ಮೂರ್ತಿಗಳೇ.ಯಾರ ಸರ್ಕಾರ ಮತ್ತು ಯಾರು ಫ್ಯಾಸಿಸ್ಟ್ ಗಳು?
– ರಾಕೇಶ್ ಶೆಟ್ಟಿ
ಇವತ್ತಿನ ಕನ್ನಡ ಪ್ರಭದಲ್ಲಿ ಪ್ರಕಟವಾದ ನನ್ನ ಲೇಖನದ ಪೂರ್ಣ ಭಾಗವಿದು.ಈ ಲೇಖನವನ್ನು ಮೂರ್ತಿಗಳಿಗೂ ಮೇಲ್ ಮಾಡಿದ್ದೇನೆ.
“ಮೋದಿಯನ್ನು ಫ್ಯಾಸಿಸ್ಟ್” ಅಂತ ಮಾತು ಮಾತಿಗೆ ಕರೆಯುತ್ತಿರುವ,ನಾಡಿನ ಸಾಕ್ಷಿ ಪ್ರಜ್ಞೆ ಎಂದು ತಮ್ಮ ಶಿಷ್ಯ ವೃಂದದಿಂದ ಕರೆಸಿಕೊಳ್ಳುವ ನಮ್ಮ ಅನಂತಮೂರ್ತಿಗಳು,ಇತರ ಪ್ರಗತಿಪ್ರರು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಗೆಳೆಯರು ಉತ್ತರಿಸಬೇಕಾದ ಪ್ರಶ್ನೆಗಳು. ಉತ್ತರದ ನಿರೀಕ್ಷೆಯಿದೆ…
ಎಲ್ಲಾ ಸಮೀಕ್ಷೆಗಳನ್ನು ಹುಸಿ ಮಾಡಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಏಕಾಂಗಿಯಾಗಿ ಅಭೂತಪೂರ್ವ ಜಯ ದಾಖಲಿಸಿದೆ. ಮೋದಿಯವರ ಗೆಲುವಿನ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅಭಿಮಾನಿಗಳ ಖುಷಿಯೂ ಮುಗಿಲು ಮುಟ್ಟಿದೆ.ಈ ಖುಷಿಯ ನಡುವೆ ಮುಖ್ಯವಾಗಿ ಪ್ರಸ್ತಾಪವಾಗುತ್ತಿರುವುದು “ನರೇಂದ್ರ ಮೋದಿ ಪ್ರಧಾನಿಯಾದರೆ ತಾವು ಭಾರತದಲ್ಲಿ ಇರಲು ಇಚ್ಛೆ ಪಡುವುದಿಲ್ಲ” ಎಂದು ನೀವು ಕಳೆದ ವರ್ಷದ ಸೆಪ್ಟಂಬರ್ ತಿಂಗಳಿನಲ್ಲಿ ನೀಡಿದ್ದ ಹೇಳಿಕೆ.
ಸಾಹಿತಿಗಳಿಕೇ ರಾಜಕೀಯ ಉಸಾಬರಿ ಅನ್ನುವುದು ಕೆಲವರು ವಾದವಾದರೆ,ಅದಕ್ಕೆ ಪ್ರತಿಯಾಗಿ ಸಾಹಿತಿಗಳಾದವರಿಗೂ ವೈಯುಕ್ತಿಕ ನಿಲುವುಗಳಿದ್ದರೇನು ತಪ್ಪು ಅನ್ನುವ ಪ್ರತಿವಾದವೂ ಕೇಳಿಬರುತ್ತಿದೆ.ಒಂದು ಕ್ಷಣಕ್ಕೆ ಮೂರ್ತಿಗಳ ರಾಜಕೀಯ ನಿಲುವುಗಳನ್ನು ಬದಿಗಿಡೋಣ.ಬುದ್ದಿಜೀವಿಗಳಾದ ಮೂರ್ತಿಗಳಿಗೆ ಮತ್ತವರ ಸೆಕ್ಯುಲರ್ ಸಾಹಿತಿಗಳ ತಂಡಕ್ಕೆ,ನಾಡಿನ ಬೌದ್ಧಿಕ ವಲಯದ ವಿಷಯವೊಂದರ ಮೂಲಕ ಒಂದಿಷ್ಟು ಬಹಿರಂಗ ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರ ಬಯಸೋಣ.
ನಾಡಿನ ಸಾಕ್ಷಿ ಪ್ರಜ್ಞೆ ಎಂದು ತಮ್ಮ ಶಿಷ್ಯ ವೃಂದದಿಂದ ಕರೆಸಿಕೊಳ್ಳುವ ನಮ್ಮ ಅನಂತ ಮೂರ್ತಿಗಳು,ಇತ್ತೀಚಿನ ದಿನಗಳಲ್ಲಿ ಈ ನಾಡಿನ ತಲ್ಲಣಗಳೆಲ್ಲವಕ್ಕೂ ನಿಜವಾಗಿಯೂ ಸ್ಪಂದಿಸಿದ್ದಾರೆಯೇ? ಉತ್ತರ : ಬಹುಷಃ ಇಲ್ಲವೆನ್ನಬಹುದು.
“ಓಲೈಕೆ ಮತ್ತು ತುಷ್ಟೀಕರಣ” ಜಾತ್ಯಾತೀತತೆಯ ಸಂಕೇತಗಳೇ?
– ಮು ಅ ಶ್ರೀರಂಗ ಬೆಂಗಳೂರು
ಒಂದು ರಾಜಕೀಯ ಧೋರಣೆಗೆ ಕಂಕಣಬದ್ಧವಾದ “ಹೊಸತು”ಎಂಬ ಮಾಸಪತ್ರಿಕೆಯ ಜುಲೈ ೨೦೧೩ರ ಸಂಚಿಕೆಯಲ್ಲಿ “ಆಧುನಿಕೋತ್ತರವಾದವೂ ಸಿ. ಎಸ್. ಎಲ್. ಸಿ. ಚಿಂತನಾಕ್ರಮವೂ”ಎಂಬ ಲೇಖನವನ್ನು ಬೆಂಗಳೂರಿನ ಕೆ. ಪ್ರಕಾಶ್ ಎಂಬುವವರು ಬರೆದಿದ್ದಾರೆ. ೫ ಪುಟಗಳಷ್ಟು ವಿಸ್ತಾರವಾದ ಆ ಲೇಖನದ ೧೬ ಪ್ಯಾರಾಗಳಲ್ಲಿ ಸುಮಾರು ೧೫ ಜನ ಬುದ್ಧಿಜೀವಿಗಳ,ಚಿಂತಕರ,ಉದ್ದುದ್ದದ ವಾಕ್ಯಗಳನ್ನು(ಉದ್ಧರಣೆಗಳು)ಪ್ರಕಾಶ್ ಅವರು ತಮ್ಮ ಲೇಖನಕ್ಕೆ “ಬಲ”ಬರಲಿ ಎಂದು ಉಪಯೋಗಿಸಿಕೊಂಡಿದ್ದಾರೆ. ಆ ದೊಡ್ಡ ದೊಡ್ಡ ವಾಕ್ಯಗಳ ನಡುವೆ “ಫಿಲ್ಲರ್”ತರಹ ತಮ್ಮ ನಾಲ್ಕೈದು ಸಾಲುಗಳನ್ನು ಸೇರಿಸಿದ್ದಾರೆ. ಆ “ಫಿಲ್ಲರ್”ಗಳ ಮುಖ್ಯ ಉದ್ದೇಶ ಕುವೆಂಪು ವಿ. ವಿ.ಯಲ್ಲಿನ ಸಿ ಎಸ್ ಎಲ್ ಸಿ ಯನ್ನು ಖಂಡಿಸುವುದಷ್ಟೇ ಆಗಿದೆ.
“ಮಡೆ ಸ್ನಾನ”ದಿಂದ ಪ್ರಾರಂಭವಾಗುವ ಈ ಲೇಖನ ಕೊನೆಗೆ ಬಂದು ನಿಲ್ಲುವುದು “ವಚನಗಳು vs ಜಾತಿ ವ್ಯವಸ್ಥೆ”ಬಗ್ಗೆ “ಪ್ರಜಾವಾಣಿ”ಪತ್ರಿಕೆಯಲ್ಲಿ ಸುಮಾರು ಮೂರು ತಿಂಗಳಿನಷ್ಟು ಕಾಲ ನಡೆದ ವಾದ-ಪ್ರತಿವಾದದ “ಅನುಭವ ಮಂಟಪದಲ್ಲಿ”. ಪ್ರಕಾಶ್ ಅವರು ತುಂಬಾ ಆರಾಧಿಸುವ ಪ್ರೊ। ಐಜಾಜ್ ಅಹ್ಮದ್ ಅವರೇ “ಆಧುನಿಕೋತ್ತರವಾದವು ಹಲವು ವಿಭಿನ್ನ ಎಳೆಗಳಿಂದ ರಚಿತವಾಗಿದ್ದು ಅದನ್ನು ಒಂದು ಸುಸಂಬದ್ಧ ಚಿಂತನೆಯಾಗಿ ಮಂಡಿಸುವುದು ಕಷ್ಟ ಎಂದು ಎಚ್ಚರಿಸುತ್ತಲೇ ಅದರ ಪ್ರಮುಖ ಲಕ್ಷಣಗಳನ್ನು ಗುರುತಿಸುತ್ತಾರಂತೆ”(ಹೊಸತು ಜುಲೈ ೨೦೧೩ ಪುಟ ೩೦). ಸಿ ಎಸ್ ಎಲ್ ಸಿ ಯದೂ ಆ ಹಲವು ಹಾದಿಗಳಲ್ಲಿ ಒಂದು ಎಳೆ ಎಂದು ಪ್ರಕಾಶ್ ಅವರು ಒಪ್ಪಿಕೊಳ್ಳಲು ಸಿದ್ದರಿಲ್ಲ.
ಬಸವ ಚಳುವಳಿಯನ್ನು ಕಾಡುತ್ತಿರುವ ಸಾಹಿತ್ಯ ಲೋಕದ ಬು(ಲ)ದ್ಧಿ ಜೀವಿಗಳು !
– ವಿಶ್ವಾರಾಧ್ಯ ಸತ್ಯಂಪೇಟೆ, ಶಹಾಪುರ
ಇಷ್ಟು ದಿನಗಳವರೆಗೆ ಧಾರ್ಮಿಕ ಲೋಕದ ಗುಂಗಾಡುಗಳು ಬಸವಣ್ಣನರನ್ನು ಕಾಡುತ್ತಿದ್ದವು. ಅವರು ರಚಿಸಿದ ವಚನಗಳಿಗೆ ತದ್ವಿರುದ್ಧವಾಗಿ ತಾವು ಬದುಕಿದ್ದಲ್ಲದೆ ತಮ್ಮ ಭಕ್ತರ ಹಿಂಡನ್ನು ತಮ್ಮ ಹಿಂದೆ ಕಟ್ಟಿಕೊಂಡು ಬಸವಾದಿ ಶರಣರಿಗೆ ಸಾಕಷ್ಟು ಅಪಚಾರ ಮಾಡಿದ್ದರು. ಇದೀಗ ಸಾಹಿತ್ಯ ಲೋಕದ ಗುಂಗಾಡುಗಳೂ ತಾವೇನು ಕಡಿಮೆ ಇಲ್ಲ ಎಂದು ಬಸವಣ್ಣನವರನ್ನು ಹಾಗೂ ಅವರು ಬರೆದ ವಚನ ಸಾಹಿತ್ಯವನ್ನು ಪರಾಮರ್ಶಿಸುವ ಎಗ್ಗತನ ತೋರುತ್ತ, ಇಲ್ಲ ಸಲ್ಲದ ಕುಯುಕ್ತಿಗಳನ್ನು ನಡೆಸಿದ್ದಾರೆ. ಹಲವಾರು ವರ್ಷಗಳಿಂದ ಬಸವಣ್ಣನವರ ಕುರಿತು ಪರಾಮರ್ಶಿಸುವ ಬುದ್ದಿವಂತಿಕೆಯನ್ನು ತೋರುತ್ತಿರುವ ಬುದ್ಧಿಜೀವಿ ವೇಷದಾರಿ ಬರಹಗಾರರು ಸಮಯ ಸಿಕ್ಕಾಗಲೆಲ್ಲ ಬಸವಣ್ಣನವರ ಮೇಲೆ ಕೆಸರನ್ನು ಎರಚುತ್ತ ತಾವು ದೊಡ್ಡವರಾಗಬೇಕೆಂಬ ಹುನ್ನಾರ ನಡೆಸಿದ್ದು ಎಲ್ಲರಿಗೂ ಗೊತ್ತಿರುವಸಂಗತಿಯೆ ಆಗಿದೆ.
ಹಿಂದೊಮ್ಮೆ ಗುಲ್ಬರ್ಗಾದ ಕಪಟರಾಳ ಕೃಷ್ಣರಾವ್ ಎಂಬ ಸಂಶೋಧಕನೋರ್ವ ಅನುಭವ ಮಂಟಪವೇ ಇಲ್ಲ ಎಂದು ಸಂಶೋಧಿಸಿ ಹೇಳಿದ್ದ. ಆಗ ಲಿಂಗಾಯತ ಧರ್ಮದವರೆಂದು ಸೋಗುಹಾಕಿರುವ ಸೋಗಲಾಡಿ ಗುರು- ಜಗದ್ಗುರುಗಳೆಲ್ಲ ತಮ್ಮ ತುಟಿಗಳನ್ನು ಹೊಲಿದುಕೊಂಡು ತೆಪ್ಪಗಿದ್ದರು. ಅರೆಬರೆ ಜ್ಞಾನದ ಲಿಂಗವಂತ ಸಮಾಜದ ಜನಗಳು ‘ನಮಗೂ ಬಸವಣ್ಣನವರಿಗೂ ಯಾವ ಬಾದರಾಯಣ ಸಂಬಂಧ ?’ ಎಂದುಕೊಂಡು ಕಪಟರಾಳರ ಕಪಟತನವನ್ನು ಪ್ರಶ್ನಿಸಲು ಹೋಗಲಿಲ್ಲ. ಈಗೀಗ ಬುದ್ದಿಜೀವಿಗಳೆಂದು ತಮ್ಮಷ್ಟಕ್ಕೆ ತಾವೇ ಕರೆದುಕೊಂಡಿರುವ ಕೆಲವು ಸೋಕಾಲ್ಡ ಜನಗಳು ಬಸವಣ್ಣನವರ ಘನ ವ್ಯಕ್ತಿತ್ವವನ್ನು ಸಂಶೋಧಿಸುತ್ತಿದ್ದೇವೆ ಎಂಬ ನೆವದಲ್ಲಿ ಸಾಕಷ್ಟು ಘಾಸಿಯನ್ನುಂಟುಮಾಡಿದ್ದಾರೆ. ‘ಮಹಾಚೈತ್ರ’ ಕೃತಿಯ ಮೂಲಕ ಎಚ್.ಎಸ್. ಶಿವಪ್ರಕಾಶ, ‘ಆನುದೇವ ಹೊರಗಣದವನು’ ಪುಸ್ತಕದ ಮೂಲಕ ಬಂಜಗೇರಿ ಜಯಪ್ರಕಾಶ, ‘ಧರ್ಮಕಾರಣ’ದ ಮೂಲಕ ಪಿ.ವಿ.ನಾರಾಯಣ ಮುಂತಾದವರು ತಮ್ಮ ಮೂಗಿನ ನೇರಕ್ಕೆ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಈಗಾಗಲೇ ಮೂತಿಗೆ ಇಕ್ಕಿಸಿಕೊಂಡಿದ್ದಾರೆ.
ಆದರೂ ಇತ್ತೀಚೆಗೆ ಬಾಲಗಂಗಾಧರ ಮತ್ತು ಡಂಕಿನ್ ಝಳಕಿ ಎಂಬ ಮಹಾಶಯರುಗಳು ವಚನಕಾರರು ಜಾತಿ ವಿರೋಧಿಗಳಾಗಿದ್ದರು ಎಂಬ ಅಭಿಪ್ರಾಯವು ಆಧುನಿಕ ಸಂದರ್ಭದಲ್ಲಿ ವೀರಶೈವರು ವಸಾಹತುಶಾಹಿ ಪಾಶ್ಚಾತ್ಯ ಚಿಂತಕರ ಪ್ರಭಾವದಿಂದ ಕಟ್ಟಿಕೊಂಡ ಪ್ರಮೇಯವಾಗಿದೆ ಎಂದು ವಾದಿಸುತ್ತಾರೆ. ಜೊತೆಗೆ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವುದು ವಚನಕಾರರ ಮೂಲಭೂತ ಗುರಿಯಾಗಿತ್ತು ಎನ್ನುವುದು ಅಸಂಬದ್ಧ ತರ್ಕವಾಗಿದೆ ಎಂದೂ ಜೊತೆಗೆ ಅದು ಬ್ರಾಹ್ಮಣ ವಿರೋಧಿ ಚಳುವಳಿಯ ಅಭಿವ್ಯಕ್ತಿಗಳೆಂದು ಹೇಳಲು ವಚನಗಳಲ್ಲಿಯೇ ಆಧಾರವಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಕೆಲವು ಜನ ಸೋಕಾಲ್ಡ ಬು(ಲ)ದ್ದಿ ಜೀವಿಗಳು ವಚನಗಳ ಬಗ್ಗೆ ಹೊಸ ಚಿಂತನೆ ಮತ್ತು ಚರ್ಚೆಗಳಿಗೆ ಅನುವುಮಾಡಿಕೊಟ್ಟದ್ದಕ್ಕೆ ಧನ್ಯವಾದಗಳನ್ನೂ ಅರ್ಪಿಸಿದ್ದು ಅವರ ಎಬಡತನಕ್ಕೆ ಸಾಕ್ಷಿಯಾಗಿದೆಯೆಂದರೂ ತಪ್ಪಾಗುವುದಿಲ್ಲ.
“ಡುಂಢಿ” ಅನ್ನುವ ಕೃತಿ ಮತ್ತು “ಸೆಕ್ಯುಲರಿಸಂ” ಅನ್ನುವ ಅವಕಾಶವಾದ …!
– ರಾಕೇಶ್ ಶೆಟ್ಟಿ
“ಡುಂಢಿ”ಯ ಬಗ್ಗೆ ಗೆಳೆಯರೊಬ್ಬರ ಜೊತೆ ಮಾತನಾಡುತಿದ್ದೆ. ಅವರು “Immortals of Meluha” ಪುಸ್ತಕವನ್ನು ಉಲ್ಲೇಖಿಸಿ, “ಆ ಪುಸ್ತಕದಲ್ಲಿ ಶಿವ, ಗಾಂಜಾ ಸೇದುತ್ತಾನೆ,ಟಿಬೆಟಿಯನ್ ಮೂಲದವನು ಅಂತ ಬರೆದಿತ್ತು ಅದು ಭರ್ಜರಿ ಸೇಲ್ ಆಗಿತ್ತು.ಈ ಡುಂಢಿ ಪ್ರಿಂಟ್ ಹಾಕಿಸಿದ್ದೇ ೧೫೦-೨೦೦ ಪ್ರತಿಯಂತಲ್ಲ” ಅಂದರು. ನಾನಂದೆ “ನಿಮಗೆ, ’ದೇವರ ಪಾಲಿಟಿಕ್ಸ್’ ಅರ್ಥವಾಗಿಲ್ಲ. ಆ ಪುಸ್ತಕದಲ್ಲಿ ಶಿವನನ್ನು, ’ಟಿಬೆಟಿಯನ್’ ಅನ್ನುವ ಬದಲೋ ’ಬ್ರಾಹ್ಮಣ/ಆರ್ಯ’ ಅಂತೇನಾದರೂ ಚಿತ್ರಿಸಿದ್ದರೇ ಈಗ ಡುಂಢಿಯ ಪರ ಮಾತನಾಡುತ್ತಿರುವ ಕರ್ನಾಟಕದ ಸೋ-ಕಾಲ್ಡ್ ಸೆಕ್ಯುಲರ್ ಗಳೆಲ್ಲ ಆ ಪುಸ್ತಕದ ವಿರುದ್ಧ ಮಾತನಾಡುತಿದ್ದರು”.
“ಒಬ್ಬ ನಕಲಿಯೋ ಅಥವಾ ಹಲವಾರು ಅಸಲಿಗಳ ಒಂದು ಸಂಕೇತವೊ ಆಗಿರುವ ಗಣಪತಿಯನ್ನು ಕುರಿತು ಹಲವು ಪುರಾಣಗಳು ಹಲವಾರು ರೀತಿಯ ಕಥೆಗಳನ್ನು ಹೇಳಿವೆ. ಈ ಢುಂಢೀಯೂ ಹಾಗೇ ಒಂದು ಮನೋರಂಜನೆ ಅಥವಾ ವಿಚಾರಕ್ಕೆ ಹಚ್ಚಬಹುದಾದ, ನಿಜವೆಂದು ನಂಬಲು ಇಷ್ಟ ಪಡುವ ಹೂರಣದ ಒಂದು ಕಲ್ಪನೆಯ ಪುರಾಣವೇ.” ಅನ್ನುವ ಮಾತುಗಳನ್ನಿಟ್ಟುಕೊಂಡ “ಡುಂಢಿ” ಅನ್ನುವ ಕೃತಿಯನ್ನು ಓದದೇ ಅದು ಕೃತಿಯೋ,ವಿಕೃತಿಯೋ ಅಂತ ನಿರ್ಧಾರ ಮಾಡುವುದು ಹೇಗೆ? ಅನ್ನುವ ಪ್ರಶ್ನೆಯನ್ನು ಮುಂದಿಡುತ್ತ ಮತ್ತು ಒಬ್ಬ ಲೇಖಕನನ್ನು ಬಂಧಿಸುವಂತ ಮಟ್ಟದವರೆಗೂ ಹೋಗಿದ್ದನ್ನು ವಿರೋಧಿಸುತ್ತಲೇ,ಈ ಮಾತು ಕೇಳುತಿದ್ದೇನೆ.ನಾನು ನನ್ನ ಗೆಳೆಯರಿಗೆ ಹೇಳಿದ ಮಾತಿನಲ್ಲಿ ಸತ್ಯವಿರಬಹುದು ಅಂತ ನಿಮಗೂ ಅನ್ನಿಸುವುದಿಲ್ಲವೇ? (“ಶಿವ”ನಮ್ಮವನು ಅವನನ್ನು ಹೈಜಾಕ್ ಮಾಡಿದ್ದಾರೆ ಅಂತ ಬರೆದವರನ್ನೂ ನೋಡಿದ್ದೇನೆ. ದೇವರನ್ನೂ ಈ ಮಂದಿ ತಮ್ಮ ಗುಂಪಿನೊಳಗೆ ಸೇರಿಸಿಕೊಳ್ಳುತ್ತಾರೆ ಶಿವಾ ಶಿವಾ…!)
CSLC ಯ ಸಂಶೋಧನೆ ಮತ್ತು ಪ್ರಗತಿಪರರ ಫ್ಯಾಸಿಸ್ಟ್ ಧೋರಣೆ
ಅಲ್ಲಿಯವರೆಗೂ ಸುಖಾ ಸುಮ್ಮನೆ ಭೂಮಿಯ ಸುತ್ತ ಗಿರಕಿ ಹೊಡೆಯುತಿದ್ದ ಸೂರ್ಯನಿಗೆ ಸುತ್ತುವುದರಿಂದ ಮುಕ್ತಿ ಕೊಡಿಸಿ,’ಭೂಮಿಯೇ ಸೂರ್ಯನ ಸುತ್ತ ಸುತ್ತುತ್ತಿದೆ’ ಅಂದವನು ಕೋಪರ್ನಿಕಸ್. ಅವನ ಕೆಲಸವನ್ನ ಮುಂದುವರಿಸಿದವರು ಗೆಲಿಲಿಯೋ ಮತ್ತು ಬ್ರುನೋ.ಈ ಮೂವರು ಬರುವವರೆಗೂ ಸೂರ್ಯನೇ ಭೂಮಿಯ ಸುತ್ತ ಸುತ್ತುತ್ತಾನೆ ಅಂತಲೇ ಜನರು ನಂಬಿದ್ದರು.ಅದೇ ಜನರ ಮಧ್ಯದಿಂದ ಎದ್ದು ಬಂದು,’ಇಲ್ಲ ಸ್ವಾಮಿ ಭೂಮಿಯೇ ಸುತ್ತೋದು’ ಅಂದಿದ್ದ ಕೋಪರ್ನಿಕಸ್ ಅದೇ ಜನರಿಂದ ಹುಚ್ಚ ಅನ್ನಿಸಿಕೊಂಡಿದ್ದ.ಅವನ ನಂತರ ಬಂದ ಗೆಲಿಲಿಯೋ ಮತ್ತು ಬ್ರುನೋ ಸಹ ಕೋಪರ್ನಿಕಸ್ ವಾದಕ್ಕೆ ಸೈ ಅಂದರು.
ಸಮಾಜದ ನಂಬಿಕೆಯ ಬುಡವನ್ನು ಅಲುಗಾಡಿಸುವ ಯಾವುದೇ ಪ್ರಯತ್ನಕ್ಕೆ ದೊಡ್ಡ ಮಟ್ಟದಲ್ಲೇ ಅಡೆ-ತಡೆಗಳು ಎದುರಾಗಬೇಕಲ್ಲವೇ? ಗೆಲಿಲಿಯೋ,ಬ್ರೂನೋಗು ಅದೇ ಆಯಿತು. ಇವರ ಸಂಶೋಧನೆಯಿಂದ ಕನಲಿ ಕೆಂಡವಾದ ಪೋಪ್ ಎಂಟನೇ ಅರ್ಬನ್,“Heliocentric System” ಅನ್ನುವುದೇ ಸುಳ್ಳು ಎಂದು ಸಾರ್ವಜನಿಕವಾಗಿ ಗೆಲಿಲಿಯೋ ಮತ್ತು ಬ್ರೂನೋನನ್ನು ಖಂಡಿಸಿ, ಅವರಿಬ್ಬರ ಸಂಶೋಧನೆಗೂ ನಿರ್ಬಂಧವನ್ನೂ ಹೇರಿದರು.
ಗೆಲಿಲಿಯೋನನ್ನು ಜೈಲಿಗೂ ತಳ್ಳಲಾಯಿತು, ಸಾಯುವವರೆಗೂ ಗೃಹ ಬಂಧನದಲ್ಲಿರಿಸಲಾಯಿತು.1642ರಲ್ಲಿ ಗೆಲಿಲಿಯೋ ಮರಣವನ್ನಪ್ಪಿದಾಗ ಆತನನ್ನು ಕ್ರೈಸ್ತರ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡುವುದಕ್ಕೂ ಬಿಡಲಿಲ್ಲ.ಇನ್ನು ಬಾಹ್ಯಾಕಾಶವೆಂಬುದು Finite ಅಲ್ಲ, Infinite. ಅದಕ್ಕೆ ಕೊನೆಯೇ ಇಲ್ಲ ಎಂದು ವಾದಿಸುವ ಧೈರ್ಯ ತೋರಿದ ಬ್ರೂನೋನನ್ನಂತೂ,೧೫೯೨ರಲ್ಲಿ ಬಂಧಿಸಿ ರೋಮನ್ ಕ್ಯಾಥೋಲಿಕ್ ಚರ್ಚ್‌ನ ನ್ಯಾಯಾಲಯದ(The Inquisition) ಮುಂದೆ 7 ವರ್ಷಗಳ ಕಾಲ ವಿಚಾರಣೆ ಗೊಳಪಡಿಸಿ, ಕೊನೆಗೆ ಉರಿವ ಜ್ವಾಲೆಯಲ್ಲಿ ಸುಡುವ ಮರಣದಂಡನೆಯನ್ನು ವಿಧಿಸಿದರು.
ಜಾತಿವ್ಯವಸ್ಥೆ ಇಲ್ಲ ಎಂದರೆ…
-ಡಾ. ಷಣ್ಮುಖ ಮತ್ತು ಡಾ. ಪ್ರವೀಣ
ಜಾತಿಗಳಿವೆ ಜಾತಿವ್ಯವಸ್ಥೆ ಇಲ್ಲ ಎಂದರೆ ಏನು? ಹಾಗಾದರೆ ಈ ಮೇಲು-ಕೀಳು, ತಾರತಮ್ಯ, ಶೋಷಣೆಗಳು ಇಲ್ಲ ಅಂತ ಹೇಳ್ತಾ ಇದೀರಾ? ಪದೇ ಪದೇ ನಮಗೆ ಇದುವರೆಗೂ ಎದುರಾಗಿರುವ (ಅಂತರ್ಜಾಲದ ಚರ್ಚೆಗಳಲ್ಲಿರಬಹುದು, ಸೆಮಿನಾರ್, ಕಾರ್ಯಾಗಾರಗಳಲ್ಲಿರಬಹುದು) ಕೆಲವೇ ಒಳ್ಳೆಯ ಪ್ರಶ್ನೆಗಳಲ್ಲಿ ಇವೂ ಕೂಡ. ಅವುಗಳ ಸುತ್ತ ಈ ಬರಹ ಚರ್ಚಿಸುವ ಪ್ರಯತ್ನ ಮಾಡುತ್ತದೆ.
ಜಾತಿಗಳಿಲ್ಲ ಎಂದು ವಾದಿಸುತ್ತಿರುವ ಮೂರ್ಖರ ಗುಂಪೊಂದು ಇದೆ ಎಂದು ಹೇಳುತ್ತಾ ಬಂದಿರುವುದನ್ನು ನೀವು ಕೇಳಿರುವ ಸಾಧ್ಯತೆ ಇದೆ. ಆಗ ನಿಮಗೂ ಅನಿಸಿರಬಹುದು -ಇವರೆಂಥ ಮೂರ್ಖರಯ್ಯ.! ಕಣ್ಮುಂದೆ ಕಾಣುವ ಸಂಗತಿಗಳನ್ನು ನಿರಾಕರಿಸುತ್ತಿರುವರಲ್ಲ! ಇದೆಂಥಾ ಸಂಶೋಧನೆ, ಇದರ ಹಿಂದೆ ಯಾವುದೋ ಹುನ್ನಾರ/ ಕುಯುಕ್ತಿ ಇದ್ದಿರಬಹುದು! ಅಂತಹ ಯಾವುದೇ ಪ್ರಮೇಯಗಳನ್ನು, ಹೇಳಿಕೆಗಳನ್ನು ಮಾಡಿರುವ ಒಂದೇ ಒಂದು ಉದಾಹರಣೆ ಕೂಡ ನಮ್ಮ ಗುಂಪಿನ ಬರಹಗಳಿಂದ ತೆಗೆದು ತೋರಿಸಲು ಸಾಧ್ಯವಿಲ್ಲ. ಹಾಗಿದ್ದರೂ ಈ ರೀತಿಯ ಆರೋಪಗಳು ಎಲ್ಲಿಂದ ಹೊರಟಿತು? ಹಾಗಾದರೆ ಜಾತಿಗಳ ಕುರಿತು ನಮ್ಮ ವಾದವೇನು? ಎಂಬ ಪ್ರಶ್ನೆಗಳು ಏಳುವುದು ಸಹಜ.
ಜಾತಿಯ ಕುರಿತ ನಮ್ಮ ವಾದವನ್ನು ಸರಳವಾಗಿ ಸಾರಾಂಶೀಕರಿಸುವುದಾದರೆ, ಭಾರತದಲ್ಲಿ ವಸಾಹತು ಪೂರ್ವದಿಂದಲೂ ಜಾತಿಗಳಿದ್ದವು, ಈಗಲೂ ಇವೆ.. ಇವುಗಳನ್ನು ಯೂರೋಪಿಯನ್ನರು ತೆಗೆದುಕೊಂಡು ಬಂದರು, ಇಲ್ಲಿ ಸೃಷ್ಟಿ ಮಾಡಿದರು ಎಂಬುದು ಸರಿಯಾದ ವಿವರಣೆಯಲ್ಲ. ಆದರೆ ಭಾರತೀಯ ಸಮಾಜವನ್ನು ನೋಡುವ ಒಂದು ನಿರ್ದಿಷ್ಟ ಚೌಕಟ್ಟನ್ನು ಯೂರೋಪಿಯನ್ನರು ನಿರ್ಮಿಸಿದರು. ಅದುವೇ “ಜಾತಿವ್ಯವಸ್ಥೆ”.
ಹಾಗಾದರೆ, ’ವ್ಯವಸ್ಥೆ’ಎಂದರೇನು? ಅವುಗಳ ಲಕ್ಷಣಗಳಾವುವು ?
ಸಾಮಾಜಿಕ ಸಂಶೋಧನೆ ಯಾಕಾಗಿ?
– ಪ್ರೊ.ಜೆ.ಎಸ್.ಸದಾನಂದ
{ಪ್ರಜಾವಾಣಿಯಲ್ಲಿ ಪ್ರಕಟವಾದ ದೇವನೂರು ಮಹಾದೇವ ಅವರ ಲೇಖನಕ್ಕೆ ಪ್ರತಿಕ್ರಿಯೆ, ಈ ಲೇಖನವನ್ನು ಪ್ರಜಾವಾಣಿಗೆ ಬಹಳ ಹಿಂದೆಯೇ ಕಳುಹಿಸಿದ್ದು ಪ್ರಜಾವಾಣಿಯಲ್ಲಿ ಮಾತ್ರ ಇನ್ನೂ ಪ್ರಕಟಿಸಲಾಗಿಲ್ಲ}
ದೇವನೂರು ಮಹಾದೇವ ಅವರ ಲೇಖನದಲ್ಲಿ (ಪ್ರಜಾವಾಣಿ ದಿನಾಂಕ: 29/4/2013) ನಮಗೆ ಕಾಣುವುದು ನಮ್ಮ ಸಂಶೋಧನೆಯ ಬಗ್ಗೆ ಇರುವ ಕೋಪ, ಅಸಹನೆ ಹಾಗೂ ತಿರಸ್ಕಾರ. ಇದಕ್ಕೆ ಕಾರಣವೇನು? ಅವರನ್ನು ಸ್ವಲ್ಪಮಟ್ಟಿಗೆ ಬಲ್ಲ ನನಗೆ ಅನಿಸುವುದಿಷ್ಟು. ಇಂತಹ ಸಿಟ್ಟು ಅಸಹನೆಗೆ ಮೂಲ ಕಾರಣ ಸಮಾಜದಲ್ಲಿರುವ ಅನ್ಯಾಯ, ಶೋಷಣೆ ಮುಂತಾದ ನಕಾರಾತ್ಮಕ ಅಂಶಗಳನ್ನು ಬುಡಸಮೇತ ಕಿತ್ತೊಗೆಯಬೇಕೆಂಬ ಗುರಿಯ ಬಗ್ಗೆ ಅವರಿಗಿರುವ ಬದ್ಧತೆ ಹಾಗೂ ಅಂತಹ ಅನ್ಯಾಯ, ಶೋಷಣೆಗಳಿಗೆ ಮೂಲ ಕಾರಣ ಯಾವುದು ಎನ್ನುವುದು ಎನ್ನುವುದರ ಕುರಿತು ಅವರಿಗಿರುವ ದೃಢ ನಂಬಿಕೆ. ಜಾತಿ ವ್ಯವಸ್ಥೆಯನ್ನು ಕಿತ್ತೊಗೆಯದ ಹೊರತು ನಮ್ಮ ಸಮಾಜದ ಅನ್ಯಾಯಗಳನ್ನು ಸರಿಪಡಿಸಲಾಗದು ಎನ್ನುವುದರ ಬಗ್ಗೆ ಅವರಿಗೆ ಯಾವ ಸಂಶಯವೂ ಇಲ್ಲ. ಅವರು ಮುಟ್ಟಬೇಕಾದ ಗುರಿ ಹಾಗೂ ಆ ನಿಟ್ಟಿನಲ್ಲಿ ಅವರು ಸಾಗುತ್ತಿರುವ ಮಾರ್ಗದ ನಡುವೆ ಯಾವ ವ್ಯತ್ಯಾಸವೂ ಅವರಿಗೆ ಕಾಣಿಸುವುದಿಲ್ಲ. ಹಾಗಾಗಿ ಸಾಗುತ್ತಿರುವ ಮಾರ್ಗದ ಕುರಿತು ಎತ್ತಲಾಗುವ ಪ್ರಶ್ನೆಗಳು ಮುಟ್ಟಬೇಕಾದ ಗುರಿಯನ್ನೇ ಪ್ರಶ್ನಾರ್ಹಗೊಳಿಸುವಂತೆ ಅಥವಾ ಅಂತಹ ಗುರಿಗಳಿಂದ ನಮ್ಮನ್ನು ವಿಮುಖಗೊಳಿಸುವ ಹುನ್ನಾರದಂತೆ ಅವರಿಗನಿಸುತ್ತಿದೆ.
ಅವರ ಈ ಅನಿಸಿಕೆ ಎಷ್ಟರಮಟ್ಟಿಗೆ ಸರಿ? ಈ ಪ್ರಶ್ನೆಗೆ ಉತ್ತರಿಸಬೇಕಾದರೆ ಬಾಲುರವರು ಭಾರತದಲ್ಲಿ ಜಾತಿವ್ಯವಸ್ಥೆ ಇಲ್ಲ ಎನ್ನುವ ಪ್ರಾಕ್ಕಲ್ಪನೆಯನ್ನು (ಇದೊಂದು ಸಂಶೋಧನೆಯ ಮುಖಾಂತರ ಸಾಬೀತಾಗಬೇಕಾದ ಪ್ರಾಕ್ಕಲ್ಪನೆ ಮಾತ್ರ) ಏಕೆ ಮುಂದಿಡುತ್ತಾರೆ ಎನ್ನುವುದರ ಹಿನ್ನೆಲೆಯನ್ನು ನಾವು ನೋಡಬೇಕು. ಭಾರತದಲ್ಲಿ ಜಾತಿವ್ಯವಸ್ಥೆಯ ಸ್ವರೂಪ ಹಾಗು ಅದರ ಪರಿಣಾಮಗಳ ಕುರಿತು ಈಗಾಗಲೇ ಅಸಂಖ್ಯಾತ ಸಂಶೋಧನಾ ಗ್ರಂಥಗಳು ಹೊರಬಂದಿವೆ. ಜಾತಿವ್ಯವಸ್ಥೆಯ ಸ್ವರೂಪದ ಬಗ್ಗೆ ವಿದ್ವಾಂಸರಲ್ಲಿ ಒಮ್ಮತದ ಅಭಿಪ್ರಾಯವನ್ನು ನಾವು ಕಾಣುವುದಿಲ್ಲ. ಅದಕ್ಕೆ ತದ್ವಿರುದ್ದವಾಗಿ ಭಾರತದಲ್ಲಿ ಎಲ್ಲಡೆ ಕಂಡುಬರುವ ಜಾತಿಗಳನ್ನು ಒಂದು ಚೌಕಟ್ಟಿನಲ್ಲಿಟ್ಟು ನೋಡಲು ಸಾಧ್ಯವಿಲ್ಲ ಎನ್ನುವುದುನ್ನು ಎಲ್ಲಾ ವಿದ್ವಾಂಸರೂ ಹೆಚ್ಚು ಕಡಿಮೆ ಒಪ್ಪುತ್ತಾರೆ. ಬಾಲು ಅವರ ಪ್ರಕಾರ ಇದ್ಕಕೆ ಮುಖ್ಯ ಕಾರಣ ಈ ಎಲ್ಲಾ ಸಂಶೋಧನೆಗಳು ಜಾತಿವ್ಯವಸ್ಥೆ ಎನ್ನುವುದು ಹಿಂದೂ ರಿಲಿಜನ್ನ ಪ್ರಧಾನ ಲಕ್ಷಣ ಎನ್ನುವ ಇದುವರೆಗೆ ಯಾವುದೇ ಸಂಶೋಧನೆಯಿಂದ ಸಾಬೀತಾಗದ ನಂಬಿಕೆಯನ್ನು ಆಧರಿಸಿವೆ. ಹಿಂದೂ ರಿಲಿಜನ್ ಎನ್ನುವುದು ಅಸ್ತಿತ್ವದಲ್ಲಿ ಇದೆ ಮತ್ತು ಭಾರತದಲ್ಲಿರುವ ಎಲ್ಲಾ ಜಾತಿಗಳು ಅದರ ನ್ಯೆತಿಕ ನಿರ್ಬಂಧದಲ್ಲಿ ಬಂದಿಸಲ್ಪಟ್ಟಿವೆ ಎನ್ನುವುದು ಒಂದು ಸಾಮಾನ್ಯ ನಂಬಿಕೆಯಾಗಿ ಮುಂದುವರೆದುಕೊಂಡು ಬಂದಿದೆಯೇ ಹೊರತು ಅದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳನ್ನು ಯಾರಿಗೂ ಕೊಡಲು ಸಾಧ್ಯವಾಗಿಲ್ಲ.
ಹೇಗೆ ಹೇಳಲಿ? ಏನು ಹೇಳಲಿ?
– ಪ್ರೊ.ರಾಜಾರಾಮ ಹೆಗಡೆ
ದೇವನೂರು ಮಹಾದೇವರವರ ಲೇಖನಕ್ಕೆ ಪ್ರತಿಕ್ರಿಯೆ {ಪ್ರಜಾವಾಣಿಯಲ್ಲಿ ಅಪ್ರಕಟಿತ ಲೇಖನ}
ದೇವನೂರು ಮಹಾದೇವರ ಪ್ರತಿಕ್ರಿಯೆಯನ್ನು ಓದಿದ ನಂತರ, ಅವರು ಏನನ್ನು ಹೇಗೆ ಹೇಳಿದ್ದಾರೆ ಎಂಬುದನ್ನು ಕಂಡ ನಂತರ ಅವರನ್ನು ಕಾಡಿದ ಆ “ಹೇಗೆ ಹೇಳಲಿ? ಏನು ಹೇಳಲಿ?” ಎಂಬ ಪ್ರಶ್ನೆ ಈಗ ಅವರದಕ್ಕಿಂತ ನನ್ನದೇ ಆಗಿದೆ. ಅವರು ನಮ್ಮ ಕುರಿತು ಏಕೆ ಇಂಥ ಭಾಷೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದು ಸ್ಪಷ್ಟ. ಅವರಿಗೆ ಸಿಟ್ಟಿದೆ. ದೇವನೂರರು ಒಂದು ಸಮೂಹದ ಹಿತದೃಷ್ಟಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ಅವರ ಜೀವನ ಈ ಕುರಿತಾಗಿಯೇ ಒಂದು ಹೋರಾಟ ಎಂದರೂ ತಪ್ಪಿಲ್ಲ. ಇಷ್ಟನ್ನು ಖಚಿತವಾಗಿ ಹೇಳಬಲ್ಲಷ್ಟು ನಾನು ಅವರನ್ನು ಬಲ್ಲೆ. ಹಾಗೂ ಅದನ್ನು ಗಮನಿಸುವುದು ಮುಂದಿನ ಸಂವಾದಕ್ಕೆ ನಿರ್ಣಾಯಕ ಎಂಬುದಾಗಿ ನನಗನಿಸುತ್ತದೆ. ಏಕೆಂದರೆ ಯಾರದೇ ಪ್ರಾಮಾಣಿಕತೆಯ ಮೇಲೆ ಅಪನಂಬಿಕೆಯನ್ನಿಟ್ಟು ಬೌದ್ಧಿಕ ಚರ್ಚೆಯನ್ನು ಪ್ರಾರಂಭಿಸುವುದರಿಂದ ಚರ್ಚಿಸತಕ್ಕ ವಿಷಯಕ್ಕೆ ನ್ಯಾಯ ಸಲ್ಲುವುದಿಲ್ಲ.
ನಮ್ಮ ದುರುದ್ದೇಶದ ಕುರಿತು ಅವರು ಕಟ್ಟಿಕೊಂಡಿರುವ ಚಿತ್ರಗಳನ್ನು ಅವರ ಲೇಖನದ ಮೂಲಕ ಗ್ರಹಿಸುತ್ತ ಹೋದಾಗ ನಮ್ಮ ಕುರಿತು ಯಾವ ರೀತಿಯ ಚಿತ್ರಣವು ಅವರ ವಲಯದಲ್ಲಿ ಗಟ್ಟಿಯಾಗುತ್ತಿದೆ ಎಂಬುದಕ್ಕೆ ಮತ್ತೊಂದು ದೃಷ್ಟಾಂತ ಸಿಕ್ಕಂತಾಯಿತು. ಹಾಗಂತ ಇದೇನೂ ನನಗೆ ಆಘಾತ ನೀಡಲಿಲ್ಲ. ಈ ಥೆರಪಿಯನ್ನು ನನಗೆ ಹಾಗೂ ನನ್ನ ಗುಂಪಿಗೆ ನಾವು ಬಾಲು ಜೊತೆ ಸೇರಿ ಸಂಶೋಧನೆ ಪ್ರಾರಂಭಿಸಿದಾಗಿನಿಂದಲೂ ನೀಡಲಾಗುತ್ತಿದೆ. ಸಂಶೋಧನೆ ಮಾಡುವುದು ಕೇವಲ ಬೌದ್ಧಿಕ ಪ್ರಶ್ನೆಯೊಂದೇ ಅಲ್ಲ, ಅದು ಪ್ರವಾಹದ ವಿರುದ್ಧ ಈಜುವ ಕೆಲಸ ಕೂಡ ಆಗಿದೆ ಎಂಬುದು ನಮಗೆ ಈಗಾಗಲೇ ಅನುಭವ ವೇದ್ಯವಾಗಿದೆ. ನಮ್ಮ ದುರುದ್ದೇಶದ ಕುರಿತು ಹುಟ್ಟುತ್ತಿರುವ ಕಥೆ ಸಾಕಷ್ಟು ಬೇರುಬಿಡುತ್ತಿದೆ ಎಂಬುದನ್ನು ಪ್ರಜಾವಾಣಿ ಪ್ರತಿಕ್ರಿಯೆಗಳಿಂದ ಮನಗಾಣುತ್ತಿದ್ದೇನೆ. ದೇವನೂರರೇ ಕೊಟ್ಟ ಆಡಿನ ಕಥೆಯಂತೆ ಹತ್ತಾರು ಮಂದಿ ಒಂದು ಸುಳ್ಳನ್ನು ಹೇಳುತ್ತಿದ್ದರೆ, ಹಾಗೂ ನಾವು ಸುಮ್ಮನೇ ಇದ್ದರೆ ಜನ ಅದನ್ನೇ ಸತ್ಯವೆಂದು ನಂಬಿಬಿಡುವ ಸಾಧ್ಯತೆಯಿದೆ. ಒಂದೊಮ್ಮೆ ನಮ್ಮ ಸಂಶೋಧನೆಯು ದೇವನೂರರು ಅಂದುಕೊಂಡಂತೇ ಯಾವುದೇ ಮಾನವ ಸಮುದಾಯದ ಅಹಿತವನ್ನು ಬಯಸುವ ದುರುದ್ದೇಶವನ್ನು ಹೊಂದಿಲ್ಲ ಅಂತಾದರೆ, ಈ ನಿಟ್ಟಿನಲ್ಲಿ ಈಗಿರುವ ಜ್ಞಾನದ ಮಿತಿಗಳನ್ನು ಕಳೆದು ಇನ್ನೂ ಹೆಚ್ಚು ಸ್ಪಷ್ಟತೆಯನ್ನು, ನ್ಯಾಯವನ್ನು ಸಾಧಿಸುವುದು ಅಂತಾದರೆ, ದೇವನೂರರ ನೋವಿಗೆ ಇರಬಹುದಾದ ಕಾರಣಗಳೇ ಮಾಯವಾಗುತ್ತವೆ. ಮುಂದೆ ಅವರ ಜೊತೆ ಅರ್ಥಪೂರ್ಣ ಸಂವಾದ ಸಾಧ್ಯವಾಗಬಹುದು ಎಂಬ ಆಶಯದಿಂದ ಈ ಲೇಖನ.
ಸಿದ್ಧಾಂತ ಮತ್ತು ಐಡಿಯಾಲಜಿ ಒಂದೇ ಅಲ್ಲ – “ಗೆಳೆಯ ಫಣಿರಾಜ್ ರವರ ಪತ್ರಕ್ಕೆ ಒಂದು ಪ್ರತಿಕ್ರಿಯೆ”
– ಪ್ರೊ.ಜೆ.ಎಸ್.ಸದಾನಂದ
ನಿಮ್ಮ ಪತ್ರ ಓದಿದ ನಂತರ ಒಂದು ತರದ ಹಿತಕರ ಅನುಭವವಾಯಿತು. ಹಿತಕರ ಏಕೆಂದರೆ ಇದೂವರೆಗೂ ನಮ್ಮ ಬಗ್ಗೆ ಪ್ರತಿಕ್ರಿಯಿಸಿದ ಬಹಳಷ್ಟು ಮಂದಿಗೆ ನಮ್ಮ ಸಂಶೋಧನೆಯ ಹಿಂದಿರುವ ಕುತಂತ್ರ, ಹುನ್ನಾರ ಹಾಗೂ ಆಮಿಷಕ್ಕೆ ಒಳಗಾಗುತ್ತಿರುವುದಷ್ಟೇ ಕಾಣಿಸುತ್ತಿತ್ತು. ಅದಕ್ಕೆ ವ್ಯತಿರಿಕ್ತವಾಗಿ ನೀವು ನಮ್ಮ ಸಂಶೋಧನೆಯ ಬಗ್ಗೆ ನಿಮಗಿರುವ ಕೆಲವು ಸಂದೇಹಗಳ ಕುರಿತು ತುಂಬಾ (ಸಾಮಾಜಿಕ ಹೋರಾಟದಲ್ಲಿ ಬಹಳ ಕಾಲದಿಂದಲೂ ತೊಡಗಿಸಿಕೊಂಡ ಬದ್ಧತೆಯಿಂದ ಹುಟ್ಟಿದ) ಕಾಳಜಿಯಿಂದ ಚರ್ಚೆ ಮಾಡಲು ಹೊರಟಿದ್ದೀರಿ. ನಮ್ಮ ಉದ್ದೇಶವೂ ಸಹ ನಮ್ಮ ಕೇಂದ್ರದಲ್ಲಿ ಕ್ಯೆಗೊಳ್ಳುತ್ತಿರುವ ಸಂಶೋಧನೆಗಳು ಸಾರ್ವಜನಿಕ ವಿಮರ್ಶೆಗೊಳಪಡಬೇಕು ಮತ್ತು ಅದರ ಪರಿಣಾಮದಿಂದ ನಮಗೂ, ಈ ನಿಟ್ಟಿನಲ್ಲಿ ಸಂಶೋಧನೆ ಮಾಡುತ್ತಿರುವ, ಚಿಂತಿಸುತ್ತಿರುವ ಇತರರಿಗೂ ಪ್ರಚಲಿತ ಚಿಂತನೆಯಲ್ಲಿರುವ (ನಮ್ಮದನ್ನೂ ಒಳಗೊಂಡು) ಲೋಪದೋಷಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸಿಕೊಳ್ಳಲು ಸಹಾಯಕವಾಗಬೇಕು ಎನ್ನುವುದೇ ಆಗಿದೆ.
ನಮ್ಮ ಸಂಶೋಧನಾ ವಿಧಾನದ ಬಗ್ಗೆ ಈಗಾಗಲೇ ಹೇಳಿರುವುದರಿಂದ ಅದನ್ನು ಪುನರಾವರ್ತಿಸುವ ಅಗತ್ಯವಿಲ್ಲ. ಆದರೆ ಒಂದು ವಿಷಯವನ್ನು ಇಲ್ಲಿ ಸ್ಪಷ್ಟಪಡಿಸಲು ಬಯಸುತ್ತೇನೆ. ಜಾತಿವ್ಯವಸ್ಥೆ, ಸೆಕ್ಯುಲರಿಸಂ, ಮಡೆಸ್ನಾನ ಇತ್ಯಾದಿಗಳ ಬಗ್ಗೆ ನಾವಾಗಲೀ ಬಾಲುವಾಗಲಿ ಯಾವುದೇ ವ್ಯೆಜ್ಞಾನಿಕ ಸಿದ್ದಾಂತವನ್ನು ಮಂಡಿಸುತ್ತಿಲ್ಲ. ಮುಂದಿನ ಸಂಶೋಧನೆಗಳು ಕ್ಯೆಗೆತ್ತಿಕೊಳ್ಳಬಹುದಾದ ಸಂಶೋಧನಾ ಪ್ರಶ್ನೆಗಳನ್ನಷ್ಟೇ ಮುಂದಿಡುತ್ತಿದ್ದೇವೆ. ಅದರ ಮೊದಲ ಹಂತವಾಗಿ ಅವುಗಳ ಕುರಿತಾಗಿ ಬರೆದ ಲೇಖನಗಳು ಈ ವಿದ್ಯಮಾನಗಳ ಸದ್ಯದ ಗ್ರಹಿಕೆಯ ಸ್ವರೂಪದಲ್ಲಿ ಇರುವ ಸಮಸ್ಯೆಗಳನ್ನು ಮಾತ್ರ ಗುರುತಿಸುವ ಪ್ರಯತ್ನ ಮಾಡುತ್ತವೆ. ನಾವು ಒಪ್ಪಿಕೊಂಡಿರುವ ಲಿಬರಲ್ ಪ್ರಜಾಪ್ರಭುತ್ವ, ಸೆಕ್ಯುಲರರ ಹಾಗೂ ವ್ಯೆಚಾರಿಕ ಸಿದ್ಧಾಂತಗಳ ಚೌಕಟ್ಟಿನಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ಮುಂದಾದಾಗ ಉದ್ಭವಿಸುವ ಸಮಸ್ಯೆಗಳೇನು ಎಂದು ಗುರುತಿಸಲು ಪ್ರಯತ್ನಿಸಿದ್ದೇವೆ. ಇವುಗಳ ಬಗ್ಗೆ ಯಾವುದೇ ಸಂಶೋಧನೆ ನಡೆದಿಲ್ಲ. ಮುಂದೊಂದು ದಿನ ಯಾರಾದರೂ ಸಂಶೋಧನೆ ಕ್ಯೆಗೊಂಡರೆ ನಾವು ಸಮಸ್ಯೆಯನ್ನು ಗುರುತಿಸಿರುವ ವಿಧಾನದಲ್ಲೂ ತಪ್ಪಿದೆ ಎಂದು ತೋರಿಸುವ ಸಾಧ್ಯತೆ ಇದೆ. ಹಾಗಾದಾಗ ಅದನ್ನು ನಾವು ಒಪ್ಪಿಕೊಳ್ಳಲೇಬೇಕು. ನೀವೇಕೆ ಇಂತಹ ವಿಷಯಗಳನ್ನೇ ಸಂಶೋಧನೆಗೆ ಆಯ್ಕೆ ಮಾಡಿಕೊಳ್ಳುತ್ತಿದ್ದೀರಿ ಎಂದು ನಾವು ಖಂಡಿತಾ ಕೇಳುವುದಿಲ್ಲ.
ನಮ್ಮ ವಿಶ್ವವಿದ್ಯಾಲಯಗಳಲ್ಲಿ ಸಾಮಾಜಿಕ ಸಂಶೋಧನೆಗೆ ಭವಿಷ್ಯವಿದೆಯೆ?
ಪ್ರೊ. ರಾಜಾರಾಮ ಹೆಗಡೆ ಮತ್ತು ಡಾ. ಷಣ್ಮುಖ. ಎ
[ಪ್ರೊ.ರಾಜೇಂದ್ರ ಚೆನ್ನಿಯವರು ಬರೆದಿದ್ದು ಎನ್ನಲಾದ “ಭಾರತದಲ್ಲಿ ಜಾತಿವ್ಯವಸ್ಥೆ ಇದೆಯೆ?” ಎಂಬ ಪುಸ್ತಕದ ವಿಮರ್ಶೆಯು ಅವರ ಆಪ್ತ ವಲಯದಲ್ಲಿ ಸರ್ಕುಲೇಟ್ ಆಗುತ್ತಿದೆ. ಆ ವಿಮರ್ಶೆಯ ಮಿತಿಗಳು ಮತ್ತು ಪೂರ್ವಾಗ್ರಹಗಳನ್ನು ಸ್ಪಷ್ಟಪಡಿಬೇಕೆಂದು ಈ ಲೇಖನವನ್ನು ಬರೆಯಲಾಗಿದೆ]
ಇತ್ತೀಚೆಗೆ ಜಾಲತಾಣದಲ್ಲಿ ಸುತ್ತಾಡುತ್ತಿದ್ದ ಒಂದು ಪುಸ್ತಕ ವಿಮರ್ಶೆಯ ಪ್ರಾರಂಭಿಕ ಸಾಲುಗಳು ನಮ್ಮನ್ನು ಬೆಚ್ಚಿಬೀಳಿಸಿದವು. ಅವು ಹೀಗಿವೆ:
“ಈ ಕೃತಿಯು ನನ್ನಲ್ಲಿ ಹುಟ್ಟಿಸಿದ ವೈಚಾರಿಕ ಕುತೂಹಲವನ್ನು ಹೀಗೆ ವಿವರಿಸಬಹುದು. ಮನುಷ್ಯರು ಓದು, ಬುದ್ಧಿಶಕ್ತಿ, ತರ್ಕ ಹಾಗೂ ಭಾಷೆಯನ್ನು ಮಾನವ ದ್ವೇಷಿಯಾದ ಬೌದ್ಧಿಕ ಕೆಲಸಗಳಿಗೆ ಏಕೆ ಬಳಸುತ್ತಾರೆ? ಪಾಂಡಿತ್ಯವೆಂದು ಕರೆಯಲಾಗುವ ಸಂಗತಿಯು ಒಂದು ವಲಯದಲ್ಲಿ ಅಂತಃಕರಣ, ಪ್ರೀತಿ, ಇತರರ ಬಗ್ಗೆ ಸದ್ಭಾವನೆ ಮುಂತಾದ ಭಾವನೆಗಳಿಂದ ಸಂಪೂರ್ಣ ಪರಕೀಯವಾಗಿ, ಕ್ರೂರವಾದ ಅಭಿಪ್ರಾಯಗಳನ್ನು ಸಮರ್ಥಿಸುವ `ತರ್ಕದ ಟಗರ ಹೋರಟೆ’ ಯಾಕೆ ಆಗುತ್ತದೆ? ಬಹು ಸಂಖ್ಯಾತ ಜನರಿಗೆ ಮನುಷ್ಯರಾಗಿ ಬದುಕುವ ಅವಕಾಶಗಳೇ ಇಲ್ಲವಾಗುತ್ತಿರುವ ಬಡದೇಶದಲ್ಲಿ ಅತಿಶಯವಾದ ಸವಲತ್ತುಗಳನ್ನು ಪಡೆದಿರುವ ವಿಶ್ವವಿದ್ಯಾಲಯಗಳ ಬುದ್ಧಿಜೀವಿ ಹಾಗು ಸಂಶೋಧಕವರ್ಗವು ಈ ಜನರು ಆಳವಾಗಿ ನಂಬಿಕೊಂಡು ಬಂದಿರುವ ಸಮಾನತೆ, ನ್ಯಾಯ ಮುಂತಾದ ಮೌಲ್ಯಗಳನ್ನು ಉಡಾಫೆಯಿಂದ ತಿರಸ್ಕರಿಸುವ ದುಷ್ಟತನದ ಮೂಲವು ಎಲ್ಲಿದೆ? ನಿರ್ದಿಷ್ಟವಾಗಿ ಹೇಳುವುದಾದರೆ ಪಾಂಡಿತ್ಯ ಮತ್ತು ಬುದ್ಧಿಶಕ್ತಿಗಳು Evil ನ ಅತ್ಯಂತ ಆಳವಾದ ಕೆಡುಕಿನ ರೂಪಗಳೇಕೆ ಆಗುತ್ತವೆ?”