ಇತಿಹಾಸದ ನೆರಳಿನಲ್ಲಿ ವರ್ತಮಾನದ ವೈರುಧ್ಯಗಳ ಮೇಲೆ ಬೆಳಕು ಚೆಲ್ಲುತ್ತಾ …
– ರಾಕೇಶ್ ಶೆಟ್ಟಿ
ಹಿಂದಿ ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ತಮ್ಮ ಹೊಸ ಪುಸ್ತಕ “ಟಿಪ್ಪು ಸುಲ್ತಾನ್” ಕುರಿತು ಚರ್ಚಿಸುತ್ತ, ಲೇಖಕ ವಿಕ್ರಂ ಸಂಪತ್ ಅವರು, “ಟಿಪ್ಪುವನ್ನು, ರಾಜಕೀಯ ಪಕ್ಷಗಳು ತಮ್ಮ ಉದ್ದೇಶ ಸಾಧನೆಗೆ ಬಳಸಿಕೊಂಡಿದ್ದಾರೆ. ಕಾಂಗ್ರೆಸ್ಸಿನವರು ಟಿಪ್ಪು ಜಯಂತಿ ಅಂತ ಮಾಡಿ ಬಳಸಿಕೊಂಡರು. ಬಿಜೆಪಿಯವರು, ಮೈಸೂರಿನ ಇತಿಹಾಸದಲ್ಲಿ ಬ್ರಿಟಿಷರು, ಮೈಸೂರಿನವರಿಂದ ಎಲ್ಲೂ ದಾಖಲಾಗದ ಉರಿಗೌಡ, ನಂಜೇಗೌಡ ಎನ್ನುವ ಫಿಕ್ಷನಲ್ ಕ್ಯಾರೆಕ್ಟರ್ ಗಳನ್ನು ಕಳೆದ ಚುನಾವಣೆಯಲ್ಲಿ ಸೃಷ್ಟಿಸಿ ಆಗಿನ ಎದುರಾಳಿಯಾಗಿದ್ದ ಜೆಡಿಎಸ್ ಪಕ್ಷದಿಂದ ಒಕ್ಕಲಿಗರ ಮತಗಳಿಸಲು ವ್ಯರ್ಥ ಪ್ರಯತ್ನ ಮಾಡಿದರು. ಕಡೆಗೆ ಒಕ್ಕಲಿಗ ಸಂಘದವರು, ನಮ್ಮ ಹೆಸರಿನಲ್ಲಿ ಸುಳ್ಳುಗಳನ್ನು ಹರಡಬೇಡಿ ಎಂದು ಆದೇಶ ನೀಡಿದ ನಿಂತರ ವಿಷಯಕ್ಕೆ ಮುಕ್ತಾಯ ಹಾಡಲಾಯಿತು.” ಎಂದಿದ್ದರು (ವಿಡಿಯೋ ಕೊಂಡಿ ಕಮೆಂಟ್ ಬಾಕ್ಸಿನಲ್ಲಿ). ಇದೇ ಮಾತನ್ನು ಅವರು ಪುಸ್ತಕದಲ್ಲಿಯೂ ಬರೆದಿದ್ದಾರೆ.
ವಿಕ್ರಂ ಸಂಪತ್ ಹೇಳಿದ ಮಾತು ನಿಜವೇ. ಟಿಪ್ಪುವನ್ನು, ರಾಜಕೀಯ ಪಕ್ಷಗಳು ತಮ್ಮ ಉದ್ದೇಶ ಸಾಧನೆಗೆ ಬಳಸಿಕೊಂಡಿವೆ. ಆದರೆ, ಕೇವಲ ರಾಜಕೀಯ ಪಕ್ಷಗಳು ಮಾತ್ರ ಬಳಸಿಕೊಂಡಿವೆಯೇ?
ಇತಿಹಾಸಕಾರರು ತಮ್ಮ ಐಡಿಯಾಲಾಜಿಕಲ್ ಕ್ಯಾಂಪ್ ಬದಲಾದಾಗ, ತಾವಿರುವ ಕ್ಯಾಂಪಿನ ಗುಣಧರ್ಮಕ್ಕೆ ಹೊಂದುವಂತೆ ಇತಿಹಾಸವನ್ನು ಬಳಸಿಕೊಂಡಿಲ್ಲವೇ?
ಇಬ್ಬರು ಇತಿಹಾಸಕಾರರ ಉದಾಹರಣೆಯನ್ನು ಕೊಡುತ್ತೇನೆ.
ಮೊದಲಿಗರು ಪ್ರೊ.ನಂಜರಾಜ ಅರಸ್ ಅವರು. ಒಂದು ಕಾಲದಲ್ಲಿ “ಮೈಸೂರು ನೂರಿನ್ನೂರು ವರ್ಷಗಳ ಹಿಂದೆ” ಎನ್ನುವ ಪುಸ್ತಕವನ್ನು ಇವರು ಬರೆದಿದ್ದರು. ಬಹಳ ಚಂದದ ಪುಸ್ತಕ. ಆ ಪುಸ್ತಕದಲ್ಲಿ ಒಡೆಯರ್ ವಂಶವನ್ನು ಹೊಗಳಿ, ಟಿಪ್ಪುವನ್ನು ತೆಗಳಿ ಬರೆದಿದ್ದರು. ಅದೇ ಪುಸ್ತಕದ ಲೇಖಕರ ಅಭಿಪ್ರಾಯದಲ್ಲಿ, ಟಿಪ್ಪುವಿನ ಬಗ್ಗೆ ಸತ್ಯಾಂಶವನ್ನು ಹೇಳಿದ್ದರಿಂದ ಬರಗೂರು ರಾಮಚಂದ್ರಪ್ಪ ಇತ್ಯಾದಿ ಸೆಕ್ಯುಲರ್ ಸಾಹಿತಿ,ಚಿಂತಕರಿಂದ ಟೀಕೆ ವ್ಯಕ್ತವಾದ ಬಗ್ಗೆಯೂ ಬರೆದುಕೊಂಡಿದ್ದರು.
ಕಾಲ ಚಕ್ರ ಉರುಳಿತು. ಅದೇನು ಕಾರಣವೋ ಗೊತ್ತಿಲ್ಲ ನಂಜರಾಜ ಅರಸ್ ಅವರು ಒಡೆಯರ್ ವಂಶವನ್ನು ಟೀಕಿಸುತ್ತಾ, ಟಿಪ್ಪುವನ್ನು ಹೊಗಳಲು ಆರಂಭಿಸಿದರು. ನಂತರ “ಟಿಪ್ಪು ಮಾನ್ಯತೆ ಸಿಗದ ಸುಲ್ತಾನ” ಎನ್ನುವ ಪುಸ್ತಕವನ್ನು ಪ್ರಕಟಿಸಿದರು. ಮೊದಲ ಪುಸ್ತಕದಲ್ಲಿ ಹೊಗಳಿದ್ದನ್ನು ಇದರಲ್ಲಿ ತೆಗಳಿದರು. ಮೊದಲು ತೆಗಳಿದವರನ್ನು ಈಗ ಹೊಗಳಿ, ಅವನೊಬ್ಬ ನತದೃಷ್ಟ ಮಹಾನ್ ನಾಯಕ ಎಂಬಂತೆ ಚಿತ್ರಿಸಿದರು. (ಎರಡೂ ಅಭಿರುಚಿ ಪ್ರಕಾಶನದಿಂದ ಪ್ರಕಟಿತ)
ಮತ್ತೊಬ್ಬ ಇತಿಹಾಸಕಾರರ ಉದಾಹರಣೆ ಕೊಡುವ ಮೊದಲು, ಅವರ ಪುಸ್ತಕಗಳಲ್ಲೇ ಉಲ್ಲೇಖವಾಗಿರುವುದನ್ನು ತೋರಿಸುತ್ತೇನೆ ನೋಡಿ.
“ವರ್ತಮಾನದ ಹಾಸ್ಯಾಸ್ಪದ ರಾಜಕೀಯ ಸನ್ನಿವೇಶಗಳ ಸಂದರ್ಭದಲ್ಲಿ ನಾವು ಸೃಷ್ಠಿಸಿಕೊಂಡಿರುವ ಮಾನದಂಡಗಳ ಮೂಲಕ ಭೂತಕಾಲದ ಜನರನ್ನು ನಿರ್ಣಯಿಸುವುದು ಸಂಪೂರ್ಣವಾಗಿ ನಿರರ್ಥಕವೆಂದು ತೋರುತ್ತದೆ. ಹಿಂದಿನ ಕಾಲದ ಈ ವೀರರು ಅವರ ಸಮಯ ಮತ್ತು ಸಂದರ್ಭಗಳ ಉತ್ಪನ್ನಗಳೆಂದು ಅರಿತುಕೊಳ್ಳಬೇಕು. ವರ್ತಮಾನದ ನೈತಿಕತೆಯ ಕನ್ನಡಕದಲ್ಲಿ ಅವರ ಬಗ್ಗೆ ತೀರ್ಪು ನೀಡುವುದು ಸರಿಯಲ್ಲ. ಟಿಪ್ಪು ಕೂಡ ಇತರ ಎಲ್ಲರಂತೆ ವಿವಿಧ ಭಾವನೆಗಳಿರುವ ಮನುಷ್ಯರಾಗಿದ್ದರು. ಅವರಿಗೆ ಶುದ್ಧ ಕಪ್ಪು ಅಥವಾ ಬಿಳಿ ಬಣ್ಣ ಬಳಿಯುವ ಅಗತ್ಯವಿಲ್ಲ ಎಂದು ತೋರುತ್ತದೆ…”
“… ನಿಸ್ಸಂದೇಹವಾಗಿ, ಟಿಪ್ಪು ಒಬ್ಬ ಮಹಾನ್ ಆಡಳಿತಗಾರ. ಅವರ ಕಾಲಕ್ಕಿಂತ ಮುಂದಿನದನ್ನು ಗ್ರಹಿಸಬಲ್ಲ ದಾರ್ಶನಿಕನಾಗಿದ್ದರು. ಹಿಂದೆ (ಹಿಂದಿನ ಅಧ್ಯಾಯಗಳಲ್ಲಿ) ಚರ್ಚಿಸಿದಂತೆ ಅವರ ಪ್ರಗತಿಪರ ಕ್ರಮಗಳು, ಮೈಸೂರು ರಾಜ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಅಂದಿನ ದುರ್ಬಲ ಒಡೆಯರ್‌ಗಳ ಅಡಿಯಲ್ಲಿ (ಮೈಸೂರು ರಾಜ್ಯ) ಕಾರ್ಡ್‌ಗಳ ಪ್ಯಾಕ್‌ನಂತೆ ಕುಸಿಯುತ್ತಿತ್ತು…”
ಟಿಪ್ಪು ಬಗ್ಗೆ ಇಷ್ಟು ಪ್ರೀತಿಯಿಂದ ಮಾತನಾಡಿದವರು ಯಾರಿರಬಹುದು? ಯಾರೋ ಸೆಕ್ಯುಲರ್ ಇತಿಹಾಸಕಾರರಲ್ಲ. ಈದೀಗ ಬಿಜೆಪಿ ಆಂಡ್ ಪರಿವಾರದವರ ಕಣ್ಮಣಿಯಾಗಿರುವ ಲೇಖಕ ವಿಕ್ರಂ ಸಂಪತ್ ಅವರೇ. (ಪುಸ್ತಕ : ಸ್ಪ್ಲೆಂಡರ್ಸ್ ಆಫ್ ರಾಯಲ್ ಮೈಸೂರು. ಅಧ್ಯಾಯ : ದಿ ಲೆಗೆಸಿ ಆಫ್ ಟೀಪು ಸುಲ್ತಾನ್. ಪುಟ.ಸಂ ೩೭೩. ರೂಪ ಪಬ್ಲಿಕೇಷನ್ಸ್, ೨೦೦೮)
ಆಗ ಹಾಗೆ ಬರೆದವರು, ಈಗ ತಮ್ಮ ಹೊಸ ಪುಸ್ತಕದಲ್ಲಿ ಟಿಪ್ಪು ಕುರಿತು ಏನು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಗೊತ್ತೇ? (ಪು: ಟಿಪ್ಪು ಸುಲ್ತಾನ್ , ಅಧ್ಯಾಯ : ಎ ಬ್ಲಡೀಡ್ ಲೆಗೆಸಿ. ಪುಟ ಸಂ. ೬೭೩-೬೭೪. ಪೆಂಗ್ವಿನ್ ಪಬ್ಲಿಕೇಷನ್, ೨೦೨೪)


“ಅವರದೇ ಪತ್ರಗಳು, ಅವರ ಗ್ರಂಥಾಲಯದಲ್ಲಿನ ಪುಸ್ತಕಗಳು ಮತ್ತು ಅವರ ಸ್ವಂತ ಕನಸಿನ ಬಗೆಗಿನ ದಾಖಲಾತಿಗಳ ಬರಹಗಳಿಂದ, ಟಿಪ್ಪು ಮುಸ್ಲಿಮೇತರರ ಬಗ್ಗೆ ಅಪಾರವಾದ ದ್ವೇಷವನ್ನು ಹೊಂದಿದ್ದರು ಮತ್ತು ಅವರ ವಿರುದ್ಧ ಪವಿತ್ರ ಯುದ್ಧವನ್ನು (ಜಿಹಾದ್) ನಡೆಸುವುದು ತನ್ನ ಬದ್ಧ, ಧಾರ್ಮಿಕ ಕರ್ತವ್ಯವೆಂದು ಪರಿಗಣಿಸಿದ್ದರು ಎನ್ನುವುದು ಸ್ಪಷ್ಟವಾಗಿದೆ…”
“… ಹೈದರ್‌ನಂತೆ, ಟಿಪ್ಪು ಕೂಡ, ಹಿಂದೂ ಬಹುಸಂಖ್ಯಾತರನ್ನು ಒಳಗೊಂಡಿರುವ ಮೈಸೂರು ಸಾಮ್ರಾಜ್ಯದ ಪ್ರಜೆಗಳಿಗೆ, ತನ್ನ ತಂದೆಯಿಂದ ಅಧಿಕಾರ ಕಳೆದುಕೊಂಡ ಒಡೆಯರ್ ಕುಟುಂಬದ ಬಗ್ಗೆ ಅಪರಿಮಿತವಾದ ಗೌರವ ಮತ್ತು ಮೃದು ಧೋರಣೆಯಿದೆ ಎನ್ನುವುದನ್ನು ಅರಿತುಕೊಂಡಿದ್ದರು. ಮೈಸೂರಿನಲ್ಲಿ ಬಹಿರಂಗವಾಗಿ ಯಾವುದೇ ರೀತಿಯ ಧಾರ್ಮಿಕ ಬದಲಾವಣೆಯ ಪ್ರಯತ್ನಗಳಲ್ಲಿ ತೊಡಗಿಕೊಂಡರೆ, ಪ್ರಜೆಗಳ ನಡುವೆ ಕುದಿಯುತ್ತಿರುವ ಕೋಪವು ಪೂರ್ಣ ಪ್ರಮಾಣದ ದಂಗೆಯಾಗಿ ಬದಲಾಗಬಹುದು ಎಂದು ಅವರು ತಿಳಿದಿದ್ದರು. ಯುದ್ಧರಂಗದಲ್ಲಿ ಅನೇಕ ಶತ್ರುಗಳೊಂದಿಗೆ ರಕ್ತಸಿಕ್ತ ಯುದ್ಧಗಳಲ್ಲಿ ತೊಡಗಿರುವಾಗ ಮತ್ತು ಇತರ ಸ್ಥಳಗಳಲ್ಲಿ ದಂಗೆಗಳನ್ನು ಅಡಗಿಸುವಲ್ಲಿ ಮಗ್ನರಾಗಿರುವಾಗ ಇದನ್ನೂ ನಿಭಾಯಿಸಲು ಸಾಧ್ಯವಾಗುವುದಿಲ್ಲ ಎಂದು ಅವರಿಗೆ ಗೊತ್ತಿತ್ತು… ಆದರೆ, ಅವರ ಆಲೋಚನೆಗಳು, ಅವರ ಬರಹ ಅವರ ಕನಸುಗಳು, ತಮ್ಮ ನಂಬಿಕೆಯ ಜೊತೆಗೆ ಇಲ್ಲದ ಜನರೆಡೆಗೆ ಸಹಜವಾದ ದ್ವೇಷವನ್ನು ಮತ್ತು ಅಂತವರನ್ನು ಹಿಂಸಾತ್ಮಕವಾಗಿ ಹತ್ತಿಕ್ಕುವ ಆಲೋಚನೆ ಅವರ ಮನಸ್ಸಿನಲ್ಲಿ ನಿರಂತರವಾಗಿತ್ತು ಎನ್ನುವುದನ್ನು ತೋರಿಸಿಕೊಡುತ್ತವೆ.”
ಇದಿಷ್ಟೇ ಅಲ್ಲ. ಮೊದಲ ಪುಸ್ತಕದಲ್ಲಿ ಶ್ರೀರಂಗಪಟ್ಟಣದ ಮೂಡಲು ಬಾಗಿಲು ಕೋಟೆ ಆಂಜನೇಯ ದೇವಸ್ತಾನವನ್ನು ಕೆಡವಿ ಮಸೀದಿ ಮಾಡಿದ ಕುರಿತು ಏನು ವಿವರವಾಗಿ ಬರೆದಿಲ್ಲ. ಬಹುಶಃ ಲೇಖಕರ ಆಗಿನ ಮನಸ್ಥಿತಿಗೆ ಅದು ಪೂರಕವಾಗಿರಲಿಲ್ಲವೇನೋ. ಅದೇ ಘಟನೆಯನ್ನು ಹೊಸ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಈಗ ಆಂಜನೇಯ ನೆನಪಾಗಿದ್ದಾನೆ.
ಮೊದಲ ಪುಸ್ತಕದಲ್ಲಿ ಟಿಪ್ಪುವನ್ನು ಟೈಗರ್, ಸುಲ್ತಾನ್ ಈ ಖುದಾದಾದ್ ಇತ್ಯಾದಿಯಾಗಿ ಹೊಗಳಲಾಗಿದೆ. ಉದಾಹರಣೆಗೆ, ಟಿಪ್ಪುವಿನ ಮೃತ ದೇಹವನ್ನು ಬ್ರಿಟಿಷರು ಹುಡುಕಿದ ಸಂದರ್ಭದಲ್ಲಿ, “ಟಿಪ್ಪುವಿನ ದೇಹ ಸಿಕ್ಕರೂ, ಹುಲಿ ಇನ್ನೂ ಜೀವಂತ ಇರಬಹುದು ಎಂದು ಮುಟ್ಟಲು ಬ್ರಿಟಿಷರು ಹೆದರಿದರು.” ಎಂದು ವರ್ಣಿಸಿದ್ದಾರೆ. ಹೊಸ ಪುಸ್ತಕದಲ್ಲಿ ಟೈಗರ್ ನಾಪತ್ತೆಯಾಗಿದೆ, ‘ಸುಲ್ತಾನ್ ಈ ಖುದಾದಾದ್’ ಹೋಗಿ ‘ಸರ್ಕಾರ್ ಈ ಖುದಾದಾದ್’ ಆಗಿದೆ.
ಮೊದಲ ಪುಸ್ತಕದಲ್ಲಿ ಟಿಪ್ಪು ರಾಕೆಟ್ ಪಿತಾಮಹ ಎಂಬ ಸೆಕ್ಯುಲರ್ ಕಲ್ಪನೆಯನ್ನೇ ಯಥಾವತ್ ಚಿತ್ರಿಸಲಾಗಿದ್ದರೇ, ಹೊಸ ಪುಸ್ತಕದಲ್ಲಿ ರಾಕೆಟ್ ಬಳಕೆ ಪುರಾತನ ಗ್ರಂಥಗಳಲ್ಲಿ ಉಲ್ಲೇಖವಿರುವುದರ ಬಗ್ಗೆ ಎಲ್ಲಾ ಹೇಳುತ್ತಾ, ಇದ್ದಿದ್ದನ್ನು ಇವರು ಇಂಪ್ರೂವ್ ಮಾಡಿಕೊಂಡಿದ್ದಾರೆ ಎನ್ನುತ್ತಾರೆ.
ಮೊದಲ ಪುಸ್ತಕದಲ್ಲಿ ಕೊಡಗಿನಲ್ಲಿ ಟಿಪ್ಪು ನಡೆಸಿದ ದಮನಕಾರಿ ಯುದ್ಧಗಳ ಬಗ್ಗೆ ಮಾತನಾಡುತ್ತಾ, ಕೊಡವರಿಗೆ ಭೋಜನ ಕೂಟವನ್ನು ಏರ್ಪಡಿಸುವ ಮೂಲಕ ಅವರ ಜೊತೆಗಿನ ಯುದ್ಧಕ್ಕೆ ಕೊನೆ ಹಾಡಿದರು ಎಂದು ಬರೆದಿದ್ದಾರೆ. ಹೊಸ ಪುಸ್ತಕದಲ್ಲಿ ದೇವಾಟ್ ಪರಂಬು ಹತ್ಯಾಕಾಂಡದ ನೆನಪಾಗಿದೆ. ಐ.ಮಾ ಮುತ್ತಣ್ಣ,ಪಟ್ಟೋಲೆ ಪಳಮೆ, ಅಡ್ಡಂಡ ಕಾರ್ಯಪ್ಪ ಅವರ ಈ ಕುರಿತು ಬರೆದಿರುವುದಾಗಿ ಹೇಳಿದ್ದಾರೆ.
ಇದು ವಿಕ್ರಂ ಹೇಳಿಕೆಯ ಮೊದಲ ಭಾಗವಾದ ಟಿಪ್ಪುವನ್ನು “ಬಳಸಿಕೊಂಡ” ಬಗ್ಗೆಯಾದರೇ, ಹೇಳಿಕೆಯ ಎರಡನೇ ಭಾಗವಾದ “ಬ್ರಿಟೀಷ್ , ಮೈಸೂರಿನ ಯಾವ ಇತಿಹಾಸಕಾರನೂ ದಾಖಲಿಸಿದ ಇಬ್ಬರನ್ನು ಬಿಜೆಪಿ ಸೃಷ್ಠಿಸಿತು” ಎಂದಿದ್ದಾರಲ್ಲ ಅದರ ಬಗ್ಗೆಯೂ ಬೆಳಕು ಚೆಲ್ಲಬೇಕಾದ ಸಮಯವಿದು.
ಟಿಪ್ಪು ಸುಲ್ತಾನ್ ಪುಸ್ತಕದಲ್ಲಿ ತಮಗೆ ಸಹಾಯ ಮಾಡಿದ ಬಿಜೆಪಿಯ ನಾಯಕರ ಹೆಸರನ್ನು ಉಲ್ಲೇಖಿಸಿದ್ದಾರೆ. ಈ ನಾಯಕರ ಸಾಲಿನಲ್ಲಿ ಅಡ್ಡಂಡ ಕಾರ್ಯಪ್ಪ ಅವರ ಹೆಸರು ಕಾಣಿಸಲಿಲ್ಲ! ಏಕೆಂದರೆ ಟಿಪ್ಪು ನಿಜ ಕನಸುಗಳು ಎಂಬ “ನಾಟಕ” ವನ್ನು ರಚಿಸಿದ ಅಡ್ಡಂಡ ಕಾರ್ಯಪ್ಪನವರು ನನಗೆ ತಿಳಿದ ಮಟ್ಟಿಗೆ ಆಗ ರಂಗಾಯಣದ ನಿರ್ದೇಶಕರಾಗಿದ್ದರೇ ಹೊರತು ಬಿಜೆಪಿಯ ಪದಾಧಿಕಾರಿಯೇನೂ ಆಗಿರಲಿಲ್ಲ. ಹೀಗಿದ್ದಾಗ ಬಿಜೆಪಿಯವರ ಸೃಷ್ಟಿ ಎಂದು ಹೇಳುವ ಬದಲಿಗೆ “ಅಡ್ಡಂಡ ಕಾರ್ಯಪ್ಪ ಆಂಡ್ ಟೀಮ್” ಅವರ ಸೃಷ್ಟಿ ಎಂದು ನೇರವಾಗಿ ಹೇಳಬಹುದಿತ್ತಲ್ಲ? ಬಿಜೆಪಿಯೆಂದರೇ ಸಾರ್ವಜನಿಕ ಜಾಗದಲ್ಲಿರುವ ಗಂಟೆ ಯಾರಾದರೂ ಬಂದು ಸುಲಭವಾಗಿ ಬಡಿದು ಹೋಗಬಹುದು ಎನ್ನುವ ಕಾರಣಕ್ಕೆ ಹಾಗೆ ಹೇಳಿದರೇ?


ಆದರೆ, ಈ ವಿಷಯದಲ್ಲಿ ರಾಜಕೀಯ ಲಾಭ ಪಡೆಯಲು ಬಿಜೆಪಿಯ ನಾಯಕರು ಹೆಡ್ಡರಂತೆ ಮುಂದೆ ಬಂದಿದ್ದೇನೂ ಸುಳ್ಳಲ್ಲ.(ಮುಂದೆ ಬಂದರೋ, ಮುಂದೆ ಹೋಗಿ ಎಂದು ಸೂಚನೆ ನೀಡಲಾಯಿತೋ?) , ಆಗುತ್ತಿದ್ದ ರಗಳೆ ಸಾಲದು ಎಂಬಂತೆ ಆ ಕುರುಕ್ಷೇತ್ರದ ಮುನಿರತ್ನ ನಿರ್ಮಾಪಕರಾಗಿ, ಆರ್. ಅಶೋಕ್-ಸಿ.ಟಿ ರವಿ ಅರ್ಪಿಸುವ, ಅಶ್ವತ್ ನಾರಾಯಣ್ ಚಿತ್ರಕಥೆ ಅಂತೆಲ್ಲಾ ಚೀಪ್ ಕ್ವಾಲಿಟಿಯ ಪೋಸ್ಟರ್ ಅನ್ನು ಬಿಟ್ಟು ವಿಷಯದ ಗಂಭೀರತೆಯನ್ನು ಎಷ್ಟು ಹಾಳು ಮಾಡಲು ಸಾಧ್ಯವಿತ್ತೋ ಅದೆಲ್ಲವನ್ನೂ ಮಾಡಿದರು ಪುಣ್ಯಾತ್ಮರು. ಆ ಸಂದರ್ಭ ಪೂಜ್ಯ ನಿರ್ಮಲಾನಂದ ಶ್ರೀಗಳು ಬಂದು ಈ ಅಸಹ್ಯವನ್ನು ನಿಲ್ಲಿಸದೇ ಇದ್ದಿದ್ದರೇ, ಈ ಪ್ರಹಸನದ ಹಿಂದೆ ಇದ್ದ ಬುದ್ಧಿವಂತ ಸ್ಟಾಟರ್ಜಿಸ್ಟುಗಳು ಇನ್ನೇನು ಮಾಡುವವರಿದ್ದರೋ?
ಈ ನಾಟಕವನ್ನು ಬರೆದ ಕಾರ್ಯಪ್ಪನವರಿಗೆ, ಈ ಹೋರಾಟಗಾರರ ಬಗ್ಗೆ ಬೇಸಿಕ್ ಇತಿಹಾಸವೂ ಗೊತ್ತಿಲ್ಲ ಎನ್ನುವುದನ್ನು ಖುದ್ದು ಅವರೇ ಮಾಧ್ಯಮಗಳ ಮುಂದೆ ತೋರಿಸಿಕೊಂಡರು. ಖಾಸಗಿ ವಾಹಿನಿಯ ಪ್ರಖ್ಯಾತ ಸಂವಾದ ಕಾರ್ಯಕ್ರಮವೊಂದರಲ್ಲಿ ಕುಳಿತ ಅಡ್ಡಂಡ ಕಾರ್ಯಪ್ಪನವರಿಗೆ, ಪ್ರೇಕ್ಷಕರ
ಗ್ಯಾಲರಿಯಲ್ಲಿದ್ದವರೊಬ್ಬರು ಕೇಳಿದರು, ಇತಿಹಾಸದಲ್ಲಿ ಎಲ್ಲಿ “ಉರಿಗೌಡ, ನಂಜೇಗೌಡರ ಬಗ್ಗೆ ದಾಖಲಾಗಿದೆ?”. ಕಾರ್ಯಪ್ಪನವರ ಉತ್ತರ “ಮಲಬಾರ್ ಮ್ಯಾನುವಲ್” ನೋಡಿ ಎಂದಾಗಿತ್ತು. ಅಸಲಿಗೆ ಮಲಬಾರ್ ಮ್ಯಾನುವಲ್ ಅಲ್ಲಿರುವುದು ಏನೆಂದರೆ, ಮಲಬಾರಿನ ಜನರ ಆಚಾರ, ವಿಚಾರ, ಉಡುಗೆ, ತೊಡುಗೆ, ಜೀವನ ಶೈಲಿ ಇತ್ಯಾದಿ. ಇವರಿಬ್ಬರ ಉಲ್ಲೇಖ ಅಲ್ಯಾಕೆ ಬರುತ್ತದೆ? ಈ ಕಾಲದಲ್ಲೂ ಜನರು ದಡ್ಡರು, ನಾವು ಮಾತ್ರ ಬುದ್ಧಿವಂತರು ಅಂತ ಹೊರಡುವವರಿಗೆ ಏನು ಹೇಳಬೇಕು?
ಪುಸ್ತಕಗಳು, ನಾಟಕದ ಟಿಕೆಟ್ ಗಳು ಭರ್ಜರಿಯಾಗಿ ಮಾರಾಟವಾಗಿ ಸಂಬಂಧಪಟ್ಟವರಿಗೆ ಭರ್ಜರಿ ಆರ್ಥಿಕ ಲಾಭವೇ ಆಗಿರಬಹುದು. ಆದರೆ, ನಷ್ಟವಾಗಿದ್ದು ಯಾರಿಗೆ ಗೊತ್ತೇ? ಟಿಪ್ಪುವಿನ ವಿರುದ್ಧ ನಿಜಕ್ಕೂ ತೊಡೆ ತಟ್ಟಿದ್ದ ಆ ಜೀವಗಳಿಗೆ. ಗಂಭೀರ ಅಕಾಡೆಮಿಕ್ ಚರ್ಚೆಯಾಗಬೇಕಾಗಿದ್ದ ಸ್ಥಳೀಯರ ಹೋರಾಟ ಅಧ್ಯಾಯವೊಂದು ಟ್ರೋಲ್ ಗೆ ಒಳಗಾಯಿತು. ಬರೆದವರಿಗೆ, ಬರೆಸಿದವರಿಗೆ ಲಾಭವಾಯಿತು, ವಿಷಯ ಸತ್ತು ಹೋಯಿತು.
ವಿಕ್ರಂ ಸಂಪತ್ ಅವರು ಈ ಕುರಿತು ಇತಿಹಾಸದಲ್ಲಿ ಎಲ್ಲೂ ದಾಖಲಾಗಿಲ್ಲ ಎಂದು ಮೈಸೂರಿನ ಇತಿಹಾಸದಲ್ಲಿ ನನಗೆ ಗೊತ್ತಿಲ್ಲದ್ದು ಏನೂ ಇಲ್ಲವೇ ಇಲ್ಲ ಎನ್ನುವ ಅಧಿಕಾರವಾಣಿಯಲ್ಲಿ ಹೇಳಿದ್ದಾರೆ. ಕನಿಷ್ಠ ನನ್ನ ಓದಿಗೆ ಸಿಕ್ಕಂತೆ ಇಲ್ಲ ಅಂದಿದ್ದರು ನಮ್ರತೆ ಅನ್ನಿಸಿಕೊಂಡಿರೋದು.
ಬಹುಶಃ “ಅಡ್ಡಂಡ ಕಾರ್ಯಪ್ಪ ಆಂಡ್ ಟೀಮ್” ಟಿಪ್ಪು ಅಂತ್ಯದ ಬಗ್ಗೆ ಬರೆದು ಕೈ ಸುಟ್ಟುಕೊಂಡ ಕಾರಣಕ್ಕೋ ಏನೋ, ಇದೇ ವಿಕ್ರಂ ಸಂಪತ್ ಅವರು ಟಿಪ್ಪುವಿನ ಅಂತ್ಯದ ಚಿತ್ರಣವನ್ನು ಬ್ರಿಟಿಷ್ ಇತಿಹಾಸಕಾರರು ಸೃಷ್ಟಿಸಿಕೊಟ್ಟಿರುವ ನರೇಟಿವ್ ಅನ್ನು ಬಿಟ್ಟು ಆಚೀಚೆ ಅಲುಗಾಡಿಲ್ಲ. ಎಷ್ಟರಮಟ್ಟಿಗೆ ಎಂದರೆ, ಟಿಪ್ಪು ಸತ್ತ ಎಂದು ಗೊತ್ತಾದ ತಕ್ಷಣ “ಇನ್ನು ಇಂಡಿಯಾ ನಮ್ಮದೇ” ಎಂದು ಹ್ಯಾರಿಸ್ ಉದ್ಘಾರ ತೆಗೆದ ಎಂದು ಮೊದಲ ಪುಸ್ತಕದಲ್ಲಿ ಬರೆದಿದ್ದಾರೆ. (ನನ್ನ ಓದಿಗೆ ಅವನು ಹಾಗೆ ಹೇಳಿದ ಬಗ್ಗೆ ಬ್ರಿಟಿಷ್ ದಾಖಲೆಗಳಲ್ಲಿ ಸಿಗಲಿಲ್ಲ. ವಿಕ್ರಂ ಅವರಿಗೆ ಎಲ್ಲಿ ಸಿಕ್ಕಿತೋ, ಗೊತ್ತಾದರೆ ನನ್ನ ಅಭಿಪ್ರಾಯವನ್ನು ಬದಲಿಸಿಕೊಳ್ಳಬಹುದು.) ಆದರೆ, ಇದೇ ಉದ್ಘಾರ ಹೊಸ ಪುಸ್ತಕದಲ್ಲಿ ಕಾಣಿಸಿಲ್ಲ. ಹೀಗ್ಯಾಕೆ?
ಇನ್ನು ಟಿಪ್ಪುವಿನ ಸೋಲಿಗೆ, ಸಾವಿಗೆ ಏಕೈಕ ಕಾರಣ ಎಂಬಂತೆ ಚಿತ್ರಿಸಲಾಗಿರುವ “ಮೀರ್ ಸಾದಿಖ್” ನನ್ನು ಮೊದಲ ಪುಸ್ತಕದಲ್ಲಿ “ಶೇಖರ್” ಎಂಬ ಟಿಪ್ಪು ಆಪ್ತ ಕೊಂದ ಎನ್ನುವ ವಿಕ್ರಂ , ಹೊಸ ಪುಸ್ತಕದಲ್ಲಿ ಮಾತ್ರ ಅನಾಮಿಕರಿಂದ “ಮೀರ್ ಸಾದಿಖ್” ಸತ್ತ ಎನ್ನುತ್ತಾರೆ.
ಹಾಗಿದ್ದರೇ, ವಿಕ್ರಂ ಚಿತ್ರಿಸಿರುವಂತೆಯೇ ಟಿಪ್ಪು ಹತನಾದನೇ? ಅಲ್ಲಿ ಬ್ರೀಟಿಷರು-ನಿಜಾಮರನ್ನು ಬಿಟ್ಟರೆ ಮೂರನೇ ಶಕ್ತಿಗಳು ಇರಲಿಲ್ಲವೇ? ಖಂಡಿತ ಇದ್ದರು ಅದಕ್ಕೆ ಬೇಕಾದ ಇತಿಹಾಸದ ದಾಖಲೆಗಳನ್ನು, ಅಂದಿನ ಕಾಲದ ಮರಾಠ-ನಿಜಾಮ-ಬ್ರಿಟೀಷ್ ಸರ್ಕಾರಗಳು ಮೈಸೂರಿನ ಒಡೆಯರ್ ವಂಶವನ್ನು ನಡೆಸಿಕೊಂಡ ರೀತಿಯ ಬಗ್ಗೆ, ‘ದಕ್ಷ-ಸಮರ್ಥ ಆಡಳಿತಗಾರ” ಎಂದು ಬಿಂಬಿಸಲಾಗಿರುವ ದಿವಾನ್ ಪೂರ್ಣಯ್ಯ ಆಂಡ್ ಟೀಮ್ ಮಾಡಿದ್ದೇನು ಇತ್ಯಾದಿ ಅಪ್ರಿಯ ಸತ್ಯಗಳನ್ನು ನನ್ನ ಪುಸ್ತಕ “ಮುಚ್ಚಿಟ್ಟ ಕರ್ನಾಟಕ ಚರಿತ್ರೆ’ಯಲ್ಲಿ ನಾನು ನೀಡಿದ್ದೇನೆ.
ಟಿಪ್ಪುವಿನ ಅಂತ್ಯದ ಕುರಿತ ಗಿಳಿಪಾಠದ ನಡುವೆಯೂ ಬ್ರಿಟಿಷರ ಇತಿಹಾಸದಲ್ಲೇ “Read between the lines” ಮಾಡಿದರೇ ಅನುಮಾನದ ಗೆರೆಗಳು ಖಂಡಿತ ಮೂಡುತ್ತವೆ. ಆದರೆ, ಈಗ ಸತ್ಯ ಯಾರಿಗೆ ಬೇಕಾಗಿದೆ? ತಮ್ಮ ತಮ್ಮ ಅಜೆಂಡಾಗಳು ಪೂರೈಸಿದರೆ ಸಾಕಷ್ಟೇ.
ವಿಕ್ರಂ ಅವರ ಹೊಸ ಪುಸ್ತಕಕ್ಕಾಗಿ ಇಂಗ್ಲೀಷ್-ಹಿಂದಿಯ ಪ್ರಖ್ಯಾತ ಚಾನೆಲುಗಳಲ್ಲೆಲ್ಲಾ ವೇದಿಕೆ ಸಿಕ್ಕಿದೆ. ಅವರ ಹಿಂದೆ ಅಂತಹ ಪ್ರಭಾವಳಿಯಿರುವುದು ಸಂತೋಷವೇ. ಯಾವ ಲೇಖಕನಿಗೂ ಹಾಗೆ ವೇದಿಕೆ ಸಿಗುವುದು ಒಳ್ಳೆಯದೇ. ಪುಸ್ತಕ ಬಿಡುಗಡೆಗೆ ಬಿಜೆಪಿಯ ಸರ್ಕಾರದ ಮಂತ್ರಿಗಳಾದ ಜೈ ಶಂಕರ್, ಸಂಸದ ತೇಜಸ್ವಿ ಸೂರ್ಯ ಎಲ್ಲಾ ಹೋಗಿದ್ದರು ಎಂದು ಮಾಧ್ಯಮಗಳಲ್ಲಿ ಓದಿದ್ದೆ. ಬಿಜೆಪಿಯವರ ಬಗ್ಗೆ ಹೀಗೆ ಬರೆಯಲಾಗಿದೆ ಎನ್ನುವುದು ಪಾಪ ಇವರುಗಳಿಗೆ ಗೊತ್ತಿತ್ತೋ ಇಲ್ಲವೋ?
“ಇತಿಹಾಸದಲ್ಲಿ, ‘ಏನು ಬರೆದರು?’ ಎನ್ನುವುದಕ್ಕಿಂತ ‘ಯಾರು ಬರೆದರು?’ ” ಎನ್ನುವ ಮಾತೊಂದಿದೆ ಎನ್ನುವುದನ್ನು ಲೇಖಕ ರೋಹಿತ್ ಅವರು “ಕಥನ-ಮಥನ” ಪುಸ್ತಕದ ಪೀಠಿಕೆಯಲ್ಲಿ ಉಲ್ಲೇಖಿಸಿದ್ದಾರೆ. ನನ್ನ ಅನುಭವದ ಪ್ರಕಾರ, ಪ್ರಸಕ್ತ ಸನ್ನಿವೇಶಕ್ಕೆ ಇನ್ನಷ್ಟನ್ನು ಸೇರಿಸಿ ಹೀಗೆ ಸೇರಿಸಬಹುದು ಅನ್ನಿಸಿತು. – “ಇತಿಹಾಸದಲ್ಲಿ, ‘ಏನು ಬರೆದರು?’ ಎನ್ನುವುದಕ್ಕಿಂತ ‘ಯಾರು ಬರೆದರು?’ , ಬರೆದವರ ‘ನೇಮ್’ ಏನು , ‘surname’ ಏನು? ಯಾರನ್ನು ಕೇಳಿ ಬರೆದರು?” ಎನ್ನುವುದರ ಮೇಲೆಯೂ ಪುಸ್ತಕದ ಭವಿಷ್ಯವನ್ನು ನಿರ್ಧರಿಸಬಹುದು ಅನ್ನಿಸಿತು. (ಈ ಹೇಳಿಕೆ ಸಾಮಾನ್ಯ ಓದುಗರಿಗೆ ಅನ್ವಯಿಸವುದಿಲ್ಲ, ಅವರಿಗೆ ಏನು ಬರೆದಿದ್ದಾರೆ ಎನ್ನುವುದಷ್ಟೇ ಮುಖ್ಯವೆನಿಸುತ್ತದೆ. ಇದು ಕೇವಲ ಸಾಂಸ್ಥಿಕ ವ್ಯವಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ.)
ಕಡೆಯಲ್ಲಿ, ರಾಜಕೀಯ ಪಕ್ಷಗಳಿರುವುದೇ ರಾಜಕೀಯ ಲಾಭ ಎತ್ತಲು ಬಿಡಿ. ಆದರೆ ಇತಿಹಾಸಕಾರರು ಎನ್ನಿಸಿಕೊಂಡವರು, ಇತಿಹಾಸವನ್ನು ತಿರುಚಲಾಗಿದೆ ಎಂದೆಲ್ಲಾ ಮಾತನಾಡುವವರು ಹೀಗೆ ಬರೆಯುವುದನ್ನು ಹೇಗೆ ಅರ್ಥೈಸಿಕೊಳ್ಳಬೇಕು?
ಯಾರಾದರೂ ಇತಿಹಾಸದ ವಿದ್ಯಾರ್ಥಿಗಳಿದ್ದರೆ, ಈ ಪುಸ್ತಕಗಳನ್ನಿಟ್ಟುಕೊಂಡೇ ಇತಿಹಾಸಕಾರರ ಬಗ್ಗೆ ಪಿಹೆಚ್ಡಿ ಪ್ರಬಂಧ ಬರೆಯಬಹುದು ಅನ್ನಿಸುತ್ತದೆ. ಟಿಪ್ಪು ಕಟ್ಟರ್ ಇಸ್ಲಾಮಿಸ್ಟ್ ಆಗಿದ್ದ ಮತ್ತು ತನ್ನ ನಂಬಿಕೆಯನ್ನು ಜಾರಿಗೊಳಿಸಲು ಏನೇನು ಮಾಡಬೇಕೋ ಅದನ್ನೇ ಮಾಡಿದ. ಕನಿಷ್ಠ, ಟಿಪ್ಪು ಹೀಗೆ, ಅವನನ್ನು ವಿರೋಧಿಸುವ-ಪರವಹಿಸುವವರಂತೆ ಲಾಭ-ನಷ್ಟದ ಆಧಾರದಲ್ಲಿ ತನ್ನ ಧಾರ್ಮಿಕ ನಿಲುವು ಬದಲಿಸುವ ದ್ವಂದ್ವ ನೀತಿಯವನೇನೂ ಆಗಿರಲಿಲ್ಲ.
ಈ ಸತ್ಯ ಹಲವರಿಗೆ ಅಪ್ರಿಯ ಅನ್ನಿಸಬಹುದು. ಅನ್ನಿಸಲಿ. ಕೆಲವೊಮ್ಮೆ ಅನ್ಯಾಯವನ್ನು ನೋಡಿಯೂ ಸುಮ್ಮನಿರಬೇಕಾದ ಸಂದರ್ಭವಿರುತ್ತದೆ. ಕೆಲವೊಮ್ಮೆ ಅನ್ಯಾಯ, ತಾರತಮ್ಯ, ಹಿಪೊಕ್ರೇಸಿಗಳ ಬಗ್ಗೆ ದನಿಯೆತ್ತಲೇಬೇಕಾಗುತ್ತದೆ. ಇದು ಅದೇ ಸಮಯ.
( 1.ವಿಕ್ರಂ ಅವರ ಮೇಲೆ ನನಗೇನೋ ವೈಯಕ್ತಿಕ ಸಮಸ್ಯೆಯಿದೆ ಅಂದುಕೊಳ್ಳುವವರು ಇದ್ದರೆ, ಅಂತವರಿಗಾಗಿ – ನನಗೆ ಅವರ ಪರಿಚಯವಿಲ್ಲ. 2015-16ರಲ್ಲಿ ದೆಹಲಿಯಲ್ಲಿ ನಡೆದ ನ್ಯಾಷನಲ್ ರೈಟರ್ಸ್ ಮೀಟ್ ಅಲ್ಲಿ, ಹೈ ಹಲೋ ಹೇಳಿದ್ದು ನೆನಪಷ್ಟೇ. So, ಈ ಬರಹ ಅವರ ಪುಸ್ತಕದ ವಿಷಯವನ್ನು ಆಧರಿಸಿ ಮಾತ್ರವೇ ಹೊರತು ವ್ಯಕ್ಯಿಯ ಬಗ್ಗೆಯಲ್ಲ.
2.ಈ ಲೇಖನ ಬೇಡ ತೆಗೆಯಿರಿ ಎಂದು ಕಾಲ್ ಬರಬಹುದಾದ್ದರಿಂದ, ಅಂತವರಿಗೆ ಹೇಳ ಬಯಸುವುದು ದಯವಿಟ್ಟು ಹಾಗೆ ಹೇಳಲು ಕಾಲ್ ಮಾಡಬೇಡಿ. ನಾನು ತೆಗೆಯುವುದಿಲ್ಲ. No ಎನ್ನಲು ನಾನು ಹಿಂದೆ ಮುಂದೆ ನೋಡುವುದಿಲ್ಲ ಎನ್ನುವುದು ನನ್ನ ಜೊತೆ ಒಡನಾಡಿದವರಿಗೆ ಗೊತ್ತಿರುತ್ತದೆ.)
ಕನ್ನಡ ಸಾರಸ್ವತ ಲೋಕಕ್ಕೊಂದು ಹೊಸ ಓದು
ಶ್ರೀಪಾದ್ ಭಟ್
ಈಗ ಲೇಖಕರಾದ, ಬ್ಲಾಗರ್ ಆದ ಮಿತ್ರ ರಾಕೇಶ ಶೆಟ್ಟರು ಹೊಸ ಓದನ್ನು ಕೊಟ್ಟಿದ್ದಾರೆ. ಕೃತಿಯ ಹೆಸರು’ ಮುಚ್ಚಿಟ್ಟ ಕರ್ನಾಟಕದ ಚರಿತ್ರೆ’. ಯಾಕೆ ಇದು ಹೊಸ ಓದು ಅಂದರೆ – ಇದು ಇತಿಹಾಸದ ಹೊಸ ಓದು. ಇದುವರೆಗೆ ಶಾಲೆ ಕಲಿತ ನಾವು ಯಾರೂ ಕೇಳಿರದ ಇತಿಹಾಸದ ಸಂಗತಿಗಳು ಇರುವುದರಿಂದ.
ನಮ್ಮಲ್ಲಿನ ಅಂದರೆ ನಮ್ಮ ದೇಶದ ಸಮಸ್ಯೆ ಇರುವುದೇ ಇಲ್ಲಿ- ಇತಿಹಾಸದಲ್ಲಿ. ನಮ್ಮ ದೇಶಕ್ಕೆ ಆಧುನಿಕ ಇತಿಹಾಸ ಅಥವಾ ಚರಿತ್ರೆ ಕೊಟ್ಟವರು ಬ್ರಿಟಿಷರು. ಅದನ್ನು ಹೇಗೆ ನೋಡಬೇಕು, ಯಾವುದು ಇತಿಹಾಸ ಅನಿಸಿಕೊಳ್ಳುತ್ತದೆ. ಅದಕ್ಕೆ ಆಧಾರಗಳು ಯಾವುವು ಎಂಬುದನ್ನೂ ತಿಳಿಸಿದವರೂ ಅವರೇ. ಅದನ್ನೇ ನಾವು ಉರು ಹೊಡೆದು ಮುಂದುವರೆಸಿಕೊಂಡು ಶಿರಸಾವಹಿಸಿ ಪಾಲಿಸಿಕೊಂಡುಬರುತ್ತಿದ್ದೇವೆ. ಅದಕ್ಕೆ ವಿರುದ್ಧವಾದ ಅಥವಾ ಪ್ರತಿಯಾದ ಸಾಲುಗಳನ್ನು ನಾವು ಒಪ್ಪಲು ತಯಾರಿಲ್ಲ ಎಂಬಂತೆ ನಮ್ಮನ್ನು ನಮ್ಮ ಶಾಲಾ ವ್ಯವಸ್ಥೆ ಅಣಿಗೊಳಿಸಿ ಕೃತಾರ್ಥವಾಗಿದೆ.ಆದರೆ ಈಚೆಗೆ ಈ ದೃಷ್ಟಿಕೋನ ಬದಲಾಗುತ್ತಿದೆ. ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆ ಕಾರಣದಿಂದ ಸಾಮಾಜಿಕ ಜಾಲ ತಾಣಗಳ ಪ್ರಾಚುರ್ಯದಿಂದ ಜನರ ವಿವಿಧ ಬಗೆಯ ಅಭಿಪ್ರಾಯಗಳಿಗೆ ವೇದಿಕೆಗಳು ಸಾರ್ವಜನಿಕವಾಗಿ ದೊರೆಯುತ್ತಿದೆ. ಈ ಮೊದಲು ಪರಿಸ್ಥಿತಿ ಹೀಗೆ ಇರಲಿಲ್ಲ. ಸಾರ್ವಜನಿಕ ವೇದಿಕೆಯ ಜೊತೆಗೆ ಅಲ್ಲಿ ಹೇಳಬೇಕಾದ ವಿಷಯಗಳಿಗೂ ನಿರ್ದಿಷ್ಟ ದಿಕ್ಕು ದೆಸೆ, ನಿಯಂತ್ರಣ ಇರುತ್ತಿತ್ತು. ಈ ನಿಯಂತ್ರಣವನ್ನು ಕೂಡ ಯಾರು ಹೇಗೆ ಎಂಬುದೂ ನಿರ್ಧಾರವಾಗಿರುತ್ತಿತ್ತು. ಅಭಿಪ್ರಾಯ ಸ್ವಾತಂತ್ರ್ಯ ಮುಕ್ತತೆಗಳು ಮಾತಲ್ಲಿ ಮಾತ್ರ ಇತ್ತು ಅಂದರೂ ತಪ್ಪಿಲ್ಲ. ಆದರೆ ಇಂದಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ನಿಯಂತ್ರಿತ ಮಾಧ್ಯಮಗಳು ಮೂಲೆ ಸೇರಿವೆ. ಸಾಮಾಜಿಕ ಮಾಧ್ಯಮ ಮುಕ್ತತೆ ಕೊಟ್ಟಿದೆ. ಹೀಗಾಗಿ ಜನರ ಅಭಿಪ್ರಾಯಕ್ಕೆ ಒಂದಲ್ಲ ಒಂದು ವೇದಿಕೆ ಸಾರ್ವಜನಿಕವಾಗಿ ಲಭಿಸಿ ಮುಕ್ತ ಚರ್ಚೆ ಆಗುತ್ತದೆ. ಲೆಕ್ಕವಿಲ್ಲದಷ್ಟು ಜನ ತಮ್ಮ ಮಾತನ್ನು ಹೇಳಿಕೊಳ್ಳುತ್ತಾರೆ. ಇದರ ಪರಿಣಾಮವಾಗಿ ಹಿಂದೆ ಹತ್ತಿಕ್ಕಿದ್ದ ಮಾತು, ವಿಷಯಗಳೆಲ್ಲ ಎಲ್ಲ ಕ್ಷೇತ್ರಗಳಿಂದಲೂ ಹೊರಬರುತ್ತಿವೆ. ನಮ್ಮೆಲ್ಲರನ್ನೂ ಬೇಗ ಪ್ರಭಾವಿಸುವ ಹಾಗೂ ಕಾಡುವ ಇತಿಹಾಸ ಇಂಥ ವಿಷಯಗಳಲ್ಲಿ ಒಂದು. ಬೇರೆ ಬೇರೆ ಈ ಮೊದಲು ಚರಿತ್ರೆ ಅಥವಾ ಇತಿಹಾಸದ ಬಗ್ಗೆ ಅದರ ಪಂಡಿತರು ಅನಿಸಿಕೊಂಡವರು ಅದರಲ್ಲೂ ಎಲ್ಲವನ್ನೂ ತಮ್ಮ ನಿಲುವು, ಸಿದ್ಧಾಂತಗಳ ಮೂಲಕ ಪ್ರತಿಪಾದಿಸುತ್ತಿದ್ದ ರೋಮಿಲಾಥಾಪರ್ ಅವರಂಥವರು ಮಾತ್ರ ಮಾತನಾಡಬಹುದಿತ್ತು. ಆದರೆ ಇಂದು ಇತಿಹಾಸದ ಬಗ್ಗೆ ಸೂಕ್ತ ದಾಖಲೆಗಳಿದ್ದರೆ ಯಾರು ಬೇಕಾದರೂ ಮಾತನಾಡಬಹುದು. ಏಕೆಂದರೆ ಇಂದು ಯಾರು ಮಾತನಾಡುತ್ತಾರೆಂಬುದಕ್ಕಿಂತಲೂ ಏನು ಮಾತನಾಡುತ್ತಿದ್ದಾರೆಂಬುದು ಮುಖ್ಯವಾಗುತ್ತದೆ. ಆದ್ದರಿಂದಲೇ ಇತಿಹಾಸದಂಥ ವಿಷಯದ ಬಗ್ಗೆ ಇಂದು ಹೊಸ ತಲೆಮಾರಿನ ವಿಕ್ರಂ ಸಂಪತ್, ಅಭಿಜಿತ್ ಚಾವ್ಡಾರಂಥ ಹೊಸ ಯುವ ವಿದ್ವಾಂಸರು ಕಾಣಿಸಿಕೊಳ್ಳಲು ಸಾಧ್ಯವಾಗಿದೆ. ಜೊತೆಗೆ ನಮ್ಮ ಯಾವುದೇ ವಿಷಯದ ಬಗ್ಗೆ ಹತ್ತಾರು ಮೂಲಗಳಿಂದ ವಿಷಯ ಹೊರತೆಗೆದು ಚರ್ಚಿಸಬಹುದಾಗಿದೆ. ಇಲ್ಲಿ ರಾಕೇಶ್ ಶೆಟ್ಟರು ಕೂಡ ಇಂಥ ಯತ್ನವನ್ನು ಮಾಡಿದ್ದಾರೆ. ಅವರ ವೃತ್ತಿ ತಂತ್ರಜ್ಞಾನ, ಆಸಕ್ತಿ ಸಾಹಿತ್ಯ, ಇತಿಹಾಸ, ಸಂಸ್ಕೃತಿ ಇತ್ಯಾದಿ. ತಮ್ಮ ಆಸಕ್ತಿಯನ್ನು ಈ ಕೃತಿಯಲ್ಲಿ ಸಾಧಿಸಿಕೊಳ್ಳಲು ಏನೆಲ್ಲ ಶ್ರಮಪಡಬೇಕಾಯಿತು ಎಂಬುದನ್ನು ಲೇಖಕರು ಇದರಲ್ಲಿ ದಾಖಲಿಸಿದ್ದಾರೆ. ತಾವು ಯಾವ ಕಾರಣಕ್ಕೆ ಈ ಕೆಲಸಕ್ಕೆ ಕೈ ಹಾಕಬೇಕಾಯಿತು ಎಂಬುದನ್ನೂ ಹೇಳಿದ್ದಾರೆ. ಅಷ್ಟೇ ನಮ್ರವಾಗಿ ಇದು ತಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯೇ ವಿನಾ ಇದೇ ಸಂಪೂರ್ಣ ಸತ್ಯ ಎಂದಲ್ಲವೆಂದು ಹೇಳಿದ್ದಾರೆ.
ಹೌದು. ನಿಸರ್ಗದಲ್ಲಿ ಎಲ್ಲವೂ ಬದಲಾಗುವಂತೆ ನಮ್ಮ ದೃಷ್ಟಿಯೂ ಬದಲಾಗುತ್ತದೆ. ಇತಿಹಾಸದ ಬಗ್ಗೆ ಇಂದು ಆಗಿರುವುದೂ ಅದೇ.ನಮಗೆ ಪಾಶ್ಚಾತ್ಯರು ಹೇಳಿಕೊಟ್ಟ ಇತಿಹಾಸ ಕಾಲಿಟ್ಟ ಕಡೆಯಲ್ಲೆಲ್ಲ ಘರ್ಷಣೆ ಆಗುತ್ತದೆ, ಶಾಂತಿ ನೆಲೆಸುವುದು ಕಷ್ಟವಾಗುತ್ತದೆ. ದಾಖಲೆಗಳು ದೊರೆತಂತೆ ಇತಿಹಾಸ ಮಾತಾಡುತ್ತಲೇ ಹೋಗುತ್ತದೆ. ಅಲ್ಲಿ ಮೌನ ಇರುವುದಿಲ್ಲ. ತಿಕ್ಕಾಟ ನಡೆಯುತ್ತಲೇ ಇರುತ್ತದೆ. ಬ್ರಿಟಿಷ್ ಪೂರ್ವದಲ್ಲಿ ನಮ್ಮ ಸಮಾಜದಲ್ಲಿ ಗತ ಇತ್ತು. ಅದು ಕಾಲಾತೀತವಾಗಿದ್ದು ಅದನ್ನು ನಾವು ಜೀವಿಸುತ್ತಿದ್ದೆವು. ಅದರಲ್ಲಿ ನಂಬಿಕೆ ಮತ್ತು ಶ್ರದ್ಧೆಗಳಿದ್ದವು, ಆಚರಣೆ, ಸಂಪ್ರದಾಯಗಳನ್ನು ಅದು ಬೆಳೆಸಿತ್ತು. ಆದರೆ ಪಾಶ್ಚಾತ್ಯ ಹಿಸ್ಟರಿಯ ಚಿಂತನೆ ಹಾಗೂ ದೃಷ್ಟಿಕೋನ ಬಂದಮೇಲೆ ಎಲ್ಲವನ್ನೂ ಪ್ರಶ್ನಿಸುವ, ಶ್ರದ್ಧೆಯನ್ನು ಅಲುಗಾಡಿಸುವ ಕೆಲಸ ವ್ಯವಸ್ಥಿತವಾಗಿ ನಡೆಯತೊಡಗಿತು. ಇದರಿಂದ ಸಾಮಾಜಿಕ ಶಾಂತಿ ಮತ್ತು ನೆಮ್ಮದಿಗಳು ಇಲ್ಲವಾದವು. ಪಾಶದಚಾತ್ಯ ಹಿಸ್ಟರಿಯ ದೃಷ್ಟಿ ನಮ್ಮಲ್ಲಿ ನುಸುಳುವವರೆಗೂ ರಾಮಾಯಣ ಮತ್ತು ಮಹಾಭಾರತಗಳಂಥ ಗ್ರಂಥಗಳ ಯಾವ ವಿವರಗೂ ವಿವಾದಕ್ಕೆ ಆಸ್ಪದ ಮಾಡಿರಲಿಲ್ಲ. ಆದರೆ ಇಂದು ಅವುಗಳ ಸಣ್ಣಪುಟ್ಟ ವಿಚಾರಗಳೂ ಗದ್ದಲಕ್ಕೆ ಕಾರಣವಾಗುತ್ತಿವೆ. ಅದು ರಾಮಸೇತು, ಮಹಾಭಾರತ ಯುದ್ಧ ನಡೆದಿದ್ದು ನಿಜವಾ ಇತ್ಯಾದಿ ಆಗಿರಬೇಕಿಲ್ಲ. ಗಾಂಧಾರ, ಥುರಾ ಇವೆಲ್ಲ ಇಂದು ಎಲ್ಲಿವೆ ಕುರುಕ್ಷೇತ್ರ ಯುದ್ಧದಲ್ಲಿ ಅಷ್ಟುಜನ ಹೊಡೆದಾಡುವಷ್ಟು ಜಾಗ ಎಲ್ಲಿತ್ತು ಇತ್ಯಾದಿ ಏನು ಬೇಕಾದರೂ ಆಗಬಹುದು. ಪಾಶ್ಚಾತ್ಯ ಹಿಸ್ಟರಿ ದೃಷ್ಟಿ ನಮ್ಮ ಶ್ರದ್ಧೆ ಮತ್ತು ನಂಬಿಕೆಗಳನ್ನು ಮತ್ತೆ ಮತ್ತೆ ಘಾಸಿಗೊಳಿಸುತ್ತಿದೆ.ಅದು ಅಯೋಧ್ಯೆ ಆಗಲಿ, ಆಗ್ರಾ ಆಗಲಿ, ಯಾವುದೇ ಜಾಗವಾಗಲಿ, ವ್ಯಕ್ತಿ ಆಗಲಿ ಇವೆಲ್ಲಕ್ಕೂ ಹಿಸ್ಟರಿಯಲ್ಲಿ ಎರಡೂ ಕಡೆ ಮಾತನಾಡಬಹುದಾದ ದಾಖಲೆಗಳು ದೊರೆಯುತ್ತವೆ.

ನಮ್ಮ ರಾಜ್ಯದಲ್ಲಿ ಈಚೆಗೆ ಇಂಥ ದೃಷ್ಟಿಯಿಂದ ಹೆಚ್ಚು ಚರ್ಚೆಗೆ ಒಳಗಾದ ವ್ಯಕ್ತಿ ಅಂದರೆ ಅದು ಟಿಪ್ಪು ಸುಲ್ತಾನ. ಒಂದಿಷ್ಟು ಜನ ಆ ಕಡೆ ನಿಂತರೆ ಮತ್ತಷ್ಟು ಜನ ಈ ಕಡೆ ನಿಂತು ಹೊಡೆದಾಡುತ್ತರೆ, ಇಬ್ಬರ ಬಳಿ ಇರುವ ಅಸ್ತ್ರ ಒಂದೇ. ಅದು ಹಿಸ್ಟರಿ ಕೇಳುವ ದಾಖಲೆ. ಸಾಲದ್ದಕ್ಕೆ ಆಧುನಿಕ ಹಿಸ್ಟರಿ ಒಂದು ನಿರ್ದಿಷ್ಟ ವಾದಕ್ಕೆ ಬದ್ಧವಾಗಿ ಹಿಸ್ಟರಿ ಅಂದರೆ ಇಷ್ಟೇ ಹೇಳಬೇಕು ಎಂಬುದನ್ನೂ ಕಲಿಸಿ ತಾನು ಪ್ರತಿಪಾದಿಸುವ ದಾಖಲೆ ಆಧಾರಿತ ಸತ್ಯದ ಮೇಲೆ ತಾನೇ ಕಲ್ಲು ಹಾಕಿಕೊಂಡಿದೆ. ರಾಕೇಶ್ ಶೆಟ್ಟರು ಈ ಕೃತಿಯಲ್ಲಿ ಆಧುನಿಕ ಹಿಸ್ಟರಿಯ ದೃಷ್ಟಿಯನ್ನೇ ಬಳಸಿಕೊಂಡು ಇದುವರೆಗೆ ಅದು ಏನೆಲ್ಲವನ್ನು ಹೇಳಿದೆ, ಅದರ ದೃಷ್ಟಿಯಲ್ಲಿ ಎಲ್ಲೆಲ್ಲಿ ಏನು ಇರಬೇಕಿತ್ತು ಎಂದು ಸಾಧಾರ ತೋರಿಸಿದ್ದಾರೆ. ನಿಜ. ಆಧುನಿಕ ಹಿಸ್ಟರಿ ಕೆಲವು ಸಂಗತಿಗಳನ್ನು ಉದ್ದೇಶಪೂರ್ವಕ ಪಕ್ಕಕ್ಕೆ ಸರಿಸುತ್ತದೆ. ಮೈಸೂರು ಅರಸು ಮನೆತನ ಹಾಗೂ ಟಿಪ್ಪೂ ಕುರಿತ ವಿಷಯಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಂತೆ ರಾಕೇಶ್ ಶೆಟ್ಟರು ಅದೇ ಹಿಸ್ಟರಿಯ ಆಯುಧಗಳನ್ನು ಬಳಸಿ ಪ್ರತಿ ದಾಖಲೆ ಕೊಡುತ್ತಾರೆ, ಚರ್ಚೆ ಅಥವಾ ವಿವಾದವನ್ನು ಜೀವಂತ ಇಡುತ್ತಾರೆ. ಅಲ್ಲಿಗೆ ಆಧುನಿಕ ಹಿಸ್ಟರಿಯ ಒಂದು ದೃಷ್ಟಿ ಸಾಧಿತವಾಯಿತು.
ಆಧುನಿಕ ಶಾಲೆ ಅಥವಾ ಉನ್ನತ ಶಿಕ್ಷಣ ಪಡೆದ ನಮಗೆ ಯಾರಿಗೂ ಮೈಸೂರು ರಾಜಮನೆತನ ಹಾಗೂ ಟಿಪ್ಪು ಕುರಿತು ಮಾತನಾಡುವಾಗ ಅಥವಾ ಓದುವಾಗ ಸೀತಾದಂಡು ಎಂಬ ಹೆಸರು ಕೇಳಿದ ಅಥವಾ ಓದಿದ ನೆನಪೇ ಇರುವುದಿಲ್ಲ. ಹೌದು, ಟಿಪ್ಪು ಬಗ್ಗೆ ನಮ್ಮ ನಡುವೆ ಪ್ರತಿವರ್ಷ ಸಾಕಷ್ಟು ಚರ್ಚೆ ಆಗುತ್ತದೆ. ಆದರೆ ಇಲ್ಲಿ ಇದೇ ಮೊದಲ ಬಾರಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಸೀತಾದಂಡಿನ ಪ್ರಸ್ತಾಪ ಬರುತ್ತದೆ. ಟಿಪ್ಪು ಕುರಿತು ಜನಪದರಲ್ಲಿ ಸಾಕಷ್ಟು ಸಂಗತಿಗಳು ಇವೆಯಾದರೂ ಆಧುನಿಕ ಹಿಸ್ಟರಿ ಅವನ್ನೆಲ್ಲ ಮಾನ್ಯ ಮಾಡುವುದಿಲ್ಲ. ನಮ್ಮ ಮೌಖಿಕ ಪರಂಪರೆಯಲ್ಲಿ ಅದಕ್ಕೆ ಸಾಕಷ್ಟು ಬೆಲೆ ಇದೆ. ಏಕೆಂದರೆ ಅದು ನಮ್ಮ ಗತ. ಬ್ರಿಟಿಷ್ ಪೂರ್ವದ ನಮ್ಮ ಚರಿತ್ರೆ. ಇದನ್ನು ಆಧಾರವಾಗಿಟ್ಟುಕೊಂಡು ಜನಪದ ತಜ್ಞ ಹನೂರು ಕೃಷ್ಣ ಮೂರ್ತಿಯವರ ಅಜ್ಞಾತನೊಬ್ಬನ ಆತ್ಮ ಚರಿತ್ರೆ ಎಂಬ ಕಾದಂಬರಿಯನ್ನೂ ರಚಿಸಿದ್ದಾರೆ. ಅದು ಆಧುನಿಕ ಹಿಸ್ಟರಿ ಆಧರಿಸಿದ್ದಲ್ಲ. ಮೌಖಿಕ ಪರಂಪರೆ ಆಧರಿಸಿದ್ದು. ಜನಸಾಮಾನ್ಯರಿಗೆ ಇದು ಹಿಡಿಸುತ್ತದೆ, ಆಪ್ತವಾಗುತ್ತದೆ, ಹಿಸ್ಟರಿಗೆ ಅಲ್ಲ. ಈ ಕೃತಿಯಲ್ಲಿ ರಾಕೇಶರು ದಾಖಲಿಸುವ ಬಹುತೇಕ ಸಂಗತಿಗಳು ಹಾಗೂ ತಿರುಮಲರಾವ್ ಮತ್ತು ನಾರಾಯಣರಾವ್, ಉರಿಗೌಡ, ಹುಲಿಗೌಡರಂಥ ಹೆಸರುಗಳು ನಮಗೆ ತೀರಾ ಅಪರಿಚಿತವಾದವು. ಇದುವರೆಗೆ ಒಂದೇ ಒಂದು ರಸ್ತೆಗೂ ಅವರ ಹೆಸರು ಇಡದಂತೆ ಆಧುನಿಕ ಹಿಸ್ಟರಿ ನೋಡಿಕೊಂಡಿದೆ.
ಪ್ರಾಥಮಿಕ ಶಾಲಾ ಪಠ್ಯದಿಂದ ಹಿಡಿದು ಉನ್ನತ ಶಿಕ್ಷಣ ಪಠ್ಯದವರೆಗೆ ಯಾರದು ಯಾವುದನ್ನು ಬೋಧಿಸಬೇಕು ಎಂಬುದನ್ನು ತೀರ್ಮಾನಿಸುವ ಶಕ್ತಿಗಳು ಲಾಬಿಗಳು ಪಾಶ್ಚಾತ್ಯ ಚಿಂತನೆಯ ಪ್ರಭಾವದಲ್ಲಿ ಮುಳುಗಿಹೋಗಿವೆ. ಯಾವುದೇ ವಿಷಯದ ಪಠ್ಯ ಸಿದ್ಧಾಂತ ಬೋಧೊಸುತ್ತದೆಯೇ ವಿನಾ ಸಾಹಿತ್ಯ ಪಠ್ಯ ಸಾಹಿತ್ಯವನ್ನಾಗಲಿ, ಇತಿಹಾಸದ ಪಠ್ಯ ಚರಿತ್ರೆಯನ್ನಾಗಲೀ ಮಕ್ಕಳಿಗೆ ಕಲಿಸುವ ಬದಲು ಒಂದು ನಿರ್ದಿಷ್ಟ ಚಿಂತನೆಗೆ ಸದಸ್ಯರನ್ನು ಸೃಷ್ಟಿಸಿಕೊಡುತ್ತದೆ. ಭಾಷೆಯ ಪಠ್ಯ ಭಾಷೆಯನ್ನು ಎಲ್ಲಿಂದ ಹೇಗೆ ಕಲಿಯಬೇಕು ಅನ್ನುವುದಕ್ಕಿಂತಲೂ ಭಾಷಿಕ ರಾಜಕಾರಣ ಹಾಗೂ ಅನ್ಯ ಭಾಷೆಗಳ ವಿರುದ್ಧ ಎತ್ತಿಕಟ್ಟುತ್ತದೆ. ಹಾಗಾಗಿ ನಮ್ಮ ಸಂಪೂರ್ಣ ಶಿಕ್ಷಣ ವ್ಯವಸ್ಥೆ ಮಕ್ಕಳಿಗೆ ಏನನ್ನು ಕಲಿಸಬೇಕಿತ್ತೋ ಅದನ್ನು ಬಿಟ್ಟು ಬೇರೆಲ್ಲವನ್ನೂ ಮಾಡಲು ಕಲಿಸುತ್ತದೆ. ಹೊರತಾಗಿ ಯಾವುದಾದರೂ ವಿಷಯದ ಜ್ಞಾನ ಬೇಕು ಅನಿಸಿದರೆ ಸ್ವಂತ ಪರಿಶ್ರಮ ಅಗತ್ಯವಾಗುತ್ತದೆ. ಅಂಥ ಅಗತ್ಯವನ್ನು ಈ ಕೃತಿ ಪೂರೈಸಲು ಶ್ರಮಿಸುತ್ತದೆ.
ಹಾಗೆ ನೋಡಿದರೆ, ಮೈಸೂರನ್ನು ನೆಪವಾಗಿಟ್ಟುಕೊಂಡು ರಾಕೇಶರು ಮಾಡಿದ ಇತಿಹಾಸದ ಈ ಕೆಲಸ ನಮ್ಮ ದೇಶದ ಹಳ್ಳಿಯ ಇತಿಹಾಸದ ವಿಷಯದಲ್ಲೂ ನಡೆದು ಹೊಸದಾಗಿ ಗ್ರಾಮ ಚರಿತ್ರೆಗಳನ್ನು ರೂಪಿಸುವ ದಂಡು ಸಿದ್ಧವಾಗಬೇಕಿದೆ. ಆಗ ಮಾತ್ರ ಪಾಶ್ಚಾತ್ಯ ರೂಪಿತ ಇತಿಹಾಸದ ಬದಲಾಗಿ ನಮಗೆ ನಮ್ಮ ಗತದ ಚಿತ್ರಣ ಲಭಿಸಲು ಸಾಧ್ಯ. ಇಂಥ ಕೆಲಸ ಎಲ್ಲ ಕಡೆ ಶುರುವಾಗಲಿ.
ಇದು ನೇರ ಮಾರಾಟದಲ್ಲಿ ಮಾತ್ರವಲ್ಲದೇ ಆನ್ ಲೈನ್ ನಲ್ಲೂ ಲಭ್ಯ ಅನ್ನುವುದು ಖುಷಿಯ ಸಂಗತಿ. ಬಹುತೇಕ ಪುಸ್ತಕಗಳಂತೆ ಇದನ್ನು ಸಾಧ್ಯವಾದಷ್ಟು ಶಕ್ತಿ ಬಳಸಿ ಆದಷ್ಟು ದೂರ ಎಸೆಯುವಂಥದ್ದಲ್ಲ, ಎತ್ತಿಟ್ಟುಕೊಂಡು ಮತ್ತೆ ಮತ್ತೆ ಗಮನಿಸಬೇಕಾದ್ದು. ಇದರಿಂದ ನಮ್ಮ ಸಾಂಪ್ರದಾಯಿಕ ಜ್ಞಾನಭಂಡಾರಕ್ಕೆ ಮಾನ್ಯತೆ ದೊರೆಯುತ್ತದೆ.
ಕೃತಿ ವಿವರ: ಮುಚ್ಚಿಟ್ಟ ಕರ್ನಾಟಕ ಚರಿತ್ರೆ,
ಲೇ: ರಾಕೇಶ್ ಶೆಟ್ಟಿ,
ಪ್ರಕಾಶಕರು – ನಿಲುಮೆ ಪ್ರಕಾಶನ, ಬೆಂಗಳೂರು,
ಬೆಲೆ – ರೂ 350.
ಪುಟಗಳು-372
#ಮುಚ್ಚಿಟ್ಟಕರ್ನಾಟಕಚರಿತ್ರೆ #ರಾಕೇಶ್ ಶೆಟ್ಟಿ
– ಪುಸ್ತಕ, ಈ ಅಂಗಡಿಗಳಲ್ಲಿ ಲಭ್ಯವಿದೆ. (ದೂರದ ಊರಿನವರು ಪೋಸ್ಟ್ ಮೂಲಕ ತರಿಸಬಹುದು. ವಿವರ ಕೆಳಗಿನ ಚಿತ್ರದಲ್ಲಿದೆ)
ಬೆಂಗಳೂರು :
ರಾಷ್ಟ್ರೋತ್ಥಾನ
ನವಕರ್ನಾಟಕ
ಅಯೋಧ್ಯಾ
ದಾವಣಗೆರೆ :
ಜ್ಞಾನ ವಿಕಾಸ ಸಾಹಿತ್ಯ

ಟಿಪ್ಪುವಿನ ಮುಚ್ಚಿಟ್ಟ ಅಸಲಿ ಕಥೆಯನ್ನು ಬಿಚ್ಚಿಟ್ಟ ನಿಲುಮೆ ಪ್ರಕಾಶನದ ಹೊಸ ಪುಸ್ತಕ “ಮುಚ್ಚಿಟ್ಟಕರ್ನಾಟಕಚರಿತ್ರೆ”
– ಪುರುಷೋತ್ತಮ ಸಾಲಿಯಾನ್
ಅಸಲಿ ಚರಿತ್ರೆಯನ್ನು ಚಾಲ್ತಿಗೆ ತರುವ ಭಾಗವಾಗಿ ಹಲವಾರು ಪುಸ್ತಕಗಳ ಅಧ್ಯಯನದ ಜೊತೆಗೆ, ಕ್ಷೇತ್ರ ಕಾರ್ಯವನ್ನೂ ಕೈಗೊಂಡು ಬರೆದಿರುವ ಈ ಪುಸ್ತಕದಲ್ಲಿ ಮನಸ್ಸಿಗೆ ಮುಟ್ಟುವಂತೆ ಅಕ್ಷರಗಳು ಅಚ್ಚೊತ್ತಿದೆ.
ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಎಂಬ ನಾಣ್ಣುಡಿ ಈ ಪುಸ್ತಕದಲ್ಲಿ ಮತ್ತೆ ರುಜುವಾತಗಿದೆ. ಒಂದು ಕಡೆ ಟಿಪ್ಪು ಹೈದರಾಲಿ ಜತೆಗೆ ಸೇರ್ಕೊಂಡ ಪೂರ್ಣಯ್ಯ ಇವರೆಲ್ಲರೂ ಸೇರಿ ಮೈಸೂರು ಸಂಸ್ಥಾನ ಮುಗಿಸಬೇಕೆಂಬ ಆಸೆಗೆ ಬಿದ್ದಾಗಲೇ ನೋಡಿ ರಾಣಿಯಾಗಿದ್ದವಳು ಆ ಮೂವರ ಪಾಲಿಗೆ ಮಾರಿಯಾಗಿ ಬಿಟ್ಟರು.
ಅದ್ಭುತವಾಗಿ ಅಕ್ಷರಗಳನ್ನು ಪೋಣಿಸಿ ಹೊರಬಂದಿರುವ ಕರ್ನಾಟಕದ ಮುಚ್ಚಿಟ್ಟ ಚರಿತ್ರೆ ಸದ್ಯ ಎರಡನೇ ಮುದ್ರಣಕ್ಕೆ ಅಣಿಯಾಗಿದೆ.
ನಮ್ಮದು ಶಕ್ತಿ ಆರಾಧಕರ ದೇಶ. ಮಹಾರಾಣಿಯವರ ಮೂಲಕ ಆ ಶಕ್ತಿ ಇಡೀ ಮೈಸೂರು ರಾಜ್ಯವನ್ನು ಉಳಿಸಿದ ಅಸಲಿ ಕಥೆಯನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಅದರ ಜತೆಗೆ ಅರಮನೆಯ ದಿವಾನರಾಗಿದ್ದ ಪೂರ್ಣಯ್ಯ ಮಾಡಿದ್ದ ಕುತಂತ್ರ ಹಾಗೂ ಮೋಸದಾಟವನ್ನು ಕೂಡ ಉಲ್ಲೇಖಿಸಲಾಗಿದೆ.
ಒಬ್ಬ ಒಡೆಯ(ಅರಸ)ನಾಗಬೇಕಾದ ವ್ಯಕ್ತಿ, ಶ್ರೀರಂಗಪಟ್ಟಣ ರಂಗನಾಥಸ್ವಾಮಿ ದೇಗುಲದ ಬದಿಯಲ್ಲಿರುವ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಗುಟ್ಟಾಗಿ ಹುಟ್ಟಿದ !
ಯಾಕೇ ಹುಟ್ಟಿದ? ಗುಟ್ಟಾಗಿ ಕೃಷ್ಣ ದೇವಾಲಯದಲ್ಲಿ ಜನಿಸಲು ಕಾರಣ ಏನು ಎಂಬುದನ್ನು ಸ್ಪಷ್ಟವಾಗಿ ಬರೆದಿದ್ದಾರೆ.
ಬಸಿರಾದ ಹೆಣ್ಣು ಮಗಳೊಬ್ಬಳು ತಾಯ್ತನ ಪಡೆಯಲು ಎಷ್ಟು ಕಷ್ಟ ಪಡುತ್ತಾಳೆ, ಮಗುವನ್ನು ಉಳಿಸಲು ಪಟ್ಟ ಹರಸಾಹ ಅಂದರೆ, ಮುಮ್ಮಡಿಯ ಜನನಕ್ಕಾಗಿ ಪಟ್ಟ ಕಷ್ಟ, ಟಿಪ್ಪು ಮಾಡಿದ ಅನ್ಯಾಯ ಕಣ್ಣಮುಂದೆ ಹಾಗೇಯೆ ಹಾದುಹೋಗಿದೆ “#ಮುಚ್ಚಿಟ್ಟಕರ್ನಾಟಕಚರಿತ್ರೆ” ಪುಸ್ತಕದಲ್ಲಿ.
ನಾವು ನೀವುಗಳು ಇವತ್ತು ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕೈ ಮುಗಿಯುವ ಚಾಮುಂಡಿ ವಿಗ್ರಹ ಏನಿದೆ ನೋಡಿ ಅದನ್ನ ಮತಾಂಧರಿಂದ ಉಳಿಸಲು ಪಟ್ಟ ಶ್ರಮಕ್ಕಿಂತಲೂ ಯುಕ್ತಿ ಪ್ರದರ್ಶಸಿದ ಬಗ್ಗೆಯೂ ಕೂಲಂಕಷವಾಗಿ ಅಧ್ಯಯನ ಮಾಡಿ ಪುಸ್ತಕದ ಲೇಖಕ #ರಾಕೇಶ್ ಬರೆದಿದ್ದಾರೆ.

ಒಂದು ವ್ಯಕ್ತಿಗೆ ಶಿಕ್ಷಣ ಸಿಕ್ಕರೆ ಆತ ಏನು ಬೇಕಾದರೂ ಮಾಡಬಲ್ಲ ರಾಜನಾದರೂ ಸರಿ ಕೂಲಿಯಾದರೂ ಸರಿ. ಆದರೆ, ದಿವಾನ ಪೂರ್ಣಯ್ಯ ಮುಮ್ಮಡಿಯವರಿಗೆ ಶಿಕ್ಷಣ ಕೊಡುವಲ್ಲಿ ಮಾಡಿದ ನಾಟಕ ಮತ್ತು ಅದರ ಹಿಂದಿನ ಅಸಲಿ ಕಥೆ ಇರುವುದು ಈ ಪುಸ್ತಕದಲ್ಲಿ ಮಾತ್ರ ಅನಿಸುತ್ತದೆ.
ಸ್ವಾರ್ಥದ ಈ ಪ್ರಪಂಚ ಜಾತಿಯ ಹಿಂದೆ ಓಡುತ್ತಿದೆ. ಅದರಂತೆಯೇ ಪೂರ್ಣಯ್ಯನು ಅದನ್ನೇ ಮಾಡಿದ, ದಿವಾನ ಹುದ್ದೆ ಆನುವಂಶಿಕವಾಗಿಯೇ ಉಳಿಯಬೇಕೆಂಬ ಆಸೆಯಿಂದ ಆಸೆ ಪಟ್ಟಿರಬಹುದೇ ಮತ್ತು ಆತನೂ 43 ಲಕ್ಷ ರೂಪಾಯಿಗಳ ಲೆಕ್ಕಾಚಾರದಲ್ಲಿ ಎಡವಿದ್ದಾನೇಯೇ ಎಂಬುದು ಕೂಡ ಇಲ್ಲಿ ಪ್ರಮುಖವಾಗುತ್ತೆ ಅದೂ ದಾಖಲೆ ಸಮೇತವಾಗಿ ಮುದ್ರಣವಾಗಿದೆ.
ಟಿಪ್ಪುವನ್ನು ವಧೆ ಮಾಡಲು ಸೀತಾ ದಂಡು ಹುಟ್ಟಿಕೊಂಡಿತೆ ಅಥವಾ ಈ ದಂಡಿನ ಹಿಂದೆ ರೋಚಕವಾದ ಕಥಾ ಸಂಕಲನ ಯಾವುದಿದೆ? ಸೀತಾ ದಂಡು ಎಂಬ ಹೆಸರು ಹುಟ್ಟಲು ಮೂಲ ಕಾರಣವಾದರೂ ಯಾವುದು? ದಂಡು ನಿರ್ವಹಿಸುತ್ತಿದ್ದ ಕೆಲಸವಾದರೂ ಏನು? ಇರ್ವರು ಗೌಡರ ಟೆಕ್ನಿಕ್ ಟಿಪ್ಪುವಿನ ವಧೆಗೆ ಕಾರಣವಾಗಿರಬಹುದೇ ಅಥವಾ ಬ್ರಿಟಿಷರೇ ಕೊಂದರೇ? ಅಲ್ಲದೆ ಈ ದಂಡಿಗೆ ತರಬೇತಿ ನೀಡಲು ಬಂದಿರುವ ಸಿಖ್ಖ್ ಕುಟುಂಬಗಳು ಅಥವಾ ಸೈನ್ಯಗಳು ಮುಂದೆ ಏನಾದವು? ಎಂಬ ಊಹಾಪೋಹಕ್ಕೆ ಈ ಪುಸ್ತಕದಲ್ಲಿ ತೆರೆ ಎಳೆಯಾಲಾಗಿದೆಂದರು ತಪ್ಪಾಗದು.
ಟಿಪ್ಪುವಿನ ಮನಸ್ಥಿತಿ ಬಗ್ಗೆ ಜೊಲ್ಲು ಸುರಿಸಿಕೊಂಡು ಪರವಾದ ಮಂಡಿಸುತ್ತಿರುವ ಬುದ್ದಿ ಜೀವಿಗಳ ಮುಖಕ್ಕೆ ಕರಿಮಸಿ ಬಳಿದಂತೆ ಶ್ರೀರಂಗಪಟ್ಟಣದ ಹನುಮಂತ ದೇವಸ್ಥಾನ ಮಸೀದಿಯಾಗಿ ಪರಿವರ್ತನೆಯಾದ ಕುರಿತು ಅತ್ಯಂತ ಸೂಕ್ಷ್ಮವಾಗಿ ಲೇಖಕ #ರಾಕೇಶ್ ಶೆಟ್ಟಿ ಅಕ್ಷರಗಳನ್ನು ಪೋಣಿಸಿ, ಈ ಪುಸ್ತಕದಲ್ಲಿ ಬರೆಯುವುದರಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಮುಂದಿನ ತಲಾ ತಲೆಮಾರುಗಳಿಗೂ ಇದೊಂದು ಮಸೀದಿಯೋ ಮಂದಿರವೋ ಎಂಬುದುದರ ಅನುಮಾನಗಳಿಗೆ ಎಡೆಕೊಡದಷ್ಟು ಪ್ರಿಂಟ್ ಆಗಿಬಿಟ್ಟಿದೆ ಪುಸ್ತಕ ” #ಮುಚ್ಚಿಟ್ಟ #ಕರ್ನಾಟಕಚರಿತ್ರೆ “.
ಟಿಪ್ಪು ಎಂಬ ವ್ಯಕ್ತಿ ಕನ್ನಡವನ್ನು ಎಷ್ಟರಮಟ್ಟಿಗೆ ನೆಲಕಚ್ಚಿಸಲು ಪ್ರಯತ್ನ ಪಟ್ಟ ಎಂಬುದನ್ನು ಸುಲ್ತಾನನ ಬೆನ್ನಿಗೆ ನಿಂತು ಬೆಂಬಲಿಸಿ ಕನ್ನಡ ಹೋರಾಟಗಾರರು, ಸ್ಸಾರಿ ಸೋ ಕಾಲ್ಡ್ ಹೋರಾಟಗಾರರು ಓದಬೇಕು. ಎಟ್ಲೀಸ್ಟ್ ಕನ್ನಡಾಂಬೆಯ ಮುಂದಿನ ಮಕ್ಕಳಾದರೂ ಇದನ್ನು ತಿಳಿದುಕೊಂಡರೆ ಉತ್ತಮ.ಆತನ ಖುದಾದಾದ್ ಸರ್ಕಾರ್ ಕನ್ನಡದ ಜಾಗದಲ್ಲಿ ಪರ್ಷಿಯನ್ ಭಾಷೆ ಜಿರಳೆ ಮೀಸೆ ಹೊಕ್ಕಂತೆ ಹೊಕ್ಕಿಲ್ಲ ಬದಲಾಗಿ ಲಾಗಮಿಲ್ಲದ ಕುದುರೆ ಓಡಿದಂತೆ ಕನ್ನಡದ “ಬಹುಳ ಪುಷ್ಯ ಕಾಲಯುಕ್ತಿ ” ರಜಬ್ ” ಆಗಿ ಬದಲಾಗಿದ್ದು ವಿಪರ್ಯಾಸ, ಅಷ್ಟು ಮಾಡಿದ ಟಿಪ್ಪುವನ್ನು ಮತ್ತೆ ಮತ್ತೆ ಹೊಗಲಿ ಕರ್ನಾಟಕದಲ್ಲಿ ಕಿಂಗ್ ಮಾಡಲು ಹೊರಟಿರುವ ಹೋರಾಟಗಾರರಿಗೂ ಲೇಖಕ ತನ್ನ ತೀಕ್ಷ್ಣವಾದ ನುಡಿಗಳಿಂದ ಅಚ್ಚು ಒತ್ತಿದ್ದು ಮಾತ್ರವಲ್ಲದೇ, ನಮ್ಮ ನಿಮ್ಮ ಪ್ರಾಂತ್ಯದ ಭಾಗವೂ ಯಾವ ರೀತಿ ಮರುನಾಮಕರಣ ಮಾಡಿದ್ದ ಅಲ್ಲದೆ ಇಸ್ಲಾಮಿನ ಅಮಲನ್ನು ಯಾವ ಯಾವ ಜಾಗದಲ್ಲಿ ತುರುಕಿಸಲು ಪ್ರಯತ್ನ ಪಟ್ಟ ಎಂಬುದರ ಬಗ್ಗೆ ಪುಟಪುಟಗಳಲ್ಲಿ ಸ್ಪುಟವಾಗಿ ಅಕ್ಷರಗಳನ್ನು ಸ್ಪೋಟಿಸಿದ್ದಾರೆ ಶೆಟ್ರು..!!
ಮೈಸೂರಿಗೆ ತೆರಳುವ ಪ್ರತಿಯೊಂದು ಪ್ರವಾಸಿಗನು ಕೂಡ ಈ ವಿಚಾರವನ್ನೊಮ್ಮೆ ತಿಳ್ಕೋಬೇಕು, ನಾವೂ ನೀವೂ ಯಾರೇ ಪ್ರವಾಸಿಗರು ಬಂದರು ನಮ್ಮ ವಾಹನವನ್ನು ಪಾರ್ಕ್ ಮಾಡುವ ಜಾಗವಿದೆ. ಅಲ್ಲಿಯೇ ಪಕ್ಕದಲ್ಲೊಂದು ಮೇಲ್ಚಾವಣಿಯಿಲ್ಲದ ಸಣ್ಣ ಗುಡಿಯಿದೆ ಆ ಗುಡಿಯ ಮಹಾತ್ಮೆ, ಅಲ್ಲಿನ ಶಕ್ತಿ, ಕಾರಣಿಕ ಪೂಜೆ, ಪುರಸ್ಕಾರ ಆ ಗುಡಿಗೂ ಮೈಸೂರು ಸೀಮೆಗೂ ವಿಶೇಷವಾಗಿ ಅರಮನೆಗೂ ಇರುವ ಸಂಬಂಧ ಮತ್ತು ಅಲ್ಲಿ ಇಂದು ನಡೆಯುತ್ತಿರುವ ಪೂಜೆಗಾಗಿ ನೀಡಿರುವ ತಾಮ್ರದ ಪತ್ರದ ದಾಖಲೆ ಸಮೇತವಾಗಿ ನೈಜಘಟನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಲೇಖಕ ರಾಕೇಶ್ ಶೆಟ್ಟಿ ಸಂಶೋಧನೆ ನಡೆಸಿ “#ಮುಚ್ಚಿಟ್ಟಕರ್ನಾಟಕಚರಿತ್ರೆಯಲ್ಲಿ” ಬರೆದಿರುವುದು ನನಗಂತೂ ಅಚ್ಚರಿ ತಂದುಬಿಟ್ಟಿದೆ .
ಹಾಗಾಗಿ ಓದಲು ಕುಳಿತರೆ ಬೆರಳುಗಳು ಪುಟಗಳನ್ನು ತನ್ನಿಂದ ತಾನೇ ಮೆದುಳಿನ ಆಜ್ಞೆಯನ್ನು ಆಲಿಸಿಕೊಂಡು ತಿರುಗಿಸಿಕೊಂಡು ಹೋಗುತ್ತಿತ್ತು.
ಹೀಗೆ ಒಂದು ಗುಡಿಯಲ್ಲ ಪ್ರವಾಸಕ್ಕೆಂದು ಹೋಗಿ ಅರಮನೆ ಮುಂದೆ ಸೆಲ್ಫಿಹೊಡೆದು ಕೊಂಡು ಸಾಮಾಜಿಕ ಜಾಲಾತಾಣದಲ್ಲಿ “I am in Mysore palace” ಎಂದು ಬರೆದುಕೊಳ್ಳುವ ನಾವಿಂದು ಒಂದು ವಿಚಾರ ಅರ್ಥಮಾಡಿಕೊಂಡು ಸಾಗಬೇಕಿದೆ ಅರಮನೆಯ ಸುತ್ತಮುತ್ತಲಿನ ಪ್ರತಿಯೊಂದು ಗುಡಿಗೋಪುರಕ್ಕೂ ಇತಿಹಾಸವಿದೆ. ಮತಾಂಧ ಟಿಪ್ಪುವಿನ ಕ್ರೂರತೆ ಎಷ್ಟರ ಮಟ್ಟಿಗೆ ಇತ್ತು ಎಂಬುದು ತಿಳಿಯಬೇಕೆಂದರೆ ಈ ಪುಸ್ತಕದ ಓದು ಅತ್ಯಂತ ಅನಿವಾರ್ಯವಾಗಿದೆ.
ಸುಮಾರು ಮೂನ್ನೂರ ಎಪ್ಪತ್ತು ಪುಟಗಳ ಪುಸ್ತಕ ನನಗಂತೂ ಎರಡು ದಿನಗಳಲ್ಲಿ ಓದಿ ಮುಗಿಸಿಯಾಗಿದೆ. ಕಾರಣ ಒಬ್ಬ ಓದುಗನಾದವನಿಗೆ ಪುಸ್ತಕ ಓದಿಸಿಕೊಂಡು ಹೋಗಬೇಕು ಆವಾಗಷ್ಟೆ ಮಜಾ ಬರುತ್ತೆ. ಪುಟ ತಿರುವಿ ಹಾಕಿದಷ್ಟು ಕುತೂಹಲ ಮೂಡಿಸುತ್ತಿದೆ ,ಅಚ್ಚೊತ್ತಿದ ಚಿತ್ರಗಳು ನೈಜ ಚಿತ್ರಣವನ್ನು ಕಣ್ಣಮುಂದೆ ಹಾಗೇಯೆ ಹಾದು ಹೋಗುವಂತೆ ಮಾಡಿದೆ. ನನಗಂತೂ ಬಡತನದ ಕ್ರೂರತೆ ಮತಾಂಧನ ಕ್ರೌರ್ಯದ ನಡುವೆಯೂ ಹುಟ್ಟಿ ಬೆಳೆದ ಸಣ್ಣ ಮಗುವಿನ (ಮುಮ್ಮಡಿ)ಯ ಚಿತ್ರ ನೋಡಿ ಕಥೆ ಓದಿ ಕಣ್ಣಂಚಲಿ ಹನಿಬಿಂದುವೊಂದು ಪುಟದೊಳಗಿನ ಭೂಗರ್ಭವನ್ನು ಸೇರಿಬಿಟ್ಪಿತು. ರಾಣಿಯಾದವಳು ಅವತ್ತು ಅಂತಹ ನಿರ್ಧಾರ ಕೈಗೊಳ್ಳದೆ ಇದ್ದಿದ್ದರೆ ಇವತ್ತು ಮೈಸೂರೆಂಬ ಅರಮನೆ ವಂಶಸ್ಥರು ಇದ್ದರು ಎಂಬುದು ಶಿಲಾಶಾಸನದಲ್ಲಿ ಓದ ಬೇಕಿತ್ತೋ ಏನೋ….?? ಅಥವಾ ಶಾಲೆಯಲ್ಲಿ ಹೇಳಿದ ಹಾಗೆ ಟಿಪ್ಪುವೇ ಪುಣ್ಯಾತ್ಮ ಅಂತ ಒಪ್ಕೊ ಬೇಕಿತ್ತೋ…ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಅಂದು ಹರಸಾಹಸ ಪಡದಿದ್ದರೆ ಏನಾಗುತ್ತಿತ್ತೋ ಎಂದು ನೆನೆದು ಆಕೆಯ ಪಾದಕಮಲಗಳಿಗೆ ಶಿರ ಭಾಗಬೇಕೆಂದು ಅನ್ನಿಸಿಬಿಡುವಷ್ಟು “#ಮುಚ್ಚಿಟ್ಟಕರ್ನಾಟಕಚರಿತ್ರೆ ” ಹೊರಬಂದಿದೆ.
ಇತಿಹಾಸ-ಶಕ್ತಿ ಮುಚ್ಚಿಡಲು ಸಾಧ್ಯವೇ? ಖಂಡಿತವಾಗಿಯೂ ಇಲ್ಲ ಅದೆಷ್ಟೋ ಶಕ್ತಿ-ಇತಿಹಾಸ ಕಾಲಗಳು ಕಳೆದುಹೋದಂತೆ ಮತ್ತೆ ಮತ್ತೆ ಹೊರಬಿದ್ದಿದೆ ಅದಕ್ಕಾಗಿಯೇ ಆ ಚಾಮುಂಡಿ ಬೆಟ್ಟದ ಮೇಲೆ ಕುಳಿತು ನಿಲುಮೆ ರಾಕೇಶ್ ಶೆಟ್ಟಿಯಂತ ಲೇಖಕನನ್ನು ಹುಟ್ಟಿಸಿದ್ದಾರೆ ಅನಿಸುತ್ತಿದೆ. ಕಾರಣ ಇಷ್ಟೇ ಬರೆಯುವುದು ಸುಲಭ ಅನ್ನಿಸಬಹುದು ಆದರೆ ಸಂಶೋಧನೆ ನಡೆಸಿ ದಾಖಲೇ I mean ಸಾಕ್ಷಿ ಕೇಳುವ ಪುಣ್ಯಾತ್ಮರ ಮುಂದೆ ದಾಖಲೆ ಸಮೇತವಾಗಿ ಬರೆದು ಮನಕೆ ಮುದ ನೀಡುವಷ್ಟು ಅಕ್ಷರಗಳನ್ನು ಪೋಣಿಸುವುದಿದ್ಯಲ್ಲ, ಅದ್ರಲ್ಲೂ ಎಲ್ಲಾ ಕಡೆ ಬಚ್ಚಿಟ್ಟು -ಕತ್ತರಿಸಿಟ್ಟ ಇತಿಹಾಸವನ್ನು ಪುನರುತ್ಥಾನಗೊಳಿಸುವುದು ಸುಲಭದ ಮಾತಲ್ಲ.!
ಕಡೆಯಾದಾಗಿ ಒಂದು ಮಾತು “#ಮುಚ್ಚಿಟ್ಟಕರ್ನಾಟಕಚರಿತ್ರೆ ” ಹೊಸ ಇತಿಹಾಸ ಬರೆಯುವಲ್ಲಿ ಮುನ್ನುಡಿಯಾಗಬೇಕು,ಮೈಸೂರಿಗೆ ಹೋಗಿಬಂದವರು ಹೋಗಬೇಕಾದವರು ಇದನ್ನು ಓದಬೇಕು. ಟಿಪ್ಪುವನ್ನು ಅಪ್ಪಾ ಎಂದು ಕೊಂಡಾಡುವ ಎಡಬಿಡಂಗಿಗಳ ಮುಂದೆ ಪುಸ್ತಕ ತೆರೆದಿಡಬೇಕು. ಕನ್ನಡವನ್ನು ನಿಜವಾಗಿಯೂ ಪ್ರೀತಿಸುವ ಗೌರವಿಸುವ ಕನ್ನಡಿಗರಿಗೆ ನಿಜವಾದ ಅಸ್ಮಿತೆ ಗೊತ್ತಾಗಬೇಕೆಂದರೆ ಈ ಪುಸ್ತಕ ನಿಮ್ಮ ಮನೆಯೊಳಗೆ ಪ್ರವೇಶ ಮಾಡಬೇಕು, ನಾಟಕ- ಹೈಡ್ರಾಮ- ರಾಜಕಾರಣ ನಡೆಸಿ ಏನೇನೋ ಕಥೆ ಹೇಳಿ ದುಡ್ಡು ಕೊಳ್ಳೆಹೊಡೆಯುವವ ಇದನ್ನೊಮ್ಮೆ ಓದಿ ಬೆಚ್ಚಗೆ ನಿದ್ರಿಸಲು ಸಾಧ್ಯವೇ ಎಂದು ತಿಳಿಯಬೇಕು. because ಇದು ಅಸಲಿ ಕಥೆಯನ್ನು ಬಿಚ್ಚಿಟ್ಟಿದೆ,ನೈಜತೆ ಜೀವಂತವಾಗಿದೆ. ದಾಖಲೆ ಸಮೇತವಾದ ಪ್ರತಿಗಳು ಮುದ್ರಿತವಾಗಿದೆ. ಮರೂನ್ ಬಣ್ಣದ ಮುಖ ಪುಟದಲ್ಲಿ ಮುದ್ರಿತವಾದ ಬಂಗಾರ ಬಣ್ಣದ ಶೀರ್ಷಿಕೆ ,ಮುದ್ದಾದ ಮಗು,ಮತಾಂಧ ಟಿಪ್ಪು, ವೀರ ನಾರಿ ರಾಣಿಯ ಚಿತ್ರಗಳು ಹಾಗೇಯೇ ಮತ್ತೊಮ್ಮೆ ಕಣ್ಣಮುಂದೆ ಹಾದುಹೋಯಿತು.
ಕಣ್ಣು ಮನಸ್ಸು ತೇವಗೊಂಡಿತು.
“#ಮುಚ್ಚಿಟ್ಟಕರ್ನಾಟಕಚರಿತ್ರೆ” ಪುಸ್ತಕ ನನ್ನ ಮನಗೆದ್ದಿತು.
“ಪುಸ್ತಕ ಓದಿಯಾಗಿದೆ -ವಿಮರ್ಶೆ ಬರೆದಾಗಿದೆ ಹಾಗಾಗಿ ಮುಂದಿನ ಪಯಣ ಶ್ರೀರಂಗಪಟ್ಟಣಕ್ಕೆ ಮುಮ್ಮಡಿ ಹುಟ್ಟಿದ ಕೃಷ್ಣನ ದೇಗುಲ ನೋಡಲಿಕ್ಕೆ ” ದರುಶನ ತೋರಯ್ಯ ಕೃಷ್ಣಾ…. “
ನಮಸ್ಕಾರ

ಈ ಶೆಟ್ಟರ್, ‘ಆ ಶೆಟ್ಟರ್’ಗಳಂತಲ್ಲ!
– ಸಂತೋಷ್ ತಮ್ಮಯ್ಯ
ತುಂಬಿದ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ಚೌಗಲೆ ಸಾಹೇಬರು ಕಲಾಪ ನಡೆಸುತ್ತಿದ್ದರು. ಆಗಿನ್ನೂ ವಕೀಲರುಗಳು ಕಡ್ಡಾಯವಾಗಿ ಕರಿಕೋಟನ್ನು ಧರಿಸಬೇಕೆಂದಿರಲಿಲ್ಲ. ಹಾಗಾಗಿ ಸಭಾಂಗಣದೊಳಗೆ ವಕೀಲರ‍್ಯಾರು? ಕಕ್ಷಿದಾರರ‍್ಯಾರೆಂಬುದು ಗೊತ್ತಾಗುತ್ತಿರಲಿಲ್ಲ. ಅಂದು ನ್ಯಾ. ಚೌಗಲೆಯವರು, ಖ್ಯಾತ ವಕೀಲ ಭೀಮರಾವ್ ಭಂಡಿವಾಡರಿಗೆ ಮೈತಾಗಿಸಿ ಕುಳಿತು ತನ್ನನ್ನೇ ದಿಟ್ಟಿಸುತ್ತಿದ್ದ ಯುವಕನೊಬ್ಬನತ್ತ ಬೊಟ್ಟುಮಾಡಿ ’ಯಾರು ಈ ಹುಡುಗ?’ ಎಂದು ಕೇಳಿದರು. ’ಭಂಡಿವಾಡರು ನನಗೆ ತಿಳಿಯದು ಮಹಾಸ್ವಾಮಿ’ ಎಂದುತ್ತರಿಸಿದರು. ನ್ಯಾಯಮೂರ್ತಿಗಳು ಸಿಡುಕುಮುಖದೊಂದಿಗೆ ಕಲಾಪದಲ್ಲಿ ವ್ಯಸ್ತರಾದರು. ಆ ಯುವಕ ಬೇಸರದಿಂದ ಹೊರನಡೆದ.
ಮರುದಿನ ಕಛೇರಿಗೆ ಬಂದಾಗ ಚೌಗಲೆಯವರಿಗೆ ಲಕೋಟೆಯೊಂದು ಕಾಯುತ್ತಿತ್ತು. ಅದನ್ನು ಓದುತ್ತಲೇ ಚೌಗಲೆ ಸಾಹೇಬರು ಕೋಪದಿಂದ ನಡುಗಲಾರಂಭಿಸಿದರು.
ಆ ಪತ್ರ ಹೀಗಿತ್ತು: ‘ನ್ಯಾಯಾಲಯದೊಳಗೆ ಬಂದು ಕಲಾಪಗಳನ್ನು ವೀಕ್ಷಿಸಲು ಪ್ರತಿಯೊಬ್ಬರಿಗೂ ಹಕ್ಕಿದೆ, ಅಧಿಕಾರವಿದೆ. ಹೊಸದಾಗಿ ವಕೀಲಿ ವೃತ್ತಿ ಆರಂಭಿಸುವವರು ಕಲಾಪಗಳನ್ನು ವೀಕ್ಷಿಸಿ ಅನುಭವವನ್ನು ಹಾಗೂ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕಾಗುತ್ತದೆ. ಒಬ್ಬ ತರುಣ ವಕೀಲನಾದ ನಾನು ಹಿರಿಯ ವಕೀಲರ ಪಕ್ಕದಲ್ಲಿ ಕುಳಿತು ಕಲಾಪವನ್ನು ವೀಕ್ಷಿಸಿರುತ್ತೇನೆ. ತಾವು ನೇರವಾಗಿ ನನಗೇ ಪ್ರಶ್ನೆಯನ್ನು ಮಾಡಬಹುದಿತ್ತು. ಆದರೆ ನೀವು ನಾನು ಯಾರೆಂದು ಹಿರಿಯ ವಕೀಲರನ್ನು ಕೇಳಿದಿರಿ. ಆದ್ದರಿಂದ ನಾನು ಏನನ್ನೂ ಹೇಳದೆ ಸುಮ್ಮನಿದ್ದೆ. ಹೀಗೆ ಬೇರೆಯವರಿಗೆ ಪ್ರಶ್ನೆ ಹಾಕಿ ನನ್ನ ಬಗ್ಗೆ ಉತ್ತರ ಪಡೆಯುವ ನಿಮ್ಮ ವಿಧಾನ ನನಗೂ, ವಕೀಲಿ ವೃತ್ತಿಗೂ ಗೈದ ಅಪಮಾನವೆಂದು ತಿಳಿದಿದ್ದೇನೆ ಮತ್ತು ಅಸಮಾಧಾನವನ್ನು ಸೂಚಿಸುತ್ತಿದ್ದೇನೆ. ಇದು ನನ್ನ ಆತ್ಮಗೌರವಕ್ಕೆ ಧಕ್ಕೆಯುಂಟುಮಾಡಿದೆ. ಹೀಗೆ ಮಾಡಲು ನಿಮಗೇನು ಅಧಿಕಾರವಿದೆ? ನೀವು ನಿಮ್ಮ ತಪ್ಪಿಗಾಗಿ ಕ್ಷಮೆ ಕೋರಿ ವಕೀಲಿ ವೃತ್ತಿಯ ಘನತೆಯನ್ನು ಎತ್ತಿಹಿಡಿಯಬೇಕು-ಸದಾಶಿವ ಶಂಕರಪ್ಪ ಶೆಟ್ಟರ್‘
ಈ ಪತ್ರವನ್ನೋದಿದ ನ್ಯಾಯಾಶರು ತಬ್ಬಿಬ್ಬಾದರು. ಅದು ಭಾರೀ ಸುದ್ದಿಯಾಗಿ ಪೇಟೆಯಲ್ಲೂ ಚರ್ಚೆಯಾಯಿತು. ’ಯಾರೀತ? ಯಾರು ಈ ಶೆಟ್ಟರ್?’ ಕೊನೆಗೆ ಏನೋ ನೆನಪು ಮಾಡಿಕೊಂಡ ಚೌಗಲೆಯವರು ಆ ಯುವಕನನ್ನು ಕಛೇರಿಗೆ ಕರೆಸಿಕೊಂಡು ‘ನೀನು ಶಂಕ್ರಪ್ಪ ಶಿವಪ್ಪ ಶೆಟ್ಟರ್ (ಎಸ್.ಎಸ್ ಶೆಟ್ಟರ್) ಮಗನೇನು?‘ ಎಂದು ಕೇಳಿದರು. ಹುಡುಗ ಹೌದೆಂದ!
ಇವೆಲ್ಲಾ ನಡೆದು ಈಗ ಅರ್ಧ ಶತಮಾನಗಳೇ ಕಳೆದಿವೆ. ಆದರೆ ’ಯಾರೀತ? ಯಾರು ಈ ಶೆಟ್ಟರ್?’ ಎಂಬ ಪ್ರಶ್ನೆ ಮತ್ತೊಂದು ರೀತಿಯಲ್ಲಿ ಇಡೀ ರಾಜ್ಯವನ್ನು ಕಾಡುತ್ತಿದೆ! ಎಸ್.ಎಸ್. ಶೆಟ್ಟರ್ ಮಗ ಈ ಸದಾಶಿವ ಶೆಟ್ಟರ್ ಆದರೆ, ಇಂವ ಯಾವ ಶೆಟ್ಟರ್? ಇವರಪ್ಪನೂ ಎಸ್.ಎಸ್. ಶೆಟ್ಟರ್ ಅಲ್ಲವೇ? ಮುಂತಾದ ಪ್ರಶ್ನೆಗಳು ಹಲವರನ್ನು ಕಾಡುತ್ತಿವೆ. ಇವು ಕೇವಲ ಪ್ರಶ್ನೆಗಳು ಮಾತ್ರವಾಗಿದ್ದರೆ ಅದರಲ್ಲೇನೂ ವಿಶೇಷವಿರುತ್ತಿರಲಿಲ್ಲ. ಆದರೆ ಈಗ ಉದ್ಭವಿಸಿದ ಪ್ರಶ್ನೆ ಮೌಲ್ಯಗಳ, ನಿಷ್ಠೆಯ, ಪ್ರಾಮಾಣಿಕತೆಯ ಪ್ರಶ್ನೆ. ಇದೀಗ ಚರ್ಚೆಯಾಗುತ್ತಿರುವ ಅಧಿಕಾರದಾಸೆಯ ಶೆಟ್ಟರನ್ನು ಕೆಲವರು ವಕೀಲ ಸದಾಶಿವ ಶೆಟ್ಟರರ ಮಗ ಎಂದುಕೊಂಡಿದ್ದಾರೆ. ಜನಸಂಘದ ಮಹಾ ನಾಯಕರ ಗರಡಿಯಲ್ಲಿ ಪಳಗಿದ ಸದಾಶಿವ ಶೆಟ್ಟರ್ ಕುಡಿಯೇಕೆ ಹೀಗೆ ಮಾಡಿದರು ಎಂದು ನೊಂದುಕೊಂಡವರಿದ್ದಾರೆ. ಆದರೆ ಸದಾಶಿವ ಶೆಟ್ಟರ್ ಮನೆತನದ ಇತಿಹಾಸವನ್ನು ಅಧ್ಯಯನ ಮಾಡಿದರೆ ಅಲ್ಲಿ ಮೂರು ಶತಮಾನಗಳಿಂದಲೂ ಪ್ರಾಮಾಣಿಕರು, ಧರ್ಮರಕ್ಷಣೆಗೆ ಬದುಕು ಮುಡಿಪಾಗಿಟ್ಟವರು, ಸಮಾಜಕ್ಕಾಗಿ ಬದುಕಿದವರು ಮಾತ್ರ ಕಾಣುತ್ತಾರೆಯೇ ಹೊರತು ಅಧಿಕಾರಕ್ಕಾಗಿ ಹಪಹಪಿಸಿದ, ಧನದಾಹಿ ’ಶೆಟ್ಟರ್’ ಕಾಣಿಸುವುದಿಲ್ಲ. ಹಾಗಾದರೆ ಬಣ್ಣಬದಲಿಸಿದ ಈ ಶೆಟ್ಟರ್ ಯಾರು?
ಅದರ ಕಥೆ ರಾಜಮೌಳಿ ಸಿನೆಮಾದಂತೆ, ತ.ಸು. ಶಾಮರಾಯರ ’ಮೂರು ತಲೆಮಾರು’ ಪುಸ್ತಕದಂತೆ ರೋಚಕವಾಗಿದೆ.
ಲಭ್ಯ ದಾಖಲೆಗಳ ಪ್ರಕಾರ ಶೆಟ್ಟರ್ ವಂಶದ ಇತಿಹಾಸ ಆರಂಭವಾಗುವುದು ೧೬ನೇ ಶತಮಾನದ ಗೋಕಾಕದ ಕಾಡಪ್ಪ ಶೆಟ್ಟರ್ ಎಂಬ ಶಿವಭಕ್ತರಿಂದ. ಶರಣತತ್ತ್ವಗಳ ಪ್ರಕಾರ ಬದುಕಿದ ಅನುಕೂಲಸ್ಥ ಕಾಡಪ್ಪನವರಿಗೆ ಇಬ್ಬರು ಮಕ್ಕಳು. ಎರಡನೆಯ ಮಗ ಬಸಪ್ಪ ಶೆಟ್ಟರ್ ತಂದೆಯಂತೆಯೇ ಶಿವಭಕ್ತ. ಅವರ ಸಮಾಜಸೇವೆ ಮತ್ತು ಸಾತ್ತ್ವಿಕ ಗುಣವನ್ನು ಗದಗಿನ ತೋಂಟದಾರ್ಯ ಸ್ವಾಮಿಗಳು, ಸವಣೂರಿನ ನವಾಬರು ಮತ್ತು ಜಡೆ ಮಠದ ಸ್ವಾಮಿಗಳು ಮೆಚ್ಚಿ ಗೌರವದ ಸ್ಥಾನಮಾನಗಳನ್ನು ನೀಡಿದ್ದರು. ಗುರುಸಿದ್ದೇಶ್ವರ ಸ್ವಾಮಿಗಳನ್ನು ಚಿತ್ರದುರ್ಗದಿಂದ ಕರೆಸಿ ಹುಬ್ಬಳ್ಳಿಯಲ್ಲಿ ಮೂರುಸಾವಿರ ಮಠವನ್ನು ಅವರು ನಿರ್ಮಿಸಿದ್ದರು. ಮುಂದೆ ಮಠಕ್ಕೆ ಅವರ ಮೂರನೆಯ ಮಗ ಗುರುಸಿದ್ಧಪ್ಪ ಶೆಟ್ಟರ್ ಮಠಾಧಿಪತಿಯೂ ಆದರು. ಇವರು ಕಾಡಪ್ಪ ಶೆಟ್ಟರ್ ವಂಶದ ಮೂರನೇ ತಲೆಮಾರು. ಇವರ ನಂತರದ ಐದನೇ ತಲೆಮಾರಿನಲ್ಲಿ ಜನಿಸಿದವರೇ ಶಂಕ್ರಪ್ಪ ಶಿವಪ್ಪ ಶೆಟ್ಟರ್ ಅಥವಾ ಎಸ್.ಎಸ್. ಶೆಟ್ಟರ್. ಇವರೇ ನ್ಯಾಯಾಶರಿಗೆ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ ಸ್ವಾಭಿಮಾನಿ ಸದಾಶಿವ ಶೆಟ್ಟರ್ ತಂದೆ. ವಕೀಲರಾಗಿದ್ದ ಎಸ್.ಎಸ್. ಶೆಟ್ಟರ್ ಹುಬ್ಬಳ್ಳಿ-ಧಾರವಾಡ ಸೀಮೆಯಲ್ಲಿ ಹೆಸರಾಂತ ವ್ಯಕ್ತಿ. ಶೆಟ್ಟರ್ ಚಾಳ್‌ಗೆ ಬಂದ ಯಾರನ್ನೂ ಬರಿಗೈಯಲ್ಲಿ ಕಳುಹಿಸದ ಕೊಡುಗೈ ದಾನಿ. ಧಾರವಾಡ ಸೀಮೆಯ ಹಳ್ಳಿಗಳಿಂದ ಮಕ್ಕಳನ್ನು ಕರೆತಂದು ತಮ್ಮ ಮನೆಯಲ್ಲಿಟ್ಟು ಓದಿಸುತ್ತಲೇ ತಮ್ಮ ೩೪ನೇ ವಯಸ್ಸಿನಲ್ಲಿ ಕಾಲವಾದರು. ಅವರು ಕಾಲವಾಗುವ ಕೆಲ ವರ್ಷಗಳ ಮುನ್ನ ಕಲಘಟಗಿ, ಮಿಸರಕೋಟಿಗಳಿಂದ ಬಡಮಕ್ಕಳನ್ನು ತಂದು ತಮ್ಮ ಮನೆಯಲ್ಲಿಟ್ಟುಕೊಂಡು ಓದಿಸುತ್ತಿದ್ದರು. ಹಾಗೆ ಬಂದ ಒಬ್ಬ ಬುದ್ಧಿವಂತ ಹುಡುಗ ಶಿವಪ್ಪ ಶಿವಮೂರ್ತೆಪ್ಪ ಶೆಟ್ಟರ್. ಮುಂದೆ ಇವರೂ ಎಸ್.ಎಸ್. ಶೆಟ್ಟರ್ ಎಂದೇ ಖ್ಯಾತರಾದರು. ಈ ಶಿವಪ್ಪ ಶಿವಮೂರ್ತೆಪ್ಪ ಶೆಟ್ಟರ್ ಅವರಿಗೆ ತನ್ನನ್ನೂ ಜನ ಎಸ್.ಎಸ್. ಶೆಟ್ಟರ್ ಎಂದು ಕರೆಯುವುದು ಹೆಮ್ಮೆ ತರುತ್ತಿತ್ತು ಮತ್ತವರು ಅನ್ನ-ವಿದ್ಯೆ ನೀಡಿದ ಶೆಟ್ಟರ್ ಮನೆತನಕ್ಕೆ ನಿಷ್ಠರೂ ಆಗಿದ್ದರು. ಹಿರಿಯ ಎಸ್.ಎಸ್. ಶೆಟ್ಟರರ ಅಪಾರ ಆಸ್ತಿಗೆ ಕಿಂಚಿತ್ತೂ ಅಪಾಯ ಬರದಂತೆ ಕಾಪಾಡಿದವರು ಈ ಕಿರಿಯ ಎಸ್.ಎಸ್. ಶೆಟ್ಟರ್. ಹಿರಿಯ ಎಸ್.ಎಸ್ ಶೆಟ್ಟರರ ಸ್ವಂತ ಮಗ ಸದಾಶಿವ ಶೆಟ್ಟರ್ ವಕೀಲಿ ವೃತ್ತಿ ಹಿಡಿಯುವವರೆಗೂ ರಕ್ತಸಂಬಂಧಿಯಲ್ಲದ ಕಿರಿಯ ಎಸ್.ಎಸ್. ಶೆಟ್ಟರ್ ಆ ಕುಟುಂಬದ ಸೇವೆ ಮಾಡುತ್ತಾ ಸಾರ್ಥಕ ಬದುಕನ್ನು ಬದುಕಿದರು.
ಇತ್ತ ಸದಾಶಿವ ಶೆಟ್ಟರ್ ಯಶಸ್ವಿ ವಕೀಲರಾಗಿ, ವಿವಾಹವಾಗಿ ಅವರಿಗೆ ಐವರು ಮಕ್ಕಳೂ ಆದರು. ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರಾದರು. ಅತ್ತ ಕಾಡಪ್ಪ ಶೆಟ್ಟರ್ ವಂಶದವರಲ್ಲದ ಶಿವಪ್ಪ ಶಿವಮೂರ್ತೆಪ್ಪ ಶೆಟ್ಟರ್ ಯಾನೆ ಕಿರಿಯ ಎಸ್.ಎಸ್. ಶೆಟ್ಟರ್ ಕೂಡ ಸಂಸಾರಸ್ಥರಾಗಿ ಅವರಿಗೂ ಮಕ್ಕಳಾದರು. ಅವರಲ್ಲೊಬ್ಬರು ಮುಂದೆ ಬಿಜೆಪಿಯಲ್ಲಿ ಸಕಲ ಅಧಿಕಾರಗಳನ್ನು ಅನುಭವಿಸಿ ಜಗದೀಶ ಶೆಟ್ಟರ್ ಎಂದು ಖ್ಯಾತರಾದರು.
ಕಾಂಗ್ರೆಸಿನಲ್ಲಿ ಸಕ್ರಿಯರಾಗಿದ್ದ ವಕೀಲ ಸದಾಶಿವ ಶೆಟ್ಟರಿಗೆ ಕ್ರಮೆಣ ಕಾಂಗ್ರೆಸಿಗರಿಗೆ ಶ್ರದ್ಧೆಯಿಲ್ಲ, ಕ್ರಿಯಾಶೀಲತೆಯಿಲ್ಲ ಎನಿಸತೊಡಗಿತು. ಅಧಿಕಾರದಾಹ, ಜಾತೀಯತೆ ಮತ್ತು ಅಲ್ಪಸಂಖ್ಯಾತರ ಓಲೈಕೆಗಳು ರಾಷ್ಟ್ರಭಾವಕ್ಕೆ ಅಪಾಯವನ್ನುಂಟುಮಾಡುತ್ತವೆ ಎಂಬುದು ಅವರಿಗೆ ಅರಿವಾಗತೊಡಗಿತು. ತಾನು ಇಲ್ಲೇ ಉಳಿದರೆ ಕಾಂಗ್ರೆಸಿನಂತೆ ನಿಷ್ಕ್ರಿಯನಾಗಿಬಿಡುವೆ ಎಂಬ ಭಯ ಕಾಡತೊಡಗಿತು. ಆಗ ಅವರನ್ನು ಸೆಳೆದಿದ್ದು ಡಾ.ಶ್ಯಾಮಪ್ರಸಾದ್ ಮುಖರ್ಜಿ ಮತ್ತು ದೀನದಯಾಳ ಉಪಾಧ್ಯಾಯರ ಚಿಂತನೆಗಳು. ಅನಂತರ ಹಿಂದೆಮುಂದೆ ಯೋಚಿಸದ ಸದಾಶಿವ ಶೆಟ್ಟರ್ ಜನಸಂಘ ಸೇರಿದರು. ಜಗನ್ನಾಥರಾವ್ ಜೋಷಿ, ಭಾವುರಾವ್ ದೇಶಪಾಂಡೆ ಹಾಗೂ ಗದಗಿನ ಡಾ. ರಾಮಚಂದ್ರ ಅನಂತರಾವ ಜಾಲಿಹಾಳರ ಮಾರ್ಗದರ್ಶನದಿಂದ ಆರೆಸ್ಸೆಸ್ಸಿನ ಸಂಪರ್ಕಕ್ಕೂ ಬಂದರು. ೧೯೬೨ರಲ್ಲಿ ಹುಬ್ಬಳ್ಳಿಯಿಂದ, ೧೯೬೪ರಲ್ಲಿ ಧಾರವಾಡದಿಂದ ವಿಧಾನಸಭೆಗೆ ಸ್ಪರ್ಧಿಸಿ ಸೋತರು. ೧೯೬೭ರ ಚುನಾವಣೆಯಲ್ಲಿ ಹುಬ್ಬಳ್ಳಿಯಿಂದ ಸ್ಪರ್ಧಿಸಿ ಗೆದ್ದು ದಕ್ಷಿಣ ಭಾರತದ ಜನಸಂಘದ ಮೊದಲ ಶಾಸಕ ಎನಿಸಿಕೊಂಡರು. ತಡವಾಗಿ ಜನಸಂಘ ಸೇರಿದರೂ ನಿಷ್ಠಾವಂತ ಕಾರ್ಯಕರ್ತರಾದರು. ಪಕ್ಷದ ಕಾರ್ಯಕ್ಕೆಂದೇ ಪ್ರಿಂಟಿಂಗ್ ಪ್ರೆಸ್ ತೆರೆದರು. ಮನೆಯಲ್ಲಿ ಊಟಹಾಕಿ ಪಕ್ಷ ಕಟ್ಟಿದರು. ದೀನದಯಾಳರಂಥ ರಾಷ್ಟ್ರನಾಯಕರ ನಿಕಟವರ್ತಿಗಳಾದರು. ಹುಬ್ಬಳ್ಳಿ ಆಸ್ಪತ್ರೆ ನಿರ್ಮಾಣದ ನಂತರ ನಿರ್ಗತಿಕರಾದ ಕಾರ್ಮಿಕರ ಪರವಾಗಿ ಹೋರಾಟ ಮಾಡಿ ವಸತಿ ಕಲ್ಪಿಸಿದರು. ರೈತಹೋರಾಟಗಳನ್ನು ಸಂಘಟಿಸಿದರು, ಕಟ್ಟಡ ತೆರಿಗೆಯ ವಿರುದ್ಧ ಧರಣಿ ಕುಳಿತರು. ಬೆಲೆ ಏರಿಕೆ, ಪಡಿತರ ತಾರತಮ್ಯದ ವಿರುದ್ಧ ಬೀದಿಗಿಳಿದು ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ದೀನದಯಾಳ ಉಪಾಧ್ಯಾಯರು ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಾಗ ಅವರ ಜೊತೆಗೂಡಿ ಸಂಘಟನೆ ಮಾಡಿದರು. ಹಿಡಿದ ಕಾರ್ಯವನ್ನು ವೇಗದಿಂದ ಮುಗಿಸುತ್ತಿದ್ದ ಸದಾಶಿವ ಶೆಟ್ಟರ್ ತಮ್ಮ ಬದುಕನ್ನೂ ತುರಾತುರಿಯಲ್ಲಿ ಮುಗಿಸಿಬಿಟ್ಟರು. ೧೯೬೮ರಲ್ಲಿ ತಮ್ಮ ೩೬ನೇ ವಯಸ್ಸಿನಲ್ಲಿ ಶಾಸಕರಾಗಿದ್ದಾಗಲೇ ಕಾಲವಾದರು. ಅಲ್ಲಿಗೆ ಶೆಟ್ಟರ್ ಕುಟುಂಬದ ರಾಜಕೀಯ ಬದುಕೂ ಅಂತ್ಯವಾಯಿತು.
ಇವರ ನಿಧನದಿಂದ ತೆರವಾದ ಸ್ಥಾನಕ್ಕೆ ಕಾರ್ಯಕರ್ತರು ಶಿವಪ್ಪ ಶಿವಮೂರ್ತೆಪ್ಪ ಶೆಟ್ಟರ್ (ಕಿರಿಯ ಎಸ್.ಎಸ್ ಶೆಟ್ಟರ್)ರನ್ನು ಅಭ್ಯರ್ಥಿಯಾಗಿ ನಿಲ್ಲಿಸಿದರು. ಆದರೆ ಅವರು ಗೆಲ್ಲಲಿಲ್ಲ. ತಮಗೆ ಅನ್ನ ಕೊಟ್ಟ ಸದಾಶಿವ ಶೆಟ್ಟರ್ ಕುಟುಂಬದ ಮೌಲ್ಯಕ್ಕೆ ಅನುಗುಣವಾಗಿ ಬದುಕಿದರು. ಆದರೆ ಕಿರಿಯ ಎಸ್.ಎಸ್. ಶೆಟ್ಟರ್ ಹಾಗೆ ಬದುಕಿದರೆಂದು ಅವರ ಮಗ ಬದುಕಬೇಕೆಂದಿದೆಯೇ?
ಹೇಗೂ ಹುಬ್ಬಳ್ಳಿ-ಧಾರವಾಡದಲ್ಲಿ ಶೆಟ್ಟರ್ ಮನೆತನಕ್ಕೆ ಒಂದು ಹವಾ ಇತ್ತು. ಸದಾಶಿವ ಶೆಟ್ಟರರು ಕಾಲವಾದಾಗ ಒಂದು ಲಕ್ಷಕ್ಕೂ ಹೆಚ್ಚು ಜನ ಶವಯಾತ್ರೆಯಲ್ಲಿ ಭಾಗಿಯಾಗಿದ್ದರು. ಈ ಎಲ್ಲಾ ಕಾರಣಗಳಿಂದ ಕಾಂಗ್ರೆಸಿಗೆ ಠಕ್ಕರ್ ಕೊಡಲು ಶೆಟ್ಟರ್ ಕುಟುಂಬದ ಯಾರಾದರೂ ಅ‘ರ್ಥಿಯಾದರೆ ಬಿಜೆಪಿ ಗೆಲ್ಲಲಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಪ್ರಚಲಿತದಲ್ಲಿತ್ತು. ಆದರೆ ಸದಾಶಿವ ಶೆಟ್ಟರರ ಮಕ್ಕಳಾರೂ ರಾಜಕೀಯಕ್ಕೆ ಬರಲಾರೆವು ಎಂದು ಸುಮ್ಮನಾಗಿಬಿಟ್ಟರು. ಆ ಸಮಯದಲ್ಲಿ ರಾಜಕೀಯ ನಾಯಕರ ಕಣ್ಣಿಗೆ ಆಕಸ್ಮಿಕವಾಗಿ ಬಿದ್ದವರೇ ಶಿವಪ್ಪ ಶಿವಮೂರ್ತೆಪ್ಪ ಶೆಟ್ಟರ್ ಎಂಬ ಕಿರಿಯ ಎಸ್.ಎಸ್ ಶೆಟ್ಟರ್ ಮಗ. ಅನಂತರ ಆತ ಹಿಂದಿರುಗಿ ನೋಡಲಿಲ್ಲ. ಒಂದೊಂದಾಗಿ ರಾಜಕೀಯ ಮೆಟ್ಟಿಲುಗಳನ್ನೇರತೊಡಗಿದರು. ಶೆಟ್ಟರ್ ಹೆಸರೇ ಅವರಿಗೆ ವಿಜಯವನ್ನು ತಂದುಕೊಡುತ್ತಿತ್ತು. ಹಾಗಾಗಿ ಆಧುನಿಕ ಶೆಟ್ಟರರ ರಾಜಕೀಯ ಬದುಕು ಸುಲಭವಾಯಿತು. ಕಾಲಕ್ರಮೇಣ ಹಳೆಯ ಶೆಟ್ಟರ್ ಮೌಲ್ಯಗಳು ಅವಳಿ ನಗರದಲ್ಲಿ ದಂತಕಥೆಗಳಾಗಿ ಜನಪ್ರಿಯವಾದಾಗ ಈ ಶೆಟ್ಟರರಿಗೆ ತಾನೇ ಸಿದ್ಧಾಂತ, ತಾನೇ ಬಿಜೆಪಿ ಎಂಬ ಭ್ರಮೆಯೂ ಬೆಳೆಯಿತು. ಕಾಡಪ್ಪ ಶೆಟ್ಟರ್ ಮನೆತನದ ಪ್ರಭಾವಳಿಗಳಿಲ್ಲದೆಯೇ ತಾನು ಮೇಲೆ ಬಂದೆ ಎಂಬ ಅಹಂಕಾರವೂ ಬಂತು. ಯಡಿಯೂರಪ್ಪ ಸರ್ಕಾರವಿದ್ದಾಗ ಹುಬ್ಬಳ್ಳಿಯಲ್ಲಿ ಸದಾಶಿವ ಶೆಟ್ಟರರ ಪ್ರತಿಮೆ ನಿರ್ಮಾಣ ಮಾಡಬೇಕೆಂಬ ಕೂಗಿಗೆ ಈ ಶೆಟ್ಟರ್ ಸೊಪ್ಪು ಹಾಕಲಿಲ್ಲ, ಕೊನೆಗೆ ಅಭಿಮಾನಿಗಳೇ ಪುಟ್ಟ ಪ್ರತಿಮೆ ನಿರ್ಮಿಸಿದಾಗ ಕೆಲವರು ಅದಕ್ಕೆ ಅಡ್ಡಗಾಲನ್ನೂ ಹಾಕಿದರು! ಸರ್ಕಾರ ಸದಾಶಿವ ಶೆಟ್ಟರ್ ಕುರಿತ ಪುಸ್ತಕ ಬಿಡುಗಡೆ ಮಾಡಿದಾಗ ಮಂತ್ರಿ ಶೆಟ್ಟರರು ದೊಡ್ಡಮನೆಯ ಶೆಟ್ಟರರ ಮಕ್ಕಳನ್ನು ಸೌಜನ್ಯಕ್ಕೂ ವೇದಿಕೆಗೆ ಕರೆಯದೆ ನೋವು ಕೊಟ್ಟರು. ಅಂದರೆ ಬಿಜೆಪಿಯಲ್ಲಿದ್ದಾಗಲೇ ಈ ಶೆಟ್ಟರ್ ಒಳಗೊಳಗೇ ಹುನ್ನಾರ, ಕುಟಿಲತೆ, ಧೂರ್ತತನಗಳನ್ನು ತುಂಬಿಕೊಂಡಿದ್ದರು. ಆದರೆ ಮುಖವಾಡವಾದರೂ ಎಷ್ಟು ದಿನ ಮರೆಯಲ್ಲಿದ್ದೀತು? ಈಗ ಅದು ಕಳಚಿದೆ. ಸಂಘದ ಪ್ರಚಾರಕರ ಬಗ್ಗೆ ಅಪಸವ್ಯ ನುಡಿಯುವಷ್ಟು ಪತನಕ್ಕೆ ತಲುಪಿದೆ. ಆದರೆ ಇದರಲ್ಲೇನೂ ಆಶ್ಚರ್ಯ ಕಾಣಿಸುತ್ತಿಲ್ಲ. ಏಕೆಂದರೆ ಇವರು ಕಾಡಪ್ಪ ಶೆಟ್ಟರರಂತೆ ಬದುಕಿರಲೇ ಇಲ್ಲ! ಹಾಗಾಗಿ ಅಚ್ಚರಿಯೇಕೆ ಪಡಬೇಕು? ಅಲ್ಲದೆ ತಂದೆ ಶಿವಪ್ಪ ಶಿವಮೂರ್ತೆಪ್ಪ ಶೆಟ್ಟರ್ ಬೇರೆ ಕಾಲವಾಗಿದ್ದರು. ಇನ್ನು ಈ ಶೆಟ್ಟರರಿಗೆ ಯಾರ ಹಂಗೂ ಇರಲಿಲ್ಲ. ಹಾಗಾಗಿ ಪಕ್ಷ ಬಿಡುವಾಗಲೂ ಅವರಿಗೆ ನಾಚಿಕೆಯಾಗಲಿಲ್ಲ.
ವಿಪರ್ಯಾಸವೆಂದರೆ ಬಹುತೇಕ ಜನ ಇಂದಿಗೂ ಬೆನ್ನುಹಾಕಿಹೋದ ಈ ಶೆಟ್ಟರರನ್ನು ಸದಾಶಿವ ಶೆಟ್ಟರರ ಪುತ್ರ, ದೀನದಯಾಳರ ಸಂಪರ್ಕದಲ್ಲಿದ್ದ ಮನೆಯಾಂವ ಎಂದೇ ಅಂದುಕೊಂಡಿದ್ದಾರೆ! ಇದು ಹೇಗಾಯಿತೆಂದರೆ ಬಿಸ್ಲೆರಿ ನೀರಿನ ಬಾಟಲ್ ಯಶಸ್ವಿಯಾದಾಗ ಅದೇ ಹೆಸರನ್ನು ಹೋಲುವ ನಕಲಿ ನೀರಿನ ಬಾಟಲ್‌ಗಳು ಬಂದವಲ್ಲ ಹಾಗೆ!
ಗ್ರಂಥಋಣ: ಸಂಸದೀಯಪಟು-ಸದಾಶಿವ ಎಸ್. ಶೆಟ್ಟರ್-ಗ್ರಂಥಾಲಯ ಉಪಸಮಿತಿ, ಬೆಂಗಳೂರು

ಕೃಪೆ : ಹೊಸದಿಗಂತ
ನೆಹರೂ,ಗಾಂಧಿಗೊಂದು ನ್ಯಾಯ, ಸಾವರ್ಕರ್’ರಿಗೊಂದು ನ್ಯಾಯವೇ?
- ರಾಕೇಶ್ ಶೆಟ್ಟಿ
ಸಾವರ್ಕರ್ ಅವರ ಹೆಸರು ಕೇಳಿದರೆ ದ್ವೇಷಕಾರುವ ಸಿದ್ದರಾಮಯ್ಯನವರು, ಸುಳ್ಳುಗಳೇ ತುಂಬಿರುವ ಲೇಖನವೊಂದನ್ನು ಬರೆದು ಮುಖ್ಯಮಂತ್ರಿಗಳನ್ನು ಚರ್ಚೆಗೆ ಕರೆದಿದ್ದಾರೆ. ಮಾಜಿ ಮುಖ್ಯಮಂತ್ರಿಯೊಬ್ಬರು ಹೀಗೆ ಆಧಾರ ರಹಿತ ಸುಳ್ಳುಗಳ ಸರಮಾಲೆಯನ್ನು ಹೇಗೆ ಬರೆಯಲು ಸಾಧ್ಯ? ಅವರ ಲೇಖನದ ಕೆಲವು ಪ್ರಶ್ನೆಗಳು, ಸುಳ್ಳುಗಳ ಬಗ್ಗೆ ಮಾತನಾಡುತ್ತಲೇ, ಸಾವರ್ಕರ್, ಗಾಂಧಿ, ನೆಹರೂ ಅವರ ಜೈಲುವಾಸಗಳ ಬಗ್ಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಳ್ಳಬೇಕು.

10 ಡಿಸೆಂಬರ್ 1934 – ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಜವಹರಲಾಲ್ ನೆಹರೂ ಅವರ ಜೈಲುವಾಸದ ಬಗ್ಗೆಯೊಂದು ಚರ್ಚೆಯಾಗುತ್ತದೆ. ಸದಸ್ಯರಾದ ಹಾರಾಲ್ದ್ ಹೇಲ್ಸ್ ಅವರು, ನೆಹರೂ ಅವರ ಪತ್ನಿ ಕಮಲಾ ನೆಹರೂ ಅವರ ಅನಾರೋಗ್ಯದ ಸ್ಥಿತಿಯನ್ನು ಗಮನಿಸಿ, ಜವಹರಲಾಲ್ ನೆಹರೂ ಅವರನ್ನು ಶೀಘ್ರ ಬಿಡುಗಡೆ ಮಾಡುವ ಬಗ್ಗೆ ಪರಿಶೀಲಿಸುವಂತೆ ಆಗ್ರಹಿಸುತ್ತಾರೆ.
ಅದಕ್ಕೆ ಉತ್ತರವಾಗಿ, ಅಂದಿನ ಬ್ರಿಟಿಷ್ ಭಾರತದ ಅಧೀನ ಕಾರ್ಯದರ್ಶಿಯಾಗಿದ್ದ ಬಟ್ಲರ್ ಉತ್ತರಿಸುತ್ತಾ : ಅವರ ಹೆಂಡತಿಯನ್ನು ನೋಡಿಕೊಳ್ಳಲಿ ಎನ್ನುವ ಕಾರಣಕ್ಕಾಗಿಯೇ, ಕಳೆದ ಬೇಸಿಗೆಯಲ್ಲಿಯೇ ಅವರನ್ನು ಕೆಲವು ದಿನಗಳ ಕಾಲ ಬಿಡುಗಡೆ ಮಾಡಿದ್ದೆವು. ಈಗ ಅವರನ್ನು ಆಸ್ಪತ್ರಗೆ ಹತ್ತಿರ ಇರುವ ಜೈಲಿಗೆ ವರ್ಗಾವಣೆ ಮಾಡಲಾಗಿದ್ದು, ವಾರದಲ್ಲಿ ಒಂದು ಅಥವಾ ಎರಡು ದಿನ ವೈದ್ಯರ ಸಲಹೆಯಂತೆ ಅವರು ಹೋಗಿ ನೋಡಿಕೊಂಡು ಬರಲು ಅನುಮತಿ ನೀಡಲಾಗಿದೆ.
ಸರ್ಕಾರದ ವಿರುದ್ಧದ ಪಿತೂರಿಯ ಆರೋಪದಲ್ಲಿ ನೆಹರೂ ಎರಡು ವರ್ಷಗಳ ಸಾಮಾನ್ಯ ಶಿಕ್ಷೆಗೆ ಗುರಿಯಾಗಿದ್ದರು. ಆ ಜೈಲು ಶಿಕ್ಷೆಯ ಅವಧಿಯ ಕುರಿತು ನಡೆದ ಚರ್ಚೆಯಿದು. ಕೇಸ್ ದಾಖಲಾಗಿ ಬಂಧನವಾದ ನಂತರ, ನೆಹರೂ ಅವರ ಭಾವನೆಗಳಿಗೆ ಘಾಸಿ(!)ಯಾಗುವುದಾದರೆ ಪ್ರಕರಣದ ವಿಚಾರಣೆಯನ್ನು ಖಾಸಗಿಯಾಗಿಯೇ ಮಾಡುವ ಆಫರ್ ಅನ್ನು ಬ್ರಿಟಿಷ್ ಅಧಿಕಾರಿ ನೀಡುತ್ತಾರೆ! ಕಡೆಗೆ, 6 ತಿಂಗಳ ಮೊದಲೇ ಬಿಡುಗಡೆ ಮಾಡುತ್ತದೆ ಬ್ರಿಟಿಷ್ ಸರ್ಕಾರ. ನೆಹರೂ ಅವರ ಮೇಲೆ ಇಂತಹ ಪ್ರೀತಿಯನ್ನು ಇದೇ ಮೊದಲ ಬಾರಿಯೇನೂ ಬ್ರಿಟಿಷ್ ಸರ್ಕಾರ ತೋರಿಸಿದ್ದಲ್ಲ.
ಅಕ್ಟೋಬರ್ 24 ,1930 ರಂದು ಕೂಡ ಎರಡು ವರ್ಷಗಳ ಸಾಮಾನ್ಯ ಶಿಕ್ಷೆಗೆ ಗುರಿಯಾದಗಲೂ, ಅವರನ್ನು ಕೇವಲ 97 ದಿನಗಳಲ್ಲೇ ಬಿಡುಗಡೆ ಮಾಡಿತ್ತು ಬ್ರಿಟಿಷ್ ಸರ್ಕಾರ. ಬ್ರಿಟಿಷರಿಗೆ ನೆಹರೂ ಅವರ ಮೇಲೆ ಅದಿನ್ನೆಂತಹ ಪ್ರೀತಿ! ಅಥವಾ ನೆಹರೂ ಅವರು ಜೈಲಿನ ಒಳಗಿದ್ದರೂ, ಹೊರಗಿದ್ದರೂ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅಪಾಯಕಾರಿಯಲ್ಲ ಅಂತಲೇ? ನೆಹರೂ ಅವರ ರಾಜಕೀಯ ಜೀವನದಲ್ಲಿ, ಒಂದೇ ಕೇಸಿನಲ್ಲಿ ಗರಿಷ್ಟ ಜೈಲು ವಾಸ ಅಂತ ಅವರಿಗೆ ಆಗಿದ್ದು ಕ್ವಿಟ್ ಇಂಡಿಯಾ ಎಂಬ Failed ಚಳವಳಿಯಲ್ಲಿ. 2 ವರ್ಷ 8 ತಿಂಗಳ ಸೆರೆವಾಸವದು. ಹಾಗೆಂದು ನೆಹರೂ ಅವರ ಸೆರೆವಾಸಗಳೇನು ಸೆಲ್ಯುಲಾರ್ ಜೈಲಿನಂತೆ ಒಂಟಿಯಾಗಿ, ಕತ್ತಲೆ ಹಾಗೂ ಕೆಟ್ಟ ಸೆಲ್ಲಿನೊಳಗಿನ ವಾಸವೇನು ಆಗಿರಲಿಲ್ಲ. ಮೇಲಿನ ಉದಾಹರಣೆಯಂತೆ ಬ್ರಿಟಿಷರ ಉದಾರತೆ ಹೇಗಾದರೂ ನೆಹರೂ ಅವರಿಗೆ ಸಿಗುತ್ತಿತ್ತು. ಉದಾಹರಣೆಗೆ, ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ನಂತರ ನೆಹರೂ ಅವರನ್ನು ನೈನಿಯಲ್ಲಿ ಜೈಲಿಗೆ ಹಾಕಿದರು. ಜೈಲಿನಲ್ಲಾದರೂ ಬಡಪಾಯಿ ನೆಹರೂ ಅವರಿಗೆ ಹೆಚ್ಚೇನು ಸೌಲಭ್ಯ ಸಿಗಲಿಲ್ಲ. ಅಬ್ಬಬ್ಬಾ ಎಂದರೆ ಒಬ್ಬ ಖೈದಿಯನ್ನು ಅವರ ಅಡುಗೆಯವನನ್ನಾಗಿ ನೇಮಿಸಲಾಯಿತು, ಗಾಳಿ ಬೀಸಲು ಮತ್ತೊಬ್ಬ ಖೈದಿ ನಿಯುಕ್ತಿಯಾದ. ಜೈಲಿನ ಊಟ ತಿಂದು ನಾಲಗೆ ಜಡ್ಡುಗಟ್ಟದಿರಲೆಂದು ಮನೆಯ ಊಟ, ಹಣ್ಣು ಹಂಪಲು ತರಿಸಿಕೊಳ್ಳುವ ಅವಕಾಶ ನೀಡಲಾಗಿತ್ತು.ನೆಹರೂ ಅವರ ದರ್ಶನಕ್ಕೆಂದು ಬರುತ್ತಿದ್ದ ಖೈದಿಗಳು ಬೇಕಾದ ಸಣ್ಣಪುಟ್ಟ ಸೇವೆಗಳನ್ನು ಮಾಡಿಕೊಡುತ್ತಿದ್ದರು. ತೀರಾ ನೆಹರೂ ಅವರ ಭಾಷೆಯಲ್ಲಿಯೇ ಹೇಳುವುದಾದರೆ, ಶೇ.95 ರಾಜಕೀಯ ಖೈದಿಗಳಿಗೆ ಇಂತಹ ಸೌಲಭ್ಯಗಳು ಸಿಗುತ್ತಿರಲಿಲ್ಲ. ನೆಹರೂ-ಗಾಂಧಿಯಂತವರು 5% ನೊಳಗಿದ್ದವರು. ಬ್ರಿಟಿಷರ ಪಾಲಿಗೆ ನಿರುಪದ್ರವಿಗಳಾಗಿರಬಹುದೇ?
ಮತ್ತಷ್ಟು ಓದು
ಭಾರತ ಮತ್ತೊಂದು ಪಾಕಿಸ್ತಾನವಾಗಬಾರದು ಎಂದರೆ…
– ರಾಕೇಶ್ ಶೆಟ್ಟಿ
ಜೂನ್ 28ರ ಮಧ್ಯಾಹ್ನ ರಾಜಸ್ಥಾನದ ಉದಯಪುರದಲ್ಲಿ ನಡೆದ ಭೀಕರ ಹತ್ಯೆಯ ಘಟನೆಯಿಂದ ಸಾಮಾನ್ಯ ಹಿಂದೂ ತಲ್ಲಣಗೊಂಡಿದ್ದಾನೆ, ಆಕ್ರೋಷಿತನಾಗಿದ್ದಾನೆ. ‘ನಂಬಿಸಿ ಕತ್ತು ಕೊಯ್ಯುವುದು’ ಎಂದರೇನು ಎನ್ನುವುದನ್ನು ಇಸ್ಲಾಮಿಕ್ ಉಗ್ರರು ಕಮಲೇಶ್ ತಿವಾರಿಯ ನಂತರ, ಉದಯಪುರದ ಬಡ ಟೈಲರ್ ಕನ್ನಯ್ಯ ಲಾಲ್ ಅವರ ಹತ್ಯೆಯ ಮೂಲಕ ತೋರಿಸಿಕೊಟ್ಟಿದ್ದಾರೆ. ಕಮಲೇಶ್ ತಿವಾರಿಯವರ ಹಂತಕರಾದ ಫರಿದುದ್ಡೀನ್ ಶೇಖ್, ಅಶ್ಫಾಖ್ ಶೇಖ್ ಅವರು ತಮ್ಮನ್ನು ಹಿಂದೂಗಳೆಂದು ಫೇಸ್ಬುಕ್ಕಿನಲ್ಲಿ ಪರಿಚಯ ಮಾಡಿ, ಸ್ನೇಹ ಸಂಪಾದಿಸಿ, ಕೇಸರಿ ಕುರ್ತಾ ಧರಿಸಿ, ಸ್ವೀಟ್ ಬಾಕ್ಸಿನೊಳಗೆ ರಿವಾಲ್ವರ್ ಹಾಗೂ ಚಾಕು ಹಿಡಿದು ಬಂದಿದ್ದರು. ಕಮಲೇಶ್ ತಿವಾರಿಯವರ ಸಹಾಯಕನನ್ನು ಸಿಗರೇಟ್ ತರುವಂತೆ ಕಳುಹಿಸಿ, ಏಕಾಂಗಿಯಾಗಿದ್ದ ಕಮಲೇಶ್ ತಿವಾರಿಯರ ಮೇಲೆ ಎರಗಿ ಕತ್ತು ಸೀಳಿ, ಗುಂಡು ಹಾರಿಸಿ ಕೊಲ್ಲಲಾಗಿತ್ತು. ಮರಣೋತ್ತರ ವರದಿಯ ಪ್ರಕಾರ 15 ಬಾರಿ ಚುಚ್ಚಿ ಕೊಲ್ಲಲಾಗಿತ್ತು. 1926ರಲ್ಲಿ ಅಬ್ದುಲ್ ರಶೀದ್ ಕೂಡ ಹೀಗೆಯೇ ಸಂಭಾವಿತನಂತೆ ಬಂದು, ಸಹಾಯಕನನ್ನು ನೀರು ತರಲು ಕಳುಹಿಸಿ ಸ್ವಾಮಿ ಶ್ರದ್ದಾನಂದರನ್ನು ಗುಂಡಿಕ್ಕಿ ಕೊಂದಿದ್ದ.

ಕನ್ನಯ್ಯ ಲಾಲ್ ಅವರ ಹತ್ಯೆ ನಡೆದಿದ್ದೂ ಹೀಗೆಯೇ. ಬಟ್ಟೆ ಹೊಲಿಸುವವರ ಸೋಗಿನಲ್ಲಿ ಬಂದ ಮೊಹಮ್ಮದ್ ಗೌಸ್ , ಮೊಹಮ್ಮದ್ ರಿಯಾಜ್ , ಅಳತೆ ತೆಗೆದುಕೊಳ್ಳುವಾಗ ಕನ್ನಯ್ಯಲಾಲ್ ಅವರ ಕತ್ತು ಕೊಯ್ದರು. 21 ಬಾರಿ ಚುಚ್ಚಿ ಕೊಲ್ಲಲಾಗಿದೆ ಎಂದಿದೆ ಮರಣೋತ್ತರ ವರದಿ. ಬಹುಶಃ ಹಂತಕರು ವಿಡಿಯೋವನ್ನು ವೈರಲ್ ಮಾಡದೇ ಇದ್ದಿದ್ದರೆ, ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಇದಕ್ಕೊಂದು ಬೇರೆ ಕತೆ ಕಟ್ಟಿ ಮುಗಿಸುತ್ತಿತ್ತು. ನಂತರ ತಿಳಿದು ಬಂದ ವಿಷಯದ ಪ್ರಕಾರ, ಕನ್ನಯ್ಯ ಲಾಲ್ ಅವರು ಕೇವಲ ನೂಪುರ್ ಶರ್ಮ ಅವರನ್ನು ಬೆಂಬಲಿಸಿದ ಕಾರಣಕ್ಕೆ ಬಂಧನವಾಗಿ, ಬಿಡುಗಡೆಯಾಗಿ ಬಂದ ನಂತರ, ತನ್ನ ಪ್ರಾಣಕ್ಕೆ ಅಪಾಯವಿದೆ ಎಂದು ಪೋಲಿಸ್ ರಕ್ಷಣೆ ಕೋರಿದ್ದರು. ಒಬ್ಬ ಬಡವನ ಮನವಿಯನ್ನು ಪೋಲಿಸರು ಹೇಗೆ ತಾತ್ಸಾರದಿಂದ ಸ್ವೀಕರಿಸುತ್ತಾರೋ, ಹಾಗೆಯೇ ಸ್ವೀಕರಿಸಿ ಕಸದ ಬುಟ್ಟಿಯ ಜಾಗ ತೋರಿಸಿದರು. ಅಂದ ಹಾಗೆ, ಕನ್ನಯ್ಯ ಲಾಲ್ ಅವರ ಕುರಿತ ಮಾಹಿತಿಯನ್ನು ಹಂಚಿಕೊಂಡವನು ಯಾರೋ ಅನಾಮಿಕನಲ್ಲ. ಕನ್ನಯ್ಯ ಅವರ ಪಕ್ಕದ ಮನೆಯ ನಜೀಂ. ನಜೀಮನಿಗೆ ನೆರೆ ಮನೆಯವನ ಸ್ನೇಹಕ್ಕಿಂತ ಆತನ ಇಸ್ಲಾಂ ಮುಖ್ಯವಾಗಿತ್ತು. ನಂಬಿ ಕೆಟ್ಟವನು ಕನ್ನಯ್ಯ. ಕಾಶ್ಮೀರದ ಪಂಡಿತರ ಹತ್ಯೆಯಲ್ಲೂ ನೆರೆಮನೆಯವರೇ ಹೇಗೆ ಸಹಾಯ ಮಾಡಿದ್ದರು ಎನ್ನುವುದನ್ನು, ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಇಡೀ ಭಾರತವೇ ನೋಡಿದೆ. ಜೊತೆಗಿದ್ದವರಿಗೆ ಮೂಹೂರ್ತ ಇಡುವ ಧೂರ್ತ ಮನಸ್ಥಿತಿಯನ್ನು ಇವರು ಕಲಿಯುವುದು ಎಲ್ಲಿಂದ?
ಮತ್ತಷ್ಟು ಓದು
ಸ್ವದೇಶ, ಸ್ವಧರ್ಮ, ಸ್ವಾತಂತ್ರ್ಯಗಳ ನೈಜದನಿ ವೀರ್ ಸಾವರ್ಕರ್
ಲೇಖಕರು : ಬಿ ಎಸ್ ಜಯಪ್ರಕಾಶ ನಾರಾಯಣ
ಪತ್ರಕರ್ತರು, ಖ್ಯಾತ ಅನುವಾದಕರು
ವೈಭವ್ ಪುರಂದರೆಯವರ ವೀರ್ ಸಾವರ್ಕರ್ ಪುಸ್ತಕವನ್ನು ಕನ್ನಡಕ್ಕೆ ತಂದಿದ್ದಾರೆ.
ಸಾವರ್ಕರ್ ಜನ್ಮದಿನ (ಮೇ 28)
ವಿನಾಯಕ ದಾಮೋದರ ಸಾವರ್ಕರ್ ಎನ್ನುವ ಹೆಸರೇ ಮೈಮನಗಳಲ್ಲಿ ದೇಶಹಿತದ ಸಂಕಲ್ಪವನ್ನು ತಾಳುವಂತೆ ಮಾಡುವಂಥದ್ದು! ಇಂದು ಅವರಿದ್ದಿದ್ದರೆ 140ನೇ ವಸಂತಕ್ಕೆ ಕಾಲಿಡುತ್ತಿದ್ದರು. ವ್ಯವಸ್ಥಿತ ಅಪಪ್ರಚಾರ ಮತ್ತು ಕ್ಷುಲ್ಲಕ ಶಕ್ತಿಗಳು ಸೃಷ್ಟಿಸಿರುವ ವಿಸ್ಮೃತಿಯಲ್ಲಿ ಸಾವರ್ಕರ್ ಅವರ ಕ್ಷಾತ್ರತೇಜಸ್ಸಿಗೆ ಅನ್ಯಾಯವೆಸಗಲಾಗಿದೆ. ಅವರ ಹುಟ್ಟುಹಬ್ಬದ ನೆಪದಲ್ಲಿ ಇಲ್ಲಿ ಅನಾವರಣಗೊಂಡಿದೆ, ಸಾವರ್ಕರ್ ಅವರ ಸಾಚಾ ಕಥನ!
ಸ್ವತಂತ್ರ ಭಾರತದ ಇತಿಹಾಸದಲ್ಲಿ ತುಂಬಾ ವ್ಯವಸ್ಥಿತವಾಗಿ ಹಲವು ವಿಸ್ಮೃತಿಗಳನ್ನೂ ಹೇವರಿಕೆಗಳನ್ನೂ ಸೃಷ್ಟಿಸಲಾಗಿದೆ. ಇದಕ್ಕಾಗಿ, ನಮ್ಮನ್ನು ಬಹುಕಾಲ ಆಳಿದ ಸರಕಾರಗಳು ಸೆಕ್ಯುಲರಿಸಂ, ಧರ್ಮನಿರಪೇಕ್ಷತೆ, ಮೈನಾರಿಟಿಯಿಸಂ ಇತ್ಯಾದಿ ವಿಭ್ರಮೆಗಳನ್ನು ಜನರ ಮನಸ್ಸಿನಲ್ಲಿ ಬಿತ್ತಿವೆ; ತಮ್ಮ ಹಿಡನ್ ಅಜೆಂಡಾ ಸಾಧಿಸಲು ಅವು ರಾಜಕೀಯ ಅಧಿಕಾರ, ಅಕಾಡೆಮಿಕ್ ಸೌಖ್ಯ, ತಾವೇ ಹುಟ್ಟುಹಾಕಿದ ನೂರಾರು ಸಂಘ ಸಂಸ್ಥೆಗಳು/ವಿಶ್ವವಿದ್ಯಾಲಯಗಳನ್ನು ನಿರ್ಲಜ್ಜವಾಗಿ ದುರ್ಬಳಕೆ ಮಾಡಿಕೊಂಡಿವೆ. ಇಷ್ಟೇ ಅಲ್ಲ, ಈ ಕುತಂತ್ರಗಳ ಮೂಲಕ ಸ್ವಧರ್ಮ ಮತ್ತು ಸ್ವದೇಶಗಳ ಬಗ್ಗೆ ಅಸಹ್ಯದ/ಕೀಳರಿಮೆಯ ಭಾವನೆ ಬರುವಂತೆ ಮಾಡುವಲ್ಲಿ ಈ ಶಕ್ತಿಗಳು ನಿರತವಾಗಿದ್ದವು. ಜತೆಯಲ್ಲೇ, ಭಾರತದ ಚರಿತ್ರೆಯ ಕ್ಷಾತ್ರ ತೇಜಸ್ಸಿನ ಉಜ್ಜ್ವಲ ಅಧ್ಯಾಯಗಳನ್ನು ಮರೆಮಾಚುವ ವಿಕೃತಿಯನ್ನು ಇವು ಮೈಗೂಡಿಸಿಕೊಂಡಿದ್ದವು. ದುರಂತವೆಂದರೆ, ನಾಲ್ಕೈದು ದಶಕಗಳ ಕಾಲ ಈ ʼಅತೀ ಬುದ್ಧಿವಂತಿಕೆ’ಯ ಮತ್ತು ಆತ್ಮನಾಶಕವಾದ ಕೆಲಸಗಳೆರಡೂ ಪ್ರಶ್ನಾತೀತವಾಗಿದ್ದವು!
ಭಾರತದ ಇತಿಹಾಸದಲ್ಲಿ ಇಂತಹ ವ್ಯವಸ್ಥಿತ ಅನ್ಯಾಯಕ್ಕೊಳಗಾದವರಲ್ಲಿ `ಸ್ವಾತಂತ್ರ್ಯವೀರ’ ವಿನಾಯಕ ದಾಮೋದರ ಸಾವರ್ಕರ್ ಕೂಡ ಒಬ್ಬರು. ಮಹಾರಾಷ್ಟ್ರದ ನಾಸಿಕ್ ಬಳಿಯ ಭಾಗೂರಿನಲ್ಲಿ ತಮ್ಮ ಚಿಕ್ಕಂದಿನಲ್ಲೇ `ಮಿತ್ರಮೇಳ’ವನ್ನು ಕಟ್ಟುವ ಮೂಲಕ, ಸಾವರ್ಕರ್ ದೇಶಾಭಿಮಾನದ ಎರಕದಲ್ಲಿ ಬೆಳೆದು ಬಂದವರು. ವಯಸ್ಕರಾದ ಮೇಲೆ, ಆ ಕಾಲದ ಎಲ್ಲ ಪ್ರತಿಭಾವಂತರಂತೆಯೇ ಲಂಡನ್ನಿಗೆ ಹೋಗಿ ಬ್ಯಾರಿಸ್ಟರ್ ಪದವಿ ಪಡೆದ ಅವರು, ತಮ್ಮ ಹೆಚ್ಚಿನ ಸಮಕಾಲೀನರಂತೆ ಲೌಕಿಕ ಸುಖದ ಹಾದಿಯಲ್ಲಿ ಹೋಗಲಿಲ್ಲ. ಬದಲಿಗೆ, ಅದನ್ನು ಪ್ರಜ್ಞಾಪೂರ್ವಕವಾಗಿ ನಿರಾಕರಿಸಿ, ಬ್ಯಾರಿಸ್ಟರ್ ಪದವಿಗೆ ಓದುತ್ತಿದ್ದ ದಿನಗಳಲ್ಲೇ ದೇಶದ ಸ್ವಾತಂತ್ರ್ಯಪ್ರಾಪ್ತಿಗಾಗಿ ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಹೋರಾಟದ ಮಾರ್ಗದಲ್ಲಿ ಹೊರಟರು. ತಮ್ಮ ಪ್ರಖರ ವಿಚಾರಗಳ ಮೂಲಕ ಮದನ್ ಲಾಲ್ ಧಿಂಗ್ರಾ ತರಹದ ಕ್ರಾಂತಿಕಾರಿಗಳನ್ನು ಅವರು ರೂಪಿಸಿದರು. ಲಂಡನ್ನಿನಲ್ಲಿದ್ದ `ಇಂಡಿಯಾ ಹೌಸ್’ ಅನ್ನು ತಮ್ಮ ಚಟುವಟಿಕೆಗಳ ಆಡುಂಬೊಲವನ್ನಾಗಿ ಮಾಡಿಕೊಂಡು, ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದರು. ಅದಕ್ಕೂ ಮೊದಲು, ಭಾರತದಲ್ಲಿ ಓದುತ್ತಿದ್ದಾಗ ಲೋಕಮಾನ್ಯ ಬಾಲಗಂಗಾಧರ ತಿಲಕರ ಅನುಯಾಯಿಯಾಗಿ ಸ್ವದೇಶಿ ಚಳವಳಿಯನ್ನು ಸಂಘಟಿಸಿ, ಸಂಚಲನ ಸೃಷ್ಟಿಸಿದ್ದರು. ಅವರು ಲಂಡನ್ನಿನಲ್ಲಿದ್ದ ದಿನಗಳಲ್ಲಿ ತಾಯಿ ಭಾರತಿಯ ಸ್ವಾತಂತ್ರ್ಯಕ್ಕಾಗಿ ನಡೆಸಿದ ಚಟುವಟಿಕೆಗಳ ವೃತ್ತಾಂತವೇ ರೋಮಾಂಚಕ! ದೇಶವಾಸಿಗಳು ಸ್ವಾತಂತ್ರ್ಯಕ್ಕಾಗಿ 1857ರಲ್ಲಿ ನಡೆಸಿದ ಹೋರಾಟವನ್ನು `ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟ’ ಎಂದು ಬಣ್ಣಿಸಿ, ಅದರ ಬಗ್ಗೆ ಸಮಗ್ರ ಗ್ರಂಥವನ್ನು ಬರೆದ ಹೆಗ್ಗಳಿಕೆ ಸಾವರ್ಕರ್ ಅವರದು. ವಾಸ್ತವವಾಗಿ, ಆ ದಿನಗಳಲ್ಲಿ ಲಂಡನ್ನಿನಲ್ಲಿ ಇವರಂತೆಯೇ ಬ್ಯಾರಿಸ್ಟರ್ ಪದವಿಗೆ ಓದುತ್ತಿದ್ದ ಜವಾಹರಲಾಲ್ ನೆಹರು ಕೂಡ ಈ ಗ್ರಂಥವನ್ನು ಅಪಾರವಾಗಿ ಮೆಚ್ಚಿಕೊಂಡು, ತಮ್ಮ ತಂದೆ ಮೋತಿಲಾಲ್ ನೆಹರು ಅವರಿಗೆ ಪತ್ರ ಬರೆದಿದ್ದಕ್ಕೆ ಪುರಾವೆಗಳಿವೆ. ವಿಷಾದದ ಸಂಗತಿಯೆಂದರೆ, ಲಂಡನ್ನಿನಿಂದ ಭಾರತಕ್ಕೆ ವಾಪಸ್ ಬಂದಮೇಲೆ, ನೆಹರು ಅವರು ಸಾವರ್ಕರ್ ಬಗ್ಗೆ ವಿರೋಧ ಬೆಳೆಸಿಕೊಂಡು ಬಿಟ್ಟರು. ಇದು ಕೊನೆಗೆ ಎಲ್ಲಿಯವರೆಗೆ ಹೋಯಿತೆಂದರೆ, ತುಷ್ಟೀಕರಣದ ರಾಜಕಾರಣ ಮತ್ತು ದೇಶವಿಭಜನಗಾಗಿ ಮುಸ್ಲಿಂ ಲೀಗ್ ಮಾಡುತ್ತಿದ್ದ ಆಗ್ರಹಗಳನ್ನು ವಿರೋಧಿಸುತ್ತಿದ್ದ ಸಾವರ್ಕರ್ ಅವರಿಗೆ ಕೋಮುವಾದಿ, ಮೂಲಭೂತವಾದಿ, ದೇಶ ವಿಭಜಕ, ಗಾಂಧಿಯವರ ಹತ್ಯೆಯ ಹಿಂದಿನ ಪಾತ್ರಧಾರಿ ಎನ್ನುವ ರೋಗಗ್ರಸ್ತ ಹಣೆಪಟ್ಟಿಗಳನ್ನು ಹಚ್ಚಲಾಯಿತು. ಹಾಗಾದರೆ, ಸಾವರ್ಕರ್ ನಿಜಕ್ಕೂ ಏನಾಗಿದ್ದರು?
ಸಾವರ್ಕರ್ ಬಗ್ಗೆ ರಾಜಕೀಯ ವಿರೋಧಿಗಳು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆಯೇನೂ ಇಲ್ಲ ಎನ್ನುತ್ತಿದ್ದಾರೆ. ಅಂಡಮಾನಿನ ಜೈಲಿನಲ್ಲಿ ಅವರು ಕರಾಳ `ಕಾಲಾಪಾನಿ’ ಶಿಕ್ಷೆ ಅನುಭವಿಸುತ್ತಿದ್ದಾಗ ಬ್ರಿಟಿಷರಿಗೆ ಬರೆದ ಕ್ಷಮಾಪಣಾ ಧಾಟಿಯ ಜಾಣ್ಮೆಯ ಪತ್ರಗಳನ್ನಿಟ್ಟುಕೊಂಡು ಅವರನ್ನು ದೇಶದ್ರೋಹಿಯೆಂದು ಬಿಂಬಿಸಿದ್ದಾರೆ. ಅವರೊಬ್ಬ ಬ್ರಾಹ್ಮಣವಾದಿಯಾಗಿದ್ದರು ಎಂದು ರಚ್ಚೆ ಮಾಡುತ್ತಿರುವವರ ಸಂತತಿಯೂ ಇದೆ. ಹಾಗಾದರೆ, ಇವುಗಳ ಸತ್ಯಾಸತ್ಯತೆ ಏನು? ಇಂತ ಮಿಥ್ಯೆಗಳನ್ನು ಸತ್ಯದ ಒರೆಗಲ್ಲಿಗೆ ಹಚ್ಚಿ, ಭಗ್ನಗೊಳಿಸಲು ಇದು ಸಕಾಲ. ಈ ದೃಷ್ಟಿಯಿಂದ ನೋಡಿದರೆ, ಇದು ಭಾರತದ ನೈಜ ಚರಿತ್ರೆಯು ವಿಕೃತಿ ಮತ್ತು ವಿಸ್ಮೃತಿಗಳ ಪೊರೆಯನ್ನು ಕಿತ್ತೆಸೆದು, ವಸ್ತುನಿಷ್ಠ ಆಕೃತಿಯನ್ನು ಪಡೆದುಕೊಳ್ಳುತ್ತಿರುವ ನಿರ್ಣಾಯಕ ಕಾಲಘಟ್ಟವಾಗಿದೆ.
ದೇಶದಲ್ಲಿ ಇಂದು ʼಹಿಂದುತ್ವʼದ ಅಲೆ ಪ್ರಖರವಾಗಿದೆ. ಇದರ ಕೀರ್ತಿಯಲ್ಲಿ ಹೆಚ್ಚಿನ ಪಾಲು ಸಲ್ಲಬೇಕಾದ್ದು ಸಾವರ್ಕರ್ ಅವರಿಗೆ! ಏಕೆಂದರೆ, ಈ ಪರಿಕಲ್ಪನೆ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ವ್ಯಾಪಕವಾಗಿ ಮುನ್ನೆಲೆಗೆ ತಂದವರೇ ಅವರು. ಇದರ ಜತೆಗೆ ಅವರು, ಹಿಂದೂ ಮಹಾಸಭಾದ ಅಧ್ಯಕ್ಷರಾಗಿ ದೇಶದಲ್ಲಿ ಎಬ್ಬಿಸಿದ ಹಿಂದೂ ಅಸ್ಮಿತೆಯ ನಂದಾದೀಪ ಈಗ ಜಾಜ್ವಲ್ಯಮಾನವಾಗಿ ಬೆಳಗುತ್ತಿದೆ. ಅದರ ಪ್ರಭೆಯ ಮುಂದೆ ಬಣ್ಣಬಣ್ಣದ ತರಹೇವಾರಿ ಸಿದ್ಧಾಂತಗಳ ವೇಷ ಕಳಚಿ ಬಿದ್ದಿದೆ.
ಸಾವರ್ಕರ್ ಅವರ ಬಹುಮುಖಿ ಮತ್ತು ಸಮಾಜಪರ ವ್ಯಕ್ತಿತ್ವದ ಇನ್ನೊಂದಿಷ್ಟು ಆಯಾಮಗಳನ್ನು ಇಲ್ಲಿ ನೆನೆಯಬೇಕು. ನಮಗೆಲ್ಲ ಗೊತ್ತಿರುವಂತೆ, ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಪಕ್ಷ ಮತ್ತು ಅದರ ಬೆರಳೆಣಿಕೆಯಷ್ಟು ನಾಯಕರು ಮಾತ್ರ ಶ್ರಮಿಸಿದರು ಎನ್ನುವ ಚಿತ್ರಣ ಹಲವು ತಲೆಮಾರುಗಳ ಜನರಲ್ಲಿ ಬೇರೂರಿದೆ. ಅಂದಂತೆ, ಕಾಂಗ್ರೆಸ್ ಪಕ್ಷವು ಬ್ರಿಟಿಷರಿಂದ ಭಾರತಕ್ಕೆ ಪೂರ್ಣಸ್ವಾತಂತ್ರ್ಯಕ್ಕಾಗಿ ದನಿಯೆತ್ತಿದ್ದು 1929ರಷ್ಟು ತಡವಾಗಿ! ಅಲ್ಲಿಯವರೆಗೂ ಆ ಪಕ್ಷದ ನಾಯಕರೆಲ್ಲ ಭಾರತವು ಬ್ರಿಟಿಷರ ಅಧೀನದಲ್ಲೇ (ಡೊಮಿನಿಯನ್ ಸ್ಟೇಟ್) ಮುಂದುವರಿಯುವುದರ ಪರವಾಗಿದ್ದರು. ಆದರೆ, ಸಾವರ್ಕರ್ ಇದಕ್ಕೂ 20 ವರ್ಷಗಳ ಮುಂಚೆಯೇ -1909ರಲ್ಲೇ- `ಸಂಪೂರ್ಣ ಸ್ವಾತಂತ್ರ್ಯವು ನಮ್ಮ ಹಕ್ಕು! ಇದರಲ್ಲಿ ಗುಲಗಂಜಿಯಷ್ಟು ಕಡಿಮೆಯಾದರೂ ನಾವು ಅದನ್ನು ಒಪ್ಪುವುದಿಲ್ಲ!!’ ಎಂದು ಘರ್ಜಿಸಿದ್ದರು. ಇದನ್ನು ಸಹಿಸದ ಬ್ರಿಟಿಷರು, ಸಾವರ್ಕರ್ ಅವರನ್ನು ಅಂಡಮಾನ್ ಜೈಲಿಗೆ ತಳ್ಳಿ, 50 ವರ್ಷಗಳ ಜೀವಾವಧಿ ಶಿಕ್ಷೆಯನ್ನು ವಿಧಿಸಿದರು. ಅಲ್ಲಿ ಈ `ಸ್ವಾತಂತ್ರ್ಯವೀರ’ ಅನುಭವಿಸಿದ ಯಮಯಾತನೆ ವರ್ಣಿಸಲಸದಳ.
ಅಂಡಮಾನಿನಿಂದ ಬಿಡುಗಡೆಯಾಗಿ ಬಂದಮೇಲೂ ಸಾವರ್ಕರ್ ಅವರಿಗೆ ಇತರರಂತೆ ಮುಕ್ತವಾಗಿ ಓಡಾಡಲು ಬ್ರಿಟಿಷರು ಅವಕಾಶ ಕೊಡಲಿಲ್ಲ. ಬದಲಿಗೆ, ಮಹಾರಾಷ್ಟ್ರದ ರತ್ನಗಿರಿಯಲ್ಲಿ ಅವರನ್ನು 14-15 ವರ್ಷಗಳ ಕಾಲ ನಿರ್ಬಂಧಿತ ವಾಸದಲ್ಲಿ ಇಡಲಾಗಿತ್ತು! ಆದರೂ ಭಾರತದ ಶ್ರೇಯಸ್ಸಿಗೆ ತುಡಿಯುತ್ತಿದ್ದ ಅವರು ಆ ಇತಿಮಿತಿಗಳನ್ನು ಮೆಟ್ಟಿ ನಿಂತು, ಹಲವು ಶ್ರೇಯಸ್ಕರವಾದ ಉಪಕ್ರಮಗಳನ್ನು ಕೈಗೊಂಡರು. ಈ ನಿಟ್ಟಿನಲ್ಲಿ ಮೊದಲು ಅವರು ಕೈಗೆತ್ತಿಕೊಂಡಿದ್ದು, ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯ ನಿವಾರಣೆಯ ಕೆಲಸ. ಇದಕ್ಕಾಗಿ ಅವರು ದಲಿತ ಸಮುದಾಯಕ್ಕೆ ಸೇರಿದ ಮಹಾಡ್ ದಂಪತಿಗಳ ಪಾದಪೂಜೆ ಮಾಡಿದರು. ದೇವಸ್ಥಾನದ ಗಣೇಶೋತ್ಸವಗಳಲ್ಲಿ ದಲಿತರಿಗೆ ಅಗ್ರಮನ್ನಣೆ ಕೊಡಿಸಿದರು. ಜಾತಿಪಂಥಗಳ ಭೇದವಿಲ್ಲದ ಭಜನಾ ಮಂಡಲಿಗಳನ್ನು ಏರ್ಪಡಿಸಿದರು. ಶಾಲೆಗಳನ್ನು ಕಟ್ಟಿಸಿದರು. ದಲಿತರ ಮಕ್ಕಳಿಗೆ ಪುಸ್ತಕಗಳನ್ನು ಹಂಚಿದರು. ಇವೆಲ್ಲಕ್ಕೂ ಕಲಶವಿಟ್ಟಂತೆ, ದಲಿತರಿಗೆ ದೇವಸ್ಥಾನ ಪ್ರವೇಶದ ಮುಕ್ತ ಹಕ್ಕು ಎಷ್ಟೊಂದು ಅಗತ್ಯವೆನ್ನುವುದನ್ನು ಮನಗಂಡಿದ್ದ ಅವರು, ಅವರಿಗೆಂದೇ `ಪತಿತ ಪಾವನ ಮಂದಿರ’ವನ್ನೇ ಕಟ್ಟಿಸಿದರು!
ಎಲ್ಲವೂ ಅವರು ಅಂದುಕೊಂಡಂತೆಯೇ ನಡೆದಿದ್ದರೆ, ಬಾಬಾಸಾಹೇಬ್ ಅಂಬೇಡ್ಕರರೇ ಈ ಮಂದಿರವನ್ನು ಉದ್ಘಾಟಿಸಬೇಕಿತ್ತು. ಆದರೆ, ಪೂರ್ವನಿಗದಿತ ಕಾರ್ಯಕ್ರಮಗಳಿಂದಾಗಿ ಅವರು ಬರಲಾಗಲಿಲ್ಲ. ಆದರೇನಂತೆ, ಅಸ್ಪೃಶ್ಯತೆ ನಿವಾರಣೆಯ ನಿಟ್ಟಿನಲ್ಲಿ ಸಾವರ್ಕರರ ಪ್ರಾಮಾಣಿಕ ಕಳಕಳಿಯನ್ನು ಮನಗಂಡಿದ್ದ ಅವರು, `ಸಾವರ್ಕರರಂಥ ಹತ್ತು ಮಂದಿ ಇದ್ದರೆ, ಒಂದೆರಡು ದಶಕಗಳಲ್ಲಿ ಈ ದೇಶದಿಂದ ಅಸ್ಪೃಶ್ಯತೆ ನಾಮಾವಶೇಷವಾಗಿ ಹೋಗಲಿದೆ!’ ಎಂದು ಉದ್ಗರಿಸಿದ್ದರು.
ಈ ಉಪಕ್ರಮವನ್ನು ಮತ್ತಷ್ಟು ವಿಸ್ತರಿಸಿದ ಸಾವರ್ಕರ್, ಅಂತರ್ಜಾತೀಯ ಭೋಜನ ಕೂಟಗಳನ್ನು ಏರ್ಪಡಿಸಿದರು. ಅಂತರ ಜಾತೀಯ ವಿವಾಹಗಳ ಜತೆಗೆ ಅಂತರಪ್ರಾಂತೀಯ ವಿವಾಹಗಳನ್ನು ಪ್ರೋತ್ಸಾಹಿಸಿದರು. ನಿಜ ಹೇಳಬೇಕೆಂದರೆ, ಇವೆಲ್ಲವನ್ನೂ ಅವರು ಮಾಡಿದ್ದು ಗಾಂಧೀಜಿಯವರು ಅಸ್ಪೃಶ್ಯತೆ ನಿವಾರಣೆಗೆ ಕರೆ ಕೊಡುವುದಕ್ಕೂ ಎಷ್ಟೋ ವರ್ಷಗಳ ಮುಂಚೆಯೇ! ಆದರೆ, ಗಾಂಧೀಜಿಯವರು ದಲಿತರ ಕೇರಿಗೆ ಹೋಗಿ ಮಲ ಎತ್ತಿದ್ದನ್ನು ಮಾತ್ರ ಹೇಳುವ `ಅನುಕೂಲಸಿಂಧು ಶಕ್ತಿಗಳು’, ಸಾವರ್ಕರರ ಈ ಸೇವೆಯನ್ನು ಮತ್ತು ಅವರು ರವಾನಿಸಿದ ಪರಿವರ್ತನೆಯ ಸಂಕೇತಗಳನ್ನು ನೇಪಥ್ಯಕ್ಕೆ ಸರಿಸಿರುವುದು ನಮ್ಮ ದೇಶದಲ್ಲಿ ಬೇರೂರಿರುವ `ಬೌದ್ಧಿಕ ಅಪ್ರಾಮಾಣಿಕತೆ’ಗೊಂದು ನಿದರ್ಶನವಷ್ಟೆ. ಇದಿಷ್ಟೇ ಅಲ್ಲ, ಹಿಂದೂಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ನಗರೀಕರಣದ ಪ್ರಜ್ಞೆಗಳು ಹೆಚ್ಚುವುದರಿಂದ ಭಾರತ ಅಖಂಡವಾಗಿ ಉಳಿಯಲಿದೆ ಎಂದು ಅಚಲವಾಗಿ ನಂಬಿದ್ದ ಅವರು, ದಲಿತರ ಆಹಾರದ ಹಕ್ಕಿನ ವಿಚಾರದಲ್ಲಿ ಆ ಸಮುದಾಯದ ಪರವಾಗಿ ನಿಂತಿದ್ದರು! ಇದಕ್ಕಾಗಿ ಅವರು, ಮೇಲ್ಜಾತಿಗಳ ಮೇಲೆ ವೈಚಾರಿಕ ಪ್ರಹಾರವನ್ನೇ ನಡೆಸಿದರು.
ಇನ್ನು, ಸಾವರ್ಕರ್ ಅವರೊಬ್ಬ `ಮುಸ್ಲಿಂ ವಿರೋಧಿ’ ಎನ್ನುವ ವಿಚಾರಕ್ಕೆ ಬರೋಣ. ಇಂಥವರಿಗೆ ಚರಿತ್ರೆಯ ಪ್ರಜ್ಞೆ ಎಷ್ಟೊಂದು ಅಳ್ಳಕವಾಗಿದೆ ಎನ್ನುವುದಕ್ಕೆ ಇದು ಇನ್ನೊಂದು ಉದಾಹರಣೆ. ಏಕೆಂದರೆ, ಸಾವರ್ಕರ್ ತಮ್ಮ ಬದುಕಿನ ಪೂರ್ವಾರ್ಧದಲ್ಲಿ ಪ್ರಾಮಾಣಿಕವಾಗಿ ಹಿಂದೂ-ಮುಸ್ಲಿಂ ಐಕ್ಯತೆಗೆ ಶ್ರಮಿಸಿದವರು. ಅವರ ಈ ಪ್ರತಿಪಾದನೆಯನ್ನು ಸ್ವತಃ ಗಾಂಧೀಜಿಯೇ ಮೆಚ್ಚಿಕೊಂಡಿದ್ದರು. ವಿಲಕ್ಷಣ ಸಂಗತಿಯೆಂದರೆ, ಇವತ್ತಿನ ಗಾಂಧೀವಾದಿಗಳಿಗೆ ಇದು ಗೊತ್ತಿಲ್ಲ! ಆದರೆ, ದೂರದ ಟರ್ಕಿಗೆ ಸಂಬಂಧಿಸಿದ ವಿದ್ಯಮಾನವಾಗಿದ್ದ ಖಿಲಾಫತ್ ಚಳವಳಿಯ ಬಗ್ಗೆ ಅತಾರ್ಕಿಕವಾದ ಸಹಾನುಭೂತಿಯನ್ನು ಹೊಂದಿದ್ದ ಒಂದು ವರ್ಗ/ಪಕ್ಷವು ಬಿತ್ತತೊಡಗಿದ ಪ್ರತ್ಯೇಕತೆಯ ಭಾವನೆಯನ್ನು ನೋಡಿದ ಮೇಲೆ ಸಾವರ್ಕರ್, ಮುಂದಿನ ಅಪಾಯವನ್ನು ಗ್ರಹಿಸಿ ನಿಷ್ಠುರವಾಗಿ ಮಾತನಾಡತೊಡಗಿದರು. ಅಲ್ಲಿಯವರೆಗೂ ಬ್ರಿಟಿಷರ ಸೇನೆಯಲ್ಲಿ ತೀರಾ ಅತ್ಯಲ್ಪ ಪ್ರಮಾಣದಲ್ಲಿದ್ದ ಹಿಂದೂಗಳು ಹೆಚ್ಚುಹೆಚ್ಚಾಗಿ ಸಂಖ್ಯೆಯಲ್ಲಿ ಸಶಸ್ತ್ರ ಪಡೆಗಳಿಗೆ ಸೇರುವ ಕೆಲಸವನ್ನು ಆಂದೋಲನದಂತೆ ನಡೆಸಿದರು. ಜಾಗತಿಕ ಮಟ್ಟದಲ್ಲಿ ಬೆಳಗುತ್ತಿರುವ ಭಾರತದ ಈ ಚರಿತ್ರೆಯನ್ನು ನಾವೆಲ್ಲರೂ ಅರಿಯಬೇಕು.
ಸಾವರ್ಕರ್ ಎಂದರೆ ಇಷ್ಟೇ ಅಲ್ಲ, ಭಾರತದ ತ್ರಿವರ್ಣ ಧ್ವಜದಲ್ಲಿ ಇಂದು ಸಾರನಾಥದ ಧರ್ಮಚಕ್ರವಿದ್ದರೆ ಅದಕ್ಕೆ ಕಾರಣರಾದವರೂ ಇವರೇ! ಇಂತಹ ಉದಾತ್ತ ಚಿಂತನಗಳ ಜತೆಯಲ್ಲೇ ಅವರು, ತಮ್ಮ ಕಾಲದ ಜಾಗತಿಕ ನಾಯಕರೊಂದಿಗೆ ಭಾರತದ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ಪತ್ರ ವ್ಯವಹಾರಗಳನ್ನು ನಡೆಸುತ್ತಿದ್ದರು. ಅಂಬೇಡ್ಕರ್, ನೆಹರು, ಶಾಮಪ್ರಸಾದ್ ಮುಖರ್ಜಿ ಅವರಷ್ಟೆ ಅಲ್ಲದೆ, ಕಮ್ಯುನಿಸ್ಟರು ಮತ್ತು ಸಮಾಜವಾದಿಗಳಂತೆಯೇ ಇವರು ಕೂಡ `ಕ್ವಿಟ್ ಇಂಡಿಯಾ’ ಚಳವಳಿಯನ್ನು ನಿರಾಕರಿಸಿದ್ದರು. ದೇಶ ವಿಭಜನೆಯ ಪ್ರಸ್ತಾಪವನ್ನು ಎಲ್ಲರಿಗಿಂತಲೂ ಮೊದಲೇ ವಿರೋಧಿಸಿದ್ದರು. ಹಾಗೆಯೇ, ಈ ದೇಶದ ಬಹುಸಂಖ್ಯಾತರನ್ನು ಮಾತ್ರ ಸದಾ ನೈತಿಕ ಬಿಕ್ಕಟ್ಟಿಗೆ ದೂಡುತ್ತಿದ್ದ ಕುಟಿಲ ರಾಜಕಾರಣವನ್ನು ಅವರು ತಿರಸ್ಕರಿಸುತ್ತ, `ಮಾತೃಭೂಮಿ’ ಮತ್ತು `ಪಿತೃಭೂಮಿ’ಗಳ ರಚನಾತ್ಮಕ ಪರಿಕಲ್ಪನೆಗಳನ್ನು ಮುಂಚೂಣಿಗೆ ತಂದರು.
ಬಹುಸಂಖ್ಯಾತರ ಪರವಾಗಿ ಮಾತನಾಡುವುದೇ ಅಪರಾಧವೆನ್ನುವ ದುಷ್ಟಕಾಲ ನಮ್ಮಲ್ಲಿ ಇತ್ತೀಚಿನವರೆಗೂ ತಾಂಡವವಾಡುತ್ತಿತ್ತು. ಅದರ ಪಳೆಯುಳಿಕೆಗಳು ಈಗಲೂ ಇವೆ. ಆದರೆ, ದೇಶದ ಪುಣ್ಯಸಂಚಯ ದೊಡ್ಡದಿದೆ. ಹೀಗಾಗಿ, ಸಾವರ್ಕರ್ ಮತ್ತು ಅವರಂತಹ ಇನ್ನೂ ಅನೇಕರ ವಿಚಾರಗಳು ಈಗ ಪುನರುಜ್ಜೀವನಗೊಂಡು, ಪ್ರಖರವಾಗಿ ಗೊತ್ತಾಗುತ್ತಿವೆ. ಇಂತಹ ದ್ರಷ್ಟಾರರ ವಾರಸುದಾರರಾಗಿರುವುದಕ್ಕೆ ಭಾರತೀಯರೆಲ್ಲರೂ ಹೆಮ್ಮೆ ಪಡಬೇಕು!
ಡಿಕೆ ಶಿವಕುಮಾರ್ ಅವರ ಗುರಿಯೇನು?
– ಅಜಿತ್ ಶೆಟ್ಟಿ ಹೆರಂಜೆ
ಡಿಕೆಶಿಯವರು ಮೊದಲು ಯಾರೊಡೊನೆ ಜಗಳವಾಡಬೇಕು ಎಂದು ತೀರ್ಮಾನ ಮಾಡಬೇಕು. ವರ್ತಮಾನದ ರಾಜಕಾರಣದಲ್ಲಿ ಅವರಿಗೆ ತಮ್ಮ ಸ್ವಪಕ್ಷೀಯರ ಜೊತೆಗೆ ಜಗಳವಾಡುವುದು ಮುಖ್ಯವೋ ಅಥವಾ ತಮ್ಮ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ತರುವುದು ಮುಖ್ಯವೋ ಎಂಬ ತೀರ್ಮಾನಕ್ಕೆ ಅವರ ಮೊದಲು ಬರಬೇಕು. ಈ ಎರಡೂ ಒಟ್ಟಿಗೆ ಹೋಗಲು ಸಾಧ್ಯವಿಲ್ಲ. ಅವರೊಬ್ಬರೇ ಇಡೀ ಕೆಪಿಸಿಯನ್ನು ತಲೆಯಲ್ಲಿ ಹೊತ್ತವರಂತೆ ಆಡುತ್ತಿರುವುದು ಇತ್ತೀಚೆಗೆ ಕಾಣುತ್ತಿದೆ. ತನ್ನನ್ನ ತಾನು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮಾಡಿದ ಪಾಪವನ್ನೆಲ್ಲಾ ತೊಳೆಯಲು ಅವತಾರ ಎತ್ತಿ ಬಂದಿದ್ದಾರೋ ಎಂಬಂತೆ ವರ್ತಿಸಿಸುತ್ತಿದ್ದಾರೆ. ಡಿಕೆಶಿ, ಕರ್ನಾಟಕ ಕಾಂಗ್ರೆಸ್ ಪಕ್ಷದ ಮೊದಲ ಪ್ರದೇಶಾಧ್ಯಕ್ಷರೂ ಅಲ್ಲ, ಕೊನೆಯವರೂ ಆಗುವುದಿಲ್ಲ. ಸೋಜಿಗದ ಸಂಗತಿ ಅಂದರೆ ಇವರ ವರ್ತನೆ ಹಾಗಿದೆ. ಇಲ್ಲದೇ ಹೋದರೆ ಒಂದು ರಾಷ್ಟ್ರೀಯ ಪಕ್ಷದ ರಾಜ್ಯಧ್ಯಾಕ್ಷನೊಬ್ಬ ಹೀಗೆ ವರ್ತಿಸವುದು ಎಷ್ಟು ಸರಿ?

ಅವರ ಪಕ್ಷದೊಳಗೆ ಗುರುತರವಾದ ಜವಾಬ್ದಾರಿ ಇರುವ ವ್ಯಕ್ತಿಯೊಬ್ಬ ಇನ್ನೊಂದು ರಾಜಕೀಯ ಪಕ್ಷದ ನಾಯಕರನ್ನು ಭೇಟಿಯಾದರೆ, ಮತ್ತು ಅದು ಪಕ್ಷ ವಿರೋಧಿ ಚಟುವಟಿಕೆ ಅಂತ ಅನ್ನಿಸದರೆ ಅವರು ಆ ವ್ಯಕ್ತಿಯ ಬಳಿ ನೇರವಾಗಿ ಮಾತನಾಡಿ ವಿಷಯವನ್ನು ಬಗೆಹರಿಸಿಕೊಳ್ಳಬಹುದು ಅಲ್ವೆ? ಅವರ ಪಕ್ಷದ ನಾಯಕರೊಡನೆ ಮಾತನಾಡಲೂ ಡಿಕೆಶಿ ಅವರಿಗೆ ಮಾಧ್ಯಮದ ಅಗತ್ಯ ಬಂತು ಅಂದರೆ, ಅವರ ಪಕ್ಷದೊಳಗೆ ಸಂಬಂಧ ಬಹಳ ಹದಗೆಟ್ಟಿದೆ ಅಂತ ತಾನೆ ಅರ್ಥ. ಅಷ್ಟಕ್ಕೂ ಎಂ ಬಿ ಪಾಟೀಲರು ಕಾಂಗ್ರೆಸ್ ಪಕ್ಷದಲ್ಲಿ ಅಂತಿಂತಾ ಕಾಂಜೀ ಪೀಂಜಿ ನಾಯಕರಲ್ಲ. ಅವರು ಕರ್ನಾಟಕ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರು. ಅರಮನೆ ಮೈದಾನದಲ್ಲಿ ಅವರ ಪದಗ್ರಹಣ ಸಮಾರಂಭ ನೋಡಿದವರಿಗೆ, ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಭೆಗಿಂತಲೂ ಅದು ಜೋರಾಗೆ ಇತ್ತು ಅನಿಸಿದರೆ ತಪ್ಪೇನಿಲ್ಲ. ಈ ಸಮಾರಂಭ ಕರ್ನಾಟಕ ಕಾಂಗ್ರೇಸಿನಲ್ಲಿ ಎಲ್ಲವೂ ಸರಿ ಇಲ್ಲ ಜೊತೆಗೆ ಪಕ್ಷದ ಹೈ ಕಮಾಂಡ್ ಕೂಡ ಎಲ್ಲವನ್ನೂ ಡಿಕೆಶಿ ಅವರ ಹಗಲ ಮೇಲೆ ಹಾಕಿ ಸುಮ್ಮನೆ ಕೂರುವ ರಿಸ್ಕ್ ತೆಗೆದುಕೊಳ್ಳುವ ಕೆಲಸಕ್ಕೆ ಕೈ ಹಾಕಿಲ್ಲ ಎಂಬುದು ಸ್ಪಷ್ಟವಾಗಿಸುತ್ತದೆ. ಆ ಕಾರಣಕ್ಕೆ power ಬ್ಯಾಲೆನ್ಸಿಗಾಗಿ ಡಿಕೆಶಿಯ ವಿರೋಧ ಬಣಕ್ಕೂ ಸ್ವಲ್ಪ ಅಧಿಕಾರದ ಹಂಚಿಕೆ ಆಗಬೇಕು ಎಂಬ ಕಾರಣಕ್ಕೇ ಎಂ.ಬಿ ಪಾಟೀಲರಿಗೆ ಕೆಪಿಸಿಸಿ ಅಧ್ಯಕ್ಷರಿಗೆ ಸಮಾನಾಂತರವಾದ ಅಧಿಕಾರ ಇರುವ ಇನ್ನೊಂದು ಹುದ್ದೆಯನ್ನ ಸೃಷ್ಟಿ ಮಾಡಿಕೊಟ್ಟಿದ್ದು. ಅಲ್ಲಿಗೆ ರಾಜ್ಯ ಕಾಂಗ್ರೆಸ್ ಪಕ್ಷದ ಚುಕ್ಕಾಣಿಯನ್ನ ಕೈ ಕಮಾಂಡ್ ಪೂರ್ಣ ಪ್ರಮಾಣದಲ್ಲಿ ಡಿಕೆಶಿ ಕೈಗೂ ಕೊಡದೇ ಸಿದ್ದರಾಮಯ್ಯನವರ ಬಣಕ್ಕೂ ಕೊಡದೆ ಆಟ ಆಡುತ್ತಿದೆ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಹಗ್ಗದ ಎರಡೂ ತುದಿಗೆ ಬೆಂಕಿ ಹಾಕಿದೆ. ಈ ಬೆಂಕಿಯಲ್ಲಿ ಯಾರು ಸುಡುತ್ತಾರೆ? ಯಾರು ಪಾರಾಗುತ್ತಾರೆ ಎಂಬುದನ್ನ ಸಮಯವೇ ನಿರ್ಧರಿಸಬೇಕು.
ಇನ್ನು ಡಿಕೆಶಿಯವರಿಗೆ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದರೆ, ತಾನೇ ಮುಖ್ಯಮಂತ್ರಿ ಆಗಬೇಕು ಎಂಬ ಎಲ್ಲಿಲ್ಲದ ತುಡಿತ ಇದೆ. ಆದರೆ ಅವರ ಬಗ್ಗೆ ಮಾತನಾಡುವ, ಅವರ ಬಗ್ಗೆ ಲಾಭಿ ಮಾಡುವ ಪ್ರಭಾವಿ ನಾಯಕರ ಸಂಖ್ಯೆ ರಾಜ್ಯದಲ್ಲೂ ಕೇಂದ್ರದಲ್ಲೂ ದಿನೇ ದಿನೇ ಕಡಿಮೆ ಆಗುತ್ತಿದೆ. ಈ ಮಧ್ಯೆ ಸಿದ್ದರಾಮಯ್ಯನವರು ತಾನೇ ಮುಂದಿನ ಮುಖ್ಯಮಂತ್ರಿ ಎಂದು ಒಂದಷ್ಟು ಭಾರಿ ನೇರವಾಗಿ ಹೇಳಿಕೊಂಡರೆ ಒಂದಷ್ಟು ಸಾರಿ ಅವರ ಬೆಂಬಲಿಗರ ಮುಖಾಂತರ ಹೇಳಿಸುತ್ತಾರೆ. ಬೆಂಬಲಿಗರು ಅಂದ್ರೆ ಸಾಮಾನ್ಯ ನಾಯಕರಲ್ಲ. ಜಮೀರ್ ಅಹ್ಮದ್ ಮುಖಾಂತರವೇ ಬಹಳಷ್ಟು ಸಾರಿ ಹೇಳಿಸಿದ್ದಾರೆ. ಇನ್ನು ಈ ವಾದ ತೀರಾ ಅತಿರೇಕಕ್ಕೆ ಹೋದಾಗ ದಲಿತ ಮುಖ್ಯಮಂತ್ರಿ ಆಗಬೇಕು ಎಂಬ ವಿತಂಡ ವಾದನ್ನೂ ಅವರೇ ಅನೇಕ ಸಾರಿ ಮಾಡಿದ್ದಾರೆ. ಕೊನೆಗೆ ಅದೂ ತಾರಕಕ್ಕೆ ಹೋದಾಗ ತಾನೂ ಕೂಡ ದಲಿತನೇ ಎಂಬ ಹೇಳಿಕೆ ಕೊಟ್ಟಿದ್ದಾರೆ. ಇದರ ಬಗ್ಗೆ ಬಂದ ತೀರಾ ಇತ್ತಿಚೀಗಿನ ಹೇಳಿಕೆ ಎಂದರೆ ಕೆಪಿಸಿಸಿಯ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂಬಿ ಪಾಟೀಲರದ್ದು. ಅವರೂ ಕೂಡ ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ ಎಂಬ ಹೇಳಿಕೆ ಕೊಟ್ಟರು. ಇದು ಹಿಂದಿನಿಂದಲೂ ತೆರೆಯ ಮರೆಯಲ್ಲಿ ಎಂ.ಬಿ ಪಾಟೀಲರು, ಡಿಕೆಶಿ ನಡುವೆ ಇದ್ದ ರಾಜಕೀಯ ಕುಸ್ತಿ ತೆರೆಯ ಮುಂದೆ ಬರಲು ಪ್ರಮುಖ ಕಾರಣ ಆಯಿತು, ಒಂದಷ್ಟು ಹೊಸ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ಕಳೆದ ಭಾನುವಾರ ಸುವರ್ಣ ಸುದ್ದಿವಾಹಿನಿಯಲ್ಲಿ ಡಿಕೆಶಿಯವರನ್ನ ನೇರವಾಗಿ ಪ್ರಶ್ನೆ ಮಾಡುವ ಅವಕಾಶ ನನಗೆ ಸಿಕ್ಕಿತು. ಸಮಯದ ಅಭಾವದ ಕಾರಣಕ್ಕೆ ಅಲ್ಲಿ ಚರ್ಚೆಯ ಪೂರ್ಣ ಭಾಗವನ್ನು ಪ್ರಸಾರ ಮಾಡಿಲ್ಲ. ಇಲ್ಲಿ ಕೂಡ ಅಜಿತ್ ಹನಮಕ್ಕನವರ್ ಅವರು ಡಿಕೆಶಿ ಅವರಿಗೆ ಒಂದಷ್ಟು ಮುಜುಗರ ತರುವ ಪ್ರಶ್ನೆಗಳನ್ನ ಕೇಳಿದರು, ಅದಕ್ಕೆ ಡಿಕೆಶಿ ಅಡ್ಡ ಗೋಡಯ ಮೇಲೆ ದೀಪ ಇಟ್ಟ ಹಾಗೆ ಉತ್ತರ ಕೊಟ್ಟರು. ಹಿಂದುತ್ವದ ವಿಚಾರ ಬಂದಾಗ ನೀವು ಯಾಕೆ ಡಬ್ಬಲ್ ಸ್ಟಾಂಡರ್ಡ್ ತಗೊಂತೀರಿ ಅನ್ನುವ ಪ್ರಶ್ನೆಗೆ ಡಿಕೆಶಿ ಬಹಳಾ ವಿದ್ವಾಂಸನಂತೆ ಉತ್ತರ ಕೊಡುವ ಪ್ರಯತ್ನ ಮಾಡಿದರು. ಅಸಲಿಗೆ ವಿಷಯ ಅದಲ್ಲ. ಈ ವಿಚಾರದಲ್ಲಿ ಪಕ್ಷದೊಳಗೆಯೇ ಅವರ ನಿಲುವು ಮತ್ತು ಅವರ ಅವರ ವಿರೋಧಿ ಬಣದ ನಿಲುವು ಬೇರೆ ಬೇರೆ. ಸಿದ್ದರಾಮಯ್ಯ ತಾನು ಮುಸಲ್ಮಾನರ ಪರ ಎಂದು ತಮ್ಮ ನಡೆ ನುಡಿಗಳ ಮೂಲಕ ನೇರವಾಗಿ ತೋರಿಸಿಕೊಂಡು ಬರುತ್ತಾರೆ. ಆದರೆ ಡಿಕೆಶಿಯವರ ಅಭಿಪ್ರಾಯ ತಾವು ಕಳೆದ ಸಾರಿ ಚುನಾವಣೆಯಲ್ಲಿ ಸೋಲಲು ಮುಖ್ಯ ಕಾರಣವೆ ಸರ್ಕಾರದ ಹಿಂದೂ ವಿರೋಧಿ ನೀತಿ ಎಂಬುದು. ಈ ಭಾರಿಯೂ ಅಂತಹ ನಿಲುವನ್ನು ತೆಗೆದುಕೊಂಡರೆ ಮತ್ತೆ ಪಕ್ಷಕ್ಕೆ ಹಾನಿಯಾಗಾಲಿದೆ. ಈಗ ತಾನೇ ಅಧ್ಯಕ್ಷ ಬೇರೆ. ಪಕ್ಷ ಈ ಭಾರಿಯೂ ಸೋತರೆ ತಾವು ಮುಖ್ಯಮಂತ್ರಿ ಆಗುವ ಕನಸು ಕನಸಾಗಿಯೇ ಉಳಿಯಲಿದೆ ಎಂಬದು ಅವರಿಗೆ ಗೊತ್ತಾಗಿದೆ. ಹಾಗಾಗಿ, ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಕಾಂಗ್ರೆಸ್ ಸಂಪೂರ್ಣವಾಗಿ ಹಿಂದುಗಳನ್ನು ವಿರೋಧಿಸುವ ಸಾಹಸಕ್ಕೆ ಹೋಗಲಿಲ್ಲ, ಜೊತೆಗೆ ತಮ್ಮ ಪಕ್ಷದ ಎಲ್ಲರಿಗೂ ಹಾಗೆಯೇ ವ್ಯವಹರಿಸಲೂ ಆದೇಶ ಕೊಟ್ಟರು. ಆದರೆ ಅವರನ್ನ ವಿರೋಧಿಸಲೆಂದೇ ಇರುವ, ಅವರಿಗೆ ಮುಜಗರ ಉಂಟು ಮಾಡಲೇಬೇಕು ಎಂದು ಇರುವ ಇನ್ನೊಂದು ಬಣ ಇವರ ಮಾತನ್ನ ದಿಕ್ಕರಿಸಿ ಅಗೊಮ್ಮೆ ಈಗೊಮ್ಮೆ ಇವರು ಹಾಕಿದ ಬೇಲಿ ದಾಟಿ ಡಿಕೆಶಿ ಅವರಿಗೆ ಮುಜುಗರ ಮಾಡುತ್ತಲೇ ಇದೆ. ಈ ಬೆಳವಣಿಗೆಯ ಕಾರಣಕ್ಕೆ ಒಂದು ಕಡೆ ಕಾಂಗ್ರೆಸ್ ಪಕ್ಷವನ್ನು ಹಿಂದೂಗಳೂ ನಂಬದ, ಇನ್ನೊಂದು ಕಡೆ ಅವರ ಪಾರಂಪರಿಕೆ ಮತದಾರರಾದ ಮುಸಲ್ಮಾನರೂ ನಂಬದ ಒಂದು ಇಕ್ಕಟ್ಟಿನ ಪರಿಸ್ಥಿತಿ ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿದೆ ಎಂಬುದ ಕಾಂಗ್ರೆಸ್ ವಲಯದಲ್ಲಿ ಬಹಳಷ್ಟು ಜನರಿಗೆ ನೋವು ಕೂಡ ತಂದಿದೆ.
ಕಾಂಗ್ರೆಸ್ ಪಕ್ಷದಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯನವರ ನಡುವೆ ಎಲ್ಲವೂ ಸರಿ ಇಲ್ಲ, ಇದು ಮಾದ್ಯಮಗಳು ಕಟ್ಟಿದ ಕಟ್ಟು ಕಥೆ ಅಲ್ಲ, ಸತ್ಯ ವಿಚಾರ ಎಂಬುದು ನನಗೂ ಅನುಭವಕ್ಕೆ ಬಂತು. ಅಜಿತ್ ಹನಮಕ್ಕನವರ್ ಕೇಳಿದ ಒಂದು ಪ್ರಶ್ನಯಲ್ಲಿ ನೀವು ಯಾಕೆ ಮುಸಲ್ಮಾನರ ಪರ ಮಾತನಾಡಲಿಲ್ಲ? ಸಿದ್ದರಾಮಯ್ಯ ಒಂದು ಸ್ಟ್ಯಾಂಡ್ ತೆಗೆದುಕೊಂಡ್ರು ಎಂದಾಗ, ಡಿಕೆಶಿ ಅದಕ್ಕೆ ಸಿದ್ದರಾಮಯ್ಯನವರು ಮಾತನಾಡಿದರೆ ಅದು ಕಾಂಗ್ರೆಸ್ ಪಕ್ಷ ಮಾತನಾಡಿದಂತೆ ಅಲ್ವಾ ಎಂದು ಮರು ಪ್ರಶ್ನೆ ಹಾಕಿದರು. ಅವರು ಆ ಉತ್ತರಕ್ಕೆ ನಾನು ಹಿಂದೆ ಸಿದ್ದರಾಮಯ್ಯ ತೆಗೆದುಕೊಂಡ ಹಿಂದೂ ವಿರೋಧಿ ನೀತಿಗಳ ಬಗ್ಗೆ ಪ್ರಸ್ತಾಪ ಮಾಡಿದಾಗ ಅದೇ ಲಾಜಿಕ್ಕಿನಲ್ಲಿ ಉತ್ತರ ಕೊಡಲಾಗದ ಡಿಕೆಶಿ ನೀವು ಅದನ್ನ ಸಿದ್ದರಾಮಯ್ಯನವರ ಬಳಿಯೇ ಕೇಳಿ ಎಂದು ಹೇಳುತ್ತಾರೆ. (ಚರ್ಚೆಯ ಆ ಭಾಗ ವಾಹಿನಿಯಲ್ಲಿ ಪ್ರಸಾರ ಆಗಲಿಲ್ಲ, ಬಹುಶಃ ಸಮಯದ ಅಭಾವದ ಕಾರಣಕ್ಕೆ ಇರಬೇಕು) ಹೀಗೆ ಸಾಗಿದ ಚರ್ಚೆಯ ಒಂದು ಭಾಗದಲ್ಲಿ, ಕಾಂಗ್ರೆಸ್ ಪಕ್ಷದ ಎನ್ ಎಸ್ ಯು ಐ ನ ಅದ್ಯಕ್ಷನೊಬ್ಬ ನೀವು ಮುಂದೆ ಮುಖ್ಯಮಂತ್ರಿ ಆದರೆ ಎಂತಹಾ ಯೊಜನೆಗಳನ್ನ ಜಾರಿಗೆ ತರುತ್ತೀರಿ ಎಂದು ಕೇಳಿದಾಗ ತಕ್ಷಣವೇ ಆತನನ್ನು ನಿಲ್ಲಿಸಿದ ಅಜಿತ್ ಹನಮಕ್ಕನವರ್ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಯಾರು ಎಂಬುದರ ಬಗ್ಗೆಯೇ ಗೊಂದಲ ಇದೆ. ನಿಮಗೆ ಯಾರು ಮುಖ್ಯಮಂತ್ರಿ ಆಗಬೇಕು ಅಂದಾಗ ಆತ ಸ್ವಲ್ಪ ಅಳುಕುತ್ತಲೇ ಡಿಕೆಶಿ ಅಂದ. ಹಿಂದೆ ನಮ್ಮದು ಸಾಮೂಹಿಕ ನಾಯಕತ್ವ, ಪಕ್ಷ ಮುಖ್ಯಮಂತ್ರಿಯ ತೀರ್ಮಾನ ಮಾಡಲಿದೆ ಎಂಬ ನೈತಿಕತೆಯ ಮಾತನಾಡಿದ್ದ ಡಿಕೆಶಿಗೆ ಹುಡುಗನ ಈ ಮಾತು ಖುಷಿಕೊಟ್ಟಿತು ಎಂಬುದು ಅವರ ಮುಖಭಾವದಿಂದ ನನಗೆ ಅರ್ಥವಾಯಿತು. ಆ ಕ್ಷಣದಲ್ಲಿ ಅವರಿಗೆ ಕೆಲವೇ ನಿಮಿಷಗಳ ಹಿಂದೆ ಅವರೇ ಹೇಳಿದ ಪಕ್ಷದ ತೀರ್ಮಾನದ ಮಾತು ಅವರಿಗೆ ನೆನಪು ಇರಲಿಲ್ಲ. ಈ ಮದ್ಯೆ ನಾನು ಮಾತನಾಡಿ (ಹಾಗೆ ಮಾತನಾಡುವುದು ಚರ್ಚೆಯ ನಿಯಮಕ್ಕೆ ವಿರುದ್ಧವಾಗಿತ್ತು. ಆದರೂ ತಡೆಯಲಾಗದೆ ಒಂದು ಪ್ರಶ್ನೆ ಕೇಳಿದೆ) ಎರಡು ದಿನದ ಹಿಂದೆ ಎಂ.ಬಿ ಪಾಟೀಲರೇ ಸಿದ್ದರಾಮಯ್ಯನವರು ಮುಂದಿನ ಮುಖ್ಯಮಂತ್ರಿ ಅಂದಿದ್ದಾರೆ ಅಂದಾಗ ಅವರ ಮುಖದಲ್ಲೊಂದು ಅಹಸನೆ ಗೆರೆ ಮೂಡಿದ್ದನ್ನು ಗಮನಿಸಿದೆ. ಅಂದಹಾಗೆ ಈ ಪ್ರಶ್ನೆಯನ್ನು ನಾನು ಚರ್ಚೆಯ ನಿಯಮಕ್ಕೆ ವಿರುದ್ದವಾಗಿ ಕೇಳಿದ ಕಾರಣ ಅದೂ ಕೂಡ ಪ್ರಸಾರ ಆಗಿಲಿಲ್ಲ.
ಒಟ್ಟಿನಲ್ಲಿ ಡಿಕೆಶಿ ಅವರ ಜೊತೆಗೆ ಸುಮಾರು ಒಂದೂವರೆ ಗಂಟೆಗಳ ಕಾಲ ಇದ್ದ ನನಗೆ ಒಂದಷ್ಟು ವಿಚಾರಗಳು ಸ್ಪಷ್ಟವಾಗಿ ಕಾಣಿಸಿತು. ಅವರಲ್ಲಿ ಬೌದ್ಧಿಕ ಚರ್ಚೆ ಮಾಡುವ ಸಾಮರ್ಥ್ಯ ಮತ್ತು ವ್ಯವಧಾನ ಎರಡೂ ಇಲ್ಲ ಅವರದ್ದೇನಿದ್ದರೂ “ಸ್ಕೋರ್ ಸೆಟಲ್” ಮಾಡುವ ರಾಜಕಾರಣ. ಜೊತೆಗೆ ಅವರು ಮುಖ ಭಾವದಲ್ಲಿ ಸಿದ್ದರಾಮಯ್ಯನವರ ಮುಸಲ್ಮಾನರ ತುಷ್ಟಿಕರಣದ ರಾಜಕಾರಣದಿಂದಾಗಿ ಹಿಂದುಗಳ ವಿರುದ್ಧ ಮಾಡಿರುವ ಅನ್ಯಾಯದ ಪಾಪದ ಮೂಟೆಯನ್ನ ಇಡೀ ಪಕ್ಷದಲ್ಲಿ ತಾನೊಬ್ಬನೇ ಹೊತ್ತು ನಡೆಯುತ್ತಿದ್ದೇನೆ ಎಂಬ ಭಾವ ಸ್ಪಷ್ಟವಾಗಿ ಕಾಣಿಸುತ್ತಿದೆ. ಇದರ ಜೊತೆಗೆ ಅವರು ಪಕ್ಷದೊಳಗೆ ಮತ್ತು ಪಕ್ಷದ ಹೊರಗೆ ಒಬ್ಬಂಟಿ ಎರಡೂ ಕಡೆ ಪ್ರವಾಹದ ವಿರುದ್ದ ಈಜಾಡುತ್ತಿದ್ದಾರೆ, ಅದರಲ್ಲಿ ಬಳಲಿ ಬೆಂಡಾಗಿರುವುದೂ ಅವರ ಮುಖದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಹೀಗಿರುವಾಗ “ಸ್ಕೋರ್ ಸೆಟಲ್” ಮಾಡುವ ರಾಜಕಾರಣದಿಂದ ಹೊರಗೆ ಬಂದು, ವೈಯಕ್ತಿಕ ಪ್ರತಿಷ್ಠೆ ಬಿಟ್ಟು, ಪಕ್ಷ ಕಟ್ಟುವ ರಾಜಕಾರಣ ಮಾಡಿದರಷ್ಟೆ ಪಕ್ಷಕ್ಕೆ ಮತ್ತು ಪಕ್ಷದ ಪ್ರಾದೇಶಿಕ ಅಧ್ಯಕ್ಷರಿಗೆ ಉಳಿಗಾಲ. ಇಲ್ಲದೇ ಹೋದರೆ ಇವರು ದಿನಂಪ್ರತಿ ವಿರೋಧ ಪಕ್ಷಗಳಿಗಿಂತ ಸ್ವ ಪಕ್ಷದವರ ಜೊತೆಗೆ ಹೆಚ್ಚು ಜಗಳವಾಡಬೇಕಾಗುತ್ತದೆ. ಅದರ ಪರಿಣಾಮವೇನು ಎಂಬುದಕ್ಕೆ ಮಹಾ ಭಾರತದ ಕರ್ಣನಿಗಿಂತ ಬೇರೆ ನಿದರ್ಶನ ಬೇಕಿಲ್ಲ ಅಲ್ಲವೆ?
ನೆಡುವ ಗಿಡ, ಪ್ರಾಕೃತಿಕ ಸಮಸ್ಯೆಗಳ ನೈಜ ಪರಿಹಾರವೇ ?
– ಅನೇಕಲೇಖ
ವನಮಹೋತ್ಸವ, ಜನ್ಮದಿನ ಇಂತಹ ಹಲವು ಸಂದರ್ಭಗಳಲ್ಲಿ ಸಸಿಗಳನ್ನು, ಗಿಡಗಳನ್ನು ನೆಡುತ್ತೇವೆ. ಇದರ ಹಿಂದಿನ ಕಾರಣಗಳು, ಉದ್ದೇಶಗಳು ನಮಗೆ ಗೊತ್ತೇ ಇವೆ. ತಾಪಮಾನ ಏರಿಕೆ, ಪ್ರಾಕೃತಿಕ ಅಸಮತೋಲನ ಮುಂತಾದ ಪರಿಣಾಮಗಳನ್ನು ತಡೆಯಲು,ನಾವು ಈ ಹಸಿರೀಕರಣದ ಮೊರೆ ಹೋಗಿದ್ದೇವೆ ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಉಸಿರಾಟಕ್ಕೆ ಆಮ್ಲಜನಕ ಬೇಕು ಅದನ್ನು ಬಹುದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವುದು ಗಿಡಗಳು ಎಂಬ ಕಾರಣಕ್ಕಾಗಿ ನಾವು ಹಸಿರನ್ನು ಬೆಳೆಸುತ್ತೇವೆ. ಇತರ ಜೀವಿಗಳ ಉಳಿವು ಅಭಿವೃದ್ಧಿ ನಮ್ಮ ಗುಂಪಿಗೆ ಸೇರದ ವಿಷಯ. ಅದಕ್ಕೆ ಕಾರಣವಿಷ್ಟೇ, ನಮ್ಮ ಮನುಜ ಸಂತತಿಯನ್ನೇ ನಮ್ಮಿಂದ ಸಂಭಾಳಿಸುವುದು ಸಾಧ್ಯವಾಗದಿರದಾಗ ಇನ್ನು ಬ್ರಹತ್ ಜೀವರಾಶಿಯ ಜವಾಬ್ದಾರಿ ನಮ್ಮಿಂದ ಆಗುಹೋಗದ ವಿಷಯ.ಹಾಗಾಗಿ ನಮ್ಮ ಧ್ಯೇಯ ಸ್ಪಷ್ಟ “ಮನುಷ್ಯರಿಗೆ ಮಾತ್ರ”.
ಈ ಹಸಿರೀಕರಣಕ್ಕೆ ನಾವು ಕಾಲಾಂತರಗಳಲ್ಲಿ ಅಳವಡಿಸಿಕೊಂಡ ಸೂತ್ರಗಳು, ಪದ್ಧತಿಗಳನ್ನು ಗಮನಿಸಿದರೆ ನಾವು ಮಾಡಿದ ತಪ್ಪು ನಿರ್ಧಾರಗಳು ನಮ್ಮ ಕಣ್ಣೆದುರೆ ನಿಲ್ಲುತ್ತವೆ. ಈ ಸೂತ್ರಗಳ ಹಿಂದೆ ಅರಣ್ಯ ಇಲಾಖೆ, ಸರ್ಕಾರದ ಯೋಜನೆಗಳ ಕೈ ಕೂಡ ಶಾಮೀಲು.
ಮೊದಲಿಗೆಲ್ಲ ನಮ್ಮ ಯೋಜನೆಯಿದ್ದದ್ದು ಆರ್ಥಿಕ ಆದಾಯಗಳುಳ್ಳ ಮರಗಳನ್ನು ಬೆಳೆಸುವುದು (ಉದಾ :ಅಕೇಶಿಯ, ನೀಲಗಿರಿ). ನಾವು ಒಂದೇ ಹೂಡಿಕೆಯಿಂದ ಪ್ರಾಣವಾಯು, ಹಣ ಎರಡನ್ನೂ ಸಂಪಾಡಿಸುವ ಅಂದಾಜಿನಲ್ಲಿದ್ದೆವು. ನಂತರದ ದಿನಗಳಲ್ಲಿ ನಮಗೆ ತಿಳಿಯಿತು. ಈ ರೀತಿಯ ಮರಗಳು ಮಣ್ಣಿನ ಸತ್ವಸಾರಗಳನ್ನು ಬರಿದು ಮಾಡಿ, ನಿಸರ್ಗದಲ್ಲಿನ ಶೀತವನ್ನು ಹೀರಿಕೊಂಡು, ಸುತ್ತಲಿನ ತಾಪಮಾನವನ್ನು ಏರಿಸುತ್ತದೆ ಹಾಗೂ ಇವುಗಳ ಸುತ್ತಮುತ್ತ ಅನ್ಯ ರೀತಿಯ ಗಿಡಗಳು ಬೆಳೆಯದಂತೆ ಇವು ತಡೆಯುತ್ತವೆ ಎಂದು. ಹಾಗಾಗಿ ನಾವು ನಮ್ಮ ಉಪಾಯಗಳನ್ನು ಬದಲಾಯಿಸಿಕೊಂಡೆವು ಹಣ್ಣಿನ ಮರಗಳನ್ನು ಬೆಳೆಸುವ ಯೋಜನೆಯನ್ನು ಹೊಂದಿದೆವು. ಇದರ ಹಿಂದಿನ ಉದ್ದೇಶ ಒಳ್ಳೆಯದೇ. ಗಿಡ ಬಿಡುವ ಹಣ್ಣುಗಳು ಪ್ರಾಣಿ ಪಕ್ಷಿಗಳಿಗೆ ಆಹಾರವಾಗುತ್ತದೆ. ಇವುಗಳಿಂದ ಪಸರಿಸಲ್ಪಡುವ ಹಣ್ಣಿನ ಬೀಜಗಳಿಂದ ಹೊಸ ಸಸಿಯೊಂದರ ಹುಟ್ಟಾಗುತ್ತದೆ. ಈ ಉಪಾಯ ಮೇಲ್ನೋಟಕ್ಕೆ ಅದ್ಭುತವೆಂದು ತೋರುತ್ತದೆ.
ಆದರೆ ಕಾಡುಗಳು ಹೇಗೆ ನಿರ್ಮಾಣಗೊಳ್ಳುತ್ತವೆ? ಪ್ರಕೃತಿಯಲ್ಲಿ ಹಣ್ಣು ಕೊಡದ ಸಸ್ಯ ಪ್ರಭೇದಗಳ ವೈವಿಧ್ಯತೆ, ಪ್ರಾಮುಖ್ಯತೆಗಳನ್ನು ನೋಡಿದರೆ ನಮ್ಮ ಅದ್ಭುತ ಉಪಾಯ ತನ್ನ ಉಪಯುಕ್ತತೆ ಕಳೆದುಕೊಳ್ಳುತ್ತದೆ. ಒಂದು ಕಾಡು ನಿರ್ಮಿತವಾಗಬೇಕಾದರೆ ಮೊದಲು ಪಾಚಿಗಳ ಪದರ ಬೆಳೆದು ಕಲ್ಲು-ಖನಿಜಗಳನ್ನು ಮಣ್ಣನ್ನಾಗಿ ಮಾಡಿ. ಅದರ ಮೇಲೆ ಫರ್ನ್,ಮಾಸಸ್(Ferns Mosses) ಬೆಳೆದು ಮಣ್ಣನ್ನು ಹದಗೊಳಿಸಿ, ತದನಂತರ ಹುಲ್ಲು ಗಿಡಗಳು ಬೆಳೆದು,ಕೆಲವು ಗಿಡವು ಮರವಾಗುತ್ತವೆ. ಇಷ್ಟು ಕ್ಲಿಷ್ಟ ಹಾಗೂ ಸಮಯ ಯಾಚಕ ಪ್ರಕ್ರಿಯೆ ಇದಾಗಿದೆ. ಈ ಪ್ರಕ್ರಿಯೆಯ ಪ್ರತಿ ಹಂತದಲ್ಲೂ ಹಲವು ಸೂಕ್ಷ್ಮಜೀವಿಗಳ, ಪ್ರಾಣಿಕೀಟಗಳ ಸಂಯುಕ್ತತೆಯು ಸಹಕರಿಸುತ್ತದೆ. ಅಲ್ಲೊಂದು ಸಮತೋಲಿತ ವ್ಯವಸ್ಥೆ ರೂಪುಗೊಳ್ಳುತ್ತದೆ.
ಆದರೆ ಗಿಡಗಳನ್ನಷ್ಟೇ ನೆಟ್ಟಾಗ, ಆ ಗಿಡಕ್ಕೆ ಸಹಕರಿಸುವ ಅಥವಾ ಅವಲಂಬಿತವಾದ ಜೀವಿಗಳು ಬೆಳವಣಿಗೆಯಲ್ಲಿ ಪಾಲ್ಗೊಳ್ಳುತ್ತವೆ. ತದನಂತರ ಪಾಚಿ ಹುಲ್ಲುಗಳ ಬೆಳವಣಿಗೆ ಆಗುತ್ತದೆಯಾದರೂ ಅದೊಂದು ವ್ಯವಸ್ಥಿತ ಸಮತೋಲಿತ ವ್ಯವಸ್ಥೆಯಲ್ಲ. ನಾವು ರಸ್ತೆ ಕಟ್ಟಡಗಳನ್ನು ಮಾಡುವಾಗ ಪ್ರಕೃತಿಯ ಪ್ರಾಣಿ, ಪಕ್ಷಿ, ಕೀಟ, ಕಲ್ಲು, ನೀರ ಒರತೆ, ಮಣ್ಣು ಸಕಲವನ್ನು ನಾಶ ಮಾಡುತ್ತೇವೆ, ಆದರೆ ಪರಿಸರದ ಪುನಶ್ಚೇತನಕ್ಕೆ ಒಂದು ಗಿಡವನ್ನು ನೆಟ್ಟು ಸುಮ್ಮನಾಗುತ್ತೇವೆ. ಇದು ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡು ಸಾಮರಸ್ಯದಲ್ಲಿರುವ ವ್ಯವಸ್ಥೆ.ಅದರ ಅಡಿಪಾಯವನ್ನೆಲ್ಲ ತೆಗೆದು ಒಂದು ಗೋಡೆಯನ್ನಷ್ಟೇ ನಿಲ್ಲಿಸಿದರೆ ಅದನ್ನು ‘ಮನೆ’ ಎಂದು ಹೇಗೆ ಕರೆಯಲಾದೀತು?. ನಾವು ಗಿಡಗಳನ್ನು ನೆಡಬಹುದು ಆದರೆ ಪ್ರಕೃತಿ ತನ್ನನ್ನು ತಾನು ಕಟ್ಟಿಕೊಳ್ಳುವ ಪ್ರಕ್ರಿಯೆ ವಿಧಾನಗಳನ್ನು ನಾವು ಅರ್ಥೈಸಿಕೊಂಡು ಅದನ್ನು ಮರುಸೃಷ್ಟಿ ಮಾಡುವುದು ಬಹುಷಃ ಅಸಾಧ್ಯ. ಹಾಗಾಗಿ ಗಿಡ ನೆಡುವುದು, ನಾವು ಸೃಷ್ಟಿಸಿದ ಪ್ರಾಕೃತಿಕ ಸಮಸ್ಯೆಗಳಿಗೆ ಪರಿಹಾರವಾಗಲಾರದು. ಏಕೆಂದರೆ ಈ ಯೋಜನೆ ಎಲ್ಲ ಜೀವಿಗಳ ಶ್ರೇಯವನ್ನು ಒಳಗೊಂಡ ಉಪಾಯವಲ್ಲ.
ಹಾಗಾದರೆ ಈ ಸಮಸ್ಯೆಗೆ ಪರಿಹಾರವೇನು?. ಬಹುಷಃ ಮನುಜ ‘ತಾನು’ ಎಲ್ಲದಕ್ಕೂ ಉತ್ತರ ಕಂಡುಹಿಡಿಯುತ್ತಾನೆ ಎಂಬುದು ಮನುಜನ ಅಹಂಕಾರ. ಪ್ರಕೃತಿಯ ವಿಷಯದಲ್ಲಿ ಅದಕ್ಕೆ ತನ್ನನ್ನು ತಾನು ಕಟ್ಟಿಕೊಳ್ಳುವ, ಕಂಡುಕೊಳ್ಳುವ ಸಾಮರ್ಥ್ಯವಿದೆ. ನಾವು ಪ್ರಕೃತಿಯ ಪ್ರಕ್ರಿಯೆಗಳಲ್ಲಿ ಮೂಗು ತೂರಿಸದಿದ್ದರೆ, ಅದು ಪ್ರಕೃತಿಯ ಉಳಿವಿಗೆ ನಾವು ಮಾಡುವ ದೊಡ್ಡ ಉಪಕಾರ. ಈ ಪ್ರಕೃತಿಯೆ ನಮ್ಮನ್ನು ರೂಪಿಸಿದ್ದು ಎಂಬುದನ್ನುನಾವು ಮರೆಯಬಾರದು. ಅಷ್ಟಕ್ಕೂ ನೂರು ಮರಗಳನ್ನು ಕಡಿದು ಹತ್ತು ಸಸಿಗಳನ್ನು ನೆಡುವುದು, ಕಡಿಯಲ್ಪಟ್ಟ ಮರ ಅದರ ಬೆಳವಣಿಗೆಗೆ ತೆಗೆದುಕೊಂಡ ಸಮಯ ಅದು ಬಳಸಿಕೊಂಡ ಪ್ರಾಕೃತಿಕ ಸವಲತ್ತುಗಳ ಮೌಲ್ಯವನ್ನು ನಾವು ಅವಮಾಣನಿಸಿದಂತೆ ಅಲ್ಲವೇ?. ಹಾಗಾಗಿ ಈ ಪ್ರಕೃತಿಯ ಬಗ್ಗೆ ನಮಗಿರುವ ಕಲ್ಪನೆ ಹಾಗೂ ಜ್ಞಾನ ಯಾವ ರೀತಿಯಲ್ಲೂ ಸಂಪೂರ್ಣವಲ್ಲ ಎಂಬುದನ್ನು ಅರಿತು ಮುನ್ನಡೆಯಬೇಕು.
ರಷ್ಯಾ-ಉಕ್ರೇನ್ ಕದನ: ಮಾನವ ಹಕ್ಕು ಹೋರಾಟಗಾರರು ಎಲ್ಲಿ ಅಡಗಿ ಕುಳಿತಿದ್ದಾರೆ?
– ರಾಘವೇಂದ್ರ ಅಡಿಗ ಎಚ್ಚೆನ್.
ಯುದ್ಧ …
ಕಳೆದ ಒಂದು ವಾರದಿಂದ ಭಾರತ ಸೇರಿ ಜಗತ್ತಿನ ನಾನಾ ರಾಷ್ಟ್ರಗಳ ಜನರಲ್ಲಿ ಆತಂಕ, ದುಗುಡಕ್ಕೆ ಕಾರಣವಾಗಿರುವುದು ರಷ್ಯಾ-ಉಕ್ರೇನ್ ಯುದ್ಧ. ಉಕ್ರೇನ್ ನ್ಯಾಟೋ ರಾಷ್ಟ್ರಗಳ ಜತೆ ಕೈಜೋಡಿಸಲಿದೆ, ಯುರೋಪಿಯನ್ ಯೂನಿಯನ್ ಜತೆಯಾಗಿ ತನ್ನ ಕಮ್ಯುನಿಸ್ಟ್ ಸಿದ್ಧಾಂತ ಆಧಾರಿತ ವ್ಯವಸ್ಥೆಯ ಪ್ರಭಾವದಿಂದ ದೂರವಾಗಲಿದೆ ಎಂಬ ಕಾರಣದಿಂದ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದೆ. ರಷ್ಯಾ ಕಳುಹಿಸಿದ ಯುದ್ಧ ವಾಹನಗಳ ಮೇಲೆ *Z* ಸಂಕೇತವನ್ನು ರಷ್ಯಾ ಸೂಚಿಸಿದ್ದು, ಇದರ ಸೂಚನೆ ಎಂದರೆ 8 ಗಣರಾಜ್ಯಗಳನ್ನು ರಷ್ಯಾಕ್ಕೆ ಸೇರಿಸುವ ಮೂಲಕ ರಷ್ಯಾವನ್ನು ವಿಸ್ತರಿಸುವ ದೂರ ದೃಷ್ಠಿ ಹಾಗೂ ಮುಂದಾಲೋಚನೆ ಈ ಸೇನಾ ಕಾರ್ಯಾಚರಣೆಯ ಹಿಂದಿದೆ ಎನ್ನಲಾಗುತ್ತಿದೆ. ಎಂದರೆ ಇದರ ಪರಿಣಾಮ ಭವಿಷ್ಯದಲ್ಲಿ ಜಗತ್ತಿನ ಭೂಪಟವನ್ನೇ ಬದಲಾಯಿಸಲಿದೆ, ಕೆಲವೊಂದು ರಾಷ್ಟ್ರಗಳನ್ನು ಪ್ರಪಂಚದ ನಕಾಶೆಯಿಂದಲೇ ಅಳಿಸಿ ಹಾಕಲಾಗುತ್ತದೆ!
ಆದರೆ ಇದೀಗ ನಮ್ಮ ಮುಂದಿರುವ ಪ್ರಶ್ನೆ ಎಂದರೆ ಜಗತ್ತಿನಲ್ಲಿ ಶಾಂತಿ ನೆಲೆಗೊಳಿಸಿ ಎಲ್ಲವೂ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿಯೊಂದಿಗೆ ಹುಟ್ಟಿಕೊಂಡ ವಿಶ್ವಸಂಸ್ಥೆ ರಷ್ಯಾ-ಉಕ್ರೇನ್ ಯುದ್ಧ ವಿಷಯದಲ್ಲಿ ಏಕೆ ಗಟ್ಟಿ ನಿರ್ಧಾರವನ್ನು ತಾಳದೆ ಹೋಗಿದೆ? ಹೌದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್-ರಷ್ಯಾ ಯುದ್ಧದ ವಿರುದ್ಧ ನಿರ್ಣಯ ತೆಗೆದುಕೊಳ್ಳಲಾಗಿದೆ. ಉಕ್ರೇನ್ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ರಷ್ಯಾ ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಿ ವಿಶ್ವಸಂಸ್ಥೆ ಕೈಗೊಂಡ ನಿರ್ಣಯದ ಪರ ಒಂದು ಡಜನ್‌ಗೂ ಹೆಚ್ಚು ದೇಶಗಳ ರಾಯಭಾರಿಗಳು ದನಿ ಎತ್ತಿದ್ದಾರೆ. ಐದು ದಿನಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಉಕ್ರೇನ್ ಅಪಾರ ನಷ್ಟ ಅನುಭವಿಸಿದೆ. ಸಾವಿರಾರು ಅಮಾಯಕ ಜೀವಗಳು ಹಾರಿ ಹೋಗಿವೆ. “ಈ ಅನಾಹುತ ಇಲ್ಲಿಗೆ ಕೊನೆಗೊಳಿಸಿ. ಮನುಷ್ಯತ್ವದ ಕಡೆ ಹೆಜ್ಜೆ ಹಾಕಿ” ಎಂದು ವಿಶ್ವಸಂಸ್ಥೆ ಸಲಹೆ ನೀಡಿದೆ. ಅದರೆ ರಷ್ಯಾದಂತಹಾ ಬಲಿಷ್ಟ, ವಿಸ್ತರಣಾದಾಹ್ಹಿ, ಕಮ್ಯುನಿಸ್ಟ್ ಸಿದ್ದಾಂತದ ಪ್ರತಿಪಾದಕ ರಾಷ್ಟ್ರವೊಂದಕ್ಕೆ ಇಂತಹಾ ಕೇವಲ ಸಲಹೆ ಸೂಚನೆಗಳು ಸಾಕಾಗುತ್ತದೆಯೆ? ಒಂದೊಮ್ಮೆ ಈ ಯುದ್ಧದಲ್ಲಿ ಉಕ್ರೇನ್ ಸೋಲೊಪ್ಪಿದ್ದಾದರೆ ಭವಿಷ್ಯದಲ್ಲಿ ನ್ಯಾಟೋ ರಾಷ್ಟ್ರಗಳೂ ಸಹ ರಷ್ಯಾವನ್ನು ಎದುರಿಸಲಾರವು. ಅಲ್ಲದೆ ವಿಶ್ವಸಂಸ್ಥೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯವೂ ಇದೆ. ಒಟ್ತಾರೆ ಜಗತ್ತಿನ ಯಾವುದೇ ರಾಷ್ಟ್ರ ರಷ್ಯಾವನ್ನು ಮುಖಾಮುಖಿಯಾಗಿ ಎದುರಿಸಲು ವಿಫಲವಾಗಲಿದೆ.
ಇದಷ್ಟೇ ಅಲ್ಲದೆ ಜಗತ್ತಿನಾದ್ಯಂತ ಇರುವ ಮಾನವ ಹಕ್ಕು ಹೋರಾಟ(ಹಾರಾಟ)ಗಾರರು, ಬುದ್ದಿಜೀವಿಗಳು ರಷ್ಯಾ-ಉಕ್ರೇನ್ ನಡುವಿನ ಈ ಯುದ್ಧದ ಬಗ್ಗೆ ಏಕೆ ಯಾವ ಹೇಳಿಕೆಯನ್ನು ನೀಡುತ್ತಿಲ್ಲ? ಪ್ರತಿಭಟನೆ ನಡೆಸುತ್ತಿಲ್ಲ? ಭಾರತದಂತಹಾ ಸರ್ವಮತ ಸಹಬಾಳ್ವೆ ಇರುವ ದೇಶದಲ್ಲಿ ಅದೆಲ್ಲೋ ಒಂದು ಗುಂಪು ಹತ್ಯೆ ನಡೆದಿದೆ, ಇನ್ನೆಲ್ಲೋ ಗುಂಪುಗಳ ನಡುವೆ ಸಂಘರ್ಷ ನಡೆದಿದೆ ಎನ್ನುವ ಕಾರಣಕ್ಕೆ ಮಾನವ ಹಕ್ಕು ಉಲ್ಲಂಘನೆ, ಭಾರತದಲ್ಲಿ ಯಾವುದೂ ಸರಿಯಿಲ್ಲ ಎಂದು ಬೊಬ್ಬಿಡುವ ಜಗತ್ತಿನ ಪ್ರಚಂಡ ಮಾನವ ಹಕ್ಕು ಪ್ರತಿಪಾದಕರು ಇಂದು ಎಲ್ಲಿ ಹೋಗಿದ್ದಾರೆ? ರಷ್ಯಾ ಉಕ್ರೇನ್ ನ ಹಲವಾರು ಸೈನಿಕರನ್ನು ಮಾತ್ರವಲ್ಲದೆ ಅಮಾಯಕ ನಾಗರಿಕರ ಮೇಲೆ ಸಹ ದಾಳಿ ಮಾಡುತ್ತಿದೆ. ಈ ದಾಳಿಯ ನಡುವೆ ಕರ್ನಾಟಕದ ಹಾವೇರಿಯ ವೈದ್ಯ ವಿದ್ಯಾರ್ಥಿ ನವೀನ್ ಎನ್ನುವವ ಸಹ ದುರಂತ ಸಾವಿಗೆ ಈಡಾಗಿದ್ದಾನೆ. ಇಷ್ಟೆಲ್ಲಾ ಘಟಸುತ್ತಿದ್ದರೂ ಬುದ್ದಿಜೀವಿಗಳೆನಿಸಿಕೊಂಡವರು ಯಾರೂ ರಷ್ಯಾ ನಡೆಯನ್ನು ಟೀಕಿಸುವ ಮಾತನಾಡುತ್ತಿಲ್ಲ ಏಕೆ? ಕೇವಲ ನರೇಂದ್ರ ಮೋದಿ, ಕೇಂದ್ರ ಸರ್ಕಾರ ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸಬೇಕಿದೆಯೆ?
ಕಳೆದ ವರ್ಷಗಳಲ್ಲಿ “ಟೂಲ್ ಕಿಟ್” ಮೂಲಕ ಭಾರತದಲ್ಲಿ ಅಸಮಾನತೆ ಇದೆ, ಅಸಹಿಷ್ಣುತೆ, ಮಾನವ ಹಕ್ಕು ಉಲ್ಲಂಘನೆ ಸತತ ಆಗುತ್ತಿದೆ ಎನ್ನುತ್ತಿದ್ದ ಜಾಗತಿಕ ಹೋರಾಟಗಾರ್ತಿಯರಾರೂ ಇದೀಗ ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ತುಟಿ ಪಿಟಿಕೆನ್ನುತ್ತಿಲ್ಲ. ಇದಷ್ಟೇ ಅಲ್ಲ ಕಳೆದ ತಿಂಗಳಲ್ಲಿ ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಕುರಿತು ವಿವಾದ ಏರ್ಪಟ್ಟ ಸಮಯದಲ್ಲಿ ಅಮೆರಿಕಾ, ಪಾಕಿಸ್ತಾನ ಸೇರಿ ಜಗತ್ತಿನ ನಾನಾ ರಾಷ್ಟ್ರಗಳ ನಾಯಕರು ಅಲ್ಲದೇ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮಲಾಲಾಳಂತಹಾ ವ್ಯಕ್ತಿಗಳು ಭಾರತದಲ್ಲಿ ಪರಿಸ್ಥಿತಿ “ಭಯಂಕರವಾಗಿದೆ” ಅಂತ ಅಂದಿದ್ದರು. ಆದರೆ ಇದೀಗ ಅವರಾರೂ ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಹಾಗೂ ಅದರಿಂದಾಗುತ್ತಿರುವ ಜೀವಹಾನಿ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ.
ಇದೆಲ್ಲದರಿಂದ ತಿಳಿದುಬರುತ್ತಿರುವುದೇನೆಂದರೆ ವಿಶ್ವದ ಬಲಾಡ್ಯ ರಾಷ್ಟ್ರಗಳು ತಾವೇನು ಮಾಡಿದರೂ ಅದೆಲ್ಲವೂ ಸರಿಯಾಗಿಯೇ ಇರುತ್ತದೆ. ಆದರೆ ಭಾರತದಂತ ಕೆಲವು ರಾಷ್ಟ್ರಗಳು ಮಾತ್ರ ಅವರ ಅಣತಿಯ ಪ್ರಕಾರವೇ ನಡೆಯಬೇಕು! ಉದಾಹರಣೆಗಾಗಿ ಹೇಳುವುದಾದರೆ ರಷ್ಯಾ-ಉಕ್ರೇನ್ ಮೇಲೆ ದಾಳಿ ನಡೆಸಿದ್ದಂತೆ ಭಾರತವೇನಾದರೂ ಪಾಕಿಸ್ತಾನದ ಕರಾಚಿ, ಲಾಹೋರ್ ಮೇಲೆ ದಾಳಿ ನಡೆಸಿದ್ದರೆ ಆಗ ಅಮೆರಿಕಾ ಸೇರಿ ಜಾಗತಿಕ ಶಕ್ತಿಗಳು ಹೀಗೆಯೇ ಸುಮ್ಮನೆ ಕುಳಿತಿರುತ್ತಿದ್ದವೆ? ಖಂಡಿತಾ ಇಲ್ಲ. ಭಾರತದ ವಿರುದ್ಧ ವಿಷ ಕಾರುತ್ತಿದ್ದವು.
ಇನ್ನು ಇಂದಿನ ಯುದ್ಧ ಪರಿಸ್ಥಿತಿಯಲ್ಲಿ ಭಾರತ ತಟಸ್ಥ ಧೋರಣೆ ತಾಳಿದೆ. ಇದಕ್ಕೆ ಕಾರಣ ಕೂಡ ಇದೆ. ರಷ್ಯಾ ನಮ್ಮ ಅನಾದಿ ಕಾಲದ ಮಿತ್ರರಾಷ್ಟ್ರ. ಅಂತಹಾ ದೇಶದ ವಿರುದ್ಧ ನಿಲುವು ತೆಗೆದುಕೊಳ್ಳುವುದು ಅಷ್ಟೇನೂ ಸುಲಭವಲ್ಲ. ಇನ್ನೊಂದು ಸಂಗತಿ ಎಂದರೆ ಭಾರತಕ್ಕೆ ಅಮೆರಿಕಾ ಸಹ ಮಿತ್ರರಾಷ್ಟ್ರವೇ ಆಗಿದ್ದರೂ ಅಮೆರಿಕಾದ ಭಾರತ ಪರ ನಿಲುವು ಎಲ್ಲಾ ಕಾಲದಲ್ಲಿ ಏಕಪ್ರಕಾರವಾಗಿ ಇರುವುದಿಲ್ಲ. ಹಾಗಾಗಿ ಇಂದು ಅಮೆರಿಕಾ ಮಾತುಕೇಳಿ ರಷ್ಯಾ ವಿರುದ್ಧ ಹೋದರೆ ನಾವು ಒಬ್ಬ ಆಪ್ತಮಿತ್ರನನ್ನೇ ಕಳೆದುಕೊಳ್ಳುತ್ತೇವೆ. ಹಾಗೆಂದ ಮಾತ್ರಕ್ಕೆ ರಷ್ಯಾ ನಡೆಸಿರುವ ಈ ಯುದ್ಧಕ್ಕೆ ಭಾರತದ ಸಮ್ಮತಿ ಇದೆ ಎಂದೂ ಅರ್ಥವಲ್ಲ. ಭಾರತ ಪ್ರಧಾನಿ ರಷ್ಯಾ ಅಧ್ಯಕ್ಷ ಪುಟಿನ್ ಗೆ ಪದೇ ಪದೇ ಕರೆ ಮಾಡಿ ಯುದ್ಧ ನಿಲ್ಲಿಸುವ ಮನವಿ ಮಾಡುತ್ತಿದ್ದಾರೆ. ಅಲ್ಲದೆ ಉಕ್ರೇನ್ ನಲ್ಲಿ ಸಿಲುಕಿದ್ದ ನಮ್ಮ ದೇಶವಾಸಿಗಳನ್ನು ಮರಳಿ ಕರೆತರುತ್ತಿದ್ದಾರೆ. ಆದರೆ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವಂತೆ ರಷ್ಯಾ ಮೇಲೆ ಭಾರತ ಒತ್ತಡ ಹಾಕುವುದು ಸಾಧ್ಯವಿಲ್ಲ. ಮತ್ತು ವಿಶ್ವಸಂಸ್ಥೆಯಲ್ಲಿಯೂ ಸಹ ಯುದ್ಧದ ವಿರುದ್ಧ ಮತ ಚಲಾವಣೆ ಅಸಾಧ್ಯ. ಏಕೆಂದರೆ ರಷ್ಯಾದಂತೆ ಉಕ್ರೇನ್ ನಮಗೆ ಹಳೇ ಮಿತ್ರನಲ್ಲ. ಇದೀಗ ತನ್ನ ಮೇಲೆ ರಷ್ಯಾ ಎಲ್ಲಾ ದಿಕ್ಕುಗಳಿಂದ ಆಕ್ರಮಣ ನಡೆಸಿದೆ. ನನ್ನ ಪರವಾಗಿ ರಷ್ಯಾ ಅಧ್ಯಕ್ಷರೊಂದಿಗೆ ಮಾತನಾಡಿ ತಕ್ಷಣವೇ ಯುದ್ಧ ನಿಲ್ಲಿಸಲು ಮಧ್ಯ ಪ್ರವೇಶಿಸುವಂತೆ ಹಾಗೂ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧ ಬೆಂಬಲಿಸುವಂತೆ ಉಕ್ರೇನ್ ಸರ್ಕಾರವು ಭಾರತವನ್ನು ಅಂಗಲಾಚುತ್ತಿದೆ. ಆದರೆ ಇದೇ ದೇಶ ಈ ಹಿಂದೆ ಹಲವು ಬಾರಿ ಭಾರತದ ವಿರುದ್ಧ ನಿರ್ಣಯ ತೆಗೆದುಕೊಂಡ ಉದಾಹರಣೆಗಳು ನಮ್ಮ ಮುಂದಿದೆ. 1998ರಲ್ಲಿ ಅಂದಿನ ಆಟಲ್ ಬಿಹಾರಿ ವಾಜಪೇಯಿ ಸರ್ಕಾರ ‘ಆಪರೇಷನ್ ಶಕ್ತಿ’ ಹೆಸರಿನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ, ಪಾಕಿಸ್ತಾನ-ಭಾರತ ಯುದ್ಧ ಸಮಯದಲ್ಲಿ, ವಿಶ್ವಸಂಸ್ಥೆಯ ಭದ್ರಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯಲು ಭಾರತ ಪ್ರಯತ್ನಿಸುತ್ತಿದ್ದ ಸಮಯ, ಕಾಶ್ಮೀರ ವಿಷಯದಲ್ಲಿ ಸಹ ಉಕ್ರೇನ್ ಭಾರತದ ವಿರುದ್ಧ ನಿರ್ಣಯ ತೆಗೆದುಕೊಂಡಿದೆ. ಹೀಗಿರುವಾಗ ಇಂದು ಉಕ್ರೇನ್ ಪರ ಭಾರತ ನಿರ್ನಯ ತೆಗೆದುಕೊಳ್ಳಲಾಗುತ್ತದೆಯೆ?
ಒಟ್ಟಾರೆಯಾಗಿ ಹೇಳುವುದಾದರೆ ಯುದ್ಧ ಎಂದಿಗೂ ಒಳ್ಳೆಯದಲ್ಲ. ಮಾನವ ವಿಕಾಸದ ಇತಿಹಾಸದಲ್ಲಿ ಅಳಿಸಲಾಗದ ಕಠೋರ ಕಪ್ಪು ಕಲೆ ಎಂದರೆ ಅವು ಯುದ್ಧದ ಕಲೆಗಳು. ಹಾಗಾಗಿ ಇಂದೂ ಸಹ ಕೋಟ್ಯಾಂತರ ಜೀವಹಾನಿಗೆ ಪ್ರೇರಣೆಯಾಗಿರುವ ಯುದ್ಧ ತಕ್ಷಣ ನಿಲ್ಲಲೇಬೇಕು, ಜಗತ್ತು ಶಾಂತಿ ಸೌಹಾರ್ದತೆಯಿಂದ ನಡೆಯುವಂತಾಗಬೇಕು ರಷ್ಯಾ-ಉಕ್ರೇನ್ ಕದನ ಶೀಘ್ರವೇ ಮುಕ್ತಾಯವಾಗಲಿ, ಅದಕ್ಕಾಗಿ ನಮ್ಮೆಲ್ಲರ ಪ್ರಾರ್ಥನೆ ಇರಲಿ.







