ರಷ್ಯಾ-ಉಕ್ರೇನ್ ಕದನ: ಮಾನವ ಹಕ್ಕು ಹೋರಾಟಗಾರರು ಎಲ್ಲಿ ಅಡಗಿ ಕುಳಿತಿದ್ದಾರೆ?
– ರಾಘವೇಂದ್ರ ಅಡಿಗ ಎಚ್ಚೆನ್.
ಯುದ್ಧ …
ಕಳೆದ ಒಂದು ವಾರದಿಂದ ಭಾರತ ಸೇರಿ ಜಗತ್ತಿನ ನಾನಾ ರಾಷ್ಟ್ರಗಳ ಜನರಲ್ಲಿ ಆತಂಕ, ದುಗುಡಕ್ಕೆ ಕಾರಣವಾಗಿರುವುದು ರಷ್ಯಾ-ಉಕ್ರೇನ್ ಯುದ್ಧ. ಉಕ್ರೇನ್ ನ್ಯಾಟೋ ರಾಷ್ಟ್ರಗಳ ಜತೆ ಕೈಜೋಡಿಸಲಿದೆ, ಯುರೋಪಿಯನ್ ಯೂನಿಯನ್ ಜತೆಯಾಗಿ ತನ್ನ ಕಮ್ಯುನಿಸ್ಟ್ ಸಿದ್ಧಾಂತ ಆಧಾರಿತ ವ್ಯವಸ್ಥೆಯ ಪ್ರಭಾವದಿಂದ ದೂರವಾಗಲಿದೆ ಎಂಬ ಕಾರಣದಿಂದ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದೆ. ರಷ್ಯಾ ಕಳುಹಿಸಿದ ಯುದ್ಧ ವಾಹನಗಳ ಮೇಲೆ *Z* ಸಂಕೇತವನ್ನು ರಷ್ಯಾ ಸೂಚಿಸಿದ್ದು, ಇದರ ಸೂಚನೆ ಎಂದರೆ 8 ಗಣರಾಜ್ಯಗಳನ್ನು ರಷ್ಯಾಕ್ಕೆ ಸೇರಿಸುವ ಮೂಲಕ ರಷ್ಯಾವನ್ನು ವಿಸ್ತರಿಸುವ ದೂರ ದೃಷ್ಠಿ ಹಾಗೂ ಮುಂದಾಲೋಚನೆ ಈ ಸೇನಾ ಕಾರ್ಯಾಚರಣೆಯ ಹಿಂದಿದೆ ಎನ್ನಲಾಗುತ್ತಿದೆ. ಎಂದರೆ ಇದರ ಪರಿಣಾಮ ಭವಿಷ್ಯದಲ್ಲಿ ಜಗತ್ತಿನ ಭೂಪಟವನ್ನೇ ಬದಲಾಯಿಸಲಿದೆ, ಕೆಲವೊಂದು ರಾಷ್ಟ್ರಗಳನ್ನು ಪ್ರಪಂಚದ ನಕಾಶೆಯಿಂದಲೇ ಅಳಿಸಿ ಹಾಕಲಾಗುತ್ತದೆ!
ಆದರೆ ಇದೀಗ ನಮ್ಮ ಮುಂದಿರುವ ಪ್ರಶ್ನೆ ಎಂದರೆ ಜಗತ್ತಿನಲ್ಲಿ ಶಾಂತಿ ನೆಲೆಗೊಳಿಸಿ ಎಲ್ಲವೂ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿಯೊಂದಿಗೆ ಹುಟ್ಟಿಕೊಂಡ ವಿಶ್ವಸಂಸ್ಥೆ ರಷ್ಯಾ-ಉಕ್ರೇನ್ ಯುದ್ಧ ವಿಷಯದಲ್ಲಿ ಏಕೆ ಗಟ್ಟಿ ನಿರ್ಧಾರವನ್ನು ತಾಳದೆ ಹೋಗಿದೆ? ಹೌದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್-ರಷ್ಯಾ ಯುದ್ಧದ ವಿರುದ್ಧ ನಿರ್ಣಯ ತೆಗೆದುಕೊಳ್ಳಲಾಗಿದೆ. ಉಕ್ರೇನ್ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ರಷ್ಯಾ ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಿ ವಿಶ್ವಸಂಸ್ಥೆ ಕೈಗೊಂಡ ನಿರ್ಣಯದ ಪರ ಒಂದು ಡಜನ್‌ಗೂ ಹೆಚ್ಚು ದೇಶಗಳ ರಾಯಭಾರಿಗಳು ದನಿ ಎತ್ತಿದ್ದಾರೆ. ಐದು ದಿನಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಉಕ್ರೇನ್ ಅಪಾರ ನಷ್ಟ ಅನುಭವಿಸಿದೆ. ಸಾವಿರಾರು ಅಮಾಯಕ ಜೀವಗಳು ಹಾರಿ ಹೋಗಿವೆ. “ಈ ಅನಾಹುತ ಇಲ್ಲಿಗೆ ಕೊನೆಗೊಳಿಸಿ. ಮನುಷ್ಯತ್ವದ ಕಡೆ ಹೆಜ್ಜೆ ಹಾಕಿ” ಎಂದು ವಿಶ್ವಸಂಸ್ಥೆ ಸಲಹೆ ನೀಡಿದೆ. ಅದರೆ ರಷ್ಯಾದಂತಹಾ ಬಲಿಷ್ಟ, ವಿಸ್ತರಣಾದಾಹ್ಹಿ, ಕಮ್ಯುನಿಸ್ಟ್ ಸಿದ್ದಾಂತದ ಪ್ರತಿಪಾದಕ ರಾಷ್ಟ್ರವೊಂದಕ್ಕೆ ಇಂತಹಾ ಕೇವಲ ಸಲಹೆ ಸೂಚನೆಗಳು ಸಾಕಾಗುತ್ತದೆಯೆ? ಒಂದೊಮ್ಮೆ ಈ ಯುದ್ಧದಲ್ಲಿ ಉಕ್ರೇನ್ ಸೋಲೊಪ್ಪಿದ್ದಾದರೆ ಭವಿಷ್ಯದಲ್ಲಿ ನ್ಯಾಟೋ ರಾಷ್ಟ್ರಗಳೂ ಸಹ ರಷ್ಯಾವನ್ನು ಎದುರಿಸಲಾರವು. ಅಲ್ಲದೆ ವಿಶ್ವಸಂಸ್ಥೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯವೂ ಇದೆ. ಒಟ್ತಾರೆ ಜಗತ್ತಿನ ಯಾವುದೇ ರಾಷ್ಟ್ರ ರಷ್ಯಾವನ್ನು ಮುಖಾಮುಖಿಯಾಗಿ ಎದುರಿಸಲು ವಿಫಲವಾಗಲಿದೆ.
ಇದಷ್ಟೇ ಅಲ್ಲದೆ ಜಗತ್ತಿನಾದ್ಯಂತ ಇರುವ ಮಾನವ ಹಕ್ಕು ಹೋರಾಟ(ಹಾರಾಟ)ಗಾರರು, ಬುದ್ದಿಜೀವಿಗಳು ರಷ್ಯಾ-ಉಕ್ರೇನ್ ನಡುವಿನ ಈ ಯುದ್ಧದ ಬಗ್ಗೆ ಏಕೆ ಯಾವ ಹೇಳಿಕೆಯನ್ನು ನೀಡುತ್ತಿಲ್ಲ? ಪ್ರತಿಭಟನೆ ನಡೆಸುತ್ತಿಲ್ಲ? ಭಾರತದಂತಹಾ ಸರ್ವಮತ ಸಹಬಾಳ್ವೆ ಇರುವ ದೇಶದಲ್ಲಿ ಅದೆಲ್ಲೋ ಒಂದು ಗುಂಪು ಹತ್ಯೆ ನಡೆದಿದೆ, ಇನ್ನೆಲ್ಲೋ ಗುಂಪುಗಳ ನಡುವೆ ಸಂಘರ್ಷ ನಡೆದಿದೆ ಎನ್ನುವ ಕಾರಣಕ್ಕೆ ಮಾನವ ಹಕ್ಕು ಉಲ್ಲಂಘನೆ, ಭಾರತದಲ್ಲಿ ಯಾವುದೂ ಸರಿಯಿಲ್ಲ ಎಂದು ಬೊಬ್ಬಿಡುವ ಜಗತ್ತಿನ ಪ್ರಚಂಡ ಮಾನವ ಹಕ್ಕು ಪ್ರತಿಪಾದಕರು ಇಂದು ಎಲ್ಲಿ ಹೋಗಿದ್ದಾರೆ? ರಷ್ಯಾ ಉಕ್ರೇನ್ ನ ಹಲವಾರು ಸೈನಿಕರನ್ನು ಮಾತ್ರವಲ್ಲದೆ ಅಮಾಯಕ ನಾಗರಿಕರ ಮೇಲೆ ಸಹ ದಾಳಿ ಮಾಡುತ್ತಿದೆ. ಈ ದಾಳಿಯ ನಡುವೆ ಕರ್ನಾಟಕದ ಹಾವೇರಿಯ ವೈದ್ಯ ವಿದ್ಯಾರ್ಥಿ ನವೀನ್ ಎನ್ನುವವ ಸಹ ದುರಂತ ಸಾವಿಗೆ ಈಡಾಗಿದ್ದಾನೆ. ಇಷ್ಟೆಲ್ಲಾ ಘಟಸುತ್ತಿದ್ದರೂ ಬುದ್ದಿಜೀವಿಗಳೆನಿಸಿಕೊಂಡವರು ಯಾರೂ ರಷ್ಯಾ ನಡೆಯನ್ನು ಟೀಕಿಸುವ ಮಾತನಾಡುತ್ತಿಲ್ಲ ಏಕೆ? ಕೇವಲ ನರೇಂದ್ರ ಮೋದಿ, ಕೇಂದ್ರ ಸರ್ಕಾರ ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸಬೇಕಿದೆಯೆ?
ಕಳೆದ ವರ್ಷಗಳಲ್ಲಿ “ಟೂಲ್ ಕಿಟ್” ಮೂಲಕ ಭಾರತದಲ್ಲಿ ಅಸಮಾನತೆ ಇದೆ, ಅಸಹಿಷ್ಣುತೆ, ಮಾನವ ಹಕ್ಕು ಉಲ್ಲಂಘನೆ ಸತತ ಆಗುತ್ತಿದೆ ಎನ್ನುತ್ತಿದ್ದ ಜಾಗತಿಕ ಹೋರಾಟಗಾರ್ತಿಯರಾರೂ ಇದೀಗ ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ತುಟಿ ಪಿಟಿಕೆನ್ನುತ್ತಿಲ್ಲ. ಇದಷ್ಟೇ ಅಲ್ಲ ಕಳೆದ ತಿಂಗಳಲ್ಲಿ ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಕುರಿತು ವಿವಾದ ಏರ್ಪಟ್ಟ ಸಮಯದಲ್ಲಿ ಅಮೆರಿಕಾ, ಪಾಕಿಸ್ತಾನ ಸೇರಿ ಜಗತ್ತಿನ ನಾನಾ ರಾಷ್ಟ್ರಗಳ ನಾಯಕರು ಅಲ್ಲದೇ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮಲಾಲಾಳಂತಹಾ ವ್ಯಕ್ತಿಗಳು ಭಾರತದಲ್ಲಿ ಪರಿಸ್ಥಿತಿ “ಭಯಂಕರವಾಗಿದೆ” ಅಂತ ಅಂದಿದ್ದರು. ಆದರೆ ಇದೀಗ ಅವರಾರೂ ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಹಾಗೂ ಅದರಿಂದಾಗುತ್ತಿರುವ ಜೀವಹಾನಿ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ.
ಇದೆಲ್ಲದರಿಂದ ತಿಳಿದುಬರುತ್ತಿರುವುದೇನೆಂದರೆ ವಿಶ್ವದ ಬಲಾಡ್ಯ ರಾಷ್ಟ್ರಗಳು ತಾವೇನು ಮಾಡಿದರೂ ಅದೆಲ್ಲವೂ ಸರಿಯಾಗಿಯೇ ಇರುತ್ತದೆ. ಆದರೆ ಭಾರತದಂತ ಕೆಲವು ರಾಷ್ಟ್ರಗಳು ಮಾತ್ರ ಅವರ ಅಣತಿಯ ಪ್ರಕಾರವೇ ನಡೆಯಬೇಕು! ಉದಾಹರಣೆಗಾಗಿ ಹೇಳುವುದಾದರೆ ರಷ್ಯಾ-ಉಕ್ರೇನ್ ಮೇಲೆ ದಾಳಿ ನಡೆಸಿದ್ದಂತೆ ಭಾರತವೇನಾದರೂ ಪಾಕಿಸ್ತಾನದ ಕರಾಚಿ, ಲಾಹೋರ್ ಮೇಲೆ ದಾಳಿ ನಡೆಸಿದ್ದರೆ ಆಗ ಅಮೆರಿಕಾ ಸೇರಿ ಜಾಗತಿಕ ಶಕ್ತಿಗಳು ಹೀಗೆಯೇ ಸುಮ್ಮನೆ ಕುಳಿತಿರುತ್ತಿದ್ದವೆ? ಖಂಡಿತಾ ಇಲ್ಲ. ಭಾರತದ ವಿರುದ್ಧ ವಿಷ ಕಾರುತ್ತಿದ್ದವು.
ಇನ್ನು ಇಂದಿನ ಯುದ್ಧ ಪರಿಸ್ಥಿತಿಯಲ್ಲಿ ಭಾರತ ತಟಸ್ಥ ಧೋರಣೆ ತಾಳಿದೆ. ಇದಕ್ಕೆ ಕಾರಣ ಕೂಡ ಇದೆ. ರಷ್ಯಾ ನಮ್ಮ ಅನಾದಿ ಕಾಲದ ಮಿತ್ರರಾಷ್ಟ್ರ. ಅಂತಹಾ ದೇಶದ ವಿರುದ್ಧ ನಿಲುವು ತೆಗೆದುಕೊಳ್ಳುವುದು ಅಷ್ಟೇನೂ ಸುಲಭವಲ್ಲ. ಇನ್ನೊಂದು ಸಂಗತಿ ಎಂದರೆ ಭಾರತಕ್ಕೆ ಅಮೆರಿಕಾ ಸಹ ಮಿತ್ರರಾಷ್ಟ್ರವೇ ಆಗಿದ್ದರೂ ಅಮೆರಿಕಾದ ಭಾರತ ಪರ ನಿಲುವು ಎಲ್ಲಾ ಕಾಲದಲ್ಲಿ ಏಕಪ್ರಕಾರವಾಗಿ ಇರುವುದಿಲ್ಲ. ಹಾಗಾಗಿ ಇಂದು ಅಮೆರಿಕಾ ಮಾತುಕೇಳಿ ರಷ್ಯಾ ವಿರುದ್ಧ ಹೋದರೆ ನಾವು ಒಬ್ಬ ಆಪ್ತಮಿತ್ರನನ್ನೇ ಕಳೆದುಕೊಳ್ಳುತ್ತೇವೆ. ಹಾಗೆಂದ ಮಾತ್ರಕ್ಕೆ ರಷ್ಯಾ ನಡೆಸಿರುವ ಈ ಯುದ್ಧಕ್ಕೆ ಭಾರತದ ಸಮ್ಮತಿ ಇದೆ ಎಂದೂ ಅರ್ಥವಲ್ಲ. ಭಾರತ ಪ್ರಧಾನಿ ರಷ್ಯಾ ಅಧ್ಯಕ್ಷ ಪುಟಿನ್ ಗೆ ಪದೇ ಪದೇ ಕರೆ ಮಾಡಿ ಯುದ್ಧ ನಿಲ್ಲಿಸುವ ಮನವಿ ಮಾಡುತ್ತಿದ್ದಾರೆ. ಅಲ್ಲದೆ ಉಕ್ರೇನ್ ನಲ್ಲಿ ಸಿಲುಕಿದ್ದ ನಮ್ಮ ದೇಶವಾಸಿಗಳನ್ನು ಮರಳಿ ಕರೆತರುತ್ತಿದ್ದಾರೆ. ಆದರೆ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವಂತೆ ರಷ್ಯಾ ಮೇಲೆ ಭಾರತ ಒತ್ತಡ ಹಾಕುವುದು ಸಾಧ್ಯವಿಲ್ಲ. ಮತ್ತು ವಿಶ್ವಸಂಸ್ಥೆಯಲ್ಲಿಯೂ ಸಹ ಯುದ್ಧದ ವಿರುದ್ಧ ಮತ ಚಲಾವಣೆ ಅಸಾಧ್ಯ. ಏಕೆಂದರೆ ರಷ್ಯಾದಂತೆ ಉಕ್ರೇನ್ ನಮಗೆ ಹಳೇ ಮಿತ್ರನಲ್ಲ. ಇದೀಗ ತನ್ನ ಮೇಲೆ ರಷ್ಯಾ ಎಲ್ಲಾ ದಿಕ್ಕುಗಳಿಂದ ಆಕ್ರಮಣ ನಡೆಸಿದೆ. ನನ್ನ ಪರವಾಗಿ ರಷ್ಯಾ ಅಧ್ಯಕ್ಷರೊಂದಿಗೆ ಮಾತನಾಡಿ ತಕ್ಷಣವೇ ಯುದ್ಧ ನಿಲ್ಲಿಸಲು ಮಧ್ಯ ಪ್ರವೇಶಿಸುವಂತೆ ಹಾಗೂ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧ ಬೆಂಬಲಿಸುವಂತೆ ಉಕ್ರೇನ್ ಸರ್ಕಾರವು ಭಾರತವನ್ನು ಅಂಗಲಾಚುತ್ತಿದೆ. ಆದರೆ ಇದೇ ದೇಶ ಈ ಹಿಂದೆ ಹಲವು ಬಾರಿ ಭಾರತದ ವಿರುದ್ಧ ನಿರ್ಣಯ ತೆಗೆದುಕೊಂಡ ಉದಾಹರಣೆಗಳು ನಮ್ಮ ಮುಂದಿದೆ. 1998ರಲ್ಲಿ ಅಂದಿನ ಆಟಲ್ ಬಿಹಾರಿ ವಾಜಪೇಯಿ ಸರ್ಕಾರ ‘ಆಪರೇಷನ್ ಶಕ್ತಿ’ ಹೆಸರಿನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ, ಪಾಕಿಸ್ತಾನ-ಭಾರತ ಯುದ್ಧ ಸಮಯದಲ್ಲಿ, ವಿಶ್ವಸಂಸ್ಥೆಯ ಭದ್ರಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯಲು ಭಾರತ ಪ್ರಯತ್ನಿಸುತ್ತಿದ್ದ ಸಮಯ, ಕಾಶ್ಮೀರ ವಿಷಯದಲ್ಲಿ ಸಹ ಉಕ್ರೇನ್ ಭಾರತದ ವಿರುದ್ಧ ನಿರ್ಣಯ ತೆಗೆದುಕೊಂಡಿದೆ. ಹೀಗಿರುವಾಗ ಇಂದು ಉಕ್ರೇನ್ ಪರ ಭಾರತ ನಿರ್ನಯ ತೆಗೆದುಕೊಳ್ಳಲಾಗುತ್ತದೆಯೆ?
ಒಟ್ಟಾರೆಯಾಗಿ ಹೇಳುವುದಾದರೆ ಯುದ್ಧ ಎಂದಿಗೂ ಒಳ್ಳೆಯದಲ್ಲ. ಮಾನವ ವಿಕಾಸದ ಇತಿಹಾಸದಲ್ಲಿ ಅಳಿಸಲಾಗದ ಕಠೋರ ಕಪ್ಪು ಕಲೆ ಎಂದರೆ ಅವು ಯುದ್ಧದ ಕಲೆಗಳು. ಹಾಗಾಗಿ ಇಂದೂ ಸಹ ಕೋಟ್ಯಾಂತರ ಜೀವಹಾನಿಗೆ ಪ್ರೇರಣೆಯಾಗಿರುವ ಯುದ್ಧ ತಕ್ಷಣ ನಿಲ್ಲಲೇಬೇಕು, ಜಗತ್ತು ಶಾಂತಿ ಸೌಹಾರ್ದತೆಯಿಂದ ನಡೆಯುವಂತಾಗಬೇಕು ರಷ್ಯಾ-ಉಕ್ರೇನ್ ಕದನ ಶೀಘ್ರವೇ ಮುಕ್ತಾಯವಾಗಲಿ, ಅದಕ್ಕಾಗಿ ನಮ್ಮೆಲ್ಲರ ಪ್ರಾರ್ಥನೆ ಇರಲಿ.
ಕಮ್ಯೂನಿಸ್ಟರು ಕಮ್ಯೂನಿಸಂನನ್ನು ಕೊಂದದ್ದು ಹೀಗೆ (ಭಾಗ – ೨)
– ಪ್ರೇಮಶೇಖರ
ಸುಂದರ ಕನಸೊಂದು ಹಳವಂಡವಾದ ದುರಂತಕ್ಕೆ ಮರುಗುತ್ತಾ…
ಥಾಮಸ್ ಹಾಬ್ಸ್, ಜಾನ್ ಲಾಕ್, ಜೀನ್ ಯಾಕ್ಸ್ ರೂಸೂ ಮುಂತಾದ ಸಾಮಾಜಿಕ ಒಪ್ಪಂದ ಸಿದ್ಧಾಂತದ ಪ್ರತಿಪಾದಕರ ಪ್ರಕಾರ ‘ಬಲವೇ ಹಕ್ಕು’ ಎಂಬ ಮಾನವತಾವಿರೋಧಿ ಅರಣ್ಯ ಕಾನೂನಿನಿಂದ ಅಶಕ್ತರನ್ನು ರಕ್ಷಿಸಿ, ಸಮಾಜದ ಎಲ್ಲರ ನಡುವೆ ಸಮಾನ ನ್ಯಾಯಹಂಚಿಕೆಗಾಗಿ ರಾಜ್ಯ ಸ್ಥಾಪನೆಗೊಂಡಿತಂತೆ. ಆದರೆ ಮಾನವಜನಾಂಗ ಮುಂದೆ ಹಿಡಿದ ದಾರಿಯಲ್ಲಿ ರಾಜ್ಯವೇ ಶೋಷಕನಾಗಿ ಬದಲಾದದ್ದನ್ನು ಇತಿಹಾಸ ಹೇಳುತ್ತದೆ. ಸಾಮಾಜಿಕ ಒಪ್ಪಂದಗಳ ಮೂಲಕ ಸಮಾನನ್ಯಾಯ ಹಂಚಿಕಾವ್ಯವಸ್ಥೆ ಸಾಧ್ಯವಾಗದೇ ಹೋದಾಗ, ಬಲವಂತದ ಮೂಲಕ, ರಕ್ತಪಾತದ ಮೂಲಕ ಅದು ಅಸ್ತಿತ್ವಕ್ಕೆ ಬರುತ್ತದೆಂದು ಭವಿಷ್ಯ ನುಡಿದ ಕಾರ್ಲ್ ಮಾರ್ಕ್ಸ್ ಒಬ್ಬ ವಾಸ್ತವವಾದಿ. ಅಂತಹ ವ್ಯವಸ್ಥೆಯನ್ನು ಚಿತ್ರಿಸಿದ ಕಮ್ಯೂನಿಸಂ ಒಂದು ಉದಾತ್ತ ಮಾನವಪರ ಚಿಂತನೆ. ಆದರೆ ವಾಸ್ತವವಾದಿ ರೂಪಿಸಿದ ಉದಾತ್ತ ಮಾನವಪರ ಸಿದ್ಧಾಂತ ತನ್ನ ಅವಾಸ್ತವವಾದಿ ಹಾಗೂ ಮಾನವವಿರೋಧಿ ಹಿಂಬಾಲಕರಿಂದಲೇ ಕಳಂಕ ಹಚ್ಚಿಸಿಕೊಂಡದ್ದೊಂದು ದುರಂತ. ಈ ಪ್ರಕ್ರಿಯೆ ಭಾರತದಲ್ಲಿ ಅನಾವರಣಗೊಂಡ ಬಗೆಯನ್ನು ಸಂಕ್ಷಿಪ್ತವಾಗಿ ಈಗಿಲ್ಲಿ ಹೇಳುತ್ತೇನೆ. ಮತ್ತಷ್ಟು ಓದು
ಕಮ್ಯೂನಿಸ್ಟರು ಕಮ್ಯೂನಿಸಂನನ್ನು ಕೊಂದದ್ದು ಹೀಗೆ ( ಭಾಗ-೧ )
– ಪ್ರೇಮಶೇಖರ
ನಮ್ಮ ವಿಚಾರವಂತರು, ಸಾಂಸ್ಕೃತಿಕ ನಾಯಕರು ಶಕ್ತಿಮೀರಿ ಪ್ರಶಂಸಿಸಿದ್ದು, ಪ್ರಚುರ ಪಡಿಸಲು ಹೆಣಗಿದ್ದು ಕಮ್ಯೂನಿಸಂ ಮತ್ತು ಸೆಕ್ಯೂಲರಿಸಂಗಳನ್ನು. ಆದರೆ ಅವರ ನಿರೀಕ್ಷೆಗೆ ವಿರುದ್ಧವಾಗಿ ಕಮ್ಯೂನಿಸಂ ನಮ್ಮ ಸಮಾಜೋ-ರಾಜಕೀಯವಲಯದಲ್ಲಿ ಮುಂಚೂಣಿಗೆ ಬರಲೇ ಇಲ್ಲ. ಜತೆಗೆ, ತಾವು ಬಯಸಿದಂಥ ಸೆಕ್ಯೂಲರಿಸಂ ಇಲ್ಲಿ ನೆಲೆಯೂರಿಲ್ಲವೆಂದು ಅಲವತ್ತುಕೊಳ್ಳುತ್ತಲೇ ಇದ್ದಾರೆ. ಕರ್ನಾಟಕದ ಸಂದರ್ಭದಲ್ಲಿ ಇಂಥಾ ಗೋಳಾಟವನ್ನು ರಂಜನೀಯವಾಗಿ ಪ್ರದರ್ಶಿಸಿದ್ದು ಪತ್ರಕರ್ತ ಲಂಕೇಶ್, ಅವರಿಗೆ ಆಗಾಗ ‘ಅವಶ್ಯಕತೆ’ ಗನುಗುಣವಾಗಿ ಸಾಥ್ ನೀಡಿದ್ದು ಜ್ಞಾನಪೀಠಿ ಯು. ಆರ್. ಅನಂತಮೂರ್ತಿ. ಇವರ ಇಷ್ಟೆಲ್ಲಾ ಪ್ರಯತ್ನಗಳು ‘ಯಶಸ್ವಿ’ಯಾಗದಿರಲು ಕಾರಣವೇನು? ಸಾಮಾನ್ಯ ಜನತೆ ಇವರ ವಿಚಾರಗಳಿಗೆ ಇವರು ಬಯಸಿದಷ್ಟು ಸಹಮತಿ ತೋರದಿರಲು ಇರುವ ಕಾರಣವಾದರೂ ಏನು? ಜನ ದಡ್ಡರೇ? ಅಥವಾ ಈ ಬುದ್ದಿಜೀವಿಗಳಿಗಿಂತಲೂ ಹೆಚ್ಚಿನ ಬುದ್ಧಿವಂತರೇ? ಅಥವಾ ಈ ಬುದ್ಧಿಜೀವಿಗಳ ಪ್ರಚಾರ/ಪ್ರಲಾಪದಲ್ಲೇ ದೋಷವಿದೆಯೇ? ಈ ಪ್ರಶ್ನೆಗಳನ್ನು ಎರಡು ಭಾಗಗಳ ಈ ಲೇಖನದಲ್ಲಿ ಚರ್ಚೆಗೆತ್ತಿಕೊಳ್ಳುತ್ತಿದ್ದೇನೆ. ಮತ್ತಷ್ಟು ಓದು
ಮತ್ತೊಮ್ಮೆ ಚೆಕಾಫ್
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಮಧ್ಯಾಹ್ನದ ಸಮಯವದು. ತೀಕ್ಷ್ಣ ಕಂಗಳ,ಎತ್ತರದ ನಿಲುವಿನ ನಡುವಯಸ್ಕ ವಾಲ್ಡೆರೆವ್ ಕಚೇರಿಯ ಬಾಗಿಲಲ್ಲಿ ನಿಂತಿದ್ದ .ಧರಿಸಿದ್ದ ಮೇಲಂಗಿಯನ್ನು ಸರಿಪಡಿಸಿಕೊಳ್ಳುತ್ತ ನಿಂತಿದ್ದ ಆತ ಮಟ್ಟಸವಾಗಿ ತಲೆ ಬಾಚಿದ್ದ.ತನ್ನ ರೇಷ್ಮೆಯ ರುಮಾಲಿನಲ್ಲಿ ಹುಬ್ಬನ್ನೊರಿಸಿಕೊಳ್ಳುತ್ತ ಆ ಸರಕಾರಿ ಕಚೇರಿಯನ್ನು ಪ್ರವೇಶಿಸಿದ್ದ ಅವನ ನಡಿಗೆಯೂ ಕೊಂಚ ವಿಭಿನ್ನತೆಯಿಂದ ಕೂಡಿತ್ತು. ಸರಕಾರಿ ಕಚೇರಿಯಲ್ಲಿ ಎಂದಿನ ಸೋಮಾರಿತನದ ವಾತಾವರಣ.ಒಂದು ಹರಿವಾಣದ ತುಂಬ ಹತ್ತಾರು ಗ್ಲಾಸುಗಳನ್ನಿಟ್ಟುಕೊಂಡು ಗಡಿಬಿಡಿಯಲ್ಲಿ ನಡೆಯುತ್ತಿದ್ದ ಜವಾನನೊಬ್ಬನನ್ನು ತಡೆದು ನಿಲ್ಲಿಸಿ,’ನಾನೊಂದು ಮಾಹಿತಿಯನ್ನು ಪಡೆಯಬೇಕಿತ್ತು.’ಎಂದು ಪ್ರಶ್ನಿಸಿದ.ಕ್ಷಣಕಾಲ ವಾಲ್ಡೆರೆವ್ ನನ್ನು ದಿಟ್ಟಿಸುತ್ತ ನಿಂತಿದ್ದ ಜವಾನನ್ನು ಗಮನಿಸಿದ ವಾಲ್ಡೆರೆವ್ ಮತ್ತೊಮ್ಮೆ ” ಸರ್ ನಾನು ತುಂಬ ಅಗತ್ಯವಾದ ಮಾಹಿತಿಯೊಂದನ್ನು ಪಡೆದುಕೊಳ್ಳಬೇಕಿತ್ತು.ಹಾಗೆಯೇ ಮಂಡಳಿ ಪಾಸು ಮಾಡಿದ ಗೊತ್ತುವಳಿಯ ಪ್ರತಿಯೊಂದನ್ನು ಪಡೆದುಕೊಳ್ಳಬೇಕಿತ್ತು.ಇದನ್ನೆಲ್ಲಿ ವಿಚಾರಿಸಬೇಕೆನ್ನುವುದನ್ನು ದಯವಿಟ್ಟು ತಿಳಿಸಿ”ಎಂದು ಪ್ರಶ್ನಿಸಿದ. ಮತ್ತಷ್ಟು ಓದು
ಜಗತ್ತಿನ ಪ್ರಶ್ನೆಗಳಿಗೆ ನಿರುತ್ತರ ಕೊರಿಯ
– ರೋಹಿತ್ ಚಕ್ರತೀರ್ಥ
ಫೆಬ್ರವರಿ 12, 2013. ಮಂಗಳವಾರ. ದೊಡ್ಡಣ್ಣ ಅಮೆರಿಕದ ಅಧ್ಯಕ್ಷ ಒಬಾಮ ಟಿವಿಗಳಲ್ಲಿ ಕಾಣಿಸಿಕೊಂಡು, “ಈ ಪ್ರಯತ್ನ ಕೂಡಲೇ ನಿಲ್ಲಬೇಕು. ಇಲ್ಲವಾದರೆ ತಕ್ಕ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ” ಅಂತ ಘೋಷಿಸಿದ್ದೇ ತಡ, ಒಂದರ ಹಿಂದೊಂದರಂತೆ ಘೋಷಣೆ, ಬೆದರಿಕೆಗಳ ಸುರಿಮಳೆ. ಜಪಾನ್, ದಕ್ಷಿಣ ಕೊರಿಯ, ರಷ್ಯ, ಇಂಗ್ಲೆಂಡ್, ಫ್ರಾನ್ಸ್, ಸಿಂಗಪುರ, ಮಲೇಷಿಯಾದಂತಹ ಹತ್ತುಹಲವಾರು ದೇಶಗಳ ಅಧ್ಯಕ್ಷರುಗಳು ತಮ್ಮ ಹೇಳಿಕೆಗಳನ್ನು ತಾರಕಸ್ವರದಲ್ಲಿ ಕೂಗಿ ಹೇಳಲು ಕ್ಯೂ ನಿಂತುಬಿಟ್ಟರು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾ ಕಿ ಮೂನ್ ಕೂಡ, “ನಿಮ್ಮ ಪ್ರಯೋಗಗಳನ್ನು ಕೂಡಲೇ ಸ್ಥಗಿತಗೊಳಿಸಿ. ಇಲ್ಲವಾದರೆ ಪ್ರತಿರೋಧ ಎದುರಿಸಿ” ಅಂತ ಘಂಟಾಘೋಷವಾಗಿ ಹೇಳಿದರು. ಹೆಗಲಿಗೆ ಕೈಹಾಕಿ ಕುಶಲ ಕೇಳುವ ಗೆಳೆಯ ಚೀನಾ ಕೂಡ (ಒಳಗೊಳಗೆ ಬೆಂಬಲಿಸಿದರೂ), ಈ ಪರೀಕ್ಷೆಗಳನ್ನೆಲ್ಲ ಕೈಬಿಟ್ಟು ಸುಮ್ಮನಿದ್ದರೆ ಏನು ನಷ್ಟ? ಅಂತ ಆಪ್ತಸಲಹೆ ಕೊಟ್ಟು ಕೈತೊಳೆದುಕೊಂಡಿತು.
ಇಷ್ಟೆಲ್ಲ ಅಧ್ವಾನಕ್ಕೆ ಕಾರಣವಾಗಿದ್ದು ಉತ್ತರ ಕೊರಿಯ ಎಂಬ ದೇಶ, ತಾನೇ ಹೇಳಿಕೊಂಡಂತೆ – ಬಹಳ ಸಣ್ಣಪ್ರಮಾಣದಲ್ಲಿ ನಡೆಸಿದ, ಮಾಪಕಗಳಲ್ಲಿ 4.9ರಷ್ಟು ದಾಖಲಾದ ನ್ಯೂಕ್ಲಿಯರ್ ಪರೀಕ್ಷೆ. 2006ರ ಪರೀಕ್ಷೆಯ ಹತ್ತುಪಟ್ಟು, 2009ರ ಪರೀಕ್ಷೆಯ ಎರಡು ಪಟ್ಟು ಶಕ್ತಿಶಾಲಿಯಾಗಿದ್ದ ಈ ಪರೀಕ್ಷೆಯಿಂದ ಉತ್ತರ ಕೊರಿಯ ಅಮೆರಿಕೆಗೆ ತನ್ನ ತಾಕತ್ತು ತೋರಿಸಲು ಹೊರಟಿತ್ತು. ಗಾಯದ ಮೇಲೆ ಗೀರೆಳೆದಂತೆ, ಪರೀಕ್ಷೆ ನಡೆಸಿದ ಮೇಲೆ, “ನಮ್ಮ ವ್ಯವಹಾರಗಳಲ್ಲಿ ಪದೇಪದೇ ಮೂಗು ತೂರಿಸುವ ಅಮೆರಿಕಕ್ಕೆ ನಾವು ಕೊಡುತ್ತಿರುವ ಎಚ್ಚರಿಕೆ ಇದು. ಅದರ ಹಸ್ತಕ್ಷೇಪ ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಪರೀಕ್ಷೆಗಳನ್ನು ನಡೆಸುತ್ತ ಹೋಗುತ್ತೇವೆ” ಅಂತ ಹೇಳಿಕೆ ಕೂಡ ಬಿಡುಗಡೆ ಮಾಡಿತು. ಅಚ್ಚರಿಯ ಮಾತೆಂದರೆ “ಜಗತ್ತಿನ ಸೂಪರ್ ಪವರ್ ನಾಯಕನಾಗಿ ಹೊರಹೊಮ್ಮುತ್ತಿರುವ ನಮ್ಮ ದೇಶದ ಯುದ್ಧ ಸಿದ್ಧತೆಗೆ ಹೆದರಿ ಬಾಲಮುದುರಿ ಕುಂಯ್‍ಗುಡುತ್ತಿರುವ ಅಮೆರಿಕ” ಅಂತ ರಾಷ್ಟ್ರೀಯ ಚಾನೆಲ್‍ನಲ್ಲಿ ಬಂದ ಸುದ್ದಿಯನ್ನು ನೋಡಿ ಪ್ಯೊಂಗ್‍ಯಾಂಗಿನ ಬೀದಿಗಳಲ್ಲಿ ಜನ ಸಂಭ್ರಮಿಸಿ ಕುಣಿದರು! ದೇಶಪ್ರೇಮ ಎನ್ನುತ್ತೀರೋ, ಹಿಸ್ಟೀರಿಯ ಎನ್ನುತ್ತೀರೋ!
ಈ ಎಲ್ಲ ರಾಜಕೀಯ ಪ್ರೇರಿತ ರಾದ್ಧಾಂತ, ಗೊಂದಲಗಳನ್ನು ಬದಿಗಿಟ್ಟು ಈ ಕತೆಯ ಸುತ್ತ ಹಬ್ಬಿಬೆಳೆದ ಹುತ್ತವನ್ನು ತಡವುತ್ತ ಹೋದರೆ, ಕೊನೆಗೆ ನಮಗೆ ಹಾವು ಗೋಚರಿಸಬಹುದೋ ಏನೋ! ಹಾಗಾಗಿ, ಉತ್ತರ ಕೊರಿಯದ ಸುತ್ತ ಸುಮ್ಮನೆ ನಿಷ್ಪಕ್ಷಪಾತವಾಗಿ ಒಂದು ಸುತ್ತು ಹಾಕ್ಕೊಂಡು ಬರೋಣ, ಬನ್ನಿ. ಮತ್ತಷ್ಟು ಓದು
ಸಿರಿಯಾದಲ್ಲಿ ಶಬ್ದವಿಲ್ಲದ ಯುದ್ಧವಂತೂ ನಡೆಯಲಿದೆ
– ಎಸ್.ಸುನಿಲ್ ಕುಮಾರ್
ರಾಷ್ಟೀಯ ಪ್ರಧಾನ ಕಾರ್ಯದರ್ಶಿ, YOUTH FOR NATION
ಈ ಬಾರಿ ಸಿರಿಯಾ ಮೇಲೆ ಕ್ಷಿಪಣಿ ಯುದ್ಧವೇರ್ಪಟ್ಟರೂ, ಕ್ಷಿಪಣಿ ಬಳಸದೇ ಇದ್ದರೂ ಸೈಬರ್ ಯುದ್ಧವಂತೂ ನಿಶ್ಚಿತವಾಗಿ ನಡೆಯಲಿದೆ. ಇದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ. ಯಾರ ಸಮ್ಮತಿಗೂ ಕಾಯಬೇಕಿಲ್ಲ. ಏಕೆಂದರೆ ಇದೊಂದು ಮಾಯಾಯುದ್ಧ. ಇಲ್ಲಿ ಶತ್ರು ಎಲ್ಲಿರುವನು ಎಂದು ತಿಳಿಯುವುದೇ ಇಲ್ಲ. ದಾಳಿ ನಡೆಯುವುದೆ ಗೊತ್ತಾಗುವುದಿಲ್ಲ, ದಾಳಿ ಎಂದು ಶುರುವಾತು, ಎಲ್ಲಿ ಮುಗಿತು ಒಂದೂ ತಿಳಿಯುವುದಿಲ್ಲ. ತಿಳಿಯುವುದೊಂದೆ ಅದರಿಂದಾಗುವ ಹಾನಿ ಮಾತ್ರ, ಸೈಬರ್ ಯುದ್ಧದ ಪರಿಣಾಮ ಅತ್ಯಂತ ಅಪಾಯಕಾರಿ.
ಜೂನ್ ೨೦೧೦ ರಲ್ಲಿ ಇರಾನಿನ ಅಣುಸ್ಥಾವರಗಳು ಸ್ಟಕ್ಸ್‌ನೆಟ್ ಎಂಬ ಕಂಪ್ಯೂಟರ್ ವೈರಸ್ ದಾಳಿಂದ ನಿಷ್ಕ್ರಿಯಗೊಳ್ಳುತ್ತದೆ. ನಿರ್ದಿಷ್ಟವಾಗಿ ಅಣುಸ್ಥಾವರದ ಸೆಂಟ್ರಿಫ್ಯೂಜ್‌ಗಳನ್ನೆ ಗುರಿಯಾಗಿರಿಸಿ ಇರಾನಿನ ಅಣುಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಕುಂಠಿತಗೊಳಿಸಿದ ಸ್ಟಕ್ಸ್‌ನೆಟ್ ಅಮೆರಿಕಾ ಮತ್ತು ಇಸ್ರೇಲ್ ಸೇರಿ ಇರಾನಿನ ವಿರುದ್ಧ ಬಳಸಲು ತಯಾರಿಸಿದ ಸೈಬರ್ ಅಸ್ತ್ರ ಎಂದು ಜೂನ್ ೧. ೨೦೧೨ ರಂದು “ನ್ಯೂಯಾರ್ಕ್ ಟೈಮ್ಸ್” ವರದಿ ಮಾಡುತ್ತದೆ. ಹಾಗೆಯೆ ಈ ಕಾರ್ಯಾಚರಣೆಯ ಹೆಸರು “ಆಪರೇಷನ್ ಒಲಂಪಿಕ್ ಗೇಮ್ಸ್” ಎಂಬುದನ್ನು ಉಲ್ಲೇಖಿಸುತ್ತದೆ.
ದೇಶವೊಂದು ಯಾವುದೇ ಸೈನಿಕರನ್ನು ಕಳುಹಿಸದೆ, ವಾಯುಪಡೆ ನೌಕಾಪಡೆಗಳನ್ನು ನಿಯೋಜಿಸದೆ ಗುಂಡಿನ ಆರ್ಭಟವೂ ಇಲ್ಲದೆ ಹೇಗೆ ಯುದ್ಧ ಮಾಡಬಹುದು ಹಾಗೂ ಇದರಿಂದ ಹೇಗೆ ಶತ್ರು ರಾಷ್ಟ್ರವನ್ನು ಹಣೆಯಬಹುದೆಂಬ ಪಾಠವನ್ನು ಅಮೆರಿಕಾ ಮತ್ತು ಇಸ್ರೇಲ್ ಜಗತ್ತಿಗೆ ಹೇಳಿಕೊಟ್ಟವು.