದ ಜಗತ್ತು ಸರ್ವನಾಷ. ಅಲ್ಲೋಲ-ಕಲ್ಲೋಲ ಎಬ್ಬಿಸಲಿದೆ ಸುನಾಮಿ..ಇಡೀ ವಿಶ್ವವೇ ಮುಳಗಲಿದೆ ಸಮುದ್ರದಲ್ಲಿ..

ಕ್ಷಮಿಸಿ… ಇವೆಲ್ಲಾ ನಮ್ಮ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರವಾಗುವಂತ ಕಾರ್ಯಕ್ರಮಗಳ ಒಂದು ಪಕ್ಷಿನೋಟ. ಇಂದು ಹುಟ್ಟಿಕೊಂಡಿರುವ ಟಿ.ವಿ ದೃಶ್ಯ ಮಾಧ್ಯಮಗಳ ಲೆಕ್ಕ ಬೆಳೆಯುತ್ತಲೇ ಇದೆ. ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಈ ಮಾದ್ಯಮಗಳಿಗೆ ಯಾವುದೇ ಬೇಲಿಯೇ ಇದ್ದಂತಿಲ್ಲ. ಟಿ.ವಿ೯, ಟಿವಿ೫, ನ್ಯೂಸ್೯, ಸುವರ್ಣ ನ್ಯೂಸ್, ಪಬ್ಲಿಕ್ ಟಿವಿ, ಆ ಟಿವಿ, ಈ ಟಿವಿ. ಇತ್ಯಾದಿ..ಇತ್ಯಾದಿ..೨೪ ಘಂಟೆಗಳ ನಿರಂತರ ಸುದ್ದಿಪ್ರಸಾರಕ್ಕಾಗಿ ಈ ಚಾನೆಲ್‌ಗಳು ಮೀಸಲು. ಅದೆಂತಹ ಸುದ್ದಿಯೇ ಆಗಿರಬಹುದು ಅಥವಾ ಅಸಲು ಸುದ್ದಿಯೇ ಅಲ್ಲದಿರಬಹುದು, ಒಟ್ಟಿನಲ್ಲಿ ಹೇಳಲಿಕ್ಕೊಂದು ವಿಷಯ, ಬಿತ್ತರಿಸಲೊಂದು ಮಾಧ್ಯಮ, ನೋಡಲಿಕ್ಕೆಂದು ಪ್ರೇಕ್ಷಕರು…

ಮತ್ತಷ್ಟು ಓದು »

5
ಏಪ್ರಿಲ್

ಗುಂಡು ಬಿಡದ ಬಂದೂಕುಗಳ ನಡುವೆ!

– ಸಂತೋಷ್ ಆಚಾರ್ಯ

೧೯೫೯ರಲ್ಲಿ ಜನರಲ್ ತಿಮ್ಮಯ್ಯ ಭಾರತ ಚೀನಾ ಯುದ್ಧದ ಸಾಧ್ಯತೆ ಮತ್ತು ಅದಕ್ಕೆ ಬೇಕಾದ ತಯಾರಿಯನ್ನು ಮಾಡಲು ಒಪ್ಪಿಗೆ ಕೇಳಿದಾಗ ಆಗಿನ ರಕ್ಷಣಾ ಮಂತ್ರಿಯಾಗಿದ್ದ ಕೃಷ್ಣ ಮೆನನ್ ಅದನ್ನು ನಿರಾಕರಿಸಿದ್ದರು. ಇದರಿಂದ ಕುಪಿತಗೊಂಡ ಜನರಲ್ ರಾಜೀನಾಮೆಯನ್ನು ಎಸೆದಿದ್ದರು. ಜನರಿಂದ ಸರ್ಕಾರ ಎನ್ನುವ ಅರ್ಥದ ಪ್ರಜಾಪ್ರಭುತ್ವ ಶುರುವಾದ ಹೊತ್ತಲ್ಲೇ ಜನರು ಬದಲಿಸಬಯಸುವ ಸರ್ಕಾರದ ನೀತಿಗಳನ್ನು ಬದಲಿಸುವ ಅನುಮತಿ ಆಗಲೇ ಇರಲಿಲ್ಲ. ನೆಹರೂ ರಾಜೀನಾಮೆಗೆ ಒಪ್ಪದೇ ಅವರನ್ನು ಅವರ ಅವಧಿ ಮುಗಿಯುವ ತನಕ(೧೯೬೧) ಇಟ್ಟುಕೊಂಡಿದ್ದು ಮತ್ತು ಭಾರತ ಯುದ್ಧದಲ್ಲಿ(೧೯೬೨) ಹೀನಾಯವಾಗಿ ಸೋತದ್ದು ಈಗ ಕೇವಲ ಇತಿಹಾಸ! ನೆಹರೂ ಚಾಣಾಕ್ಷತನದಿಂದ ವರ್ತಿಸಿದ್ದರೆ ಯುದ್ಧವನ್ನು ತಪ್ಪಿಸಬಹುದಿತ್ತು ಎಂದು ಈಗಲೂ ಎಷ್ಟೋ ಜನ ಹೇಳುತ್ತಾರೆ. ತನ್ನ ತಂತ್ರವನ್ನು ಒಪ್ಪಲಿಲ್ಲವೆಂದು ರಾಜೀನಾಮೆ ಎಸೆದು ಸರ್ಕಾರದಿಂದ ದೂರ ಸರಿಯುವುದಕ್ಕೂ ತಾನು ಮಾಡಿದ್ದು ಸರಿ ಎಂದು ಅದಕ್ಕಾಗಿ ಸರ್ಕಾರಕ್ಕೆ ಕೇರೇ ಎನ್ನದೆ ಅದನ್ನು ಕೋರ್ಟಿಗೆಳೆಯುವುದಕ್ಕೂ ಎಷ್ಟು ವ್ಯತ್ಯಾಸಗಳನ್ನು ನಾವು ಗುರುತಿಸಬಹುದು?
ತನ್ನ ಕಾರ್ಯಾವಧಿಯ ಕೊನೆಯ ವರ್ಷದಲ್ಲಿ ಇಂತಹಾ ಅಗ್ನಿಪರೀಕ್ಷೆ ಜನರಲ್ ವಿ.ಕೆ ಸಿಂಗ್‍ಗೆ ಬೇಕಿತ್ತೇ ಎಂದು ಸಾಮಾನ್ಯವಾಗಿ ಅನಿಸುವುದು ಸಹಜ. ಆದರೆ ಸ್ವಲ್ಪವೂ ಕ್ರಮಬದ್ಧತೆಯಿಂದ ನಿರ್ವಹಿಸದ ಸರ್ಕಾರಿ ಕಚೇರಿಗಳಿಗೆ ಇದು ಮುಖದ ಮೇಲೆ ಹೊಡೆದ ಕಪಾಳಮೋಕ್ಷ. ರಕ್ಷಣಾ ಮಂತ್ರಾಲಯದ ಮುಂದೆ ಭೂ ಸೇನೆಯ ಸಮಸ್ಯೆಗಳು ಗುಡ್ಡಗಟ್ಟುತ್ತಿವೆ. ಜನರಲ್ ವಯಸ್ಸಿನ ಸಮಸ್ಯೆಯಿಂದ ಶುರುವಾಗಿ ಲಂಚದ ಕೇಸು, ಟ್ರಕ್ಕುಗಳಲ್ಲಿ ನಡೆದ ಭ್ರಷ್ಟಾಚಾರ, ಲೀಕಾದ ಪತ್ರ ಹೀಗೆ ವಿ.ಕೆ ಸಿಂಗ್ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತಿದ್ದಾರೆ. ಈ ನಡುವೆ ತಮ್ಮ ಸ್ವಾರ್ಥಕ್ಕಾಗಿ ತಾವೇ ಪತ್ರವನ್ನು ಲೀಕ್ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಇಳಿ ವಯಸ್ಸಿನ ಮಾನಸಿಕ ಸ್ಥಿತಿಗಳನ್ನು ನೋಡುವುದಾದರೆ ಅಲ್ಲಗಳೆಯಬಹುದಾದ ವಿಚಾರವೇನೂ ಅಲ್ಲ. ಆದರೂ ಮೊದಲು ಕಮಾಂಡೋ ಆಗಿದ್ದ ಜನರಲ್ ಹೀಗೆ ಮಾಡಬಹುದೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ವಿ.ಕೆ ಸಿಂಗ್ ಒಬ್ಬ ಹೋರಾಟಗಾರ. ನೇರವಾಗಿ ವಿಷಯಗಳನ್ನು ನಿಭಾಯಿಸುವ ನಿಷ್ಠುರ ವ್ಯಕ್ತಿ. ಅವರ ಮೇಲೆ ಆಪಾದನೆ ಹೊರಿಸುವ ಮೊದಲು ಮನಸ್ಸು ಕೂಡ ಎಲ್ಲೋ ಒಪ್ಪಲು ನಿರಾಕರಿಸುತ್ತದೆ.
ಮತ್ತಷ್ಟು ಓದು »