ವಿಷಯದ ವಿವರಗಳಿಗೆ ದಾಟಿರಿ

Posts tagged ‘ಸಂಸ್ಕೃತಿ’

25
ಫೆಬ್ರ

ಅಕಟಕಟ ಸಂಸಾರವನು ನೆಚ್ಚಿಕೆಡಬ್ಯಾಡ

ಡಾ. ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪಕನ್ನಡಅಧ್ಯಯನಕೇಂದ್ರ,
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

Sri Sripadaruಶ್ರೀಪಾದರಾಜರು (1404-1502) ಹರಿದಾಸ ಸಾಹಿತ್ಯದ ಪ್ರಮುಖ ಕೀರ್ತನಕಾರರಲ್ಲಿ ಒಬ್ಬರು. ಚನ್ನಪಟ್ಟಣ ಬಳಿಯ ಅಬ್ಬೂರಿನವರಾದ ಇವರನ್ನುಪುರಾಣೋಕ್ತ ಹರಿಭಕ್ತಧ್ರುವನ ಅವತಾರ ಎಂದು ಹೇಳಲಾಗುತ್ತದೆ. ವಿಜಯನಗರ ಅರಸರ ರಾಜಗುರುಗಳಾಗಿದ್ದ ಇವರು ಪುರಂದರ, ಕನಕರ ಗುರುಗಳಾಗಿದ್ದ ವ್ಯಾಸತೀರ್ಥರ ಗುರುಗಳೂ ಹೌದು. ಭ್ರಮರಗೀತ, ವೇಣುಗೀತ, ಗೋಪಿಗೀತ, ಮಧ್ವನಾಮ ಇವರ ಪ್ರಮುಖರಚನೆಗಳು. ರಂಗವಿಠಲ ಎಂಬ ಅಂಕಿತದಲ್ಲಿ ಇವರು ಕೀರ್ತನೆಗಳನ್ನೂ ರಚಿಸಿದ್ದಾರೆ. ‘ನೀ ಇಟ್ಟ ಹಂಗೆ ಇರುವೆನೋ ಹರಿಯೇ’;‘ಕಣ್‍ಗಳಿದ್ಯಾತಕೋ ಕಾವೇರಿರಂಗನ ನೋಡದಾ’;‘ಭೂಷಣಕೆ ಭೂಷಣ…’ ಮೊದಲಾದವು ಅವರ ಅತ್ಯಂತ ಜನಪ್ರಿಯ ಕೀರ್ತನೆಗಳಾಗಿ ಜನಮನದಲ್ಲಿ ನೆಲೆನಿಂತಿವೆ. ‘ಅಕಟಕಟ ಸಂಸಾರವನು ನೆಚ್ಚಿಕೆಡಬ್ಯಾಡ’ ಎಂಬುದು ಅವರ ಅನೇಕಾನೇಕ ಕೀರ್ತನೆಗಳಲ್ಲೊಂದು. ಮತ್ತಷ್ಟು ಓದು »

30
ಸೆಪ್ಟೆಂ

ವಿವಾಹೇತರ ಸಂಬಂಧ ಹಾಗೂ ಶಬರಿಮಲೈ ಕುರಿತ ಸುಪ್ರೀಂ ತೀರ್ಪು

– ವಿನಾಯಕ ಹಂಪಿಹೊಳಿ

ಬ್ರಿಟೀಷರ ಕಾಲದಲ್ಲಿ ಕ್ರಿಶ್ಚಿಯಾನಿಟಿಯಿಂದ ಎತ್ತಿ ತಂದ ಹಲವಾರು ಕಾನೂನುಗಳಲ್ಲಿ ಅಡಲ್ಟ್ರೀ ಕೂಡಾ ಒಂದು. ಈ ಕಾನೂನು ವಿವಾಹೇತರ ಸಂಬಂಧವನ್ನು ಅಪರಾಧವನ್ನಾಗಿ ಕಾಣುವ ಕಾನೂನಾಗಿತ್ತು. ವಿವಾಹೇತರ ಸಂಬಂಧದಲ್ಲಿ ಮಹಿಳೆ ಹಾಗೂ ಪುರುಷ ಪರಸ್ಪರ ಒಪ್ಪಂದದಿಂದ ತೊಡಗಿದ್ದರೆ, ಈ ಕಾನೂನಿನ ಅಡಿಯಲ್ಲಿ ಅವರನ್ನು ಶಿಕ್ಷಿಸಲಾಗುತ್ತಿತ್ತು. ಪುರುಷನು ಒತ್ತಾಯಿಸಿದ್ದರೆ ಅದು ಅತ್ಯಾಚಾರವೆಂದು ಪರಿಗಣಿಸಲಾಗುತ್ತಿತ್ತು. ಈ ಕಾನೂನು ಮುಂಚೆ ಬ್ರಿಟೀಷರಲ್ಲಿ ಇತ್ತು. ಅದು ಭಾರತಕ್ಕೂ ಬಂದಿತು.
ಯುರೋಪಿನಲ್ಲಿ ಪ್ರೊಟೆಸ್ಟಂಟ್ ಕ್ರಿಶ್ಚಿಯಾನಿಟಿಯ ವಿಚಾರಗಳು ಪಸರಿಸಿದಂತೆ ಇದನ್ನು ಅಪರಾಧವನ್ನಾಗಿ ನೋಡಬಾರದು ಹಾಗೂ ಅವರವರ ಖಾಸಗೀ ಆಯ್ಕೆಯನ್ನಾಗಿ ಕಾಣಬೇಕು ಎಂಬ ನಿರ್ಧಾರಕ್ಕೆ ಅಲ್ಲಿನ ಸರ್ಕಾರಗಳು ಬಂದವು ಹಾಗೂ ಈ ಕಾನೂನನ್ನು ರದ್ದುಪಡಿಸಿಕೊಂಡವು. ಎಲ್ಲದರಲ್ಲೂ ಪಾಶ್ಚಿಮಾತ್ಯರನ್ನೇ ಅನುಸರಿಸುವ ನಮ್ಮ ಸಂವಿಧಾನ, ಸರ್ಕಾರ ಹಾಗೂ ನ್ಯಾಯಾಲಯಗಳಲ್ಲಿ ಪ್ರೊಟೆಸ್ಟಂಟ್ ವಿಚಾರಗಳು ಪಸರಿಸಿದಂತೆ ಈ ಕಾನೂನು ಇಲ್ಲಿಯೂ ರದ್ದಾಯಿತು. ಆದರೆ ಭಾರತೀಯ ಜನಸಾಮಾನ್ಯರಿಗೆ ಈ ರೀತಿಯ ಕಾನೂನು ಇದೆ ಎಂಬುದರ ಅರಿವೂ ಅಷ್ಟಕ್ಕಷ್ಟೇ ಇತ್ತು.
ಪ್ರಪಂಚದ ಎಲ್ಲ ಸಮಾಜಗಳಂತೇ ನಮ್ಮ ದೇಶದ ಸಮಾಜಗಳಲ್ಲಿಯೂ ವಿವಾಹೇತರ ಸಂಬಂಧಗಳು ಕದ್ದು ಮುಚ್ಚಿ ನಡೆಯುತ್ತ ಬಂದಿವೆ. ಆದರೆ ಹಾಗೆ ಮಾಡುವವರು ಈ ಕಾನೂನಿಗೆ ಹೆದರಿಕೊಂಡು ಕದ್ದು ಮುಚ್ಚಿ ಸಂಬಂಧ ಇಟ್ಟುಕೊಳ್ಳುತ್ತಿರಲಿಲ್ಲ. ಅದಕ್ಕೆ ಕಾರಣವೇ ಬೇರೆ. ಹಾಗೆಯೇ ದಾಂಪತ್ಯವ್ರತಕ್ಕೆ ನಿಷ್ಠರಾಗಿ ಆದರ್ಶ ಸತಿಪತಿಗಳಾಗಿ ಬದುಕಿದವರಿಗೂ ನಮ್ಮ ಸಮಾಜಗಳಲ್ಲಿ ಕೊರತೆಯಿಲ್ಲ. ಅವರೇನೂ ಈ ಕಾನೂನನ್ನು ಪಾಲಿಸಬೇಕು ಎಂಬ ಕಾರಣಕ್ಕೆ ದಾಂಪತ್ಯವ್ರತಕ್ಕೆ ನಿಷ್ಠರಾಗಿ ಬದುಕಿರಲಿಲ್ಲ. ಅವರು ಹಾಗೆ ಬದುಕಿದ್ದಕ್ಕೂ ಕಾರಣವು ಬೇರೆಯೇ.
ಹೀಗಾಗಿ ಜನರಿಗೆ ಅಷ್ಟಾಗಿ ಪರಿಚಯವೇ ಇರದ ಕಾನೂನೊಂದನ್ನು ತೆಗೆದು ಹಾಕಿದ ಮಾತ್ರಕ್ಕೆ ಸಮಾಜವು ಹಾಳಾಗಿ ಹೋಗುತ್ತದೆ ಎನ್ನುವದು ಸಂಪೂರ್ಣ ಸತ್ಯವಲ್ಲ. ಆದರೆ ಈಗಿನ ಸಮಾಜವು ಎತ್ತ ಸಾಗುತ್ತಿದೆ ಎಂಬ ಹಿರಿಯರ ಕಳಕಳಿಯನ್ನೂ ಕೂಡ ಸಂಪೂರ್ಣವಾಗಿ ತೆಗೆದು ಹಾಕಲು ಬರುವದಿಲ್ಲ. ಪಶ್ಚಿಮದಲ್ಲಿ ಈ ಸಂಬಂಧಗಳನ್ನು ಹೇಗೆ ನೋಡಲಾಯಿತು ಎಂಬುದಕ್ಕಿಂತ ನಮ್ಮ ಪೂರ್ವಜರು ಈ ಸಂಬಂಧಗಳನ್ನು ಹೇಗೆ ವಿಶ್ಲೇಷಿಸಿದರು ಎಂಬುದನ್ನು ಗಮನಿಸಿದರೆ ಇವೆಲ್ಲಕ್ಕೂ ಉತ್ತರ ದೊರಕಬಹುದು.

ಮತ್ತಷ್ಟು ಓದು »

14
ಆಕ್ಟೋ

ಅಂಬೇಡ್ಕರ್ ಅವರ ಮತಪರಿವರ್ತನೆ ಮತ್ತು ಸಮಕಾಲಿನ ಸವಾಲುಗಳು

– ರಘು.ಎಸ್,ಸಂಶೋಧನಾ ವಿದ್ಯಾರ್ಥಿ,

ಕುವೆಂಪು ವಿಶ್ವವಿದ್ಯಾನಿಲಯ,ಜ್ಞಾನ ಸಹ್ಯಾದ್ರಿ ಶಂಕರಘಟ್ಟ.

ಕೆಲವು ದಿನಗಳ ಹಿಂದೆ ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಂಬೇಡ್ಕರ್ ಅವರ ಮೊಮ್ಮೊಗರಾದ ಪ್ರಕಾಶ್ ಯಶವಂತ್ ಅಂಬೇಡ್ಕರ್ ಅವರು ಸಾರ್ವಜನಿಕವಾಗಿ ದಲಿತರೆಲ್ಲರೂ ಮತಾಂತರವಾಗಬೇಕು ಎಂದು ಕರೆ ನೀಡುತ್ತಾರೆ. ಇದು ಕೇವಲ ಅಂಬೇಡ್ಕರ್ ಮೊಮ್ಮೊಗ ಅವರ ಕರೆ ಮಾತ್ರ ಅಲ್ಲ. ಇಂದು ದಲಿತ ಸಮಸ್ಯೆಯ ಕುರಿತು ಮಾತನಾಡುವ ಬಹುತೇಕ ಚಿಂತಕರು ತಮ್ಮ ಭಾಷಣಗಳಲ್ಲಿ ಹಾಗೂ ಬರವಣಿಗೆಗಳಲ್ಲಿ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಇದಕ್ಕೆ ಕಾರಣವೇನು? ಅಥವಾ ದಲಿತರು ಏಕೆ ಹಿಂದೂಧರ್ಮವನ್ನು ಬಿಟ್ಟು ಬೇರೆ ರಿಲಿಜನ್ನುಗಳಿಗೆ ಮತಾಂತರವಾಗಬೇಕು? ಎಂದು ಕೇಳಿದರೆ ಅಂಬೇಡ್ಕರ್ ಅವರ ವಾದದ ಹೊರತಾಗಿ ಯಾವ ಹೊಸ ಅಂಶವನ್ನು ಇವರ ಉತ್ತರದಲ್ಲಿ ಗುರುತಿಸಲು ಸಾಧ್ಯವಾಗುವುದಿಲ್ಲ.

ಅಂದರೆ “ಭಾರತದಲ್ಲಿ ಹಿಂದೂಯಿಸಂನ ಅವಿಭಾಜ್ಯ ಅಂಗವಾಗಿರುವ ಜಾತಿವ್ಯವಸ್ಥೆಯು ಶ್ರೇಣಿಕರಣಗೊಂಡಿದ್ದು, ಈ ಶ್ರೇಣಿಕರಣದಲ್ಲಿ ಬ್ರಾಹ್ಮಣ ಪುರೋಹಿತಶಾಹಿಗಳು ಮೇಲ್ವರ್ಗದವರಾದರೆ ದಲಿತರು ಕೆಳವರ್ಗದವರಾಗಿದ್ದಾರೆ. ಈ ಹಿನ್ನಲೆಯಲ್ಲಿ ಭಾರತದಲ್ಲಿ ಸಾವಿರಾರು ವರ್ಷಗಳಿಂದಲೂ ಬ್ರಾಹ್ಮಣ ಪುರೋಹಿತಶಾಹಿಗಳು ಹಾಗೂ ದಲಿತರ ನಡುವೆ ವರ್ಗ ಸಂಘರ್ಷ ನಡೆಯುತ್ತಿದೆ. ಈ ವರ್ಗ ಸಂಘರ್ಷದಲ್ಲಿ ದಲಿತರು ಬದುಕುಳಿಯಲು ಸಾಧ್ಯವಿಲ್ಲ. ಕಾರಣ ದಲಿತರಿಗೆ ಹಣಬಲವಾಗಲಿ, ಜನಬಲವಾಗಲಿ ಅಥವಾ ಬುದ್ಧಿಬಲವಾಗಲಿ ಇಲ್ಲ. ಈ ಕಾರಣಕ್ಕೆ ದಲಿತರು ಹಿಂದೂಯಿಸಂ ಗೆ ಹೊರತಾದ ಬೇರೊಂದು ರಿಲಿಜನ್ನಿಗೆ ಮತಾಂತರವಾಗದ ಹೊರತು ಹಿಂದೂಗಳ ದಬ್ಬಾಳಿಕೆಯಿಂದ ಮುಕ್ತವಾಗಲು ಸಾಧ್ಯವಿಲ್ಲ”ಎನ್ನುವುದು ಅಂಬೇಡ್ಕರ್ ಅವರ ವಾದ. ಇಂದು ಮತಾಂತರದ ಪರವಾಗಿ ಮಾತನಾಡುವ ಚಿಂತಕರು ಕೂಡ ಅಂಬೇಡ್ಕರ್ ಅವರ ಮೇಲಿನ ವಾದವನ್ನೇ ಪುನರುಚ್ಚರಿಸುವುದು ಕಂಡುಬರುತ್ತದೆ. ಆದರೆ ಅಂಬೇಡ್ಕರ್ ಅವರ ವಾದವನ್ನು ಮುಂದೊತ್ತುತ್ತಿದ್ದೇವೆ ಎನ್ನುವ ಪ್ರಸ್ತುತ ಚಿಂತಕರು ತಮಗೆ ಅರಿವಿಲ್ಲದೇ ಅಂಬೇಡ್ಕರ್ ಅವರಿಗೆ ವಿರುದ್ಧವಾಗಿ ನಿಲ್ಲುತ್ತಾರೆ. ಪ್ರಸ್ತುತ ಲೇಖನದಲ್ಲಿ ಇದನ್ನು ಪರಿಶೀಲಿಸಲಾಗುವುದು.

ಭಾರತದಲ್ಲಿ ಹಿಂದೂಯಿಸಂ ಹಾಗೂ ಜಾತಿವ್ಯವಸ್ಥೆಯ ಕಾರಣದಿಂದಾಗಿ ದಲಿತರು ಅನೇಕ ರೀತಿಯ ಸಮಸ್ಯೆಗಳಿಗೆ ಒಳಗಾಗಿದ್ದಾರೆ ಎಂದು ಹೇಳುವ ಅಂಬೇಡ್ಕರ್ ಅವರು, ಹಿಂದೂಯಿಸಂ ಅನ್ನು ತೊರೆಯುವುದೇ ದಲಿತರ ಸಮಸ್ಯೆ ನಿವಾರಣೆಯಾಗಲು ಸೂಕ್ತ ಪರಿಹಾರ ಎಂದು ಹೇಳುತ್ತಾರೆ ಎನ್ನುವುದೇನೋ ನಿಜ. ಆದರೆ ಈ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಪೂರ್ವಭಾವಿಯಾಗಿ ಸಾಕಷ್ಟು ಅಧ್ಯಯನವನ್ನು ನಡೆಸುರುತ್ತಾರೆ. 1935ರಲ್ಲಿ “ಹಿಂದೂವಾಗಿ ಹುಟ್ಟಿದ್ದೇನೆ ಆದರೆ ಹಿಂದೂವಾಗಿ ಸಾಯಲಾರೆ”ಎಂದು ಹೇಳುವ ಅಂಬೇಡ್ಕರ್ ಅವರು ಅಂತಿಮವಾಗಿ 1956ರಲ್ಲಿ ತಮ್ಮ ಲಕ್ಷಾಂತರ ಅನುಯಾಯಿಗಳ ಜೊತೆ ಬೌದ್ಧ ಧರ್ಮವನ್ನು ಸ್ವೀಕರಿಸುತ್ತಾರೆ. ಬೌದ್ಧ ಧರ್ಮವನ್ನೇ ಏಕೆ ಸ್ವೀಕರಿಸಿದರು? ಬಹುಶಃ ಮತಾಂತರದ ಪರವಾಗಿ ಮಾತನಾಡುವ ಪ್ರಸ್ತುತ ಚಿಂತಕರಿಗೆ ಈ ಪ್ರಶ್ನೆ ಹೊಳೆದಿರಲಿಕ್ಕಿಲ್ಲ. ಆದರೆ ಅಂಬೇಡ್ಕರ್ ಅವರ ಬರವಣಿಗೆಗಳ ಕಡೆ ಕಣ್ಣು ಹಾಯಿಸಿದರೆ ಇದಕ್ಕೆ ಸ್ಪಷ್ಟವಾದ ಉತ್ತರ ಸಿಗುತ್ತದೆ. ಅಂದರೆ ದಲಿತರ ಸಮಸ್ಯೆಗೆ ಮತಾಂತರವೇ ಅಂತಿಮ ಪರಿಹಾರ ಎಂದು ಹೇಳುವ ಅಂಬೇಡ್ಕರ್ ಅವರು ಯಾವ ಮತಕ್ಕೆ ಹೋದರೆ ದಲಿತರ ಸಮಸ್ಯೆ ಬಗೆಹರಿಯಲು ಸಾಧ್ಯ ಎನ್ನುವುದರ ಕುರಿತೂ ಚಿಂತನೆ ನಡೆಸುತ್ತಾರೆ.

ಮತ್ತಷ್ಟು ಓದು »

7
ಜೂನ್

ಸಂಸ್ಕೃತಕ್ಕಾಗಿ ಯುದ್ಧ

– ಪ್ರವೀಣ ಜಿ ಹೆಗ್ಡೆ

“ಅಮೆರಿಕನ್ ಓರಿಯಂಟಲಿಸ್ಮ್” ಅಥವಾ ಅಮೇರಿಕಾ ಚಿಂತನಾ ವಿಧಾನ/ರೀತಿ , ಇದು ಅಮೇರಿಕಾದ ಇತಿಹಾಸದಿಂದ ಹುಟ್ಟಿರುವಂಥದ್ದು. ಯೂರೋಪಿನಿಂದ ಅಮೆರಿಕಾಕ್ಕೆ ವಲಸೆ ಹೋದ ಬಿಳಿಯರು , ಅಲ್ಲಿಯ ಮೂಲ ನಿವಾಸಿಗಳ ಜೊತೆ ಕಾದಾಡಿ ಹಿಂಸೆಯ ಮೂಲಕ, ಇಲ್ಲವೇ ಅವರ ಜೊತೆಗಿದ್ದಂತೆ ವರ್ತಿಸಿ ಆಂತರಿಕವಾಗಿ ನಿಶ್ಯಕ್ತಿಗೊಳಿಸುವ ಮೂಲಕ ತಮ್ಮ ಅಧಿಪತ್ಯವನ್ನು ಅಮೇರಿಕಾದಲ್ಲಿ ಸ್ಥಾಪಿಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಈ ಪಾಶ್ಚಾತ್ಯ ದೃಷ್ಟಿಯ ಚೌಕಟ್ಟನ್ನೇ ಉಪಯೋಗಿಸಿ ,ಪಾಶ್ಚಾತ್ಯವಲ್ಲದ ಸಂಸ್ಕೃತಿಗಳನ್ನೂ ಅಧ್ಯಯಿಸುವುದು ಸಾಮಾನ್ಯವಾಗಿ ಜಗತ್ತಿನಾದ್ಯಂತ ರೂಢಿಯಲ್ಲಿರುವ ವಿಷಯ. ಆದರೆ ಇಲ್ಲೊಂದು ಅತ್ಯಂತ ಗಮನಾರ್ಹವಾದ ವಿಷಯವಿದೆ, ಅದ್ಯಾವುದೆಂದರೆ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಮೇಲೆ ಹೆಚ್ಚಾಗುತ್ತಿರುವ ಅಮೇರಿಕಾ ಪ್ರಣೀತ ಅಧ್ಯಯನದ ಪ್ರಾಬಲ್ಯ. ಅದರಲ್ಲಿಯೂ ಗಮನಿಸಲೇಬೇಕಾದ ಅತೀ ಎಚ್ಚರಿಕೆಯ ಮತ್ತು ಸೂಕ್ಷ್ಮ ವಿಷಯವೇನೆಂದರೆ,ಅವರುಗಳು ಮೇಲು ಮೇಲೆ ಭಾರತದ ಸಂಸ್ಕೃತಿಯ ಹಿತೈಷಿ ಎನ್ನುವಂತೆ ವರ್ತಿಸಿದರೂ, ಭಾರತದ ಪೂಜ್ಯ ,ಪವಿತ್ರ ಸಂಪ್ರದಾಯಗಳ ಮತ್ತು ಸನಾತನ ಧರ್ಮದ ಬಗೆಗೆ ಅವರಿಗಿರುವ ಕನಿಷ್ಠ ಗೌರವ ಮತ್ತು ಕಾಳಜಿ.

ರಾಜೀವ ಮಲ್ಹೋತ್ರ ಅವರು ತಮ್ಮ ಪುಸ್ತಕದಲ್ಲಿ “ಅಮೇರಿಕಾ ಚಿಂತನಾ ರೀತಿ” ಎಂಬುದು ಏನು, ಅದು ಭಾರತೀಯ ಸಂಸ್ಕೃತಿಯ ಅಧ್ಯಯನದಲ್ಲಿ ಯಾವರೀತಿಯಲ್ಲಿ ಉಪಯೋಗಿಸಲ್ಪಡುತ್ತಿದೆ ? ಎನ್ನುವುದನ್ನು ಅತಿ ಸ್ಪಷ್ಟವಾಗಿ ವಿವರಿಸಿದ್ದಾರೆ. ಪುಸ್ತಕದ ತಲೆ ಬರಹ ಹೇಳುವಂತೆ,ಸಂಸ್ಕೃತ ರಾಜಕೀಯ ಸಾಧನವೋ ಅಥವಾ ಪವಿತ್ರವೋ ? ಶೋಷಣೆಯೋ ಅಥವಾ ವಿಮೊಚನೆಯೋ?ಸತ್ತಿಹುದೋ ಅಥವಾ ಬದುಕಿಹುದೋ?

ಮಲ್ಹೋತ್ರರವರು, ಅಮೇರಿಕಾ ಶಿಕ್ಷಣದಲ್ಲಿ ಬೇರೂರಿರುವ ಹೊಸ ರೀತಿಯ “ಓರಿಯಂಟಲಿಸ್ಮ್“ ಅಥವಾ ಚಿಂತನಾ ವಿಧಾನ/ರೀತಿಯ ಬಗೆಗೆ ಬರೆದಿರುವ ಅತೀ ಪ್ರಮುಖರು. ಅಮೆರಿಕಾ ದೇಶವು ಜಗತ್ತಿನ ದೊಡ್ಡಣ್ಣನಾಗಿ, ಎಲ್ಲ ಕ್ಷೇತ್ರಗಳಲ್ಲಿಯೂ ಹಿಡಿತ ಸಾಧಿಸುವುದರೊಂದಿಗೆ, ಹಿಂದಿನಿಂದ ನಡೆದುಕೊಂಡು ಬಂದಿದ್ದ ಯೂರೋಪ್ ಕೇಂದ್ರಿತವಾಗಿದ್ದ ಭಾರತೀಯ ಧರ್ಮ, ಸಂಸ್ಕೃತಿಗಳ ಅಧ್ಯಯನವು ಈಗ ಅಪ್ರಸ್ತುತವಾಗಿ, ಅದರ ಸ್ಥಾನವನ್ನು ಅಮೇರಿಕ ಕೇಂದ್ರಿತ ಭಾರತದ ಅಧ್ಯಯನ ಆಕ್ರಮಿಸಿಕೊಂಡಿದೆ.

ಅಮೇರಿಕಾದ ಅಧ್ಯಯನ ಮಾಡುವ “ಚಿಂತನಾ ವಿಧಾನ” ಭಾರತೀಯ ಸಂಸ್ಕೃತಿಗೆ ಹೇಗೆ ಅಪಾಯಕಾರಿ ?

ಮತ್ತಷ್ಟು ಓದು »

29
ಏಪ್ರಿಲ್

ಅಕ್ಷ ತೃತೀಯ – ವೈಶಿಷ್ಟ್ಯ

ಮಯೂರಲಕ್ಷ್ಮೀ

imagesಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಮನುಷ್ಯನ ಆವಿಷ್ಕಾರದೊಡನೆ ಬದಲಾಗುವ ಋತು ಋತುಗಳೊಡನೆ ಸರ್ವತೋಮುಖ ಅಭಿವೃದ್ಧಿಯಲ್ಲಿ ಪರಿಪೂರ್ಣತೆಯತ್ತ ಕೊಂಡೊಯ್ಯಲು  ಅತ್ಯಂತ ಮಹತ್ತರ ಪಾತ್ರ ವಹಿಸುತ್ತದೆ. ಹೊಸ ಸಂವತ್ಸರದೊಡನೆ  ಯುಗಾದಿಯಿಂದ ಆರಂಭವಾಗಿ ಚೈತ್ರ ಮಾಸ, ಶುಕ್ಲ ಪಕ್ಷ, ವಸಂತ ಋತುವಿನಲ್ಲಿ ದೇಶದಾದ್ಯಂತ ಸಂಭ್ರಮದಿಂದ ಆಚರಿಸಲ್ಪಡುವ  “ಅಕ್ಷ ತೃತೀಯ”  ಅತ್ಯಂತ ಮುಖ್ಯವಾದದು.

ಅಕ್ಷ ತೃತೀಯ ಎಂದರೇನು? ಮತ್ತಷ್ಟು ಓದು »

29
ಜನ

ಪ್ರಾಣಿಗಳ ಕ್ರೀಡೆ ಮತ್ತು ಐಡೆಂಟಿಟಿ

– ವಿನಾಯಕ ಹಂಪಿಹೊಳಿ

imagesಪೆಟಾ ಹಾಗೂ ಇನ್ನಿತರ ಪ್ರಾಣಿದಯಾ ಸಂಘದವರು ಪ್ರಾಣಿಗಳನ್ನು ಆಹಾರವಾಗಿ ಹೊರತುಪಡಿಸಿ ಉಳಿದೆಲ್ಲ ಕಾರ್ಯಸಾಧನೆಗಾಗಿ ಬಳಸಿಕೊಳ್ಳುವ ಪ್ರಕ್ರಿಯೆಯನ್ನು ವಿರೋಧಿಸುತ್ತಾರೆ. ಅವುಗಳನ್ನು ಮೋಜಿಗಾಗಿ ಪಂದ್ಯಗಳಲ್ಲಿ ಬಳಸುವುದನ್ನು, ಮೆರವಣಿಗೆಯಲ್ಲಿ ಉಪಯೋಗಿಸುವುದನ್ನು, ಅವುಗಳ ಚರ್ಮದಿಂದ ಉಪಯೋಗಿ ವಸ್ತುಗಳನ್ನು ನಿರ್ಮಿಸುವುದನ್ನು, ಸರ್ಕಸ್ಸಿನಲ್ಲಿ ಪ್ರಾಣಿಗಳನ್ನು ಹೊಡೆದು ಪಳಗಿಸುವುದನ್ನು ವಿರೋಧಿಸುತ್ತಾರೆ. ಮೋಜಿಗಾಗಿ ಪ್ರಾಣಿಗಳನ್ನು ಹೊಡೆದೋಡಿಸುವ ಆಟಗಳನ್ನು, ಕೊಲ್ಲುವ ಆಚರಣೆಗಳನ್ನು, ನಿಷೇಧಿಸಬೇಕೆಂದು ಈ ಪ್ರಾಣಿದಯಾ ಸಂಘಗಳು ಪ್ರಯತ್ನಿಸುತ್ತವೆ. ಪ್ರಾಣಿದಯಾ ಸಂಘಗಳ ಈ ಕಾಳಜಿಯು ಜನಸಾಮಾನ್ಯ ಭಾರತೀಯರಿಗೆ ಮೇಲ್ನೋಟಕ್ಕೆ ಅರ್ಥವಾಗಿರುವಂತೆಯೇ ಭಾಸವಾಗುತ್ತದೆ. ಮತ್ತಷ್ಟು ಓದು »

26
ಆಕ್ಟೋ

ಕಂಬಳ ಅಮಾನವೀಯ ಆಚರಣೆಯೇ?

– ನಾಗಶಿಲ್ಪ ಪಿ.ಎಸ್.
%e0%b2%95%e0%b2%82%e0%b2%ac%e0%b2%b3ಕಂಬಳ ಒಂದು ಅಮಾನವೀಯ ಆಚರಣೆಯೇ?
ತುಳುವರ ಸಾಂಪ್ರದಾಯಿಕ ಆಚರಣೆ ಕಂಬಳದ ಕುರಿತು ಒಂದು ಬರಹ, Beauty of Tulunad ಎಂಬ ಫೇಸ್ ಬುಕ್ ಪುಟದಲ್ಲಿ ಪ್ರಕಟವಾಗಿತ್ತು. ಬರಹವು ಕಂಬಳ ಆಚರಣೆಯ ನಿಷೇಧದಿಂದಾಗಿ, ತುಳುನಾಡ ಜನರಿಗೆ ಆಗಿರುವ ನೋವನ್ನು ಬಿತ್ತರಿಸಿತ್ತು. ಕಂಬಳದ ಕುರಿತ ಬರಹವನ್ನು ಓದಿದ ನನಗೆ ಆಚರಣೆಗಳು ನಮ್ಮ ಸಂಪ್ರದಾಯದ ಒಂದು ಭಾಗ ಎನ್ನುವ ಹೇಳಿಕೆ ಮತ್ತೊಮ್ಮೆ ಮನದಟ್ಟಾಯಿತು.
22
ಡಿಸೆ

ವೈಚಾರಿಕತೆ, ನಾಸ್ತಿಕತೆ ಮತ್ತು ಬುದ್ಧಿಜೀವಿಗಳ ದುರಂತ ಕತೆ

– ರೋಹಿತ್ ಚಕ್ರತೀರ್ಥ

ನಕಲಿ ಮೆದುಳು“ನಾವು ವಿಚಾರವಾದಿಗಳಾಗಿ ನಾಸ್ತಿಕರಾಗೋಣ” ಎಂಬ ಮಾತನ್ನು ಒಬ್ಬ ಲೇಖಕ ಇತ್ತೀಚೆಗೆ ಬುದ್ಧಿಜೀವಿಗಳೆ ತುಂಬಿದ್ದ ಸಾಹಿತ್ಯ ಸಮ್ಮೇಳನವೊಂದರಲ್ಲಿ ಹೇಳಿದರಂತೆ. ಬಹುಶಃ ಅವರು ಪ್ರತಿಯೊಬ್ಬ ವಿಚಾರವಾದಿಯೂ ನಾಸ್ತಿಕನಾಗಿರಲೇಬೇಕು ಎಂಬ ಅರ್ಥದಲ್ಲಿ ಆ ಮಾತನ್ನು ಹೇಳಿರಬಹುದು. ಈ ಮಾತಿನ ಒಳಗಿಳಿಯಲು, ಮೊದಲು, ನಾವು “ವಿಚಾರವಾದ” ಅಂದರೆ ಏನು ಎನ್ನುವುದನ್ನು ನೋಡಬೇಕಾಗಿದೆ.

ವಿಚಾರವಾದಕ್ಕೆ ಕನ್ನಡದಲ್ಲಿರುವ ಅರ್ಥ: ವಿಚಾರ ಮಾಡುವ ಶಕ್ತಿ; ಚಿಂತನೆಯ ಶಕ್ತಿ ಎಂದು. ಇನ್ನೂ ಮುಂದುವರಿದು ತಾತ್ವಿಕ ದೃಷ್ಟಿ ಎಂದೂ ಹೇಳಬಹುದು. ಇಂಗ್ಲೀಷಿನಲ್ಲಿ Intellectual attitude, Ideological stance ಎಂದೆಲ್ಲ ಹೇಳುತ್ತಾರೆ. ಅಂದರೆ ಯಾವುದೇ ವಿಷಯವನ್ನು ಸರಿಯಾಗಿ ಗ್ರಹಿಸಿ, ಅದರ ಅಂತರಾರ್ಥವನ್ನು ಅರಿತು ಅದರಂತೆ ನಡೆಯುವವರು ವೈಚಾರಿಕತೆ ಬೆಳೆಸಿಕೊಂಡಿದ್ದಾರೆ ಎಂದು ಹೇಳಬಹುದು. ವಿಚಾರವಾದ ಅಥವಾ ವೈಚಾರಿಕತೆ ಎಂಬುದಕ್ಕೆ ಸಂವಾದಿಯಾಗಿ ಇಂಗ್ಲೀಷಿನಲ್ಲಿ ಬಳಕೆಯಾಗುವ “Intellectualism” ಎಂಬುದಕ್ಕೆ ಇರುವ ಅರ್ಥ: The exercise of the intellect at the expense of the emotions. ಅಂದರೆ, ಒಂದು ವಿಷಯವನ್ನು ಸರಿಯಾಗಿ ಗ್ರಹಿಸಲು ಹೋಗುವಾಗ ಅದಕ್ಕೆ ಸುತ್ತಿಕೊಂಡಿರುವ ಭಾವನಾತ್ಮಕ ಅಂಶಗಳನ್ನೆಲ್ಲ ಬದಿಗಿಟ್ಟು ಸತ್ಯವನ್ನಷ್ಟೇ ಎತ್ತಿ ಹಿಡಿಯುವುದು ಎಂದು ಅರ್ಥ. ಮಗ ಕಳ್ಳತನ ಮಾಡಿದ್ದಾನೆ. ಅದು ತಾಯಿಗೂ ಗೊತ್ತಿದೆ. ಆತನನ್ನು ಸೆರೆಮನೆಗೆ ಹಾಕಿದರೆ ತಾಯಿ ಅನಾಥೆಯಾಗುತ್ತಾಳೆ; ಆದರೆ ಆತನನ್ನು ಶಿಕ್ಷಿಸದೆ ಬಿಟ್ಟರೆ ದೇಶದ ಕಾನೂನಿಗೆ ಅಪಚಾರ. ಅಲ್ಲದೆ ಇದೇ ಉದಾಹರಣೆಯನ್ನು ನೋಡಿ ನೂರಾರು ಜನ ಕಳ್ಳತನಕ್ಕೆ ಇಳಿಯಬಹುದು. ಹಾಗಾಗಿ, ತಾಯಿಯ ಕಣ್ಣೀರನ್ನು ಕಷ್ಟಪಟ್ಟು ಅಲಕ್ಷಿಸಿ ಮಗನಿಗೆ ಶಿಕ್ಷೆಯಾಗುವಂತೆ ನೋಡಿಕೊಂಡು ಕಾನೂನನ್ನು ಎತ್ತಿಹಿಡಿಯುವುದು ಇಂಟಲೆಕ್ಚುಲಿಸಮ್ ಅಥವಾ ವೈಚಾರಿಕತೆಯ ಒಂದು ಮುಖ.

ವೈಚಾರಿಕತೆ – ಈಗೇನೋ ಬಹಳ ಪರಿಚಿತವಾದ ಭಾರತೀಯ ಶಬ್ದ ಅನ್ನಿಸಿದರೂ ಅದರ ಉಗಮವಾದದ್ದು ಭಾರತದಲ್ಲಲ್ಲ. ಇದು ಮಧ್ಯ ಯುರೋಪಿನಲ್ಲಿ ಸುಮಾರು ಹದಿನಾರನೇ ಶತಮಾನದಲ್ಲಿ ಹುಟ್ಟಿದ ಪದ ಮತ್ತು ಪರಿಕಲ್ಪನೆ. ಇದರ ಹುಟ್ಟಿನ ಹಿನ್ನೆಲೆ ತಿಳಿಯಲು ನಾವು ಸ್ವಲ್ಪ ಹಿಂದೆ ಹೋಗಬೇಕಾಗುತ್ತದೆ. ಕ್ರಿಸ್ತ ಹುಟ್ಟಿ ಒಂದೂವರೆ ಸಾವಿರ ವರ್ಷಗಳಾದರೂ ಯುರೋಪಿಯನ್ನರು ಬೈಬಲ್ಲಿನ ಭಾಗಗಳನ್ನು ಪ್ರಶ್ನೆ ಮಾಡಲು ಹೋಗಿರಲಿಲ್ಲ. ಚರ್ಚು ಅತ್ಯಂತ ಪ್ರಬಲವಾಗಿದ್ದ ವ್ಯವಸ್ಥೆ. ಅದನ್ನು ಎದುರುಹಾಕಿಕೊಳ್ಳುವವರಿಗೆ ಸಿಗುತ್ತಿದ್ದ ಪ್ರತಿಫಲ ಮರಣ. ಬೈಬಲ್ಲಿನ ವಿರುದ್ಧ ಮಾತಾಡಿದವರನ್ನು ಒಂದೋ ಜೀವಮಾನವೆಲ್ಲ ಸೆರೆಯಲ್ಲಿ ಹಾಕಿ ಭೀಕರ ಶಿಕ್ಷೆಗಳನ್ನು ಕೊಡಲಾಗುತ್ತಿತ್ತು ಇಲ್ಲವೇ ಹಲವು ಹತ್ಯಾರಗಳ ಮೂಲಕ ದೇಹವನ್ನು ಹಾಯಿಸಿ ಕೊಲ್ಲಲಾಗುತ್ತಿತ್ತು. ಪ್ರಭುತ್ವ ಯಾವತ್ತೂ ತನ್ನ ವಿರುದ್ಧ ಮಾತಾಡುವವನನ್ನು ಬದುಕಗೊಡುವುದಿಲ್ಲ ಅಥವಾ ಆತನನ್ನು ಸಂಪೂರ್ಣವಾಗಿ ಅಲಕ್ಷಿಸಿ ಕೊನೆಗೆ ತಾನಾಗಿ ಆತ ಬಾಯಿಮುಚ್ಚಿಕೊಂಡು ಸುಮ್ಮನಾಗುವಂತೆ ಮಾಡುತ್ತದೆ. ಗ್ರೀಸ್, ರೋಮ್ ನಾಗರಿಕತೆಗಳಲ್ಲಿ ಆ ಕಾಲದಲ್ಲಿ ರಾಜರಾಗಿದ್ದವರು, ಜೊತೆಗೆ ಅವರ ಆಸ್ಥಾನ ಪಂಡಿತರಾಗಿದ್ದವರು ಜನ ನಂಬಬೇಕಾದ ಮಾತುಗಳನ್ನು ಹೇಳುತ್ತಿದ್ದರು, ಬರೆದಿಡುತ್ತಿದ್ದರು. ಅವುಗಳು ಸರಿಯಿಲ್ಲ; ಸುಳ್ಳಿನ ಕಂತೆ ಎಂದವರನ್ನು ಅಲಕ್ಷಿಸಿ ದೂರಕ್ಕೆಸೆಯುತ್ತಿದ್ದರು. ಹಾಗಾಗಿ ಸೂರ್ಯ ಭೂಮಿಗೆ ಸುತ್ತು ಬರುತ್ತಾನೆ ಎಂದು ಹೇಳಿದ ಟಾಲೆಮಿ, ಅರಿಸ್ಟಾಟಲ್ ಮೊದಲಾದವರ ತಪ್ಪು ಚಿಂತನೆಗಳು ನೂರಾರು ವರ್ಷಗಳ ಕಾಲ ನಿಂತವು. ಟಾಲೆಮಿ ರಾಜನಾಗಿದ್ದ, ಅರಿಸ್ಟಾಟಲ್ ಅಸ್ಥಾನ ಪಂಡಿತನಾಗಿದ್ದ ಎನ್ನುವುದೇ ಇದಕ್ಕೆ ಕಾರಣ. ಸೂರ್ಯನ ಸುತ್ತ ಭೂಮಿ ತಿರುಗುತ್ತಿದೆ ಎಂದು ಅವರ ಕಾಲದಲ್ಲಿ ಹೇಳಿದ ಅರಿಸ್ಟಾರ್ಕಸ್‍ನ ದನಿ ಪ್ರಭುತ್ವದ ಧ್ವನಿವರ್ಧಕದ ಕೆಳಗೆ ಉಡುಗಿಯೇ ಹೋಯಿತು.
ಮತ್ತಷ್ಟು ಓದು »

24
ಆಗಸ್ಟ್

ಆನುದೇವಾ ಹೊರಗಣವನು ಸೆಕ್ಯುಲರಿಸಂನಿಂದ

– ರಾಕೇಶ್ ಶೆಟ್ಟಿ

ಆನುದೇವಾ ಹೊರಗಣವನು ಸೆಕ್ಯುಲರಿಸಂಅರಸರ ಆಡಳಿತದಲ್ಲಿದ್ದು ಆ ನಂತರ ದಶಕಗಳಿಗೂ ಹೆಚ್ಚು ಕಾಲದ ಮಾವೋವಾದಿಗಳ ಹಿಂಸಾಚಾರದ ನಂತರ ಅರಸರ ಆಡಳಿತಕ್ಕೆ ತಿಲಾಂಜಲಿಯಿಟ್ಟು ಪ್ರಜಾಪ್ರಭುತ್ವವನ್ನು ಅಪ್ಪಿಕೊಂಡ ನೇಪಾಳಿಗಳು ಮತ್ತು ನೇಪಾಳ ಹೆಜ್ಜೆ-ಹೆಜ್ಜೆಗೂ ಸವಾಲುಗಳನ್ನು ಎದುರಿಸುತ್ತಲೇ ಸಾಗುತ್ತಲಿದೆ.ಪ್ರಜಾಪ್ರಭುತ್ವಕ್ಕೆ ಕಾಲಿಟ್ಟಂತೆ,ಹೊಸ ಸಂವಿಧಾನ ರಚಿಸುವ ನಿರ್ಧಾರಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಬಂದಿದ್ದರೂ ೨೦೦೬ರಿಂದ ಈ ಪ್ರಕ್ರಿಯೆ ನಾನಾ ವಿಘ್ನಗಳಿಂದ ಕುಂಟುತ್ತಲೇ ಸಾಗಿದೆ.ಇತ್ತೀಚೆಗೆ ನಡೆದ ಪ್ರಬಲ ಭೂಕಂಪದ ನಂತರ ದೊಡ್ಡ ಮನಸ್ಸು ಮಾಡಿ ಎಲ್ಲಾ ರಾಜಕೀಯ ಪಕ್ಷಗಳೂ ಒಗ್ಗೂಡಿ ಮತ್ತೆ ಈ ಕಾರ್ಯಕ್ಕೆ ಜೈ ಎಂದಿದ್ದವು.ಈಗ ಕಾರ್ಯ ಶುರುವಾದಂತೆ ಬಹಳಷ್ಟು ಪರ-ವಿರೋಧ ಪ್ರತಿಭಟನೆ ಚರ್ಚೆಗಳು ಶುರುವಾಗಿವೆ.

ಅವುಗಳಲ್ಲಿ ಒಂದು,ನೇಪಾಳದ ಭಾಗಗಳನ್ನು ಜನರ ಆಚರಣೆ-ಭಾಷೆಯ ಮೇಲೆ ಪ್ರತ್ಯೇಕವಾಗಿಸುವುದನ್ನು ವಿರೋಧ ವ್ಯಕ್ತವಾಗುತ್ತಿದೆ.ಈ ನಡೆ ಮುಂದೆ ನೇಪಾಳವನ್ನು ಇನ್ನಷ್ಟು ಚೂರು ಚೂರು ಮಾಡಲಿದೆ ಎಂಬ ದೂರದೃಷ್ಟಿಯುಳ್ಳವರು ನೇಪಾಳದಲ್ಲಿರುವುದು ನೇಪಾಳಿಗಳ ಪುಣ್ಯವೇ ಸರಿ.ಬಹುಷಃ ಅವರು ಭಾರತದ ಸ್ಥಿತಿಯಿಂದ ಪಾಠ ಕಲಿತಿರಬಹುದು.ಅದರಲ್ಲೂ ಮುಖ್ಯವಾಗಿ ಭಾರತದ ಈಶಾನ್ಯ ರಾಜ್ಯಗಳನ್ನು ನೋಡಿ.ಒಂದೆಡೆ ಮಿಷನರಿಗಳ ಚಿತಾವಣೆ,ಮತ್ತೊಂದೆಡೆ ಜನಾಂಗೀಯ ಆಧರಿತ ಉಗ್ರಪಡೆಗಳ ಹಿಂಸಾಚಾರಗಳಿಂದ ಈಗಾಗಲೇ ಎಂಟು ರಾಜ್ಯಗಳಾಗಿರುವ ಈಶಾನ್ಯ ಭಾಗವೂ ಇನ್ನೂ ಚೂರುಚೂರಾಗುವ ಆಂತಕವಿದ್ದೇ ಇದೆ.ಈಶಾನ್ಯ ರಾಜ್ಯಗಳ ಉದಾಹರಣೆಯೇಕೆ.ನೆರೆಯ ತಮಿಳುನಾಡಿನಲ್ಲಿಯೇ ಭಾಷೆ ಮತ್ತು ನಮ್ಮ ಸಂಸ್ಕೃತಿಯಗೇ ಪರಕೀಯವಾದ ’ದ್ರಾವಿಡ ಜನಾಂಗೀಯ’ ಎಂಬ ಹುಚ್ಚು ಕಲ್ಪನೆಯ ಚಳುವಳಿಯ ನೆಪದಲ್ಲಿ ಏನೆಲ್ಲಾ ಅಧ್ವಾನಗಳಾಯಿತು ಎಂಬುದನ್ನು ನೋಡಿದರೆ ಸಾಕಲ್ಲವೇ? ಈ ನಿಟ್ಟಿನಲ್ಲಿ ನೋಡಿದಾಗ ನೇಪಾಳಿಗಳ ಆತಂಕ ಸರಿಯಾಗಿದೆ ಎನಿಸುತ್ತದೆ.

ಮತ್ತಷ್ಟು ಓದು »

22
ಜೂನ್

ನಾಡು-ನುಡಿ ಮರುಚಿಂತನೆ : ಅಕ್ಷರಕ್ಕೂ,ಶಿಕ್ಷಣಕ್ಕೂ,ವಿದ್ಯೆಗೂ,ಜ್ಞಾನಕ್ಕೂ ಏನು ಸಂಬಂಧ?

– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ

ಜ್ಞಾನಸಾಧಾರಣವಾಗಿ ಪ್ರಾಚೀನ ಭಾರತೀಯ ಶಿಕ್ಷಣ ಪದ್ಧತಿಯ ಕುರಿತು ಒಂದು ಆರೋಪವನ್ನು ಪದೇ ಪದೇ ಮಾಡಲಾಗುತ್ತದೆ: ಅದೆಂದರೆ  ಬ್ರಾಹ್ಮಣರು ಶೂದ್ರರನ್ನು ಹಾಗೂ ಅಸ್ಪೃಶ್ಯರನ್ನು ಅಕ್ಷರ ಜ್ಞಾನದಿಂದ ವಂಚಿಸಿದ್ದಾರೆ. ಆಕಾರಣದಿಂದಾಗಿ ಅವರಿಗೆ ಜ್ಞಾನವನ್ನೂ, ವಿದ್ಯೆಯನ್ನೂ ನಿರಾಕರಿಸಿದ್ದರು ಅಂತ. ನಮ್ಮ ಜಾತಿ ವ್ಯವಸ್ಥೆಯಲ್ಲಿ ಶೋಷಣೆಯ ಒಂದು ಲಕ್ಷಣ ಎಂಬಂತೆ ಕೆಲವು ಹಿತಾಸಕ್ತಿ ಪೀಡಿತ ಗುಂಪುಗಳು ಈ ಸಂಗತಿಯನ್ನು ತಪ್ಪದೇ ಹೇಳುತ್ತಿರುತ್ತವೆ.

ಹೀಗೆ ಹೇಳುವವರು ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ. ಆಧುನಿಕ ಶಿಕ್ಷಣವು ಅಕ್ಷರಾಭ್ಯಾಸಕ್ಕೂ ಶಿಕ್ಷಣಕ್ಕೂ ಒಂದು ಅವಿನಾಭಾವಿಯಾದ ಸಂಬಂಧ ಕಲ್ಪಿಸುತ್ತದೆ. ಆ ಕಾರಣದಿಂದಲೇ ಸಂಪೂರ್ಣ ಸಾಕ್ಷರತೆಯ ಕಾರ್ಯಕ್ರಮವನ್ನು ನಮ್ಮ ಸರ್ಕಾರವು ಹಮ್ಮಿಕೊಂಡಿದೆ ಹಾಗೂ ವಿಶ್ವಸಂಸ್ಥೆ ಕೂಡಾ ಅಕ್ಷರವನ್ನು ಅಭಿವೃದ್ಧಿಯ ಮಾನದಂಡವನ್ನಾಗಿ ಸ್ವೀಕರಿಸಿದೆ. ವಯಸ್ಕರಿಗೆ ಕೂಡಾ ಅವರು ಸಾಯುವುದರ ಒಳಗೆ ಒಮ್ಮೆಯಾದರೂ ಅಕ್ಷರಾಭ್ಯಾಸವನ್ನು ಮಾಡಿಸುವುದು ನಿರ್ಣಾಯಕ ಎಂದು ಭಾವಿಸಲಾಗಿದೆ. ಈ ರೀತಿಯ ಶಿಕ್ಷಣ ಪದ್ಧತಿಯಲ್ಲಿ ಜ್ಞಾನವನ್ನು ಪುಸ್ತಕವನ್ನು ಓದುವ ಮೂಲಕವೇ ಪಡೆಯುವುದು ಅತ್ಯವಶ್ಯ. ಇದು ಪಾಶ್ಚಾತ್ಯ ಸಂಸ್ಕೃತಿಯ ಕ್ರಮ. ಅಲ್ಲಿ ಸತ್ಯದೇವನ ವಾಣಿಯು ಅಂತಿಮವಾದ ಸತ್ಯವಾಗಿದ್ದು ಅದು ಬರೆಹದ ಮೂಲಕವೇ ಲಭ್ಯವಿರುವುದರಿಂದ ಬರೆಹವನ್ನು ಕಲಿಯುವುದು ನಿರ್ಣಾಯಕ.

ಮತ್ತಷ್ಟು ಓದು »