ಅಂಕಣರಂಗ ೧ – ಅನಿಯತಕಾಲಿಕ ಅಂಕಣದ ಅಂಕುರಾರ್ಪಣ!!

ಸಾಹಿತ್ಯ ಪರಿಷತ್ ಯಾರೊಬ್ಬರ ಖಾಸಗಿ ಆಸ್ತಿಯಲ್ಲ..!
ಕಿರಣ್ ಕಿಜೋ
ಸಂಶೋಧನಾ ವಿದ್ಯಾರ್ಥಿ
ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ.
ಆಂಧ್ರ ಪ್ರದೇಶ.
ಮೊದಲಿಗೆ ಭೈರಪ್ಪನವರನ್ನು ಶಿವಮೊಗ್ಗದ ಸಾಹಿತ್ಯ ಸಮ್ಮೇಳನದಿಂದ ದೂರವಿಡುವಲ್ಲಿ ಯಶಸ್ವಿಯಾದ ರಾಜೇಂದ್ರ ಚೆನ್ನಿ ಹಾಗೂ ಅವರ ಪರಮ ಸಹಿಷ್ಣತೆಯ ಎಲ್ಲಾ ಸಂಗಡಿಗರಿಗೂ ಅಭಿನಂದನೆಗಳು! ಕೆಲ ದಿನಗಳ ಹಿಂದಷ್ಟೆ, ಸಾಹಿತ್ಯ ಸಂಭ್ರಮದ ಅಂಗಳದಲ್ಲಿ ಚಪ್ಪಲಿಯ ಮೂಲಕ ತಮ್ಮ ಶಕ್ತಿ ಪಾರಮ್ಯದೊಂದಿಗೆ ಗೆಲುವಿನ ನಗೆ ಬೀರಿದ್ದ ಎಡ ಪಡೆ, ಇದೀಗ ಶಿವಮೊಗ್ಗದಲ್ಲಿ ಮತ್ತೊಂದು ಸುತ್ತಿನ ಯಶಸ್ಸನ್ನು ಸಾಧಿಸಿ, ಗೆಲುವಿನ ಕೇಕೆ ಹಾಕಿದೆ. ಧಾರವಾಡದ ಮ್ಯಾನ್ ಆಫ್ ದಿ ಸೀರಿಸ್ ಚಪ್ಪಲಿ ಚಂದ್ರಶೇಖರ ಹಾಗೂ ಕುಂ.ವೀರಭದ್ರಪ್ಪನವರಾದರೆ, ಶಿವಮೊಗ್ಗೆಯಲ್ಲಿ ರಾಜೇಂದ್ರ ಚೆನ್ನಿ! ಈ ರೀತಿಯ ಗೆಲುವುಗಳು ಅವರಿಗೇನು ಹೊಸದಲ್ಲ ಬಿಡಿ. ದೊಡ್ಡ ದಾಖಲೆಯ ಇತಿಹಾಸವೇ ಅವರ ಬೆನ್ನ ಹಿಂದಿದೆ! Read more
ಸಾಮಾಜಿಕ ಪ್ರಜ್ಞೆ ಮತ್ತು ನಾವು
-ರಾಜಕುಮಾರ.ವ್ಹಿ.ಕುಲಕರ್ಣಿ
ಮುಖ್ಯಗ್ರಂಥಪಾಲಕ
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ
ಬಾಗಲಕೋಟ
ಒಮ್ಮೆ ಹೀಗಾಯ್ತು, ಮನೆಗೆ ಬರುತ್ತಿರುವಾಗ ದಾರಿಯಲ್ಲಿ ನನ್ನ ಸ್ನೇಹಿತ ಜಗಳವಾಡಿದ. ಅವನ ಜಗಳಕ್ಕೂ ಕಾರಣವಿತ್ತು. ಮನೆಕಟ್ಟಿಸುತ್ತಿದ್ದ ಯಜಮಾನರೊಬ್ಬರು ರಸ್ತೆ ಬದಿಯ ಚರಂಡಿಗೆ ಮರಳು, ಜಲ್ಲಿಕಲ್ಲುಗಳನ್ನು ತುಂಬಿಬಿಟ್ಟಿದ್ದರು. ಕೊಳಚೆ ನೀರು ಹರಿದು ಹೋಗದೆ ಚರಂಡಿ ತುಂಬಿ ನಿಂತಿತ್ತು. ಅಂಥದ್ದೊಂದು ಘಟನೆ ಅವನ ಆಕ್ರೋಶಕ್ಕೆ ಕಾರಣವಾಗಿತ್ತು. ಚರಂಡಿಯಲ್ಲಿ ತುಂಬಿರುವ ಮರಳು ಮತ್ತು ಜಲ್ಲಿಕಲ್ಲುಗಳನ್ನು ಕೂಡಲೇ ತೆಗೆದುಹಾಕುವಂತೆ ಅಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ಹೇಳಿದ. ಅಲ್ಲೇ ಸಮೀಪದಲ್ಲಿ ನಿಂತಿದ್ದ ಯಜಮಾನರು ಮನೆ ಕೆಲಸ ಪೂರ್ಣಗೊಳ್ಳುವವರೆಗೆ ಅದು ಸಾಧ್ಯವಿಲ್ಲವೆಂದು ಬಿರುಸಾಗಿಯೇ ನುಡಿದರು. ಮಾತಿಗೆ ಮಾತು ಬೆಳೆಯಿತು. ಗಲಾಟೆ ಕೇಳಿ ಸುತ್ತಮುತ್ತಲಿನ ಮನೆಯವರು ಹೊರಗೆ ಬಂದರು. ಆಶ್ಚರ್ಯವೆಂದರೆ ಯಾರೊಬ್ಬರೂ ನನ್ನ ಗೆಳೆಯನ ಬೆಂಬಲಕ್ಕೆ ನಿಲ್ಲಲಿಲ್ಲ. ಅವನನ್ನೆ ವಿಚಿತ್ರ ಎನ್ನುವಂತೆ ನೋಡಿದರು. ಆದ ತಪ್ಪನ್ನು ತಪ್ಪು ಎಂದು ಹೇಳುವ ಧೈರ್ಯ ಅಲ್ಲಿದ್ದ ಯಾರೊಬ್ಬರಲ್ಲೂ ಇರಲಿಲ್ಲ. ಅಷ್ಟಕ್ಕೂ ಅದು ತಪ್ಪೆಂದು ಜಗಳಕ್ಕೆ ನಿಂತವನು ಅಸಲಿಗೆ ಆ ಕಾಲೋನಿಯವನೂ ಆಗಿರಲಿಲ್ಲ. ಆ ನಿಂತ ನೀರಿನ ಪಕ್ಕದ ಮನೆಯೂ ಅವನದಾಗಿರಲಿಲ್ಲ. ಆದರೂ ಆ ಸಂದರ್ಭ ಅವನಲ್ಲಿನ ಸಾಮಾಜಿಕ ಪ್ರಜ್ಞೆ ಜಾಗೃತಗೊಂಡಿತ್ತು. ತಪ್ಪನ್ನು ಸರಿಪಡಿಸಲು ಪ್ರಯತ್ನಿಸಿದ. ಯಾರು ಸಮಸ್ಯೆಯ ಸಮೀಪದಲ್ಲಿದ್ದರೋ ಅವರಲ್ಲಿ ಮಾತ್ರ ಸಾಮಾಜಿಕ ಸಮಸ್ಯೆ ಸಂಪೂರ್ಣವಾಗಿ ನಿಷ್ಕ್ರಿಯವಾಗಿತ್ತು. ಆದರೆ ಅದೇ ಜನ ಅಣ್ಣಾ ಹಜಾರೆ ಹೆಸರಿನ ಟೊಪ್ಪಿಗೆ ಧರಿಸಿ ಭೃಷ್ಟಾಚಾರ ವಿರೋಧಿ ಆಂದೋಲನದಲ್ಲಿ ಭಾಗವಹಿಸಿದ್ದು ವ್ಯವಸ್ಥೆಯೊಂದರ ವ್ಯಂಗ್ಯಕ್ಕೆ ಹಿಡಿದ ಕೈಗನ್ನಡಿಯಾಗಿತ್ತು. Read more
ಹುಣ್ಣಿವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ!
– ರೋಹಿತ್ ಚಕ್ರತೀರ್ಥ
ಉಪೇಂದ್ರರ “ಉಪ್ಪಿ 2” ಚಿತ್ರ ಬಿಡುಗಡೆಯಾದ ಮರುದಿನ ಕನ್ನಡ ಪತ್ರಿಕೆಯೊಂದರಲ್ಲಿ ಒಂದು ಲೇಖನ ಬಂದಿತ್ತು. ಅದರಲ್ಲಿ ಮೊದಲಿಂದ ಕೊನೆವರೆಗೆ ಇದ್ದದ್ದು ಉಪ್ಪಿಟ್ಟಿನ ವಿವರಣೆ! ಉಪ್ಪಿಟ್ಟನ್ನು ಜನ ಹೇಗೆ ಮಾಡುತ್ತಾರೆ; ಹೇಗೆ ತಿನ್ನುತ್ತಾರೆ; ಮನೆಗಳಲ್ಲಿ ಉಪ್ಪಿಟ್ಟು ಮಾಡುವಾಗ ಯಾರ್ಯಾರ ಭಾವನೆ ಹೇಗಿರುತ್ತದೆ ಎಂದು ಇಡೀ ಲೇಖನದ ತುಂಬ ಉಪ್ಪಿಟ್ಟಿನ ಮಹಿಮೆಯನ್ನೇ ವರ್ಣಿಸಲಾಗಿತ್ತು. ಕೊನೆಗೆ ಮಾತ್ರ “ಇಲ್ಲಿ ಉಪ್ಪಿಟ್ಟು ಎಂದಿರುವಲ್ಲೆಲ್ಲ ಉಪ್ಪಿ – 2 ಎಂದು ಓದಿಕೊಳ್ಳಿ” ಎಂಬ ಸೂಚನೆ ಕೊಟ್ಟಿದ್ದರು! ಬಹುಶಃ ಸಿನೆಮದ ಬಗ್ಗೆ ಒಂದು ಸಾಲನ್ನೂ ಆಡದೆ ಬರೆದ ಮೊದಲ ಸಿನೆಮ ವಿಮರ್ಶೆ ಅದೇ ಇರಬೇಕು! ವಾಸ್ತವದಲ್ಲಿ, ವಿಮರ್ಶಕರು ತಾನು ಉಪ್ಪಿಟ್ಟಿನ ಬಗ್ಗೆ ಏನೇನು ಹೇಳುತ್ತ ಹೋಗುತ್ತಿದ್ದೇನೋ ಅವೆಲ್ಲವೂ ಆ ಹೆಸರಲ್ಲಿ ಬಂದ ಸಿನೆಮಕ್ಕೂ ಅನ್ವಯವಾಗುತ್ತವೆ ಎನ್ನುವುದನ್ನು ಲೇಖನದ ಉದ್ದಕ್ಕೂ ಪರೋಕ್ಷವಾಗಿ ಹೇಳಿಬಿಟ್ಟಿದ್ದರು. “ಈ ಚಿತ್ರ ಕೂಡ ಉಪ್ಪಿಟ್ಟಿನಂತೆ; ಅವರವರ ಭಾವಕ್ಕೆ, ಅವರವರ ಭಕುತಿಗೆ” ಎನ್ನುವುದು ಅವರ ಲೇಖನದ ಆಶಯವಾಗಿತ್ತು. ಹೀಗೆ, ಉಪ್ಪಿಯ ಚಿತ್ರವಿಮರ್ಶೆಯಲ್ಲಿ ಉಪಮಾ, ಉಪಮಾನವಾಗಿ ಬಂದುಹೋಯಿತು! Read more
ವಿಡಂಬನೆ: ಸಾಹಿತ್ಯ ಗದ್ದುಗೆ ಹಾಗೂ ಮಣ್ಣಂಗಟ್ಟಿ ಸಾಹಿತ್ಯ!
– ತುರುವೇಕೆರೆ ಪ್ರಸಾದ್
ತರ್ಲೆಕ್ಯಾತನಳ್ಳಿ ಖ್ಯಾತ ಸಾಹಿತಿ ಅನಂತ ಜೋಷಿ ಮತ್ತು ತಾಲ್ಲೂಕ ಸಾಹಿತ್ಯ ಸಭೆಯ ನೂತನ ಅಧ್ಯಕ್ಷ ಗುದ್ಲಿಂಗ ಜಮಖಂಡಿ ಅವರ ಮಧ್ಯೆ ನಡೆದ ಫೋನ್ ಸಂಭಾಷಣೆ ಹೀಗಿದೆ:
‘ನಮಸ್ಕಾರ್ರೀ ! ನಾನ್ ಜಮಖಂಡಿ ಮಾತಾಡಕ್ ಹತ್ತೀನಿ’
‘ಓಹೋ! ಜಮಖಂಡಿ ಅವರು!ಏನ್ರಪ್ಪಾ! ಆರಾಮದೀರೇನು?’
‘ಹಾಂ! ಆರಾಮದೀನಿ..ವಿಷ್ಯ ತಿಳೀತೇನ್ರೀ ಎಪ್ಪಾ?’
‘ಯಾವ ವಿಷ್ಯ ಹೇಳಕ್ ಹತ್ತೀರಿ ನೀವು? ಕೊಶ್ನೆ ಪೇಪರ್ ಲೀಕಾಯ್ತಲ್ಲ ಅದಾ ? ಇಲ್ಲ ಯಡಿಯೂರಪ್ಪಗೆ ಅಧ್ಯಕ್ಷ ಪಟ್ಟ ಸಿಕ್ತಲ್ಲ ಅದಾ?’
‘ಏ ! ಅವೆಲ್ಲಾ ಹಳೇದಾತ್ ಬಿಡ್ರಿ, ಈಗ ನಂಗ್ ಸಾಹಿತ್ಯ ಸಭೆ ಅಧ್ಯಕ್ಷಗಿರಿ ಸಿಕ್ಕೈತೆ, ಮೊನ್ನೆ ಯುಗಾದಿ ಮುಂದ ಪೇಪರ್ನಾಗ್ ಬಂದಿತ್ತು, ನೀವು ನೋಡ್ಲಿಲ್ಲೇನು?’
‘ಅರೆ! ಹೌದಾ? ನಿಮ್ಗೆ ಅಧ್ಯಕ್ಷಗಿರಿ ಕಟ್ಯಾರಾ? ಅಂದ್ರೆ ಹಾರ ತುರಾಯಿ ಹಾಕಿಸ್ಕೊಳೋಕ್ ಕೊಳ್ ಚಾಚ್ಕಂಡ್ ಕುಂತ್ ಬಿಟ್ರಿ ಅನ್ನಿ, ಇಂದ್ರಾಬಾಯವ್ರು ನಮಗಾ ಒಂದ್ ಮಾತೂ ಕೇಳ್ದ, ಸಭೆನೂ ಕರೀದೆ ನಿಮ್ಮನ್ನ ಹೆಂಗ್ ಅಧ್ಯಕ್ಷ ಮಾಡಾರೆ?’
‘ನಿಮ್ಗೆ ಇದ್ ಕೇಳಿದ್ ಕೂಡ್ಲೆ ಹೊಟ್ಟೆನಾಗೆ ಮೆಣಸಿನಕಾಯ್ ಕಿವುಚಿದಂಗಾಗ್ತದೆ ಅಂತ ನಂಗೊತ್ತಿತ್ತು ಬಿಡ್ರಲಾ! ಅದೆಂಥ ಹೊಟ್ಟೆ ಉರೀನ್ರೀ ನಿಮ್ದು..! ಇನ್ನೊಬ್ರಿಗೆ ಒಳ್ಳೇದಾತು ಅಂದ್ರೆ ಸಹಿಸೋ ಮಂದಿ ಅಲ್ಲ ನೀವು’ Read more
‘ಹೊಸ ತಲೆಮಾರಿನ ತಲ್ಲಣ’ ಕೃತಿ ಪರಿಚಯ
– ಮು.ಅ ಶ್ರೀರಂಗ ಬೆಂಗಳೂರು
ಡಾ. ರಹಮತ್ ತರೀಕೆರೆ ಅವರ ಸಂಪಾದಕತ್ವದಲ್ಲಿ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ ಅವರು ೨೦೦೮ರಲ್ಲಿ ಪ್ರಕಟಿಸಿರುವ ‘ಹೊಸ ತಲೆಮಾರಿನ ತಲ್ಲಣ’ ಕೃತಿಯ ಒಂದು ಪರಿಚಯ ಮಾಡಿಕೊಡುವುದು ಈ ಲೇಖನದ ಉದ್ದೇಶ. ಈ ಕೃತಿಯಲ್ಲಿ ಒಟ್ಟು ೩೮ ಲೇಖನಗಳಿವೆ. ಸಂಪಾದಕರಾದ ರಹಮತ್ ತರೀಕೆರೆಯವರು ತಮ್ಮ ಮುನ್ನುಡಿಯಲ್ಲಿ ಹೇಳಿರುವಂತೆ ‘ಈ ಸಂಕಲನವು ಬರಹದಲ್ಲಿ ತೊಡಗಿಕೊಂಡಿರುವವರಿಗೂ, ಸಾಹಿತ್ಯ ಅಧ್ಯಯನ ಮಾಡುವವರಿಗೂ, ಸಾಹಿತ್ಯದಲ್ಲಿ ಸಾಮಾನ್ಯ ಆಸಕ್ತಿ ಇರಿಸಿಕೊಂಡಿರುವ ಓದುಗರಿಗೂ ಉಪಯುಕ್ತ ಆಗಬಹುದು’. ಈ ಕೃತಿಯಲ್ಲಿ ಮೂರು ಭಾಗಗಳಿವೆ. ಮೊದಲ ಭಾಗದಲ್ಲಿ ಹೊಸತಲೆಮಾರಿನ ಲೇಖಕರ ಆತ್ಮ ಕಥಾನಾತ್ಮಕ ಮಾದರಿಯ ಬರಹಗಳಿವೆ. ಎರಡನೇ ಭಾಗದ ಬರಹಗಳು ಸಂಪಾದಕರ ಕೆಲವು ನಿರ್ದಿಷ್ಟ ಪ್ರಶ್ನೆಗಳಿಗೆ ಕೊಟ್ಟ ಉತ್ತರವಾಗಿ ಮೂಡಿಬಂದ ಲೇಖನಗಳಿವೆ. ಮೂರನೇ ಭಾಗದಲ್ಲಿ ಈ ಎರಡೂ ಭಾಗದ ಬರಹಗಳಿಗೆ ಸಂಪಾದಕರು ಮಾಡಿರುವ ‘ತಲ್ಲಣಗಳ ಸ್ವರೂಪ’ ಎಂಬ ಉತ್ತಮ ವಿಶ್ಲೇಷಣೆ ಇದೆ. Read more
ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪ-ರೇಖೆ? – ಭಾಗ 1
– ರೋಹಿತ್ ಚಕ್ರತೀರ್ಥ
ಗೋಪಾಲಕೃಷ್ಣ ಅಡಿಗರು ನನ್ನ ಮೆಚ್ಚಿನ ಕವಿ.ಲ್ಯಾಟಿನ್ ಜಗತ್ತಿಗೆ ನೆರೂಡ ಇದ್ದ ಹಾಗೆ, ಶಿಷ್ಟ ಅಮೆರಿಕಕ್ಕೆ ಎಲಿಯೆಟ್ ಇದ್ದ ಹಾಗೆ ಕನ್ನಡ ಜಗತ್ತಿಗೆ ಅಡಿಗರು. ಅವರನ್ನು ಕೇವಲ ಕನ್ನಡದ ನೆಲಕ್ಕೆ ಸೀಮಿತಗೊಳಿಸುವುದು ತಪ್ಪಾಗಬಹುದು. ಅಡಿಗರು ಇಂಗ್ಲೀಷಿನಲ್ಲಿ ಬರೆದಿದ್ದರೆ ಅಥವಾ ಅವರು ಬರೆದಿದ್ದನ್ನು ಅಷ್ಟೇ ಸಮರ್ಥವಾಗಿ ಇಂಗ್ಲೀಷಿಗೆ ಅನುವಾದಿಸುವುದು ಸಾಧ್ಯವಿದ್ದರೆ, ನಮಗೆ ಇನ್ನೊಂದು ನೊಬೆಲ್ ಅನಾಯಾಸವಾಗಿ ದೊರೆಯುತ್ತಿತ್ತು. ಅಡಿಗರ ಕಾವ್ಯಕೃಷಿಯ ಬಗ್ಗೆ ಗೊತ್ತಿಲ್ಲದ ಕನ್ನಡಿಗ ಸಿಗುವುದು ಅಪರೂಪ. ಅವರ ಹೆಸರು ತಿಳಿಯದವರು ಕೂಡ “ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು” ಎಂಬ ಹಾಡು ಕೇಳಿದರೆ, ಕೊರಳು ತುರಿಸಿಕೊಳ್ಳುವ ಬೆಕ್ಕಿನಂತೆ ಕಣ್ಣುಮುಚ್ಚಿ ಕಾವ್ಯಾರ್ಥವನ್ನು ಆನಂದಿಸುತ್ತಾರೆ. ನವ್ಯ ಎಂಬ ಒಂದು ಪಂಥವನ್ನೇ ಕನ್ನಡದಲ್ಲಿ ಸೃಷ್ಟಿಸಿದ, ಕಾವ್ಯಲೋಕದಲ್ಲಿ ಹೊಸದಾರಿ ಕೊರೆದ, ಒಂದು ಯುಗದ ಕಣ್ಣು ತೆರೆಸಿದ ಕವಿ ಎಂದು ಕರೆಸಿಕೊಂಡ ಅಡಿಗರು ಕನ್ನಡಿಗರಿಗೆ ಕೊಟ್ಟಿರುವ ಸಫಲ ಕವಿತೆಗಳ ಸಂಖ್ಯೆ ದೊಡ್ಡದು. ಕುಮಾರವ್ಯಾಸನನ್ನು ಓದಿಕೊಂಡರೆ ಹೇಗೋ ಹಾಗೆಯೇ ಅಡಿಗರನ್ನು ಓದಿಕೊಂಡರೂ ಶಬ್ದ ಮತ್ತು ಅರ್ಥಗಳ ದಾರಿದ್ರ್ಯ ಬರುವುದಿಲ್ಲ ಎಂದು ಧೈರ್ಯವಾಗಿ ಹೇಳಬಹುದು.
ಚೈತ್ರ ಮಾಸದ ಶುಕ್ಲಪಕ್ಷದ ಒಂಬತ್ತನೆ ದಿನ ನವಮಿ. ರಾಮನ ಬರ್ತ್ಡೇ. ರಾಮಾಯಣದ ನಾಯಕಮಣಿ, ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರನ ಬಗ್ಗೆ ಅಡಿಗರು ಒಂದು ಕವಿತೆ ಬರೆದಿದ್ದಾರೆ. ಉಡುಪಿಯ ರಥಬೀದಿಯ ಪರಿಸರದಲ್ಲಿ ಪ್ರತಿವರ್ಷದ ಬೇಸಗೆಯಲ್ಲಿ ನಡೆಯುವ ವಸಂತೋತ್ಸವದಲ್ಲೊಮ್ಮೆ ಅವರು ಈ ಕವನ ವಾಚಿಸಿದ್ದರಂತೆ. (ಪ್ರಾಸಂಗಿಕವಾಗಿ ಒಂದಷ್ಟು ಮಾತು: ಉಡುಪಿ ಮತ್ತು ಅಡಿಗರ ಸಂಬಂಧಕ್ಕೆ ಹಲವು ಕೊಂಡಿಗಳಿವೆ. ಅಡಿಗರು ಆಚಾರ್ಯ ಮಧ್ವರ ಮೇಲೆ “ಆನಂದತೀರ್ಥರಿಗೆ” ಎಂಬ ಕವಿತೆ ಬರೆದಿದ್ದಾರೆ. ಹಾಗೆಯೇ, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕ ಮತ್ತು ಪ್ರಿನ್ಸಿಪಾಲ್ ಆಗಿಯೂ ಕೆಲವರ್ಷ ಕೆಲಸ ಮಾಡಿದ್ದಾರೆ. ಅವರ “ಸುವರ್ಣಪುತ್ಥಳಿ” ಕವನಸಂಗ್ರಹಕ್ಕೆ ಉಡುಪಿಯ ಜಿ. ರಾಜಶೇಖರ ಮುನ್ನುಡಿ ಬರೆದರು)
ನಿತ್ಯೋತ್ಸವ ಕವಿ ನಿಸಾರ್ @ ೮೦
– ರಾಘವೇಂದ್ರ ಅಡಿಗ ಹೆಚ್.ಎನ್
ನಿತ್ಯೋತ್ಸವ ಖ್ಯಾತಿಯ ಕವಿ ನಿಸಾರ್ ಅಹಮದ್ ಇದೇ ಫೆಬ್ರವರಿ 5ರಂದು ಎಂಭತ್ತಕ್ಕೆ ಕಾಲಿರಿಸುತ್ತಿದ್ದಾರೆ. ತಮ್ಮ ಸರಳತೆ, ಸಾಹಿತ್ಯ ಪ್ರೌಢಿಮೆ,ಕವಿತೆಗಳಿಂದ ಕನ್ನಡಿಗರ ಮನೆಮಾತಾಗಿರುವ ಈ ಸಜ್ಜನ ಕವಿಯ ಜನುಮದಿನದಂದು ಈ ಸಮಯದಲ್ಲಿ ಕನ್ನಡಕ್ಕೆ ಇನ್ನೊಬ್ಬ ರಾಷ್ಟ್ರಕವಿ ಆಯ್ಕೆಪ್ರಕ್ರಿಯೆಯೂ ನಡೆಯುತ್ತಿದ್ದು, ನಮ್ಮೆಲ್ಲರ ಪ್ರೀತಿಯ ನಿಸಾರ್ ಅಹಮದ್ ಮುಂದಿನ ರಾಷ್ಟ್ರಕವಿಯಾಗಲೆದು ಹಾರೈಸೋಣ…ಅವರ ದಶಕಗಳ ಸಾಹಿತ್ಯಯಾತ್ರೆಯ ಒಂದು ಕಿರು ಪರಿಚಯವನ್ನು ಮಾಡಿಕೊಳ್ಳೋಣ
ಕರ್ನಾಟಕದಾದ್ಯಂತ ಕವಿಗಳಾಗಿ, ವಿಮರ್ಶಕರಾಗಿ ಮತ್ತು ವೈಚಾರಿಕ ಬರಹಗಾರರಾಗಿ ಪ್ರಸಿದ್ಧರಾದ ಪ್ರೊ|| ಕೆ. ಎಸ್. ನಿಸಾರ್ ಅಹಮದ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನ ಹಳ್ಳಿಯಲ್ಲಿ 05-02-1936ರಂದು ಕೆ. ಎಸ್. ಹೈದರ್ ಮತ್ತು ಹಮೀದಾ ಬೇಗಂ ಅವರ ಪುತ್ರರಾಗಿ ಜನಿಸಿದರು. ತಂದೆ ಸರಕಾರಿ ನೌಕರಿಯಲ್ಲಿದ್ದು ಕನ್ನಡ, ಇಂಗ್ಲಿಷ್, ಸಂಸ್ಕೃತ ಬಲ್ಲ ಸುಸಂಸ್ಕೃತರು. ನಿಸಾರರು ಪ್ರಾಥಮಿಕ, ಮಾಧ್ಯಮಿಕ ಶಾಲೆ ಓದಿದ್ದು ದೇವನಹಳ್ಳಿಯಲ್ಲಾದರೆ. ಪ್ರೌಢಶಾಲೆಗೆ ಹೊಸಕೋಟೆ ಹೈಸ್ಕೂಲು. ಸೇರಿಕೊಂಡರು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ಭೂಗರ್ಭ ಶಾಸ್ತ್ರದಲ್ಲಿ ಆನರ್ಸ್ ಪದವಿ ಪಡೆದರು. ಹೀಗೆ ಬೆಂಗಳೂರಿನಲ್ಲಿ ಭೂವಿಜ್ಞಾನದಲ್ಲಿ ಎಂ.ಎಸ್ಸಿ. ವರೆಗಿನ ಅಧ್ಯಯನವನ್ನು ಮುಗಿಸಿ 1958ರಲ್ಲಿ ಗುಲ್ಬರ್ಗದಲ್ಲಿ ಸಹಾಯಕ ಭೂವಿಜ್ಞಾನಿಯಾಗಿ ಸರಕಾರಿ ಸೇವೆಯನ್ನು ಆರಂಭಿಸಿದರು.ಆದರೆ ತಾನು ಮಾಡುತ್ತಿರುವ ಕೆಲಸ ಅವರಿಗೆ ತೃಪ್ತಿ, ಸಂತೋಷವನ್ನು ತಂದುಕೊಡಲಿಲ್ಲ. ಹೀಗಾಗಿ ಆ ಉದ್ಯೋಗವನ್ನು ತೊರೆದು, ಅಧ್ಯಾಪನ ವೃತ್ತಿಗೆ ಸೇರಿಕೊಂಡರು. ಬೆಂಗಳೂರು ಸರಕಾರಿ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭ ಮಾಡಿದ್ದ ನಿಸಾರ್ ಅಹಮದ್ ನಂತರದಲ್ಲಿ ಚಿತ್ರದುರ್ಗ,ಶಿವಮೊಗ್ಗ, ಬೆಂಗಳೂರು ಪುನಃ ಶಿವಮೊಗ್ಗ ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಕಾಲೇಜಿನ ಪ್ರಾಧ್ಯಾಪಕರಾಗಿರುವಾಗ ಎನ್.ಸಿ.ಸಿ.ಯಲ್ಲಿ ಲೆಪ್ಟಿನೆಂಟ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವವೂ ಅವರಿಗಿದೆ.
ನುಡಿಸಿರಿಯನ್ನು ವಿರೋಧಿಸುವ ನೈತಿಕತೆ ಇಂದಿನ ಸಾಹಿತಿಗಳಿಗಿದೆಯೇ?
– ಸಂತೋಷ್ ಕುಮಾರ್ ಪಿ.ಕೆ
ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನವಾದ ಆಳ್ವಾಸ್ ನುಡಿಸಿರಿ 2014 ನ್ನು ಅದ್ಧೂರಿಯಾಗಿ ಮತ್ತು ಅಚ್ಚುಕಟ್ಟಾಗಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ನಡೆಸಲಾಯಿತು. ಕನ್ನಡ ಭಾಷೆ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಡಾ.ಮೋಹನ್ ಆಳ್ವರ ಶ್ರಮ ಶ್ಲಾಘನೀಯವಾದುದು. ನುಡಿಸಿರಿಯ ವೈಭವವು ಆಗಮಿಸಿದ ಎಲ್ಲಾ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪ್ರೇಮಿಗಳಿಗಳಿಗೆ ಮನತಣಿಸುವಷ್ಟು ವಿಷಯ, ಮನರಂಜನೆಗಳನ್ನು ನೀಡಿರುವುದು ಸುಳ್ಳಲ್ಲ. ಅತ್ಯದ್ಭುತ ಮೆರವಣಿಗೆಯ ಮೂಲಕ ಪ್ರಾರಂಭವಾಗುವ ನುಡಿಸಿರಿಯು ಪ್ರತಿಯೊಂದು ಹಂತದಲ್ಲಿಯೂ ಸಮಯ ಮತ್ತು ಶಿಸ್ತು ಪಾಲನೆಯ ಅಣತಿಯಂತೆ ಜರುಗುತ್ತಾ ಹೋಗುತ್ತದೆ.
ಕನ್ನಡವು ಕರ್ನಾಟಕದ ವ್ಯವಹಾರಿಕ ಮತ್ತು ಮುಖ್ಯವಾಹಿನಿಯ ಭಾಷೆಯಾಗಿದ್ದರೂ ಸಹ ಇತರ ಭಾಷೆಗಳಿರುವುದನ್ನು ಕಡೆಗಣಿಸಲು ಸಾಧ್ಯವಿಲ್ಲ. ಉದಾಹರಣೆಗೆ, ತುಳು, ಕೊಂಕಣಿ, ಬ್ಯಾರಿ, ಬಂಜಾರ, ಕೊಡವ ಇನ್ನೂ ಮುಂತಾದ ಭಾಷೆಗಳು ಅಸ್ತಿತ್ವದಲ್ಲಿವೆ. ಈ ಬಾರಿಯ ನುಡಿಸಿರಿಯಲ್ಲಿ ಇಂತಹ ಪ್ರಾದೇಶಿಕ ಭಾಷೆಗಳಿಗೂ ಸಹ ಮನ್ನಣೆ ನೀಡುವ ಮೂಲಕ ಅವುಗಳಿಗೆ ಸಂಬಂಧಿಸಿದ ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳನ್ನೂ ಸಹ ಆಯೋಜಿಲಾಗಿತ್ತು. ಪ್ರತ್ಯೇಕವಾಗಿ ಒಂದೊಂದು ದಿನವೂ ತುಳು, ಕೊಂಕಣಿ ಹಾಗೂ ಬ್ಯಾರಿ ಭಾಷಾ ಸಮ್ಮೇಳನಗಳೂ ಪ್ರತಿದಿನ ಸಂಜೆ ಜರುಗಿದವು. ಹಾಗೂ ಕೃಷಿ ಸಲಕರಣೆಗಳ ಮೇಳ, ಆಹಾರ ತಿಂಡಿತಿನಿಸುಗಳ ಮೇಳ ಹಾಗೂ ಪುಸ್ತಕ ಮೇಳ ಇವೆಲ್ಲವೂ ನುಡಿಸಿರಿಯ ವಿಶೇಷ ರಂಗುಗಳು.
ಆಳ್ವಾಸ್ ’ನುಡಿಸಿರಿ’ ಮತ್ತು ಪ್ರಗತಿಪರರ ’ಕಿರಿಕಿರಿ’
– ಹರಿಶ್ಚಂದ್ರ ಶೆಟ್ಟಿ
ಮೋಹನ ಆಳ್ವರ ನಾಡು ನುಡಿಯ ಕಂಪಿನ ಕನ್ನಡ ನುಡಿಸಿರಿ ಅದ್ದೂರಿಯ ಮುಕ್ತಾಯ ಕಂಡಿದೆ.ಒಬ್ಬ ವ್ಯಕ್ತಿ ತನ್ನ ಇಚ್ಛಾಶಕ್ತಿಯಿಂದ ಇಂತಹದೊಂದು ಕಾರ್ಯ ನಡೆಸುವುದು ಸಾಧ್ಯವೇ ಎನ್ನುವ ಸಾರ್ವಜನಿಕರ ಆಶ್ಚರ್ಯದ ನಡುವೆ ಕೆಲವು ಹುಳುಕಿನ ಮನಸ್ಸುಗಳು ತಮ್ಮ ವಿತಂಡ ವಾದವನ್ನು ಆಳ್ವರತ್ತ ಹರಿಸಿ ಬಿಟ್ಟಿವೆ.ಕಳೆದ ವರ್ಷ ಮೋಹನ ಆಳ್ವರಿಂದ ಸನ್ಮಾನ ಮಾಡಿಸಿಕೊಂಡು,ಶಾಲು ಹೊದಿಸಿಕೊಂಡು,ಒಟ್ಟಿಗೆ ನೋಟಿನ ದಪ್ಪ ಕಟ್ಟನ್ನು ಕಿಸೆಗೇರಿಸಿಕೊಂಡು ಹೋದ ಸಾರಸ್ವತ ಲೋಕದ ಮಹಾಶಯರೊಬ್ಬರು ನಂತರ ತಮ್ಮ ಅಸಲಿ ಬುದ್ಧಿಯ ” ಜಾತಿ” ವಾದವನ್ನು ಸಾಬೀತು ಪಡಿಸಿದ್ದರು…ಅಂತಹ ಸಾಹಿತಿಗೆ,” ಓತಿಕ್ಯಾತನಿಗೆ ಬೇಲಿ ಸಾಕ್ಷಿ ” ಎನ್ನುವಂತೆ,ಕಳೆದ ಹಲವಾರು ವರ್ಷಗಳಿಂದ ನುಡಿಸಿರಿಯ ಹೆಸರಿನಲ್ಲಿ ಕುತ್ತಿಗೆ ಮಟ್ಟ ತಿಂದು ತೇಗಿದ ಬುದ್ಧಿಜೀವಿಗಳು ಸಹಕಾರ ವಾಣಿಯನ್ನು ಒದಗಿಸಿದ್ದವು.ಈ ಸಲವೂ ಇವರುಗಳಿಗೆ ಏನೋ ಒಡಕು ಕಂಡಿದೆಯಂತೆ.ಆಳ್ವರ ಕನ್ನಡ ಮನಸ್ಸು ಪ್ರಿಯವಾಗುವ ಬದಲು ,ಅವುಗಳಿಗೆ ಎಲ್ಲೋ ಬಿದ್ದಿದ್ದ ಕೊಳಚೆ ಆಪ್ಯಾಯಮಾನವಾಗಿ ಕಂಡಿದೆ.ಜನಪದ ನೃತ್ಯಗಳೂ ಜಾತಿ ಪದ್ಧತಿಯ ಓಣಿಯಲ್ಲಿಯೇ ಸಾಗಬೇಕೆಂಬ ಇವುಗಳು ಮಾತ್ರ ಜಾತಿ ಪದ್ದತಿ ನಿವಾರಣೆಗೆ ತಾವೇನು ಘನ ಕಾರ್ಯ ಮಾಡಿದ್ದೇವೆ ಎಂದು ಹೇಳುವುದಿಲ್ಲ.ಇವರುಗಳ ಕೆಲಸ ಏನಿದ್ದರೂ ಬರವಣಿಗೆ ಮೂಲಕ ಘರ್ಷಣೆಯ ಕಿಡಿ ಹೊತ್ತಿಸುವುದು ಮತ್ತು ಆ ಮೂಲಕ ಉದರ ಪೋಷಣೆ ಮಾಡಿಕೊಳ್ಳುವುದು….