“ಧರ್ಮ”ದ ದಾರಿ ತಪ್ಪಿಸುತ್ತಿರುವ ಹಿರಿಯರು;ಇಲ್ಲದ ಹಿಂದೂ ರಿಲಿಜನ್ನಿನ ಭ್ರಮೆಯಲ್ಲಿ ಕಿರಿಯರು
– ರಾಕೇಶ್ ಶೆಟ್ಟಿ
ಕಳೆದ ಜೂನ್ ೯ರಂದು ನಡೆದಿದ್ದ ಮೌಢ್ಯಮುಕ್ತ ಸಮಾಜ,ಕರ್ನಾಟಕ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಅನುಷ್ಠಾನ ಚರ್ಚಾ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಡಾ.ಕಲ್ಬುರ್ಗಿಯವರು,“ದೇವರ ವಿಗ್ರಹಗಳ ಮೇಲೆ ಮೂತ್ರ ಮಾಡಿದರೂ ಏನೂ ಆಗದು” ಎಂದು ಹೇಳಿ ಸುದ್ದಿಯಾಗಿದ್ದರು. ಈಗ ಮತ್ತೆ, ಗದುಗಿನಲ್ಲಿ ಆಯೋಜಿಸಲಾಗಿದ್ದ ’ಸಮಾಜಶಾಸ್ತ್ರ,ಕನ್ನಡಶಾಸ್ತ್ರ ಮತ್ತು ಅರ್ಥಶಾಸ್ತ್ರ ವಿಚಾರಗೋಷ್ಠಿ’ಯಲ್ಲಿ, “ಹಿಂದುಗಳಿಗೆ ಧರ್ಮಗ್ರಂಥವೇ ಇಲ್ಲ.ಭಗವದ್ಗೀತೆ ಹಿಂದುಗಳ ಧರ್ಮ ಗ್ರಂಥವಲ್ಲ,ಅದೊಂದು ವಚನ ಸಾಹಿತ್ಯ… ರಾಜ್ಯ ಸರ್ಕಾರ ನಡೆಸಲು ತೀರ್ಮಾನಿಸಿರುವ ಜಾತಿಜನಗಣತಿಯ ಪ್ರಶ್ನಾವಳಿಯಲ್ಲಿ ಧರ್ಮ,ಜಾತಿ,ಉಪಜಾತಿಗೊಂದು ಪ್ರತ್ಯೇಕ ಕಾಲಂ ನಿಗದಿಪಡಿಸಲಾಗಿದೆ.ಜಾತಿ ಜನಗಣತಿಯಲ್ಲಿ ಧರ್ಮ ಯಾಕೆ ಬೇಕು.ಏಕೆಂದರೆ ಧರ್ಮ ಮತ್ತು ಜಾತಿ ಎರಡೂ ಒಂದೇ.ಜೈನ ಧರ್ಮವೂ ಹೌದು,ಜಾತಿಯೂ ಹೌದು.ಅದರಂತೆ ಮುಸ್ಲಿಂ,ಕ್ರಿಶ್ಚಿಯನ್ ಮತ್ತು ಬೌದ್ಧ ಧರ್ಮವೂ ಹೌದು,ಜಾತಿಯೂ ಹೌದು.ಹೀಗಿದ್ದಾಗ ಇಂತಹ ಅನವಶ್ಯಕ ಕಾಲಂಗಳು ಏಕೆ ಬೇಕು?” ಎಂದು ಪ್ರಶ್ನಿಸಿದ್ದಾರೆಂದು ವರದಿಯಾಗಿತ್ತು.
ಡಾ.ಕಲ್ಬುರ್ಗಿಯವರ ಹೇಳಿಕೆಯನ್ನು ವಿರೋಧಿಸಿ,ಹಿರಿಯ ಸಂಶೋಧಕರಾದ ಡಾ.ಎಂ ಚಿದಾನಂದ ಮೂರ್ತಿಗಳು ವಿಜಯವಾಣಿಯ ಜನಮತ ವಿಭಾಗದಲ್ಲಿ ಪತ್ರವೊಂದನ್ನು ಬರೆದು ’ಕಲ್ಬುರ್ಗಿಯವರು ಗದುಗಿನಲ್ಲಿ ಮಾತನಾಡುತ್ತ ’ಹಿಂದೂ ಎಂಬ ಧರ್ಮವೇ ಇಲ್ಲ’ ಎಂದು ವಿತಂಡವಾದ ಮಾಡಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ’ ಎನ್ನುತ್ತಾ ಮುಂದುವರೆದೂ ’ಧರ್ಮ ಎಂಬ ಶೀರ್ಷಿಕೆಯಡಿಯಲ್ಲಿ ಹಿಂದೂ ಎಂದು ದಾಖಲಿಸಲು ಸುಪ್ರೀಂ ಕೋರ್ಟ್ ಅವಕಾಶ ಮಾಡಿಕೊಟ್ಟಿದೆ.’ಹಿಂದೂ ವಿವಾಹ ಕಾನೂನು’ ಎಂಬ ಕಾನೂನು ಕೂಡ ಇದೆ.ಕಲ್ಕತ್ತೆಯ ಮಠವೊಂದು ತಾನು ಹಿಂದು ವ್ಯಾಪ್ತಿಗೆ ಬರುವುದಿಲ್ಲವೆಂದಾಗ,೧೯೯೫ರಲ್ಲಿ ಸರ್ವೋಚ್ಚ ನ್ಯಾಯಾಲಯದ ಪೂರ್ಣಪೀಠವು ಅದು ’ಹಿಂದು ಧರ್ಮಕ್ಕೆ ಸೇರಿದ ಮಠ” ಎಂದು ತೀರ್ಪು ನೀಡಿದೆ.ಗಾಂಧೀಜಿ ತಮ್ಮನ್ನು ’ಸನಾತನಿ ಹಿಂದೂ’ ಎನ್ನುತ್ತಾರೆ.ಸ್ವಾಮಿ ವಿವೇಕಾನಂದರು ಶಿಕಾಗೋದಲ್ಲಿ ತಮ್ಮನ್ನು ’ಹಿಂದು’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ… ” ಇತ್ಯಾದಿ ಉದಾಹರಣೆಗಳನ್ನು ನೀಡಿದ್ದಾರೆ.
’ಹರಶರಣ ದೆನಿಲೋನ ಹಾದಿಯಲ್ಲಿ’ ಶಿವಪ್ರಕಾಶರ ಲೇಖನಕ್ಕೊಂದು ಪ್ರತಿಕ್ರಿಯೆ
-ಬಾಲಚಂದ್ರ ಭಟ್
ಈ ಲೇಖನ ಪ್ರಜಾವಾಣಿಯಲ್ಲಿ ಪ್ರಕಟವಾದ ಎಚ್.ಎಸ್.ಶಿವಪ್ರಕಾಶರ ಜುಲೈ ೫ ರಂದು ಪ್ರಕಟವಾದ ’ಹರಶರಣ ದೆನಿಲೋನ ಹಾದಿಯಲ್ಲಿ’ ಬರಹಕ್ಕೆ ಪ್ರತಿಕ್ರಿಯೆ. ಬಹಳಷ್ಟು ವಿಷಯಗಳನ್ನು ಲೇಖನದಲ್ಲಿ ಉಲ್ಲೇಖಿಸಿದ್ದನ್ನು ಓದಿದ ನಂತರ ಸ್ವಲ್ಪ ಲೇಖನ ಏನು ಹೇಳಹೊರಟಿದೆಯೆಂಬುದರ ಬಗ್ಗೆ ಗೊಂದಲ ಮೂಡಿತು. ನಾನು ತಿಳಿದುಕೊಂಡಂತೆ ಲೇಖಕರು ಒಟ್ಟಾರೆಯಾಗಿ ಏನು ಹೇಳುತ್ತಾರೆಂದರೆ,
೧. ಆಲೆನ್ ದೆನಿಲೋ ನ ವಿಚಾರಗಳು, ಬಹುತೇಕ ಭಾರತೀಯ ಆಧ್ಯಾತ್ಮಿಕ ಪರಿಕಲ್ಪನೆಗಳಿಗಿಂತ(‘ಕನಿಕರ ಹುಟ್ಟಿಸುವ ಮುಖಮುದ್ರೆಯ ವೇದಾಂತ’) ಭಿನ್ನವಾಗಿತ್ತು, ಹಾಗೂ
೨. ಭಾರತದ ಆಧ್ಯಾತ್ಮಿಕ ವಿಷಯಗಳ ಬಗ್ಗೆ ’ಸ್ಟೀರಿಯೊಟೈಪಡ್ ಪೌರಾತ್ಯ’ ಚಿಂತನೆಗಳಿಂದ, ಹಾಗೂ ವಸಾಹತುಶಾಹಿ ಪರಿಕಲ್ಪನೆಗಳಿಂದ ಹೊರತಾಗಿದ್ದವು.
ಈ ಮೇಲಿನ ಎರಡು ಲೇಖಕರ ಅಭಿಪ್ರಾಯಗಳನ್ನು ಈ ಕೆಳಗಿನಂತೆ ವಿಮರ್ಶಿಸಿದ್ದೇನೆ.ಹಾಗೆಯೆ ಪ್ರಶ್ನೆಗಳ ಮೂಲಕ ನನ್ನಲ್ಲಿನ ಗೊಂದಲಗಳನ್ನ ಪ್ರಸ್ತಾಪಿಸಿದ್ದೇನೆ. ತಪ್ಪಿದ್ದಲ್ಲಿ ಸರಿಪಡಿಸಿ.
೧. ನಾನು ಹಾಗೆ ತಿಳಿದುಕೊಳ್ಳಲು ಕಾರಣ ಶಿವಪ್ರಕಾಶರು ಹೀಗೆ ಉಲ್ಲೇಖಿಸಿರುವದು: “ಕನಿಕರ ಹುಟ್ಟಿಸುವ ಮುಖಮುದ್ರೆಯ ವೇದಾಂತವನ್ನೇ ಭಾರತದ ಸಾರ ಸರ್ವಸ್ವವೆನ್ನುವರು ಆ ಕಾಲದ ಬಹಳ ಮಂದಿ ವಿದ್ವಾಂಸರು. ಅವರಲ್ಲಿ ಬಹುತೇಕ ಪ್ರಭೃತಿಗಳು ಭಾರತೀಯರೆಂದರೆ ಜೀವನೋತ್ಸಾಹ, ರಾಗರತಿಗಳಿಲ್ಲದ ಓಡುಗಾಲ ಯೋಗಿಗಳೆಂದು ಬಗೆದಿದ್ದರು. ಆದರೆ ವಿದ್ವತ್ತು, ರಸಗ್ರಾಹಿತ್ವ ಮತ್ತು ವ್ಯಕ್ತಿಗತ ಆಧ್ಯಾತ್ಮಿಕ ಸಾಧನೆಗಳ ತ್ರಿವೇಣಿಸಂಗಮವಾಗಿದ್ದ ದೆನಿಲೋ ಒತ್ತು ನೀಡಿದ್ದು ಭಾರತೀಯರ ರಸವಿಮುಖಿಯಾದ ಸಮಣಪಂಥೀಯ ಅಧ್ಯಾತ್ಮವಾದಕ್ಕಲ್ಲ, ಐಂದ್ರಿಕ ಜಗತ್ತಿಗೆ ತನ್ನನ್ನು ಪೂರ್ಣವಾಗಿ ತೆರೆದುಕೊಂಡು ಹಾಕುವ ಪ್ರತಿಯೊಂದು ತುತ್ತನ್ನೂ ಬಿಂದುವಾಗಿ ಮಾಡಿಕೊಂಡ ಶೈವ-ಶಾಕ್ತರ ಪೂರ್ಣಾದ್ವೈತಕ್ಕೆ.”