ಹಿಂದುಳಿದವರನ್ನು ತುಳಿಯುತ್ತಿರುವವರು ಯಾರು?
– ರಾಜಕುಮಾರ.ವ್ಹಿ.ಕುಲಕರ್ಣಿ,
ಮುಖ್ಯಗ್ರಂಥಪಾಲಕ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ
2012-13 ನೇ ಸಾಲಿನಿಂದ ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದ ಅರ್ಜಿಯನ್ನು ಆನ್‍ಲೈನ್ ಮೂಲಕ ಸಲ್ಲಿಸುವ ವಿಧಾನವನ್ನು ಜಾರಿಗೆ ತಂದಿದೆ. ಈ ಮೊದಲು ಮುದ್ರಿತ ಅರ್ಜಿಯನ್ನು ಸಲ್ಲಿಸುವ ಪದ್ಧತಿ ಬಳಕೆಯಲ್ಲಿದ್ದುದ್ದರಿಂದ ಹೊಸ ವಿಧಾನದ ಪರಿಣಾಮ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ವಿಳಂಬವಾಗುವುದರ ಜೊತೆಗೆ ತೊಂದರೆ ಸಹ ಆಗುತ್ತಿದೆ. ಅದೆಷ್ಟೋ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿಯನ್ನು ಹೇಗೆ ಸಲ್ಲಿಸಬೇಕೆಂದು ತಿಳಿಯದೆ ನನ್ನನ್ನು ಸಂಪರ್ಕಿಸಿದ್ದುಂಟು. ಕಳೆದ ವರ್ಷ ಸುಮಾರು ಇಪ್ಪತ್ತಕ್ಕಿಂತ ಹೆಚ್ಚಿನ ವೈದ್ಯಕೀಯ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದ ಅರ್ಜಿಯನ್ನು ಆನ್‍ಲೈನ್ ಮೂಲಕ ಸಲ್ಲಿಸುವಾಗ ನನ್ನನ್ನು ಅಚ್ಚರಿಗೊಳಿಸಿದ ಸಂಗತಿ ಎಂದರೆ ಆ ಯಾವೊಬ್ಬ ವಿದ್ಯಾರ್ಥಿಯೂ ಬಡತನದ ಕುಟುಂಬಗಳಿಗೆ ಸೇರಿದವರಾಗಿರಲಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಎಂಟರಿಂದ ಹತ್ತು ಲಕ್ಷ ರೂಪಾಯಿಗಳನ್ನು ಮೀರುತ್ತಿತ್ತು.ಆ ಎಲ್ಲ ವಿದ್ಯಾರ್ಥಿಗಳ ಪಾಲಕರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಸಂಗತಿ ನನ್ನನ್ನು ಇನ್ನಷ್ಟು ಅಚ್ಚರಿಗೊಳಿಸಿತು. ವಿದ್ಯಾರ್ಥಿಗಳ ಪಾಲಕರು ತಮ್ಮ ಕೆಲಸಕ್ಕೆ ಒಂದೆರಡು ದಿನಗಳ ರಜೆ ಪಡೆದು ಮಕ್ಕಳ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಬಂದಿದ್ದರು. ಸರ್ಕಾರಿ ಕೆಲಸ, ಉನ್ನತ ಹುದ್ದೆ, ಕೈತುಂಬ ಸಂಬಳ ಹೀಗಿದ್ದೂ ಅವರುಗಳು ಸರ್ಕಾರದಿಂದ ವಿದ್ಯಾರ್ಥಿ ವೇತನ ಪಡೆಯಲು ಪಡುತ್ತಿದ್ದ ಪರಿಪಾಟಲು ನೋಡಿ ನಿಜಕ್ಕೂ ಹಿಂದುಳಿದ ವರ್ಗದವರನ್ನು ಕೈಹಿಡಿದೆತ್ತಿ ಮುಖ್ಯವಾಹಿನಿಗೆ ತಂದು ನಿಲ್ಲಿಸಲು ಸರ್ಕಾರ ಮಾಡುತ್ತಿರುವ ಪ್ರಯತ್ನ ಅದರ ನಿಜವಾದ ಫಲಾನುಭವಿಗಳಿಗೆ ತಲುಪುತ್ತಿದೆಯೇ ಎನ್ನುವ ಪ್ರಶ್ನೆ ಆ ಕ್ಷಣ ನನ್ನಲ್ಲಿ ಮೂಡಿತು.