ಹಸಿರ ಪಯಣ …
– ಸುಜಿತ್ ಕುಮಾರ್
ಶಾಂತ ಸಂಜೆಯ ತಿಳಿತಂಪಿನ ಹಿತಕ್ಕೆ ಭಂಗ ತರುವಂತೆ ಬಿಸಿಯಾದ ಗಾಳಿ ಒಮ್ಮೆಲೇ ಬೀಸತೊಡಗಿತ್ತು. ಗಾಳಿಯ ಬೀಸುವಿಕೆಯ ದಿಕ್ಕನ್ನು ಪರಿಗಣಿಸದೆಯೆ ಹಕ್ಕಿಗಳ ಗುಂಪು ತಮ್ಮ ತಮ್ಮ ಗೂಡುಗಳೆಡೆಗೆ ಮುಖಮಾಡಿ ಹಾರತೊಡಗಿದ್ದವು. ಕಪ್ಪು ಬಣ್ಣದ ಟ್ರ್ಯಾಕ್ ಪ್ಯಾಂಟ್, ಅದೇ ಬಣ್ಣದ ಟಿ ಶರ್ಟ್ ಹಾಗು ಅತಿ ದುಬಾರಿಯಾದೊಂದು ಸ್ಪೋರ್ಟ್ಸ್ ಶೋವನ್ನು ಧರಿಸಿ ಮೋಹನ ಜಾಗಿಂಗ್ ಗೆ ಇಳಿದಿದ್ದ. ವಾಹನಗಳಿಗೆ ಪಾರ್ಕ್ ಮಾಡಲೂ ಸರಿಯಾದ ಸ್ಥಳ ಸಿಗದಿರುವ ಸಿಟಿಯಲ್ಲಿ ಆಟೋಟ, ವ್ಯಾಯಾಮಗಳಿಗೆ ಜಾಗವನ್ನು ಕೊಡುವವರ್ಯಾರು? ವಾಹನಗಳೊಟ್ಟಿಗೆಯೇ ರಸ್ತೆಯ ಪಾದಚಾರಿ ಮಾರ್ಗದ ಮೇಲೆಯೇ ಈತನ ಪ್ರತಿದಿನದ ಓಟ. ಹೃದಯ ಸಿಡಿದು ಹೊರಬರುವವರೆಗೂ ಓಡುವುದ ನಿಲ್ಲಿಸಲಾರೆ ಎಂಬುವಂತಿರುತ್ತದೆ ಈತನ ಓಟದ ಧಾಟಿ. ಸುಮಾರು ಮೂರ್ನಾಲ್ಕು ಕಿಲೋಮೀಟರ್ನಷ್ಟು ಓಡಿದ ನಂತರ ಕಾಫಿ ಶಾಪೊಂದರ ಮುಂದೆ ಕೂತು ಕೊಂಚ ದಣಿವಾರಿಸಿಕೊಳ್ಳುತ್ತಾನೆ. ಅಲ್ಲೂ ತನ್ನ ಮೊಬೈಲನ್ನು ಹೊರಗೆಳೆದು ಆಫೀಸಿನ ಇಮೇಲ್ ಗಳನ್ನು ನೋಡತೊಡಗುತ್ತಾನೆ. ಆಗಷ್ಟೇ ಡವಡವ ಬಡಿದು ಶಾಂತವಾಗಿದ್ದ ಹೃದಯ, ಕ್ಲೈಂಟ್ ಒಬ್ಬನ ಇಮೇಲ್ ಅನ್ನು ಕಂಡು ಪುನಃ ಬಡಿಯಹತ್ತಿತು. ಇನ್ನೊಂದು ಸುತ್ತು ಓಡಲು ಬಾಕಿ ಇದ್ದರೂ ತನ್ನ ರೂಮಿನೆಡೆ ದಾಪುಗಾಲು ಹಾಕುತ್ತಾನೆ ಮೋಹನ. ರೂಮಿಗೆ ಬಂದವನೆ ಬೆವರಿನ ದಸೆಯಿಂದ ಅಂಟು-ಅಂಟಾಗಿದ್ದ ಬಟ್ಟೆಯನ್ನೂ ಲೆಕ್ಕಿಸದೆ ತನ್ನ ಆಫೀಸಿನ ಲ್ಯಾಪ್ಟಾಪ್ ಅನ್ನು ಹೊರಗೆಳೆದು ಕೆಲಸದಲ್ಲಿ ನಿರತನಾಗುತ್ತಾನೆ. ನೆಟ್ಟ ದೃಷ್ಟಿಯನ್ನು ಒಂತಿಷ್ಟೂ ಕದಲಿಸದೆ, ಕೀಲಿಮಣೆಗಳ ಮೇಲೆ ಸುಮಾರು ಎರಡು ಗಂಟೆಗಳ ಕಾಲ ಟಕಟಕ ಕುಟ್ಟಿದ ನಂತರ ಗಡಿಯಾರವನ್ನು ನೋಡುತ್ತಾನೆ, ಸಮಯ ಅದಾಗಲೇ ರಾತ್ರಿ ಹನ್ನೊಂದು! ಕೂಡಲೇ ಎದ್ದು ಪಕ್ಕದ ಹೋಟೆಲಿನಿಂದ ಊಟವೊಂದಕ್ಕೆ ಆರ್ಡರ್ ಕೊಟ್ಟು, ಸ್ನಾನಾದಿಗಳನ್ನು ಮುಗಿಸಿ ಹೊರಬಂದು ಊಟವನ್ನು ಮುಗಿಸುವಷ್ಟರಲ್ಲಿ ಮಧ್ಯರಾತ್ರಿ 12! ಒಂತಿಷ್ಟು ಸುದ್ದಿ ಸಮಾಚಾರಗಳನ್ನು ನೋಡಲು ಟಿವಿಯನ್ನು ಆನ್ ಮಾಡಿದ ಕೂಡಲೇ ಕಣ್ಣುಗಳ ರೆಪ್ಪೆಗಳು ಒಂದನ್ನೊಂದು ತಬ್ಬಿಕೊಳ್ಳತೊಡಗುತ್ತವೆ. ಅದೆಷ್ಟೋ ಬಾರಿ ಹೀಗೆಯೇ ಸೋಫಾದ ಮೇಲೆಯೇ ಬೆಳಗಿನವರೆಗೂ ಕೂತೇ ನಿದ್ರಿಸಿರುವುದುಂಟು! ಬೆಳಗೆದ್ದು ಮತ್ತದೇ ಓಟದ ಜೀವನ. ವಾರ, ವಾರಾಂತ್ಯ ಎಂಬ ಯಾವುದೇ ವ್ಯತ್ಯಾಸಗಳಿಲ್ಲದೆ 24*7 ಕಾಲದ ಕೆಲಸ. ಮೊದ ಮೊದಲು ಕಿರಿಕಿರಿಗುಡುತ್ತಿದ್ದ ಮೋಹನ ಕಾಲ ಕಳೆದಂತೆ ಇದೆ ಜೀವನಕ್ಕೆ ಒಗ್ಗಿಕೊಂಡಿದ್ದಾನೆ. ಅದೆಷ್ಟರ ಮಟ್ಟಿಗೆಂದರೆ ಆಗೊಮ್ಮೆ ಈಗೊಮ್ಮೆ ಸಿಗುವ ರಜೆಯ ಸಮಯವನ್ನೂ ಮನೆಯಲ್ಲಿ ಕಳೆಯಲಾಗದೆ ಆಫೀಸಿಗೆ ಬಂದು ಒಬ್ಬನೇ ಕೆಲಸ ಮಾಡುವುದುಂಟು! ಮತ್ತಷ್ಟು ಓದು
ಆಹಾ ಎಷ್ಟು ಮಜವಾಗಿತ್ತು ಆ ಕಾಲ…….!!!!
– ಪವನ್ ಪರುಪತ್ತೇದಾರ್
ನಮ್ಮ ತಾತಂದಿರು ಹಳೆ ಕಾಲದ ಕಥೆಗಳನ್ನು ಹೇಳುವಾಗ ಮೊದಲು ಸ್ವಲ್ಪ ಸಮಾಧಾನದಿಂದ ಕೇಳ್ತೇವೆ ಬರು ಬರುತ್ತಾ ಅವರು ಅದೇ ಕಥೆಗಳನ್ನು ಮತ್ತೆ ಮತ್ತೆ ಹೇಳುತ್ತಾರೆ ನಮಗೂ ಬೋರ್ ಅನಿಸಿ ತಾತಾ ಎಷ್ಟು ಸಲಿ ಅದೇ ಕಥೆಗಳನ್ನ ಹೇಳ್ತಿರ ಅಂತ ಗೊಣಗಿಕೊಂಡು ಎದ್ದು ಹೋಗ್ತಿವಿ. ಇಂಥ ಅನುಭವಗಳು ಸಾಮಾನ್ಯವಾಗಿ ಎಲ್ಲರಿಗು ಆಗ್ತವೆ. ನನಗು ಹಾಗೇ ನಮ್ಮ ತಾತ ಕಥೆಗಳನ್ನ ಹೇಳ್ತಾ ಇದ್ರೂ ಅವರು ತಮ್ಮ ಬ್ರಿಟಿಶ್ ಮೇಷ್ಟ್ರಿಗೆ ಚಳ್ಳೆ ಹಣ್ಣು ತಿನ್ನಿಸಿ ಚಕ್ಕರ್ ಹಾಕಿದ್ದು, ಆಗಿನ ಕಾಲಕ್ಕೆ ಲೋಯರ್ ಸೆಕೆಂಡರಿ ಮುಗಿಸಿ ಕುಟುಂಬದಲ್ಲಿ ಹೆಸರು ಮಾಡಿದ್ದೂ, ಊರಿಗೆ ಮೊದಲನೇ ಎಲೆಕ್ಟ್ರಿಕ್ contractor ಆಗಿದ್ದು, ಊರಿನ ಪ್ರೆಸಿಡೆಂಟ್ ಆಗಿದ್ದು, ಆಗಿನ ಜನ, ಹಾಗೆ ಹೀಗೆ ಹುಹ್! ಇನ್ನು ಬಹಳಾ.
ಆದರೆ ನಾವು ಅವರು ಕಥೆ ಹೇಳುವಾಗ ಮುಗು ಮುರಿದು ಹೋಗುತಿದ್ದೆವಲ್ಲ, ನಮಗೆಲ್ಲಿ ಅರಿವಿತ್ತು ಆಗಿನ ಅ ಕಾಲದ ಬಗ್ಗೆ ಎಷ್ಟು ಹೇಳಿದರು ಮತ್ತೆ ಮತ್ತೆ ನಮ್ಮ ತಾತನವರಿಗೆ ಹೇಳಬೇಕು ಎನಿಸಿತ್ತು ಎಂದು. ಯಾಕಂದರೆ ಅ ಕಾಲವೇ ಹಾಗಿತ್ತು ಎಷ್ಟು ಅದರ ಬಗ್ಗೆ ಕೊಂಡಾಡಿದರು ಸಾಲದಂಥ ಕಾಲ. ನನಗೆ ಯಾಕೆ ಹೀಗನಿಸಿತ್ತು ಅಂದರೆ ನನಗೂ ಸಹ ಕಳೆದ ಹತ್ತು ವರ್ಷಕ್ಕೂ ಇಗ್ಗು ಬಹಳ ವ್ಯತ್ಯಾಸ ಕಾಣುತ್ತಿದೆ. ನನಗೆ ಇತ್ತೀಚಿಗಷ್ಟೇ ಇದರ ಅರಿವಾಯಿತು.
ರಾಗಿ ಬೆಳೆ ಬಲೆ ಚೆನ್ನಾಗೈತೆ ಸ್ವಾಮಿ, ಈ ಸಲ ಒಳ್ಳೆ ಬಂಪರ್ ಕಾಸ್ ಮಾಡ್ತ್ಯ ಅಂತ ಚಿಕ್ಕಣ್ಣ ಹೇಳಿದಾಗ ನಮ್ಮಪ್ಪನಿಗೆ ಒಂಥರಾ ಸಂತೋಷ. ಅಂತು ಟೈಮ್ ಗೆ ಸರ್ಯಾಗಿ ಉಳಿಸಿ, ಬಿತ್ತನೆ ಮಾಡಿಸಿ, ಗೊಬ್ಬರ ಚೆಲ್ಲಿ, ಕಳೆ ಒರೆದು, ಗುಂಟುವೆ ಹಾಕಿಸಿ, ಇರೋ ಮುಕ್ಕಾಲು ಎಕರೆಗೆ 10 ಸಾವಿರ ಖರ್ಚ ಮಾಡಿದ್ದಕ್ಕೆ ಇಷ್ಟ ಮಾತ್ರ ಬೆಳೆ ಆಗಿರೋದು ಚಿಕ್ಕಣ್ಣ ಅಂತ ಸ್ವಲ್ಪ ಬಿಂಕದಿಂದನೆ ಅಂದ್ರು. ಅಂಗಲ್ಲ ಸ್ವಾಮಿ ರೇಟ್ ಚೆನ್ನಾಗೈತೆ ಈಗ ಕೆಂಪು ರಾಗಿ 13 ರೂಪಾಯಿಗೆ ತೊಕೊತಾರೆ ಅಂತ ಚಿಕ್ಕಣ್ಣ ಹೇಳೋವಾಗ ಮಧ್ಯಕ್ಕೆ ಬಾಯಿ ಹಾಕಿ ನಮ್ಮಪ್ಪ ನಂದೊಂದು ೧೫ ಮೂಟೆ ಆಗ್ತದಲ್ಲ ಚಿಕ್ಕಣ್ಣ ಅಂದ್ರು ಸ್ವಲ್ಪ ಹೊತ್ತು ಯೋಚನೆ ಮಾಡಿ ಇನ್ನ ಒಂದು ಹೆಚ್ಚೇ ಆಗ್ತದೆ ಸ್ವಾಮಿ ಅಂದ ಚಿಕ್ಕಣ್ಣ. ನಮ್ಮಪ್ಪ ಸರಿ ಹಾಗಾದ್ರೆ ನಾಳೇನೇ ಕೂಲಿಯವರನ್ನ ಕರೆಸಿಬಿಡು ಕುಯ್ಯಿಸಿಬಿಡನ ಅಂದ್ರು.