ಬೊಳುವಾರರ “ಮುಸ್ಲಿಮನಾಗಿರುವುದೆಂದರೆ…” ಲೇಖನದ ಸುತ್ತ ಒಂದು ಚರ್ಚೆ- ಭಾಗ೨
ಬೊಳುವಾರರ “ಮುಸ್ಲಿಮನಾಗಿರುವುದೆಂದರೆ…” ಲೇಖನದ ಸುತ್ತ ಒಂದು ಚರ್ಚೆ ಭಾಗ೧
– ಪ್ರೇಮಶೇಖರ
ಶ್ರೀಯುತ ದಿನೇಶ್ ಅಮೀನ್,
ನಿಮ್ಮ ಉತ್ತರದ ಮೊದಲೆರಡು ಕಂತುಗಳನ್ನು ಓದಿ, ಅವುಗಳಲ್ಲಿನ ಕೊಂಕು ಮತ್ತಿತರ ನಕಾರಾತ್ಮಕ ಅಂಶಗಳನ್ನು ನಿರ್ಲಕ್ಷಿಸಿ, ಅವುಗಳಲ್ಲಿರುವ ವೈಚಾರಿಕತೆಯನ್ನಷ್ಟೇ ಗಮನಕ್ಕೆ ತೆಗೆದುಕೊಂಡೆ. ನಿಮ್ಮ ಮಾತುಗಳಿಗೆ ರೋಹಿತ್ ಚಕ್ರತೀರ್ಥರು ಸಮರ್ಪಕವಾಗಿಯೇ ಉತ್ತರಿಸಿದ್ದಾರೆ. ಆದಾಗ್ಯೂ, ನಿಮಗೆ ಉತ್ತರಿಸಬೇಕಾದ್ದು ನನ್ನ ಜವಾಬ್ಧಾರಿ ಎಂಬ ಅರಿವಿನಿಂದ ದೀರ್ಘ ವಿವರಣೆಗಳುಳ್ಳ ಪ್ರತಿಕ್ರಿಯೆಯನ್ನು ಸಿದ್ಧಪಡಿಸಿದ್ದೆ. ಇಸ್ಲಾಂ ಏಶಿಯಾ, ಯೂರೋಪ್ ಮತ್ತು ಆಫ್ರಿಕಾಗಳ ಬಹುಪಾಲು ನಾಡುಗಳಿಗೆ ಪ್ರಸರಿಸಿದ್ದು ಆಕ್ರಮಣದ ಮೂಲಕ ಎಂದು ಹೇಳಲು ಬಳಸಿದ ‘ಕತ್ತಿಯ ಮೂಲಕ’ ಎಂಬ ಮಾತನ್ನು ನೀವು ತಿಳಿದೋ ತಿಳಿಯದೆಯೋ ಅಪಾರ್ಥ ಮಾಡಿಕೊಂಡು ಕತ್ತಿಯ ಉಗಮದ ಬಗ್ಗೆ ಮಾತೆತ್ತಿ ಇಡೀ ಚರ್ಚೆಯನ್ನು ದಾರಿ ತಪ್ಪಿಸಲು ಹೋದ ನಿಮ್ಮ ವಾದಸರಣಿ; ಹಿಂದೂ-ಮುಸ್ಲಿಂ ಎಂದು ಧಾರ್ಮಿಕ ಸಂಘರ್ಷದ ಬಗ್ಗೆ ಹೇಳುತ್ತಲೇ ಹಠಾತ್ತಾಗಿ ಕಾಂಗ್ರೆಸ್-ಬಿಜೆಪಿ (ಗುಜರಾತ್ ೨೦೦೨-ದೆಹಲಿ ೧೯೮೪) ಎಂದು ರಾಜಕೀಯ ಆಯಾಮಕ್ಕೆ ಜಿಗಿಯುವ ನಿಮ್ಮ ಗೊಂದಲಮಯ ಚಿಂತನಾಧಾಟಿ; ರಕ್ತಪಾತಕ್ಕೆ ಸಂಬಂಧಿಸಿದಂತೆ ಹಿಂದೂಗಳ ವಿರುದ್ಧ ಆರೋಪಗಳನ್ನು ಮಾಡುತ್ತಲೇ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದ ಬಗ್ಗೆ ಪಕ್ಷಪಾತಿ ನಿಲುವು ತೋರುವ ನಿಮ್ಮ ವಿರೋಧಾಭಾಸಪೂರ್ಣ, ಅತಾರ್ಕಿಕ ನಡೆಗಳು- ಎಲ್ಲವುಗಳತ್ತ ಸೂಕ್ತ ಉದಾಹರಣೆಗಳ ಮೂಲಕ ನಿಮ್ಮ ಗಮನ ಸೆಳೆಯಲು ಪ್ರಯತ್ನಿಸಿದ್ದೆ. ಅದು ನಮ್ಮ ನಾಡಿನ ಇತಿಹಾಸದ ಬಗ್ಗೆ, ವರ್ತಮಾನದ ಬಗ್ಗೆ ಒಂದು ಆರೋಗ್ಯಕರ ಚರ್ಚೆಗೆ ಅವಕಾಶ ಮಾಡಿಕೊಡುತ್ತದೆಂದು ನಂಬಿದ್ದೆ. ಆದರೆ ನಿಮ್ಮ ನಾಲ್ಕನೆಯ ಕಂತನ್ನು ಓದಿದ ನಂತರ ನಿಮ್ಮೊಂದಿಗೆ ನಾಗರಿಕ ವಿಧಾನದಲ್ಲಿ ಸಂವಾದ ನಡೆಸುವುದು ಸಾಧ್ಯವಿಲ್ಲ ಎಂದರಿವಾಯಿತು. ಇಷ್ಟಾಗಿಯೂ, ಸುಮ್ಮನುಳಿದುಬಿಡುವುದೂ ಸರಿಯೆನಿಸಲಿಲ್ಲ. ಹೀಗಾಗಿ ಆ ದೀರ್ಘ, ವಿವರಣಾತ್ಮಕ ಉತ್ತರವನ್ನು ಬದಿಗಿರಿಸಿ ಒಂದೆರಡು ಮೂಲಭೂತ ಪ್ರಶ್ನೆಗಳನ್ನಷ್ಟೇ ಎತ್ತಿಕೊಂಡು ಆ ಬಗ್ಗೆ ಸಂಕ್ಷಿಪ್ತವಾಗಿ ನಿಮಗೆ ಕೆಲವು ಮಾತುಗಳನ್ನು ಹೇಳಲು ಇಲ್ಲಿ ಪ್ರಯತ್ನಿಸಿದ್ದೇನೆ. ಇವುಗಳಲ್ಲಿ ಹೆಚ್ಚಿನವು ನಾನು ಸ್ವಂತ ಅಧ್ಯಯನ, ಅವಲೋಕನ, ಚಿಂತನೆಯ ಮೂಲಕ ಗಳಿಸಿದವುಗಳಾದ್ದರಿಂದ ನಿಮಗೆ ಬೇರೆಲ್ಲೂ ಸಿಗಲಾರವು. “ನಾನು ಲೇಖಕನ ವ್ಯಕ್ತಿತ್ವವನ್ನು ಆತನ ಲೇಖನಗಳ ಮೂಲಕವೇ ಅರ್ಥಮಾಡಿಕೊಳ್ಳುತ್ತಾ ಬಂದವನು” ಎಂದು ವಾರದ ಹಿಂದೆ ಘೋಷಿಸಿದ ನೀವು ನಿಮ್ಮ ಮಾತಿಗೆ ಸತ್ಯವಾಗಿ ನಡೆದುಕೊಂಡಿದ್ದರೆ ಇದನ್ನೆಲ್ಲಾ ಹೇಳಬೇಕಾದ ಅಗತ್ಯ ನನಗೆ ಬರುತ್ತಲೇ ಇರಲಿಲ್ಲ.
ಮೊದಲಿಗೆ ಒಂದು ಸ್ಪಷ್ಟೀಕರಣ- ಮಾನವರೆಲ್ಲರೂ ಸಮಾನರು ಎಂಬ ಧೃಡನಂಬಿಕೆಯ ತಳಹದಿಯ ಮೇಲೆ ಗಟ್ಟಿಯಾಗಿ ನಿಂತು ಎಲ್ಲ ಬಗೆಯ ಹಿಂಸೆ, ಶೋಷಣೆ, ತಾರತಮ್ಯಗಳನ್ನು ತಿರಸ್ಕರಿಸುವುದು ನನ್ನ ಜೀವನಮೌಲ್ಯ. ವಿಮರ್ಶೆಯನ್ನು ಸ್ವಾಗತಿಸುವ ಧರ್ಮದ ವಿರುದ್ಧ ಪುಂಖಾನುಪುಂಖ ಹೇಳಿಕೆ ನೀಡುವ, ವಿಮರ್ಶೆಗೆ ಬದಲಾಗಿ ತಲೆದಂಡ ಕೇಳುವ ಧರ್ಮದ ಬಗ್ಗೆ ಜಾಣಮೌನ ವಹಿಸುವ ಚತುರಮತಿ ಬುದ್ಧಿಜೀವಿ ನಾನಲ್ಲ. ಅಲ್ಲದೇ, ಹಣ, ಪ್ರಶಸ್ತಿ, ಸ್ಥಾನಮಾನಗಳ ಹುಚ್ಚೂ ನನಗಿಲ್ಲ.
ಬೊಳುವಾರರ “ಮುಸ್ಲಿಮನಾಗಿರುವುದೆಂದರೆ…” ಲೇಖನದ ಸುತ್ತ ಒಂದು ಚರ್ಚೆ
ಇತ್ತೀಚೆಗೆ, ಲೇಖಕ ರೋಹಿತ್ ಚಕ್ರತೀರ್ಥ ಅವರ ಕಥಾಸಂಕಲನಕ್ಕೆ ಹಿರಿಯ ಲೇಖಕರಾದ ಬೊಳುವಾರ ಮಹಮ್ಮದ್ ಕುಂಞ್ ಯವರು ಮುನ್ನುಡಿ ಬರೆದಿರುವ ವಿಷಯವಾಗಿ ಫೇಸ್ಬುಕ್ಕಿನಲ್ಲಿ ವಾದ-ವಿವಾದಗಳು ನಡೆಯುತ್ತಿವೆ.ಅದಕ್ಕೆ ಪ್ರತಿಕ್ರಿಯಿಸಿದ ಬೊಳುವಾರರು, ಮೂವತ್ತು ವರ್ಷಗಳ ಹಿಂದೆ ಬರೆದಿದ್ದ “ಮುಸ್ಲಿಮನಾಗಿರುವುದೆಂದರೆ…” ಲೇಖನವನ್ನು ನೆನೆಸಿಕೊಂಡರು.ಆ ಲೇಖನದ ಕುರಿತಾಗಿ ಕಥೆಗಾರರು ಮತ್ತು ವಿಜಯವಾಣಿಯ ಅಂಕಣ ಬರಹಗಾರರಾದ ಪ್ರೇಮಶೇಖರ ಅವರು ತಮ್ಮ ವಾಲ್ನನಲ್ಲೊಂದು ಅಭಿಪ್ರಾಯ ಹಾಕಿದ್ದರು.ಆ ಅಭಿಪ್ರಾಯದ ಕುರಿತು ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಅವರು “ಪ್ರೇಮಶೇಖರ ಅವರೇ, ನಿಮ್ಮಲ್ಲಿ ಲೇಖನ ಇದ್ದರೆ ಮತ್ತೊಮ್ಮೆ ಓದಿ. ಯಾವುದು ಬದಲಾಗಿದೆ? ಮುಸ್ಲಿಮರನ್ನು ಹಿಂದುತ್ವವಾದಿಗಳು ನೋಡುವ ಯಾವ ದೃಷ್ಟಿ ಬದಲಾಗಿದೆ ಎಂದು ಒಂದೊಂದಾಗಿ ಹೇಳಿಬಿಡಿ” ಎಂದಿದ್ದರು.ಪ್ರೇಮಶೇಖರ ಅವರು ಅಮೀನರಿಗೆ ಕೊಟ್ಟ ಉತ್ತರ ಇಲ್ಲಿದೆ… ಜೊತೆಗೆ ಬೊಳುವಾರರ ಹಳೇ ಲೇಖನದ ಪ್ರತಿಯೂ ಇದೆ – ನಿಲುಮೆ
– ಪ್ರೇಮ ಶೇಖರ ಅವರ ಮೊದಲ ಅಭಿಪ್ರಾಯ
ಬೊಳುವಾರರು “ಸುಧಾ” ಸಾಪ್ತಾಹಿಕದಲ್ಲಿ “ಮುಸ್ಲಿಮನಾಗಿರುವುದೆಂದರೆ…” ಎಂಬ ಲೇಖನ ಬರೆದು ಮೂವತ್ತನಾಲ್ಕೂವರೆ ವರ್ಷಗಳಾಗುತ್ತಾ ಬಂದಿವೆ. ಈ ಆವಧಿಯಲ್ಲಿ ನೇತ್ರಾವತಿಯಲ್ಲಿ ಅದೆಷ್ಟು ನೀರು ಹರಿದಿದೆ! ಹಾಗೆಯೇ ಬೊಳುವಾರರು ಬೆಳೆಯುತ್ತಾ ಹೋಗಿದ್ದಾರೆ, ಅದು ಅವರ ಹೆಗ್ಗಳಿಕೆ. ಆದರೆ ಅದಕ್ಕೆ ವಿರುದ್ಧವಾಗಿ, ಆ ಲೇಖನವನ್ನು ಅಂದು ಓದಿದವರು ಅಲ್ಲೇ ಉಳಿದುಬಿಟ್ಟಿದ್ದಾರೆ. ಹೀಗಾಗಿ ಕರ್ನಾಟಕದ ಸಾಂಸ್ಕೃತಿಕ ವಾತಾವರಣ ಅಧಃಪಾತಾಳಕ್ಕಿಳಿಯುತ್ತಿದೆ.
ಮೂವತ್ತೂ ದಾಟದ ಆ ದಿನಗಳಲ್ಲಿ ಬೊಳುವಾರರು ಬರೆದ, ವೈಚಾರಿಕತೆಗಿಂತಲೂ ಭಾವನಾತ್ಮಕತೆಗೆ ಒತ್ತುಕೊಟ್ಟಿದ್ದ, ಆ ಲೇಖನದಲ್ಲಿ ಒಳ್ಳೆಯ ಒಳನೋಟಗಳಿದ್ದಂತೇ ಉಪಖಂಡದ ಇತಿಹಾಸದ ಬಗ್ಗೆ, ದೇಶವಿಭಜನೆಯ ಬಗ್ಗೆ ಹಲವು ತಪ್ಪುಗ್ರಹಿಕೆಗಳೂ ಇದ್ದವು. ಭಾರತಕ್ಕೆ ಮುಸ್ಲಿಮರ, ನಂತರ ಬ್ರಿಟಿಷರ ಆಗಮನದ ಸ್ವರೂಪದ ಬಗ್ಗೆ, ದೇಶವಿಭಜನೆಯ ಬಗ್ಗೆ ಬೊಳುವಾರದ ತಿಳುವಳಿಕೆಗಳಲ್ಲಿ ಅಸ್ಪಷ್ಟತೆಯಿತ್ತು. ನನಗೆ ತಕ್ಷಣಕ್ಕೆ ನೆನಪಾಗುವುದು ಇದು- “ಪಾಕಿಸ್ತಾನ ಬೇಕೇ ಬೇಡವೇ ಎಂದು ಒಂದು ಜನಮತಗಣನೆ ನಡೆಯಿತಂತೆ, ಆದರೆ ಅಂಥದು ನಡೆದ ಬಗ್ಗೆ ನನ್ನ ತಂದೆಯವರಿಗೆ ಗೊತ್ತೇ ಇಲ್ಲ” ಎಂಬುದಾಗಿ ಬೊಳುವಾರರು ಬರೆದಿದ್ದರು. ವಾಸ್ತವವೆಂದರೆ ಬೊಳುವಾರರ ತಂದೆಯವರಿಗೆ ಆ ಜನಮತಗಣನೆಯ ಬಗ್ಗೆ ಗೊತ್ತಾಗಿ ಅವರದರಲ್ಲಿ ಭಾಗಿಯಾಗುವ ಸಾಧ್ಯತೆಯೇ ಇರಲಿಲ್ಲ. ಯಾಕೆಂದರೆ ಅಂಥದೊಂದು ಆಯ್ಕೆ ಎದುದಾದದ್ದು ಗಡಿನಾಡು ಪ್ರಾಂತ್ಯ ಮತ್ತು ಸಿಲ್ಹೆಟ್ (ಈಗ ಬಾಂಗ್ಲಾದೇಶದಲ್ಲಿದೆ) ಜಿಲ್ಲೆಯ ಜನತೆಗೆ ಮಾತ್ರ. ದೇಶವಿಭಜನೆಯ ನಿಜವಾದ ಆರೋಪಿಗಳಾದ ಮುಸ್ಲಿಂ ಲೀಗ್ ಮತ್ತು ಬ್ರಿಟಿಷರ ಪಾತ್ರವನ್ನು ಕಡೆಗಣಿಸಿ ಪರಿಸ್ಥಿತಿಯ ಕೈಗೊಂಬೆಯಾದ ಕಾಂಗ್ರೆಸ್‍ನ ಪಾತ್ರವನ್ನು ದೊಡ್ಡದಾಗಿ ತೋರಿಸುವ ಪ್ರಯತ್ನವೂ ಆ ಲೇಖನದಲ್ಲಿತ್ತು. ಕೋಮುವಾದದ ಉಗಮದ ಬಗೆಗೂ ಅಂಥದೇ ತಪ್ಪುತಿಳುವಳಿಕೆಯ ಭಾವನಾತ್ಮಕ ವಿವರಣೆಗಳಿದ್ದವು. ಅಂಥದೊಂದು ತಪ್ಪುಗ್ರಹಿಕೆಯನ್ನು ಎರಡುವಾರಗಳ ನಂತರ ಸಮುದ್ರಮಧನ ವಿಭಾಗದಲ್ಲಿ ಪ್ರಜ್ಞಾವಂತ ಓದುಗರೊಬ್ಬರು “ಮುಸ್ಲಿಂ ಲೀಗ್ ಯಾವಾಗ ಸ್ಥಾಪನೆಯಾಯಿತು, ಆರ್‌ಎಸ್‌ಎಸ್ ಯಾವಾಗ ಸ್ಥಾಪನೆಯಾಯಿತು ಎಂದು ನೋಡಿದರೆ ಯಾವುದು ಯಾವುದಕ್ಕೆ ಪ್ರತಿಕ್ರಿಯೆ ಎಂದು ತಿಳಿಯುತ್ತದೆ” ಎಂಬುದಾಗಿ ಹೇಳುವುದರ ಮೂಲಕ ಬೊಳುವಾರರಿಗೆ ಈ ದೇಶದ ಚರಿತ್ರೆಯ ಒಂದು ಸತ್ಯವನ್ನು ಮನಗಾಣಿಸಲು ಪ್ರಯತ್ನಿಸಿದ್ದರು. ನಂತರ ಬೊಳುವಾರದು ಬೆಳೆಯುತ್ತಾ ಹೋದರು. ಐದೇ ತಿಂಗಳಲ್ಲಿ “ದೇವರುಗಳ ರಾಜ್ಯದಲ್ಲಿ” ಎಂಬ ಅದ್ಭುತ ಕಥೆ ರಚಿಸಿದರು. ಅವರ ಬೆಳವಣಿಗೆಯ ಓಟ ಇನ್ನೂ ಸಾಗಿದೆ. ನನಗವರು ಅನುಕರಣೀಯವಾಗುವುದು, ಈ ನಾಡಿಗೆ ಅವರು ಮುಖ್ಯವಾಗುವುದು ಈ ಕಾರಣಕ್ಕಾಗಿ.
ದುರಂತವೆಂದರೆ ಆ ಲೇಖನವನ್ನು ಅಂದು ಓದಿದವರು ಅದನ್ನೇ ಪವಿತ್ರಗ್ರಂಥವೆಂದು ಇಂದಿಗೂ ನಂಬಿಬಿಟ್ಟಿದ್ದಾರೆ. ಅದರಾಚೆಗೆ ಬೆಳೆಯುವ ಪ್ರಯತ್ನವನ್ನೇ ಅವರು ಮಾಡಿಲ್ಲ. ತಾವೂ ಬೆಳೆಯಲಿಲ್ಲ, ಕರ್ನಾಟಕವನ್ನೂ ಬೆಳೆಯಲು ಬಿಡುತ್ತಿಲ್ಲ. ಬೊಳುವಾರರನ್ನೂ ಅಂದಿನ ದಿನಗಳಿಗೇ ಕಟ್ಟಿಹಾಕಲು ನೋಡುತ್ತಿದ್ದಾರೆ. ನಮ್ಮ ಬೊಳುವಾರರನ್ನೂ, ನಮ್ಮ ನಾಡನ್ನೂ, ನಮ್ಮ ಸಾಂಸ್ಕೃತಿಕ ಚಿಂತನೆಯನ್ನೂ ಈ ಪ್ರತಿಗಾಮಿಗಳಿಂದ ರಕ್ಷಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.