ವಿಷಯದ ವಿವರಗಳಿಗೆ ದಾಟಿರಿ

Posts tagged ‘ಸಂತೋಷ್ ಬಿ.ಎಲ್’

21
ನವೆಂ

ನಿಂದಕರಿಂದಲೇ ಸಂತೋಷ, ನಿಂದಕರಿದ್ದರೆ ಸಂತೋಷ

– ಬಿದರೆಪ್ರಕಾಶ್

“ನಿಂದಕರಿರಿಬೇಕು, ನಿಂದಕರಿರಬೇಕು
ದುಷ್ಟ ಜನರು ಸೃಷ್ಟಿಯೊಳಿದ್ದರೆ
ಶಿಷ್ಟ ಜನರಿಗೆಲ್ಲಾ ಕೀರ್ತಿಗಳು”

ಎಂದು ಅಂದು ಹಾಡಿದ ಪುರಂದರ ದಾಸರ ನುಡಿಗಳು ಎಂದಿಗೂ ಎಂದೆಂದಿಗೂ ಪ್ರಸ್ತುತವೆಂದು ಇತ್ತೀಚೆಗಿನ ಕೆಲವು ಹಿದ್ಯಮಾನಗಳಿಂದ ವೇದ್ಯವಾಗುತ್ತದೆ.. ಹೌದು, ಪುರಂದರದಾಸರ ವಾಣಿಯಂತೆ ದುಷ್ಟ ಜನರಿಂದಲೇ ಶಿಷ್ಟ ಜನರಿಗೆ ಕೀರ್ತಿಗಳು ಲಭ್ಯವಾಗಿವೆ. ಹಾಗೆಂದು ಈ ಶಿಷ್ಟ ಜನರು ಕೀರ್ತಿಗಾಗಿ ಆಸೆ ಪಟ್ಟವರಲ್ಲ, ಪರರ ತಂಟೆಗೆ ಹೋದವರಲ್ಲ, ಕರ್ತವ್ಯಮುಖಿಯಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಈ ಇಬ್ಬರು ವ್ಯಕ್ತಿಗಳು ಇಂದು ಖ್ಯಾತಿಗೆ, ಕೀರ್ತಿಗೆ ಭಾಜನರಾಗುತ್ತಿದ್ದಾರೆಂದರೆ ಅದಕ್ಕೆ ಕಾರಣ ಈ ನಿಂದಕರೇ. ಬಹುಷಃ ಈ ನಿಂದಕರಿರದಿದ್ದರೆ ಈ ಇಬ್ಬರು ವ್ಯಕ್ತಿಗಳು ಇಂದಿಗೂ ತೆರೆಮರೆಯಲ್ಲಿಯೇ ಇರುತ್ತಿದ್ದರೇನೋ. ಹಿನ್ನೆಲೆಯಲ್ಲೇ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಈ ಇಬ್ಬರನ್ನು ಮುನ್ನಲೆಗೆ ತಂದು ನಿಲ್ಲಿಸಿರುವುದು ಈ ನಿಂದಕರೇ. ಅದಕ್ಕಾಗಿಯೇ ಈ ನಿಂದಕರಿಗೆ ಧನ್ಯವಾದ ಹೇಳಲೇಬೇಕು.

ಸಮಾಜಕ್ಕೋಸ್ಕರ ತಮ್ಮ ಜೀವನವನ್ನು ಕೊಟ್ಟು ಪ್ರಚಾರಕರಾಗಿ,ರಾಜ್ಯ ಬಿಜೆಪಿಯಲ್ಲಿ ಕೇಂದ್ರ ಬಿಂದುವಿನಂತೆ ಕಳೆದ ಹತ್ತು ವರ್ಷಗಳಿಂದ ತಮಗೆ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಬಿ.ಎಲ್.ಸಂತೋಷ್(ಸಂತೋಷ್‌ಜೀ)ರವರು ಒಬ್ಬರಾದರೆ,ಪತ್ರಕರ್ತರಾಗಿ ಅಂಕಣಕಾರರಾಗಿ ರಾಷ್ಟ್ರೀಯ ವಿಚಾರಗಳನ್ನು ಪ್ರತಿಪಾದಿಸುತ್ತಾ, ಜೀವನಕ್ಕಿಂತ ಅಧ್ಯಯನಕ್ಕೇ ಆದ್ಯತೆ ಕೊಟ್ಟು, ಕಾರ್ಯನಿರ್ವಹಿಸುತ್ತಿರುವ ಸಂತೋಷ್ ತಮ್ಮಯ್ಯ ಮತ್ತೋರ್ವರು. ಸಂತೋಷ್‌ಜೀರವರು ರಾಜಕೀಯ ಕ್ಷೇತ್ರದಲ್ಲಿದ್ದರೂ ಎಂದಿಗೂ ಪ್ರಚಾರ ಪ್ರಿಯರಾಗಲಿಲ್ಲ. ತಮ್ಮಲ್ಲಿರುವ ಅಗಾಧ ಸಂಘಟನಾ ಸಾಮರ್ಥ್ಯವನ್ನು ಕಳೆದ ಹತ್ತು ವರ್ಷಗಳಿಂದ ಬಿಜೆಪಿಯನ್ನು ಕಟ್ಟುವುದಕ್ಕಾಗಿಯೇ ಧಾರೆ ಎರೆಯುತ್ತಿರುವ ಇವರು ಮತ್ತು ಇವರ ಸಾಮರ್ಥ್ಯ ಬಿಜೆಪಿಯ ಒಳಗಿರುವವರಿಗೆ ಮತ್ತು ಪರಿವಾರದ ಕಾರ್ಯಕರ್ತರುಗಳಿಗೆ ಮಾತ್ರ ಪರಿಚಯವಿತ್ತು.ಅದೇ ರೀತಿ ಅಸೀಮ ಪತ್ರಿಕೆಯ ಸಂಪಾದಕರಾಗಿ,ಹೊಸದಿಗಂತ ಪತ್ರಿಕೆಯ ಅಂಕಣಕಾರರಾಗಿ ಓದು ಮತ್ತು ಬರಹಗಳನ್ನು ಮಾತ್ರ ಅಂಟಿಸಿಕೊಂಡು, ಅಧ್ಯಯನದ ಮೂಲಕ ಅಗಾಧ ಬರವಣಿಗೆಯ ಸಾಮರ್ಥ್ಯವನ್ನು ಹೊಂದಿದ್ದ, ಸಂಕೋಚ ಸ್ವಭಾವದ ಸಂತೋಷ್ ತಮ್ಮಯ್ಯ ಸಹ ಎಂದೂ ಮುನ್ನಲೆಗೆ ಬಂದವರಲ್ಲ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಮಗಿರುವ ಶಕ್ತಿಯನ್ನು ವಿನಿಯೋಗಿಸಿ ತೆರೆಮರೆಯಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದ ಈ ಇಬ್ಬರನ್ನೂ ನಿಂದಕರುಗಳು ಜನರ ಮುಂದೆ ತಂದು ನಿಲ್ಲಿಸಿಬಿಟ್ಟಿದ್ದಾರೆ. ಈ ಕಾರಣದಿಂದಾಗಿಯೇ ಸಂತೋಷ್‌ಜೀ ಮತ್ತು ಸಂತೋಷ್ ತಮ್ಮಯ್ಯ ಇಬ್ಬರ ಹೆಸರು ಜನಜನಿತಾಗುತ್ತಿದೆ. ಇವರಿಬ್ಬರ ಸಾಮರ್ಥ್ಯದ ಅರಿವು ಜನರಿಗೆ ಆಗತೊಡಗಿದೆ. ಅದಕ್ಕೇ ಅಂದು ಪುರಂದರ ದಾಸರು ಹೇಳಿದ ’ಶಿಷ್ಟ ಜನರ ಕೀರ್ತಿಗಳಿಗೆ ನಿಂದಕರಿರಬೇಕು, ನಿಂದಕರಿರಿಬೇಕು’ ಎಂಬ ನುಡಿ ಇಂದೂ ಪ್ರಸ್ತುತವೆಂಬುದು ರುಜುವಾತಾಗಿಬಿಟ್ಟಿದೆ.

ಬಿ.ಎಲ್.ಸೋತೋಷ್, ಬಹಳಷ್ಟು ಜನರು ಸಂತೋಷ್‌ಜೀ ಎಂದು ಆತ್ಮೀಯವಾಗಿ, ಗೌರವಪೂರ್ವಕವಾಗಿ ಕರೆಸಿಕೊಳ್ಳುವ ಇವರು ಬಿಜೆಪಿಯಲ್ಲಿ ’ಸಂಘಟನಾ ಕಾರ್ಯದರ್ಶಿ’ ಎಂದರೆ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿ ಬಿಜೆಪಿಯ ಸಂಘಟನೆಗಾಗಿ ತಮ್ಮ ಜೀವನವನ್ನು ಸಮರ್ಪಿಸಿ ಕಾರ್ಯನಿರ್ವಹಿಸುತ್ತಿರುವವರು.ಬಿಜೆಪಿಯನ್ನು ಸಂಘಟನಾತ್ಮಕವಾಗಿ ಶಕ್ತವಾಗಿಸುವಲ್ಲಿ ಸಂತೋಷ್‌ಜೀಯವರ ಪಾತ್ರ ಅಸದಳವಾದುದು ಎಂಬುದನ್ನು ಬಿಜೆಪಿಯಲ್ಲಿ ಅವರನ್ನು ಸಹಿಸಿಕೊಳ್ಳದವರೂ ಒಪ್ಪಿಕೊಳ್ಳುತ್ತಾರೆ.

ಮತ್ತಷ್ಟು ಓದು »

7
ಫೆಬ್ರ

ಅತ್ತ ಮೋದಿ ಭಾಷಣ ಮಾಡುತ್ತಿದ್ದಾಗ ಎಂಜಿನಿಯರಿಂಗ್ ನಲ್ಲಿ ಗೋಲ್ಡ್ ಮೆಡಲಿಸ್ಟ್ ಒಬ್ಬರು ಅರಮನೆ ಗ್ರೌಂಡಲ್ಲಿ ಟ್ರಾಫಿಕ್ ನಿಭಾಯಿಸುತ್ತಿದ್ದರು…!

-ಕೃಷ್ಣ ಕಡೂರು

ಎಲ್ಲೋ ಸಾಗರದಾಚೆಯಿಂದ ಹಾರಿ ಬಂದ ಹಕ್ಕಿಯೊಂದು ಮಲೆನಾಡ ಕಾಡಿನಲ್ಲಿ ಹಿಕ್ಕೆ ಹಾಕಿ ಸುಂದರ ಪುಷ್ಪವನ್ನು ಅರಳಿಸುವ ಗಿಡವಾಗುತ್ತದೆ. ಆ ಹೂವಿನ ಸೌಂದರ್ಯಕ್ಕೆ ಮನಸೋತ ಕವಿ ಮನಸ್ಸೊಂದು ರಸೋತ್ಪತ್ತಿಯ ಕಾವ್ಯವನ್ನು ಸ್ರಷ್ಟಿಸುತ್ತದೆ. ಆ ಕಾವ್ಯರಸ ಜನಮಾನಸದಲ್ಲಿ ಬೇರೂರಿ ಪರಂಪರೆಯನ್ನು ರೂಪಿಸುವಲ್ಲಿಗೂ ವ್ಯಾಪಿಸುತ್ತವೆ. ಆದರೆ ಎಲ್ಲಿನದ್ದೋ ಒಂದು ಹಕ್ಕಿಗೆ ಇವಾವುವೂ ತಿಳಿಯುವುದಿಲ್ಲ. ತಿಳಿಯುವ ಹಂಬಲ, ಮನಸ್ಸು ಮನಸ್ಸು ಮತ್ತು ತಿಳಿದು ಮಾಡುವಂಥಾದ್ದೇನೂ ಆ ಹಕ್ಕಿಗೂ ಇಲ್ಲ.

ಎಲ್ಲೋ ಕಾಡಿನಲ್ಲಿ ತುಂತುರು ಹನಿಯನ್ನು ತಾನು ಹೀರಿಕೊಳ್ಳದೆ ಭೂಮಿಗೆ ಜಾರಿಸುವ ಎಲೆಯೊಂದಕ್ಕೆ, ಈ ಪುಟ್ಟ ಹನಿ ನದಿಯಾಗಿ, ಭೋರ್ಗೆರೆಯುವ ಜಲಪಾತವಾಗಿ, ಅನ್ನದ ಮೂಲವಾಗಿ, ಬೆಳಕಿನ ಮೂಲವಾಗುವುದು ಎಂದು ಆ ಎಲೆಗೂ ಗೊತ್ತಿಲ್ಲ. ಅದು ಗೊತ್ತಿದ್ದು ಆ ಹನಿಯನ್ನು ಭೂಮಿಗಿಳಿಸಿಲ್ಲ.

ಕೆಸರು ನೆಲದಲ್ಲಿ ಒಣಗಿದ ದೇಹವೊಂದು ಉತ್ತು, ಬಿತ್ತಿ, ಕಟಾವು ಮಾಡಿ ಬೆವರನ್ನೇ ಬಸಿಯುತ್ತಿರುವಾಗ ಆತನಿಗೂ ತಾನು ಬೆಳೆದ ತೆನೆ ರಾಜಾಸ್ಥಾನದಲ್ಲಿ ಮೃಷ್ಟಾನ್ನವಾಗುವುದೆಂದು ಆತನೂ ಯೋಚಿಸುವುದಿಲ್ಲ.
ನೀರೇ ಕಾಣದ ಒರಟು ನೆಲದ ಹೆಬ್ಬಂಡೆಯೊಂದು ಗರ್ಭಗುಡಿಯ ಲಿಂಗವಾಗಿ ತಂಪು ತಾಣದಲ್ಲಿರುವೆ ಎಂದು ಸ್ವತಃ ಬಂಡೆಯೂ ಅದನ್ನು ಕಡೆದವರೂ ಯೋಚಿಸುವುದಿಲ್ಲ.

ನಿಷ್ಕಾಮ ಕರ್ಮಕ್ಕೆ ಯೋಚನೆ-ಚಿಂತನೆಗಳ ಹಂಗಿಲ್ಲ. ಅವುಗಳನ್ನು ಕಟ್ಟಿಕೊಂಡು ಅವು ಹುಟ್ಟುವುದೂ ಇಲ್ಲ. ಅಷ್ಟೇ ಏಕೆ ಯಾವ ಮಣ್ಣಿಗೂ ತಾನು ಮುಂದೊಂದು ದಿನ ಕಾಲಿಂದ ತುಳಿಸಿಕೊಳ್ಳುವೆ, ಮಡಕೆಯಾಗುವೆ ಎಂಬ ಕಲ್ಪನೆಯನ್ನೂ ಮಾಡಿರುವುದಿಲ್ಲ. ಆದರೂ ಇವೆಲ್ಲವೂ ಆಗಿರುತ್ತದೆ. ಕಾರಣದ ಹಿಂದೆ ಬಲವಾದ ಕಾರ್ಯವಿರುತ್ತದೆ. ಕಾರ್ಯದ ಹಿಂದೆ ಕಾರಣವೂ ಇರುತ್ತದೆ. ಅದನ್ನೇ ಭಾರತೀಯ ತತ್ತ್ವಶಾಸ್ತ್ರ “ಕಾರ್ಯಕಾರಣ ಸಂಬಂಧ” ಎಂದು ಕರೆಯಿತು. ಸನಾತನದ ಆಚಾರ್ಯರುಗಳೆಲ್ಲವೂ, ವೈದಿಕೇತರ ಮತಗಳೂ ಪ್ರತಿಪಾದಿಸಿದ್ದು ಅದನ್ನೇ. ಲೌಕಿಕಾರ್ಥದಲ್ಲಿ ಹೇಳಬೇಕೆಂದರೆ ಅದು “ಪರೋಕ್ಷ ಯಜ್ಞಫಲ”.
ಇಷ್ಟೆಲ್ಲಾ ಹೇಳಹೊರಟಿರುವುದಕ್ಕೆ ಕಾರಣ ಮೊನ್ನೆ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಕಂಡ ಒಂದು ದೃಶ್ಯ.

ಮುಂಜಾನೆಯಿಂದನೇ ರಾಜ್ಯದ ಮೂಲೆ ಮೂಲೆಗಳಿಂದ ಅರಮನೆ ಮೈದಾನಕ್ಕೆ ಜನ ಧಾವಿಸುತ್ತಿದ್ದರು. ಹೊತ್ತೇರುತ್ತಿದ್ದಂತೆ ವಾಹನ ದಟ್ಟಣೆ, ಜನರ ಪ್ರವಾಹ ಅತಿಯಾಗುತ್ತಲೇ ಇತ್ತು. ಅರಮನೆ ಮೈದಾನಕ್ಕೆ ಸೇರುವ ರಸ್ತೆಗಳೆಲ್ಲವೂ ಕಿಷ್ಕಿಂಧೆಯಂತಾಗಿ ಧೂಳುಮಯವಾಗಿದ್ದರೂ ಜನರ ಕಣ್ಣು ಆಕಾಶಕ್ಕೆ ನೆಟ್ಟು ಹೆಲಿಕಾಪ್ಟರ್ ಸದ್ದಿಗೆ ನಿರೀಕ್ಷೆ ಮಾಡುತ್ತಿತ್ತು. ಕೆಲವರು ವೇದಿಕೆಯ ಸುತ್ತ ಠಾಳಾಯಿಸುತ್ತಿದ್ದರೆ ಇನ್ನು ಕೆಲವರು ಗರಿಗರಿ ಬಟ್ಟೆ ಧರಿಸಿ ನಾಯಕರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದರು.

ನಾನು ಮೋದಿ ಅಭಿಯಾನಿಯಾಗಿರಬಹುದು, ಆದರೆ ಬಿಜೆಪಿಯಲ್ಲ, ಯಾವ ಪಕ್ಷಕ್ಕೂ ಸಲ್ಲುವವನಲ್ಲ. ಬೆಳಿಗ್ಗೆ ಒಂಭತ್ತು ಗಂಟೆಗೆ ನಾನು ಮೈದಾನ ಪ್ರವೇಶಿಸುತ್ತಿದ್ದಾಗ ಒಬ್ಬ ಮನುಷ್ಯ ಕೆಲವು ಯುವಕರೊಟ್ಟಿಗೆ ರಸ್ತೆಯಲ್ಲಿ ನಿಂತು ಟ್ರಾಫಿಕ್ ದಟ್ಟಣೆಯನ್ನು ನಿಭಾಯಿಸುತ್ತಿದ್ದರು. ಮಧ್ಯೆದಲ್ಲೊಮ್ಮೆ ಎದ್ದು ಬಂದಾಗಲೂ ಆ ಮನುಷ್ಯ ಹಾಗೇ ಇದ್ದರು. ಮತ್ತೆ ಆ ಮನುಷ್ಯ ನೆನಪಾಗಲಿಲ್ಲ.

ಮೋದಿ ಭಾಷಣ ಮುಗಿದ ನಂತರ ಮೈದಾನದಿಂದ ಹೊರಹೊರಟಾಗಲೂ ಅವರು ಅದೇ ತತ್ಮಯತೆಯಿಂದ ರಸ್ತೆ ನಿಭಾಯಿಸುತ್ತಿದ್ದಾಗ ದಂಗಾಗಿಹೋದೆ. ಅವರ ಬಿಳಿ ಬಟ್ಟೆ ಧೂಳುಮಯವಾಗಿತ್ತು. ಬಿಳಿಯಾದ ತಲೆಯಲ್ಲೂ ಧೂಳು ಮೆತ್ತಿಕೊಂಡಿತ್ತು. ಎಲ್ಲೋ ನೋಡಿದ್ದೇನೆ ಎಂದು ಗೆಳೆಯನನ್ನು ಕೇಳಿದಾಗ ಆತ ಇವರೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಎಂದ.

ಬಿಜೆಪಿಯಲ್ಲಿ ರಾಷ್ಟ್ರ ಕಾರ್ಯದರ್ಶಿಗಳೂ ಟ್ರಾಫಿಕ್ ನಿಭಾಯಿಸಬೇಕಾ? ಎಂದು ಕೇಳಿದೆ. ಆತ ನಸುನಕ್ಕು ” ನಾವಲ್ಲಿ ಮೋದಿ ಮಾತಿಗೆ ಚಪ್ಪಾಳೆ ತಟ್ಟುತ್ತಾ, ಘೋಷಣೆ ಕೂಗುತ್ತಿದ್ದೆವಲ್ಲಾ, ಆಗಲೂ ಇವರು ಹೀಗೆಯೇ ಕೈ ಆಡಿಸುತ್ತಾ ಟ್ರಾಫಿಕ್ ಕಂಟ್ರೋಲ್ ಮಾಡುತ್ತಿದ್ದರು. ರ್ಯಾಲಿ ಯಶಸ್ವಿಯಾಗಿರುವುದು ಇಂಥವರಿಂದ” ಎಂದ.ನಾನು ” ಹಾಗಾದರೆ ಇವರಿಗೆ ವೇದಿಕೆ ಯಾಕೆ ಕೊಡಲಿಲ್ಲ?” ಎಂದೆ ” ಹತ್ತಬಹುದು, ಆದರೆ ಇವರು ಹತ್ತುವುದಿಲ್ಲ. ಅವರು ಆರೆಸ್ಸೆಸ್ ನಲ್ಲಿದ್ದವರು” ಎಂದ.

ಪೂರ್ತಿ ಅರ್ಥ ಆಗಲಿಲ್ಲ. ಮತ್ತಷ್ಟು ಗೊಂದಲವಾಯಿತು. ಏಕೆಂದರೆ ವೇದಿಕೆಯಲ್ಲಿ ನಾಯಕರು ಮಾತಾಡುತ್ತಿದ್ದಾಗ ಜನ ಅವರವರ ನಾಯಕರನ್ನು ವೇದಿಕೆಗೆ ಕರೆಯಿರಿ ಎಂದು ಬೊಬ್ಬೆ ಹಾಕುತ್ತಿದ್ದರು. ಇವರು ನೋಡಿದರೆ ಹೀಗೆ! ಅದಕ್ಕೆ ಗೆಳೆಯ – “ದೇಶದ ಎಲ್ಲೋ ಮೂಲೆಯಲ್ಲಿ ಹುಡುಗನೊಬ್ಬ ಆರೆಸ್ಸೆಸ್ ಶಾಖೆಗೆ ಹೋಗುತ್ತಾನೆ. ಕಳೆದ ೯೦ ವರ್ಷಗಳಿಂದಲೂ ಹುಡುಗರು ಕಬಡ್ಡಿ ಆಡುತ್ತಾ ಶಾಖೆಯಲ್ಲಿ ಕಳೆಯುತ್ತಿದ್ದಾರೆ. ಅವರು ಶಾಖೆಗೆ ಹೋದ ಕಾರಣಕ್ಕೆ ಇಂದು ಮೋದಿ ಎಂಬ ಪ್ರಧಾನಿ, ಯೋಗಿ ಎಂಬ ಮುಖ್ಯಮಂತ್ರಿ ದೇಶದಲ್ಲಿದ್ದಾರೆ. ಅದನ್ನು ಮರೆಯದ ಜನ ಹೀಗಿರುತ್ತಾರೆ. ಬಿಜೆಪಿಯಲ್ಲಿ ರಾಜಕಾರಣಕ್ಕಿಂತ ಸಂಘಟನೆಗೆ ಒತ್ತು” ಎಂದು ಹೇಳಿದ.

ಅರ್ಥವಾದರೂ ಅರಗಿಸಿಕೊಳ್ಳಲಾಗಲಿಲ್ಲ. ಏಕೆಂದ್ರೆ ಎಂದೋ ಆರೆಸ್ಸೆಸ್ ಗೆ ಹೋಗುತ್ತಿದ್ದ ಗೆಳೆಯ ಈ ಬಿ.ಎಲ್ ಸಂತೋಷ್ ಇನ್ಸ್ಟ್ರುಮೆಂಟಲ್ ಎಂಜಿನಿಯರಿಂಗ್ ನಲ್ಲಿ ಗೋಲ್ಡ್ ಮೆಡಲಿಸ್ಟ್ ಎಂದಾಗ ಮತ್ತಷ್ಟು ತಲೆಕೆಟ್ಟುಹೋಯಿತು.

1
ಮೇ

ಯಾರು ಹಿತವರು ಯಡ್ಯೂರಪ್ಪನವರಿಗೆ..?

ರಾಕೇಶ್ ಶೆಟ್ಟಿ

“ಕೊಟ್ಟ ಕುದುರೆಯನೇರಲರಿಯದೆ…” ವಚನದ ಸಾಲುಗಳು ಕರ್ನಾಟಕ ಬಿಜೆಪಿಯ ನಾಯಕರಿಗೆ ಸರಿಯಾಗಿ ಅನ್ವಯಿಸುತ್ತದೆ. ಎಪಿಎಂಸಿ,ಪಾಲಿಕೆ ಚುನಾವಣೆಗಳೆನ್ನದೇ ದೇಶದ ಮೂಲೆ ಮೂಲೆಯಲ್ಲೂ ಬಿಜೆಪಿ ಗೆದ್ದು ಬರುತ್ತಿರುವ ಕಮಲ ಪಕ್ಷದ ಸುವರ್ಣ ಸಮಯದಲ್ಲೂ, ರಾಜ್ಯ ಬಿಜೆಪಿ ನಾಯಕರು ಉಪಚುನಾವಣೆಯಲ್ಲಿ ಮಕಾಡೆ ಮಲಗಿ ಕಿರಗೂರಿನ ಗಯ್ಯಾಳಿಗಳಂತೆ ಕಾದಾಟಕ್ಕಿಳಿದಿದ್ದಾರೆ. ನಿನ್ನೆಯ ಸಂಘಟನೆ ಉಳಿಸಿ ಹೆಸರಿನ ಸಭೆ, ಅದಕ್ಕೆ ಪ್ರತಿಯಾಗಿ ನಡೆದ ಬೆಂಗಳೂರಿನ ಶಾಸಕ, ಸಂಸದರ ಪತ್ರಿಕಾಗೋಷ್ಟಿ, ನಾಯಕರೆನಿಸಿಕೊಂಡವರ ಏಕವಚನ ಪ್ರಯೋಗ, ಆರೋಪ-ಪ್ರತ್ಯಾರೋಪಗಳಿಂದಾಗಿ ನಿನ್ನೆ ಎಷ್ಟು ಮೆಗಾಧಾರವಾಹಿಗಳ ಟಿಆರ್ಪಿ ಕಡಿಮೆಯಾಯಿತೋ!

ದೇಶದ ಉಳಿದ ರಾಜ್ಯಗಳ ಬಿಜೆಪಿ, ನರೇಂದ್ರ ಮೋದಿಯವರ ಅಭಿವೃದ್ಧಿ ರಾಜಕಾರಣ ಮತ್ತು ಯುವ ಮನಸ್ಸುಗಳ ಆಲೋಚನಾ ಶಕ್ತಿಯಿಂದ ಮುಂದುವರೆಯುತ್ತಿದ್ದರೆ, ರಾಜ್ಯ ಬಿಜೆಪಿ ಮಾತ್ರ ಪುರಾತನ  ಜಾತಿ ಮತ್ತು ಓಲೈಕೆ ರಾಜಕಾರಣವನ್ನೇ ನೆಚ್ಚಿಕೊಂಡಿದೆ.ಈಶ್ವರಪ್ಪನವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಮುಖಂಡರೊಬ್ಬರು, ಕುರುಬರಿಗಾಗಿ ಈಶ್ವರಪ್ಪ ಏನು ಮಾಡಿದ್ದಾರೆ? ಯಡ್ಯೂರಪ್ಪನವರೇ ಕನಕ ಜಯಂತಿ ಆರಂಭಿಸಿದ್ದು ಎಂದು ಹೇಳುತ್ತಿರುವುದನ್ನು ಕೇಳಿದೆ. ಆಗಾಗ್ಗೆ ಬರುವ ಜಯಂತಿಗಳ ನೆಪದಲ್ಲಿ ರಜೆಗಳನ್ನು ಕೊಟ್ಟು ಸರ್ಕಾರಿ ಯಂತ್ರವನ್ನು ನಿಲ್ಲಿಸುವ ಪರಿಪಾಠಗಳು ಕೊನೆಯಾಗಬೇಕೆಂಬ ಉದ್ದೇಶದಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಂತವರು ‘ಜಯಂತಿ ರಜೆ’ಗಳನ್ನೇ ಕಿತ್ತೊಗೆಯುವಂತಹ ಕೆಲಸ ಮಾಡುತ್ತಿರುವಾಗ, ರಾಜ್ಯ ಬಿಜೆಪಿಯ ನಾಯಕರ ಮನಸ್ಥಿತಿ ಇನ್ನೂ ಜಯಂತಿ ರಾಜಕಾರಣದಲ್ಲೇ ಇರುವುದು ಇವರ ಯೋಚನಾ ಲಹರಿ ಯಾವ ಕಾಲದಲ್ಲಿದೆ ಎಂದು ಸೂಚಿಸುತ್ತದೆ. ಹಾಗೆ ನೋಡಿದರೇ ಕಾಂಗ್ರೆಸ್ಸಿನ ‘ಭಾಗ್ಯ’ ರಾಜಕಾರಣಕ್ಕೂ, ಬಿಜೆಪಿಯ ‘ಜಯಂತಿ’ ರಾಜಕಾರಣಕ್ಕೂ ಯಾವ ವ್ಯತ್ಯಾಸವಿದೆ ? ಇವೆಲ್ಲವನ್ನೂ ಪ್ರಶ್ನಿಸಬೇಕಾದ ಪತ್ರಿಕೆಗಳು ಮಾಡುತ್ತಿರುವುದಾದರೂ ಏನು?

ಮತ್ತಷ್ಟು ಓದು »