ವಿಷಯದ ವಿವರಗಳಿಗೆ ದಾಟಿರಿ

Posts tagged ‘ರಾ’

28
ಮೇ

ರಾಝೀ..

– ಅನಘಾ ನಾಗಭೂಷಣ

ಭಾರತೀಯ ಗುಪ್ತಚರ ದಳದ ಆಫೀಸರುಗಳು, ಗೂಢಚಾರಿಗಳ(spy) ಬಗ್ಗೆ ಸಾಕಷ್ಟು ಸಿನಿಮಾಗಳು ಬಂದಿವೆಯಾದರೂ ಇತ್ತೀಚೆಗೆ ಬಿಡುಗಡೆಯಾಗಿ ದೇಶಾದ್ಯಂತ ಜನಮೆಚ್ಚುಗೆ ಗಳಿಸಿದ್ದು ಸಲ್ಮಾನ್ ಖಾನನ ಟೈಗರ್ ಸಿನಿಮಾಗಳು, ಅಕ್ಷಯ್ ಕುಮಾರನ ಬೇಬಿ ಮತ್ತು ಆಲಿಯಾ ಭಟ್ ಳ ರಾಝೀ…

ಇವತ್ತು ರಾಝೀ ಸಿನಿಮಾ ನೋಡಿದೆ.. ನೈಜ ಘಟನೆಗಳಿಂದ ಸ್ಫೂರ್ತಿ ಪಡೆದು ಹರಿಂದರ್ ಎಸ್. ಸಿಕ್ಕಾ ಅವರು 2008ರಲ್ಲಿ ಬರೆದಿದ್ದ ‘Calling Sehmat’ ಎಂಬ ಕಾದಂಬರಿಯನ್ನಾಧರಿಸಿರುವ ಈ ಚಿತ್ರ ವಾಸ್ತವಕ್ಕೆ ಹತ್ತಿರವಾಗಿ, ಮನಮುಟ್ಟುವಂತಿದೆ.. ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ ಸಿನಿಮಾಗಳ ಬಗ್ಗೆ ನನಗೆ ಅಂಥಾ ಒಳ್ಳೆ ಅಭಿಪ್ರಾಯವೇನೂ ಇಲ್ಲವಾದರೂ ಬೇಬಿ ಇಷ್ಟವಾಗಿತ್ತು.. ಆದರೆ ವಸ್ತುನಿಷ್ಠತೆಯ ದೃಷ್ಟಿಯಿಂದ ನೋಡುವಾಗ ರಾಝೀ ಗೆ ಮೊದಲ ಸ್ಥಾನ.. ಈ ಚಿತ್ರದ ಮುಖ್ಯಪಾತ್ರ ಸಹಮತ್ ಸಯ್ಯದ್ ಳಾಗಿ ನಟಿಸಿರುವ ಆಲಿಯಾ ಭಟ್ ನಿಜಕ್ಕೂ ಅಭಿನಂದನಾರ್ಹಳು! ಹೈವೇ, ಉಡ್ತಾ ಪಂಜಾಬ್ ನಂತರ ಪ್ರಬುದ್ಧವೂ, ಸವಾಲೂ ಎನಿಸುವಂಥ ಪಾತ್ರವನ್ನ ಇದರಲ್ಲಿ ಅತ್ಯಂತ ಸಮರ್ಥವಾಗಿ ನಿರ್ವಹಿಸಿದ್ದಾಳಾಕೆ.. ಟೈಗರ್, ಬೇಬಿಗಳಲ್ಲಿರುವಂತೆ ಅತಿಮಾನುಷವೆನಿಸುವ ಯಾವುದೇ ಸ್ಟಂಟ್ಸ್, ಫೈಟಿಂಗ್, ಅನಾವಶ್ಯಕ ಹಾಡುಗಳು, ಹೀರೋಯಿಸಂ ಇವೇನೂ ಇಲ್ಲದೇ ರಾಝೀ ಸಹಜವಾಗಿ ಮೂಡಿಬಂದಿದೆ.. ಮತ್ತಷ್ಟು ಓದು »

12
ಡಿಸೆ

ಗೂಢಚರ್ಯದ ಅಂತ’ರಾ’ಳ

– ಸಂತೋಷ್ ತಮ್ಮಯ್ಯ

India's External Intelligenceಕಾಲೇಜು ದಿನಗಳ ರಸಪ್ರಶ್ನೆಯಲ್ಲಿ ಅದರ ಬಗ್ಗೆ ಪ್ರಶ್ನೆಗಳು ಬಂದಿರಬಹುದು. ಪತ್ರಿಕೆಗಳ ವರದಿಗಳು ಅವುಗಳ ಕುತೂಹಲವನ್ನು ಬೆಳೆಸಿರಬಹುದು. ಸಿನೆಮಾಗಳು ಆ ಕುತೂಹಲವನ್ನು ಕೆರಳಿಸಿರಬಹುದು. ದೇಶ ದ್ರೋಹಿ ISI ಪ್ರಸ್ಥಾಪವಾದಾಗಲೆಲ್ಲಾ ಅದು ನೆನಪಾಗಿರಬಹುದು, ಬಾಂಡ್ ಸಿನೆಮಾಗಳು ನೋಡುವಾಗಲೆಲ್ಲಾ ಅದು ನೆನಪಾಗಿರಬಹುದು. ಅದರ ಬಗ್ಗೆ ಹೆಮ್ಮೆ ಹುಟ್ಟಿರಬಹುದು. ಇಸ್ರೇಲಿನ ಮೊಸಾದ್‌ನಂತೆ, ಅಮೇರಿಕಾದ ಸಿಐಎನಂತೆ, ಇಂಗ್ಲೆಂಡಿನ MI-6 ನಂತೆ ನಮ್ಮ Research and Analysis Wing ಎಂದುಕೊಂಡಿರಲೂಬಹುದು.

ನಿಜ ಆ ಹೆಸರಲ್ಲಿ ಆಕರ್ಷಣೆಯಿದೆ. ಹಾಗಾಗಿ RAW ಎಂದರೆ ಎಲ್ಲರಿಗೂ ಗೊತ್ತಿದೆ. ಆ ಹೆಸರಿನೊಂದಿಗೆ ನಿಗೂಢತೆ ಮೆತ್ತಿಕೊಂಡಿದೆ. ಎಲ್ಲರಿಗೂ ಅದರ ಬಗ್ಗೆ ಕುತೂಹಲ ಇದ್ದೇ ಇದೆ. ಏಕೆಂದರೆ ಪ್ರತಿಯೊಬ್ಬ ಭಾರತೀಯನಿಗೂ RAW ಎಂದರೆ ಗೂಢಾಚಾರಿಕೆ ನೆನಪಾಗುತ್ತದೆ. ಪಾಕಿಸ್ಥಾನ ನೆನಪಾಗುತ್ತದೆ. ರೋಚಕ ಕಥೆಗಳು ನೆನಪಾಗುತ್ತವೆ. ಜೇಮ್ಸ್ ಬಾಂಡ್ ಸಿನೆಮಾಗಳಂತಹ ಸಾಹಸಗಳು ನೆನಪಾಗುತ್ತವೆ. ಶತ್ರು ದೇಶದೊಳಗೆ ನುಗ್ಗಿ ರಹಸ್ಯಗಳನ್ನು ಭೇದಿಸುವ ಪರಾಕ್ರಮಿ, ಯಾವುದೋ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಏಜೆಂಟ್ ನೆನಪಾಗುತ್ತದೆ. ಭಾರತದ ‘ರಾ’ ಅಂಥದ್ದು. ಸಿಕ್ಕಿ ಹಾಕಿಕೊಂಡು ವರ್ಷಾನುಗಟ್ಟಲೆ ಪಾಕಿಸ್ಥಾನದ ಜೈಲುಗಳಲ್ಲಿ ಕೊಳೆಯುವ ಅಥವಾ ಗಲ್ಲಿಗೇರಿಸಲ್ಪಡುವ ಆತನಿಗಾಗಿ ದೇಶ ಮರುಗಿದೆ.  ದೇಶದ ರಹಸ್ಯಗಳು ಸೋರಿಕೆಯಾಗದಂತೆ ತಡೆಯುವುದು ಮತ್ತು ಶತ್ರುಗಳ ಆಗುಹೋಗುಗಳನ್ನು ಅರಿಯುವುದು ಈ ‘ರಾ‘ ದ ಕೆಲಸ.

ಆದರೆ ‘ರಾ’ ದ ಬಗ್ಗೆ ತಿಳಿಯಲು ಆಸಕ್ತರಾಗಿದ್ದರೂ ಅದರ ಬಗ್ಗೆ ಬಂದ ನಂಬಿಗಸ್ಥ ಪುಸ್ತಕಗಳು ಕಡಿಮೆ. ವಿಚಿತ್ರ ಎಂದರೆ  ‘ರಾ’ ಬಗ್ಗೆ ಭಾರತೀಯರು ಬರೆದಿರುವುದಕ್ಕಿಂತಲೂ ಪಾಕ್ ನ ಐಎಸ್‌ಐ ಏಜೆಂಟರು, ಸಾಹಿತಿಗಳು ಬರೆದಿರುವುದೇ ಹೆಚ್ಚು! ನಿಂದಾಸ್ತುತಿಗಳಿಂದ ಕೂಡಿದ, ಸತ್ಯಕ್ಕೆ ದೂರವಾದ ಸಂಗತಿಗಳು ಮತ್ತು ಊಹೆಗಳಿಂದ ತುಂಬಿದ ಪಾಕಿಸ್ತಾನಿ ಪುಸ್ತಕಗಳು ತಮ್ಮ ಮೂಗಿನ ನೇರಕ್ಕೆ ‘ರಾ’ವನ್ನು ಚಿತ್ರಿಸಿವೆ. ಭಾರತದ ಕೆಲವು ಪುಸ್ತಕಗಳಲ್ಲಿ ಕೂಡ ಕೇವಲ ರೋಮಾಂಚಕಾರಿ ಕಥನಗಳಿಗೆ ಪ್ರೇಮವನ್ನು ತುರುಕಿ ಸತ್ಯವನ್ನು ಲಗಾಡಿ ಎಬ್ಬಿಸಿಲಾಗಿದೆ.ಒಟ್ಟು ‘ರಾ’ ವನ್ನು ಹೊರಗಿನಿಂದ ನೋಡಿ ಬರೆದವರೇ ಹೆಚ್ಚು. ಆದರೂ ಭಾರತೀಯ ಸಾಹಿತ್ಯದಲ್ಲಿ ಅಶೋಕ್ ರೈನಾ ಅವರ ಪುಸ್ತಕ ಮತ್ತು ‘ರಾ’ದ ಎಡಿಶನಲ್ ಸಕ್ರೇಟರಿಯಾಗಿದ್ದ ಬಿ. ರಾಮನ್ ಅವರ ಪುಸ್ತಕಗಳು ‘ರಾ’ ದ ನೈಜ ಮುಖವನ್ನು ಚಿತ್ರಿಸುತ್ತದೆ. ಹಾಗೆ ನೋಡಿದರೆ ಭಾರತದಲ್ಲಿ ‘ರಾ’ಬಗ್ಗೆ ಬರೆಯುವುದಕ್ಕಿಂತ ಸಿಐಎ ಬಗ್ಗೆ ಬರೆಯುವುದೇ ಸುಲಭ ಎಂಬಂತಹ ಪರಿಸ್ಥಿತಿ ಇದೆ. ಏಕೆಂದರೆ ಅವುಗಳ ಬಗ್ಗೆ ಅಧಿಕೃತ ವೆಬ್‌ಸೈಟುಗಳಿವೆ.ಅದರೆ ಭಾರತದಲ್ಲಿ ಇಲ್ಲ. ಜೊತೆಗೆ ಭಾರತದ ೧೯೨೩ರ ಭಾರತೀಯ ರಹಸ್ಯ ಕಾಯ್ದೆ ಸುರಕ್ಷತೆಯ ಹೆಸರಲ್ಲಿ ಕೆಲವು ಅಂಶಗಳನ್ನು ಬಹಿರಂಗಪಡಿಸುವುದಿಲ್ಲ. ಆದ್ದರಿಂದ ಭಾರತೀಯರಿಗೆ ‘ರಾ’ ಬಗ್ಗೆ ತಿಳಿಯಬೇಕೆಂದು ಹೊರಟಷ್ಟೂ  ಪಾಕಿಸ್ತಾನದ RAW ಕಾಣುತ್ತಾ ಹೋಗುತ್ತದೆ.
ಮತ್ತಷ್ಟು ಓದು »

18
ಜೂನ್

ಏಕ್ ಥಾ ಟೈಗರ್!

– ರೋಹಿತ್ ಚಕ್ರತೀರ್ಥ

ರವೀಂದ್ರ ಕೌಶಿಕ್ - ಬ್ಲ್ಯಾಕ್ ಟೈಗರ್“ಹ್ಞೂ ಅಂತಿಯೋ ಊಹ್ಞೂ ಅಂತಿಯೋ?”
“ಏನೇ ಹೇಳುವ ಮೊದಲು ನನಗೆ ಸ್ವಲ್ಪ ಮಾಹಿತಿಯಾದರೂ ಇರಬೇಕು ತಾನೆ? ನನ್ನ ಕೆಲಸ ಏನು ಅಂತಾದ್ರೂ ಹೇಳಿ!”
“ನೀನು ಮೊನ್ನೆ ಕಾಲೇಜಲ್ಲಿ ಸ್ಟೇಜ್ ಮೇಲೆ ಏನು ಮಾಡಿದಿಯೋ ಅದೇ.”
“ಅಂದ್ರೆ??”
“ನಾಟಕ ಆಡೋದು”
“ನೀವೇನು ನಾಟಕ ಕಂಪೆನಿಯವರಾ? ನಾನಿಲ್ಲಿ ಬಿಕಾಂ ಮಾಡ್ತಿದೇನೆ. ಡಿಗ್ರಿ ಮುಗಿಸಿ ನಾಟಕ ಮಂಡಳಿ ಸೇರಿದೆ ಅಂತ ಹೇಳಿದರೆ ನನ್ನಪ್ಪ ಸಿಗಿದು ತೋರಣ ಕಟ್ತಾರೆ ಅಷ್ಟೆ.ಅಲ್ಲದೆ, ನಟನಾಗಿ ಹೆಸರು ಮಾಡೋ ಆಸೆ ಅಷ್ಟೇನೂ ಇಲ್ಲ ನನಗೆ”
“ನಮ್ಮಲ್ಲಿ ನಾಟಕಕ್ಕೆ ಸೇರಿದರೆ ನಿನ್ನ ಕಟೌಟನ್ನು ಎಲ್ಲೂ ನಿಲ್ಲಿಸೋಲ್ಲ. ಇನ್ನು ನಿನ್ನ ಕೆಲಸದ ಬಗ್ಗೆ ಹೊರಗೆಲ್ಲೂ ಹೇಳುವ ಹಾಗೂ ಇಲ್ಲ. ನಿನ್ನ ಜೀವನಪೂರ್ತಿ ಅದೊಂದು ರಹಸ್ಯವಾಗಿರುತ್ತೆ. ಆದರೆ ನೀನು ಆ ಉದ್ಯೋಗ ಮಾಡೋದು ನಿನಗಾಗಿ ಅಥವಾ ಕುಟುಂಬಕ್ಕಾಗಿ ಅಲ್ಲ; ಬದಲು ದೇಶಕ್ಕಾಗಿ. ಅದೊಂದು ಮಹೋನ್ನತ ಉದ್ಯೋಗ.”
“ಯಾ..ಯಾರು ನೀವು?”
“ರಾ ಅಧಿಕಾರಿಗಳು. ದೇಶದ ಹಿತ ಕಾಯುವ ಬೇಹುಗಾರರು.”

ರವೀಂದ್ರ ಕೌಶಿಕ್ ಬೆಚ್ಚಿಬಿದ್ದ. ಹಣೆಯ ನೆರಿಗೆಯ ಮೇಲೆ ಬೆವರಿನ ತೋರಣ ಕಟ್ಟಿತು. ಇವರು ನನ್ನನ್ನು ಯಾಕೆ ಟಾರ್ಗೆಟ್ ಮಾಡಿದ್ದಾರೆ? ಎರಡು-ಮೂರು ಸಾವಿರ ವಿದ್ಯಾರ್ಥಿಗಳಿರುವ ಕಾಲೇಜಿನ ಕ್ಯಾಂಪಸ್ಸಿನಲ್ಲಿ ನಾನೊಬ್ಬ ಗುಂಪಿನಲ್ಲಿ ಗೋವಿಂದನಾಗಿರುವ ಸಾಮಾನ್ಯ ಯುವಕ. ಕಾಮರ್ಸ್ ಪದವಿ ಮಾಡುತ್ತಿದ್ದೇನೆ. ಆಗೀಗ ಕಾಲೇಜಿನ ಟ್ಯಾಲೆಂಟ್ ಶೋಗಳಲ್ಲಿ ಸಣ್ಣಪುಟ್ಟ ಪ್ರಹಸನ ಮಾಡಿದ್ದುಂಟು. ಮೂರುದಿನದ ಹಿಂದೆ ಒಂದು ಕಾರ್ಯಕ್ರಮದಲ್ಲಿ, ಚೀನಾದ ಸೈನಿಕರಿಗೆ ಸಿಕ್ಕಿಯೂ ರಹಸ್ಯಗಳನ್ನು ಬಿಟ್ಟುಕೊಡದ ಭಾರತೀಯ ಸೈನಿಕನ ಪಾತ್ರ ಮಾಡಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದ್ದೆ. ಅಷ್ಟೆ! ಅಷ್ಟು ಮಾಡಿದ್ದು ಬಿಟ್ಟರೆ ನನಗೆ ಈ ಸೇನೆ, ರಕ್ಷಣೆ, ಬೇಹುಗಾರಿಕೆ ಇವೆಲ್ಲ ಏನೇನೂ ಗೊತ್ತಿಲ್ಲ. ನನ್ನಲ್ಲಿ ಯಾವ ಮಹಾಗುಣ ನೋಡಿ ಈ ಅಧಿಕಾರಿಗಳು ಬೆನ್ನು ಬಿದ್ದಿದ್ದಾರೆ? RK ಚಿಂತೆಗೆ ಬಿದ್ದ.

ಮತ್ತಷ್ಟು ಓದು »