ವಿಷಯದ ವಿವರಗಳಿಗೆ ದಾಟಿರಿ

Posts tagged ‘ಶ್ರೀ ಅರವಿಂದ’

1
ಮಾರ್ಚ್

ಭಾರತವನ್ನು ಅರಿಯಲು ಶ್ರೀ ಅರವಿಂದರೆನ್ನುವ ಕೀಲಿ ಕೈ

– ಡಾ. ರೋಹಿಣಾಕ್ಷ ಶಿರ್ಲಾಲು
ಕರ್ನಾಟಕ ಕೆಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ

ಭಾರತೀಯರೆಲ್ಲಾ ಭಾರತವನ್ನು ಅರ್ಥಮಾಡಿಕೊಂಡಿದ್ದಾರೆಯೇ? ಹೀಗೊಂದು ಪ್ರಶ್ನೆ ಕೇಳಿದರೆ ಅಪ್ರಸ್ತುತವಾದೀತೆ? ಸೂಕ್ಷ್ಮವಾಗಿ  ಗಮನಿಸಿದರೆ ಈ ಪ್ರಶ್ನೆ ಸಕಾರಣವಾಗಿದೆ. ಹೌದಲ್ಲಾ ನಮಗೆ ಭಾರತವೆಷ್ಟು ಅರ್ಥವಾಗಿದೆ? ಅರ್ಥಮಾಡಿಕೊಳ್ಳಲು ಬಳಸಿದ ಆಕರಗಳೇನು? ಈ ಆಕರಗಳ ಅಧಿಕೃತತೆಯೇನು? ಅಥವಾ ನಮ್ಮ ಆಕರಗಳೇ ಪರಕೀಯವೇ? ಪರಕೀಯ ಎಂದಾದರೆ ನಿಜದ ಭಾರತವನ್ನು ತಿಳಿಯುವುದಾದರೂ ಹೇಗೆ? ಹೀಗೆ ಪ್ರಶ್ನೆಗಳ ಸರಮಾಲೆಯೇ ಹುಟ್ಟಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತದೊಳಗೇ ಇರುವ ಒಂದು ಸಣ್ಣ ಗುಂಪು ಇಲ್ಲಿನ ಭೌತಿಕ – ಲೌಖಿಕ ಅನುಕೂಲತೆಗಳೆಲ್ಲವನ್ನು ಪಡೆದುಕೊಂಡೂ ಬೇರೊಂದು ದೇಶಕ್ಕೆ ಜಯಕಾರವನ್ನು ಹಾಕುವ, ತನ್ನ ದೇಶವನ್ನೆ ಭಂಜಿಸುವ, ತುಂಡರಿಸುವ ಕಾರ್ಯೋದ್ದೇಶವನ್ನೇ ಬಹಿರಂಗವಾಗಿ ಸಾರುವ ಪ್ರವೃತ್ತಿಯನ್ನು ತೋರಿಸುತ್ತಿದೆ. ಹಾಗಾದರೆ ಈ ಬಗೆಯ ಪ್ರವೃತ್ತಿಗೆ ಮೂಲ ಕಾರಣವಾದರೂ ಏನು ಎಂದು ಯೋಚಿಸಿದರೆ ಈ ವಿಕೃತಿ ಮೆರೆವ ಮನಸುಗಳಿಗೆ ಭಾರತ ಅರ್ಥವಾಗಿಲ್ಲ ಎನ್ನುವುದು ಸ್ಪಷ್ಟ. ಅಥವಾ ಭಾರತವನ್ನು ಭಾರತೀಯ ಕಣ್ಣುಗಳಿಂದ ನೋಡುವ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ ಎನ್ನಬೇಕು. ಹಾಗೆಂದು ಈ ದೇಶವನ್ನು ಅರ್ಥೈಸಿಕೊಳ್ಳಲು ಮಾಡಿದ ಪ್ರಯತ್ನಕ್ಕೂ ನೂರಾರು ವರ್ಷಗಳ ಇತಿಹಾಸವಿದೆ. ಅಂತಹ ಹಲವು ಪ್ರಯತ್ನಗಳ ಪರಿಣಾಮವಾಗಿಯೇ ಭಾರತ ಉಳಿದಿದೆ. ಇಂದಿನ ತಲೆಮಾರಿಗೆ ಭಾರತವನ್ನು ಅದರ ಮೂಲ ಸ್ವರೂಪದಲ್ಲೇ ಗ್ರಹಿಸಲು ಇರುವ ಜ್ಞಾನದ ಆಕರಗಳನ್ನು ಶೋಧಿಸಲು ಹೊರಟರೆ ಕಣ್ಮುಂದೆ ಕಾಣಿಸಿಕೊಳ್ಳುವ ಜ್ಞಾನನಿಧಿ ಸ್ವರೂಪದ ಶಿಖರಗಳಲ್ಲಿ ಶ್ರೀ ಅರಬಿಂದೋ ಅವರ ವಿಚಾರಧಾರೆಯೂ ಒಂದು.

ಒಂದು ಶತಮಾನದ ಹಿಂದೆ ಅಂದರೆ 1920ರಲ್ಲಿ ಪ್ರಕಟವಾದ ಶ್ರೀ ಅರಬಿಂದೋ ಅವರ ಒಂದು ಕಿರು ಗ್ರಂಥ ‘The Renaissance in India’ ಇಂದಿಗೂ ದೃಷ್ಟಿ ಕಳೆದುಕೊಂಡ ಭಾರತೀಯರಿಗೆ ಭಾರತವನ್ನು ಕಾಣಿಸುವ ಜ್ಞಾನದ ಕನ್ನಡಕದಂತಿದೆ. ಈ ಕೃತಿ ಮೂಲತಃ ನಾಲ್ಕು ಪ್ರಬಂಧಗಳ ಸಂಕಲನ. 1920ರಲ್ಲಿ ಪರಿಷ್ಕೃತಗೊಂಡು ಗ್ರಂಥ ರೂಪದಲ್ಲಿ ಪ್ರಕಟವಾಗುವ ಪೂರ್ವದಲ್ಲಿ 1918ರಲ್ಲಿ ‘ಆರ್ಯ’ ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಮಿ. ಜೇಮ್ಸ್ ಕಝಿನ್ಸ್ ಎಂಬ ವಿದ್ವಾಂಸರು ಬರೆದ ಭಾರತದ ನವೋತ್ಥಾನ ಎನ್ನುವ ವಿಚಾರಪೂರ್ಣ ಗ್ರಂಥದ ಹಿನ್ನೆಲೆಯಲ್ಲಿ ಈ ಪ್ರಬಂಧ ಸರಣಿ ಹುಟ್ಟಿಕೊಂಡು, ಈ ಸರಣಿ ಬೆಳೆದು ಶ್ರೀ ಅರವಿಂದ ವಿಚಾರಧಾರೆಯು ತುಂಬಿ ಹರಿಯಿತು.

ಮತ್ತಷ್ಟು ಓದು »

18
ಫೆಬ್ರ

ಅಂಬಿಕಾತನಯದತ್ತರ “ ಬೆಳಗು” – ಶ್ರೀ ಅರವಿಂದರ “ ಚಿನ್ಮಯದ ಆತ್ಮದೀಪ ”

– ಪುಟ್ಟು ಕುಲಕರ್ಣಿ,ಕುಮಟಾ

ಬೇಂದ್ರೆ ಮತ್ತು ಅರಬಿಂದೋವರಕವಿ ಅಂಬಿಕಾತನಯದತ್ತರು , ಜ್ಞಾನಪೀಠ ಪ್ರಶಸ್ತಿ ಸ್ವೀಕರಿಸುವ ಮುನ್ನ ಮಾಡಿದ ಭಾಷಣದಲ್ಲಿ ಒಂದು ಸಾಲು ಹೀಗಿದೆ, ‘ ನನ್ನ “ಬೆಳಗು” ಮತ್ತು “ಹಕ್ಕಿ ಹಾರುತಿದೆ” ಕವನಗಳನ್ನು ಮುಗ್ಧ ವಿದ್ಯಾರ್ಥಿಗಳಿಗೆ ಕಲಿಸಿ ಕೊಡಲಾಗುತ್ತಿದೆ. ಆದರೆ ಅದನ್ನು ಕಲಿಸುತ್ತಿರುವ ಶಿಕ್ಷಕರು ಆ ವಿದ್ಯಾರ್ಥಿಗಳಿಗಿಂತ ಮುಗ್ಧರಾಗಿದ್ದಾರೆ….. “ . ಈ ಸಾಲುಗಳನ್ನು ಓದಿದಾಗ , ಇಲ್ಲಿಯವರೆಗೂ “ಬೆಳಗು” ಕವನದ ಬಗೆಗೆ ಬಂದ ವಿಶ್ಲೇಷಣೆಗಳ ಕುರಿತು ಕವಿಗೆ ತೃಪ್ತಿ ಇಲ್ಲವೆಂದು ತೋರುತ್ತಿದೆ. ಹಾಗಾದರೆ ಈ “ಬೆಳಗು” ಮತ್ತು “ಹಕ್ಕಿ ಹಾರುತಿದೆ ನೋಡಿದಿರಾ” ಕವನಗಳನ್ನು ಬೇರೊಂದು ಆಯಾಮದಿಂದ ವಿಶ್ಲೇಷನೆ ಮಾಡಬೇಕೆ? ಹಾಗಿದ್ದಲ್ಲಿ ಅದಕ್ಕೆ ಇರುವ ಮಾನಕಗಳೇನು? ಯಾವ ಅಥವಾ ಯಾರ ಪ್ರಭಾವದಲ್ಲಿ ಈ ಕವನಗಳು ರೂಪಿತಗೊಂಡಿವೆ? ಬೌದ್ಧಿಕ ಹಂತದ ಶಬ್ದಜಾಲದ ಹೊರತಾಗಿಯೂ , ಪ್ರಜ್ಞಾ ವಲಯದ ಆಚೆಯಲ್ಲಿ ಸಾಗಿ ಅನಂತಾನಂತದ ಜೊತೆಗೆ ಜೋಡಣೆಯಾಗಬಲ್ಲ ಅನೂಹ್ಯವಾದದು ಏನಾದರೂ ಇಲ್ಲಿ ಹೇಳಲ್ಪಡುತ್ತಿದೆಯೋ?

ಇಲ್ಲಿರುವ ಶಬ್ದಮಾಧುರ್ಯದ ಆಚೆ ಇರುವ “ ಏನನ್ನೋ” ಕವಿ ಈ “ಬೆಳಗು” ಕವನದಲ್ಲಿ ಅಡಗಿಸಿದ್ದಾನೆ. ಈ “ಬೆಳಗು” ಕೇವಲ ನಾಮಪದವೋ, ಕ್ರಿಯಾಪದವೋ ಅಥವಾ ವಿಶೇಷಣವೋ ಅಥವಾ ಎಲ್ಲವೂ ಆಗಿ ಅರ್ಥಗರ್ಭಿತವಾಗಿದೆಯೋ?

“ಬೆಳಗು” ನಾಮಪದವಾಗಿ ಉಷೆಯ ಕಾಲವೆಂದು ಸರ್ವವಿದಿತ. ಆದರೆ ಅದೇ ಬೆಳಗು ಕ್ರಿಯಾಪದವಾಗಿ ಹೊಳೆ, ಆರತಿಯೆತ್ತು ಎನ್ನುವ ಅರ್ಥವನ್ನೂ ಹೇಳುತ್ತಿದೆ. ಹೊಳೆಯುವ , ಮಿನುಗುವ ವಿಶೇಷಣದಲ್ಲೂ ಸಹಿತ ಮಿಂಚುತ್ತಿದೆ. ಹಾಗಾದರೆ ಇಲ್ಲಿರುವ ಬೆಳಗು ಯಾವುದು? ಚುಮುಚುಮು ಬೆಳಗೇ? ಪೆರ್ವೆಳಗೆ ? ಬಳ್ಳಿವೆಳಗೆ ? ಬೆರಕೆವೆಳಗೆ? ಬೆಳ್ವೆಳಗೆ? ಹೀಗೆ ಹತ್ತಾರು ಹಂತದ ಪ್ರಶ್ನೆಗಳನ್ನು ನಿಲ್ಲಿಸುತ್ತಿದೆ. ಬೆಳಗೊಂದಿಸು ಎನ್ನುವದಕ್ಕೆ ಕಾಂತಿಗೊಳಿಸು ಎನ್ನುವ ಅರ್ಥವೂ ಇದೆ ಈ ಎಲ್ಲ ಹಂತದ ಸ್ವಾನುಭವವನ್ನು ಆ ಉಷೆಯ ಸಮಯದ ತೋಷದಲ್ಲಿ ಕಂಡೇ ಅನುಭವಿಸಬೇಕು. ಯಾವ ಶಬ್ದದದಲ್ಲಿ ಹೇಳಿದರೂ ಆ ಅನುಭಾವ ಸಿಕ್ಕಲಾರದು.

ಮತ್ತಷ್ಟು ಓದು »