ವೈಚಾರಿಕತೆ, ನಾಸ್ತಿಕತೆ ಮತ್ತು ಬುದ್ಧಿಜೀವಿಗಳ ದುರಂತ ಕತೆ
– ರೋಹಿತ್ ಚಕ್ರತೀರ್ಥ
“ನಾವು ವಿಚಾರವಾದಿಗಳಾಗಿ ನಾಸ್ತಿಕರಾಗೋಣ” ಎಂಬ ಮಾತನ್ನು ಒಬ್ಬ ಲೇಖಕ ಇತ್ತೀಚೆಗೆ ಬುದ್ಧಿಜೀವಿಗಳೆ ತುಂಬಿದ್ದ ಸಾಹಿತ್ಯ ಸಮ್ಮೇಳನವೊಂದರಲ್ಲಿ ಹೇಳಿದರಂತೆ. ಬಹುಶಃ ಅವರು ಪ್ರತಿಯೊಬ್ಬ ವಿಚಾರವಾದಿಯೂ ನಾಸ್ತಿಕನಾಗಿರಲೇಬೇಕು ಎಂಬ ಅರ್ಥದಲ್ಲಿ ಆ ಮಾತನ್ನು ಹೇಳಿರಬಹುದು. ಈ ಮಾತಿನ ಒಳಗಿಳಿಯಲು, ಮೊದಲು, ನಾವು “ವಿಚಾರವಾದ” ಅಂದರೆ ಏನು ಎನ್ನುವುದನ್ನು ನೋಡಬೇಕಾಗಿದೆ.
ವಿಚಾರವಾದಕ್ಕೆ ಕನ್ನಡದಲ್ಲಿರುವ ಅರ್ಥ: ವಿಚಾರ ಮಾಡುವ ಶಕ್ತಿ; ಚಿಂತನೆಯ ಶಕ್ತಿ ಎಂದು. ಇನ್ನೂ ಮುಂದುವರಿದು ತಾತ್ವಿಕ ದೃಷ್ಟಿ ಎಂದೂ ಹೇಳಬಹುದು. ಇಂಗ್ಲೀಷಿನಲ್ಲಿ Intellectual attitude, Ideological stance ಎಂದೆಲ್ಲ ಹೇಳುತ್ತಾರೆ. ಅಂದರೆ ಯಾವುದೇ ವಿಷಯವನ್ನು ಸರಿಯಾಗಿ ಗ್ರಹಿಸಿ, ಅದರ ಅಂತರಾರ್ಥವನ್ನು ಅರಿತು ಅದರಂತೆ ನಡೆಯುವವರು ವೈಚಾರಿಕತೆ ಬೆಳೆಸಿಕೊಂಡಿದ್ದಾರೆ ಎಂದು ಹೇಳಬಹುದು. ವಿಚಾರವಾದ ಅಥವಾ ವೈಚಾರಿಕತೆ ಎಂಬುದಕ್ಕೆ ಸಂವಾದಿಯಾಗಿ ಇಂಗ್ಲೀಷಿನಲ್ಲಿ ಬಳಕೆಯಾಗುವ “Intellectualism” ಎಂಬುದಕ್ಕೆ ಇರುವ ಅರ್ಥ: The exercise of the intellect at the expense of the emotions. ಅಂದರೆ, ಒಂದು ವಿಷಯವನ್ನು ಸರಿಯಾಗಿ ಗ್ರಹಿಸಲು ಹೋಗುವಾಗ ಅದಕ್ಕೆ ಸುತ್ತಿಕೊಂಡಿರುವ ಭಾವನಾತ್ಮಕ ಅಂಶಗಳನ್ನೆಲ್ಲ ಬದಿಗಿಟ್ಟು ಸತ್ಯವನ್ನಷ್ಟೇ ಎತ್ತಿ ಹಿಡಿಯುವುದು ಎಂದು ಅರ್ಥ. ಮಗ ಕಳ್ಳತನ ಮಾಡಿದ್ದಾನೆ. ಅದು ತಾಯಿಗೂ ಗೊತ್ತಿದೆ. ಆತನನ್ನು ಸೆರೆಮನೆಗೆ ಹಾಕಿದರೆ ತಾಯಿ ಅನಾಥೆಯಾಗುತ್ತಾಳೆ; ಆದರೆ ಆತನನ್ನು ಶಿಕ್ಷಿಸದೆ ಬಿಟ್ಟರೆ ದೇಶದ ಕಾನೂನಿಗೆ ಅಪಚಾರ. ಅಲ್ಲದೆ ಇದೇ ಉದಾಹರಣೆಯನ್ನು ನೋಡಿ ನೂರಾರು ಜನ ಕಳ್ಳತನಕ್ಕೆ ಇಳಿಯಬಹುದು. ಹಾಗಾಗಿ, ತಾಯಿಯ ಕಣ್ಣೀರನ್ನು ಕಷ್ಟಪಟ್ಟು ಅಲಕ್ಷಿಸಿ ಮಗನಿಗೆ ಶಿಕ್ಷೆಯಾಗುವಂತೆ ನೋಡಿಕೊಂಡು ಕಾನೂನನ್ನು ಎತ್ತಿಹಿಡಿಯುವುದು ಇಂಟಲೆಕ್ಚುಲಿಸಮ್ ಅಥವಾ ವೈಚಾರಿಕತೆಯ ಒಂದು ಮುಖ.
ವೈಚಾರಿಕತೆ – ಈಗೇನೋ ಬಹಳ ಪರಿಚಿತವಾದ ಭಾರತೀಯ ಶಬ್ದ ಅನ್ನಿಸಿದರೂ ಅದರ ಉಗಮವಾದದ್ದು ಭಾರತದಲ್ಲಲ್ಲ. ಇದು ಮಧ್ಯ ಯುರೋಪಿನಲ್ಲಿ ಸುಮಾರು ಹದಿನಾರನೇ ಶತಮಾನದಲ್ಲಿ ಹುಟ್ಟಿದ ಪದ ಮತ್ತು ಪರಿಕಲ್ಪನೆ. ಇದರ ಹುಟ್ಟಿನ ಹಿನ್ನೆಲೆ ತಿಳಿಯಲು ನಾವು ಸ್ವಲ್ಪ ಹಿಂದೆ ಹೋಗಬೇಕಾಗುತ್ತದೆ. ಕ್ರಿಸ್ತ ಹುಟ್ಟಿ ಒಂದೂವರೆ ಸಾವಿರ ವರ್ಷಗಳಾದರೂ ಯುರೋಪಿಯನ್ನರು ಬೈಬಲ್ಲಿನ ಭಾಗಗಳನ್ನು ಪ್ರಶ್ನೆ ಮಾಡಲು ಹೋಗಿರಲಿಲ್ಲ. ಚರ್ಚು ಅತ್ಯಂತ ಪ್ರಬಲವಾಗಿದ್ದ ವ್ಯವಸ್ಥೆ. ಅದನ್ನು ಎದುರುಹಾಕಿಕೊಳ್ಳುವವರಿಗೆ ಸಿಗುತ್ತಿದ್ದ ಪ್ರತಿಫಲ ಮರಣ. ಬೈಬಲ್ಲಿನ ವಿರುದ್ಧ ಮಾತಾಡಿದವರನ್ನು ಒಂದೋ ಜೀವಮಾನವೆಲ್ಲ ಸೆರೆಯಲ್ಲಿ ಹಾಕಿ ಭೀಕರ ಶಿಕ್ಷೆಗಳನ್ನು ಕೊಡಲಾಗುತ್ತಿತ್ತು ಇಲ್ಲವೇ ಹಲವು ಹತ್ಯಾರಗಳ ಮೂಲಕ ದೇಹವನ್ನು ಹಾಯಿಸಿ ಕೊಲ್ಲಲಾಗುತ್ತಿತ್ತು. ಪ್ರಭುತ್ವ ಯಾವತ್ತೂ ತನ್ನ ವಿರುದ್ಧ ಮಾತಾಡುವವನನ್ನು ಬದುಕಗೊಡುವುದಿಲ್ಲ ಅಥವಾ ಆತನನ್ನು ಸಂಪೂರ್ಣವಾಗಿ ಅಲಕ್ಷಿಸಿ ಕೊನೆಗೆ ತಾನಾಗಿ ಆತ ಬಾಯಿಮುಚ್ಚಿಕೊಂಡು ಸುಮ್ಮನಾಗುವಂತೆ ಮಾಡುತ್ತದೆ. ಗ್ರೀಸ್, ರೋಮ್ ನಾಗರಿಕತೆಗಳಲ್ಲಿ ಆ ಕಾಲದಲ್ಲಿ ರಾಜರಾಗಿದ್ದವರು, ಜೊತೆಗೆ ಅವರ ಆಸ್ಥಾನ ಪಂಡಿತರಾಗಿದ್ದವರು ಜನ ನಂಬಬೇಕಾದ ಮಾತುಗಳನ್ನು ಹೇಳುತ್ತಿದ್ದರು, ಬರೆದಿಡುತ್ತಿದ್ದರು. ಅವುಗಳು ಸರಿಯಿಲ್ಲ; ಸುಳ್ಳಿನ ಕಂತೆ ಎಂದವರನ್ನು ಅಲಕ್ಷಿಸಿ ದೂರಕ್ಕೆಸೆಯುತ್ತಿದ್ದರು. ಹಾಗಾಗಿ ಸೂರ್ಯ ಭೂಮಿಗೆ ಸುತ್ತು ಬರುತ್ತಾನೆ ಎಂದು ಹೇಳಿದ ಟಾಲೆಮಿ, ಅರಿಸ್ಟಾಟಲ್ ಮೊದಲಾದವರ ತಪ್ಪು ಚಿಂತನೆಗಳು ನೂರಾರು ವರ್ಷಗಳ ಕಾಲ ನಿಂತವು. ಟಾಲೆಮಿ ರಾಜನಾಗಿದ್ದ, ಅರಿಸ್ಟಾಟಲ್ ಅಸ್ಥಾನ ಪಂಡಿತನಾಗಿದ್ದ ಎನ್ನುವುದೇ ಇದಕ್ಕೆ ಕಾರಣ. ಸೂರ್ಯನ ಸುತ್ತ ಭೂಮಿ ತಿರುಗುತ್ತಿದೆ ಎಂದು ಅವರ ಕಾಲದಲ್ಲಿ ಹೇಳಿದ ಅರಿಸ್ಟಾರ್ಕಸ್‍ನ ದನಿ ಪ್ರಭುತ್ವದ ಧ್ವನಿವರ್ಧಕದ ಕೆಳಗೆ ಉಡುಗಿಯೇ ಹೋಯಿತು.
ಮತ್ತಷ್ಟು ಓದು
ನಾವು, ನಮ್ಮ ಹರಕೆ, ನಮ್ಮ ಸೇವೆ!
– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ,ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು
ದಿನಾಂಕ 19-04-2015 ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ “ಮಾದಪ್ಪನ ಸನ್ನಿಧಿಯಲ್ಲಿ ಸಣ್ಣ ಸ್ವಚ್ಛಭಾರತ್” ಲೇಖನ ಪ್ರಕಟವಾಯಿತು. ಇದರಲ್ಲಿ ಜಾಗದ ಮಿತಿಯಿಂದಲೋ ಸೈದ್ಧಾಂತಿಕ ಮಿತಿಯಿಂದಲೋ ಲೇಖನದ ಬಹುತೇಕ ಭಾಗಗಳಿಗೆ ಕತ್ತರಿ ಪ್ರಯೋಗವಾಗಿತ್ತು. ಅದರ ಪೂರ್ಣಪಾಠ ಇಲ್ಲಿದೆ.
ಮಲೆ ಮಹದೇಶ್ವರ ಬೆಟ್ಟ. ಬೆಳಿಗ್ಗೆ ಆರು ಗಂಟೆಯ ಸಮಯ. ದೇವಾಲಯದ ಮುಂಭಾಗ ರಾತ್ರಿ ಬಂದ ಯಾತ್ರಿಗಳು ಅನುದ್ದೇಶಪೂರ್ವಕ ಚೆಲ್ಲಿದ ಕಸಕಡ್ಡಿಗಳು ಅಲ್ಲಲ್ಲಿ ಹರಡಿದ್ದವು. ಹರಕೆ ತೀರಿಸಲು ಬಂದ ಭಕ್ತಾದಿಗಳಿಂದ ಬಗೆಬಗೆಯ ಆಚರಣೆಗಳು ಸುತ್ತಲೂ ನಡೆಯುತ್ತಿದ್ದವು. ಮುಖ್ಯ ದೇಗುಲದ ಮುಂಭಾಗದಲ್ಲಿರುವ ಕಲ್ಯಾಣಿ ಪಕ್ಕದ ಜಡೆ ಮಾದೇಶ್ವರ ಗುಡಿಯ ಮುಂದೆ ಹತ್ತಾರು ಹೆಂಗಸರು ಮಕ್ಕಳು ಸೇರಿಕೊಂಡಿದ್ದರು. ಒಬ್ಬ ಹುಡುಗ “ಹಾಲುಮಲೆ ಏಳುಮಲೆ, ಜೇನುಮಲೆ, ಎಪ್ಪತ್ತೇಳುಮಲೆ ನಮ್ಮ ಮುದ್ದು ಮಾದೇಶ್ವರನಿಗೆ ಉಘೇ ಅನ್ರಪ್ಪಾ” ಅನ್ನುತ್ತಿದ್ದಂತೆ ಸುತ್ತ ನೆರೆದಿದ್ದವರು ಒಕ್ಕೊರಲಲ್ಲಿ “ಉಘೇ ಉಘೇ” ಅನ್ನುತ್ತಿದ್ದರು. ಗುಡಿಯ ಮುಂದೆ ಕತ್ತೆಯೊಂದು ತರಬೇತಿ ನೀಡಿದ್ದಾರೇನೋ ಎಂಬಂತೆ ಸ್ತಬ್ದವಾಗಿ ನಿಂತಿತ್ತು. ಕೆಲವು ಹೆಂಗಸರು ಅದರ ಕಾಲು ತೊಳೆದರು. ಮತ್ತೆ ಕೆಲವರು ಅದಕ್ಕೆ ಮಲ್ಲಿಗೆ ಹಾರ ತೊಡಿಸಿದರು. ಮತ್ತೆ ಹಲವರು ಅರಿಶಿಣ ಕುಂಕುಮ ಹಾಕಿ ಅದರ ಕಾಲಿಗೆ ಅಡ್ಡ ಬಿದ್ದರು. ಇನ್ನು ಕೆಲವರು ಆರತಿ ಬೆಳಗಿದರು.
ಕತ್ತೆಯ ಪಕ್ಕದಲ್ಲಿ ಹೊಚ್ಚ ಹೊಸ ತೆಂಗಿನ ಗರಿಯಿಂದ ತಯಾರಿಸಿದ ಒಂದಿಷ್ಟು ಪೊರಕೆಗಳನ್ನು ಸಾಲಾಗಿ ಜೋಡಿಸಿದ್ದರು. ಈ ಪೊರಕೆಗಳಿಗೆ ಅರಿಶಿನ ಕುಂಕುಮ ಹಾಕಿ, ಹೂವು ಏರಿಸಿ ಎಲ್ಲರೂ ಕೈ ಮುಗಿದರು. ಒಬ್ಬೊಬ್ಬರೂ ಒಂದೊಂದು ಪೊರಕೆಯನ್ನು ಕೈಗೆತ್ತಿಕೊಂಡರು. ಹುಡುಗ “ಹಾಲುಮಲೆ ಏಳುಮಲೆ, ಜೇನುಮಲೆ, ಎಪ್ಪತ್ತೇಳುಮಲೆ ನಮ್ಮ ಮುದ್ದು ಮಾದೇಶ್ವರನಿಗೆ ಉಘೇ ಅನ್ರಪ್ಪಾ” ಅನ್ನುತ್ತಿದ್ದ. ಉಳಿದವರು “ಉಘೇ ಉಘೇ” ಅನ್ನುತ್ತ ಸುತ್ತಲ ಕಸ ಕಡ್ಡಿಗಳನ್ನು ಗುಡಿಸಿ ಸ್ವಚ್ಛಮಾಡತೊಡಗಿದರು. ಅರ್ಧಗಂಟೆಯಲ್ಲಿ ಸುತ್ತಲ ಪರಿಸರ ತೊಳೆದಿಟ್ಟಂತೆ ಕಂಗೊಳಿಸತೊಡಗಿತು.
ನಮ್ಮದು ಜ್ಞಾನ ಮಾರ್ಗ.ನಿಮ್ಮ ಮಾರ್ಗ ಯಾವುದು ಬುದ್ಧಿಜೀವಿಗಳೇ?
– ರಾಕೇಶ್ ಶೆಟ್ಟಿ
ಬುದ್ಧಿಜೀವಿ/ಸೆಕ್ಯುಲರ್/ಪ್ರಗತಿಪರರಿಗೆ ನಮಸ್ಕಾರ,
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ನಡೆದಿರುವ,ನಡೆಯುತ್ತಿರುವ ಬೌದ್ಧಿಕ ಫ್ಯಾಸಿಸಂನ ವಿರುದ್ಧ ನೀವೆಲ್ಲರೂ ಜನವರಿ ೩೦ನೇ ತಾರೀಖು ಬೆಂಗಳೂರಿನಲ್ಲಿ ಮೆರವಣಿಗೆ ಮತ್ತು ಬಹಿರಂಗ ಸಭೆಯೊಂದನ್ನು ಮಾಡಿದ್ದೀರಿ.ಆ ಸಭೆಯ ಕರಪತ್ರದ ಕೆಲವು ಸಾಲುಗಳ ಮೂಲಕ ನನ್ನ ಈ ಬಹಿರಂಗ ಪತ್ರವನ್ನು ಪ್ರಾರಂಭಿಸುತಿದ್ದೇನೆ.
“ತಾತ್ವಿಕವಾದ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಪರಸ್ಪರ ಗೌರವದಿಂದ ನಡೆದುಕೊಳ್ಳುವ ಸಂಸ್ಕೃತಿ ಕರ್ನಾಟಕದಲ್ಲಿತ್ತು. ಚಾರ್ವಾಕರಿಗೆ ಕೂಡ ನಮ್ಮ ಚರ್ಚೆಯ ಚಾವಡಿಯಲ್ಲಿ ಒಂದಿಷ್ಟು ಜಾಗವಿತ್ತು.ಆದರೆ ಈಗ ಇದ್ದಕ್ಕಿದ್ದ ಹಾಗೆ ಸಾಹಿತಿಗಳು, ಚಿಂತಕರು,ಬುದ್ಧಿಜೀವಿಗಳು,ಪತ್ರಕರ್ತರು ಹೋರಾಟಗಾರರಲ್ಲಿ ಒಬ್ಬೊಬ್ಬರನ್ನೇ ಆಯ್ದು ಹಂಗಿಸಿ,ನಿಂದಿಸಿ,ಅಪಹಾಸ್ಯ ಮಾಡಿ, ಸುಳ್ಳು ಆರೋಪಗಳ ಮೂಲಕ ಅವರ ಚಾರಿತ್ರ್ಯ ಹನನ ಮಾಡಲಾಗುತ್ತಿದೆ.ಇದು ಸತ್ಯ,ನ್ಯಾಯ ಮತ್ತು ನಿಜವಾದ ಧರ್ಮದ ಪರ ಮಾತನಾಡುವವರ ನೈತಿಕ ಸ್ಥೈರ್ಯ ಕುಸಿದುಹೋಗುವಂತೆ ಮಾಡುವ ಹುನ್ನಾರ.ಈ ಕುಟಿಲ ಉದ್ದೇಶಕ್ಕಾಗಿ ಮಾಧ್ಯಮಗಳನ್ನು ಕೂಡ ಬಳಸಿಕೊಳ್ಳಲಾಗುತ್ತಿದೆ. ಜನವಿರೋಧಿ ನಿಲುವು ಹೊಂದಿರುವ ಹಿಡಿಯಷ್ಟಿರುವ ವ್ಯಕ್ತಿಗಳು ತಮ್ಮ ಅಭಿಪ್ರಾಯವನ್ನೇ ಸಾರ್ವಜನಿಕ ಅಭಿಪ್ರಾಯವೆಂದು ಬಿಂಬಿಸಲು ಹೊರಟಿದ್ದಾರೆ.ಇದನ್ನೇ ಬಳಸಿಕೊಂಡು ಮಾಧ್ಯಮಗಳು ತಮ್ಮ ತೀರ್ಮಾನಗಳನ್ನು “ಜನಭಿಪ್ರಾಯ”ದ ಹೆಸರಲ್ಲಿ ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುತ್ತಿವೆ…”
ಹೌದೇ? ನಿಜವಾಗಿಯೂ ಕರ್ನಾಟಕದಲ್ಲಿ ನಮ್ಮ ಸೆಕ್ಯುಲರ್ ‘ಆಪ್ತ ಮಿತ್ರ’ರು ಹೇಳುತ್ತಿರುವಂತೆ ಬೌದ್ಧಿಕವಾಗಿ ಉಸಿರು ಕಟ್ಟಿಸುವ ವಾತವರಣ ನಿರ್ಮಾಣವಾಗಿದೆಯೇ? ಅವರ ಆತಂಕ ಸಕಾರಣವೇ? ಹೌದು ಎನ್ನುವುದು ನನ್ನ ಅಭಿಪ್ರಾಯ.ರಾಜ್ಯದಲ್ಲಿ ನಡೆದ “ಬೌದ್ಧಿಕ ಫ್ಯಾಸಿಸಂ”ನ ಘಟನೆಗಳ ಉದಾಹರಣೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
ಮೊದಲನೆಯ ಉದಾಹರಣೆ :ಬೆಲ್ಜಿಯಂನ ಗೆಂಟ್ ವಿವಿಯ ಸಹಭಾಗಿತ್ವದಲ್ಲಿ ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಪ್ರೊ.ಎಸ್ ಎನ್ ಬಾಲಗಂಗಾಧರ ಅವರ ನೇತೃತ್ವದಲ್ಲಿ ಭಾರತೀಯ ಸಮಾಜ ಮತ್ತು ಸ್ಥಳಿಯ ಸಂಸ್ಕೃತಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದ “ಸ್ಥಳಿಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ(CSLC)”ವನ್ನು ಮುಚ್ಚಿಸಲಾಯಿತು.ಕಾರಣ ಆ ಸಂಸ್ಥೆ ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣಿಯದೇ ತನ್ನ ಸಂಶೋಧನೆಯ ವಿಷಯಗಳನ್ನು ಮಂಡಿಸಿದ್ದು. ಮತ್ತಷ್ಟು ಓದು
ಭಾರತೀಯ ಸಂಸ್ಕೃತಿಯನ್ನು ವಿರೂಪಗೊಳಿಸುವ ಪಾಶ್ಚಾತ್ಯ ಚಿಂತನಾ ಮಾರ್ಗಗಳು
– ಶಿವಕುಮಾರ ಮತ್ತು ಡಂಕಿನ್ ಝಳಕಿ
ದಿನೇಶ್ ಅಮೀನ್ ಮಟ್ಟು ಅವರು ಪ್ರತಿಷ್ಠಿತ ಪತ್ರಿಕೆಯೊಂದಕ್ಕೆ ೨೦೧೨ರಲ್ಲಿ ಬರೆದ ವಿವೇಕಾನಂದರ ಕುರಿತ ಲೇಖನ ಬಹಳಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಈ ಲೇಖನದ ವಿರುದ್ಧ ಎದ್ದ ದನಿಗಳ ಕುರಿತು ತಮ್ಮ ಸಮರ್ಥನೆಯನ್ನು ಹೊಸೆಯುತ್ತಾ, ತಮ್ಮ ಫೇಸ್ಬುಕ್ ಪುಟದಲ್ಲಿ, ತಮ್ಮ ಲೇಖನ ಐತಿಹಾಸಿಕವಾಗಿ ಸರಿಯಾಗಿದೆ ಮತ್ತು ತಾವು ವಿವೇಕಾನಂದರ ಬಗ್ಗೆ ಪ್ರಕಟವಾಗಿರುವ ಸುಮಾರು 200 ಪುಸ್ತಕಗಳನ್ನು ಓದಿದ್ದಾಗಿ ಹೇಳಿಕೊಳ್ಳುತ್ತಾರೆ. ಅವರ ಪರವಾಗಿ ವಾದಿಸುತ್ತ ಮತ್ತೊಬ್ಬರು, ‘ರೋಗಿಷ್ಟ’ ಎನ್ನುವುದು ಬೈಗುಳವೇ ಅಲ್ಲ, ‘ಕಡಿಮೆ ಅಂಕ ಗಳಿಸುವವ’ ಎಂಬುದು ‘ಅವಮಾನದ’ ವಿಷಯವಲ್ಲ ಎಂದು ಹೇಳ ತೊಡಗಿದ್ದಾರೆ. ಈ ಹೊತ್ತಿನಲ್ಲಿ ಕೆಲವು ವಿಚಾರಗಳನ್ನು ಮತ್ತೊಮ್ಮೆ ಚರ್ಚೆಗೆತ್ತಿಕೊಳ್ಳುವುದು ಈ ಪುಟ್ಟ ಲೇಖನದ ಉದ್ದೇಶ.
ಮಟ್ಟುರವರ ವಿವೇಕಾನಂದರ ಕುರಿತ ಲೇಖನದ ಈ ಸಾಲುಗಳನ್ನು ನೋಡಿ: “ಸ್ವಾಮಿ ವಿವೇಕಾನಂದರು ದಡ್ಡ ವಿದ್ಯಾರ್ಥಿಯಾಗಿದ್ದರು. … ಹುಟ್ಟಿನಿಂದಲೇ ರೋಗಿಷ್ಠರಾಗಿದ್ದ ಅವರು ಸಾಯುವ ಹೊತ್ತಿಗೆ ಒಂದೆರಡಲ್ಲ, ಮೂವತ್ತೊಂದು ರೋಗಗಳಿಂದ ಬಳಲಿ ಹೋಗಿದ್ದರು. ಎಲ್ಲ ಬಂಗಾಳಿಗಳಂತೆ ಅವರೊಬ್ಬ ಮಹಾ ತಿಂಡಿಪೋತರಾಗಿದ್ದರು. ಜೀವನದ ಕೊನೆಯ ದಿನದವರೆಗೂ ಅವರು ಮಾಂಸಾಹಾರಿ ಆಗಿದ್ದರು. … ವ್ಯಸನಿಯಂತೆ ಸಿಗರೇಟ್-ಹುಕ್ಕಾ ಸೇದುವ ಧೂಮಪಾನಿಯಾಗಿದ್ದರು. … ತೀವ್ರ ತಲೆನೋವಿನಿಂದ ಹಿಡಿದು ಹೃದಯದ ಕಾಯಿಲೆವರೆಗೆ … ಮಲಬದ್ಧತೆ, ಭೇದಿ, ನರದೌರ್ಬಲ್ಯ, ಮಂಡಿನೋವು, ಕಾಲುಬಾವು ಎಲ್ಲವೂ ಅವರನ್ನು ಕಾಡುತ್ತಿತ್ತು. … ಈ ಎಲ್ಲ ರೋಗಗಳ ನಡುವೆಯೂ ಅವರ ನಾಲಗೆಯ ಚಪಲ ಮಾತ್ರ ಕಡಿಮೆಯಾಗಿರಲಿಲ್ಲ. … (ವಿವೇಕಾನಂದ) ಮಾತ್ರ ಮಾಂಸದ ಅಡುಗೆಯನ್ನು ಬಗೆಬಗೆಯಲ್ಲಿ ಮಾಡುತ್ತಿದ್ದ…. ಕುಟುಂಬದ ಕಷ್ಟಗಳನ್ನು ತಾಯಿಯ ಹೆಗಲ ಮೇಲೆ ಹಾಕಿ ವಿವೇಕಾನಂದರು ಸಂಸಾರ ತೊರೆದು ಸನ್ಯಾಸಿಯಾಗುತ್ತಾರೆ.” ಇವು ಲೇಖನದ ವಾದದ ಕೆಲವೊಂದು ಝಲಕ್ ಅಷ್ಟೇ.