ಬಂಗುಡೆ ಫ್ರೈ ಮತ್ತು ಭಗವದ್ಗೀತೆ
– ರೋಹಿತ್ ಚಕ್ರತೀರ್ಥ
ವರ್ಷಕ್ಕೋ ಎರಡು ವರ್ಷಕ್ಕೋ ಒಂದು – ಎರಡಲ್ಲ, ಒಂದೇ – ಸಿನೆಮಾ ಕೊಡುತ್ತಿದ್ದ ಹಿಂದಿಯ ರಾಜ್‍ಕುಮಾರ್ ಮೇಲೆ, ನನ್ನ ತಂದೆಗೆ ಕುತೂಹಲ, ಪ್ರೀತಿ, ಹುಚ್ಚು ಅಭಿಮಾನ ಇದ್ದವು. ಹಾಗೆಯೇ, ಬಹುಕಾಲ ಮೌನವಾಗಿದ್ದು ವರ್ಷಕ್ಕೆ ಒಂದೆರಡು ಮಾತು, ಒಂದೆರಡು ಹಾಳೆ ಸಾಹಿತ್ಯ ಬರೆಯುವವರ ಬಗ್ಗೆ ಹೆಚ್ಚಾಗಿ ಜನರಿಗೆ ಕುತೂಹಲ ಇರುತ್ತದೆ. ಇಂಥವರು ಕಾವಿ ತೊಟ್ಟರೆ, ಮಾತಾಡದೆ ಕೂತರೂ ಜಗತ್ಪ್ರಸಿದ್ಧರಾಗುತ್ತಾರೆ! ಇಂತಹ ಮಿತಾಕ್ಷರಿಗಳ ಪಂಥಕ್ಕೆ ಸೇರಿದ ಕನ್ನಡದ ಸಾಹಿತಿ ದೇವನೂರ ಮಹಾದೇವ, ವರ್ಷಕ್ಕೆ ಒಂದು ಭಾಷಣ ಮಾಡಿದರೆ, ಅದರ ಹಿಂದೆ ಹಲವು ದಿನಗಳ ಚಿಂತನೆ ಇರುತ್ತದೆ; ಇರಬೇಕು ಎಂದು ನಾವೆಲ್ಲ ಬಯಸುತ್ತೇವೆ. ಹಾಗೆಯೇ, ಅವರ ಐನೂರು ಪದಗಳೊಂದು ಲೇಖನ ಪ್ರಕಟವಾದರೂ, ಅದರಲ್ಲೇನೋ ಗಹನವಾದ ಸೂತ್ರರೂಪೀ ಸಂಗತಿಗಳು ಅಡಕವಾಗಿರಬಹುದು ಎಂಬ ಪೂರ್ವಗ್ರಹದಿಂದ ಎರಡೆರಡು ಬಾರಿ ಓದಿನೋಡುವ ಸಾಹಿತ್ಯಪ್ರೇಮಿಗಳಿದ್ದಾರೆ. ಹಾಗಾಗಿ ದಿನಕ್ಕೆ ಸಾವಿರ ಪದಗಳನ್ನು ಕುಟ್ಟುವ ನನ್ನಂಥ ಕೈಬಡುಕರಿಗಿಂತ ದೇವನೂರರ ಮೇಲೆ ಹುಟ್ಟುವ ನಿರೀಕ್ಷೆ ದೊಡ್ಡದು. ಅದನ್ನು ನಿಜ ಮಾಡುವ ಆನೆಯಂಥ ಹೊಣೆಗಾರಿಕೆಯೂ ಅವರ ಹೆಗಲ ಮೇಲೆ ಕೂತಿರುತ್ತದೆ.
ಈ ವರ್ಷ, ನಿಯಮ ತಪ್ಪಿ, ದೇವನೂರ ಎರಡು ಸಲ ಮಾತಾಡಿದರು. ಒಮ್ಮೆ, ಪ್ರಶಸ್ತಿ ಯಾಕೆ ವಾಪಸು ಮಾಡುತ್ತಿದ್ದೇನೆ ಎಂದು ಹೇಳಲು ಪತ್ರ ಬರೆಯುವುದರ ಮೂಲಕ. ಇನ್ನೊಮ್ಮೆ, ಮಂಗಳೂರಲ್ಲಿ ನಡೆದ – ಸಾಹಿತ್ಯವೊಂದು ಬಿಟ್ಟು ಮಿಕ್ಕೆಲ್ಲ ಅಪಸವ್ಯಗಳೂ ಇದ್ದ – ಒಂದು ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷಭಾಷಣ ಮಾಡುವ ಮೂಲಕ. ಪ್ರಶಸ್ತಿ ವಾಪಸು ಪ್ರಹಸನದ ನಿಜಬಣ್ಣ ಲೋಕಕ್ಕೇ ಗೊತ್ತಾಗಿರುವುದರಿಂದ, ಆ ಸಂದರ್ಭದ ಮಾತುಗಳನ್ನು ಮತ್ತೆ ಕೆದಕುವುದು ಬೇಡ. ನಕಲು ಸಮ್ಮೇಳನದಲ್ಲಿ ಅವರು ಏನು ಹೇಳಿದರು ಎನ್ನುವುದನ್ನು ಮಾತ್ರ ಈ ಲೇಖನದ ಸೀಮಿತ ಚೌಕಟ್ಟಿಗೆ ಎತ್ತಿಕೊಂಡಿದ್ದೇನೆ.
**
ಇತ್ತೀಚೆಗೆ ರಾಮಾಯಣ, ಮಹಾಭಾರತಗಳ ಕಡೆ ನಮ್ಮ ಸಮಕಾಲೀನ ಲೇಖಕರು ಮತ್ತೆಮತ್ತೆ ಹೊರಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಚರ್ಚೆಯ ವಿಷಯವಾಗಿರುವುದರಿಂದ ದೇವನೂರ ಕೂಡ ಆ ಎರಡು ಗ್ರಂಥಗಳನ್ನು ಎತ್ತಿಕೊಂಡಿದ್ದಾರೆ. ಮಿದುಳಿಲ್ಲದ ಧ್ವನಿವರ್ಧಕದಂತೆ ತನ್ನನ್ನು ಬಿಂಬಿಸಿಕೊಂಡು ಪ್ರಚಾರ ಪಡೆದ ಭಗವಾನ್‍ಗಿಂತ ಭಿನ್ನ ಧಾಟಿಯಲ್ಲಿ ಮಾತಾಡಿದ್ದರಿಂದ ದೇವನೂರರ ಮಾತುಗಳು – ಒಪ್ಪುವ ಒಪ್ಪದಿರುವ ಪ್ರಶ್ನೆಗಿಂತ, ಕನಿಷ್ಠ ವಿಶ್ಲೇಷಣೆಗೊಳಪಡಿಸಲು ಅರ್ಹವಾಗಿವೆ. ದೇವನೂರ ಬಹುಶಃ ಮೂರು ಪೂರ್ವಗ್ರಹಗಳಿಂದ ತನ್ನ ಮಾತು-ಚಿಂತನೆಗಳನ್ನು ಶುರುಮಾಡುತ್ತಾರೆ ಎಂದು ಕಾಣುತ್ತದೆ. ಒಂದು – ಭಾರತದಲ್ಲಿ ಇಂದಿಗೂ ದೇವಸ್ಥಾನಗಳಿಗೆ ಪ್ರವೇಶ ಪಡೆಯುವುದೇ ದಲಿತರ ದೊಡ್ಡ ಸವಾಲಾಗಿದೆ. ಎರಡು – ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಹಲವು ಭಾಗಗಳು ಸರಿಯಿಲ್ಲ, ಮತ್ತು ಈ ಗ್ರಂಥಗಳೇ ಇಂದಿಗೂ ನಮ್ಮನ್ನು ಸಾಮಾಜಿಕವಾಗಿ ಬೌದ್ಧಿಕವಾಗಿ ಆಳುತ್ತಿವೆ. ಮೂರು – ಜಾತಿ ವರ್ಗ ಕಳೆದು ಎಲ್ಲವೂ ಸಮಾನವಾದರೆ ದೇಶದಲ್ಲಿ ಸರ್ವೋದಯವಾಗುತ್ತದೆ. ನಾನು ನನ್ನ ಸುತ್ತಲಿನ ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನಷ್ಟೆ ಹಿನ್ನೆಲೆಯಾಗಿಟ್ಟುಕೊಂಡು ದೇವನೂರರ ಮಾತುಗಳ ವಿಶ್ಲೇಷಣೆ ನಡೆಸುವುದು ಸಾಧ್ಯ. ಹಾಗಾಗಿ ಮುಂದಿನ ಎಲ್ಲ ಮಾತುಗಳನ್ನು ಓದುಗರು ತಂತಮ್ಮ ಜಗತ್ತಿನ ಹಿನ್ನೆಲೆಯಲ್ಲಿಟ್ಟು ತಾಳೆ ನೋಡುವುದಕ್ಕೆ ಸ್ವತಂತ್ರರು.
ಮತ್ತಷ್ಟು ಓದು
ವಾಲ್ಮೀಕಿ ರಾಮಾಯಣದ ಕ್ಷೇಪಕಗಳು
– ಡಾ| ಜಿ. ಭಾಸ್ಕರ ಮಯ್ಯ
ಕ್ಷೇಪಕವೆಂದರೆ ನಂತರ ಸೇರಿಸಿದ್ದು.ಒಂದೊ ನಿಂದಿಸಲು ಅಥವಾ ವೈಭವೀಕರಿಸಲು ಅಥವಾ ಮೌಖಿಕ ರೂಪದಲ್ಲಿರುವ ಕಾವ್ಯವು ಸಹಜವಾಗಿಯೇ ಕಾಲಧರ್ಮಪ್ರಭಾವದಿಂದ ಜನರ ರುಚಿಸ್ವಾದ ಮತ್ತು ವಾಚಕರ ಪ್ರತಿಭೆಗನುಸರಿಸಿ ಭಾವಧರ್ಮಪರಿವರ್ತನೆಗಳಾಗುತ್ತಾ ಇರುತ್ತವೆ. ಐತಿಹಾಸಿಕ ಕಾಲಗಣನೆಯ ಪ್ರಕ್ರಿಯೆಯಲ್ಲಿ ಇಂಥವುಗಳಲ್ಲಿ ವಿದ್ವಾಂಸರು ಸಾಧಾರಣವಾಗಿ ಯಾವುದು ಪ್ರಕ್ಷಿಪ್ತ ಮತ್ತು ಯಾವುದು ಮೂಲವೆಂಬುದನ್ನು ಶೋಧಿಸುತ್ತಾರೆ.
ರಾಮಾಯಣದಲ್ಲಿರುವ ಒಟ್ಟು 7 ಕಾಂಡಗಳಲ್ಲಿ ಮೊದಲ ಮತ್ತು ಕೊನೆಯದು (1 ಮತ್ತು 7) ನಂತರ ಸೇರಿಸಲ್ಪಟ್ಟವುಗಳೆಂದು ಇಂದು ನಿರ್ವಿವಾದವಾಗಿ ವಿದ್ವತ್‍ವಲಯದಲ್ಲಿ ಸಿದ್ಧವಾದ ವಿಚಾರ. ಮೂಲಭಾರತವು ರಾಮಾಯಣಕ್ಕಿಂತ ಹಳೆಯದು. ವೇದದಲ್ಲಿ ರಾಮಾಯಣದ ಸುದ್ದಿಯೇ ಇಲ್ಲ; ಭಾರತದ ಸುಳಿವಿದೆ. ತ್ರಿಪಿಟಕಗಳಲ್ಲಿ ರಾಮಾಯಣದ ಪ್ರಸ್ತಾಪವಿಲ್ಲ. ಪಾಣಿನಿಯೂ ರಾಮಾಯಣವನ್ನು ಉದಾಹರಿಸುವುದಿಲ್ಲ. ಹಾಗಾಗಿ ಕ್ರಿ.ಪೂ. 3ನೆಯ ಶತಮಾನಕ್ಕಿಂತ ಹಿಂದೆ ರಾಮಾಯಣದ ರಚನೆಯಾಗಿರುವ ಸಂಭವವೇ ಇಲ್ಲ.
ರಾಮಾಯಣವು ಮೌಖಿಕ ಕಾವ್ಯ. ಅದು ಬರವಣಿಗೆಗೆ ಬಂದುದು ಕ್ರಿಸ್ತಶಕದ ನಂತರ.ಆ ಮುಂಚೆಯೂ ಆನಂತರವೂ ಎಷ್ಟೆಷ್ಟೋ ಅಂಶಗಳು ಅದರಲ್ಲಿ ಸೇರ್ಪಡೆಯಾಗಿವೆ. ವಾಲ್ಮೀಕಿಯದ್ದೆಂದು ಹೇಳಲಾಗುವ ಪ್ರಖ್ಯಾತ ಸಂಸ್ಕೃತ ರಾಮಾಯಣವು ಕ್ರಿ.ಪೂ. 2-3ರಲ್ಲಿ ರಚಿಸಲ್ಪಟ್ಟಿರಬಹುದು; ಬರೆಯಲ್ಪಟ್ಟಿರುವುದಿಲ್ಲ. ಹೊಸ ಸೇರ್ಪಡೆಗಳು ಅಂದರೆ ಪ್ರಕ್ಷಿಪ್ತಗಳು ಹೇರಳವಾಗಿ ತುಂಬಿಸಲ್ಪಟ್ಟು ಇಂದು ಉಪಲಬ್ಧ ವಾಲ್ಮೀಕಿ ರಾಮಾಯಣ ಒಂದಾದರೆ, ಬೇರೆ ಸಾವಿರಾರು ರಾಮಾಯಣಗಳೂ ಅಸ್ತಿತ್ವದಲ್ಲಿವೆ. ರಾಮನ ತಂಗಿ ಸೀತೆ ಎಂಬ ರಾಮಾಯಣವೂ ಇದೆ. ರಾವಣನನ್ನು ಕೊಂದವ ರಾಮನಲ್ಲ, ಲಕ್ಷ್ಮಣನೆಂತಲೂ ಇದೆ. ಅದಕ್ಕಾಗಿ ಆತ ನರಕಕ್ಕೆ ಹೋಗುತ್ತಾನೆ ಎಂತಲೂ ಜೈನ ‘ಪವುಮ ಚರಿತ’ ಹೇಳುತ್ತದೆ. ಎ.ಕೆ. ರಾಮಾನುಜನ್ ಸಂಗ್ರಹಿಸಿಕೊಟ್ಟ 300 ರಾಮಾಯಣಗಳಲ್ಲಿ ಒಂದು ಜಾನಪದ ರಾಮಾಯಣದಲ್ಲಿ ಸೀತೆ ರಾವಣನನ್ನು ಎಷ್ಟು ಮೋಹಿಸಿದ್ದಳೆಂದರೆ ಆಕೆ ಆತನ ಚಿತ್ರವನ್ನೂ ಬಿಡಿಸಿ ಅನಾಹುತ ಮಾಡಿಕೊಳ್ಳುತ್ತಾಳೆ. ಹೀಗಾಗಿ ರಾಮಾಯಣ ಯಾರ ಆಸ್ತಿಯೂ ಅಲ್ಲ, ಹಾಗೆಯೇ ಎಲ್ಲರ ಆಸ್ತಿಯೂ ಹೌದು.
ಏನೇ ಇರಲಿ, ವಾಲ್ಮೀಕಿ ರಾಮಾಯಣವನ್ನು ನಾವು ಒಂದು ಶ್ರೇಷ್ಠ ಮಹಾಕಾವ್ಯವೆಂದು ಭಾವಿಸುವುದಾದರೆ ಅದರಲ್ಲಿ ರಾಮನ ಉಜ್ವಲ ವ್ಯಕ್ತಿತ್ವಕ್ಕೆ ಕಳಂಕವನ್ನುಂಟು ಮಾಡುವ ಅಂಶಗಳನ್ನು ಪ್ರಕ್ತಿಪ್ತವೆಂದು ಕಿತ್ತೊಗೆಯಲೇ ಬೇಕು.
1) ಸೀತಾಪರಿತ್ಯಾಗ 2) ಶಂಬೂಕವಧ ಮತ್ತು 3) ಲವಕುಶರೊಡನೆ ರಾಮನ ಯುದ್ಧ – ಈ ಮೂರು ಅಸಂಬದ್ಧ ಮತ್ತು ಪ್ರಕ್ಷಿಪ್ತವೆಂದು ವೈದಿಕ ಜ್ಞಾನ ವಿಜ್ಞಾನ ಕೋಶದಲ್ಲೇ ಸ್ಪಷ್ಟೀಕರಿಸಲಾಗಿದೆ (ವೈದಿಕ ಜ್ಞಾನ ವಿಜ್ಞಾನ್ ಕೊಷ್: ಡಾ|| ಮನೋದತ್ತ ಪಾಠಕ್, ಪುಟ 252-254) :-
ಮತ್ತಷ್ಟು ಓದು
ವಾಲ್ಮೀಕಿ ಯಾರು?
– ಡಾ| ಜಿ. ಭಾಸ್ಕರ ಮಯ್ಯ
ಇಂದು ಕನ್ನಡ ಸಾಹಿತ್ಯದ ಅದಮ್ಯ ಚೇತನಗಳಾದ ಮಹಾಕವಿಗಳನ್ನು ಜಾತಿಯ ಗೂಟಕ್ಕೆ ಕಟ್ಟಿ ಬಲಿ ಕೊಡುತ್ತಿರುವ ಪದ್ಧತಿ ಈಗ ಸರಿಸುಮಾರು ನಾಲ್ಕು-ಐದು ದಶಕಗಳಿಂದ ನಡೆಯುತ್ತಿದೆ. ಇದರ ಐತಿಹಾಸಿಕ ದುರಂತವೆಂದರೆ ನವೋದಯದ ನಂತರ ಎಡವುತ್ತಾ ಬಂದ ಅರೆಬರೆ ಪ್ರಕಾರವಾದ ನವ್ಯ ಸಾಹಿತ್ಯ. ಅದು ಬೆಳೆಯುವ ಮುಂಚೆಯೇ ಕಮರಿ ಹೋಯ್ತು. ಅಡಿಗ, ಲಂಕೇಶ್ ಅದಕ್ಕೊಂದು ಅಪವಾದ. ನವೋದಯದ ಪತನಶೀಲ ಕಾಲದ ಕೆಲವು ಜಾತೀಯ ವಿಷಬೀಜಗಳು ಬಂಡಾಯದ ಕಾಲದಲ್ಲಿ ಅಲ್ಲಲ್ಲಿ ಮೊಳಕೆಯೊಡೆದವು. ಈ ಬಂಡಾಯದ ರೂವಾರಿಗಳಲ್ಲಿ ಅನೇಕ ಪ್ರಮುಖರು ಅಲ್ಪವಿದ್ಯಾ ಅಪ್ರಬುದ್ಧ ಹುಸಿ ಕ್ರಾಂತಿಕಾರರು. ಇವರು ನವೋದಯದ ಪತನಶೀಲ ಮತ್ತು ನವ್ಯದ ಗೊಬ್ಬರದಿಂದಲೇ ಬೆಳೆದವರು. ಭಾರತದಾದ್ಯಂತ ಹಿಂದಿ, ಬಂಗಾಳಿ ಮೊದಲಾದ ಭಾಷೆಗಳಲ್ಲಿ ಸರಿಸುಮಾರು ಪ್ರಗತಿಶೀಲ ಜನವಾದಿ ಸಾಹಿತ್ಯಪ್ರಕಾರವು ಆರೋಗ್ಯಕರವಾಗಿ ಬೆಳೆದು ಬಂದರೆ ಕರ್ನಾಟಕದಲ್ಲಿ ಮುಖ್ಯವಾಗಿ ರೂಲಿಂಗ್ ಐಡಿಯಾಗಳನ್ನು ಬಿಂಬಿಸುವ ಹುಸಿ ಬಂಡಾಯಗಾರರೇ ‘ರೂಲಿಂಗ್’ ಆದರು. ರೂಲಿಂಗ್ ಕ್ಲಾಸಿನ ಉತ್ಪನ್ನವಾದ ಈ ‘ರೂಲಿಂಗ್’ ಐಡಿಯಾದವರು ಇಂದು ಕೂಡಾ ರೂಲಿಂಗ್ ಪಕ್ಷದ ಬಹುದೊಡ್ಡ ಪರಾಕುದಾರರು.
ಇದರ ಪರಿಣಾಮವಾಗಿ ಇಂದು ಕನಕದಾಸರು ಕುರುಬನಾಗಿದ್ದಾರೆ.ಬಸವಣ್ಣ ಲಿಂಗಾಯತನಾಗಿದ್ದಾರೆ.ಕುವೆಂಪು ಗೌಡರಾಗಿದ್ದಾರೆ.ಅಂತೆಯೇ ಹಲವಾರು ಶ್ರೇಷ್ಠಲೇಖಕರು ಬ್ರಾಹ್ಮಣ-ಶೂದ್ರ ಇತ್ಯಾದಿ ವಿಧ ವಿಧ ಜೈಲುಗಳಲ್ಲಿ ಬಂಧಿತರಾಗಿದ್ದಾರೆ. ಹಿಂದೆಂದೂ ಇಲ್ಲದ ಜಾತಿವಾದ ಇಂದು ಸಾಹಿತ್ಯ ಮತ್ತು ಸಂಸ್ಕೃತಿಯ ವಲಯದಲ್ಲಿ ವ್ಯಾಪಿಸಿದೆ. ಈ ದುರಂತಕ್ಕೆ ಇತ್ತೀಚೆಗಿನ ಸೇರ್ಪಡೆ ವಾಲ್ಮೀಕಿ.
ವಾಲ್ಮೀಕಿ ಜನಾಂಗದ ವ್ಯಕ್ತಿಯೊಬ್ಬರು ಸರ್ಕಾರದಲ್ಲಿ ಪ್ರಭಾವಶಾಲಿಯಾಗಿದ್ದ ಕಾಲದಲ್ಲಿ ಆದಿಕವಿ ವಾಲ್ಮೀಕಿಗೆ ಹಠಾತ್ ಲಾಟರಿ ಹಾರಿತು.ವಾಲ್ಮೀಕಿ ಜಯಂತಿ ಆಚರಿಸಲು ಸರ್ಕಾರ ಅಧಿಸೂಚನೆ ಹೊರಡಿಸಿತು.ಆ ದಿನ ಕರ್ನಾಟಕದಲ್ಲಿ ರಜಾದಿನವೆಂದು ಘೋಷಿಸಲಾಯಿತು. ಹೀಗೆ ಭಾರತದ ರಾಷ್ಟ್ರೀಯ ಮಹಾಕವಿಯೊಬ್ಬನಿಗೆ ಕರ್ನಾಟಕದಲ್ಲಿ ಈ ಪರಿ ಮರಣೋತ್ತರ ಗೌರವ ಸಂದಿತು. ಕರ್ನಾಟಕದಾದ್ಯಂತ ಸಭೆಸಮಾರಂಭಗಳು, ವಾಲ್ಮೀಕಿ ಭವನ ನಿರ್ಮಾಣದ ಯೋಜನೆ – ಇತ್ಯಾದಿಗಳು ವಿಜ್ರಂಭಿಸಿದವು.
ವಸಾಹತುಪ್ರಜ್ಞೆಯಲ್ಲಿ ಪುಣ್ಯಯೋನಿ-ಪಾಪಯೋನಿ
– ವಿನಾಯಕ್ ಹಂಪಿಹೊಳಿ
ಇತ್ತೀಚೆಗೆ ಕೆ. ಎಸ್. ಭಗವಾನ್ ಎಂಬ ಬುದ್ಧಿಜೀವಿಯೋರ್ವರಿಂದಾಗಿ ಭಗವದ್ಗೀತೆಯ ಒಂಬತ್ತನೇ ಅಧ್ಯಾಯದ ೩೨ ಮತ್ತು ೩೩ನೇ ಶ್ಲೋಕಗಳು ಭಾರೀ ವಿವಾದಕ್ಕೊಳಗಾದವು. ಆ ಶ್ಲೋಕಗಳಲ್ಲಿ ಕೆಲವೇ ವರ್ಗದ ಜನರನ್ನು ಪುಣ್ಯಯೋನಿಗಳೆಂತಲೂ ಉಳಿದ ಬಹುಸಂಖ್ಯಾತರನ್ನು ಪಾಪಯೋನಿಗಳೆಂತಲೂ ಕೃಷ್ಣ ಕರೆದದ್ದು ಈ ಹಿಂದೂ ರಿಲಿಜನ್ನಿನಲ್ಲಿ ಇರುವ ಸಾಮಾಜಿಕ ಅಸಮಾನತೆಗೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ ಚಿತ್ರಿಸಲಾಯಿತು. ಆ ಎರಡು ಶ್ಲೋಕಗಳನ್ನು ಗದ್ದೆಯಲ್ಲಿನ ಕಳೆಗೆ ಹೋಲಿಸಿ, ಇವುಗಳನ್ನು ತೆಗೆದು ಹಾಕಬೇಕೆಂದು ಅಭಿಪ್ರಾಯಪಟ್ಟರು. ಆ ಎರಡು ಶ್ಲೋಕಗಳು “ಶ್ರುಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ” ಎಂಬ ಉಪನಿಷದ್ವಾಕ್ಯಕ್ಕೆ ವಿರುದ್ಧವಾದ ಆಶಯವನ್ನು ಹೊಂದಿದೆ ಎಂಬುದಾಗಿ ಸಾರಿದರು. ಈ ಹಿಂದೂ ಎಂಬ ಧರ್ಮದಲ್ಲಿ ಎರಡು ಭಾಗಗಳಿವೆ, ಅವು ಸಾಮಾಜಿಕ ಮತ್ತು ಅಧ್ಯಾತ್ಮಿಕ, ಎರಡೂ ಕ್ಷೇತ್ರಗಳಲ್ಲಿ ಅನೇಕ ಕೃತಿಗಳಿವೆ, ಅದರಲ್ಲಿ ಅಧ್ಯಾತ್ಮಿಕ ಕೃತಿಗಳ ಕುರಿತು ಅವರಿಗೆ ಸಮ್ಮತಿಯಿದೆ, ಆದರೆ ಸಾಮಾಜಿಕ ಕೃತಿಗಳ ಕುರಿತು ಅವರಿಗೆ ಭಾರೀ ಆಕ್ಷೇಪವಿದೆ ಎಂಬ ಅವರ ಹೇಳಿಕೆಯನ್ನು ಅವರ ವಾದದ ಸಾರಾಂಶ ಎನ್ನಬಹುದು.
ನಮ್ಮ ಸಂಪ್ರದಾಯಗಳು ಪುನರ್ಜನ್ಮವನ್ನು ನಂಬುತ್ತವೆ. ಮತ್ತು ಜೀವನದಲ್ಲಿ ಕಾಣುವ ಪರಿಣಾಮಗಳಿಗೆ ಪ್ರತ್ಯಕ್ಷವಾಗಿ ಕಾಣದ ಕಾರಣಗಳನ್ನು ಪೂರ್ವಜನ್ಮಕ್ಕೆ ಹೊಂದಿಸಿ ಅರಿಯುವದು ನಮ್ಮಲ್ಲಿ ಮೊದಲಿನಿಂದ ಇರುವ ಪರಂಪರೆ. ತನ್ಮೂಲಕ ಒಬ್ಬ ಜೀವನದಲ್ಲಿ ಪಡೆದಿರುವ ಪ್ರತಿಯೊಂದಕ್ಕೂ ಒಂದು ಕಾರಣವನ್ನು ಹುಡುಕಿಕೊಳ್ಳುವದು ಸಹಜವಾದ ಪ್ರಕ್ರಿಯೆ. ಆತ್ಮಕ್ಕೆ ಲಿಂಗವಿರುವದಿಲ್ಲ, ಲಿಂಗವೆಂಬುದು ಕೇವಲ ದೇಹದ ಒಂದು ಗುಣ ಎಂಬುದು ನಮ್ಮ ಸಂಪ್ರದಾಯಗಳಲ್ಲಿ ಹಾಸುಹೊಕ್ಕಾಗಿರುವ ವಿಚಾರ. ಹೀಗಾಗಿ ಆತ್ಮ-ಪುನರ್ಜನ್ಮ-ದೇಹಗಳ ಕುರಿತು ಇರುವ ಈ ಆಧ್ಯಾತ್ಮಿಕ ವಿಚಾರಗಳಲ್ಲಿ ಒಂದು ಆತ್ಮ ಒಮ್ಮೆ ಗಂಡಾಗಿ, ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಮತ್ತೊಂದು ಜನ್ಮದಲ್ಲಿ ಪ್ರಾಣಿಯಾಗಿ ಹುಟ್ಟುವ ಕಲ್ಪನೆಗಳು ಕಥೆಗಳು ಹೇರಳವಾಗಿ ಕಂಡುಬರುತ್ತವೆ. ಹೀಗಾಗಿ ಜನ್ಮದಿಂದ ಜನ್ಮಕ್ಕೆ ಅಲೆಯುವ ಒಂದು ಆತ್ಮ ಗಂಡು ದೇಹ ಪಡೆಯುವದಕ್ಕೋ, ಇಲ್ಲವೇ ಹೆಣ್ಣು ದೇಹ ಪಡೆಯುವದಕ್ಕೋ ಒಂದು ಕಾರಣ ಬೇಕಾಗುತ್ತದೆ.
ಶೂದ್ರ ಶಂಬುಕ ಮತ್ತು ರಾಮಾಯಣ – ಒಂದು ಚರ್ಚೆ
– ರಾಘವೇಂದ್ರ ಸುಬ್ರಹ್ಮಣ್ಯ
ಹಲವಾರು ಜನ ಶಂಬುಕನ ಉದಾಹರಣೆ ಕೊಟ್ಟು ರಾಮನ ಮೇಲೆ ಅಧರ್ಮದ ಪಟ್ಟ ಹೊರಿಸ್ತಾರೋದು ನೋಡಿ, ನನ್ನ ದೃಷ್ಟಿಕೋನವನ್ನೂ ಹಂಚಿಕೊಳ್ಳೋಣವೆಂದು ನಿರ್ಧರಿಸಿದ್ದರಿಂದ,ಈ ಲೇಖನ.ಇದರ ಬಗ್ಗೆ ಒಂದು ಚರ್ಚೆ ಆದ್ರೆ ಚೆನ್ನಾಗಿರುತ್ತೆ ಅನ್ನಿಸ್ತು. ನಾನು ರಾಮಾಯಣನ್ನು ಧರ್ಮಗ್ರಂಥವಾಗಿ ಅಥವಾ ಪುರಾಣವನ್ನಾಗಿ ನೋಡುವುದಿಲ್ಲವಾದ್ದರಿಂದ, ರಾಮನೆಂಬ ‘ಮರ್ಯಾದಾ ಪುರುಷೋತ್ತಮ’ ಮಾಡಿದ್ದು ಸರಿಯೋ ತಪ್ಪೋ ಎಂಬ ವಿಮರ್ಷೆಗೆ ಕೈ ಹಾಕಲಾರೆ. ರಾಮನೆಂಬ ಪಾತ್ರ ಮಾಡಿದ್ದು ಸರಿಯೋ ಎಂದು ನೋಡುವ ಪ್ರಯತ್ನವಷ್ಟೇ.
ನನಗೆ ಗೊತ್ತಿದ್ದಂತೆ ಕಥೆ ಹೀಗಿದೆ (ತಪ್ಪಿದ್ದಲ್ಲಿ ದಯವಿಟ್ಟು ತಿದ್ದಿ):
“ರಾಮನ ಆಸ್ಥಾನಕ್ಕೆ ಒಬ್ಬ ಬ್ರಾಹ್ಮಣ ತನ್ನ ಮಗನ ಸಾವಿಗಾಗಿ ನ್ಯಾಯ ಕೇಳಲು ಬರುತ್ತಾನೆ. ಎಲೈ ರಾಜನೇ, ನೀನೇನೋ ಅನ್ಯಾಯ ಮಾಡಿರಬೇಕು, ಆದ್ದರಿಂದ ಯಾವ ತಪ್ಪನ್ನೂ ಮಾಡನ ನನ್ನ ಮಗನ ಸಾವಾಗಿದೆ ಎಂದು ಆರೋಪಿಸುತ್ತಾನೆ. ನಾರದಮುನಿ ಇದರಬಗ್ಗೆ ಕೊಟ್ಟ ಹಿನ್ನೆಲೆ ಹಾಗೂ ಶಂಭುಕನ ತಪಸ್ಸಿನ ಬಗ್ಗೆ ತಿಳಿದು ರಾಮ ಶಂಬುಕನಿದ್ದಲ್ಲಿಗೆ ಪ್ರಯಾಣ ಬೆಳೆಸುತ್ತಾನೆ. ಶಂಬುಕನನ್ನು ಭೇಟಿ ಮಾಡಿ, ಅವನ ತಪಸ್ಸಿನ ಕಾರಣ ಕೇಳಲಾಗಿ, ಶಂಬುಕ ‘ರಾಮ, ನಾನು ಶೂದ್ರ ಕುಟುಂಬದಲ್ಲಿ ಜನಿಸಿದವನು. ನನ್ನ ಕಠಿಣ ಪರಿಶ್ರಮದಿಂದ ದೇವತೆಗಳನ್ನು ಮೆಚ್ಚಿಸಿ, ದೇವಲೋಕವನ್ನು ನನ್ನದಾಗಿ ಮಾಡಿಕೊಂಡು, ಈ ದೇಹದೊಂದಿಗೇ ಸ್ವರ್ಗವನ್ನು ಪ್ರವೇಶಿಸುವ ನಿರ್ಧಾರದಿಂದ ಈ ತಪಸ್ಸನ್ನು ಮಾಡುತ್ತಿದ್ದೇನೆ” ಎನ್ನುತ್ತಾನೆ. ಅದಕ್ಕೆ ರಾಮ ‘ಅಯ್ಯಾ ನಿನ್ನ ತಪಸ್ಸು, ಪರಿಶ್ರಮ ಒಳ್ಳೆಯದೇ ಆದರೂ, ಅದರ ಹಿಂದಿನ ಕಾರಣ ಅಸಾತ್ವಿಕವಾದದ್ದು’ ಎಂಬ ಕಾರಣದಿಂದ ಅವನ ಹರಣ ಮಾಡುತ್ತಾನೆ.
ಮತ್ತಷ್ಟು ಓದು
ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪ-ರೇಖೆ? – ಭಾಗ 2
– ರೋಹಿತ್ ಚಕ್ರತೀರ್ಥ
ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪ-ರೇಖೆ? – ಭಾಗ 1
ಶ್ರೀ ರಾಮನವಮಿಯ ದಿವಸ ರಾಮನಾಮಾಮೃತವೆ
ಪಾನಕ, ಪನಿವಾರ, ಕೋಸಂಬರಿ;
ಕರಬೂಜ ಸಿದ್ದೋಟುಗಳ ಹೋಳು, ಸೀಕರಣೆ;
ವ್ಯಕ್ತಮಧ್ಯಕ್ಕೆ ಬಂದುರಿವ ಶಬರಿ
ಎಂದು ಶುರುವಾಗುತ್ತದೆ ಅಡಿಗರ ಕವಿತೆ. ರಾಮನ ಹುಟ್ಟುಹಬ್ಬ ಬೇಸಗೆಯಲ್ಲಿ ಬರುತ್ತದೆ ಎನ್ನುವುದನ್ನು ಹೇಳಲಿಕ್ಕೇ ಕವಿ ಎರಡು ಸಾಲುಗಳಲ್ಲಿ ಪಾನಕ, ಪನಿವಾರ, ಕೋಸಂಬರಿ, ಕರಬೂಜ ಸಿದ್ದೋಟುಗಳ ಹೋಳು, ಸೀಕರಣೆಗಳನ್ನು ಹರಡಿ ಕೂತಿದ್ದಾರೆ! ಇಲ್ಲಿ ಪಾನಕ ಎಂದರೆ ಪಾನಕ, ಪನಿವಾರ ಎಂದರೆ ಪನಿವಾರ. ಅದಕ್ಕೆ ಎರಡನೆ ಅರ್ಥ ಇರುವ ಹಾಗೇನೂ ಕಾಣುತ್ತಿಲ್ಲ. ನಾನು ಈಗಾಗಲೇ ಹೇಳಿದ ಹಾಗೆ, ಅಡಿಗರು ಚಿತ್ರಕ ಶಕ್ತಿಯ ಕವಿ. ಒಂದು ಸಂಗತಿಯನ್ನು ವಿವರಿಸಲು ಎಷ್ಟು ಮೂರ್ತ ಉದಾಹರಣೆಗಳು ಸಾಧ್ಯವೋ ಅಷ್ಟನ್ನು ಎತ್ತಿಕೊಂಡು ಬರಬಲ್ಲ ಪ್ರತಿಭಾವಂತ. “ಬೇಸಗೆ” ಅಂದಿದ್ದರೆ ಸಾಕಿತ್ತು. ರಾಮನ ಬರ್ತ್‍ಡೇ ಸಮಯದಲ್ಲಿ ಸೆಕೆ ವಿಪರೀತ ಇರುತ್ತೆ ಎಂದಿದ್ದರೂ ನಡೆಯುತ್ತಿತ್ತು. ಆದರೆ, ಅಂತಹ ಯಾವ ಮಾತನ್ನೂ ಹೇಳದೆ ಪಾನಕ-ಕೋಸಂಬರಿಗಳ ಬಗ್ಗೆ ಹೇಳುತ್ತ ಅಡಿಗರು ಒಂದು ವಿಭಿನ್ನ ವಾತಾವರಣವನ್ನು ಸೃಷ್ಟಿಸುತ್ತಾರೆ. ಅದನ್ನು ಓದುವಾಗ ನಮಗೆ ಹಬ್ಬದ ವಾತಾವರಣ ಕಂಡಂತೆ ಆಗಬೇಕು. ಆ ಸಿಹಿಭಕ್ಷ್ಯಗಳನ್ನು ತಿಂದಹಾಗನಿಸಬೇಕು. ಕಾವ್ಯದ ಉದ್ಧೇಶ ರಸೋತ್ಪತ್ತಿಯಲ್ಲವೆ?
ಅದೆಲ್ಲ ಸರಿ, ಆದರೆ ವ್ಯಕ್ತಮಧ್ಯಕ್ಕೆ ಬಂದುರಿವ ಶಬರಿ – ಎಂಬ ಸಾಲಿಗೆ ಏನರ್ಥ? ಇಷ್ಟೆಲ್ಲ ಹಬ್ಬದ ವಾತಾವರಣ ಕಟ್ಟಿಕೊಡುವಾಗ ಮಧ್ಯದಲ್ಲಿ ಶಬರಿ ಯಾಕೆ ಬರಬೇಕು? ಅವಳು ಯಾಕೆ ಉರಿಯಬೇಕು? ವ್ಯಕ್ತಮಧ್ಯ ಎಂಬ ಪದವನ್ನು ಅಡಿಗರು ಎತ್ತಿಕೊಂಡಿರುವುದು (ಇತ್ತೀಚೆಗೆ ಕೆಲವು ಬುದ್ಧಿವಂತರು ಸುಡಬೇಕು ಎಂದು ಆದೇಶಿಸಿದ) ಭಗವದ್ಗೀತೆಯಿಂದ! ಅಲ್ಲಿ ಸಾಂಖ್ಯಯೋಗದಲ್ಲಿ ಮತ್ತಷ್ಟು ಓದು
ವಾಲ್ಮೀಕಿ ಯಾರು?
– ನವೀನ್ ನಾಯಕ್
ಕೆ.ಎಸ್ ನಾರಾಯಣಾಚಾರ್ಯರ ” ವಾಲ್ಮೀಕಿ ಯಾರು ” ಎಂಬ ಕೃತಿಗೆ ನಿಷೇಧದ ಭೀತಿ ಎದುರಾಗಿದೆ. ಕೆಳವರ್ಗದವರು ಮಹಾಗ್ರಂಥಗಳನ್ನು ಬರೆಯಲು ಸಾಧ್ಯವಿಲ್ಲ ಅದು ಕೇವಲ ಬ್ರಾಹ್ಮಣರ ಸೊತ್ತು ಎಂಬಂತೆ ಪುಸ್ತಕ ಸೂಚಿಸುತ್ತದೆ ಎಂಬ ಆರೋಪವನ್ನೂ ಹೊರಿಸಿ ಹಲವು ಸಂಘಟನೆಗಳು ಪ್ರತಿಭಟಿಸುತ್ತಿವೆ. ಈ ಎಲ್ಲಾ ವಿವಾದಗಳಿಗೆ ಮೂಲ ಕಾರಣ ವಾಲ್ಮೀಕಿಯವರ ಜನ್ಮ ವೃತ್ತಾಂತವನ್ನು ಕೆ ಎಸ್ ನಾರಾಯಣಾಚಾರ್ಯರು ತಡಕಾಡಿದ್ದು. ತಡಕಾಡಲು ಕಾರಣವನ್ನೂ ಅವರು ಕೃತಿಯಲ್ಲೇ ನೀಡಿದ್ದಾರೆ. ವಾಲ್ಮೀಕಿ ರಾಮಾಯಣ ಮತ್ತು ಆನಂದರಾಮಾಯಣದ ಆಧಾರವನ್ನೇ ಈ ಕುರಿತ ಚರ್ಚೆಗೆ ಬಳಸಿದ್ದಾರೆ.
ವಾಲ್ಮೀಕಿ ಬ್ರಾಹ್ಮಣ ಪುತ್ರನೋ ಇಲ್ಲವೋ ಎಂಬುದಕ್ಕೆ ಲೇಖಕರು ಕೊಟ್ಟ ಆಧಾರಗಳು ಇಂತಿವೆ.ವಾಲ್ಮೀಕಿಯವರ ಆಶ್ರಮದಲ್ಲಿ ನೆಲೆಸಿ ಲವ ಕುಶರನ್ನು ಹಡೆದ ಸೀತಾಮಾತೆಯನ್ನು ಮತ್ತೆ ಶ್ರೀರಾಮನೆದುರು ನಿಲ್ಲಿಸಿ ” ಈಕೆ ಪರಿಶುದ್ಧೆ ! ಸ್ವೀಕರಿಸು ” ಎನ್ನುವಾಗ ಮಹರ್ಷಿಯು ತಾನು ಸುಳ‍್ಳಾಡುವವನು ಅಲ್ಲ ಎಂದು ಪ್ರತಿಜ್ಞೆ ಮಾಡಿ ತನ್ನ ಕುಲಗೋತ್ರವನ್ನು ತಂದೆಯವರನ್ನು ಸ್ಮರಿಸಿ ಹೇಳುತ್ತಾರೆ ” ಪ್ರಚೇತಸೋಹಂ ದಶಮಃ ಪುತ್ರೋ , ರಾಘವನಂದನ” |
( ಉತ್ತರಾಯಣ 96-16 ). ಹೇ ಶ್ರೀರಾಮ ! ನಾನು ಪ್ರಚೇತಸನೆಂಬ ಮಹರ್ಷಿಯ ಹತ್ತನೆಯ ಮಗ. ಎರಡನೆಯದಾಗಿ ಲವಕುಶರು ಶ್ರೀರಾಮನೆದುರೇ ರಾಮಾಯಣವನ್ನು ಗಾನ ಮಾಡಿ ತೋರಿಸಿದಾಗ ಶ್ರೀರಾಮಚಂದ್ರನು ಇದನ್ನು ಬರೆದವರಾರು ಎಂದು ಕೇಳಿದಾಗ, ಮಕ್ಕಳು ಇದನ್ನು ಭಾರ್ಗವ ಗೋತ್ರದ ಮಹರ್ಷಿ ವಾಲ್ಮೀಕಿ ಬರೆದರು ಎನ್ನುತ್ತಾರೆ. ಇದಲ್ಲದೇ ಇತರ ಪುರಾಣಗಳಲ್ಲೂ ಅಲ್ಲಲ್ಲಿ ವಾಲ್ಮಿಕಿಯನ್ನು ” ಪ್ರಾಚೇತಸ , ಭಾರ್ಗವ, ವರುಣಪುತ್ರ, ಭೃಗುಸೋದರ ” ನೆಂದೂ ಹೇಳಿದೆ.
ವಾಲ್ಮೀಕಿಯವರು ಬೇಡನಾಗಲು ಇರುವ ಕಾರಣಗಳನ್ನು ಹಲವಾರು ಕಾವ್ಯಗಳು ಎರಡು-ಮೂರು ರೀತಿಯಲ್ಲಿ ಚಿತ್ರಿಸಿವೆ. ಬೇಡನಾದ ನಂತರ ವಾಲ್ಮೀಕಿಯವರಿಗೆ ಸಪ್ತರ್ಷಿಗಳು ಅಥವ ನಾರದರ ಅನುಗ್ರಹದಿಂದ ರಾಮ ಮಂತ್ರದ ಉಪದೇಶವನ್ನು ಪಡೆದು ಜಪಿಸತೊಡಗಿದರು. ಕಾಲ ಚಲಿಸಿದಂತೆ ಬೇಡನ ಸುತ್ತ ಹುತ್ತ ( ವಾಲ್ಮೀಕ ) ಬೆಳೆಯಿತು. ನಂತರ ಸಪ್ತರ್ಷಿಗಳು ಬೇಡನನ್ನು ಹೊರ ಬರುವಂತೆ ಕರೆದಾಗ ಹುತ್ತವನ್ನೊಡೆದುಕೊಂಡು ಹೊರ ಬಂದು ವಾಲ್ಮೀಕರೆಂದು ಪ್ರಖ್ಯಾತರಾದರು. ಇದರಲ್ಲಿ ಆಚಾರ್ಯರು ಯಾವುದಾದರೂ ವಿಷಯವನ್ನು ಸೃಷ್ಟಿಸಿರುವುದು ಕಂಡು ಬರುತ್ತದೆಯೇ ? ಇಲ್ಲವಲ್ಲ. ಕೃತಿಯ ಮದ್ಯಭಾಗದಲ್ಲಿ ಲೇಖಕರು ಬರೆಯುತ್ತಾರೆ, ಪಾಮರನಾದ ಬೇಡನೊಬ್ಬ ದಿಢೀರನೆ ರಾಮಾಯಣದಂತಹ ಕಾವ್ಯ ಬರೆದ ಎಂದು ಹೇಳುವುದು ಹಾಸ್ಯಾಸ್ಪದವಾಗುತ್ತದೆ. ಈ ವಾಕ್ಯದ ಕುರಿತಾದ ದೃಷ್ಠಿಕೋನವನ್ನು ಈಗ ತಿರುಚಿರುವುದೇ ವಿವಾದಕ್ಕೆ ಮೂಲವಾಗಿರುವುದು.
ಮತ್ತಷ್ಟು ಓದು