ಮಹಾತ್ಮ ಬಸವಣ್ಣನವರು ನಮಗಿಂದು ಎಷ್ಟು ಪ್ರಸ್ತುತ?
– ಡಾ. ಸಂಗಮೇಶ ಸವದತ್ತಿಮಠ
ಬಸವಣ್ಣನವರೆಂಬ ಮಹಾತ್ಮರ ಬಗ್ಗೆ ಯಾರಿಗೆ ಗೊತ್ತಿಲ್ಲ? ಬಿಜ್ಜಳನ ಆಸ್ಥಾನದಲ್ಲಿದ್ದು ರಾಜಕಾರಣಿ, ಆಡಳಿತಗಾರ; ಧರ್ಮತತ್ತ್ವಪ್ರಮೇಯಗಳನ್ನು ಹೊಸ ಆನ್ವಯಿಕತೆಯಿಂದ ಪ್ರಯೋಜನಕಾರಿಯಾಗಿಸಿದ್ದರಿಂದ ತತ್ತ್ವಜ್ಞಾನಿ; ಧರ್ಮದ ಚೌಕಟ್ಟಿನೊಳಗೆ ಭಕ್ತಿಯ ಸೋಪಾನಗಳನ್ನು ಇಟ್ಟು, ಆಧ್ಯಾತ್ಮದ ಬೆಳಸು ತೆಗೆದ ಶ್ರೇಷ್ಠ ಆಧ್ಯಾತ್ಮಸಂತ,ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಕನಸುಗಾರ, ಧೀಮಂತ ಸಮಾಜಪುರುಷ, ಬದಲಾವಣೆಯ ಹರಿಕಾರ ಕ್ರಾಂತಿಪುರುಷ ಬಸವಣ್ಣ.
ವೇದಿಕೆ, ಸಂದರ್ಭ ಸಿಕ್ಕರೆ ಸಾಕು, “12ನೇ ಶತಮಾನದ ಶರಣರ ಜೀವನ ಮತ್ತು ಸಂದೇಶಗಳು ನಮ್ಮ ಇಂದಿನ ಕಾಲದಲ್ಲಿಯೂ ಬಹಳ ಪ್ರಸ್ತುತ, ಮಾದರಿ, ಅನುಸರಿಸಲು ಯೋಗ್ಯ” ಎಂದೆಲ್ಲ ಒತ್ತಿ ಒತ್ತಿ ಹೇಳುತ್ತೇವೆ. ವಾಸ್ತವವಾಗಿ ಅವುಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ. ಇದು ವಿಪರ್ಯಾಸವಲ್ಲದೆ ಮತ್ತೇನು? ಧಾರ್ಮಿಕ, ಸಾಮಾಜಿಕ, ರಾಜಕೀಯ ಯಾವುದೇ ಕ್ಷೇತ್ರವಿರಲಿ ಅಲ್ಲಿ ಬಸವಣ್ಣನವರು ಯಾವುದನ್ನು ಹೇಳಿಲ್ಲವೋ ಅದನ್ನು ನಾವು ಮಾಡುತ್ತ ಅವರಿಗೆ ದ್ರೋಹ ಬಗೆಯುತ್ತಿದ್ದೇವೆ ಅನ್ಯಾಯಮಾಡುತ್ತಿದ್ದೇವೆ. ವಚನಗಳ ಪ್ರಸ್ತುತತೆಯ ಪ್ರಸ್ತಾಪ ಮಾಡುವವರು ಸಾಮಾನ್ಯವಾಗಿ ಬಸವಣ್ಣನವರ ಸಾಮಾಜಿಕ ರಾಜಕೀಯ ವಿಷಯಗಳು ಮತ್ತು ಆಚರಣಾತ್ಮಕ ವಿಷಯಗಳನ್ನು ಒತ್ತುಕೊಟ್ಟು ಹೇಳುತ್ತಾರೆ. ಸರಿ, ಆದರೆ ಬಸವಣ್ಣನವರು ಪರಮಾರ್ಥ,ಶಿವಯೋಗ,ಆಧ್ಯಾತ್ಮ ವಿಷಯಗಳನ್ನೂ ಕೂಡ ಅಷ್ಟೇ ಗಂಭೀರವಾಗಿಯೇ ತಗೆದುಕೊಂಡವರು.ಅಂಥ ವಿಷಯಗಳು ಈಗ ನಮಗೆ ಎಷ್ಟು ಪ್ರಸ್ತುತ? ಎಂಬುದನ್ನು ನಾವು ಬಹುತೇಕ ಬದಿಗೆ ಸರಿಸಿ ಅವರು ಲೌಕಿಕದ ಬಗ್ಗೆ ಹೇಳಿದ್ದನ್ನೇ ಪ್ರಸ್ತುತತೆಗೆ ಹೆಚ್ಚು ಬಳಸಿಕೊಳ್ಳಲಾಗುತ್ತಿದೆ. ಬಸವಣ್ಣನವರು ತೆರೆದ ಮನಸ್ಸಿನಿಂದ ಲೋಕವ್ಯವಹಾರವನ್ನು,ಪರಮಾರ್ಥವನ್ನು ಬಗಿದು ನೋಡಿದವರು. ಅವರಿಗೆ ಲೌಕಿಕ ಎನ್ನುವುದು ವರ್ಜ್ಯವಾಗಿರಲಿಲ್ಲ. ಆದರೆ ಬರೀ ಲೌಕಿಕದಲ್ಲೇ ತೊಳಲಾಡಿದರೆ ಪ್ರಾಣಿಗೂ ಮನುಷ್ಯನಿಗೂ ವ್ಯತ್ಯಾಸ ಇರುವುದಿಲ್ಲ. ಮನುಷ್ಯನ ಬದುಕಿನ ಸಾರ್ಥಕತೆ ಇರುವುದು ಲೌಕಿಕವನ್ನು ಸಾತ್ವಿಕವಾಗಿ ಅನುಭವಿಸುತ್ತಲೇ ಪರಮಾರ್ಥದ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದರಲ್ಲಿದೆ ಎಂಬುದನ್ನು ಅವರು ಆಚರಿಸಿ ತೋರಿಸಿಕೊಟ್ಟರು.
ಮತ್ತಷ್ಟು ಓದು