ನಾಡು-ನುಡಿ:ಮರುಚಿಂತನೆ – “ಜಾತಿ ಹಾಗೂ ಅಸ್ಮಿತೆ ರಾಜಕೀಯ” ಭಾಗ ೨
– ಪ್ರೊ. ಜೆ.ಎಸ್. ಸದಾನಂದ, ಕುವೆಂಪು ವಿಶ್ವವಿದ್ಯಾನಿಲಯ
ನಾಡು-ನುಡಿ:ಮರುಚಿಂತನೆ – “ಜಾತಿ ಹಾಗೂ ಅಸ್ಮಿತೆ ರಾಜಕೀಯ” ಭಾಗ ೧
ನವ ಸಾಮಾಜಿಕ ಚಳುವಳಿ ಸಿದ್ಧಾಂತಗಳು:
1960 ಹಾಗೂ 70ರ ದಶಕದಲ್ಲಿ ಪ್ರಾರಂಭವಾದ ನವ ಸಾಮಾಜಿಕ ಚಳುವಳಿ ಸಿದ್ಧಾಂತಗಳು ಮಾರ್ಕ್ಸ್ ವಾದಿ ನಿಲುವುಗಳಿಗಿಂತ ಭಿನ್ನವಾದ ನಿಲುವನ್ನು ಮುಂದಿಡಲು ಯಶಸ್ವಿಯಾದವು. ವರ್ಗಾದಾರಿತವಲ್ಲದ ಅಸ್ಮಿತೆಯ ರಾಜಕೀಯ ಕೇವಲ ಸಾಂಕೇತಿಕ ಎನ್ನುವ ಮಾರ್ಕ್ಸ್ ವಾದಿ ನಿಲುವನ್ನು ಇವು ಅಲ್ಲಗಳೆಯುತ್ತವೆ. ಈ ಸಿದ್ಧಾಂತವು ಅಸ್ಮಿತೆ ರಾಜಕೀಯವನ್ನು ಒಂದು ವಿಶಿಷ್ಟ ಬಗೆಯ ರಾಜಕೀಯ ಎಂದೇ ಪ್ರತಿಪಾದಿಸುತ್ತದೆ. ಅಸ್ಮಿತೆಯಾದಾರಿತ ಚಳುವಳಿಗಳನ್ನು ಆಧುನಿಕತೆಯ ಪರಿಣಾಮವಾಗಿ ಆರ್ಥಿಕ ಮತ್ತು ಸಾಮಾಜಿಕ ವಲಯದ ಉನ್ನತ ಸ್ಥರದಲ್ಲಿ ಆದ ರಾಚನಿಕ ಬದಲಾವಣೆ ಅಸ್ಮಿತೆ ರಾಜಕೀಯವನ್ನು ಹುಟ್ಟು ಹಾಕಿದೆ ಮತ್ತು ಇದೊಂದು ಐತಿಹಾಸಿಕವಾದ ಸಾಮೂಹಿಕ ಪ್ರತಿಕ್ರಿಯೆ ಎಂದು ಈ ಸಿದ್ಧಾಂತದ ಪ್ರತಿಪಾದನೆಯಾಗಿದೆ. ಕೆಲವು ವಿದ್ವಾಂಸರು ಹೇಳುವಂತೆ ಅಸ್ಮಿತೆ ರಾಜಕೀಯವು ಕೈಗಾರಿಕೋತ್ತರ ಸಮಾಜದಲ್ಲಾಗುತ್ತಿರುವ ಒಂದು ಬಗೆಯ ಸ್ಥಿತ್ಯಂತರ (ಟೌರಿನ್ 1981). ಹಬರ್ಮಾಸ್ರವರ ಅಭಿಪ್ರಾಯದಲ್ಲಿ ಅಸ್ಮಿತೆ ಚಳುವಳಿಗಳು ಪ್ರಭುತ್ವದ ನಿಯಂತ್ರಣ ಹಾಗೂ ಅದರ ನಿರ್ಣಯಗಳ ಒತ್ತಡಕ್ಕೆ ಹೆಚ್ಚು ಹೆಚ್ಚಾಗಿ ಒಳಗಾಗುತ್ತಿರುವ ಸಮುದಾಯಗಳು ಅಂತಹ ಹಿಡಿತದಿಂದ ತಪ್ಪಿಸಿಕೊಳ್ಳುವ ಪ್ರಯತ್ನದ ಫಲವಾಗಿವೆ (ಹಬರ್ಮಾಸ್ 1985).
ನಾಡು-ನುಡಿ:ಮರುಚಿಂತನೆ – “ಜಾತಿ ಹಾಗೂ ಅಸ್ಮಿತೆ ರಾಜಕೀಯ” ಭಾಗ ೧
– ಪ್ರೊ. ಜೆ.ಎಸ್. ಸದಾನಂದ, ಕುವೆಂಪು ವಿಶ್ವವಿದ್ಯಾನಿಲಯ
ರಾಜಕೀಯ ಸಿದ್ಧಾಂತದಲ್ಲಿ ಅಸ್ಮಿತೆ ರಾಜಕೀಯದ ಪರಿಕಲ್ಪನೆ ಪ್ರಬಲವಾಗಿದ್ದು 20ನೇ ಶತಮಾನದ ಉತ್ತರಾರ್ಧದಲ್ಲಿ. ತಮ್ಮ ಅಸ್ತಿತ್ವ ಸಂಪೂರ್ಣ ಅವಗಣನೆಗೆ ಒಳಗಾಗಿದೆ ಮತ್ತು ಆ ಕಾರಣದಿಂದ ತಮ್ಮನ್ನು ಪ್ರಾತಿನಿಧ್ಯದಿಂದ ವಂಚಿತರನ್ನಾಗಿಸಿ ರಾಜಕೀಯ ಮುಖ್ಯವಾಹಿನಿಯಿಂದ ದೂರವಿರಸಲಾಗಿದೆ ಎನ್ನುವ ಭಾವನೆ ಬೆಳೆಸಿಕೊಂಡ ಒಂದು (ಸಾಮಾಜಿಕ/ಸಾಂಸ್ಕೃತಿಕ) ಗುಂಪು ರಾಜಕೀಯ ಸಂಚಲನೆಗೆ ತೊಡಗುವ ಪ್ರಕ್ರಿಯೆಯನ್ನು ಅಸ್ಮಿತೆ ರಾಜಕೀಯ ಎಂದು ಕರೆಯಲಾಗುತ್ತದೆ. ಸಾರ್ವತ್ರಿಕ ಒಳಿತು ಅಸ್ಮಿತೆ ರಾಜಕೀಯದ ಗುರಿಯಾಗಿರುವುದಿಲ್ಲ ಮತ್ತು ಅಂತಹ ರಾಜಕೀಯ ಹೋರಾಟ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿರುವುದಿಲ್ಲ. ಮುಖ್ಯವಾಹಿನಿಯಿಂದ ಬದಿಗೆ ಸರಿಸಲ್ಪಟ್ಟ ತನ್ನನ್ನು ಮುಖ್ಯವಾಹಿನಿಯೊಂದಿಗೆ ಗುರುತಿಸಿಕೊಳ್ಳುವಂತೆ ಮಾಡುವುದು ಒಂದು ಗುಂಪಿನ ಅಸ್ಮಿತೆ ರಾಜಕೀಯದ ಮುಖ್ಯ ಉದ್ದೇಶವಾಗಿರುತ್ತದೆ.
20ನೇ ಶತಮಾನದ ಉತ್ತರಾರ್ಧದಲ್ಲಿ ಅಮೇರಿಕಾ ದೇಶದಲ್ಲಿ ಪ್ರಾರಂಭವಾದ (ದ್ವಿತೀಯ ಹಂತದ) ಸ್ತ್ರೀವಾದೀ ಚಳುವಳಿ, ಕರಿಯರ ನಾಗರೀಕ ಹಕ್ಕುಗಳ ಹೋರಾಟ, ಸಲಿಂಗಿಗಳು ತಮ್ಮ ಹಕ್ಕಿಗಳಿಗಾಗಿ ಮಾಡಿದ ಹೋರಾಟ ಮೊದಲಾದವುಗಳನ್ನು ಅಸ್ಮಿತೆ ರಾಜಕೀಯ ಎಂದು ಮೊತ್ತ ಮೊದಲ ಬಾರಿಗೆ ಗುರುತಿಸಲಾಯಿತು. ಈ ಎಲ್ಲಾ ಗುಂಪುಗಳು ತಮ್ಮ ವಿಶಿಷ್ಟ ಅಸ್ಮಿತೆಯನ್ನು ಗುರುತಿಸಿ ಗೌರವಿಸದೆ ಆ ಕಾರಣಕ್ಕಾಗಿ ತಾವು ಮುಖ್ಯವಾಹಿನಿಯಿಂದ ಬದಿಗೆ ಸರಿಸಲ್ಪಟ್ಟ ಪ್ರಕ್ರಿಯೆಯ ವಿರುದ್ಧ ಹೋರಾಟ ಪ್ರಾರಂಬಿಸಿದವು. ತಾವು ಸಾಮಾಜಿಕವಾಗಿ ರಾಜಕೀಯವಾಗಿ ತುಳಿತಕ್ಕೊಳಗಾಗಿದ್ದೇವೆ ಎನ್ನುವ ಭಾವನೆಯನ್ನು ಆಧರಿಸಿ ಅಸ್ಮಿತೆ ರಾಜಕೀಯದ ಸಂಘಟನೆಯು ತನ್ನ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಅಸ್ಮಿತೆ ರಾಜಕೀಯ ಎಂದು ಕರೆಯಲ್ಪಡುವ ರಾಜಕೀಯ/ಸಾಮಾಜಿಕ ಚಳುವಳಿಗಳ ವ್ಯಾಪ್ತಿ ವಿಶಾಲವಾದುದಾಗಿದೆ. ರಾಜಕೀಯ ಶಾಸ್ತ್ರದ ಅಧಯಯನಗಳಲ್ಲಿ ಅಸ್ಮಿತೆ ರಾಜಕೀಯಕ್ಕೆ ಸಂಬಂದಿಸಿದ ಬರವಣೆಗೆಗಳು ಪಾಶ್ಚಾತ್ಯ ಬಂಡವಾಳಿಶಾಹಿ ಪ್ರಜಾಪ್ರಭುತ್ವಗಳಿಗೆ ಸಂಬಂದಿಸಿರುತ್ತವೆ. ಬಂಡವಾಳಶಾಹಿ ವ್ಯವಸ್ಥೆಯ ಹಿಡಿತ ಪ್ರಬಲವಾಗುತ್ತಾ ಹೋದ ಹಾಗೆ ಪರಂಪರಾನುಗತವಾಗಿ ಬಂದ ಸಮುದಾಯಗಳು ತಮ್ಮ ಅಸ್ಮಿತೆಗಳನ್ನು ಕಳೆದುಕೊಳ್ಳುತ್ತಾ ಹೋಗಿ ಅಂತಹ ಸಮುದಾಯಗಳ ಸದಸ್ಯರಲ್ಲಿ ಪರಕೀಯತೆಯ ಭಾವನೆ ಹೆಚ್ಚಗುತ್ತಾ ಹೋದದ್ದರ ಪರಿಣಾಮದಿಂದಾಗಿ ಅಸ್ಮಿತೆ ರಾಜಕೀಯ ಹುಟ್ಟಿಕೊಂಡಿದೆ ಎಂದು ಕೆಲವರು ಭಾವಿಸುತ್ತಾರೆ.
ಮತ್ತಷ್ಟು ಓದು
ನಾಡು-ನುಡಿ: ಮರುಚಿಂತನೆ
ಸಮಾಜ ವಿಜ್ಞಾನದ ಪರಿಭಾಷೆಗಳನ್ನು ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ವಿವರಿಸುವ ಹಾಗೂ ಇದುವರೆಗೂ ಭಾರತೀಯ ಸಮಾಜ ಮತ್ತು ಸಂಸ್ಕೃತಿಯ ಕುರಿತ ಚಿತ್ರಣಗಳನ್ನು ಮರುಪರಿಶೀಲನೆ ಮಾಡುತ್ತಾ, ಭಾರತೀಯರ ಬದುಕನ್ನು ಪ್ರತಿನಿಧಿಸುವ ನೈಜ ವಿವರಣೆಗಳನ್ನು ಕಟ್ಟಲು ಸಾಧ್ಯವೇ ಎಂದು ಕಂಡುಕೊಳ್ಳುವ ಒಂದು ಚಿಕ್ಕ ಪ್ರಯತ್ನದ ಉದ್ದೇಶವನ್ನು ಹೊಂದಿರುವ “ನಾಡು-ನುಡಿ: ಮರುಚಿಂತನೆ” ಅಂಕಣ ನಿಲುಮೆಯ ಓದುಗರಿಗಾಗಿ – ನಿಲುಮೆ
ಒಂದು ವಿಷಯದ ಕುರಿತು ಸಾಮಾನ್ಯವಾಗಿ ಎರಡು ತರಹದ ಜ್ಞಾನವಿರುತ್ತದೆ. ಒಂದು, ಸಾಮಾನ್ಯ ಜ್ಞಾನ, ಎರಡು, ವಿಶಿಷ್ಟ ಜ್ಞಾನ ಅಥವಾ ಅಧ್ಯಯನದಿಂದ ಮೂಡಿಬರುವ ತಿಳುವಳಿಕೆ. ಸಾಮಾನ್ಯ ಜ್ಞಾನವು ಯಾವುದೋ ಒಂದು ಕಾಲಘಟ್ಟದಲ್ಲಿದ್ದ ವಿಶಿಷ್ಟ ಜ್ಞಾನದ ಪಲಶೃತಿಯೇ ಆಗಿರುತ್ತದೆ. ವಿಶಿಷ್ಟ ಜ್ಞಾನವು ಶೈಕ್ಷಣಿಕ ಕ್ಷೇತ್ರದಿಂದ ಹೊರಗೆ ಹೋಗುವಾಗ ಮತ್ತು ಶ್ರೀಸಾಮಾನ್ಯರ ಬಳಿ ಹರಡುವಾಗ ಅದು ಸಾಮಾನ್ಯಜ್ಞಾನದ ರೂಪವನ್ನು ತಳೆಯುತ್ತದೆ. ಆದರೆ ವಿಶಿಷ್ಟ ಜ್ಞಾನವು ತನ್ನ ಅಸ್ತಿತ್ವದಲ್ಲಿ ಮತ್ತು ಸ್ವಭಾವದಲ್ಲಿ ಸಾಮಾನ್ಯ ಜ್ಞಾನದಂತೆ ಸಾರ್ವಕಾಲಿಕವಾಗಿ ಒಂದೇ ರೀತಿಯಲ್ಲಿ ಇರುವುದಿಲ್ಲ. ಏಕೆಂದರೆ ವಿಶಿಷ್ಟ ಜ್ಞಾನವು ಕಾಲದಿಂದ ಕಾಲಕ್ಕೆ ಪರಿಷ್ಕೃತಗೊಳ್ಳುತ್ತಾ ಹೋಗುತ್ತದೆ. ಆಗ ಮಾತ್ರವೇ ಅದು ವಿಶಿಷ್ಟ ಜ್ಞಾನವಾಗಿ ಉಳಿದುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದರೆ ಅದು ಸಾಮಾನ್ಯಜ್ಞಾನವಾಗಿ ಬದಲಾಗುತ್ತದೆ. ಸಾಮಾನ್ಯಜ್ಞಾನವು ಪರಿಷ್ಕರಣೆಗೆ ಒಳಗಾಗದೆ ಯಾವುದೋ ಕಾಲದ ವಿಶಿಷ್ಟ ಜ್ಞಾನವನ್ನೇ ಸಾರ್ವಕಾಲಿಕ ಸತ್ಯ ಎಂಬಂತೆ ಪುನರುತ್ಪಾದಿಸುತ್ತಿರುತ್ತವೆ. ಇದೇ ರೀತಿ, ಭಾರತೀಯ ಸಮಾಜದ ಕುರಿತು ಸಾಮಾನ್ಯ ಜ್ಞಾನ ಹಾಗೂ ವಿಶೇಷ ಜ್ಞಾನಗಳಿಗೆ ವ್ಯತ್ಯಾಸವಿರದ ರೀತಿಯಲ್ಲಿ ಮಾತನಾಡುವ ಸಂದರ್ಭವೇರ್ಪಟ್ಟಿದೆ. ಇದಕ್ಕೆ ಕಾರಣವೆಂದರೆ ಸಮಾಜದ ಕುರಿತು ಮಾತನಾಡುವವರು ಸಾಮಾನ್ಯಜ್ಞಾನವನ್ನು ಆಧರಿಸಿ ಸಮಾಜವಿಜ್ಞಾನ ಎಂಬಂತೆ ಮಾತನಾಡುತ್ತಿರುತ್ತಾರೆ. ಸಮಾಜದಲ್ಲಿ ಯಾವುದೇ ಘಟನೆಗಳು ಸಂಭವಿಸಿದರೆ ಕೆಲವು ಹಿಂದಿನಿಂದ ಬಂದಂತಹ ತಿಳುವಳಿಕೆಯ ಆಧಾರದ ಮೇಲೆಯೇ ಅವುಗಳಿಗೆ ಸಮಜಾಯಶಿ ಕೊಡಲಾಗುತ್ತಿರುತ್ತದೆ. ನಡೆದ ಘಟನೆಯ ಕುರಿತು ಅಧ್ಯಯನ ನಡೆಸಿ ಮಾತನಾಡುವ ಕ್ರಮವನ್ನು ಸಾಮಾನ್ಯ ಜ್ಞಾನದ ಅರೆ ತಿಳುವಳಿಕೆಯು ಮೂಲೆಗುಂಪು ಮಾಡುತ್ತಿದೆ.