ಆಚರಣೆ ಮತ್ತು ನಂಬಿಕೆಗಳ ಟೀಕೆ: ಅಂದು ಹಾಗೂ ಇಂದು ( ಭಾಗ – ೩ )
– ವಿನಾಯಕ ವಿಶ್ವನಾಥ ಹಂಪಿಹೊಳಿ
ಮುಸ್ಲಿಂ ಪರಂಪರೆಗಳಲ್ಲಿ ಮೂರು ಬಾರಿ ತಲಾಕ್ ಹೇಳಿ ಇದ್ದಕ್ಕಿದ್ದಂತೇ ಹೆಂಡತಿಯನ್ನು ತ್ಯಜಿಸುವ ಕ್ರಿಯೆ ಭಾರತೀಯರಿಗೆ ಅನೈತಿಕವಾಗಿ ಕಾಣಲು ಆ ಕ್ರಿಯೆಯಿಂದ ಒಂದು ಹೆಣ್ಣಿನ ಮನಸ್ಸಿಗೆ ಉಂಟಾಗುವ ನೋವಷ್ಟೇ ಸಾಕಾಗಿರುತ್ತದೆ. ಆದರೆ ನಾವು ಆ ಕ್ರಿಯೆಯನ್ನು ಸಮಾನತೆಯ ತತ್ತ್ವದ ಉಲ್ಲಂಘನೆಯಾಗಿ ವ್ಯಾಖ್ಯಾನಿಸುವರ ಮೂಲಕ ಟೀಕಿಸುತ್ತೇವೆ. ಮೂಲತಃ ಪ್ರೊಟೆಸ್ಟಂಟ್ ಕ್ರಿಶ್ಚಿಯನ್ ಪರಿಕಲ್ಪನೆಯಿಂದ ಬಂದ ಈ ಸಮಾನತೆಯ ಪರಿಕಲ್ಪನೆಯು ಭಾರತೀಯ ಮುಸ್ಲಿಮರಿಗೆ ಅರ್ಥವಾಗುವುದಿಲ್ಲ. ಹೀಗಾಗಿ ಈ ವಿರೋಧವನ್ನು ಮುಸ್ಲಿಮರು ಇಸ್ಲಾಂ ವೈಯಕ್ತಿಕ ಕಾನೂನಿನ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಅನುಷ್ಠಾನವಾಗಿ ನೋಡುತ್ತಾರೆ. ಲಿಬರಲ್ ವಿಚಾರವಂತರು ಮುಸ್ಲಿಮರ ನಿಲುವನ್ನು ಸಮಾನತೆಯ ತತ್ತ್ವದ ಉಲ್ಲಂಘನೆಯಾಗಿ ನೋಡುತ್ತಾರೆ. ನಾವು ನಮ್ಮ ಸಂಪ್ರದಾಯಗಳ ಕುರಿತು ಹಿಂದಿನಿಂದ ಬೆಳೆದು ಬಂದ ಟೀಕೆಗಳ ಪರಂಪರೆಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕು, ಈಗ ಬರುತ್ತಿರುವ ಹೊಸ ಟೀಕೆಗಳನ್ನು ಹೇಗೆ ಸ್ವೀಕರಿಸಬೇಕು ಹಾಗೂ ಪ್ರತಿಕ್ರಿಯಿಸಬೇಕು ಎನ್ನುವುದರ ಸ್ಪಷ್ಟತೆಯನ್ನು ನಾವು ಕಂಡುಕೊಳ್ಳಬೇಕಿದೆ. ಮತ್ತಷ್ಟು ಓದು
ಸೆಮೆಟಿಕ್ ರಿಲಿಜನ್ನಿನ ಪವಿತ್ರ ಗ್ರಂಥಗಳೂ ಮತ್ತು ಹಿಂದೂ ಧರ್ಮದ ವೇದಗಳೂ
– ವಿನಾಯಕ ಹಂಪಿಹೊಳಿ
ಸೆಮೆಟಿಕ್ ರಿಲಿಜನ್ನಿನ ಅನುಯಾಯಿಗಳು ತಮ್ಮ ಪವಿತ್ರ ಗ್ರಂಥಗಳ ರಚನೆಯನ್ನು ಕಾಲದ ಪರಿಧಿಯೊಳಗೇ ಕಾಣುತ್ತಾರೆ.ಸೃಷ್ಟಿಯ ನಂತರವೇ,ಆಡಮ್,ಮೋಸಸ್ ಬರುವದರಿಂದ ಸೃಷ್ಟಿ ಮೊದಲು, ಹಳೆ ಒಡಂಬಡಿಕೆ ನಂತರ ಎಂಬುದು ಅವರ ನಂಬಿಕೆ ಮತ್ತು ಅದು ತರ್ಕಕ್ಕೆ ಒಪ್ಪತಕ್ಕದ್ದೂ ಆಗಿದೆ. ಜೀಸಸ್ ನಂತರವೇ ಹೊಸ ಒಡಂಬಡಿಕೆ, ಪೈಗಂಬರರ ನಂತರವೇ ಖುರಾನ್ ಆವೃತ್ತಿ ಎಂಬುದನ್ನೂ ಒಪ್ಪುತ್ತಾರೆ. ಇವರೆಲ್ಲರಿಗೂ ಸೃಷ್ಟಿ ಒಂದೇ ಆಗಿರುತ್ತದೆ. ಕೇವಲ ಒಮ್ಮೆ ಮಾತ್ರ ಸೃಷ್ಟಿಯಾಗಿರುವ ಇಲ್ಲಿ ಪ್ರಳಯದ ನಂತರ ಇನ್ನೊಂದು ಸೃಷ್ಟಿ, ನಂತರ ಮತ್ತೊಂದು ಸೃಷ್ಟಿ, ಈ ಸೃಷ್ಟಿಯ ಹಿಂದಿನ ಇನ್ನೊಂದು ಸೃಷ್ಟಿ ಇವುಗಳ ಬಗ್ಗೆ ಅವರು ನಂಬುವದೇ ಇಲ್ಲವಾದ್ದರಿಂದ, ಅವರ ಪವಿತ್ರ ಗ್ರಂಥಗಳಿಗೆ ಕಾಲದ ಎಲ್ಲೆಕಟ್ಟುಗಳು ಇರುವದು ಯುಕ್ತವೇ ಆಗಿದೆ ಎಂದರೂ ತಪ್ಪಿಲ್ಲ.
ಗಮನಿಸಬೇಕಾದ ಅಂಶವೆಂದರೆ, ನಂತರ ಬಂದ ಸೆಮೆಟಿಕ್ ರಿಲಿಜನ್ ಹಿಂದಿನಿಂದ ಬಂದ ರಿಲಿಜನ್ ಅನ್ನು ತಿರಸ್ಕರಿಸದೇ, ಕೇವಲ ಅದರ ಪರಿಷ್ಕೃತ ಆವೃತ್ತಿ ಎಂಬುದಾಗಿ ಮಾತ್ರ ಪರಿಗಣಿಸಲ್ಪಡುತ್ತದೆ. ಉದಾಹರಣೆಗೆ, ಹಳೇ ಒಡಂಬಡಿಕೆಯಲ್ಲಿ ಪ್ರಕ್ಷೇಪಗಳಾಗಿರುವದರಿಂದ ಜೀಸಸ್ ಮುಖಾಂತರ ಮೂಲ ಬೋಧನೆಗಳನ್ನು ಹೊಸ ಒಡಂಬಡಿಕೆಯಲ್ಲಿ ನೀಡಲಾಗಿದೆ ಎಂದು ಕ್ಯಾಥೋಲಿಕ್ ಜನರೂ,ಎರಡೂ ಒಡಂಬಡಿಕೆಯಲ್ಲಿ ಪ್ರಕ್ಷೇಪಗಳಾಗಿರುವದರಿಂದ ಖುರಾನಿನಲ್ಲಿ ಇನ್ನೊಮ್ಮೆ ಮೂಲ ಬೋಧನೆಗಳನ್ನು ನೀಡಲಾಗಿದೆ ಎಂದು ಮುಸ್ಲಿಮ್ ಜನರೂ ಭಾವಿಸುತ್ತಾರೆ. ವಿಶೇಷವೆಂದರೆ ಖುರಾನು ತನ್ನ ಹಿಂದಿನ ಗ್ರಂಥಗಳಂತೆ ಭವಿಷ್ಯದಲ್ಲಿ ಇನ್ನೊಬ್ಬ ದೇವದೂತನ ಆಗಮನವನ್ನು ಅಲ್ಲಗಳೆದು ಅದೇ ಅಂತಿಮ ಎಂದು ಹೇಳಿಕೊಂಡಿದೆ.
ಮತ್ತಷ್ಟು ಓದು