ಗುಂಡು ಬಿಡದ ಬಂದೂಕುಗಳ ನಡುವೆ!
– ಸಂತೋಷ್ ಆಚಾರ್ಯ
೧೯೫೯ರಲ್ಲಿ ಜನರಲ್ ತಿಮ್ಮಯ್ಯ ಭಾರತ ಚೀನಾ ಯುದ್ಧದ ಸಾಧ್ಯತೆ ಮತ್ತು ಅದಕ್ಕೆ ಬೇಕಾದ ತಯಾರಿಯನ್ನು ಮಾಡಲು ಒಪ್ಪಿಗೆ ಕೇಳಿದಾಗ ಆಗಿನ ರಕ್ಷಣಾ ಮಂತ್ರಿಯಾಗಿದ್ದ ಕೃಷ್ಣ ಮೆನನ್ ಅದನ್ನು ನಿರಾಕರಿಸಿದ್ದರು. ಇದರಿಂದ ಕುಪಿತಗೊಂಡ ಜನರಲ್ ರಾಜೀನಾಮೆಯನ್ನು ಎಸೆದಿದ್ದರು. ಜನರಿಂದ ಸರ್ಕಾರ ಎನ್ನುವ ಅರ್ಥದ ಪ್ರಜಾಪ್ರಭುತ್ವ ಶುರುವಾದ ಹೊತ್ತಲ್ಲೇ ಜನರು ಬದಲಿಸಬಯಸುವ ಸರ್ಕಾರದ ನೀತಿಗಳನ್ನು ಬದಲಿಸುವ ಅನುಮತಿ ಆಗಲೇ ಇರಲಿಲ್ಲ. ನೆಹರೂ ರಾಜೀನಾಮೆಗೆ ಒಪ್ಪದೇ ಅವರನ್ನು ಅವರ ಅವಧಿ ಮುಗಿಯುವ ತನಕ(೧೯೬೧) ಇಟ್ಟುಕೊಂಡಿದ್ದು ಮತ್ತು ಭಾರತ ಯುದ್ಧದಲ್ಲಿ(೧೯೬೨) ಹೀನಾಯವಾಗಿ ಸೋತದ್ದು ಈಗ ಕೇವಲ ಇತಿಹಾಸ! ನೆಹರೂ ಚಾಣಾಕ್ಷತನದಿಂದ ವರ್ತಿಸಿದ್ದರೆ ಯುದ್ಧವನ್ನು ತಪ್ಪಿಸಬಹುದಿತ್ತು ಎಂದು ಈಗಲೂ ಎಷ್ಟೋ ಜನ ಹೇಳುತ್ತಾರೆ. ತನ್ನ ತಂತ್ರವನ್ನು ಒಪ್ಪಲಿಲ್ಲವೆಂದು ರಾಜೀನಾಮೆ ಎಸೆದು ಸರ್ಕಾರದಿಂದ ದೂರ ಸರಿಯುವುದಕ್ಕೂ ತಾನು ಮಾಡಿದ್ದು ಸರಿ ಎಂದು ಅದಕ್ಕಾಗಿ ಸರ್ಕಾರಕ್ಕೆ ಕೇರೇ ಎನ್ನದೆ ಅದನ್ನು ಕೋರ್ಟಿಗೆಳೆಯುವುದಕ್ಕೂ ಎಷ್ಟು ವ್ಯತ್ಯಾಸಗಳನ್ನು ನಾವು ಗುರುತಿಸಬಹುದು?
ತನ್ನ ಕಾರ್ಯಾವಧಿಯ ಕೊನೆಯ ವರ್ಷದಲ್ಲಿ ಇಂತಹಾ ಅಗ್ನಿಪರೀಕ್ಷೆ ಜನರಲ್ ವಿ.ಕೆ ಸಿಂಗ್‍ಗೆ ಬೇಕಿತ್ತೇ ಎಂದು ಸಾಮಾನ್ಯವಾಗಿ ಅನಿಸುವುದು ಸಹಜ. ಆದರೆ ಸ್ವಲ್ಪವೂ ಕ್ರಮಬದ್ಧತೆಯಿಂದ ನಿರ್ವಹಿಸದ ಸರ್ಕಾರಿ ಕಚೇರಿಗಳಿಗೆ ಇದು ಮುಖದ ಮೇಲೆ ಹೊಡೆದ ಕಪಾಳಮೋಕ್ಷ. ರಕ್ಷಣಾ ಮಂತ್ರಾಲಯದ ಮುಂದೆ ಭೂ ಸೇನೆಯ ಸಮಸ್ಯೆಗಳು ಗುಡ್ಡಗಟ್ಟುತ್ತಿವೆ. ಜನರಲ್ ವಯಸ್ಸಿನ ಸಮಸ್ಯೆಯಿಂದ ಶುರುವಾಗಿ ಲಂಚದ ಕೇಸು, ಟ್ರಕ್ಕುಗಳಲ್ಲಿ ನಡೆದ ಭ್ರಷ್ಟಾಚಾರ, ಲೀಕಾದ ಪತ್ರ ಹೀಗೆ ವಿ.ಕೆ ಸಿಂಗ್ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತಿದ್ದಾರೆ. ಈ ನಡುವೆ ತಮ್ಮ ಸ್ವಾರ್ಥಕ್ಕಾಗಿ ತಾವೇ ಪತ್ರವನ್ನು ಲೀಕ್ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಇಳಿ ವಯಸ್ಸಿನ ಮಾನಸಿಕ ಸ್ಥಿತಿಗಳನ್ನು ನೋಡುವುದಾದರೆ ಅಲ್ಲಗಳೆಯಬಹುದಾದ ವಿಚಾರವೇನೂ ಅಲ್ಲ. ಆದರೂ ಮೊದಲು ಕಮಾಂಡೋ ಆಗಿದ್ದ ಜನರಲ್ ಹೀಗೆ ಮಾಡಬಹುದೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ವಿ.ಕೆ ಸಿಂಗ್ ಒಬ್ಬ ಹೋರಾಟಗಾರ. ನೇರವಾಗಿ ವಿಷಯಗಳನ್ನು ನಿಭಾಯಿಸುವ ನಿಷ್ಠುರ ವ್ಯಕ್ತಿ. ಅವರ ಮೇಲೆ ಆಪಾದನೆ ಹೊರಿಸುವ ಮೊದಲು ಮನಸ್ಸು ಕೂಡ ಎಲ್ಲೋ ಒಪ್ಪಲು ನಿರಾಕರಿಸುತ್ತದೆ.
ಮತ್ತಷ್ಟು ಓದು