ರಾಮಜನ್ಮ ಭೂಮಿ ಚಳವಳಿ – ನನ್ನ ಬಾಲ್ಯದ ನೆನಪಿನಲ್ಲಿ
– ಅಜಿತ್ ಶೆಟ್ಟಿ ಹೆರಂಜೆ
ಚಿತ್ರ ಕೃಪೆ: ಕಲಾವಿದರದ್ದು. ಕೇರಳದ ಕಲಾವಿದರೊಬ್ಬರ ಕುಂಚದಲ್ಲಿ ಅರಳಿದ ಅಯೋಧ್ಯೆ ಭೂಮಿಪೂಜೆ
ಅಯೋದ್ಯೆಯ ರಾಮ ಜನ್ಮ ಭೂಮಿಯ ಹೋರಾಟ ನನ್ನ ವಯೋಮಾನದವರಿಗೆ ನಮ್ಮ ಕಣ್ಣ ಮುಂದೆಯೇ ನಿರ್ಮಾಣವಾದ ಇತಿಹಾಸ.ಮಹರ್ಷಿ ವಾಲ್ಮೀಕಿಯವರು ಬರೆದ ರಾಮಾಯಣ ಒಂದು ಕಡೆಯಾದರೆ ಇನ್ನೊಂದು ಕಡೆ ಆಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಮಂದಿರ ಕಟ್ಟಲು ಭಾರತದ ಹಿಂದೂ ಸಮಾಜ ಮಾಡಿದ ಸುಮಾರು 500 ವರ್ಷಗಳ ಸುಧೀರ್ಘ ಹೋರಾಟ. ಈ ಹೋರಾಟದ ಇತಿಹಾಸ ಕೂಡ ವಾಲ್ಮೀಕಿಯವರು ರಾಮಾಯಣಕ್ಕಿಂತ ಭಿನ್ನವಾಗಿರಲಿಲ್ಲ. ತ್ರೇತಾ ಯುಗದಲ್ಲಿ ವನವಾಸ ಮುಗಿಸಿ, ರಾವಣ ಸಂಹಾರ ಮಾಡಿ ಅಯೋಧ್ಯೆಗೆ ಮರಳಿದ ಪ್ರಭು ಶ್ರೀರಾಮಚಂದ್ರನ ಪಟ್ಟಾಭಿಷೇಕವಾಗಿ ರಾಮ ರಾಜ್ಯದ ಸ್ಥಾಪನೆ ಆದದ್ದು ಒಂದು ಭಾಗವಾದರೆ,ಈ ಕಲಿಯುಗದಲ್ಲಿ ಅಯೋಧ್ಯೆಯಲ್ಲಿ ಇದ್ದ ಪ್ರಭು ಶ್ರೀರಾಮಚಂದ್ರನ ಮಂದಿರವನ್ನು ಬಾಬರನ ಸೈನ್ಯ ಕೆಡವಿ ಮಸೀದಿ ಮಾಡಿದ್ದಲ್ಲಿನಿಂದ, ಆ ಮಸೀದಿಯನ್ನ ಕೆಡವಿ ಅಲ್ಲಿ ಪುನಃ ಒಂದು ಭವ್ಯ ಮಂದಿರ ನಿರ್ಮಾಣ ಮಾಡಲು ಆಯಾ ಕಾಲದ ಆಡಳಿತ ವ್ಯವಸ್ಥೆ ವಿರುದ್ಧ ಸುಧೀರ್ಘ ಹೊರಾಟ ಮಾಡಿ ಇಂದು ನೆರವೇರುತ್ತಿರುವ ಶಿಲಾನ್ಯಾಸದವರೆಗಿನ ಅಧ್ಯಾಯ ಇನ್ನೊಂದು ಭಾಗ. ಅಲ್ಲಿ ರಾವಣನ ಸಂಹಾರ ಆಯಿತು, ಇಲ್ಲಿ ಕಾಂಗ್ರೆಸ್ ಪಕ್ಷ ಎಂಬ ಸೆಕ್ಯುಲರ್ ಮಾರೀಚನ ಅಧಃಪತನ ಆಯಿತು. ಈ ಘಟನೆಗಳ ಸರಪಳಿಯಲ್ಲಿ ನನ್ನ ಊರಾದ ಹೆರಂಜೆ ಮತ್ತು ಸುತ್ತಮುತ್ತಲಿನ ಇನ್ನೂ ಐವತ್ತನಾಲಕ್ಕು ಗ್ರಾಮಗಳ ಒಂದು ಅಳಿಲು ಸೇವೆಯ ಕೊಂಡಿ ಕೂಡ ಇತ್ತು.
ಇದು ನನ್ನ ಸೌಭಾಗ್ಯವೇ ಹೌದು, ನನ್ನ ಬಾಲ್ಯದ ತೀರಾ ಮೊದಲಿನ ನೆನಪುಗಳಲ್ಲಿ ನನ್ನ ಮನಸ್ಸಿನಲ್ಲಿ ಇನ್ನು ಅಚ್ಚೊತ್ತಿದಂತೆ ಉಳಿದಿರುವುದು “ರಾಮ ಶಿಲಾ ರಥ ಯಾತ್ರ.” ಇದು ನಡೆದದ್ದು 1990-91 ರ ಸಮುಯದಲ್ಲಿ. ಆಗ ನನಗೆ ಸುಮಾರು 8-9 ರ ವಯಸ್ಸು. ಅದು ಸುಮಾರು ರಾತ್ರಿ ಎಂಟು ಗಂಟೆಯ ಸಮಯ.ದೂರದ ಬಯಲಿನ ಅಂಚಿನಲ್ಲಿ ಒಂದು ಗುಂಪು ಪೆಟ್ರೊ ಮ್ಯಾಕ್ಸ್ ಲೈಟ್, ತೆಂಗಿನ ಗರಿಯ ಬೆಂಕಿಸೂಡಿ ಹಿಡಿದು ಜೋರಾಗಿ ರಾಮ ಭಜನೆ ಮಾಡುತ್ತಾ ತಾಳ ತಟ್ಟುತ್ತ ನಮ್ಮ ಮನೆಯತ್ತ ಬರವುದನ್ನ ಕಂಡೊಡನೆ, ಓಡಿ ಹೋಗಿ ಅಜ್ಜಿಗೆ ಹೇಳಿದೆ. ಅಜ್ಜಿ ಕೂಡಲೇ ಹೊರ ಬಂದು ಅಂಗಳಕ್ಕೆಲ್ಲಾ ನೀರು ಹಾಕಿ ಶೇಡಿ ಮಣ್ಣಿನಲ್ಲಿ ರಂಗೋಲಿ ಬಿಡಿಸಿ, ತುಳಸಿಗೆ ದೀಪ ಹಚ್ಚಿ, ಮನೆಯ ಒಳಗಿದ್ದ ಒಂದು ತಾಮ್ರದ ಬಿಂದಿಗೆ, ಒಂದು ಚೆಂಬು,ಒಂದು ಬಟ್ಟಲು ಗಟ್ಟಿ ಬೆಲ್ಲ ತಗೆದು ಬಾವಿಕಟ್ಟಯಲ್ಲಿ ಇಟ್ಟು ಅವರು ಬರುವುದನ್ನೆ ಎದುರು ನೋಡುತ್ತಿದ್ದರು.ನನಗೆ ಆಶ್ಚರ್ಯ ಇದೇನಿದು ಇವರು ಮಾರಿಗೆ, ಕಂಬಳಕ್ಕೆ ಊರೂರು ತಿರುಗಿ ಡೋಲು ಹೊಡೆಯುವವರಲ್ಲ, ಜೊತಗೆ ಭಜನೆ ಬೇರೆ ಕೇಳಿಸುತ್ತಿದೆ, ಅಜ್ಜಿ ನೋಡಿದರೆ ಇಷ್ಟೆಲ್ಲಾ ವ್ಯವಸ್ಥೆ ಮಾಡಿ ಕಾದು ಕುಳಿತಿದ್ದಾರೆ. ಅವರು ನಮ್ಮ ಅಂಗಳಕ್ಕೆ ಬರುವ ತನಕ. ನನಗೆ ಕಾಯದೆ ಬೇರೆ ಉಪಾಯ ಇರಲಿಲ್ಲ.