ಅವರ ಕನಸುಗಳ ಬೆನ್ನುಹತ್ತಿ
ಆತ ಪೋಟೋ ಕ್ಲಿಕ್ ಮಾಡಲು ಬಿಡಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಈ ಇಬ್ಬರು ಹೀರೋಗಳು ತೆರೆಯ ಮರೆಯ ಕಾಯಿಗಳಂತೆ ಈಗಲೂ ಇದ್ದಾರೆ. ದಕ್ಷಿಣ ಕನ್ನಡದ ಜಿಲ್ಲೆಯ ಆದಿವಾಸಿ ಜನರಾದ ಕೊರಗರ ಅಭಿವೃದ್ಧಿಗಾಗಿ ದುಡಿಯುತ್ತಿರುವ ಶೀನ ಶೆಟ್ಟಿ, ಕೃಷ್ಣಮೂಲ್ಯ ಅವರೆ ಈ ತೆರೆಯಮರೆಯ ಹೀರೋಗಳು. ಮಂಗಳೂರಿನಲ್ಲಿ ಇವರ ಸಖ್ಯ ನನ್ನೊಂದಿಗೆ ಬೆಳೆಯಿತು. ಇವರೊಂದಿಗೆ ನಾನು ಕೂಡ ದಕ್ಷಿಣ ಕನ್ನಡ ಜಿಲ್ಲೆಯನ್ನು ಪೂರಾ ಸುತ್ತು ಹೊಡೆದಂದ್ದಾಯಿತು, ಏನಿವರ ಕನಸುಗಳು ಅಂತಾ ಕೆದಕುತ್ತಾ ಹೋದಂತೆ ಜನರಿಗೆ ತಮ್ಮ ಜೀವನವನ್ನೆ ಸಮರ್ಪಣೆ ಮಾಡಿಕೊಂಡ ಕಥನ ಬಿಚ್ಚಿಕೊಳ್ಳುತ್ತದೆ.
ಶೀನಶೆಟ್ಟಿ, ಕೃಷ್ಣಮೂಲ್ಯರು ನಕುಲ,ಸಹದೇವ, ಲವ-ಕುಶ ಇದ್ದಂತೆ, ಅವರಿಬ್ಬರು ಒಬ್ಬರಿಗೊಬ್ಬರು ಬಿಟ್ಟಿರುವುದಿಲ್ಲ. ಸಮಾಜಕಾರ್ಯದಲ್ಲಿ ಆಗಿನ ಕಾಲಕ್ಕೆ ಸ್ನಾತಕೋತ್ತರ ಪದವಿ ಪಡೆದರೂ ಅವರು ಎಂದೆಂದಿಗೂ ಕೆಲಸ ಆಸೆಯ ಗುರಿ ಹೊತ್ತವರೆ ಅಲ್ಲ. ಬ್ಯಾಂಕುಗಳಲ್ಲಿ ಉದ್ಯೋಗ ಅರಸಿ ಬಂದರೂ ಅದನ್ನು ಒಲ್ಲೆ ಎಂದವರು, ತಮ್ಮ ಸಣ್ಣ ವಯಸ್ಸಿನಲ್ಲೆ ಸಮಾಜ ಸೇವೆಯ ತುಡಿತ ಬೆಳೆಸಿಕೊಂಡ ಇವರಿಬ್ಬರು ದಕ್ಷಿಣ ಕನ್ನಡ ಜಿಲ್ಲೆಯ ಅಣ್ಣಾ ಹಜಾರೆ ಇದ್ದಂತೆ. ನವ ಸಾಕ್ಷರರ ಆಂದೋಲನದ ಮೂಲಕ ಜಿಲ್ಲೆಯ ಮೂಲೆ ಮೂಲೆಗಳನ್ನು ಎಡ ತಾಕಿರುವ ಇವರು ಅದರಲ್ಲಿ ಸಾಧಿಸಿರುವ ಪ್ರಗತಿ ಅಸಾಧಾರಣ.
೮೦ರ ಪ್ರಾಯದ ಚೀಂಕ್ರ ಮೂಲ್ಯ ಜೀವನ ಸಾಧನೆ ಕೃಷ್ಣ, ಶೀನ ಶಟ್ಟಿ ಅವರ ಆಸಧಾರಣ ಸಮಾಜ ಸೇವೆಗೆ ಒಂದು ಉದಾಹರಣೆ. ಕುಡಿತ, ಹೆಣ್ಣು ಮಕ್ಕಳ ಕೀಟಲೆ, ಹೆಂಡತಿಯೊಂದಿಗೆ ಜಗಳ ಬಡಿದಾಟದಲ್ಲೇ ಜೀವನ ಕಂಡಿದ್ದ ಚೀಂಕ್ರ ಪೂಜಾರಿ ಇಂದು ದಕ್ಷಿಣ ಕನ್ನಡ ಜಿಲ್ಲೆ ಅಲ್ಲದೇ ರಾಜ್ಯದ ಇತರೆ ಜಿಲ್ಲೆಗಳಲ್ಲಿ ನಡೆದ ಸಾಕ್ಷರತಾ ಶಿಬಿರಗಳಲ್ಲಿ ಸಂಪನ್ಮೂಲ ಮತ್ತು ಕಲಿಯುವವರ ಪ್ರೇರಕ ಶಕ್ತಿಯಾದ ಹಿಂದೆ ಈ ಅಣ್ಣ ಹಜಾರೆ (ಮೂಲ್ಯ, ಶೆಟ್ಟಿ) ಇದ್ದಾರೆ. ಕೊರಗ ಸಮುದಾಯದ ಕಮಲ ಗ್ರಾಮ ಪಂಚಾಯತ್ ಸದಸ್ಯೆಯಾಗಿ ಆಯ್ಕೆ ಯಾದುದ್ದರ ಹಿಂದೆ ಇವರ ಶ್ರಮವಿದೆ. ಮಾಧ್ಯಮದಿಂದ ದೂರವೇ ಉಳಿಯುವ ಈ ಇಬ್ಬರು ದುಡಿವ, ನೆಲದ ನಾಯಕರು, ಸಾಮೂಹಿಕ ಶ್ರಮದಾನದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಚ್ಛತಾ ಆಂದೋಲನದ ಹೊಸ ಮಾದರಿಗಳನ್ನೆ ಹುಟ್ಟಿಹಾಕಿದರು, ಗೋಳ್ತಮಜಲು ಮಾದರಿ, ಇರಾ ಮಾದರಿಗಳು ಇಡೀ ರಾಜ್ಯ, ರಾಷ್ಟ್ರ, ವಿದೇಶಗಳ ಗಮನ ಸೆಳೆದವು. ರಾಜ್ಯದಲ್ಲಿ ಶಿವಮೊಗ್ಗ ಹೊರತುಪಡಿಸಿ ಯಾವುದೇ ಜಿಲ್ಲೆಗಳಲ್ಲಿ ಸಾಧಿಸಲಾರದಂತ ಸಾಧನೆ ಈ ಜಿಲ್ಲೆಯಲ್ಲಿ ಸ್ವಚ್ಚತಾ ಆಂದೋಲನದಲ್ಲಿ ನಡೆಯಿತು, ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸಲು ಇವರು ಕೈಗೊಂಡ ಶ್ರಮದಾನ, ಗ್ರಾಮ, ಗ್ರಾಮಗಳ ನಡುವಿನ ಸ್ಪರ್ಧೆ ದೇಶದ ಎಲ್ಲ ಕಾಣದಂತ ಹೊಸ ಪರಿಕಲ್ಪನೆಗಳು.ಜನಪ್ರತಿನಿಧಿಗಳು, ಸರ್ಕಾರಗಳು ಮಾಡದಂಥ ಕಾರ್ಯಕ್ರಮಗಳನ್ನು ಮಾಡುವ ಮೂಲಕ ತುಳಿತಕ್ಕೆ ಒಳಗಾದ ಜನತೆಗೆ ಬದುಕಿನ ಭರವಸೆಯ ಆಶಾಕಿರಣಗಳನ್ನು ಮೂಡಿಸಿರುವ ಧೀಮಂತ ಮಣ್ಣಿನ ಮಕ್ಕಳಿವರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವಾಗಲೂ ನೆನೆಯುವ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆ, ಮೋಹನ ಆಳ್ವರ ಸಾಂಸ್ಕೃತಿಕ ಹಿರಿತನಗಳ ಜೊತೆಗೆ ಕನಸಿನ ಊರಿನ ಕದತಟ್ಟಿದವರಲ್ಲಿ ಕೃಷ್ಣಮೂಲ್ಯರು, ಶೀನ ಶೆಟ್ಟಿಯೂ ಸೇರಿದಂತೆ, ವಿಪರ್ಯಾಸ ವೆಂದರೆ ಉಳಿದ ಇಬ್ಬರ ಬಳಿ ಶಿಕ್ಷಣ ಸಂಸ್ಥೆಗಳಿವೆ, ಧಾರ್ಮಿಕ ಶಕ್ತಿ ಕೇಂದ್ರವಿದೆ, ಹಣವಿದೆ ಹಾಗೂ ರಾಜಕೀಯ ಶಕ್ತಿ ಇದೆ, ಆದರೆ ಇದ್ಯಾದುವುದು ಇಲ್ಲದೇ ಸಾವಿರಾರು ಜನರ ಬದುಕನ್ನು ರೂಪಿಸಿರುವ ಈ ಇಬ್ಬರು ನಾಯಕರನ್ನು ಸರ್ಕಾರ ಇದೂವರೆಗೂ ಸರಿಯಾಗಿ ಗುರುತಿಸುವ ಕೆಲಸ ಮಾಡಿಲ್ಲ. ಈ ಇಬ್ಬರನ್ನು ಸರ್ಕಾರ ಗುರುತಿಸುವಂಥಾದರೆ ಅದು ನಾಡಿನ ಹೊಸ ಭಾಗ್ಯ ಮಾತ್ರವಲ್ಲ ಅಭಿವೃದ್ಧಿಯ ಪರಿಕಲ್ಪನೆಗಳು ಬದಲಾದಾವು, ಹಳ್ಳಿ, ಹಳ್ಳಿಗಳು ಅನಭಿವೃದ್ಧಿ, ಅಜ್ಞಾನದ ಮೂಸೆಯಿಂದ ಹೊರಬರಲು ಹೊಸ ಆಶಾಕಿರಣಗಳಾಗಲಿವೆ.




