ಹಸಿರ ಪಯಣ …
– ಸುಜಿತ್ ಕುಮಾರ್
ಶಾಂತ ಸಂಜೆಯ ತಿಳಿತಂಪಿನ ಹಿತಕ್ಕೆ ಭಂಗ ತರುವಂತೆ ಬಿಸಿಯಾದ ಗಾಳಿ ಒಮ್ಮೆಲೇ ಬೀಸತೊಡಗಿತ್ತು. ಗಾಳಿಯ ಬೀಸುವಿಕೆಯ ದಿಕ್ಕನ್ನು ಪರಿಗಣಿಸದೆಯೆ ಹಕ್ಕಿಗಳ ಗುಂಪು ತಮ್ಮ ತಮ್ಮ ಗೂಡುಗಳೆಡೆಗೆ ಮುಖಮಾಡಿ ಹಾರತೊಡಗಿದ್ದವು. ಕಪ್ಪು ಬಣ್ಣದ ಟ್ರ್ಯಾಕ್ ಪ್ಯಾಂಟ್, ಅದೇ ಬಣ್ಣದ ಟಿ ಶರ್ಟ್ ಹಾಗು ಅತಿ ದುಬಾರಿಯಾದೊಂದು ಸ್ಪೋರ್ಟ್ಸ್ ಶೋವನ್ನು ಧರಿಸಿ ಮೋಹನ ಜಾಗಿಂಗ್ ಗೆ ಇಳಿದಿದ್ದ. ವಾಹನಗಳಿಗೆ ಪಾರ್ಕ್ ಮಾಡಲೂ ಸರಿಯಾದ ಸ್ಥಳ ಸಿಗದಿರುವ ಸಿಟಿಯಲ್ಲಿ ಆಟೋಟ, ವ್ಯಾಯಾಮಗಳಿಗೆ ಜಾಗವನ್ನು ಕೊಡುವವರ್ಯಾರು? ವಾಹನಗಳೊಟ್ಟಿಗೆಯೇ ರಸ್ತೆಯ ಪಾದಚಾರಿ ಮಾರ್ಗದ ಮೇಲೆಯೇ ಈತನ ಪ್ರತಿದಿನದ ಓಟ. ಹೃದಯ ಸಿಡಿದು ಹೊರಬರುವವರೆಗೂ ಓಡುವುದ ನಿಲ್ಲಿಸಲಾರೆ ಎಂಬುವಂತಿರುತ್ತದೆ ಈತನ ಓಟದ ಧಾಟಿ. ಸುಮಾರು ಮೂರ್ನಾಲ್ಕು ಕಿಲೋಮೀಟರ್ನಷ್ಟು ಓಡಿದ ನಂತರ ಕಾಫಿ ಶಾಪೊಂದರ ಮುಂದೆ ಕೂತು ಕೊಂಚ ದಣಿವಾರಿಸಿಕೊಳ್ಳುತ್ತಾನೆ. ಅಲ್ಲೂ ತನ್ನ ಮೊಬೈಲನ್ನು ಹೊರಗೆಳೆದು ಆಫೀಸಿನ ಇಮೇಲ್ ಗಳನ್ನು ನೋಡತೊಡಗುತ್ತಾನೆ. ಆಗಷ್ಟೇ ಡವಡವ ಬಡಿದು ಶಾಂತವಾಗಿದ್ದ ಹೃದಯ, ಕ್ಲೈಂಟ್ ಒಬ್ಬನ ಇಮೇಲ್ ಅನ್ನು ಕಂಡು ಪುನಃ ಬಡಿಯಹತ್ತಿತು. ಇನ್ನೊಂದು ಸುತ್ತು ಓಡಲು ಬಾಕಿ ಇದ್ದರೂ ತನ್ನ ರೂಮಿನೆಡೆ ದಾಪುಗಾಲು ಹಾಕುತ್ತಾನೆ ಮೋಹನ. ರೂಮಿಗೆ ಬಂದವನೆ ಬೆವರಿನ ದಸೆಯಿಂದ ಅಂಟು-ಅಂಟಾಗಿದ್ದ ಬಟ್ಟೆಯನ್ನೂ ಲೆಕ್ಕಿಸದೆ ತನ್ನ ಆಫೀಸಿನ ಲ್ಯಾಪ್ಟಾಪ್ ಅನ್ನು ಹೊರಗೆಳೆದು ಕೆಲಸದಲ್ಲಿ ನಿರತನಾಗುತ್ತಾನೆ. ನೆಟ್ಟ ದೃಷ್ಟಿಯನ್ನು ಒಂತಿಷ್ಟೂ ಕದಲಿಸದೆ, ಕೀಲಿಮಣೆಗಳ ಮೇಲೆ ಸುಮಾರು ಎರಡು ಗಂಟೆಗಳ ಕಾಲ ಟಕಟಕ ಕುಟ್ಟಿದ ನಂತರ ಗಡಿಯಾರವನ್ನು ನೋಡುತ್ತಾನೆ, ಸಮಯ ಅದಾಗಲೇ ರಾತ್ರಿ ಹನ್ನೊಂದು! ಕೂಡಲೇ ಎದ್ದು ಪಕ್ಕದ ಹೋಟೆಲಿನಿಂದ ಊಟವೊಂದಕ್ಕೆ ಆರ್ಡರ್ ಕೊಟ್ಟು, ಸ್ನಾನಾದಿಗಳನ್ನು ಮುಗಿಸಿ ಹೊರಬಂದು ಊಟವನ್ನು ಮುಗಿಸುವಷ್ಟರಲ್ಲಿ ಮಧ್ಯರಾತ್ರಿ 12! ಒಂತಿಷ್ಟು ಸುದ್ದಿ ಸಮಾಚಾರಗಳನ್ನು ನೋಡಲು ಟಿವಿಯನ್ನು ಆನ್ ಮಾಡಿದ ಕೂಡಲೇ ಕಣ್ಣುಗಳ ರೆಪ್ಪೆಗಳು ಒಂದನ್ನೊಂದು ತಬ್ಬಿಕೊಳ್ಳತೊಡಗುತ್ತವೆ. ಅದೆಷ್ಟೋ ಬಾರಿ ಹೀಗೆಯೇ ಸೋಫಾದ ಮೇಲೆಯೇ ಬೆಳಗಿನವರೆಗೂ ಕೂತೇ ನಿದ್ರಿಸಿರುವುದುಂಟು! ಬೆಳಗೆದ್ದು ಮತ್ತದೇ ಓಟದ ಜೀವನ. ವಾರ, ವಾರಾಂತ್ಯ ಎಂಬ ಯಾವುದೇ ವ್ಯತ್ಯಾಸಗಳಿಲ್ಲದೆ 24*7 ಕಾಲದ ಕೆಲಸ. ಮೊದ ಮೊದಲು ಕಿರಿಕಿರಿಗುಡುತ್ತಿದ್ದ ಮೋಹನ ಕಾಲ ಕಳೆದಂತೆ ಇದೆ ಜೀವನಕ್ಕೆ ಒಗ್ಗಿಕೊಂಡಿದ್ದಾನೆ. ಅದೆಷ್ಟರ ಮಟ್ಟಿಗೆಂದರೆ ಆಗೊಮ್ಮೆ ಈಗೊಮ್ಮೆ ಸಿಗುವ ರಜೆಯ ಸಮಯವನ್ನೂ ಮನೆಯಲ್ಲಿ ಕಳೆಯಲಾಗದೆ ಆಫೀಸಿಗೆ ಬಂದು ಒಬ್ಬನೇ ಕೆಲಸ ಮಾಡುವುದುಂಟು! Read more
ಬೆಳೆ ಬೆಳೆಸಿದರಷ್ಟೆ ನೆಲದ ಒಡೆತನ
– ಟಿ.ಎಂ.ಕೃಷ್ಣ
ಆಹಾರ ಧಾನ್ಯಗಳ ಬೆಲೆ ಒಂದೇ ಸಮನೆ ಗಗನಕ್ಕೇರುತ್ತಲೇ ಇದೆ. ಜನಸಾಮಾನ್ಯರೇನು- ಅಷ್ಟೋ ಇಷ್ಟೋ ಸ್ಥಿತಿವಂತರೇ ಜೀವನ ನಿರ್ವಹಿಸಲು ಸಾಧ್ಯವಾಗದಂತಾಗಿದೆ. ಕೆಳ, ಮದ್ಯಮ ವರ್ಗದವರು ತರಗೆಲೆಗಳಂತೆ ತತ್ತರಿಸತೊಡಗಿದ್ದಾರೆ. ಮುಂದುವರಿದ(?) ಮನುಷ್ಯನ ಅಗತ್ಯಗಳು ಅಗಣಿತವಾಗಿರಬಹುದಾದರೂ, ಮೂಲಭೂತ ಅಗತ್ಯವಾದ ಅನ್ನಾಹಾರಗಳ ಲಭ್ಯತೆ ಕಠಿಣವಾದರೆ ಏನಿದ್ದರೂ, ಯಾವುದೇ ತಂತ್ರಜ್ಞಾನವಿದ್ದರೂ ಅವೆಲ್ಲಾ ಅಪ್ರಸ್ತುತವಾಗಿಬಿಡುತ್ತವೆ. (ಚಿನ್ನದ ಕತ್ತಿ ಇದೆಯೆಂದು ಕುತ್ತಿಗೆ ಕೊಯ್ದುಕೊಳ್ಳಲಾದೀತೆ?)
ಅಗತ್ಯವಸ್ತುಗಳು ಕೈಗೆಟುಕದಂತಾಗಿರುವ ಈ ಸಂದರ್ಭದಲ್ಲಿ ಸರ್ಕಾರದ ಕಡೆ ಕೈ ತೋರಿಸುವುದು ಅನಿವಾರ್ಯವಾದರೂ, ಆಯಕಟ್ಟಿನ ಜಾಗಕ್ಕೆ ಕೈತೋರಿಸದಿರುವುದು ನಮ್ಮಲ್ಲಿನ ಪ್ರಜ್ಞಾವಂತರ ಪ್ರಜ್ಞೆಯ ಅವನತಿಯನ್ನು ಸೂಚಿಸುತ್ತದೆ. ಕುರಿಗಳು ಹಳ್ಳಕ್ಕೆ ಬಿದ್ದಂತೆ ಪ್ರತಿಯೊಬ್ಬರೂ ಪ್ರಸ್ತಾಪಿಸುತ್ತಿರುವುದು ಮಳೆ ಅಭಾವ, ಬೆಳೆನಷ್ಟ, ವ್ಯಾಪಾರಿಗಳು ಸೃಷ್ಟಿಸುತ್ತಿರುವ ಕೃತಕ ಅಭಾವ, ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ, ಜನಸಂಖ್ಯೆಯ ಹೆಚ್ಚಳ ಇತ್ಯಾದಿ…ಈ ಎಲ್ಲ ಕಾರಣಗಳಿಗೆ ನಿದರ್ಶನಗಳಿದ್ದರೂ, ಅವೆಲ್ಲಾ ತಾತ್ಕಾಲಿಕ ಅವ್ಯವಸ್ಥೆಗಳೇ ಹೊರತು ಮೂಲಭೂತ ಸತ್ಯಗಳಲ್ಲವೇ ಅಲ್ಲ.
ನೇತ್ರಾವತಿಯ ಶ್ರೀಮುಡಿಗೆ ಕೈಯಿಕ್ಕಿರುವ ಎಂ ಎಸ್ ಇ ಜಡ್:ರಕ್ಷಿಸುವ ಪ್ರವೀಣರೆಲ್ಲಿದ್ದಾರೆ?
-ಸುಂದರ ರಾವ್
ಇತ್ತೀಚಿಗೆ ಕೆಲವು ಪತ್ರಿಕೆಗಳಲ್ಲಿ “ಸರಪಾಡಿ ಸಮೀಪದ ಬೊಳ್ಳಾಜೆಯಲ್ಲಿ ಎಮ್ ಎಸ್ ಇ ಜಡ್ ಪೈಪ್ ಲೈನ್ ಕಾಮಗಾರಿ ಪ್ರಾರಂಭ” ಎಂಬ ಸುದ್ದಿಗಳು ಪ್ರಕಟವಾದವು. “ವಂಶ” ಪತ್ರಿಕೆಯ ಮಿತ್ರರನ್ನು “ನಮ ಒರ ಪೋದು ತೂದು ಬರ್ಕನ?” (ನಾವು ಹೋಗಿ ನೋಡಿ ಬರೋಣವೆ?) ಎಂದು ಕೇಳಿದೆ.
ಮಳೆಗಾಲವಾದರೂ ನಾವು ಹೋದಾಗ ಬಿಸಿಲಿತ್ತು. ಸರಪಾಡಿಯಲ್ಲಿ ಎಂ ಆರ್ ಪಿ ಎಲ್ ನ ಪಂಪ್ ಹೌಸೋ ಏನೋ ಒಂದಿದೆ. ಅದಕ್ಕಿಂತ ಮೊದಲೇ ಬಲಕ್ಕೆ ಹೊಸರಸ್ತೆ ಕಡಿದಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು.ಹಸಿ ಹಸಿ ಮಣ್ಣಿನ ರಸ್ತೆ. ಜೆಸಿಬಿ ಉಪಯೋಗಿಸಿ ರಸ್ತೆ ಮಾಡಿದ್ದರೆಂಬುದು ಯಾರಿಗೂ ಗೊತ್ತಾಗುವಂತಿತ್ತು. ಅದರಲ್ಲಿ ಸ್ವಲ್ಪ ದೂರ ನಡೆದ ಮೇಲೆ ತೆರೆದುಕೊಂಡಿದ್ದು ವಿಶಾಲವಾದ ಪ್ರದೇಶದಲ್ಲಿ ಶೇಖರಗೊಂಡಿದ್ದ ನೀರಿನ ದೃಶ್ಯ.
ಮುಂದೆ ಎ ಎಂ ಆರ್ ಕಂಪೆನಿಯ ಅಣೆಕಟ್ಟು ಕಾಣುತ್ತಿತ್ತು. ನಮ್ಮೆದುರಿಗೆ ಕಾಣುತ್ತಿದ್ದುದು ಅದೇ ಅಣೆಕಟ್ಟಿನಲ್ಲಿ ಸಂಗ್ರಹಿಸಿದ್ದ ನೀರಿನ ರಾಶಿ. ನಾವು ಮುಟ್ಟಿದ್ದು ಒಂದು ಜೆಸಿಬಿ ನಿಂತಿದ್ದ ಸ್ಥಳವನ್ನು. ಸುತ್ತ ಅನೇಕ ಮರಗಳು ಬೇರು ಮೇಲಾಗಿ ಸೊಪ್ಪು ಒಣಗಿ ಉದುರಿ ಕಳಚಿಕೊಂಡು ಬೆತ್ತಲೆ ಅಸ್ತಿಪಂಜರಗಳಂತೆ ವಿಕಾರವಾಗಿ ಆಚೀಚೆ ಉರುಳಿಕೊಂಡಿದ್ದವು. ಕಪ್ಪು ಕಲ್ಲುಗಳನ್ನು ಒಡೆದು ತೆಗೆದಿರುವುದು (ಬಹುಶಃ ಡೈನಮೈಟ್ ಬಳಸಿ) ಸ್ಪಷ್ಟವಾಗಿಯೇ ಕಾಣುತ್ತಿತ್ತು. ಸ್ವಲ್ಪ ದೂರಕ್ಕೆ ಆಳವಾದ ಹೊಂಡದಲ್ಲಿ ಭೂಮಿಯ ಹೊಟ್ಟೆ ಬಗೆದು ಏನೋ ಕಾಮಗಾರಿ ನಡೆಸಿರುವುದೂ ಕಾಣುತ್ತಿತ್ತು. ಒಟ್ಟಿನಲ್ಲಿ ನಡೆಯುತ್ತಿದ್ದ ಚಟುವಟಿಕೆಗಳು ಯಾವುದೋ ದೊಡ್ಡ ಕಾಮಗಾರಿಯ ಮುನ್ಸೂಚನೆಯಾಗಿ ಕಂಡವು. ಸಾಧ್ಯವಿದ್ದಷ್ಟು ಫೋಟೋಗಳನ್ನು ತೆಗೆದುಕೊಂಡು ನಾವು ಹಿಂದೆ ಬಂದೆವು.
ಮನೆಮಗಳಿಗೊಂದು ಗಿಡ ನೆಡುವ ಧರ್ ಹರಾ ನಮಗೂ ಆದರ್ಶವಾಗಲಿ…
– ಚಿತ್ರ ಸಂತೋಷ್
ಹೆಣ್ಣುಮಗಳಿಗಾಗಿ ಗಿಡಗಳನ್ನು ನೆಡುವ ಬಿಹಾರದ ಧರ್‌ಹರಾ ಗ್ರಾಮದ ‘ವಿಶಿಷ್ಟ ಸಂಸ್ಕೃತಿ’ಯನ್ನು ನೋಡಿ ಅಮೆರಿಕಾವೇ ನಿಬ್ಬೆರಗಾಗಿತ್ತು. ಅಮೆರಿಕ ರಾಯಭಾರಿ ಮೆಲನ್ನೆ ವರ್ರ್ ಈ ಗ್ರಾಮವನ್ನು ಮನತುಂಬಾ ಕೊಂಡಾಡಿ, ಈ ಗ್ರಾಮ ವಿಶ್ವಕ್ಕೆ ಮಾದರಿ ಎಂದಿದ್ದರು. ಆದರೆ, ನಮ್ಮದೇ ನೆಲದ ಇಂಥದ್ದೊಂದು ಅಪೂರ್ವ ಸಂಸ್ಕೃತಿಯನ್ನು ನಮ್ಮನೆಯ ಸಂಸ್ಕೃತಿಯನ್ನಾಗಿ ಬೆಳೆಸುವ ‘ಕರ್ತವ್ಯ’ವನ್ನು ನಾವಿನ್ನೂ ಮಾಡೇ ಇಲ್ಲ!
ಬಿಟಿಯಾಕೀ ಜನ್ಮ್ ಹೋನಾ, ಹಮಾರೆ ಲಿಯೇ ತೋ ಬಹುತ್ ಖುಷಿಕೀ ಬಾತ್ ಹೈ. ಬಿಟಿಯಾ ಹಮಾರೆ ಲಿಯೇ ಬೋಜ್ ನಹೀ ಹೈ, ಉನ್ಕೋ ಬಿ ಪಡಾಯೆತೋ ಓಬಿ ಸಾಕ್ಷರ್ ಬನಾಯೇಂಗೆ, ಶಾದಿಬೀ ಕರೇಂಗೆ. ಕ್ಯಾಂಕೀ ಬಿಟಿಯಾ ಧೋ ಘರ್ ಕೀ ಚಿರಾಗ್ ಹೈ….(ನಮಗೆ ಹೆಣ್ಣು ಮಕ್ಕಳು ಹುಟ್ಟುವುದೆಂದರೆ ಅದೊಂದು ಸಂಭ್ರಮ, ಹೆಮ್ಮೆ. ಹೆಣ್ಣು ಮಕ್ಕಳು ನಮಗೆ ಹೊರೆಯಲ್ಲ. ಗಂಡು ಮಕ್ಕಳಂತೆ ಹೆಣ್ಣು ಮಕ್ಕಳಿಗೂ ಶಿಕ್ಷಣ ನೀಡ್ತೀವಿ. ಮದುವೆ ಮಾಡ್ತೀವಿ. ಏಕೆಂದರೆ ಹೆಣ್ಣು ಮಕ್ಕಳು ಎರಡು ಕುಟುಂಬಗಳ ಬಾಂಧವ್ಯವನ್ನು ಬೆಸೆಯುವ ಕೊಂಡಿ)
ಥತ್! ಇದ್ಯಾವುದೋ ಭಾಷಣಕಾರನ ಬೊಗಳೆ ಮಾತುಗಳು ಎಂದೆನಿಸಬಹುದು. ಆದರೆ, ನಿಮ್ಮ ಊಹೆ ಖಂಡಿತಾ ತಪ್ಪು. ಇದು ಕ್ಷಣ ಕ್ಷಣದ ಬದುಕನ್ನೂ ಕೂಲಿ-ನಾಲಿ ಮೂಲಕ ಕಂಡುಕೊಳ್ಳುವ ಜನಸಾಮಾನ್ಯರ ಮಾತು. ಇವರಿಗೆ ಹೆಣ್ಣು ಮಕ್ಕಳು ಹುಟ್ಟಿದರೆ ಹಬ್ಬದ ಸಂಭ್ರಮ. ನಮ್ಮ ಮನೆಮಗಳು ಹುಟ್ಟಿದರೆ, ಅವಳ ಬದುಕು ಅವಳೇ ಕಟ್ಟಿಕೊಳ್ಳುತ್ತಾಳೆ ಅನ್ನೋ ಗಟ್ಟಿ ನಂಬಿಕೆ ಅವರದು. ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆಗಾಗಿ ಪತ್ನಿಯನ್ನು ಪೀಡಿಸುವುದು ಅಥವಾ ಹೆಣ್ಣು ಮಗಳ ಮದುವೆಗಾಗಿ ಲಕ್ಷಾಂತರ ರೂಪಾಯಿ ಸಾಲಮಾಡಿ ಜೀವನಡೀ ಸಾಲ ತೀರಿಸಲು ಪರದಾಡುವುದು…ಇದೆಲ್ಲಾ ಈ ಊರಿನಲ್ಲಿ ಇನ್ನೂ “ಅಪರಿಚಿತ” ಸುದ್ದಿಗಳು. ಇದ್ಯಾವ ಸಂಸ್ಕೃತಿ, ಇದ್ಯಾವ ಊರು? ಅಂತೀರಾ…
ಕ್ರಾಂತಿಗೆ ಅಕ್ಷರದ ಹಂಗೇಕೆ?
– ಚಿತ್ರ ಸಂತೋಷ್
ಮಧ್ಯಪ್ರದೇಶದ ತಲನ್‌ಪುರ ಗ್ರಾಮದಲ್ಲಿ ಓದು ಬರಹ ತಿಳಿಯದ ಬುಡಕಟ್ಟು ಮಹಿಳೆಯರೇ ಸಾಮಾಜಿಕ ಕ್ರಾಂತಿಗೆ ಮುನ್ನುಡಿಯಾಗಿದ್ದಾರೆ. ನಿತ್ಯ ಕುಡಿದು, ಸಂಸಾರದ ಒಂದಿಷ್ಟು ಚಿಂತೆಯಿಲ್ಲದ ಪುರುಷರಿಗೆ ಬುದ್ಧಿ ಕಲಿಸಬೇಕೆಂಬ ಉದ್ದೇಶದಿಂದ ಇಡೀ ಹಳ್ಳಿಯ ಮಹಿಳೆಯರು ಒಂದಾಗಿ ಸಾರಾಯಿ ನಿಷೇಧ ಮಾಡಿದ್ದಾರೆ.
ಆ ಹಳ್ಳಿಯೇ ಹಾಗೆಯೇ. ಬುಡಕಟ್ಟು ಬದುಕುಗಳ ಸಂಗಮ. ನೂರಕ್ಕೂ ಹೆಚ್ಚು ಬುಡಕಟ್ಟು ಕುಟುಂಬಗಳನ್ನು ಹೊಂದಿರುವ ಆ ಹಳ್ಳಿಯಲ್ಲಿ ಹೊತ್ತಿನ ಊಟಕ್ಕೂ ಕಷ್ಟ. ಪತಿ-ಪತ್ನಿಯರು ಎಲ್ಲಾರೂ ಕೂಲಿಗಾಗಿ ಅರಸುವವರು. ವಿದ್ಯೆ, ಶಿಕ್ಷಣ ಎಂಬುವುದು ಅವರ ಪಾಲಿಗೆ ಮರೀಚಿಕೆ. ಸಾಂಪ್ರದಾಯಿಕ ಬದುಕಿನ ಚೌಕಟ್ಟಿನಲ್ಲಿಯೇ ಇಂದಿಗೂ ಬದುಕು ಸವೆಸುವ ಅಲ್ಲಿನ ಕುಟುಂಬಗಳಲ್ಲಿ ಆಧುನಿಕತೆಯ ಥಳುಕಿಲ್ಲ. ಸಿನಿಮಾ, ಫ್ಯಾಷನ್ ಯಾವುದೂ ಗೊತ್ತಿಲ್ಲ. ದುಡಿಯುವುದು, ದಿನದ ಮೂರು ಹೊತ್ತಿನ ಅನ್ನ ತುಂಬಿಸಿಕೊಳ್ಳುವುದಷ್ಟೇ ಅವರಿಗೆ ಗೊತ್ತು.
ಅದು ಮಧ್ಯಪ್ರದೇಶದ ತಲನ್‌ಪುರ್ ಎಂಬ ಹಳ್ಳಿ. ಇಲ್ಲಿನ ಜನಸಂಖ್ಯೆ ಸುಮಾರು ೩೦೦೦. ಇಂದೋರ್‌ನಿಂದ ಇಲ್ಲಿಗೆ ಸುಮಾರು ೧೮೦ ಕಿ.ಮೀ. ದೂರವಿದೆ.
ಹಸಿರುಕಾನನದ ಮಗಳೀಕೆ ಗೌರಾದೇವಿ…..
– ಚಿತ್ರ ಸಂತೋಷ್
ಉತ್ತರ ಖಾಂಡದ ರೇನಿ ಗ್ರಾಮದಲ್ಲಿ ಮರಗಳನ್ನು ಕಡಿಯಲು ಬಂದ ಅಧಿಕಾರಿಗಳ ವಿರುದ್ಧ ಬಂಡೆದ್ದವಳು ಗೌರಾದೇವಿ. ಬುಡಕಟ್ಟು ಜನರಿಗೆ ದಟ್ಟಾರಣ್ಯಗಳೇ ತವರು. ಕಾಡಿಗೂ-ನಮಗೂ ಇರುವುದು ಅಮ್ಮ-ಮಕ್ಕಳ ಸಂಬಂಧ.ಬದುಕಿದರೆ ನಮಗೆ ಆಸರೆ ನೀಡಿದ ಈ ಹಸಿರು ಕಾಡುಗಳಿಗಾಗಿ ಬದುಕಿ …ಎಂದು ಹಳ್ಳಿ ಮನೆಗಳ ಜಗುಲಿಯಲ್ಲಿ ಕುಳಿತು ಜಾಗೃತಿಯ ಕಹಳೆ ವೊಳಗಿಸಿದವಳು ಇವಳೇ ಗೌರಾದೇವಿ. ದೇಶದ್ಯಾಂತ ಪರಿಸರ ಕ್ರಾಂತಿ ಮಾಡಿದ ಚಿಪ್ಕೋ ಚಳವಳಿನ್ನು ಹುಟ್ಟು ಹಾಕಿದ್ದೇ ಇವಳು. ಇಂಥ ಗೌರಾದೇವಿಯನ್ನು ಗೌರವದಿಂದ ನೆನೆಯುವ ಕೆಲಸವನ್ನು ನಾವು ಮಾಡಬೇಕಿದೆ.
“ಸಹೋದರರೇ ಈ ಅರಣ್ಯ ಪ್ರದೇಶ ನಮ್ಮ ಜೀವಮೂಲ. ನಮ್ಮ ಹುಟ್ಟಿನಿಂದ ಸಾವಿನ ತನಕದ ಜೀವನ ಬಂಡಿಗೆ ಸಾಥ್ ನೀಡುವುದು ಇದೇ ಹಸಿರು ಕಾನನ. ಈ ‘ರಮೆಯೇ ನಮ್ಮಮ್ಮ. ನೀವು ನಿಮ್ಮ ಹರಿತವಾದ ಗರಗಸವನ್ನು ನಮ್ಮಮ್ಮನ ಕರುಳಿಗೆ ಇಡುವ ವೊದಲು ನನ್ನ ಎದೆಗೆ ಹಿಡಿ”
ಬಹುಶಃ ಚಿಪ್ಕೋ ಚಳವಳಿ ಹುಟ್ಟುವ ವೊದಲು ಓರ್ವ ಬುಡಕಟ್ಟು ಮಹಿಳೆ ಉತ್ತರ ಖಾಂಡದ ಆ ಬೃಹತ್ ಅರಣ್ಯದಲ್ಲಿ ಈ ರೀತಿ ಮರಗಳನ್ನು ತಬ್ಬಿಕೊಂಡು ಸರ್ಕಾರದ ಅಕಾರಿಗಳ ಎದುರು ಈ ರೀತಿ ಅಳಲು ತೋಡಿಕೊಂಡಿದ್ದು ಬಹಳಷ್ಟು ಜನರಿಗೆ ನೆನಪು ಇರಲಿಕ್ಕಿಲ್ಲ. ಚಿಪ್ಕೋ ಚಳವಳಿ ಕುರಿತು ಮಾತೆತ್ತಿದ್ದರೆ ತಕ್ಷಣಕ್ಕೆ ನೆನಪಿಗೆ ಬರುವುದು ಸುಂದರ್ ಲಾಲ್ ಬಹುಗುಣ ಎಂಬ ಮಹಾನ್ ವ್ಯಕ್ತಿ. ಆದರೆ, ಇವರಿಗಿಂತಲೂ ವೊದಲು ಅಲ್ಲಿ ಮಹಿಳೆಯೊಬ್ಬಳ ದನಿಯಿತ್ತು, ದೇಶದಾದ್ಯಂತ ಬೃಹತ್ ಪರಿಸರ ಕ್ರಾಂತಿಗೆ ಮುನ್ನುಡಿಯಾದ ಆ ಚಳವಳಿಯ ಹಿಂದೆ ಅನಕ್ಷರಸ್ಥೆ ಮಹಿಳೆಯ ಶ್ರಮ ಇತ್ತು, ಕಣ್ಣೀರಿತ್ತು, ಜಾಗೃತಿಯ ಕಹಳೆಯಿತ್ತು.
ಅವಳ ಹೆಸರು ಗೌರಾದೇವಿ.
ಹಳ್ಳಿಗರೇ ಕರೆಂಟ್ ಉಳಿಸಿ, ಎಂಜಿ ರೋಡಿಗೆ ಲೈಟ್ ಹಾಕಬೇಕು
ಪ್ರಪಂಚ ಹೀಗೆನೇ!
ಯಾರು ಪಾಲಿಸ್ತಾರೋ ಅವರ ಮೇಲೆಯೇ ಎಲ್ಲವನ್ನು ಹೇರಿ ಅರಾಮದಲ್ಲಿ ಇದ್ದು ಬಿಡುತ್ತೆ. ‘ಉಳಿಸಿ’ ಅಂತ ಸರ್ಕಾರ ಯಾವುದಾದ್ರು ಅಭಿಯಾನ ಮಾಡಿದ್ರೆ ಅದರ ಟಾರ್ಗೆಟ್ ಮಧ್ಯಮ ಇಲ್ಲವೇ ಕೆಳವರ್ಗವೇ ಆಗಿರುತ್ತೆ. ಅದು ನೀರುಳಿಸಿ ಎಂಬುದೋ, ಪೆಟ್ರೋಲ್ ಉಳಿಸಿ ಅಂತಲೋ, ಕಡೆಗೆ ವಿದ್ಯುತ್ ಉಳಿಸಿ ಅಂತಾನೋ ಇರಬಹುದು. ಇಲ್ಲಿ ‘ಉಳಿಸಬೇಕಾದವರು’ ಯಾವುದನ್ನು ಕಡಿಮೆ ಪಡೆಯುತ್ತಿರುತ್ತಾರೋ ಅವರೇ! ವಿಚಿತ್ರ, ಆದ್ರೂ ಸತ್ಯ.
ಉದಾಹರಣೆಗೆ ನೀರು ಉಳಿಸಿ-ಮಿತವಾಗಿ ಬಳಸಿ ಅಂತ ಹೇಳಲಾಗುತ್ತೆ. ಆದ್ರೆ ಅದನ್ನು ಪಾಲಿಸಬೇಕಾದ ಜನತೆಗೆ ವಾರಕ್ಕೆ ಒಮ್ಮೆಯೋ ಎರಡು ಬಾರಿಯೋ ನೀರು ಬಂದ್ರೆ ಅದೇ ಹೆಚ್ಚು. ಒಮ್ಮೆ ಎಲ್ಲಿಯಾದ್ರೂ ಈ ಜನರು ಈ ನಿಯಮಗಳನ್ನು ಪಾಲಿಸುವಲ್ಲಿ ಸೋತರೆ ನಾವೆಲ್ಲ ಬೊಬ್ಬೆ ಹಾಕಿ ಬಿಡ್ತೇವೆ. ಅದ್ರೆ ಆ ಬೊಬ್ಬೆಯಲ್ಲಿ ಸತ್ಯವೊಂದು ಮುಚ್ಚಿ ಹೋಗಿರುತ್ತೆ. ಒಬ್ಬ ಶ್ರೀಮಂತನ ಮನೆಯ ಟಾಯ್ಲೆಟ್ ನಲ್ಲಿ ಬಳಕೆಯಾಗುವ ನೀರಿನಷ್ಟು ಸಾಮಾನ್ಯ ಜನರ ಕುಡಿಯುವ ನೀರು ಶುದ್ಧವಾಗಿರಲ್ಲ.