ವಿಷಯದ ವಿವರಗಳಿಗೆ ದಾಟಿರಿ

Posts tagged ‘ರೋಹಿತ್ ಚಕ್ರತೀರ್ಥ’

26
ಜುಲೈ

ಪುಸ್ತಕ ವಿಮರ್ಶೆ: ನಭಾರಣ್ಯದ ಮಾಯಾಮೃಗ

– ನಾಗೇಶ್ ಕುಮಾರ್ ಸಿ ಎಸ್

4597ಬಾಹ್ಯಾಕಾಶ ವಿಜ್ಞಾನದ ಅಧ್ಯಯನವನ್ನು “ರಾಕೆಟ್ ಸೈನ್ಸ್” ಎಂಬ ಲೇಬಲ್ ಹಚ್ಚಿ ಕ್ಲಿಷ್ಟಾತಿ-ಕ್ಲಿಷ್ಟ ವಿಷಯವೆನ್ನುವಂತೆ  ವಿಡಂಬನೆಗಾಗಿಯೂ ನಾವು ಸಾಮಾನ್ಯವಾಗಿ ಬಳಸುವುದುಂಟು. ಇಂತಹ ಖಗೋಳ ಶಾಸ್ತ್ರದ ಬೆರಗುಗೊಳಿಸುವಂತಾ ಹಲವು ಬಾಹ್ಯಾಕಾಶ ಸಂಬಂಧಿ ವೈವಿಧ್ಯಮಯ ಲೇಖನಗಳನ್ನು ಹೊಂದಿ ಮೈವೆತ್ತಿಕೊಂಡಿರುವ ಪುಸ್ತಕ: ಚಿರಪರಿಚಿತ ಜನಪ್ರಿಯ ಲೇಖಕ ರೋಹಿತ್ ಚಕ್ರತೀರ್ಥರವರ ನಭಾರಣ್ಯದ ಮಾಯಾಮೃಗ.

ಯಾವನೇ ಮನುಷ್ಯನಾದರೂ ಬುದ್ದಿ ತಿಳಿದ ಮೇಲೆ ಸಹಜವಾಗಿಯೇ ತಾರೆಗಳ ವರ್ಣರಂಜಿತ ಪರದೆಯಾದ ಆಗಸವನ್ನು ದಿಟ್ಟಿಸಿ ” ಅಲ್ಲೇನಿರಬಹುದು?” ಎಂದು  ಸೋಜಿಗದಿಂದ ವಿಚಾರ ಮಾಡಲಿಕ್ಕೆ ಸಾಧ್ಯ. ಇಂದಿನ ಖಗೋಳ ಶಾಸ್ತ್ರದ ಪ್ರಚಲಿತ ವಿಷಯಗಳನ್ನು ಆಯ್ದುಕೊಂಡು, ದೇಶ-ಕಾಲ(space time), ಕಪ್ಪು ಕುಳಿ( black hole). ಅದೃಶ್ಯ ಶಕ್ತಿ ಡಾರ್ಕ್ ಎನರ್ಜಿ, ಕ್ವಾನ್ಟಮ್ ಮೆಕಾನಿಕ್ಸ್ ಬಗೆಗಿನ ಹಲವಾರು ಕಠಿಣ ಪ್ರಶ್ನೆಗಳಿಗೆ ಲೇಖಕರು ಒಂದೊಂದಾಗಿ ತಮ್ಮದೇ ಆದ ಮಣ್ಣಿನ ಸೊಗಡಿನ ಸರಳ ದಿನಬಳಕೆಯ ಕನ್ನಡದ ಉಪಮೆ ಉದಾಹರಣೆಗಳ ಮೂಲಕ ಉತ್ತರಿಸುತ್ತಾ ಹೋಗಿದ್ದಾರೆ. ಹಲವು ವೈಜ್ಞಾನಿಕ ಸಿದ್ಧಾಂತಗಳನ್ನೂ, ಆವಿಷ್ಕಾರಗಳನ್ನೂ ಸವಿವರವಾಗಿ ಪಟ್ಟಿ ಮಾಡಿ, ಎಲ್ಲವನ್ನೂ ನಿರ್ದಿಷ್ಟವಾದ ವಾದಸರಣಿಯಲ್ಲಿ ಮಂಡಿಸುತ್ತಾ, ಅಲ್ಲಲ್ಲಿ ಚಿತ್ರಲೇಖನಗಳನ್ನು ಅದಕ್ಕೆ ಬೆಂಬಲವಾಗಿ ನೀಡಿ, ಸಾಮಾನ್ಯ ಓದುಗನೂ ಕುತೂಹಲದಿಂದ ‘ಕವರ್ ಟು ಕವರ್’ ಓದಿಕೊಂಡು ಹೋಗುವಂತೆ ಪ್ರೇರೇಪಿಸಿದ್ದಾರೆ.

ರೋಹಿತ್ ಲೇಖನಿಯಿಂದ ಚಿಮ್ಮುವ ಕ್ಲಿಷ್ಟ ವಿಚಾರಗಳೂ ಸರಳ ಸುಂದರವಾಗಿ ನಮಗೆ ಸ್ಪಷ್ಟವಾಗುತ್ತಾ ಹೋಗುತ್ತವೆ. ವಿಜ್ಞಾನಿಗಳ ಅನ್ವೇಷಣೆಗಳ ಇತಿಹಾಸದಿಂದ ಸಂಗ್ರಹಿಸಲ್ಪಟ್ಟ ಉಪಯುಕ್ತ ವೈಜ್ಞಾನಿಕ ವಿಚಾರಗಳ ರೋಚಕ ಚಿತ್ರ ಈ ಪುಸ್ತಕದಲ್ಲಿದೆ, ಅದರಲ್ಲಿ ಆಸಕ್ತಿಯಿದ್ದ ಓದುಗರಿಗೆ ಇದು ಮೃಷ್ಟಾನ್ನ ಭೋಜನವೇ ಸರಿ!

ನನ್ನ ಮತ : 5/5

 

9
ಮಾರ್ಚ್

ಸಾಯದ ಹೊರತು ನಿಮಗವನ ಹೆಸರು ಕೂಡ ಗೊತ್ತಿರುವುದಿಲ್ಲ…

ರೋಹಿತ್ ಚಕ್ರತೀರ್ಥ
beggar-made-store-owner-cryಅವನೊಬ್ಬನಿದ್ದ. ತನ್ನ ಮನೆಯ ಒಂದು ಭಾಗದಲ್ಲಿ ಅಂಗಡಿ ಇಟ್ಟುಕೊಂಡಿದ್ದ. ಪ್ರತಿದಿನ ಬೆಳಗ್ಗೆ ಮನೆಯ ಒಳಗಿಂದ ಷಟರ್ ತೆಗೆದು ಅಂಗಡಿ ತೆರೆಯುತ್ತಿದ್ದ. ಆದರೆ ಪ್ರತಿದಿನ ಆ ಕಬ್ಬಿಣದ ಬಾಗಿಲನ್ನು ಮೇಲಕ್ಕೆ ಸರಿಸುವಾಗ ಆತನ ಕಣ್ಣಿಗೆ ಮೊದಲು ಬೀಳುತ್ತಿದ್ದದ್ದು, ಅಂಗಡಿಯ ಎದುರಿಗೇ ಮಲಗಿರುತ್ತಿದ್ದ ಒಬ್ಬ ಭಿಕ್ಷುಕ. ಕೆದರಿದ, ಎಣ್ಣೆ ಕಾಣದ ತಲೆಕೂದಲು, ಬಣ್ಣಗೆಟ್ಟ ಮುಖ, ಹಲವು ದಿನಗಳಿಂದ ಸ್ನಾನ ಕಾಣದ ಮೈ, ಹರಿದ ಪ್ಯಾಂಟು, ಪುಟ್ಟಮಕ್ಕಳು ಗೀಚಿದಂತಿರುವ ನೂರೆಂಟು ಗೆರೆಗೀಟುಗಳಿಂದ ಕೂಡಿದ ಹರಕುಮುರುಕು ಅಂಗಿ, ಪ್ರಕ್ಷಾಲನವಿಲ್ಲದೆ ರಸಿಕೆಕಟ್ಟಿದ ಕೆಂಡಗಣ್ಣು, ಬಾಯಿ ತೆರೆದರೆ ಬ್ರಹ್ಮಾಂಡದರ್ಶನ. ಅಂಥ ಒಬ್ಬ ಭಿಕಾರಿ ತನ್ನ ಅಂಗಡಿಯೆದುರು ಅಪಶಕುನದಂತೆ ಕೈಕಾಲು ಮುದುರಿಕೊಂಡು ನಿದ್ದೆ ಹೊಡೆಯುವುದನ್ನು ನೋಡಿ ಅಂಗಡಿಯ ಮಾಲಿಕನಿಗೆ ನಖಶಿಖಾಂತ ಕೋಪ ಬಂದುಬಿಡುತ್ತಿತ್ತು. “ಕತ್ತೇ ಭಡವಾ” ಎಂದು ಗಟ್ಟಿಯಾಗಿ ಕಿರುಚುತ್ತಿದ್ದ. ಆತನ ಗಂಟಲಿಗೆ ಬೆಚ್ಚಿಬಿದ್ದೆದ್ದ ಭಿಕ್ಷುಕ ಕಂಗಾಲಾಗಿ ದಿಕ್ಕಾಪಾಲಾಗಿ ಓಡಿಹೋಗುತ್ತಿದ್ದ.

ಆದರೆ ಅದು, ಒಂದು ದಿನದ ಮಟ್ಟಿಗೆ ಮಾತ್ರ. ಮರುದಿನ ಅಂಗಡಿ ಬಾಗಿಲು ತೆರೆಯುವಾಗ ಭಿಕ್ಷುಕನ ಸವಾರಿ ಅಲ್ಲಿ ಹಾಜರಿರುತ್ತಿತ್ತು. ಮತ್ತೆ ಮಾಲಿಕನ ಅರಚಾಟ ನಡೆಯುತ್ತಿತ್ತು. ಈ ಕ್ರಮ ಒಂದು ದಿನವೂ ತಪ್ಪದಂತೆ ನಡೆದುಕೊಂಡು ಬರುತ್ತಿತ್ತು. ಕೆಲವೊಮ್ಮೆ ಮಾಲೀಕ ದೊಡ್ಡ ದೊಣ್ಣೆ ಎತ್ತಿಕೊಂಡು ಬಂದು ಭಿಕ್ಷುಕನಿಗೆ ಬಾರಿಸುತ್ತಿದ್ದ. ಪೆಟ್ಟು ತಿಂದ ಭಿಕ್ಷುಕ ನೋವಿನಿಂದ ಕೈಕಾಲು ಬಡಿದುಕೊಂಡು ಓಡಿಹೋಗುತ್ತಿದ್ದ. ಇನ್ನು ಕೆಲವೊಮ್ಮೆ ಮಾಲೀಕ ಒಂದು ಬಕೆಟ್ ತಣ್ಣಗೆ ನೀರು ತಂದು ಈತನ ಮೈಮೇಲೆ ಸುರಿಯುತ್ತಿದ್ದ. ಮತ್ತೆ ಕೆಲವೊಮ್ಮೆ ಬೂಟು ಹಾಕಿಕೊಂಡು ಬಂದು ಮಲಗಿ ಗೊರಕೆ ಹೊಡೆಯುತ್ತಿದ್ದವನನ್ನು ಒದ್ದದ್ದೂ ಉಂಟು. ಒಮ್ಮೆ, ಅಂಗಡಿಯ ಬಾಗಿಲು ತೆಗೆಯುವಾಗ, ಮೂತ್ರವಿಸರ್ಜನೆಯ ವಾಸನೆ ಮಾಲೀಕನ ಮುಖಕ್ಕೆ ಹೊಡೆಯಿತು. ಈ ದರಿದ್ರ ಮನುಷ್ಯ ಇಲ್ಲಿ ಮಲಗುವುದು ಮಾತ್ರವಲ್ಲದೆ ತನ್ನ ದೇಹಬಾಧೆಗಳನ್ನೂ ತೀರಿಸಿಕೊಳ್ಳುತ್ತಾನೆಂದು ಅವತ್ತು ಅವನಿಗೆ ಮೈಯೆಲ್ಲ ಉರಿದಿತ್ತು. ಕೈಗೆ ಸಿಕ್ಕಿದ್ದನ್ನೆಲ್ಲ ಆ ಭಿಕ್ಷುಕನ ಮೇಲೆ ಎತ್ತಿಹಾಕಿ ತನ್ನ ಕೋಪ ತೋರಿಸಿದ್ದ.

ಮತ್ತಷ್ಟು ಓದು »