ವಿಷಯದ ವಿವರಗಳಿಗೆ ದಾಟಿರಿ

Recent Articles

21
ಏಪ್ರಿಲ್

ಈ ಶೆಟ್ಟರ್, ‘ಆ ಶೆಟ್ಟರ್’ಗಳಂತಲ್ಲ!


ಸಂತೋಷ್ ತಮ್ಮಯ್ಯ

ತುಂಬಿದ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ಚೌಗಲೆ ಸಾಹೇಬರು ಕಲಾಪ ನಡೆಸುತ್ತಿದ್ದರು. ಆಗಿನ್ನೂ ವಕೀಲರುಗಳು ಕಡ್ಡಾಯವಾಗಿ ಕರಿಕೋಟನ್ನು ಧರಿಸಬೇಕೆಂದಿರಲಿಲ್ಲ. ಹಾಗಾಗಿ ಸಭಾಂಗಣದೊಳಗೆ ವಕೀಲರ‍್ಯಾರು? ಕಕ್ಷಿದಾರರ‍್ಯಾರೆಂಬುದು ಗೊತ್ತಾಗುತ್ತಿರಲಿಲ್ಲ. ಅಂದು ನ್ಯಾ. ಚೌಗಲೆಯವರು, ಖ್ಯಾತ ವಕೀಲ ಭೀಮರಾವ್ ಭಂಡಿವಾಡರಿಗೆ ಮೈತಾಗಿಸಿ ಕುಳಿತು ತನ್ನನ್ನೇ ದಿಟ್ಟಿಸುತ್ತಿದ್ದ ಯುವಕನೊಬ್ಬನತ್ತ ಬೊಟ್ಟುಮಾಡಿ ’ಯಾರು ಈ ಹುಡುಗ?’ ಎಂದು ಕೇಳಿದರು. ’ಭಂಡಿವಾಡರು ನನಗೆ ತಿಳಿಯದು ಮಹಾಸ್ವಾಮಿ’ ಎಂದುತ್ತರಿಸಿದರು. ನ್ಯಾಯಮೂರ್ತಿಗಳು ಸಿಡುಕುಮುಖದೊಂದಿಗೆ ಕಲಾಪದಲ್ಲಿ ವ್ಯಸ್ತರಾದರು. ಆ ಯುವಕ ಬೇಸರದಿಂದ ಹೊರನಡೆದ.

ಮರುದಿನ ಕಛೇರಿಗೆ ಬಂದಾಗ ಚೌಗಲೆಯವರಿಗೆ ಲಕೋಟೆಯೊಂದು ಕಾಯುತ್ತಿತ್ತು. ಅದನ್ನು ಓದುತ್ತಲೇ ಚೌಗಲೆ ಸಾಹೇಬರು ಕೋಪದಿಂದ ನಡುಗಲಾರಂಭಿಸಿದರು.

ಆ ಪತ್ರ ಹೀಗಿತ್ತು: ‘ನ್ಯಾಯಾಲಯದೊಳಗೆ ಬಂದು ಕಲಾಪಗಳನ್ನು ವೀಕ್ಷಿಸಲು ಪ್ರತಿಯೊಬ್ಬರಿಗೂ ಹಕ್ಕಿದೆ, ಅಧಿಕಾರವಿದೆ. ಹೊಸದಾಗಿ ವಕೀಲಿ ವೃತ್ತಿ ಆರಂಭಿಸುವವರು ಕಲಾಪಗಳನ್ನು ವೀಕ್ಷಿಸಿ ಅನುಭವವನ್ನು ಹಾಗೂ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕಾಗುತ್ತದೆ. ಒಬ್ಬ ತರುಣ ವಕೀಲನಾದ ನಾನು ಹಿರಿಯ ವಕೀಲರ ಪಕ್ಕದಲ್ಲಿ ಕುಳಿತು ಕಲಾಪವನ್ನು ವೀಕ್ಷಿಸಿರುತ್ತೇನೆ. ತಾವು ನೇರವಾಗಿ ನನಗೇ ಪ್ರಶ್ನೆಯನ್ನು ಮಾಡಬಹುದಿತ್ತು. ಆದರೆ ನೀವು ನಾನು ಯಾರೆಂದು ಹಿರಿಯ ವಕೀಲರನ್ನು ಕೇಳಿದಿರಿ. ಆದ್ದರಿಂದ ನಾನು ಏನನ್ನೂ ಹೇಳದೆ ಸುಮ್ಮನಿದ್ದೆ. ಹೀಗೆ ಬೇರೆಯವರಿಗೆ ಪ್ರಶ್ನೆ ಹಾಕಿ ನನ್ನ ಬಗ್ಗೆ ಉತ್ತರ ಪಡೆಯುವ ನಿಮ್ಮ ವಿಧಾನ ನನಗೂ, ವಕೀಲಿ ವೃತ್ತಿಗೂ ಗೈದ ಅಪಮಾನವೆಂದು ತಿಳಿದಿದ್ದೇನೆ ಮತ್ತು ಅಸಮಾಧಾನವನ್ನು ಸೂಚಿಸುತ್ತಿದ್ದೇನೆ. ಇದು ನನ್ನ ಆತ್ಮಗೌರವಕ್ಕೆ ಧಕ್ಕೆಯುಂಟುಮಾಡಿದೆ. ಹೀಗೆ ಮಾಡಲು ನಿಮಗೇನು ಅಧಿಕಾರವಿದೆ? ನೀವು ನಿಮ್ಮ ತಪ್ಪಿಗಾಗಿ ಕ್ಷಮೆ ಕೋರಿ ವಕೀಲಿ ವೃತ್ತಿಯ ಘನತೆಯನ್ನು ಎತ್ತಿಹಿಡಿಯಬೇಕು-ಸದಾಶಿವ ಶಂಕರಪ್ಪ ಶೆಟ್ಟರ್‘

ಈ ಪತ್ರವನ್ನೋದಿದ ನ್ಯಾಯಾಶರು ತಬ್ಬಿಬ್ಬಾದರು. ಅದು ಭಾರೀ ಸುದ್ದಿಯಾಗಿ ಪೇಟೆಯಲ್ಲೂ ಚರ್ಚೆಯಾಯಿತು. ’ಯಾರೀತ? ಯಾರು ಈ ಶೆಟ್ಟರ್?’ ಕೊನೆಗೆ ಏನೋ ನೆನಪು ಮಾಡಿಕೊಂಡ ಚೌಗಲೆಯವರು ಆ ಯುವಕನನ್ನು ಕಛೇರಿಗೆ ಕರೆಸಿಕೊಂಡು ‘ನೀನು ಶಂಕ್ರಪ್ಪ ಶಿವಪ್ಪ ಶೆಟ್ಟರ್ (ಎಸ್.ಎಸ್ ಶೆಟ್ಟರ್) ಮಗನೇನು?‘ ಎಂದು ಕೇಳಿದರು. ಹುಡುಗ ಹೌದೆಂದ!

ಇವೆಲ್ಲಾ ನಡೆದು ಈಗ ಅರ್ಧ ಶತಮಾನಗಳೇ ಕಳೆದಿವೆ. ಆದರೆ ’ಯಾರೀತ? ಯಾರು ಈ ಶೆಟ್ಟರ್?’ ಎಂಬ ಪ್ರಶ್ನೆ ಮತ್ತೊಂದು ರೀತಿಯಲ್ಲಿ ಇಡೀ ರಾಜ್ಯವನ್ನು ಕಾಡುತ್ತಿದೆ! ಎಸ್.ಎಸ್. ಶೆಟ್ಟರ್ ಮಗ ಈ ಸದಾಶಿವ ಶೆಟ್ಟರ್ ಆದರೆ, ಇಂವ ಯಾವ ಶೆಟ್ಟರ್? ಇವರಪ್ಪನೂ ಎಸ್.ಎಸ್. ಶೆಟ್ಟರ್ ಅಲ್ಲವೇ? ಮುಂತಾದ ಪ್ರಶ್ನೆಗಳು ಹಲವರನ್ನು ಕಾಡುತ್ತಿವೆ. ಇವು ಕೇವಲ ಪ್ರಶ್ನೆಗಳು ಮಾತ್ರವಾಗಿದ್ದರೆ ಅದರಲ್ಲೇನೂ ವಿಶೇಷವಿರುತ್ತಿರಲಿಲ್ಲ. ಆದರೆ ಈಗ ಉದ್ಭವಿಸಿದ ಪ್ರಶ್ನೆ ಮೌಲ್ಯಗಳ, ನಿಷ್ಠೆಯ, ಪ್ರಾಮಾಣಿಕತೆಯ ಪ್ರಶ್ನೆ. ಇದೀಗ ಚರ್ಚೆಯಾಗುತ್ತಿರುವ ಅಧಿಕಾರದಾಸೆಯ ಶೆಟ್ಟರನ್ನು ಕೆಲವರು ವಕೀಲ ಸದಾಶಿವ ಶೆಟ್ಟರರ ಮಗ ಎಂದುಕೊಂಡಿದ್ದಾರೆ. ಜನಸಂಘದ ಮಹಾ ನಾಯಕರ ಗರಡಿಯಲ್ಲಿ ಪಳಗಿದ ಸದಾಶಿವ ಶೆಟ್ಟರ್ ಕುಡಿಯೇಕೆ ಹೀಗೆ ಮಾಡಿದರು ಎಂದು ನೊಂದುಕೊಂಡವರಿದ್ದಾರೆ. ಆದರೆ ಸದಾಶಿವ ಶೆಟ್ಟರ್ ಮನೆತನದ ಇತಿಹಾಸವನ್ನು ಅಧ್ಯಯನ ಮಾಡಿದರೆ ಅಲ್ಲಿ ಮೂರು ಶತಮಾನಗಳಿಂದಲೂ ಪ್ರಾಮಾಣಿಕರು, ಧರ್ಮರಕ್ಷಣೆಗೆ ಬದುಕು ಮುಡಿಪಾಗಿಟ್ಟವರು, ಸಮಾಜಕ್ಕಾಗಿ ಬದುಕಿದವರು ಮಾತ್ರ ಕಾಣುತ್ತಾರೆಯೇ ಹೊರತು ಅಧಿಕಾರಕ್ಕಾಗಿ ಹಪಹಪಿಸಿದ, ಧನದಾಹಿ ’ಶೆಟ್ಟರ್’ ಕಾಣಿಸುವುದಿಲ್ಲ. ಹಾಗಾದರೆ ಬಣ್ಣಬದಲಿಸಿದ ಈ ಶೆಟ್ಟರ್ ಯಾರು?

ಅದರ ಕಥೆ ರಾಜಮೌಳಿ ಸಿನೆಮಾದಂತೆ, ತ.ಸು. ಶಾಮರಾಯರ ’ಮೂರು ತಲೆಮಾರು’ ಪುಸ್ತಕದಂತೆ ರೋಚಕವಾಗಿದೆ.

ಲಭ್ಯ ದಾಖಲೆಗಳ ಪ್ರಕಾರ ಶೆಟ್ಟರ್ ವಂಶದ ಇತಿಹಾಸ ಆರಂಭವಾಗುವುದು ೧೬ನೇ ಶತಮಾನದ ಗೋಕಾಕದ ಕಾಡಪ್ಪ ಶೆಟ್ಟರ್ ಎಂಬ ಶಿವಭಕ್ತರಿಂದ. ಶರಣತತ್ತ್ವಗಳ ಪ್ರಕಾರ ಬದುಕಿದ ಅನುಕೂಲಸ್ಥ ಕಾಡಪ್ಪನವರಿಗೆ ಇಬ್ಬರು ಮಕ್ಕಳು. ಎರಡನೆಯ ಮಗ ಬಸಪ್ಪ ಶೆಟ್ಟರ್ ತಂದೆಯಂತೆಯೇ ಶಿವಭಕ್ತ. ಅವರ ಸಮಾಜಸೇವೆ ಮತ್ತು ಸಾತ್ತ್ವಿಕ ಗುಣವನ್ನು ಗದಗಿನ ತೋಂಟದಾರ್ಯ ಸ್ವಾಮಿಗಳು, ಸವಣೂರಿನ ನವಾಬರು ಮತ್ತು ಜಡೆ ಮಠದ ಸ್ವಾಮಿಗಳು ಮೆಚ್ಚಿ ಗೌರವದ ಸ್ಥಾನಮಾನಗಳನ್ನು ನೀಡಿದ್ದರು. ಗುರುಸಿದ್ದೇಶ್ವರ ಸ್ವಾಮಿಗಳನ್ನು ಚಿತ್ರದುರ್ಗದಿಂದ ಕರೆಸಿ ಹುಬ್ಬಳ್ಳಿಯಲ್ಲಿ ಮೂರುಸಾವಿರ ಮಠವನ್ನು ಅವರು ನಿರ್ಮಿಸಿದ್ದರು. ಮುಂದೆ ಮಠಕ್ಕೆ ಅವರ ಮೂರನೆಯ ಮಗ ಗುರುಸಿದ್ಧಪ್ಪ ಶೆಟ್ಟರ್ ಮಠಾಧಿಪತಿಯೂ ಆದರು. ಇವರು ಕಾಡಪ್ಪ ಶೆಟ್ಟರ್ ವಂಶದ ಮೂರನೇ ತಲೆಮಾರು. ಇವರ ನಂತರದ ಐದನೇ ತಲೆಮಾರಿನಲ್ಲಿ ಜನಿಸಿದವರೇ ಶಂಕ್ರಪ್ಪ ಶಿವಪ್ಪ ಶೆಟ್ಟರ್ ಅಥವಾ ಎಸ್.ಎಸ್. ಶೆಟ್ಟರ್. ಇವರೇ ನ್ಯಾಯಾಶರಿಗೆ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ ಸ್ವಾಭಿಮಾನಿ ಸದಾಶಿವ ಶೆಟ್ಟರ್ ತಂದೆ. ವಕೀಲರಾಗಿದ್ದ ಎಸ್.ಎಸ್. ಶೆಟ್ಟರ್ ಹುಬ್ಬಳ್ಳಿ-ಧಾರವಾಡ ಸೀಮೆಯಲ್ಲಿ ಹೆಸರಾಂತ ವ್ಯಕ್ತಿ. ಶೆಟ್ಟರ್ ಚಾಳ್‌ಗೆ ಬಂದ ಯಾರನ್ನೂ ಬರಿಗೈಯಲ್ಲಿ ಕಳುಹಿಸದ ಕೊಡುಗೈ ದಾನಿ. ಧಾರವಾಡ ಸೀಮೆಯ ಹಳ್ಳಿಗಳಿಂದ ಮಕ್ಕಳನ್ನು ಕರೆತಂದು ತಮ್ಮ ಮನೆಯಲ್ಲಿಟ್ಟು ಓದಿಸುತ್ತಲೇ ತಮ್ಮ ೩೪ನೇ ವಯಸ್ಸಿನಲ್ಲಿ ಕಾಲವಾದರು. ಅವರು ಕಾಲವಾಗುವ ಕೆಲ ವರ್ಷಗಳ ಮುನ್ನ ಕಲಘಟಗಿ, ಮಿಸರಕೋಟಿಗಳಿಂದ ಬಡಮಕ್ಕಳನ್ನು ತಂದು ತಮ್ಮ ಮನೆಯಲ್ಲಿಟ್ಟುಕೊಂಡು ಓದಿಸುತ್ತಿದ್ದರು. ಹಾಗೆ ಬಂದ ಒಬ್ಬ ಬುದ್ಧಿವಂತ ಹುಡುಗ ಶಿವಪ್ಪ ಶಿವಮೂರ್ತೆಪ್ಪ ಶೆಟ್ಟರ್. ಮುಂದೆ ಇವರೂ ಎಸ್.ಎಸ್. ಶೆಟ್ಟರ್ ಎಂದೇ ಖ್ಯಾತರಾದರು. ಈ ಶಿವಪ್ಪ ಶಿವಮೂರ್ತೆಪ್ಪ ಶೆಟ್ಟರ್ ಅವರಿಗೆ ತನ್ನನ್ನೂ ಜನ ಎಸ್.ಎಸ್. ಶೆಟ್ಟರ್ ಎಂದು ಕರೆಯುವುದು ಹೆಮ್ಮೆ ತರುತ್ತಿತ್ತು ಮತ್ತವರು ಅನ್ನ-ವಿದ್ಯೆ ನೀಡಿದ ಶೆಟ್ಟರ್ ಮನೆತನಕ್ಕೆ ನಿಷ್ಠರೂ ಆಗಿದ್ದರು. ಹಿರಿಯ ಎಸ್.ಎಸ್. ಶೆಟ್ಟರರ ಅಪಾರ ಆಸ್ತಿಗೆ ಕಿಂಚಿತ್ತೂ ಅಪಾಯ ಬರದಂತೆ ಕಾಪಾಡಿದವರು ಈ ಕಿರಿಯ ಎಸ್.ಎಸ್. ಶೆಟ್ಟರ್. ಹಿರಿಯ ಎಸ್.ಎಸ್ ಶೆಟ್ಟರರ ಸ್ವಂತ ಮಗ ಸದಾಶಿವ ಶೆಟ್ಟರ್ ವಕೀಲಿ ವೃತ್ತಿ ಹಿಡಿಯುವವರೆಗೂ ರಕ್ತಸಂಬಂಧಿಯಲ್ಲದ ಕಿರಿಯ ಎಸ್.ಎಸ್. ಶೆಟ್ಟರ್ ಆ ಕುಟುಂಬದ ಸೇವೆ ಮಾಡುತ್ತಾ ಸಾರ್ಥಕ ಬದುಕನ್ನು ಬದುಕಿದರು.

ಇತ್ತ ಸದಾಶಿವ ಶೆಟ್ಟರ್ ಯಶಸ್ವಿ ವಕೀಲರಾಗಿ, ವಿವಾಹವಾಗಿ ಅವರಿಗೆ ಐವರು ಮಕ್ಕಳೂ ಆದರು. ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರಾದರು. ಅತ್ತ ಕಾಡಪ್ಪ ಶೆಟ್ಟರ್ ವಂಶದವರಲ್ಲದ ಶಿವಪ್ಪ ಶಿವಮೂರ್ತೆಪ್ಪ ಶೆಟ್ಟರ್ ಯಾನೆ ಕಿರಿಯ ಎಸ್.ಎಸ್. ಶೆಟ್ಟರ್ ಕೂಡ ಸಂಸಾರಸ್ಥರಾಗಿ ಅವರಿಗೂ ಮಕ್ಕಳಾದರು. ಅವರಲ್ಲೊಬ್ಬರು ಮುಂದೆ ಬಿಜೆಪಿಯಲ್ಲಿ ಸಕಲ ಅಧಿಕಾರಗಳನ್ನು ಅನುಭವಿಸಿ ಜಗದೀಶ ಶೆಟ್ಟರ್ ಎಂದು ಖ್ಯಾತರಾದರು.

ಕಾಂಗ್ರೆಸಿನಲ್ಲಿ ಸಕ್ರಿಯರಾಗಿದ್ದ ವಕೀಲ ಸದಾಶಿವ ಶೆಟ್ಟರಿಗೆ ಕ್ರಮೆಣ ಕಾಂಗ್ರೆಸಿಗರಿಗೆ ಶ್ರದ್ಧೆಯಿಲ್ಲ, ಕ್ರಿಯಾಶೀಲತೆಯಿಲ್ಲ ಎನಿಸತೊಡಗಿತು. ಅಧಿಕಾರದಾಹ, ಜಾತೀಯತೆ ಮತ್ತು ಅಲ್ಪಸಂಖ್ಯಾತರ ಓಲೈಕೆಗಳು ರಾಷ್ಟ್ರಭಾವಕ್ಕೆ ಅಪಾಯವನ್ನುಂಟುಮಾಡುತ್ತವೆ ಎಂಬುದು ಅವರಿಗೆ ಅರಿವಾಗತೊಡಗಿತು. ತಾನು ಇಲ್ಲೇ ಉಳಿದರೆ ಕಾಂಗ್ರೆಸಿನಂತೆ ನಿಷ್ಕ್ರಿಯನಾಗಿಬಿಡುವೆ ಎಂಬ ಭಯ ಕಾಡತೊಡಗಿತು. ಆಗ ಅವರನ್ನು ಸೆಳೆದಿದ್ದು ಡಾ.ಶ್ಯಾಮಪ್ರಸಾದ್ ಮುಖರ್ಜಿ ಮತ್ತು ದೀನದಯಾಳ ಉಪಾಧ್ಯಾಯರ ಚಿಂತನೆಗಳು. ಅನಂತರ ಹಿಂದೆಮುಂದೆ ಯೋಚಿಸದ ಸದಾಶಿವ ಶೆಟ್ಟರ್ ಜನಸಂಘ ಸೇರಿದರು. ಜಗನ್ನಾಥರಾವ್ ಜೋಷಿ, ಭಾವುರಾವ್ ದೇಶಪಾಂಡೆ ಹಾಗೂ ಗದಗಿನ ಡಾ. ರಾಮಚಂದ್ರ ಅನಂತರಾವ ಜಾಲಿಹಾಳರ ಮಾರ್ಗದರ್ಶನದಿಂದ ಆರೆಸ್ಸೆಸ್ಸಿನ ಸಂಪರ್ಕಕ್ಕೂ ಬಂದರು. ೧೯೬೨ರಲ್ಲಿ ಹುಬ್ಬಳ್ಳಿಯಿಂದ, ೧೯೬೪ರಲ್ಲಿ ಧಾರವಾಡದಿಂದ ವಿಧಾನಸಭೆಗೆ ಸ್ಪರ್ಧಿಸಿ ಸೋತರು. ೧೯೬೭ರ ಚುನಾವಣೆಯಲ್ಲಿ ಹುಬ್ಬಳ್ಳಿಯಿಂದ ಸ್ಪರ್ಧಿಸಿ ಗೆದ್ದು ದಕ್ಷಿಣ ಭಾರತದ ಜನಸಂಘದ ಮೊದಲ ಶಾಸಕ ಎನಿಸಿಕೊಂಡರು. ತಡವಾಗಿ ಜನಸಂಘ ಸೇರಿದರೂ ನಿಷ್ಠಾವಂತ ಕಾರ್ಯಕರ್ತರಾದರು. ಪಕ್ಷದ ಕಾರ್ಯಕ್ಕೆಂದೇ ಪ್ರಿಂಟಿಂಗ್ ಪ್ರೆಸ್ ತೆರೆದರು. ಮನೆಯಲ್ಲಿ ಊಟಹಾಕಿ ಪಕ್ಷ ಕಟ್ಟಿದರು. ದೀನದಯಾಳರಂಥ ರಾಷ್ಟ್ರನಾಯಕರ ನಿಕಟವರ್ತಿಗಳಾದರು. ಹುಬ್ಬಳ್ಳಿ ಆಸ್ಪತ್ರೆ ನಿರ್ಮಾಣದ ನಂತರ ನಿರ್ಗತಿಕರಾದ ಕಾರ್ಮಿಕರ ಪರವಾಗಿ ಹೋರಾಟ ಮಾಡಿ ವಸತಿ ಕಲ್ಪಿಸಿದರು. ರೈತಹೋರಾಟಗಳನ್ನು ಸಂಘಟಿಸಿದರು, ಕಟ್ಟಡ ತೆರಿಗೆಯ ವಿರುದ್ಧ ಧರಣಿ ಕುಳಿತರು. ಬೆಲೆ ಏರಿಕೆ, ಪಡಿತರ ತಾರತಮ್ಯದ ವಿರುದ್ಧ ಬೀದಿಗಿಳಿದು ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ದೀನದಯಾಳ ಉಪಾಧ್ಯಾಯರು ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಾಗ ಅವರ ಜೊತೆಗೂಡಿ ಸಂಘಟನೆ ಮಾಡಿದರು. ಹಿಡಿದ ಕಾರ್ಯವನ್ನು ವೇಗದಿಂದ ಮುಗಿಸುತ್ತಿದ್ದ ಸದಾಶಿವ ಶೆಟ್ಟರ್ ತಮ್ಮ ಬದುಕನ್ನೂ ತುರಾತುರಿಯಲ್ಲಿ ಮುಗಿಸಿಬಿಟ್ಟರು. ೧೯೬೮ರಲ್ಲಿ ತಮ್ಮ ೩೬ನೇ ವಯಸ್ಸಿನಲ್ಲಿ ಶಾಸಕರಾಗಿದ್ದಾಗಲೇ ಕಾಲವಾದರು. ಅಲ್ಲಿಗೆ ಶೆಟ್ಟರ್ ಕುಟುಂಬದ ರಾಜಕೀಯ ಬದುಕೂ ಅಂತ್ಯವಾಯಿತು.

ಇವರ ನಿಧನದಿಂದ ತೆರವಾದ ಸ್ಥಾನಕ್ಕೆ ಕಾರ್ಯಕರ್ತರು ಶಿವಪ್ಪ ಶಿವಮೂರ್ತೆಪ್ಪ ಶೆಟ್ಟರ್ (ಕಿರಿಯ ಎಸ್.ಎಸ್ ಶೆಟ್ಟರ್)ರನ್ನು ಅಭ್ಯರ್ಥಿಯಾಗಿ ನಿಲ್ಲಿಸಿದರು. ಆದರೆ ಅವರು ಗೆಲ್ಲಲಿಲ್ಲ. ತಮಗೆ ಅನ್ನ ಕೊಟ್ಟ ಸದಾಶಿವ ಶೆಟ್ಟರ್ ಕುಟುಂಬದ ಮೌಲ್ಯಕ್ಕೆ ಅನುಗುಣವಾಗಿ ಬದುಕಿದರು. ಆದರೆ ಕಿರಿಯ ಎಸ್.ಎಸ್. ಶೆಟ್ಟರ್ ಹಾಗೆ ಬದುಕಿದರೆಂದು ಅವರ ಮಗ ಬದುಕಬೇಕೆಂದಿದೆಯೇ?

ಹೇಗೂ ಹುಬ್ಬಳ್ಳಿ-ಧಾರವಾಡದಲ್ಲಿ ಶೆಟ್ಟರ್ ಮನೆತನಕ್ಕೆ ಒಂದು ಹವಾ ಇತ್ತು. ಸದಾಶಿವ ಶೆಟ್ಟರರು ಕಾಲವಾದಾಗ ಒಂದು ಲಕ್ಷಕ್ಕೂ ಹೆಚ್ಚು ಜನ ಶವಯಾತ್ರೆಯಲ್ಲಿ ಭಾಗಿಯಾಗಿದ್ದರು. ಈ ಎಲ್ಲಾ ಕಾರಣಗಳಿಂದ ಕಾಂಗ್ರೆಸಿಗೆ ಠಕ್ಕರ್ ಕೊಡಲು ಶೆಟ್ಟರ್ ಕುಟುಂಬದ ಯಾರಾದರೂ ಅ‘ರ್ಥಿಯಾದರೆ ಬಿಜೆಪಿ ಗೆಲ್ಲಲಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಪ್ರಚಲಿತದಲ್ಲಿತ್ತು. ಆದರೆ ಸದಾಶಿವ ಶೆಟ್ಟರರ ಮಕ್ಕಳಾರೂ ರಾಜಕೀಯಕ್ಕೆ ಬರಲಾರೆವು ಎಂದು ಸುಮ್ಮನಾಗಿಬಿಟ್ಟರು. ಆ ಸಮಯದಲ್ಲಿ ರಾಜಕೀಯ ನಾಯಕರ ಕಣ್ಣಿಗೆ ಆಕಸ್ಮಿಕವಾಗಿ ಬಿದ್ದವರೇ ಶಿವಪ್ಪ ಶಿವಮೂರ್ತೆಪ್ಪ ಶೆಟ್ಟರ್ ಎಂಬ ಕಿರಿಯ ಎಸ್.ಎಸ್ ಶೆಟ್ಟರ್ ಮಗ. ಅನಂತರ ಆತ ಹಿಂದಿರುಗಿ ನೋಡಲಿಲ್ಲ. ಒಂದೊಂದಾಗಿ ರಾಜಕೀಯ ಮೆಟ್ಟಿಲುಗಳನ್ನೇರತೊಡಗಿದರು. ಶೆಟ್ಟರ್ ಹೆಸರೇ ಅವರಿಗೆ ವಿಜಯವನ್ನು ತಂದುಕೊಡುತ್ತಿತ್ತು. ಹಾಗಾಗಿ ಆಧುನಿಕ ಶೆಟ್ಟರರ ರಾಜಕೀಯ ಬದುಕು ಸುಲಭವಾಯಿತು. ಕಾಲಕ್ರಮೇಣ ಹಳೆಯ ಶೆಟ್ಟರ್ ಮೌಲ್ಯಗಳು ಅವಳಿ ನಗರದಲ್ಲಿ ದಂತಕಥೆಗಳಾಗಿ ಜನಪ್ರಿಯವಾದಾಗ ಈ ಶೆಟ್ಟರರಿಗೆ ತಾನೇ ಸಿದ್ಧಾಂತ, ತಾನೇ ಬಿಜೆಪಿ ಎಂಬ ಭ್ರಮೆಯೂ ಬೆಳೆಯಿತು. ಕಾಡಪ್ಪ ಶೆಟ್ಟರ್ ಮನೆತನದ ಪ್ರಭಾವಳಿಗಳಿಲ್ಲದೆಯೇ ತಾನು ಮೇಲೆ ಬಂದೆ ಎಂಬ ಅಹಂಕಾರವೂ ಬಂತು. ಯಡಿಯೂರಪ್ಪ ಸರ್ಕಾರವಿದ್ದಾಗ ಹುಬ್ಬಳ್ಳಿಯಲ್ಲಿ ಸದಾಶಿವ ಶೆಟ್ಟರರ ಪ್ರತಿಮೆ ನಿರ್ಮಾಣ ಮಾಡಬೇಕೆಂಬ ಕೂಗಿಗೆ ಈ ಶೆಟ್ಟರ್ ಸೊಪ್ಪು ಹಾಕಲಿಲ್ಲ, ಕೊನೆಗೆ ಅಭಿಮಾನಿಗಳೇ ಪುಟ್ಟ ಪ್ರತಿಮೆ ನಿರ್ಮಿಸಿದಾಗ ಕೆಲವರು ಅದಕ್ಕೆ ಅಡ್ಡಗಾಲನ್ನೂ ಹಾಕಿದರು! ಸರ್ಕಾರ ಸದಾಶಿವ ಶೆಟ್ಟರ್ ಕುರಿತ ಪುಸ್ತಕ ಬಿಡುಗಡೆ ಮಾಡಿದಾಗ ಮಂತ್ರಿ ಶೆಟ್ಟರರು ದೊಡ್ಡಮನೆಯ ಶೆಟ್ಟರರ ಮಕ್ಕಳನ್ನು ಸೌಜನ್ಯಕ್ಕೂ ವೇದಿಕೆಗೆ ಕರೆಯದೆ ನೋವು ಕೊಟ್ಟರು. ಅಂದರೆ ಬಿಜೆಪಿಯಲ್ಲಿದ್ದಾಗಲೇ ಈ ಶೆಟ್ಟರ್ ಒಳಗೊಳಗೇ ಹುನ್ನಾರ, ಕುಟಿಲತೆ, ಧೂರ್ತತನಗಳನ್ನು ತುಂಬಿಕೊಂಡಿದ್ದರು. ಆದರೆ ಮುಖವಾಡವಾದರೂ ಎಷ್ಟು ದಿನ ಮರೆಯಲ್ಲಿದ್ದೀತು? ಈಗ ಅದು ಕಳಚಿದೆ. ಸಂಘದ ಪ್ರಚಾರಕರ ಬಗ್ಗೆ ಅಪಸವ್ಯ ನುಡಿಯುವಷ್ಟು ಪತನಕ್ಕೆ ತಲುಪಿದೆ. ಆದರೆ ಇದರಲ್ಲೇನೂ ಆಶ್ಚರ್ಯ ಕಾಣಿಸುತ್ತಿಲ್ಲ. ಏಕೆಂದರೆ ಇವರು ಕಾಡಪ್ಪ ಶೆಟ್ಟರರಂತೆ ಬದುಕಿರಲೇ ಇಲ್ಲ! ಹಾಗಾಗಿ ಅಚ್ಚರಿಯೇಕೆ ಪಡಬೇಕು? ಅಲ್ಲದೆ ತಂದೆ ಶಿವಪ್ಪ ಶಿವಮೂರ್ತೆಪ್ಪ ಶೆಟ್ಟರ್ ಬೇರೆ ಕಾಲವಾಗಿದ್ದರು. ಇನ್ನು ಈ ಶೆಟ್ಟರರಿಗೆ ಯಾರ ಹಂಗೂ ಇರಲಿಲ್ಲ. ಹಾಗಾಗಿ ಪಕ್ಷ ಬಿಡುವಾಗಲೂ ಅವರಿಗೆ ನಾಚಿಕೆಯಾಗಲಿಲ್ಲ.

ವಿಪರ್ಯಾಸವೆಂದರೆ ಬಹುತೇಕ ಜನ ಇಂದಿಗೂ ಬೆನ್ನುಹಾಕಿಹೋದ ಈ ಶೆಟ್ಟರರನ್ನು ಸದಾಶಿವ ಶೆಟ್ಟರರ ಪುತ್ರ, ದೀನದಯಾಳರ ಸಂಪರ್ಕದಲ್ಲಿದ್ದ ಮನೆಯಾಂವ ಎಂದೇ ಅಂದುಕೊಂಡಿದ್ದಾರೆ! ಇದು ಹೇಗಾಯಿತೆಂದರೆ ಬಿಸ್ಲೆರಿ ನೀರಿನ ಬಾಟಲ್ ಯಶಸ್ವಿಯಾದಾಗ ಅದೇ ಹೆಸರನ್ನು ಹೋಲುವ ನಕಲಿ ನೀರಿನ ಬಾಟಲ್‌ಗಳು ಬಂದವಲ್ಲ ಹಾಗೆ!

ಗ್ರಂಥಋಣ: ಸಂಸದೀಯಪಟು-ಸದಾಶಿವ ಎಸ್. ಶೆಟ್ಟರ್-ಗ್ರಂಥಾಲಯ ಉಪಸಮಿತಿ, ಬೆಂಗಳೂರು

ಕೃಪೆ : ಹೊಸದಿಗಂತ

22
ಆಗಸ್ಟ್

ನೆಹರೂ,ಗಾಂಧಿಗೊಂದು ನ್ಯಾಯ, ಸಾವರ್ಕರ್’ರಿಗೊಂದು ನ್ಯಾಯವೇ?

  • ರಾಕೇಶ್ ಶೆಟ್ಟಿ

ಸಾವರ್ಕರ್ ಅವರ ಹೆಸರು ಕೇಳಿದರೆ ದ್ವೇಷಕಾರುವ ಸಿದ್ದರಾಮಯ್ಯನವರು, ಸುಳ್ಳುಗಳೇ ತುಂಬಿರುವ ಲೇಖನವೊಂದನ್ನು ಬರೆದು ಮುಖ್ಯಮಂತ್ರಿಗಳನ್ನು ಚರ್ಚೆಗೆ ಕರೆದಿದ್ದಾರೆ. ಮಾಜಿ ಮುಖ್ಯಮಂತ್ರಿಯೊಬ್ಬರು ಹೀಗೆ ಆಧಾರ ರಹಿತ ಸುಳ್ಳುಗಳ ಸರಮಾಲೆಯನ್ನು ಹೇಗೆ ಬರೆಯಲು ಸಾಧ್ಯ? ಅವರ ಲೇಖನದ ಕೆಲವು ಪ್ರಶ್ನೆಗಳು, ಸುಳ್ಳುಗಳ ಬಗ್ಗೆ ಮಾತನಾಡುತ್ತಲೇ, ಸಾವರ್ಕರ್, ಗಾಂಧಿ, ನೆಹರೂ ಅವರ ಜೈಲುವಾಸಗಳ ಬಗ್ಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಳ್ಳಬೇಕು.

10 ಡಿಸೆಂಬರ್ 1934 – ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಜವಹರಲಾಲ್ ನೆಹರೂ ಅವರ ಜೈಲುವಾಸದ ಬಗ್ಗೆಯೊಂದು ಚರ್ಚೆಯಾಗುತ್ತದೆ. ಸದಸ್ಯರಾದ ಹಾರಾಲ್ದ್ ಹೇಲ್ಸ್ ಅವರು, ನೆಹರೂ ಅವರ ಪತ್ನಿ ಕಮಲಾ ನೆಹರೂ ಅವರ ಅನಾರೋಗ್ಯದ ಸ್ಥಿತಿಯನ್ನು ಗಮನಿಸಿ, ಜವಹರಲಾಲ್ ನೆಹರೂ ಅವರನ್ನು ಶೀಘ್ರ ಬಿಡುಗಡೆ ಮಾಡುವ ಬಗ್ಗೆ ಪರಿಶೀಲಿಸುವಂತೆ ಆಗ್ರಹಿಸುತ್ತಾರೆ.

ಅದಕ್ಕೆ ಉತ್ತರವಾಗಿ, ಅಂದಿನ ಬ್ರಿಟಿಷ್ ಭಾರತದ ಅಧೀನ ಕಾರ್ಯದರ್ಶಿಯಾಗಿದ್ದ ಬಟ್ಲರ್ ಉತ್ತರಿಸುತ್ತಾ : ಅವರ ಹೆಂಡತಿಯನ್ನು ನೋಡಿಕೊಳ್ಳಲಿ ಎನ್ನುವ ಕಾರಣಕ್ಕಾಗಿಯೇ, ಕಳೆದ ಬೇಸಿಗೆಯಲ್ಲಿಯೇ ಅವರನ್ನು ಕೆಲವು ದಿನಗಳ ಕಾಲ ಬಿಡುಗಡೆ ಮಾಡಿದ್ದೆವು. ಈಗ ಅವರನ್ನು ಆಸ್ಪತ್ರಗೆ ಹತ್ತಿರ ಇರುವ ಜೈಲಿಗೆ ವರ್ಗಾವಣೆ ಮಾಡಲಾಗಿದ್ದು, ವಾರದಲ್ಲಿ ಒಂದು ಅಥವಾ ಎರಡು ದಿನ ವೈದ್ಯರ ಸಲಹೆಯಂತೆ ಅವರು ಹೋಗಿ ನೋಡಿಕೊಂಡು ಬರಲು ಅನುಮತಿ ನೀಡಲಾಗಿದೆ.

ಸರ್ಕಾರದ ವಿರುದ್ಧದ ಪಿತೂರಿಯ ಆರೋಪದಲ್ಲಿ ನೆಹರೂ ಎರಡು ವರ್ಷಗಳ ಸಾಮಾನ್ಯ ಶಿಕ್ಷೆಗೆ ಗುರಿಯಾಗಿದ್ದರು. ಆ ಜೈಲು ಶಿಕ್ಷೆಯ ಅವಧಿಯ ಕುರಿತು ನಡೆದ ಚರ್ಚೆಯಿದು. ಕೇಸ್ ದಾಖಲಾಗಿ ಬಂಧನವಾದ ನಂತರ, ನೆಹರೂ ಅವರ ಭಾವನೆಗಳಿಗೆ ಘಾಸಿ(!)ಯಾಗುವುದಾದರೆ ಪ್ರಕರಣದ ವಿಚಾರಣೆಯನ್ನು ಖಾಸಗಿಯಾಗಿಯೇ ಮಾಡುವ ಆಫರ್ ಅನ್ನು ಬ್ರಿಟಿಷ್ ಅಧಿಕಾರಿ ನೀಡುತ್ತಾರೆ! ಕಡೆಗೆ, 6 ತಿಂಗಳ ಮೊದಲೇ ಬಿಡುಗಡೆ ಮಾಡುತ್ತದೆ ಬ್ರಿಟಿಷ್ ಸರ್ಕಾರ. ನೆಹರೂ ಅವರ ಮೇಲೆ ಇಂತಹ ಪ್ರೀತಿಯನ್ನು ಇದೇ ಮೊದಲ ಬಾರಿಯೇನೂ ಬ್ರಿಟಿಷ್ ಸರ್ಕಾರ ತೋರಿಸಿದ್ದಲ್ಲ.

ಅಕ್ಟೋಬರ್ 24 ,1930 ರಂದು ಕೂಡ ಎರಡು ವರ್ಷಗಳ ಸಾಮಾನ್ಯ ಶಿಕ್ಷೆಗೆ ಗುರಿಯಾದಗಲೂ, ಅವರನ್ನು ಕೇವಲ 97 ದಿನಗಳಲ್ಲೇ ಬಿಡುಗಡೆ ಮಾಡಿತ್ತು ಬ್ರಿಟಿಷ್ ಸರ್ಕಾರ. ಬ್ರಿಟಿಷರಿಗೆ ನೆಹರೂ ಅವರ ಮೇಲೆ ಅದಿನ್ನೆಂತಹ ಪ್ರೀತಿ! ಅಥವಾ ನೆಹರೂ ಅವರು ಜೈಲಿನ ಒಳಗಿದ್ದರೂ, ಹೊರಗಿದ್ದರೂ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅಪಾಯಕಾರಿಯಲ್ಲ ಅಂತಲೇ? ನೆಹರೂ ಅವರ ರಾಜಕೀಯ ಜೀವನದಲ್ಲಿ, ಒಂದೇ ಕೇಸಿನಲ್ಲಿ ಗರಿಷ್ಟ ಜೈಲು ವಾಸ ಅಂತ ಅವರಿಗೆ ಆಗಿದ್ದು ಕ್ವಿಟ್ ಇಂಡಿಯಾ ಎಂಬ Failed ಚಳವಳಿಯಲ್ಲಿ. 2 ವರ್ಷ 8 ತಿಂಗಳ ಸೆರೆವಾಸವದು. ಹಾಗೆಂದು ನೆಹರೂ ಅವರ ಸೆರೆವಾಸಗಳೇನು ಸೆಲ್ಯುಲಾರ್ ಜೈಲಿನಂತೆ ಒಂಟಿಯಾಗಿ, ಕತ್ತಲೆ ಹಾಗೂ ಕೆಟ್ಟ ಸೆಲ್ಲಿನೊಳಗಿನ ವಾಸವೇನು ಆಗಿರಲಿಲ್ಲ. ಮೇಲಿನ ಉದಾಹರಣೆಯಂತೆ ಬ್ರಿಟಿಷರ ಉದಾರತೆ ಹೇಗಾದರೂ ನೆಹರೂ ಅವರಿಗೆ ಸಿಗುತ್ತಿತ್ತು. ಉದಾಹರಣೆಗೆ, ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ನಂತರ ನೆಹರೂ ಅವರನ್ನು ನೈನಿಯಲ್ಲಿ ಜೈಲಿಗೆ ಹಾಕಿದರು. ಜೈಲಿನಲ್ಲಾದರೂ ಬಡಪಾಯಿ ನೆಹರೂ ಅವರಿಗೆ ಹೆಚ್ಚೇನು ಸೌಲಭ್ಯ ಸಿಗಲಿಲ್ಲ. ಅಬ್ಬಬ್ಬಾ ಎಂದರೆ ಒಬ್ಬ ಖೈದಿಯನ್ನು ಅವರ ಅಡುಗೆಯವನನ್ನಾಗಿ ನೇಮಿಸಲಾಯಿತು, ಗಾಳಿ ಬೀಸಲು ಮತ್ತೊಬ್ಬ ಖೈದಿ ನಿಯುಕ್ತಿಯಾದ. ಜೈಲಿನ ಊಟ ತಿಂದು ನಾಲಗೆ ಜಡ್ಡುಗಟ್ಟದಿರಲೆಂದು ಮನೆಯ ಊಟ, ಹಣ್ಣು ಹಂಪಲು ತರಿಸಿಕೊಳ್ಳುವ ಅವಕಾಶ ನೀಡಲಾಗಿತ್ತು.ನೆಹರೂ ಅವರ ದರ್ಶನಕ್ಕೆಂದು ಬರುತ್ತಿದ್ದ ಖೈದಿಗಳು ಬೇಕಾದ ಸಣ್ಣಪುಟ್ಟ ಸೇವೆಗಳನ್ನು ಮಾಡಿಕೊಡುತ್ತಿದ್ದರು. ತೀರಾ ನೆಹರೂ ಅವರ ಭಾಷೆಯಲ್ಲಿಯೇ ಹೇಳುವುದಾದರೆ, ಶೇ.95 ರಾಜಕೀಯ ಖೈದಿಗಳಿಗೆ ಇಂತಹ ಸೌಲಭ್ಯಗಳು ಸಿಗುತ್ತಿರಲಿಲ್ಲ. ನೆಹರೂ-ಗಾಂಧಿಯಂತವರು 5% ನೊಳಗಿದ್ದವರು. ಬ್ರಿಟಿಷರ ಪಾಲಿಗೆ ನಿರುಪದ್ರವಿಗಳಾಗಿರಬಹುದೇ?

ಮತ್ತಷ್ಟು ಓದು »
8
ಜುಲೈ

ಭಾರತ ಮತ್ತೊಂದು ಪಾಕಿಸ್ತಾನವಾಗಬಾರದು ಎಂದರೆ…

– ರಾಕೇಶ್ ಶೆಟ್ಟಿ

ಜೂನ್ 28ರ ಮಧ್ಯಾಹ್ನ ರಾಜಸ್ಥಾನದ ಉದಯಪುರದಲ್ಲಿ ನಡೆದ ಭೀಕರ ಹತ್ಯೆಯ ಘಟನೆಯಿಂದ ಸಾಮಾನ್ಯ ಹಿಂದೂ ತಲ್ಲಣಗೊಂಡಿದ್ದಾನೆ, ಆಕ್ರೋಷಿತನಾಗಿದ್ದಾನೆ. ‘ನಂಬಿಸಿ ಕತ್ತು ಕೊಯ್ಯುವುದು’ ಎಂದರೇನು ಎನ್ನುವುದನ್ನು ಇಸ್ಲಾಮಿಕ್ ಉಗ್ರರು ಕಮಲೇಶ್ ತಿವಾರಿಯ ನಂತರ, ಉದಯಪುರದ ಬಡ ಟೈಲರ್ ಕನ್ನಯ್ಯ ಲಾಲ್ ಅವರ ಹತ್ಯೆಯ ಮೂಲಕ ತೋರಿಸಿಕೊಟ್ಟಿದ್ದಾರೆ. ಕಮಲೇಶ್ ತಿವಾರಿಯವರ ಹಂತಕರಾದ ಫರಿದುದ್ಡೀನ್ ಶೇಖ್, ಅಶ್ಫಾಖ್ ಶೇಖ್ ಅವರು ತಮ್ಮನ್ನು ಹಿಂದೂಗಳೆಂದು ಫೇಸ್ಬುಕ್ಕಿನಲ್ಲಿ ಪರಿಚಯ ಮಾಡಿ, ಸ್ನೇಹ ಸಂಪಾದಿಸಿ, ಕೇಸರಿ ಕುರ್ತಾ ಧರಿಸಿ, ಸ್ವೀಟ್ ಬಾಕ್ಸಿನೊಳಗೆ ರಿವಾಲ್ವರ್ ಹಾಗೂ ಚಾಕು ಹಿಡಿದು ಬಂದಿದ್ದರು. ಕಮಲೇಶ್ ತಿವಾರಿಯವರ ಸಹಾಯಕನನ್ನು ಸಿಗರೇಟ್ ತರುವಂತೆ ಕಳುಹಿಸಿ, ಏಕಾಂಗಿಯಾಗಿದ್ದ ಕಮಲೇಶ್ ತಿವಾರಿಯರ ಮೇಲೆ ಎರಗಿ ಕತ್ತು ಸೀಳಿ, ಗುಂಡು ಹಾರಿಸಿ ಕೊಲ್ಲಲಾಗಿತ್ತು. ಮರಣೋತ್ತರ ವರದಿಯ ಪ್ರಕಾರ 15 ಬಾರಿ ಚುಚ್ಚಿ ಕೊಲ್ಲಲಾಗಿತ್ತು. 1926ರಲ್ಲಿ ಅಬ್ದುಲ್ ರಶೀದ್ ಕೂಡ ಹೀಗೆಯೇ ಸಂಭಾವಿತನಂತೆ ಬಂದು, ಸಹಾಯಕನನ್ನು ನೀರು ತರಲು ಕಳುಹಿಸಿ ಸ್ವಾಮಿ ಶ್ರದ್ದಾನಂದರನ್ನು ಗುಂಡಿಕ್ಕಿ ಕೊಂದಿದ್ದ.

ಕನ್ನಯ್ಯ ಲಾಲ್ ಅವರ ಹತ್ಯೆ ನಡೆದಿದ್ದೂ ಹೀಗೆಯೇ. ಬಟ್ಟೆ ಹೊಲಿಸುವವರ ಸೋಗಿನಲ್ಲಿ ಬಂದ ಮೊಹಮ್ಮದ್ ಗೌಸ್ , ಮೊಹಮ್ಮದ್ ರಿಯಾಜ್ , ಅಳತೆ ತೆಗೆದುಕೊಳ್ಳುವಾಗ ಕನ್ನಯ್ಯಲಾಲ್ ಅವರ ಕತ್ತು ಕೊಯ್ದರು. 21 ಬಾರಿ ಚುಚ್ಚಿ ಕೊಲ್ಲಲಾಗಿದೆ ಎಂದಿದೆ ಮರಣೋತ್ತರ ವರದಿ. ಬಹುಶಃ ಹಂತಕರು ವಿಡಿಯೋವನ್ನು ವೈರಲ್ ಮಾಡದೇ ಇದ್ದಿದ್ದರೆ, ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಇದಕ್ಕೊಂದು ಬೇರೆ ಕತೆ ಕಟ್ಟಿ ಮುಗಿಸುತ್ತಿತ್ತು. ನಂತರ ತಿಳಿದು ಬಂದ ವಿಷಯದ ಪ್ರಕಾರ, ಕನ್ನಯ್ಯ ಲಾಲ್ ಅವರು ಕೇವಲ ನೂಪುರ್ ಶರ್ಮ ಅವರನ್ನು ಬೆಂಬಲಿಸಿದ ಕಾರಣಕ್ಕೆ ಬಂಧನವಾಗಿ, ಬಿಡುಗಡೆಯಾಗಿ ಬಂದ ನಂತರ, ತನ್ನ ಪ್ರಾಣಕ್ಕೆ ಅಪಾಯವಿದೆ ಎಂದು ಪೋಲಿಸ್ ರಕ್ಷಣೆ ಕೋರಿದ್ದರು. ಒಬ್ಬ ಬಡವನ ಮನವಿಯನ್ನು ಪೋಲಿಸರು ಹೇಗೆ ತಾತ್ಸಾರದಿಂದ ಸ್ವೀಕರಿಸುತ್ತಾರೋ, ಹಾಗೆಯೇ ಸ್ವೀಕರಿಸಿ ಕಸದ ಬುಟ್ಟಿಯ ಜಾಗ ತೋರಿಸಿದರು. ಅಂದ ಹಾಗೆ, ಕನ್ನಯ್ಯ ಲಾಲ್ ಅವರ ಕುರಿತ ಮಾಹಿತಿಯನ್ನು ಹಂಚಿಕೊಂಡವನು ಯಾರೋ ಅನಾಮಿಕನಲ್ಲ. ಕನ್ನಯ್ಯ ಅವರ ಪಕ್ಕದ ಮನೆಯ ನಜೀಂ. ನಜೀಮನಿಗೆ ನೆರೆ ಮನೆಯವನ ಸ್ನೇಹಕ್ಕಿಂತ ಆತನ ಇಸ್ಲಾಂ ಮುಖ್ಯವಾಗಿತ್ತು. ನಂಬಿ ಕೆಟ್ಟವನು ಕನ್ನಯ್ಯ. ಕಾಶ್ಮೀರದ ಪಂಡಿತರ ಹತ್ಯೆಯಲ್ಲೂ ನೆರೆಮನೆಯವರೇ ಹೇಗೆ ಸಹಾಯ ಮಾಡಿದ್ದರು ಎನ್ನುವುದನ್ನು, ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಇಡೀ ಭಾರತವೇ ನೋಡಿದೆ. ಜೊತೆಗಿದ್ದವರಿಗೆ ಮೂಹೂರ್ತ ಇಡುವ ಧೂರ್ತ ಮನಸ್ಥಿತಿಯನ್ನು ಇವರು ಕಲಿಯುವುದು ಎಲ್ಲಿಂದ?

ಮತ್ತಷ್ಟು ಓದು »
28
ಮೇ

ಸ್ವದೇಶ, ಸ್ವಧರ್ಮ, ಸ್ವಾತಂತ್ರ್ಯಗಳ ನೈಜದನಿ ವೀರ್ ಸಾವರ್ಕರ್

ಲೇಖಕರು : ಬಿ ಎಸ್‌ ಜಯಪ್ರಕಾಶ ನಾರಾಯಣ
ಪತ್ರಕರ್ತರು, ಖ್ಯಾತ ಅನುವಾದಕರು
ವೈಭವ್‌ ಪುರಂದರೆಯವರ ವೀರ್‌ ಸಾವರ್ಕರ್‌ ಪುಸ್ತಕವನ್ನು ಕನ್ನಡಕ್ಕೆ ತಂದಿದ್ದಾರೆ.

ಸಾವರ್ಕರ್ ಜನ್ಮದಿನ (ಮೇ 28)
ವಿನಾಯಕ ದಾಮೋದರ ಸಾವರ್ಕರ್ ಎನ್ನುವ ಹೆಸರೇ ಮೈಮನಗಳಲ್ಲಿ ದೇಶಹಿತದ ಸಂಕಲ್ಪವನ್ನು ತಾಳುವಂತೆ ಮಾಡುವಂಥದ್ದು! ಇಂದು ಅವರಿದ್ದಿದ್ದರೆ 140ನೇ ವಸಂತಕ್ಕೆ ಕಾಲಿಡುತ್ತಿದ್ದರು. ವ್ಯವಸ್ಥಿತ ಅಪಪ್ರಚಾರ ಮತ್ತು ಕ್ಷುಲ್ಲಕ ಶಕ್ತಿಗಳು ಸೃಷ್ಟಿಸಿರುವ ವಿಸ್ಮೃತಿಯಲ್ಲಿ ಸಾವರ್ಕರ್ ಅವರ ಕ್ಷಾತ್ರತೇಜಸ್ಸಿಗೆ ಅನ್ಯಾಯವೆಸಗಲಾಗಿದೆ. ಅವರ ಹುಟ್ಟುಹಬ್ಬದ ನೆಪದಲ್ಲಿ ಇಲ್ಲಿ ಅನಾವರಣಗೊಂಡಿದೆ, ಸಾವರ್ಕರ್ ಅವರ ಸಾಚಾ ಕಥನ!

ಸ್ವತಂತ್ರ ಭಾರತದ ಇತಿಹಾಸದಲ್ಲಿ ತುಂಬಾ ವ್ಯವಸ್ಥಿತವಾಗಿ ಹಲವು ವಿಸ್ಮೃತಿಗಳನ್ನೂ ಹೇವರಿಕೆಗಳನ್ನೂ ಸೃಷ್ಟಿಸಲಾಗಿದೆ. ಇದಕ್ಕಾಗಿ, ನಮ್ಮನ್ನು ಬಹುಕಾಲ ಆಳಿದ ಸರಕಾರಗಳು ಸೆಕ್ಯುಲರಿಸಂ, ಧರ್ಮನಿರಪೇಕ್ಷತೆ, ಮೈನಾರಿಟಿಯಿಸಂ ಇತ್ಯಾದಿ ವಿಭ್ರಮೆಗಳನ್ನು ಜನರ ಮನಸ್ಸಿನಲ್ಲಿ ಬಿತ್ತಿವೆ; ತಮ್ಮ ಹಿಡನ್ ಅಜೆಂಡಾ ಸಾಧಿಸಲು ಅವು ರಾಜಕೀಯ ಅಧಿಕಾರ, ಅಕಾಡೆಮಿಕ್ ಸೌಖ್ಯ, ತಾವೇ ಹುಟ್ಟುಹಾಕಿದ ನೂರಾರು ಸಂಘ ಸಂಸ್ಥೆಗಳು/ವಿಶ್ವವಿದ್ಯಾಲಯಗಳನ್ನು ನಿರ್ಲಜ್ಜವಾಗಿ ದುರ್ಬಳಕೆ ಮಾಡಿಕೊಂಡಿವೆ. ಇಷ್ಟೇ ಅಲ್ಲ, ಈ ಕುತಂತ್ರಗಳ ಮೂಲಕ ಸ್ವಧರ್ಮ ಮತ್ತು ಸ್ವದೇಶಗಳ ಬಗ್ಗೆ ಅಸಹ್ಯದ/ಕೀಳರಿಮೆಯ ಭಾವನೆ ಬರುವಂತೆ ಮಾಡುವಲ್ಲಿ ಈ ಶಕ್ತಿಗಳು ನಿರತವಾಗಿದ್ದವು. ಜತೆಯಲ್ಲೇ, ಭಾರತದ ಚರಿತ್ರೆಯ ಕ್ಷಾತ್ರ ತೇಜಸ್ಸಿನ ಉಜ್ಜ್ವಲ ಅಧ್ಯಾಯಗಳನ್ನು ಮರೆಮಾಚುವ ವಿಕೃತಿಯನ್ನು ಇವು ಮೈಗೂಡಿಸಿಕೊಂಡಿದ್ದವು. ದುರಂತವೆಂದರೆ, ನಾಲ್ಕೈದು ದಶಕಗಳ ಕಾಲ ಈ ʼಅತೀ ಬುದ್ಧಿವಂತಿಕೆ’ಯ ಮತ್ತು ಆತ್ಮನಾಶಕವಾದ ಕೆಲಸಗಳೆರಡೂ ಪ್ರಶ್ನಾತೀತವಾಗಿದ್ದವು! 

ಭಾರತದ ಇತಿಹಾಸದಲ್ಲಿ ಇಂತಹ ವ್ಯವಸ್ಥಿತ ಅನ್ಯಾಯಕ್ಕೊಳಗಾದವರಲ್ಲಿ `ಸ್ವಾತಂತ್ರ್ಯವೀರ’ ವಿನಾಯಕ ದಾಮೋದರ ಸಾವರ್ಕರ್ ಕೂಡ ಒಬ್ಬರು. ಮಹಾರಾಷ್ಟ್ರದ ನಾಸಿಕ್ ಬಳಿಯ ಭಾಗೂರಿನಲ್ಲಿ ತಮ್ಮ ಚಿಕ್ಕಂದಿನಲ್ಲೇ `ಮಿತ್ರಮೇಳ’ವನ್ನು ಕಟ್ಟುವ ಮೂಲಕ, ಸಾವರ್ಕರ್ ದೇಶಾಭಿಮಾನದ ಎರಕದಲ್ಲಿ ಬೆಳೆದು ಬಂದವರು. ವಯಸ್ಕರಾದ ಮೇಲೆ, ಆ ಕಾಲದ ಎಲ್ಲ ಪ್ರತಿಭಾವಂತರಂತೆಯೇ ಲಂಡನ್ನಿಗೆ ಹೋಗಿ ಬ್ಯಾರಿಸ್ಟರ್ ಪದವಿ ಪಡೆದ ಅವರು, ತಮ್ಮ ಹೆಚ್ಚಿನ ಸಮಕಾಲೀನರಂತೆ ಲೌಕಿಕ ಸುಖದ ಹಾದಿಯಲ್ಲಿ ಹೋಗಲಿಲ್ಲ. ಬದಲಿಗೆ, ಅದನ್ನು ಪ್ರಜ್ಞಾಪೂರ್ವಕವಾಗಿ ನಿರಾಕರಿಸಿ, ಬ್ಯಾರಿಸ್ಟರ್ ಪದವಿಗೆ ಓದುತ್ತಿದ್ದ ದಿನಗಳಲ್ಲೇ ದೇಶದ ಸ್ವಾತಂತ್ರ್ಯಪ್ರಾಪ್ತಿಗಾಗಿ ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಹೋರಾಟದ ಮಾರ್ಗದಲ್ಲಿ ಹೊರಟರು. ತಮ್ಮ ಪ್ರಖರ ವಿಚಾರಗಳ ಮೂಲಕ ಮದನ್ ಲಾಲ್ ಧಿಂಗ್ರಾ ತರಹದ ಕ್ರಾಂತಿಕಾರಿಗಳನ್ನು ಅವರು ರೂಪಿಸಿದರು. ಲಂಡನ್ನಿನಲ್ಲಿದ್ದ `ಇಂಡಿಯಾ ಹೌಸ್’ ಅನ್ನು ತಮ್ಮ ಚಟುವಟಿಕೆಗಳ ಆಡುಂಬೊಲವನ್ನಾಗಿ ಮಾಡಿಕೊಂಡು, ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದರು. ಅದಕ್ಕೂ ಮೊದಲು, ಭಾರತದಲ್ಲಿ ಓದುತ್ತಿದ್ದಾಗ ಲೋಕಮಾನ್ಯ ಬಾಲಗಂಗಾಧರ ತಿಲಕರ ಅನುಯಾಯಿಯಾಗಿ ಸ್ವದೇಶಿ ಚಳವಳಿಯನ್ನು ಸಂಘಟಿಸಿ, ಸಂಚಲನ ಸೃಷ್ಟಿಸಿದ್ದರು. ಅವರು ಲಂಡನ್ನಿನಲ್ಲಿದ್ದ ದಿನಗಳಲ್ಲಿ ತಾಯಿ ಭಾರತಿಯ ಸ್ವಾತಂತ್ರ್ಯಕ್ಕಾಗಿ ನಡೆಸಿದ ಚಟುವಟಿಕೆಗಳ ವೃತ್ತಾಂತವೇ ರೋಮಾಂಚಕ! ದೇಶವಾಸಿಗಳು ಸ್ವಾತಂತ್ರ್ಯಕ್ಕಾಗಿ 1857ರಲ್ಲಿ ನಡೆಸಿದ ಹೋರಾಟವನ್ನು `ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟ’ ಎಂದು ಬಣ್ಣಿಸಿ, ಅದರ ಬಗ್ಗೆ ಸಮಗ್ರ ಗ್ರಂಥವನ್ನು ಬರೆದ ಹೆಗ್ಗಳಿಕೆ ಸಾವರ್ಕರ್ ಅವರದು. ವಾಸ್ತವವಾಗಿ, ಆ ದಿನಗಳಲ್ಲಿ ಲಂಡನ್ನಿನಲ್ಲಿ ಇವರಂತೆಯೇ ಬ್ಯಾರಿಸ್ಟರ್ ಪದವಿಗೆ ಓದುತ್ತಿದ್ದ ಜವಾಹರಲಾಲ್ ನೆಹರು ಕೂಡ ಈ ಗ್ರಂಥವನ್ನು ಅಪಾರವಾಗಿ ಮೆಚ್ಚಿಕೊಂಡು, ತಮ್ಮ ತಂದೆ ಮೋತಿಲಾಲ್ ನೆಹರು ಅವರಿಗೆ ಪತ್ರ ಬರೆದಿದ್ದಕ್ಕೆ ಪುರಾವೆಗಳಿವೆ. ವಿಷಾದದ ಸಂಗತಿಯೆಂದರೆ, ಲಂಡನ್ನಿನಿಂದ ಭಾರತಕ್ಕೆ ವಾಪಸ್ ಬಂದಮೇಲೆ, ನೆಹರು ಅವರು ಸಾವರ್ಕರ್ ಬಗ್ಗೆ ವಿರೋಧ ಬೆಳೆಸಿಕೊಂಡು ಬಿಟ್ಟರು. ಇದು ಕೊನೆಗೆ ಎಲ್ಲಿಯವರೆಗೆ ಹೋಯಿತೆಂದರೆ, ತುಷ್ಟೀಕರಣದ ರಾಜಕಾರಣ ಮತ್ತು ದೇಶವಿಭಜನಗಾಗಿ ಮುಸ್ಲಿಂ ಲೀಗ್ ಮಾಡುತ್ತಿದ್ದ ಆಗ್ರಹಗಳನ್ನು ವಿರೋಧಿಸುತ್ತಿದ್ದ ಸಾವರ್ಕರ್ ಅವರಿಗೆ ಕೋಮುವಾದಿ, ಮೂಲಭೂತವಾದಿ, ದೇಶ ವಿಭಜಕ, ಗಾಂಧಿಯವರ ಹತ್ಯೆಯ ಹಿಂದಿನ ಪಾತ್ರಧಾರಿ ಎನ್ನುವ ರೋಗಗ್ರಸ್ತ ಹಣೆಪಟ್ಟಿಗಳನ್ನು ಹಚ್ಚಲಾಯಿತು. ಹಾಗಾದರೆ, ಸಾವರ್ಕರ್  ನಿಜಕ್ಕೂ ಏನಾಗಿದ್ದರು?

ಸಾವರ್ಕರ್ ಬಗ್ಗೆ ರಾಜಕೀಯ ವಿರೋಧಿಗಳು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆಯೇನೂ ಇಲ್ಲ ಎನ್ನುತ್ತಿದ್ದಾರೆ. ಅಂಡಮಾನಿನ ಜೈಲಿನಲ್ಲಿ ಅವರು ಕರಾಳ `ಕಾಲಾಪಾನಿ’ ಶಿಕ್ಷೆ ಅನುಭವಿಸುತ್ತಿದ್ದಾಗ ಬ್ರಿಟಿಷರಿಗೆ ಬರೆದ  ಕ್ಷಮಾಪಣಾ ಧಾಟಿಯ  ಜಾಣ್ಮೆಯ ಪತ್ರಗಳನ್ನಿಟ್ಟುಕೊಂಡು ಅವರನ್ನು ದೇಶದ್ರೋಹಿಯೆಂದು ಬಿಂಬಿಸಿದ್ದಾರೆ. ಅವರೊಬ್ಬ ಬ್ರಾಹ್ಮಣವಾದಿಯಾಗಿದ್ದರು ಎಂದು ರಚ್ಚೆ ಮಾಡುತ್ತಿರುವವರ ಸಂತತಿಯೂ ಇದೆ. ಹಾಗಾದರೆ, ಇವುಗಳ ಸತ್ಯಾಸತ್ಯತೆ ಏನು? ಇಂತ ಮಿಥ್ಯೆಗಳನ್ನು ಸತ್ಯದ ಒರೆಗಲ್ಲಿಗೆ ಹಚ್ಚಿ, ಭಗ್ನಗೊಳಿಸಲು ಇದು ಸಕಾಲ. ಈ ದೃಷ್ಟಿಯಿಂದ ನೋಡಿದರೆ, ಇದು ಭಾರತದ ನೈಜ ಚರಿತ್ರೆಯು ವಿಕೃತಿ ಮತ್ತು ವಿಸ್ಮೃತಿಗಳ ಪೊರೆಯನ್ನು ಕಿತ್ತೆಸೆದು, ವಸ್ತುನಿಷ್ಠ ಆಕೃತಿಯನ್ನು ಪಡೆದುಕೊಳ್ಳುತ್ತಿರುವ ನಿರ್ಣಾಯಕ ಕಾಲಘಟ್ಟವಾಗಿದೆ. 

ದೇಶದಲ್ಲಿ ಇಂದು ʼಹಿಂದುತ್ವʼದ ಅಲೆ ಪ್ರಖರವಾಗಿದೆ. ಇದರ ಕೀರ್ತಿಯಲ್ಲಿ ಹೆಚ್ಚಿನ ಪಾಲು ಸಲ್ಲಬೇಕಾದ್ದು ಸಾವರ್ಕರ್ ಅವರಿಗೆ! ಏಕೆಂದರೆ, ಈ ಪರಿಕಲ್ಪನೆ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ವ್ಯಾಪಕವಾಗಿ ಮುನ್ನೆಲೆಗೆ ತಂದವರೇ ಅವರು. ಇದರ ಜತೆಗೆ ಅವರು, ಹಿಂದೂ ಮಹಾಸಭಾದ ಅಧ್ಯಕ್ಷರಾಗಿ ದೇಶದಲ್ಲಿ ಎಬ್ಬಿಸಿದ ಹಿಂದೂ ಅಸ್ಮಿತೆಯ ನಂದಾದೀಪ ಈಗ ಜಾಜ್ವಲ್ಯಮಾನವಾಗಿ ಬೆಳಗುತ್ತಿದೆ. ಅದರ ಪ್ರಭೆಯ ಮುಂದೆ ಬಣ್ಣಬಣ್ಣದ ತರಹೇವಾರಿ ಸಿದ್ಧಾಂತಗಳ ವೇಷ ಕಳಚಿ ಬಿದ್ದಿದೆ. 

ಸಾವರ್ಕರ್ ಅವರ ಬಹುಮುಖಿ ಮತ್ತು ಸಮಾಜಪರ ವ್ಯಕ್ತಿತ್ವದ ಇನ್ನೊಂದಿಷ್ಟು ಆಯಾಮಗಳನ್ನು ಇಲ್ಲಿ ನೆನೆಯಬೇಕು. ನಮಗೆಲ್ಲ ಗೊತ್ತಿರುವಂತೆ, ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಪಕ್ಷ ಮತ್ತು ಅದರ ಬೆರಳೆಣಿಕೆಯಷ್ಟು ನಾಯಕರು ಮಾತ್ರ ಶ್ರಮಿಸಿದರು ಎನ್ನುವ ಚಿತ್ರಣ ಹಲವು ತಲೆಮಾರುಗಳ ಜನರಲ್ಲಿ ಬೇರೂರಿದೆ. ಅಂದಂತೆ, ಕಾಂಗ್ರೆಸ್ ಪಕ್ಷವು ಬ್ರಿಟಿಷರಿಂದ ಭಾರತಕ್ಕೆ ಪೂರ್ಣಸ್ವಾತಂತ್ರ್ಯಕ್ಕಾಗಿ ದನಿಯೆತ್ತಿದ್ದು 1929ರಷ್ಟು ತಡವಾಗಿ! ಅಲ್ಲಿಯವರೆಗೂ ಆ ಪಕ್ಷದ ನಾಯಕರೆಲ್ಲ ಭಾರತವು ಬ್ರಿಟಿಷರ ಅಧೀನದಲ್ಲೇ (ಡೊಮಿನಿಯನ್ ಸ್ಟೇಟ್) ಮುಂದುವರಿಯುವುದರ ಪರವಾಗಿದ್ದರು. ಆದರೆ, ಸಾವರ್ಕರ್ ಇದಕ್ಕೂ 20 ವರ್ಷಗಳ ಮುಂಚೆಯೇ -1909ರಲ್ಲೇ- `ಸಂಪೂರ್ಣ ಸ್ವಾತಂತ್ರ್ಯವು ನಮ್ಮ ಹಕ್ಕು! ಇದರಲ್ಲಿ ಗುಲಗಂಜಿಯಷ್ಟು ಕಡಿಮೆಯಾದರೂ ನಾವು ಅದನ್ನು ಒಪ್ಪುವುದಿಲ್ಲ!!’ ಎಂದು ಘರ್ಜಿಸಿದ್ದರು. ಇದನ್ನು ಸಹಿಸದ ಬ್ರಿಟಿಷರು, ಸಾವರ್ಕರ್ ಅವರನ್ನು ಅಂಡಮಾನ್ ಜೈಲಿಗೆ ತಳ್ಳಿ, 50 ವರ್ಷಗಳ ಜೀವಾವಧಿ ಶಿಕ್ಷೆಯನ್ನು ವಿಧಿಸಿದರು. ಅಲ್ಲಿ ಈ `ಸ್ವಾತಂತ್ರ್ಯವೀರ’ ಅನುಭವಿಸಿದ ಯಮಯಾತನೆ ವರ್ಣಿಸಲಸದಳ. 

ಅಂಡಮಾನಿನಿಂದ ಬಿಡುಗಡೆಯಾಗಿ ಬಂದಮೇಲೂ ಸಾವರ್ಕರ್ ಅವರಿಗೆ ಇತರರಂತೆ ಮುಕ್ತವಾಗಿ ಓಡಾಡಲು ಬ್ರಿಟಿಷರು ಅವಕಾಶ ಕೊಡಲಿಲ್ಲ. ಬದಲಿಗೆ, ಮಹಾರಾಷ್ಟ್ರದ ರತ್ನಗಿರಿಯಲ್ಲಿ ಅವರನ್ನು 14-15 ವರ್ಷಗಳ ಕಾಲ ನಿರ್ಬಂಧಿತ ವಾಸದಲ್ಲಿ ಇಡಲಾಗಿತ್ತು! ಆದರೂ ಭಾರತದ ಶ್ರೇಯಸ್ಸಿಗೆ ತುಡಿಯುತ್ತಿದ್ದ ಅವರು ಆ ಇತಿಮಿತಿಗಳನ್ನು ಮೆಟ್ಟಿ ನಿಂತು, ಹಲವು ಶ್ರೇಯಸ್ಕರವಾದ ಉಪಕ್ರಮಗಳನ್ನು ಕೈಗೊಂಡರು. ಈ ನಿಟ್ಟಿನಲ್ಲಿ ಮೊದಲು ಅವರು ಕೈಗೆತ್ತಿಕೊಂಡಿದ್ದು, ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯ ನಿವಾರಣೆಯ ಕೆಲಸ. ಇದಕ್ಕಾಗಿ ಅವರು ದಲಿತ ಸಮುದಾಯಕ್ಕೆ ಸೇರಿದ ಮಹಾಡ್ ದಂಪತಿಗಳ ಪಾದಪೂಜೆ ಮಾಡಿದರು. ದೇವಸ್ಥಾನದ ಗಣೇಶೋತ್ಸವಗಳಲ್ಲಿ ದಲಿತರಿಗೆ ಅಗ್ರಮನ್ನಣೆ ಕೊಡಿಸಿದರು. ಜಾತಿಪಂಥಗಳ ಭೇದವಿಲ್ಲದ ಭಜನಾ ಮಂಡಲಿಗಳನ್ನು ಏರ್ಪಡಿಸಿದರು. ಶಾಲೆಗಳನ್ನು ಕಟ್ಟಿಸಿದರು. ದಲಿತರ ಮಕ್ಕಳಿಗೆ ಪುಸ್ತಕಗಳನ್ನು ಹಂಚಿದರು. ಇವೆಲ್ಲಕ್ಕೂ ಕಲಶವಿಟ್ಟಂತೆ, ದಲಿತರಿಗೆ ದೇವಸ್ಥಾನ ಪ್ರವೇಶದ ಮುಕ್ತ ಹಕ್ಕು ಎಷ್ಟೊಂದು ಅಗತ್ಯವೆನ್ನುವುದನ್ನು ಮನಗಂಡಿದ್ದ ಅವರು, ಅವರಿಗೆಂದೇ `ಪತಿತ ಪಾವನ ಮಂದಿರ’ವನ್ನೇ ಕಟ್ಟಿಸಿದರು! 

ಎಲ್ಲವೂ ಅವರು ಅಂದುಕೊಂಡಂತೆಯೇ ನಡೆದಿದ್ದರೆ, ಬಾಬಾಸಾಹೇಬ್ ಅಂಬೇಡ್ಕರರೇ ಈ ಮಂದಿರವನ್ನು ಉದ್ಘಾಟಿಸಬೇಕಿತ್ತು. ಆದರೆ, ಪೂರ್ವನಿಗದಿತ ಕಾರ್ಯಕ್ರಮಗಳಿಂದಾಗಿ ಅವರು ಬರಲಾಗಲಿಲ್ಲ. ಆದರೇನಂತೆ, ಅಸ್ಪೃಶ್ಯತೆ ನಿವಾರಣೆಯ ನಿಟ್ಟಿನಲ್ಲಿ ಸಾವರ್ಕರರ ಪ್ರಾಮಾಣಿಕ ಕಳಕಳಿಯನ್ನು ಮನಗಂಡಿದ್ದ ಅವರು, `ಸಾವರ್ಕರರಂಥ ಹತ್ತು ಮಂದಿ ಇದ್ದರೆ, ಒಂದೆರಡು ದಶಕಗಳಲ್ಲಿ ಈ ದೇಶದಿಂದ ಅಸ್ಪೃಶ್ಯತೆ ನಾಮಾವಶೇಷವಾಗಿ ಹೋಗಲಿದೆ!’ ಎಂದು ಉದ್ಗರಿಸಿದ್ದರು.

ಈ ಉಪಕ್ರಮವನ್ನು ಮತ್ತಷ್ಟು ವಿಸ್ತರಿಸಿದ ಸಾವರ್ಕರ್, ಅಂತರ್ಜಾತೀಯ ಭೋಜನ ಕೂಟಗಳನ್ನು ಏರ್ಪಡಿಸಿದರು. ಅಂತರ ಜಾತೀಯ ವಿವಾಹಗಳ ಜತೆಗೆ ಅಂತರಪ್ರಾಂತೀಯ ವಿವಾಹಗಳನ್ನು ಪ್ರೋತ್ಸಾಹಿಸಿದರು. ನಿಜ ಹೇಳಬೇಕೆಂದರೆ, ಇವೆಲ್ಲವನ್ನೂ ಅವರು ಮಾಡಿದ್ದು ಗಾಂಧೀಜಿಯವರು ಅಸ್ಪೃಶ್ಯತೆ ನಿವಾರಣೆಗೆ ಕರೆ ಕೊಡುವುದಕ್ಕೂ ಎಷ್ಟೋ ವರ್ಷಗಳ ಮುಂಚೆಯೇ! ಆದರೆ, ಗಾಂಧೀಜಿಯವರು ದಲಿತರ ಕೇರಿಗೆ ಹೋಗಿ ಮಲ ಎತ್ತಿದ್ದನ್ನು ಮಾತ್ರ ಹೇಳುವ `ಅನುಕೂಲಸಿಂಧು ಶಕ್ತಿಗಳು’, ಸಾವರ್ಕರರ ಈ ಸೇವೆಯನ್ನು ಮತ್ತು ಅವರು ರವಾನಿಸಿದ ಪರಿವರ್ತನೆಯ ಸಂಕೇತಗಳನ್ನು ನೇಪಥ್ಯಕ್ಕೆ ಸರಿಸಿರುವುದು ನಮ್ಮ ದೇಶದಲ್ಲಿ ಬೇರೂರಿರುವ `ಬೌದ್ಧಿಕ ಅಪ್ರಾಮಾಣಿಕತೆ’ಗೊಂದು ನಿದರ್ಶನವಷ್ಟೆ. ಇದಿಷ್ಟೇ ಅಲ್ಲ, ಹಿಂದೂಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ನಗರೀಕರಣದ ಪ್ರಜ್ಞೆಗಳು ಹೆಚ್ಚುವುದರಿಂದ ಭಾರತ ಅಖಂಡವಾಗಿ ಉಳಿಯಲಿದೆ ಎಂದು ಅಚಲವಾಗಿ ನಂಬಿದ್ದ ಅವರು, ದಲಿತರ ಆಹಾರದ ಹಕ್ಕಿನ ವಿಚಾರದಲ್ಲಿ ಆ ಸಮುದಾಯದ ಪರವಾಗಿ ನಿಂತಿದ್ದರು! ಇದಕ್ಕಾಗಿ ಅವರು, ಮೇಲ್ಜಾತಿಗಳ ಮೇಲೆ ವೈಚಾರಿಕ ಪ್ರಹಾರವನ್ನೇ ನಡೆಸಿದರು. 

ಇನ್ನು, ಸಾವರ್ಕರ್ ಅವರೊಬ್ಬ `ಮುಸ್ಲಿಂ ವಿರೋಧಿ’ ಎನ್ನುವ ವಿಚಾರಕ್ಕೆ ಬರೋಣ. ಇಂಥವರಿಗೆ ಚರಿತ್ರೆಯ ಪ್ರಜ್ಞೆ ಎಷ್ಟೊಂದು ಅಳ್ಳಕವಾಗಿದೆ ಎನ್ನುವುದಕ್ಕೆ ಇದು ಇನ್ನೊಂದು ಉದಾಹರಣೆ. ಏಕೆಂದರೆ, ಸಾವರ್ಕರ್ ತಮ್ಮ ಬದುಕಿನ ಪೂರ್ವಾರ್ಧದಲ್ಲಿ ಪ್ರಾಮಾಣಿಕವಾಗಿ ಹಿಂದೂ-ಮುಸ್ಲಿಂ ಐಕ್ಯತೆಗೆ ಶ್ರಮಿಸಿದವರು. ಅವರ ಈ ಪ್ರತಿಪಾದನೆಯನ್ನು ಸ್ವತಃ ಗಾಂಧೀಜಿಯೇ ಮೆಚ್ಚಿಕೊಂಡಿದ್ದರು. ವಿಲಕ್ಷಣ ಸಂಗತಿಯೆಂದರೆ, ಇವತ್ತಿನ ಗಾಂಧೀವಾದಿಗಳಿಗೆ ಇದು ಗೊತ್ತಿಲ್ಲ! ಆದರೆ, ದೂರದ ಟರ್ಕಿಗೆ ಸಂಬಂಧಿಸಿದ ವಿದ್ಯಮಾನವಾಗಿದ್ದ ಖಿಲಾಫತ್ ಚಳವಳಿಯ ಬಗ್ಗೆ ಅತಾರ್ಕಿಕವಾದ ಸಹಾನುಭೂತಿಯನ್ನು ಹೊಂದಿದ್ದ ಒಂದು ವರ್ಗ/ಪಕ್ಷವು ಬಿತ್ತತೊಡಗಿದ ಪ್ರತ್ಯೇಕತೆಯ ಭಾವನೆಯನ್ನು ನೋಡಿದ ಮೇಲೆ ಸಾವರ್ಕರ್, ಮುಂದಿನ ಅಪಾಯವನ್ನು ಗ್ರಹಿಸಿ ನಿಷ್ಠುರವಾಗಿ ಮಾತನಾಡತೊಡಗಿದರು. ಅಲ್ಲಿಯವರೆಗೂ ಬ್ರಿಟಿಷರ ಸೇನೆಯಲ್ಲಿ ತೀರಾ ಅತ್ಯಲ್ಪ ಪ್ರಮಾಣದಲ್ಲಿದ್ದ ಹಿಂದೂಗಳು ಹೆಚ್ಚುಹೆಚ್ಚಾಗಿ ಸಂಖ್ಯೆಯಲ್ಲಿ ಸಶಸ್ತ್ರ ಪಡೆಗಳಿಗೆ ಸೇರುವ ಕೆಲಸವನ್ನು ಆಂದೋಲನದಂತೆ ನಡೆಸಿದರು. ಜಾಗತಿಕ ಮಟ್ಟದಲ್ಲಿ ಬೆಳಗುತ್ತಿರುವ ಭಾರತದ ಈ ಚರಿತ್ರೆಯನ್ನು ನಾವೆಲ್ಲರೂ ಅರಿಯಬೇಕು. 

ಸಾವರ್ಕರ್ ಎಂದರೆ ಇಷ್ಟೇ ಅಲ್ಲ, ಭಾರತದ ತ್ರಿವರ್ಣ ಧ್ವಜದಲ್ಲಿ ಇಂದು ಸಾರನಾಥದ ಧರ್ಮಚಕ್ರವಿದ್ದರೆ ಅದಕ್ಕೆ ಕಾರಣರಾದವರೂ ಇವರೇ! ಇಂತಹ ಉದಾತ್ತ ಚಿಂತನಗಳ ಜತೆಯಲ್ಲೇ ಅವರು, ತಮ್ಮ ಕಾಲದ ಜಾಗತಿಕ ನಾಯಕರೊಂದಿಗೆ ಭಾರತದ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ಪತ್ರ ವ್ಯವಹಾರಗಳನ್ನು ನಡೆಸುತ್ತಿದ್ದರು. ಅಂಬೇಡ್ಕರ್, ನೆಹರು, ಶಾಮಪ್ರಸಾದ್ ಮುಖರ್ಜಿ ಅವರಷ್ಟೆ ಅಲ್ಲದೆ, ಕಮ್ಯುನಿಸ್ಟರು ಮತ್ತು ಸಮಾಜವಾದಿಗಳಂತೆಯೇ ಇವರು ಕೂಡ `ಕ್ವಿಟ್ ಇಂಡಿಯಾ’ ಚಳವಳಿಯನ್ನು ನಿರಾಕರಿಸಿದ್ದರು. ದೇಶ ವಿಭಜನೆಯ ಪ್ರಸ್ತಾಪವನ್ನು ಎಲ್ಲರಿಗಿಂತಲೂ ಮೊದಲೇ ವಿರೋಧಿಸಿದ್ದರು. ಹಾಗೆಯೇ, ಈ ದೇಶದ ಬಹುಸಂಖ್ಯಾತರನ್ನು ಮಾತ್ರ ಸದಾ ನೈತಿಕ ಬಿಕ್ಕಟ್ಟಿಗೆ ದೂಡುತ್ತಿದ್ದ ಕುಟಿಲ ರಾಜಕಾರಣವನ್ನು ಅವರು ತಿರಸ್ಕರಿಸುತ್ತ, `ಮಾತೃಭೂಮಿ’ ಮತ್ತು `ಪಿತೃಭೂಮಿ’ಗಳ ರಚನಾತ್ಮಕ ಪರಿಕಲ್ಪನೆಗಳನ್ನು ಮುಂಚೂಣಿಗೆ ತಂದರು. 

ಬಹುಸಂಖ್ಯಾತರ ಪರವಾಗಿ ಮಾತನಾಡುವುದೇ ಅಪರಾಧವೆನ್ನುವ ದುಷ್ಟಕಾಲ ನಮ್ಮಲ್ಲಿ ಇತ್ತೀಚಿನವರೆಗೂ ತಾಂಡವವಾಡುತ್ತಿತ್ತು. ಅದರ ಪಳೆಯುಳಿಕೆಗಳು ಈಗಲೂ ಇವೆ. ಆದರೆ, ದೇಶದ ಪುಣ್ಯಸಂಚಯ ದೊಡ್ಡದಿದೆ. ಹೀಗಾಗಿ, ಸಾವರ್ಕರ್ ಮತ್ತು ಅವರಂತಹ ಇನ್ನೂ ಅನೇಕರ ವಿಚಾರಗಳು ಈಗ ಪುನರುಜ್ಜೀವನಗೊಂಡು, ಪ್ರಖರವಾಗಿ ಗೊತ್ತಾಗುತ್ತಿವೆ. ಇಂತಹ ದ್ರಷ್ಟಾರರ ವಾರಸುದಾರರಾಗಿರುವುದಕ್ಕೆ ಭಾರತೀಯರೆಲ್ಲರೂ ಹೆಮ್ಮೆ ಪಡಬೇಕು! 

13
ಮೇ

ಡಿಕೆ ಶಿವಕುಮಾರ್ ಅವರ ಗುರಿಯೇನು?


– ಅಜಿತ್ ಶೆಟ್ಟಿ ಹೆರಂಜೆ

ಡಿಕೆಶಿಯವರು ಮೊದಲು ಯಾರೊಡೊನೆ ಜಗಳವಾಡಬೇಕು ಎಂದು ತೀರ್ಮಾನ ಮಾಡಬೇಕು.  ವರ್ತಮಾನದ ರಾಜಕಾರಣದಲ್ಲಿ ಅವರಿಗೆ ತಮ್ಮ ಸ್ವಪಕ್ಷೀಯರ ಜೊತೆಗೆ ಜಗಳವಾಡುವುದು ಮುಖ್ಯವೋ ಅಥವಾ ತಮ್ಮ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ತರುವುದು ಮುಖ್ಯವೋ ಎಂಬ ತೀರ್ಮಾನಕ್ಕೆ ಅವರ ಮೊದಲು ಬರಬೇಕು. ಈ ಎರಡೂ ಒಟ್ಟಿಗೆ ಹೋಗಲು ಸಾಧ್ಯವಿಲ್ಲ. ಅವರೊಬ್ಬರೇ ಇಡೀ ಕೆಪಿಸಿಯನ್ನು ತಲೆಯಲ್ಲಿ ಹೊತ್ತವರಂತೆ ಆಡುತ್ತಿರುವುದು ಇತ್ತೀಚೆಗೆ ಕಾಣುತ್ತಿದೆ. ತನ್ನನ್ನ ತಾನು   ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಮಾಡಿದ ಪಾಪವನ್ನೆಲ್ಲಾ  ತೊಳೆಯಲು ಅವತಾರ ಎತ್ತಿ ಬಂದಿದ್ದಾರೋ ಎಂಬಂತೆ ವರ್ತಿಸಿಸುತ್ತಿದ್ದಾರೆ. ಡಿಕೆಶಿ, ಕರ್ನಾಟಕ ಕಾಂಗ್ರೆಸ್‌ ಪಕ್ಷದ ಮೊದಲ ಪ್ರದೇಶಾಧ್ಯಕ್ಷರೂ ಅಲ್ಲ, ಕೊನೆಯವರೂ ಆಗುವುದಿಲ್ಲ. ಸೋಜಿಗದ ಸಂಗತಿ ಅಂದರೆ ಇವರ ವರ್ತನೆ ಹಾಗಿದೆ. ಇಲ್ಲದೇ ಹೋದರೆ  ಒಂದು ರಾಷ್ಟ್ರೀಯ ಪಕ್ಷದ ರಾಜ್ಯಧ್ಯಾಕ್ಷನೊಬ್ಬ ಹೀಗೆ ವರ್ತಿಸವುದು ಎಷ್ಟು ಸರಿ?

ಅವರ ಪಕ್ಷದೊಳಗೆ ಗುರುತರವಾದ ಜವಾಬ್ದಾರಿ ಇರುವ ವ್ಯಕ್ತಿಯೊಬ್ಬ ಇನ್ನೊಂದು ರಾಜಕೀಯ ಪಕ್ಷದ ನಾಯಕರನ್ನು ಭೇಟಿಯಾದರೆ, ಮತ್ತು ಅದು ಪಕ್ಷ ವಿರೋಧಿ ಚಟುವಟಿಕೆ ಅಂತ ಅನ್ನಿಸದರೆ ಅವರು ಆ ವ್ಯಕ್ತಿಯ ಬಳಿ ನೇರವಾಗಿ ಮಾತನಾಡಿ ವಿಷಯವನ್ನು ಬಗೆಹರಿಸಿಕೊಳ್ಳಬಹುದು ಅಲ್ವೆ?  ಅವರ ಪಕ್ಷದ ನಾಯಕರೊಡನೆ ಮಾತನಾಡಲೂ ಡಿಕೆಶಿ ಅವರಿಗೆ ಮಾಧ್ಯಮದ ಅಗತ್ಯ ಬಂತು ಅಂದರೆ, ಅವರ ಪಕ್ಷದೊಳಗೆ ಸಂಬಂಧ ಬಹಳ ಹದಗೆಟ್ಟಿದೆ ಅಂತ ತಾನೆ ಅರ್ಥ. ಅಷ್ಟಕ್ಕೂ ಎಂ ಬಿ ಪಾಟೀಲರು  ಕಾಂಗ್ರೆಸ್‌ ಪಕ್ಷದಲ್ಲಿ ಅಂತಿಂತಾ ಕಾಂಜೀ ಪೀಂಜಿ ನಾಯಕರಲ್ಲ. ಅವರು ಕರ್ನಾಟಕ ಕಾಂಗ್ರೆಸ್‌ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರು. ಅರಮನೆ ಮೈದಾನದಲ್ಲಿ ಅವರ ಪದಗ್ರಹಣ ಸಮಾರಂಭ ನೋಡಿದವರಿಗೆ, ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಭೆಗಿಂತಲೂ ಅದು ಜೋರಾಗೆ ಇತ್ತು ಅನಿಸಿದರೆ ತಪ್ಪೇನಿಲ್ಲ. ಈ ಸಮಾರಂಭ ಕರ್ನಾಟಕ ಕಾಂಗ್ರೇಸಿನಲ್ಲಿ ಎಲ್ಲವೂ ಸರಿ ಇಲ್ಲ ಜೊತೆಗೆ ಪಕ್ಷದ ಹೈ ಕಮಾಂಡ್‌ ಕೂಡ ಎಲ್ಲವನ್ನೂ ಡಿಕೆಶಿ ಅವರ ಹಗಲ ಮೇಲೆ ಹಾಕಿ  ಸುಮ್ಮನೆ ಕೂರುವ ರಿಸ್ಕ್‌ ತೆಗೆದುಕೊಳ್ಳುವ ಕೆಲಸಕ್ಕೆ ಕೈ ಹಾಕಿಲ್ಲ ಎಂಬುದು ಸ್ಪಷ್ಟವಾಗಿಸುತ್ತದೆ. ಆ ಕಾರಣಕ್ಕೆ power ಬ್ಯಾಲೆನ್ಸಿಗಾಗಿ ಡಿಕೆಶಿಯ ವಿರೋಧ ಬಣಕ್ಕೂ ಸ್ವಲ್ಪ ಅಧಿಕಾರದ ಹಂಚಿಕೆ ಆಗಬೇಕು ಎಂಬ ಕಾರಣಕ್ಕೇ ಎಂ.ಬಿ ಪಾಟೀಲರಿಗೆ ಕೆಪಿಸಿಸಿ ಅಧ್ಯಕ್ಷರಿಗೆ  ಸಮಾನಾಂತರವಾದ ಅಧಿಕಾರ ಇರುವ ಇನ್ನೊಂದು ಹುದ್ದೆಯನ್ನ ಸೃಷ್ಟಿ ಮಾಡಿಕೊಟ್ಟಿದ್ದು.  ಅಲ್ಲಿಗೆ ರಾಜ್ಯ ಕಾಂಗ್ರೆಸ್‌ ಪಕ್ಷದ  ಚುಕ್ಕಾಣಿಯನ್ನ ಕೈ ಕಮಾಂಡ್‌ ಪೂರ್ಣ ಪ್ರಮಾಣದಲ್ಲಿ ಡಿಕೆಶಿ ಕೈಗೂ ಕೊಡದೇ ಸಿದ್ದರಾಮಯ್ಯನವರ ಬಣಕ್ಕೂ ಕೊಡದೆ ಆಟ ಆಡುತ್ತಿದೆ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಹಗ್ಗದ ಎರಡೂ ತುದಿಗೆ  ಬೆಂಕಿ ಹಾಕಿದೆ.  ಈ ಬೆಂಕಿಯಲ್ಲಿ ಯಾರು ಸುಡುತ್ತಾರೆ?  ಯಾರು ಪಾರಾಗುತ್ತಾರೆ ಎಂಬುದನ್ನ ಸಮಯವೇ ನಿರ್ಧರಿಸಬೇಕು.

ಇನ್ನು ಡಿಕೆಶಿಯವರಿಗೆ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಗೆದ್ದರೆ, ತಾನೇ ಮುಖ್ಯಮಂತ್ರಿ ಆಗಬೇಕು ಎಂಬ ಎಲ್ಲಿಲ್ಲದ ತುಡಿತ ಇದೆ. ಆದರೆ ಅವರ ಬಗ್ಗೆ ಮಾತನಾಡುವ, ಅವರ ಬಗ್ಗೆ ಲಾಭಿ ಮಾಡುವ ಪ್ರಭಾವಿ ನಾಯಕರ ಸಂಖ್ಯೆ ರಾಜ್ಯದಲ್ಲೂ ಕೇಂದ್ರದಲ್ಲೂ  ದಿನೇ ದಿನೇ  ಕಡಿಮೆ ಆಗುತ್ತಿದೆ. ಈ ಮಧ್ಯೆ ಸಿದ್ದರಾಮಯ್ಯನವರು ತಾನೇ ಮುಂದಿನ ಮುಖ್ಯಮಂತ್ರಿ ಎಂದು  ಒಂದಷ್ಟು ಭಾರಿ ನೇರವಾಗಿ  ಹೇಳಿಕೊಂಡರೆ  ಒಂದಷ್ಟು ಸಾರಿ ಅವರ ಬೆಂಬಲಿಗರ ಮುಖಾಂತರ ಹೇಳಿಸುತ್ತಾರೆ. ಬೆಂಬಲಿಗರು ಅಂದ್ರೆ ಸಾಮಾನ್ಯ ನಾಯಕರಲ್ಲ. ಜಮೀರ್‌ ಅಹ್ಮದ್ ಮುಖಾಂತರವೇ  ಬಹಳಷ್ಟು ಸಾರಿ ಹೇಳಿಸಿದ್ದಾರೆ.  ಇನ್ನು ಈ ವಾದ ತೀರಾ ಅತಿರೇಕಕ್ಕೆ ಹೋದಾಗ ದಲಿತ ಮುಖ್ಯಮಂತ್ರಿ ಆಗಬೇಕು ಎಂಬ ವಿತಂಡ ವಾದನ್ನೂ ಅವರೇ ಅನೇಕ ಸಾರಿ ಮಾಡಿದ್ದಾರೆ. ಕೊನೆಗೆ ಅದೂ ತಾರಕಕ್ಕೆ ಹೋದಾಗ  ತಾನೂ ಕೂಡ ದಲಿತನೇ ಎಂಬ ಹೇಳಿಕೆ ಕೊಟ್ಟಿದ್ದಾರೆ. ಇದರ ಬಗ್ಗೆ ಬಂದ ತೀರಾ ಇತ್ತಿಚೀಗಿನ ಹೇಳಿಕೆ ಎಂದರೆ ಕೆಪಿಸಿಸಿಯ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂಬಿ ಪಾಟೀಲರದ್ದು. ಅವರೂ ಕೂಡ ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ ಎಂಬ ಹೇಳಿಕೆ ಕೊಟ್ಟರು. ಇದು ಹಿಂದಿನಿಂದಲೂ ತೆರೆಯ ಮರೆಯಲ್ಲಿ ಎಂ.ಬಿ ಪಾಟೀಲರು,  ಡಿಕೆಶಿ ನಡುವೆ ಇದ್ದ ರಾಜಕೀಯ ಕುಸ್ತಿ ತೆರೆಯ ಮುಂದೆ ಬರಲು ಪ್ರಮುಖ ಕಾರಣ ಆಯಿತು, ಒಂದಷ್ಟು ಹೊಸ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

ಕಳೆದ ಭಾನುವಾರ ಸುವರ್ಣ ಸುದ್ದಿವಾಹಿನಿಯಲ್ಲಿ ಡಿಕೆಶಿಯವರನ್ನ  ನೇರವಾಗಿ ಪ್ರಶ್ನೆ ಮಾಡುವ ಅವಕಾಶ ನನಗೆ ಸಿಕ್ಕಿತು. ಸಮಯದ ಅಭಾವದ ಕಾರಣಕ್ಕೆ ಅಲ್ಲಿ  ಚರ್ಚೆಯ ಪೂರ್ಣ ಭಾಗವನ್ನು  ಪ್ರಸಾರ ಮಾಡಿಲ್ಲ. ಇಲ್ಲಿ ಕೂಡ ಅಜಿತ್‌ ಹನಮಕ್ಕನವರ್‌ ಅವರು ಡಿಕೆಶಿ ಅವರಿಗೆ ಒಂದಷ್ಟು ಮುಜುಗರ ತರುವ ಪ್ರಶ್ನೆಗಳನ್ನ ಕೇಳಿದರು, ಅದಕ್ಕೆ ಡಿಕೆಶಿ ಅಡ್ಡ ಗೋಡಯ ಮೇಲೆ ದೀಪ ಇಟ್ಟ ಹಾಗೆ ಉತ್ತರ ಕೊಟ್ಟರು.  ಹಿಂದುತ್ವದ ವಿಚಾರ ಬಂದಾಗ ನೀವು ಯಾಕೆ ಡಬ್ಬಲ್ ಸ್ಟಾಂಡರ್ಡ್‌  ತಗೊಂತೀರಿ ಅನ್ನುವ ಪ್ರಶ್ನೆಗೆ  ಡಿಕೆಶಿ ಬಹಳಾ ವಿದ್ವಾಂಸನಂತೆ ಉತ್ತರ ಕೊಡುವ ಪ್ರಯತ್ನ ಮಾಡಿದರು. ಅಸಲಿಗೆ ವಿಷಯ ಅದಲ್ಲ. ಈ ವಿಚಾರದಲ್ಲಿ ಪಕ್ಷದೊಳಗೆಯೇ ಅವರ ನಿಲುವು ಮತ್ತು ಅವರ ಅವರ ವಿರೋಧಿ ಬಣದ ನಿಲುವು ಬೇರೆ ಬೇರೆ. ಸಿದ್ದರಾಮಯ್ಯ  ತಾನು ಮುಸಲ್ಮಾನರ ಪರ ಎಂದು ತಮ್ಮ ನಡೆ ನುಡಿಗಳ ಮೂಲಕ ನೇರವಾಗಿ ತೋರಿಸಿಕೊಂಡು ಬರುತ್ತಾರೆ. ಆದರೆ  ಡಿಕೆಶಿಯವರ ಅಭಿಪ್ರಾಯ ತಾವು ಕಳೆದ ಸಾರಿ ಚುನಾವಣೆಯಲ್ಲಿ ಸೋಲಲು ಮುಖ್ಯ ಕಾರಣವೆ ಸರ್ಕಾರದ ಹಿಂದೂ ವಿರೋಧಿ ನೀತಿ ಎಂಬುದು. ಈ ಭಾರಿಯೂ ಅಂತಹ ನಿಲುವನ್ನು ತೆಗೆದುಕೊಂಡರೆ ಮತ್ತೆ ಪಕ್ಷಕ್ಕೆ ಹಾನಿಯಾಗಾಲಿದೆ. ಈಗ ತಾನೇ ಅಧ್ಯಕ್ಷ ಬೇರೆ. ಪಕ್ಷ ಈ ಭಾರಿಯೂ ಸೋತರೆ ತಾವು ಮುಖ್ಯಮಂತ್ರಿ ಆಗುವ ಕನಸು ಕನಸಾಗಿಯೇ ಉಳಿಯಲಿದೆ ಎಂಬದು ಅವರಿಗೆ ಗೊತ್ತಾಗಿದೆ. ಹಾಗಾಗಿ, ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಕಾಂಗ್ರೆಸ್‌ ಸಂಪೂರ್ಣವಾಗಿ ಹಿಂದುಗಳನ್ನು  ವಿರೋಧಿಸುವ ಸಾಹಸಕ್ಕೆ  ಹೋಗಲಿಲ್ಲ, ಜೊತೆಗೆ ತಮ್ಮ ಪಕ್ಷದ ಎಲ್ಲರಿಗೂ ಹಾಗೆಯೇ ವ್ಯವಹರಿಸಲೂ ಆದೇಶ ಕೊಟ್ಟರು. ಆದರೆ ಅವರನ್ನ ವಿರೋಧಿಸಲೆಂದೇ ಇರುವ, ಅವರಿಗೆ ಮುಜಗರ ಉಂಟು ಮಾಡಲೇಬೇಕು ಎಂದು ಇರುವ ಇನ್ನೊಂದು ಬಣ ಇವರ ಮಾತನ್ನ ದಿಕ್ಕರಿಸಿ ಅಗೊಮ್ಮೆ ಈಗೊಮ್ಮೆ ಇವರು ಹಾಕಿದ ಬೇಲಿ ದಾಟಿ  ಡಿಕೆಶಿ ಅವರಿಗೆ ಮುಜುಗರ ಮಾಡುತ್ತಲೇ ಇದೆ. ಈ ಬೆಳವಣಿಗೆಯ ಕಾರಣಕ್ಕೆ ಒಂದು ಕಡೆ ಕಾಂಗ್ರೆಸ್‌ ಪಕ್ಷವನ್ನು ಹಿಂದೂಗಳೂ ನಂಬದ, ಇನ್ನೊಂದು ಕಡೆ ಅವರ ಪಾರಂಪರಿಕೆ ಮತದಾರರಾದ ಮುಸಲ್ಮಾನರೂ ನಂಬದ ಒಂದು ಇಕ್ಕಟ್ಟಿನ ಪರಿಸ್ಥಿತಿ ಡಿಕೆಶಿ  ನೇತೃತ್ವದಲ್ಲಿ ಕಾಂಗ್ರೆಸ್ ‌ ಪಕ್ಷಕ್ಕೆ ಎದುರಾಗಿದೆ ಎಂಬುದ ಕಾಂಗ್ರೆಸ್‌ ವಲಯದಲ್ಲಿ ಬಹಳಷ್ಟು ಜನರಿಗೆ ನೋವು ಕೂಡ ತಂದಿದೆ.

ಕಾಂಗ್ರೆಸ್‌ ಪಕ್ಷದಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯನವರ ನಡುವೆ ಎಲ್ಲವೂ ಸರಿ ಇಲ್ಲ, ಇದು ಮಾದ್ಯಮಗಳು ಕಟ್ಟಿದ ಕಟ್ಟು ಕಥೆ ಅಲ್ಲ, ಸತ್ಯ ವಿಚಾರ ಎಂಬುದು ನನಗೂ ಅನುಭವಕ್ಕೆ ಬಂತು.  ಅಜಿತ್‌ ಹನಮಕ್ಕನವರ್‌ ಕೇಳಿದ ಒಂದು ಪ್ರಶ್ನಯಲ್ಲಿ ನೀವು ಯಾಕೆ ಮುಸಲ್ಮಾನರ ಪರ ಮಾತನಾಡಲಿಲ್ಲ? ಸಿದ್ದರಾಮಯ್ಯ ಒಂದು ಸ್ಟ್ಯಾಂಡ್‌ ತೆಗೆದುಕೊಂಡ್ರು ಎಂದಾಗ, ಡಿಕೆಶಿ ಅದಕ್ಕೆ ಸಿದ್ದರಾಮಯ್ಯನವರು ಮಾತನಾಡಿದರೆ ಅದು ಕಾಂಗ್ರೆಸ್ ‌ ಪಕ್ಷ ಮಾತನಾಡಿದಂತೆ ಅಲ್ವಾ ಎಂದು ಮರು ಪ್ರಶ್ನೆ ಹಾಕಿದರು. ಅವರು ಆ ಉತ್ತರಕ್ಕೆ ನಾನು  ಹಿಂದೆ ಸಿದ್ದರಾಮಯ್ಯ ತೆಗೆದುಕೊಂಡ ಹಿಂದೂ ವಿರೋಧಿ ನೀತಿಗಳ ಬಗ್ಗೆ ಪ್ರಸ್ತಾಪ ಮಾಡಿದಾಗ ಅದೇ ಲಾಜಿಕ್ಕಿನಲ್ಲಿ ಉತ್ತರ ಕೊಡಲಾಗದ ಡಿಕೆಶಿ ನೀವು ಅದನ್ನ  ಸಿದ್ದರಾಮಯ್ಯನವರ ಬಳಿಯೇ ಕೇಳಿ ಎಂದು ಹೇಳುತ್ತಾರೆ. (ಚರ್ಚೆಯ ಆ ಭಾಗ ವಾಹಿನಿಯಲ್ಲಿ ಪ್ರಸಾರ ಆಗಲಿಲ್ಲ, ಬಹುಶಃ ಸಮಯದ ಅಭಾವದ ಕಾರಣಕ್ಕೆ ಇರಬೇಕು) ಹೀಗೆ ಸಾಗಿದ ಚರ್ಚೆಯ ಒಂದು ಭಾಗದಲ್ಲಿ, ಕಾಂಗ್ರೆಸ್‌ ಪಕ್ಷದ ಎನ್‌ ಎಸ್‌ ಯು ಐ ನ ಅದ್ಯಕ್ಷನೊಬ್ಬ ನೀವು ಮುಂದೆ ಮುಖ್ಯಮಂತ್ರಿ ಆದರೆ ಎಂತಹಾ ಯೊಜನೆಗಳನ್ನ ಜಾರಿಗೆ ತರುತ್ತೀರಿ ಎಂದು ಕೇಳಿದಾಗ ತಕ್ಷಣವೇ ಆತನನ್ನು ನಿಲ್ಲಿಸಿದ ಅಜಿತ್‌ ಹನಮಕ್ಕನವರ್  ಕಾಂಗ್ರೆಸ್‌ ಪಕ್ಷದಲ್ಲಿ ಮುಖ್ಯಮಂತ್ರಿ  ಯಾರು ಎಂಬುದರ ಬಗ್ಗೆಯೇ ಗೊಂದಲ ಇದೆ. ನಿಮಗೆ ಯಾರು ಮುಖ್ಯಮಂತ್ರಿ ಆಗಬೇಕು ಅಂದಾಗ ಆತ ಸ್ವಲ್ಪ ಅಳುಕುತ್ತಲೇ ಡಿಕೆಶಿ ಅಂದ. ಹಿಂದೆ ನಮ್ಮದು ಸಾಮೂಹಿಕ ನಾಯಕತ್ವ, ಪಕ್ಷ ಮುಖ್ಯಮಂತ್ರಿಯ ತೀರ್ಮಾನ ಮಾಡಲಿದೆ ಎಂಬ ನೈತಿಕತೆಯ ಮಾತನಾಡಿದ್ದ ಡಿಕೆಶಿಗೆ ಹುಡುಗನ ಈ ಮಾತು ಖುಷಿಕೊಟ್ಟಿತು ಎಂಬುದು ಅವರ ಮುಖಭಾವದಿಂದ ನನಗೆ ಅರ್ಥವಾಯಿತು. ಆ ಕ್ಷಣದಲ್ಲಿ ಅವರಿಗೆ ಕೆಲವೇ ನಿಮಿಷಗಳ ಹಿಂದೆ ಅವರೇ ಹೇಳಿದ  ಪಕ್ಷದ ತೀರ್ಮಾನದ ಮಾತು ಅವರಿಗೆ ನೆನಪು ಇರಲಿಲ್ಲ. ಈ ಮದ್ಯೆ ನಾನು ಮಾತನಾಡಿ (ಹಾಗೆ ಮಾತನಾಡುವುದು ಚರ್ಚೆಯ ನಿಯಮಕ್ಕೆ ವಿರುದ್ಧವಾಗಿತ್ತು. ಆದರೂ ತಡೆಯಲಾಗದೆ ಒಂದು ಪ್ರಶ್ನೆ ಕೇಳಿದೆ) ಎರಡು ದಿನದ ಹಿಂದೆ ಎಂ.ಬಿ ಪಾಟೀಲರೇ ಸಿದ್ದರಾಮಯ್ಯನವರು ಮುಂದಿನ ಮುಖ್ಯಮಂತ್ರಿ ಅಂದಿದ್ದಾರೆ  ಅಂದಾಗ ಅವರ ಮುಖದಲ್ಲೊಂದು ಅಹಸನೆ ಗೆರೆ ಮೂಡಿದ್ದನ್ನು ಗಮನಿಸಿದೆ. ಅಂದಹಾಗೆ ಈ ಪ್ರಶ್ನೆಯನ್ನು ನಾನು ಚರ್ಚೆಯ ನಿಯಮಕ್ಕೆ ವಿರುದ್ದವಾಗಿ ಕೇಳಿದ ಕಾರಣ ಅದೂ ಕೂಡ ಪ್ರಸಾರ ಆಗಿಲಿಲ್ಲ.

ಒಟ್ಟಿನಲ್ಲಿ ಡಿಕೆಶಿ ಅವರ ಜೊತೆಗೆ ಸುಮಾರು ಒಂದೂವರೆ ಗಂಟೆಗಳ ಕಾಲ ಇದ್ದ ನನಗೆ ಒಂದಷ್ಟು ವಿಚಾರಗಳು ಸ್ಪಷ್ಟವಾಗಿ ಕಾಣಿಸಿತು. ಅವರಲ್ಲಿ ಬೌದ್ಧಿಕ ಚರ್ಚೆ ಮಾಡುವ ಸಾಮರ್ಥ್ಯ ಮತ್ತು ವ್ಯವಧಾನ ಎರಡೂ ಇಲ್ಲ ಅವರದ್ದೇನಿದ್ದರೂ “ಸ್ಕೋರ್ ಸೆಟಲ್”‌ ಮಾಡುವ ರಾಜಕಾರಣ. ಜೊತೆಗೆ ಅವರು ಮುಖ ಭಾವದಲ್ಲಿ ಸಿದ್ದರಾಮಯ್ಯನವರ ಮುಸಲ್ಮಾನರ ತುಷ್ಟಿಕರಣದ ರಾಜಕಾರಣದಿಂದಾಗಿ ಹಿಂದುಗಳ ವಿರುದ್ಧ ಮಾಡಿರುವ ಅನ್ಯಾಯದ ಪಾಪದ ಮೂಟೆಯನ್ನ ಇಡೀ ಪಕ್ಷದಲ್ಲಿ ತಾನೊಬ್ಬನೇ ಹೊತ್ತು ನಡೆಯುತ್ತಿದ್ದೇನೆ ಎಂಬ ಭಾವ ಸ್ಪಷ್ಟವಾಗಿ ಕಾಣಿಸುತ್ತಿದೆ. ಇದರ ಜೊತೆಗೆ ಅವರು ಪಕ್ಷದೊಳಗೆ ಮತ್ತು ಪಕ್ಷದ ಹೊರಗೆ ಒಬ್ಬಂಟಿ ಎರಡೂ ಕಡೆ ಪ್ರವಾಹದ ವಿರುದ್ದ ಈಜಾಡುತ್ತಿದ್ದಾರೆ, ಅದರಲ್ಲಿ ಬಳಲಿ ಬೆಂಡಾಗಿರುವುದೂ ಅವರ ಮುಖದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಹೀಗಿರುವಾಗ “ಸ್ಕೋರ್‌ ಸೆಟಲ್‌” ಮಾಡುವ ರಾಜಕಾರಣದಿಂದ ಹೊರಗೆ ಬಂದು, ವೈಯಕ್ತಿಕ ಪ್ರತಿಷ್ಠೆ ಬಿಟ್ಟು, ಪಕ್ಷ ಕಟ್ಟುವ ರಾಜಕಾರಣ ಮಾಡಿದರಷ್ಟೆ  ಪಕ್ಷಕ್ಕೆ ಮತ್ತು ಪಕ್ಷದ ಪ್ರಾದೇಶಿಕ ಅಧ್ಯಕ್ಷರಿಗೆ ಉಳಿಗಾಲ. ಇಲ್ಲದೇ ಹೋದರೆ ಇವರು ದಿನಂಪ್ರತಿ ವಿರೋಧ ಪಕ್ಷಗಳಿಗಿಂತ ಸ್ವ ಪಕ್ಷದವರ ಜೊತೆಗೆ ಹೆಚ್ಚು ಜಗಳವಾಡಬೇಕಾಗುತ್ತದೆ. ಅದರ ಪರಿಣಾಮವೇನು ಎಂಬುದಕ್ಕೆ ಮಹಾ ಭಾರತದ ಕರ್ಣನಿಗಿಂತ ಬೇರೆ ನಿದರ್ಶನ ಬೇಕಿಲ್ಲ ಅಲ್ಲವೆ?

25
ಮಾರ್ಚ್

ನೆಡುವ ಗಿಡ, ಪ್ರಾಕೃತಿಕ ಸಮಸ್ಯೆಗಳ ನೈಜ ಪರಿಹಾರವೇ ?

– ಅನೇಕಲೇಖ

ವನಮಹೋತ್ಸವ, ಜನ್ಮದಿನ ಇಂತಹ ಹಲವು ಸಂದರ್ಭಗಳಲ್ಲಿ ಸಸಿಗಳನ್ನು, ಗಿಡಗಳನ್ನು ನೆಡುತ್ತೇವೆ. ಇದರ ಹಿಂದಿನ ಕಾರಣಗಳು, ಉದ್ದೇಶಗಳು ನಮಗೆ ಗೊತ್ತೇ ಇವೆ. ತಾಪಮಾನ ಏರಿಕೆ, ಪ್ರಾಕೃತಿಕ ಅಸಮತೋಲನ ಮುಂತಾದ ಪರಿಣಾಮಗಳನ್ನು ತಡೆಯಲು,ನಾವು ಈ ಹಸಿರೀಕರಣದ ಮೊರೆ ಹೋಗಿದ್ದೇವೆ ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಉಸಿರಾಟಕ್ಕೆ ಆಮ್ಲಜನಕ ಬೇಕು ಅದನ್ನು ಬಹುದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವುದು ಗಿಡಗಳು ಎಂಬ ಕಾರಣಕ್ಕಾಗಿ ನಾವು ಹಸಿರನ್ನು ಬೆಳೆಸುತ್ತೇವೆ. ಇತರ ಜೀವಿಗಳ ಉಳಿವು ಅಭಿವೃದ್ಧಿ ನಮ್ಮ ಗುಂಪಿಗೆ ಸೇರದ ವಿಷಯ. ಅದಕ್ಕೆ ಕಾರಣವಿಷ್ಟೇ, ನಮ್ಮ ಮನುಜ ಸಂತತಿಯನ್ನೇ ನಮ್ಮಿಂದ ಸಂಭಾಳಿಸುವುದು ಸಾಧ್ಯವಾಗದಿರದಾಗ ಇನ್ನು ಬ್ರಹತ್ ಜೀವರಾಶಿಯ ಜವಾಬ್ದಾರಿ ನಮ್ಮಿಂದ ಆಗುಹೋಗದ ವಿಷಯ.ಹಾಗಾಗಿ ನಮ್ಮ ಧ್ಯೇಯ ಸ್ಪಷ್ಟ “ಮನುಷ್ಯರಿಗೆ ಮಾತ್ರ”.

ಈ ಹಸಿರೀಕರಣಕ್ಕೆ ನಾವು ಕಾಲಾಂತರಗಳಲ್ಲಿ ಅಳವಡಿಸಿಕೊಂಡ ಸೂತ್ರಗಳು, ಪದ್ಧತಿಗಳನ್ನು ಗಮನಿಸಿದರೆ ನಾವು ಮಾಡಿದ ತಪ್ಪು ನಿರ್ಧಾರಗಳು ನಮ್ಮ ಕಣ್ಣೆದುರೆ ನಿಲ್ಲುತ್ತವೆ. ಈ ಸೂತ್ರಗಳ ಹಿಂದೆ ಅರಣ್ಯ ಇಲಾಖೆ, ಸರ್ಕಾರದ ಯೋಜನೆಗಳ ಕೈ ಕೂಡ ಶಾಮೀಲು.

ಮೊದಲಿಗೆಲ್ಲ ನಮ್ಮ ಯೋಜನೆಯಿದ್ದದ್ದು ಆರ್ಥಿಕ ಆದಾಯಗಳುಳ್ಳ ಮರಗಳನ್ನು ಬೆಳೆಸುವುದು (ಉದಾ :ಅಕೇಶಿಯ, ನೀಲಗಿರಿ). ನಾವು ಒಂದೇ ಹೂಡಿಕೆಯಿಂದ ಪ್ರಾಣವಾಯು, ಹಣ ಎರಡನ್ನೂ ಸಂಪಾಡಿಸುವ ಅಂದಾಜಿನಲ್ಲಿದ್ದೆವು. ನಂತರದ ದಿನಗಳಲ್ಲಿ ನಮಗೆ ತಿಳಿಯಿತು. ಈ ರೀತಿಯ ಮರಗಳು ಮಣ್ಣಿನ ಸತ್ವಸಾರಗಳನ್ನು ಬರಿದು ಮಾಡಿ, ನಿಸರ್ಗದಲ್ಲಿನ ಶೀತವನ್ನು ಹೀರಿಕೊಂಡು, ಸುತ್ತಲಿನ ತಾಪಮಾನವನ್ನು ಏರಿಸುತ್ತದೆ ಹಾಗೂ ಇವುಗಳ ಸುತ್ತಮುತ್ತ ಅನ್ಯ ರೀತಿಯ ಗಿಡಗಳು ಬೆಳೆಯದಂತೆ ಇವು ತಡೆಯುತ್ತವೆ ಎಂದು. ಹಾಗಾಗಿ ನಾವು ನಮ್ಮ ಉಪಾಯಗಳನ್ನು ಬದಲಾಯಿಸಿಕೊಂಡೆವು ಹಣ್ಣಿನ ಮರಗಳನ್ನು ಬೆಳೆಸುವ ಯೋಜನೆಯನ್ನು ಹೊಂದಿದೆವು. ಇದರ ಹಿಂದಿನ ಉದ್ದೇಶ ಒಳ್ಳೆಯದೇ. ಗಿಡ ಬಿಡುವ ಹಣ್ಣುಗಳು ಪ್ರಾಣಿ ಪಕ್ಷಿಗಳಿಗೆ ಆಹಾರವಾಗುತ್ತದೆ. ಇವುಗಳಿಂದ ಪಸರಿಸಲ್ಪಡುವ ಹಣ್ಣಿನ ಬೀಜಗಳಿಂದ ಹೊಸ ಸಸಿಯೊಂದರ ಹುಟ್ಟಾಗುತ್ತದೆ. ಈ ಉಪಾಯ ಮೇಲ್ನೋಟಕ್ಕೆ ಅದ್ಭುತವೆಂದು ತೋರುತ್ತದೆ.

ಆದರೆ ಕಾಡುಗಳು ಹೇಗೆ ನಿರ್ಮಾಣಗೊಳ್ಳುತ್ತವೆ?  ಪ್ರಕೃತಿಯಲ್ಲಿ ಹಣ್ಣು ಕೊಡದ ಸಸ್ಯ ಪ್ರಭೇದಗಳ ವೈವಿಧ್ಯತೆ, ಪ್ರಾಮುಖ್ಯತೆಗಳನ್ನು ನೋಡಿದರೆ ನಮ್ಮ ಅದ್ಭುತ ಉಪಾಯ ತನ್ನ ಉಪಯುಕ್ತತೆ ಕಳೆದುಕೊಳ್ಳುತ್ತದೆ. ಒಂದು ಕಾಡು ನಿರ್ಮಿತವಾಗಬೇಕಾದರೆ ಮೊದಲು ಪಾಚಿಗಳ ಪದರ ಬೆಳೆದು ಕಲ್ಲು-ಖನಿಜಗಳನ್ನು ಮಣ್ಣನ್ನಾಗಿ ಮಾಡಿ. ಅದರ ಮೇಲೆ ಫರ್ನ್,ಮಾಸಸ್(Ferns Mosses) ಬೆಳೆದು ಮಣ್ಣನ್ನು ಹದಗೊಳಿಸಿ, ತದನಂತರ ಹುಲ್ಲು ಗಿಡಗಳು ಬೆಳೆದು,ಕೆಲವು ಗಿಡವು ಮರವಾಗುತ್ತವೆ. ಇಷ್ಟು ಕ್ಲಿಷ್ಟ ಹಾಗೂ ಸಮಯ ಯಾಚಕ ಪ್ರಕ್ರಿಯೆ ಇದಾಗಿದೆ. ಈ ಪ್ರಕ್ರಿಯೆಯ ಪ್ರತಿ ಹಂತದಲ್ಲೂ ಹಲವು ಸೂಕ್ಷ್ಮಜೀವಿಗಳ, ಪ್ರಾಣಿಕೀಟಗಳ ಸಂಯುಕ್ತತೆಯು ಸಹಕರಿಸುತ್ತದೆ. ಅಲ್ಲೊಂದು ಸಮತೋಲಿತ ವ್ಯವಸ್ಥೆ ರೂಪುಗೊಳ್ಳುತ್ತದೆ.

ಆದರೆ ಗಿಡಗಳನ್ನಷ್ಟೇ ನೆಟ್ಟಾಗ, ಆ ಗಿಡಕ್ಕೆ ಸಹಕರಿಸುವ ಅಥವಾ ಅವಲಂಬಿತವಾದ ಜೀವಿಗಳು ಬೆಳವಣಿಗೆಯಲ್ಲಿ ಪಾಲ್ಗೊಳ್ಳುತ್ತವೆ. ತದನಂತರ ಪಾಚಿ ಹುಲ್ಲುಗಳ ಬೆಳವಣಿಗೆ ಆಗುತ್ತದೆಯಾದರೂ ಅದೊಂದು ವ್ಯವಸ್ಥಿತ ಸಮತೋಲಿತ ವ್ಯವಸ್ಥೆಯಲ್ಲ. ನಾವು ರಸ್ತೆ ಕಟ್ಟಡಗಳನ್ನು ಮಾಡುವಾಗ ಪ್ರಕೃತಿಯ ಪ್ರಾಣಿ, ಪಕ್ಷಿ, ಕೀಟ, ಕಲ್ಲು, ನೀರ ಒರತೆ, ಮಣ್ಣು ಸಕಲವನ್ನು ನಾಶ ಮಾಡುತ್ತೇವೆ, ಆದರೆ ಪರಿಸರದ ಪುನಶ್ಚೇತನಕ್ಕೆ ಒಂದು ಗಿಡವನ್ನು ನೆಟ್ಟು ಸುಮ್ಮನಾಗುತ್ತೇವೆ. ಇದು ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡು ಸಾಮರಸ್ಯದಲ್ಲಿರುವ ವ್ಯವಸ್ಥೆ.ಅದರ ಅಡಿಪಾಯವನ್ನೆಲ್ಲ ತೆಗೆದು ಒಂದು ಗೋಡೆಯನ್ನಷ್ಟೇ ನಿಲ್ಲಿಸಿದರೆ ಅದನ್ನು ‘ಮನೆ’ ಎಂದು ಹೇಗೆ ಕರೆಯಲಾದೀತು?. ನಾವು ಗಿಡಗಳನ್ನು ನೆಡಬಹುದು ಆದರೆ ಪ್ರಕೃತಿ ತನ್ನನ್ನು ತಾನು ಕಟ್ಟಿಕೊಳ್ಳುವ ಪ್ರಕ್ರಿಯೆ ವಿಧಾನಗಳನ್ನು ನಾವು ಅರ್ಥೈಸಿಕೊಂಡು ಅದನ್ನು ಮರುಸೃಷ್ಟಿ ಮಾಡುವುದು ಬಹುಷಃ ಅಸಾಧ್ಯ. ಹಾಗಾಗಿ ಗಿಡ ನೆಡುವುದು, ನಾವು ಸೃಷ್ಟಿಸಿದ ಪ್ರಾಕೃತಿಕ ಸಮಸ್ಯೆಗಳಿಗೆ ಪರಿಹಾರವಾಗಲಾರದು. ಏಕೆಂದರೆ ಈ ಯೋಜನೆ ಎಲ್ಲ ಜೀವಿಗಳ ಶ್ರೇಯವನ್ನು ಒಳಗೊಂಡ ಉಪಾಯವಲ್ಲ.

ಹಾಗಾದರೆ ಈ ಸಮಸ್ಯೆಗೆ ಪರಿಹಾರವೇನು?. ಬಹುಷಃ ಮನುಜ ‘ತಾನು’ ಎಲ್ಲದಕ್ಕೂ ಉತ್ತರ ಕಂಡುಹಿಡಿಯುತ್ತಾನೆ ಎಂಬುದು ಮನುಜನ ಅಹಂಕಾರ. ಪ್ರಕೃತಿಯ ವಿಷಯದಲ್ಲಿ ಅದಕ್ಕೆ ತನ್ನನ್ನು ತಾನು ಕಟ್ಟಿಕೊಳ್ಳುವ, ಕಂಡುಕೊಳ್ಳುವ ಸಾಮರ್ಥ್ಯವಿದೆ. ನಾವು ಪ್ರಕೃತಿಯ ಪ್ರಕ್ರಿಯೆಗಳಲ್ಲಿ ಮೂಗು ತೂರಿಸದಿದ್ದರೆ, ಅದು ಪ್ರಕೃತಿಯ ಉಳಿವಿಗೆ ನಾವು ಮಾಡುವ ದೊಡ್ಡ ಉಪಕಾರ. ಈ ಪ್ರಕೃತಿಯೆ ನಮ್ಮನ್ನು ರೂಪಿಸಿದ್ದು ಎಂಬುದನ್ನುನಾವು ಮರೆಯಬಾರದು. ಅಷ್ಟಕ್ಕೂ ನೂರು ಮರಗಳನ್ನು ಕಡಿದು ಹತ್ತು ಸಸಿಗಳನ್ನು ನೆಡುವುದು, ಕಡಿಯಲ್ಪಟ್ಟ ಮರ ಅದರ ಬೆಳವಣಿಗೆಗೆ ತೆಗೆದುಕೊಂಡ ಸಮಯ ಅದು ಬಳಸಿಕೊಂಡ ಪ್ರಾಕೃತಿಕ ಸವಲತ್ತುಗಳ ಮೌಲ್ಯವನ್ನು ನಾವು ಅವಮಾಣನಿಸಿದಂತೆ ಅಲ್ಲವೇ?. ಹಾಗಾಗಿ ಈ ಪ್ರಕೃತಿಯ ಬಗ್ಗೆ ನಮಗಿರುವ ಕಲ್ಪನೆ ಹಾಗೂ ಜ್ಞಾನ ಯಾವ ರೀತಿಯಲ್ಲೂ ಸಂಪೂರ್ಣವಲ್ಲ ಎಂಬುದನ್ನು ಅರಿತು ಮುನ್ನಡೆಯಬೇಕು.

9
ಮಾರ್ಚ್

ರಷ್ಯಾ-ಉಕ್ರೇನ್ ಕದನ: ಮಾನವ ಹಕ್ಕು ಹೋರಾಟಗಾರರು ಎಲ್ಲಿ ಅಡಗಿ ಕುಳಿತಿದ್ದಾರೆ?

– ರಾಘವೇಂದ್ರ ಅಡಿಗ ಎಚ್ಚೆನ್.

ಯುದ್ಧ

ಕಳೆದ ಒಂದು ವಾರದಿಂದ ಭಾರತ ಸೇರಿ ಜಗತ್ತಿನ ನಾನಾ ರಾಷ್ಟ್ರಗಳ ಜನರಲ್ಲಿ ಆತಂಕ, ದುಗುಡಕ್ಕೆ ಕಾರಣವಾಗಿರುವುದು ರಷ್ಯಾ-ಉಕ್ರೇನ್ ಯುದ್ಧ.  ಉಕ್ರೇನ್ ನ್ಯಾಟೋ ರಾಷ್ಟ್ರಗಳ ಜತೆ ಕೈಜೋಡಿಸಲಿದೆ, ಯುರೋಪಿಯನ್ ಯೂನಿಯನ್ ಜತೆಯಾಗಿ ತನ್ನ ಕಮ್ಯುನಿಸ್ಟ್ ಸಿದ್ಧಾಂತ ಆಧಾರಿತ ವ್ಯವಸ್ಥೆಯ ಪ್ರಭಾವದಿಂದ ದೂರವಾಗಲಿದೆ ಎಂಬ ಕಾರಣದಿಂದ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದೆ.  ರಷ್ಯಾ ಕಳುಹಿಸಿದ ಯುದ್ಧ ವಾಹನಗಳ ಮೇಲೆ *Z* ಸಂಕೇತವನ್ನು ರಷ್ಯಾ ಸೂಚಿಸಿದ್ದು, ಇದರ ಸೂಚನೆ ಎಂದರೆ 8  ಗಣರಾಜ್ಯಗಳನ್ನು ರಷ್ಯಾಕ್ಕೆ ಸೇರಿಸುವ ಮೂಲಕ ರಷ್ಯಾವನ್ನು ವಿಸ್ತರಿಸುವ ದೂರ ದೃಷ್ಠಿ ಹಾಗೂ ಮುಂದಾಲೋಚನೆ ಈ ಸೇನಾ ಕಾರ್ಯಾಚರಣೆಯ ಹಿಂದಿದೆ ಎನ್ನಲಾಗುತ್ತಿದೆ. ಎಂದರೆ ಇದರ ಪರಿಣಾಮ ಭವಿಷ್ಯದಲ್ಲಿ ಜಗತ್ತಿನ ಭೂಪಟವನ್ನೇ ಬದಲಾಯಿಸಲಿದೆ, ಕೆಲವೊಂದು ರಾಷ್ಟ್ರಗಳನ್ನು ಪ್ರಪಂಚದ ನಕಾಶೆಯಿಂದಲೇ ಅಳಿಸಿ ಹಾಕಲಾಗುತ್ತದೆ!

ಆದರೆ ಇದೀಗ ನಮ್ಮ ಮುಂದಿರುವ ಪ್ರಶ್ನೆ ಎಂದರೆ ಜಗತ್ತಿನಲ್ಲಿ ಶಾಂತಿ ನೆಲೆಗೊಳಿಸಿ ಎಲ್ಲವೂ ಸುಗಮವಾಗಿ ನಡೆಯುವಂತೆ  ನೋಡಿಕೊಳ್ಳುವ ಜವಾಬ್ದಾರಿಯೊಂದಿಗೆ ಹುಟ್ಟಿಕೊಂಡ ವಿಶ್ವಸಂಸ್ಥೆ ರಷ್ಯಾ-ಉಕ್ರೇನ್ ಯುದ್ಧ ವಿಷಯದಲ್ಲಿ ಏಕೆ ಗಟ್ಟಿ ನಿರ್ಧಾರವನ್ನು ತಾಳದೆ ಹೋಗಿದೆ?  ಹೌದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್-ರಷ್ಯಾ ಯುದ್ಧದ ವಿರುದ್ಧ ನಿರ್ಣಯ ತೆಗೆದುಕೊಳ್ಳಲಾಗಿದೆ.  ಉಕ್ರೇನ್‌ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ರಷ್ಯಾ ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಿ ವಿಶ್ವಸಂಸ್ಥೆ ಕೈಗೊಂಡ ನಿರ್ಣಯದ ಪರ ಒಂದು ಡಜನ್‌ಗೂ ಹೆಚ್ಚು ದೇಶಗಳ ರಾಯಭಾರಿಗಳು ದನಿ ಎತ್ತಿದ್ದಾರೆ. ಐದು ದಿನಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಉಕ್ರೇನ್‌ ಅಪಾರ ನಷ್ಟ ಅನುಭವಿಸಿದೆ. ಸಾವಿರಾರು ಅಮಾಯಕ ಜೀವಗಳು ಹಾರಿ ಹೋಗಿವೆ. “ಈ ಅನಾಹುತ ಇಲ್ಲಿಗೆ ಕೊನೆಗೊಳಿಸಿ. ಮನುಷ್ಯತ್ವದ ಕಡೆ ಹೆಜ್ಜೆ ಹಾಕಿ” ಎಂದು ವಿಶ್ವಸಂಸ್ಥೆ ಸಲಹೆ ನೀಡಿದೆ. ಅದರೆ ರಷ್ಯಾದಂತಹಾ ಬಲಿಷ್ಟ, ವಿಸ್ತರಣಾದಾಹ್ಹಿ, ಕಮ್ಯುನಿಸ್ಟ್ ಸಿದ್ದಾಂತದ ಪ್ರತಿಪಾದಕ ರಾಷ್ಟ್ರವೊಂದಕ್ಕೆ ಇಂತಹಾ ಕೇವಲ ಸಲಹೆ ಸೂಚನೆಗಳು ಸಾಕಾಗುತ್ತದೆಯೆ? ಒಂದೊಮ್ಮೆ ಈ ಯುದ್ಧದಲ್ಲಿ ಉಕ್ರೇನ್ ಸೋಲೊಪ್ಪಿದ್ದಾದರೆ ಭವಿಷ್ಯದಲ್ಲಿ ನ್ಯಾಟೋ ರಾಷ್ಟ್ರಗಳೂ ಸಹ ರಷ್ಯಾವನ್ನು ಎದುರಿಸಲಾರವು. ಅಲ್ಲದೆ ವಿಶ್ವಸಂಸ್ಥೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯವೂ ಇದೆ. ಒಟ್ತಾರೆ ಜಗತ್ತಿನ ಯಾವುದೇ ರಾಷ್ಟ್ರ ರಷ್ಯಾವನ್ನು ಮುಖಾಮುಖಿಯಾಗಿ ಎದುರಿಸಲು ವಿಫಲವಾಗಲಿದೆ.

ಇದಷ್ಟೇ ಅಲ್ಲದೆ ಜಗತ್ತಿನಾದ್ಯಂತ ಇರುವ ಮಾನವ ಹಕ್ಕು ಹೋರಾಟ(ಹಾರಾಟ)ಗಾರರು, ಬುದ್ದಿಜೀವಿಗಳು ರಷ್ಯಾ-ಉಕ್ರೇನ್ ನಡುವಿನ ಈ ಯುದ್ಧದ ಬಗ್ಗೆ ಏಕೆ ಯಾವ ಹೇಳಿಕೆಯನ್ನು ನೀಡುತ್ತಿಲ್ಲ? ಪ್ರತಿಭಟನೆ ನಡೆಸುತ್ತಿಲ್ಲ? ಭಾರತದಂತಹಾ ಸರ್ವಮತ ಸಹಬಾಳ್ವೆ ಇರುವ ದೇಶದಲ್ಲಿ ಅದೆಲ್ಲೋ ಒಂದು ಗುಂಪು ಹತ್ಯೆ ನಡೆದಿದೆ, ಇನ್ನೆಲ್ಲೋ ಗುಂಪುಗಳ ನಡುವೆ ಸಂಘರ್ಷ ನಡೆದಿದೆ ಎನ್ನುವ ಕಾರಣಕ್ಕೆ ಮಾನವ ಹಕ್ಕು ಉಲ್ಲಂಘನೆ, ಭಾರತದಲ್ಲಿ ಯಾವುದೂ ಸರಿಯಿಲ್ಲ ಎಂದು ಬೊಬ್ಬಿಡುವ ಜಗತ್ತಿನ ಪ್ರಚಂಡ ಮಾನವ ಹಕ್ಕು ಪ್ರತಿಪಾದಕರು ಇಂದು ಎಲ್ಲಿ ಹೋಗಿದ್ದಾರೆ? ರಷ್ಯಾ ಉಕ್ರೇನ್ ನ ಹಲವಾರು ಸೈನಿಕರನ್ನು ಮಾತ್ರವಲ್ಲದೆ ಅಮಾಯಕ ನಾಗರಿಕರ ಮೇಲೆ ಸಹ ದಾಳಿ ಮಾಡುತ್ತಿದೆ. ಈ ದಾಳಿಯ ನಡುವೆ ಕರ್ನಾಟಕದ ಹಾವೇರಿಯ ವೈದ್ಯ ವಿದ್ಯಾರ್ಥಿ ನವೀನ್ ಎನ್ನುವವ ಸಹ ದುರಂತ ಸಾವಿಗೆ ಈಡಾಗಿದ್ದಾನೆ. ಇಷ್ಟೆಲ್ಲಾ ಘಟಸುತ್ತಿದ್ದರೂ ಬುದ್ದಿಜೀವಿಗಳೆನಿಸಿಕೊಂಡವರು ಯಾರೂ ರಷ್ಯಾ ನಡೆಯನ್ನು ಟೀಕಿಸುವ ಮಾತನಾಡುತ್ತಿಲ್ಲ ಏಕೆ? ಕೇವಲ ನರೇಂದ್ರ ಮೋದಿ, ಕೇಂದ್ರ ಸರ್ಕಾರ ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸಬೇಕಿದೆಯೆ?


ಕಳೆದ ವರ್ಷಗಳಲ್ಲಿ “ಟೂಲ್ ಕಿಟ್” ಮೂಲಕ ಭಾರತದಲ್ಲಿ ಅಸಮಾನತೆ ಇದೆ, ಅಸಹಿಷ್ಣುತೆ, ಮಾನವ ಹಕ್ಕು ಉಲ್ಲಂಘನೆ ಸತತ ಆಗುತ್ತಿದೆ ಎನ್ನುತ್ತಿದ್ದ ಜಾಗತಿಕ ಹೋರಾಟಗಾರ್ತಿಯರಾರೂ ಇದೀಗ ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ತುಟಿ ಪಿಟಿಕೆನ್ನುತ್ತಿಲ್ಲ.  ಇದಷ್ಟೇ ಅಲ್ಲ ಕಳೆದ ತಿಂಗಳಲ್ಲಿ ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಕುರಿತು ವಿವಾದ ಏರ್ಪಟ್ಟ ಸಮಯದಲ್ಲಿ ಅಮೆರಿಕಾ, ಪಾಕಿಸ್ತಾನ ಸೇರಿ ಜಗತ್ತಿನ ನಾನಾ ರಾಷ್ಟ್ರಗಳ ನಾಯಕರು ಅಲ್ಲದೇ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮಲಾಲಾಳಂತಹಾ ವ್ಯಕ್ತಿಗಳು ಭಾರತದಲ್ಲಿ ಪರಿಸ್ಥಿತಿ “ಭಯಂಕರವಾಗಿದೆ” ಅಂತ ಅಂದಿದ್ದರು. ಆದರೆ ಇದೀಗ ಅವರಾರೂ ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಹಾಗೂ ಅದರಿಂದಾಗುತ್ತಿರುವ ಜೀವಹಾನಿ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ.


ಇದೆಲ್ಲದರಿಂದ ತಿಳಿದುಬರುತ್ತಿರುವುದೇನೆಂದರೆ ವಿಶ್ವದ ಬಲಾಡ್ಯ ರಾಷ್ಟ್ರಗಳು ತಾವೇನು ಮಾಡಿದರೂ ಅದೆಲ್ಲವೂ ಸರಿಯಾಗಿಯೇ ಇರುತ್ತದೆ. ಆದರೆ ಭಾರತದಂತ ಕೆಲವು ರಾಷ್ಟ್ರಗಳು ಮಾತ್ರ ಅವರ ಅಣತಿಯ ಪ್ರಕಾರವೇ ನಡೆಯಬೇಕು!  ಉದಾಹರಣೆಗಾಗಿ ಹೇಳುವುದಾದರೆ ರಷ್ಯಾ-ಉಕ್ರೇನ್ ಮೇಲೆ ದಾಳಿ ನಡೆಸಿದ್ದಂತೆ ಭಾರತವೇನಾದರೂ ಪಾಕಿಸ್ತಾನದ ಕರಾಚಿ, ಲಾಹೋರ್ ಮೇಲೆ ದಾಳಿ ನಡೆಸಿದ್ದರೆ ಆಗ  ಅಮೆರಿಕಾ ಸೇರಿ ಜಾಗತಿಕ ಶಕ್ತಿಗಳು ಹೀಗೆಯೇ ಸುಮ್ಮನೆ ಕುಳಿತಿರುತ್ತಿದ್ದವೆ?  ಖಂಡಿತಾ ಇಲ್ಲ. ಭಾರತದ ವಿರುದ್ಧ ವಿಷ ಕಾರುತ್ತಿದ್ದವು.

ಇನ್ನು ಇಂದಿನ ಯುದ್ಧ ಪರಿಸ್ಥಿತಿಯಲ್ಲಿ ಭಾರತ ತಟಸ್ಥ ಧೋರಣೆ ತಾಳಿದೆ. ಇದಕ್ಕೆ ಕಾರಣ ಕೂಡ ಇದೆ. ರಷ್ಯಾ ನಮ್ಮ ಅನಾದಿ ಕಾಲದ ಮಿತ್ರರಾಷ್ಟ್ರ.  ಅಂತಹಾ ದೇಶದ ವಿರುದ್ಧ ನಿಲುವು ತೆಗೆದುಕೊಳ್ಳುವುದು ಅಷ್ಟೇನೂ ಸುಲಭವಲ್ಲ. ಇನ್ನೊಂದು ಸಂಗತಿ ಎಂದರೆ ಭಾರತಕ್ಕೆ ಅಮೆರಿಕಾ ಸಹ ಮಿತ್ರರಾಷ್ಟ್ರವೇ ಆಗಿದ್ದರೂ ಅಮೆರಿಕಾದ ಭಾರತ ಪರ  ನಿಲುವು ಎಲ್ಲಾ ಕಾಲದಲ್ಲಿ ಏಕಪ್ರಕಾರವಾಗಿ ಇರುವುದಿಲ್ಲ.  ಹಾಗಾಗಿ ಇಂದು ಅಮೆರಿಕಾ ಮಾತುಕೇಳಿ ರಷ್ಯಾ ವಿರುದ್ಧ ಹೋದರೆ ನಾವು ಒಬ್ಬ ಆಪ್ತಮಿತ್ರನನ್ನೇ ಕಳೆದುಕೊಳ್ಳುತ್ತೇವೆ.  ಹಾಗೆಂದ ಮಾತ್ರಕ್ಕೆ ರಷ್ಯಾ ನಡೆಸಿರುವ ಈ ಯುದ್ಧಕ್ಕೆ ಭಾರತದ ಸಮ್ಮತಿ ಇದೆ ಎಂದೂ ಅರ್ಥವಲ್ಲ. ಭಾರತ ಪ್ರಧಾನಿ ರಷ್ಯಾ ಅಧ್ಯಕ್ಷ ಪುಟಿನ್ ಗೆ ಪದೇ ಪದೇ ಕರೆ ಮಾಡಿ ಯುದ್ಧ ನಿಲ್ಲಿಸುವ ಮನವಿ ಮಾಡುತ್ತಿದ್ದಾರೆ. ಅಲ್ಲದೆ ಉಕ್ರೇನ್‌ ನಲ್ಲಿ ಸಿಲುಕಿದ್ದ ನಮ್ಮ ದೇಶವಾಸಿಗಳನ್ನು ಮರಳಿ ಕರೆತರುತ್ತಿದ್ದಾರೆ.  ಆದರೆ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವಂತೆ ರಷ್ಯಾ ಮೇಲೆ ಭಾರತ ಒತ್ತಡ ಹಾಕುವುದು ಸಾಧ್ಯವಿಲ್ಲ. ಮತ್ತು ವಿಶ್ವಸಂಸ್ಥೆಯಲ್ಲಿಯೂ ಸಹ ಯುದ್ಧದ ವಿರುದ್ಧ ಮತ ಚಲಾವಣೆ ಅಸಾಧ್ಯ. ಏಕೆಂದರೆ ರಷ್ಯಾದಂತೆ ಉಕ್ರೇನ್ ನಮಗೆ ಹಳೇ ಮಿತ್ರನಲ್ಲ. ಇದೀಗ ತನ್ನ ಮೇಲೆ ರಷ್ಯಾ ಎಲ್ಲಾ ದಿಕ್ಕುಗಳಿಂದ ಆಕ್ರಮಣ ನಡೆಸಿದೆ. ನನ್ನ ಪರವಾಗಿ ರಷ್ಯಾ ಅಧ್ಯಕ್ಷರೊಂದಿಗೆ  ಮಾತನಾಡಿ ತಕ್ಷಣವೇ ಯುದ್ಧ ನಿಲ್ಲಿಸಲು ಮಧ್ಯ ಪ್ರವೇಶಿಸುವಂತೆ ಹಾಗೂ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧ ಬೆಂಬಲಿಸುವಂತೆ ಉಕ್ರೇನ್ ಸರ್ಕಾರವು ಭಾರತವನ್ನು ಅಂಗಲಾಚುತ್ತಿದೆ. ಆದರೆ ಇದೇ ದೇಶ ಈ ಹಿಂದೆ ಹಲವು ಬಾರಿ ಭಾರತದ ವಿರುದ್ಧ ನಿರ್ಣಯ ತೆಗೆದುಕೊಂಡ ಉದಾಹರಣೆಗಳು ನಮ್ಮ ಮುಂದಿದೆ.  1998ರಲ್ಲಿ ಅಂದಿನ ಆಟಲ್ ಬಿಹಾರಿ ವಾಜಪೇಯಿ ಸರ್ಕಾರ ‘ಆಪರೇಷನ್ ಶಕ್ತಿ’ ಹೆಸರಿನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ, ಪಾಕಿಸ್ತಾನ-ಭಾರತ ಯುದ್ಧ ಸಮಯದಲ್ಲಿ, ವಿಶ್ವಸಂಸ್ಥೆಯ ಭದ್ರಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯಲು ಭಾರತ ಪ್ರಯತ್ನಿಸುತ್ತಿದ್ದ ಸಮಯ, ಕಾಶ್ಮೀರ ವಿಷಯದಲ್ಲಿ ಸಹ ಉಕ್ರೇನ್ ಭಾರತದ ವಿರುದ್ಧ ನಿರ್ಣಯ ತೆಗೆದುಕೊಂಡಿದೆ. ಹೀಗಿರುವಾಗ ಇಂದು ಉಕ್ರೇನ್ ಪರ ಭಾರತ ನಿರ್ನಯ ತೆಗೆದುಕೊಳ್ಳಲಾಗುತ್ತದೆಯೆ?


ಒಟ್ಟಾರೆಯಾಗಿ ಹೇಳುವುದಾದರೆ ಯುದ್ಧ ಎಂದಿಗೂ ಒಳ್ಳೆಯದಲ್ಲ. ಮಾನವ ವಿಕಾಸದ ಇತಿಹಾಸದಲ್ಲಿ ಅಳಿಸಲಾಗದ ಕಠೋರ ಕಪ್ಪು ಕಲೆ ಎಂದರೆ ಅವು ಯುದ್ಧದ ಕಲೆಗಳು. ಹಾಗಾಗಿ ಇಂದೂ ಸಹ ಕೋಟ್ಯಾಂತರ ಜೀವಹಾನಿಗೆ ಪ್ರೇರಣೆಯಾಗಿರುವ ಯುದ್ಧ ತಕ್ಷಣ ನಿಲ್ಲಲೇಬೇಕು, ಜಗತ್ತು ಶಾಂತಿ ಸೌಹಾರ್ದತೆಯಿಂದ ನಡೆಯುವಂತಾಗಬೇಕು ರಷ್ಯಾ-ಉಕ್ರೇನ್ ಕದನ ಶೀಘ್ರವೇ ಮುಕ್ತಾಯವಾಗಲಿ, ಅದಕ್ಕಾಗಿ ನಮ್ಮೆಲ್ಲರ ಪ್ರಾರ್ಥನೆ ಇರಲಿ. 

9
ಫೆಬ್ರ

ಸಾಕ್ಷಿಪ್ರಜ್ಞೆ ಎಂದರೇನು?

ಎಂ .ಎ . ಶ್ರೀರಂಗ

ಬುದ್ಧಿಜೀವಿ ಎಂಬ ಪದದ ಜತೆಜತೆಯಲ್ಲೇ ಬರುವ ಈ ಸಾಕ್ಷಿಪ್ರಜ್ಞೆ ಎಂದರೇನು ಎಂದು ಯೋಚಿಸಲು ಪ್ರಾರಂಭಿಸಿದರೆ ವಿಸ್ಮಯವಾಗುತ್ತದೆ. ಎಲ್ಲರಿಗೂ ತಿಳಿದಂತೆ  ಸಾಕ್ಷಿ ಎಂಬ ಮಾತು ಕೇಳಿಬರುವುದು ಕೋರ್ಟಿನ ಕಲಾಪಗಳಲ್ಲಿ. ಯಾವುದೇ ಕೇಸು ನಿಲ್ಲಬೇಕಾದರೆ ಅದಕ್ಕೆ ತಕ್ಕ ಸಾಕ್ಷಿ ಬೇಕು. ಸಾಕ್ಷಿಯ ಅರ್ಥ ರುಜುವಾತು, ಕಣ್ಣಿನಿಂದ ನೋಡಿದವನು.  ಪ್ರಜ್ಞೆಯ  ಅರ್ಥ ಎಚ್ಚರ, ತಿಳುವಳಿಕೆ,ಬುದ್ಧಿ.  ಆದರೆ  ಈ ಎರಡೂ ಪದಗಳು ಸೇರಿ ಉದ್ಭವಿಸಿರುವ ಈ  ‘ಸಾಕ್ಷಿಪ್ರಜ್ಞೆ ‘ ಎಂದರೇನು ಎಂದು ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ. ಕೇವಲ ತಿಳುವಳಿಕೆಯಿಂದ ಒಂದು ಘಟನೆಯನ್ನು ನೋಡಿದವನು ಸಾಕ್ಷಿಪ್ರಜ್ಞೆಯವನು ಎಂದು ಹೇಳಲು ಸಾಧ್ಯವಿಲ್ಲ. ಆ ಘಟನೆಯನ್ನು ಆಯಾ ಕಾಲಕ್ಕೆ ತಕ್ಕಂತೆ ತಮ್ಮ ಲಾಭವನ್ನು ಗಮನದಲ್ಲಿಟ್ಟುಕೊಂಡು  ಅರ್ಥೈಸಿ ಹೇಳುವ ಚಮತ್ಕಾರಿಕ ಶಕ್ತಿಗೆ ಸಾಕ್ಷಿಪ್ರಜ್ಞೆ ಎಂದು ಹೇಳಬಹುದು. 

ಈಗ  ಬುದ್ಧಿಜೀವಿಗಳಿಗೆ ಇರುವ ಸಾಕ್ಷಿಪ್ರಜ್ಞೆ ಎಂಬ (ಬಹುಶಃ ಕನ್ನಡ ಸಾಂಸ್ಕೃತಿಕ ಲೋಕದಲ್ಲಷ್ಟೇ ಇರಬಹುದಾದ) ಸವಲತ್ತಿನ ಬಗ್ಗೆ ಹೇಳುವುದಾದರೆ ಅದಕ್ಕೆ ಕೊನೆಯಿಲ್ಲ ಮೊದಲಿಲ್ಲ. ಅದೊಂದು ತರಹ ಆಲ್ ಇಂಡಿಯಾ ಪರ್ಮಿಟ್ ಇರುವ  ವಾಹನದಂತೆ. ಮತ್ತೆ ಕೆಲವೊಮ್ಮೆ ವಿದೇಶದ ಪಾಸ್ಪೋರ್ಟ್ ಮತ್ತು ವೀಸಾ  ಸಹ ಅದಕ್ಕೆ ಸಿಗುವುದುಂಟು. ಭಾರತದ ಯಾವ ಮೂಲೆಯಲ್ಲಿ ಏನೇ ಅಚಾತುರ್ಯ ನಡೆಯಲಿ ಅದಕ್ಕೆ ಕಾರಣ ಏನು ಎಂದು ತನಿಖೆ ನಡೆಯುವ ಮೊದಲೇ ಈ  ಸಾಕ್ಷಿಪ್ರಜ್ಞೆ ಎಂಬ ವಿಶಿಷ್ಟ ಕಣ್ಣು, ಕಿವಿ ಮತ್ತು ಮಿದುಳು ಇರುವ ಬುದ್ಧಿಜೀವಿಗಳ ಪ್ರತಿಕ್ರಿಯೆ  ಸಿದ್ದವಾಗಿರುತ್ತದೆ. . ‘ ನಮ್ಮ ಸದ್ಯದ ರಾಜಕೀಯ ವ್ಯವಸ್ಥೆ ಸರಿಯಿಲ್ಲದಿರುವುದೇ ಇದಕ್ಕೆ ಕಾರಣ ಇದು ಬದಲಾಗದ ಹೊರತು ಪ್ರಯೋಜನವಿಲ್ಲ. ನಾಳೆ ನಾವು ಧರಣಿ ಕೂರುತ್ತೇವೆ. ಹಕ್ಕೊತ್ತಾಯ ಮಾಡುತ್ತೇವೆ’.  ( ಇಲ್ಲಿ ಸದ್ಯದ ರಾಜಕೀಯ ವ್ಯವಸ್ಥೆ ಅಂದರೆ ಇವರಿಗೆ ಅಪ್ರಿಯವಾದ ಪಕ್ಷ ಅಧಿಕಾರದಲ್ಲಿರುವುದು ಎಂದು ಅರ್ಥ). ಯಾರಾದರೂ  ಹಿಂದಿನ ಸರ್ಕಾರವಿದ್ದಾಗಲೂ ಇದೆ ರೀತಿ ನಡೆದಿತ್ತು. ಆದರೆ ಆಗ ನೀವು ಸುಮ್ಮನಿದ್ದಿರಲ್ಲ ಏಕೆ ಎಂದು ಕೇಳಿದರೆ ಏನಾದರೊಂದು  ಹೇಳಿ ಆ ಪ್ರಶ್ನೆಗೆ ನೇರ ಉತ್ತರಕೊಡದೆ  ಆಗಿನ ಸನ್ನಿವೇಶ ಮತ್ತು ಕಾಲವನ್ನು ಈಗಿನದಕ್ಕೆ ಹೋಲಿಸಬಾರದು ಎಂದು ನುಣುಚಿಕೊಳ್ಳುತ್ತಾರೆ.  ( ಕಾರಣ ಆಗ ಇದ್ದ ಸರ್ಕಾರ ಇವರಿಗೆ ಪ್ರಿಯವಾಗಿತ್ತು. ಇವರನ್ನು ಓಲೈಸುತ್ತಿತ್ತು ಅಷ್ಟೇ ಗೂಡಾರ್ಥ). ವಿದೇಶದಲ್ಲಿ ಸರ್ಕಾರ ಬದಲಾದರೆ ಆ ದೇಶದ ಪ್ರಜೆಗಳಿಗಿಂತ ಹೆಚ್ಚಾಗಿ ಈ ಸಾಕ್ಷಿಪ್ರಜ್ಞೆಗಳಿಗೆ ಸಂತೋಷ ಅಥವಾ ವ್ಯಸನವಾಗುತ್ತದೆ . ಅದಕ್ಕೊಂದು  ಪ್ರತಿಕ್ರಿಯೆ. ಹೀಗೆ ಬೆಳಗ್ಗೆ ಎದ್ದಾಗಿಲಿಂದ ರಾತ್ರಿ  ಮಲಗುವ ತನಕ ದೇಶ ವಿದೇಶದ  ವಿದ್ಯಮಾನಗಳ  ಬಗ್ಗೆಯೇ  ಇವರಿಗೆ ಚಿಂತೆ. 

ಇನ್ನು ಇವರ ಪ್ರಕಾರ ಕನ್ನಡ ಸಾಹಿತ್ಯ ಒಂದು ಹಂತದ ನಂತರ  ನಿಂತ ನೀರಾಗಿದೆ. ಯಾವುದೇ ಭಾಷಣವಿರಲಿ, ಚರ್ಚೆಯಿರಲಿ ಅಥವಾ ಲೇಖನ ಬರೆಯಲಿ ಇವರು ಪಟ್ಟಿ ಮಾಡಿರುವ ಒಂದಷ್ಟು ಜನ ಸಾಹಿತಿಗಳನ್ನು ಮತ್ತು ಅವರ ಅದದೇ ಕೃತಿಗಳನ್ನು ಉದಾಹರಿಸಲೇಬೇಕು. ಅವರಲ್ಲಿ ಹಲವರು ಈಗ ಇಲ್ಲ. ಉಳಿದರು ಬರೆಯುವುದನ್ನು ನಿಲ್ಲಿಸಿ ಬಹಳ ಕಾಲವಾಗಿದೆ. ಇವರುಗಳ ಓದು ಅಷ್ಟಕ್ಕೇ ನಿಂತುಹೋಗಿದೆಯೇ? ಇವರ ಪಟ್ಟಿಯಲ್ಲಿ ನಾನಾ ಕಾರಣಗಳಿಂದ ಸೇರದೇ ಹೋದ ಹಲವರು  ಉತ್ತಮ ಕೃತಿಗಳನ್ನು ಬರೆದಿದ್ದಾರೆ. ಅವರ ಉಲ್ಲೇಖ ಮಾಡುವುದೇ ಇಲ್ಲ. ಹೊಸಬರು ಜೀವನದ ನಾನಾ ಮಗ್ಗಲುಗಳನ್ನು ಅನ್ವೇಷಿಸುತ್ತಿದ್ದಾರೆ. ಯಾರಾದರೂ ಅಂತಹವರ ಬಗ್ಗೆ ಮಾತಾಡಿದರೆ, ಬರೆದರೆ ಅದು ವ್ಯಕ್ತಿ ಪೂಜೆ ಮತ್ತು ಅಂಧಾಭಿಮಾನ. ಅವರು ಮಾಡಿದ್ದೂ ಅದೇ ಅಲ್ಲವೇ ಅಂದರೆ ಅಲ್ಲ. ಕಾರಣ ಅದು ಸಾಕ್ಷಿಪ್ರಜ್ಞೆಯ ಮಾತು ಬರಹ. ಅಂದರೆ ಈ ಬುದ್ಧಿಜೀವಿಗಳು ನಿರ್ಧರಿಸಿದ ಒಂದಷ್ಟು ಜನರಿಗೆ ಮಾತ್ರ ನಮ್ಮ ದೇಶ, ಭಾಷೆ, ಸಮಸ್ಯೆ, ಇತ್ಯಾದಿಗಳ ಬಗ್ಗೆ ಮಾತಾಡುವ ಅಧಿಕಾರ ಇದೆ.  ಬೇರೆಯವರು ಅದು ಹಾಗಲ್ಲ ಹೀಗೆ ಎಂದು ಹೇಳಿದರೆ  ಇವರಿಗೆ ಅದು ಪ್ರಭುತ್ವವಾದಿ, ವಸಾಹತುಶಾಹಿ ನಿಲುವಾಗಿ ಕಾಣುತ್ತದೆ. 

ಸಾಕ್ಷಿಪ್ರಜ್ಞೆಯವರ ಇನ್ನೊಂದು ಗುಣ ಎಂದರೆ ಶಾಂತಿ, ಸಹನೆ ಮತ್ತು ಅಹಿಂಸೆಯ ಜತೆಜತೆಯಾಗೇ ಅಶಾಂತಿ, ಅಸಹನೆ ಮತ್ತು ಹಿಂಸೆಯನ್ನೂ ಕಾಲ ಕಾಲಕ್ಕೆ ತಕ್ಕಂತೆ ಬೆಂಬಲಿಸುವುದು. ನಕ್ಸಲಿಸಂ, ಮಾವೋವಾದಿಗಳನ್ನು ಸರಕಾರ ನಿಗ್ರಹಿಸಿದರೆ ಅದು ಇವರಿಗೆ ಮಾನವ ಹಕ್ಕುಗಳ ದಮನವಾಗಿ ಕಾಣುತ್ತದೆ. ಆದರೆ ನಕ್ಸಲರಿಂದ, ಮಾವೋವಾದಿಗಳಿಂದ ಪ್ರಾಣ ಕಳೆದುಕೊಂಡವರ ಬಗ್ಗೆ ಇವರು ಮಾತಾಡುವುದಿಲ್ಲ. ಸಾಕ್ಷಿಪ್ರಜ್ಞೆಯ ಮುಂದಾಳುಗಳ ಪ್ರಕಾರ ನಕ್ಸಲ್ ಮತ್ತು ಮಾವೋವಾದಿಗಳು ಗ್ರಾಮ ಸ್ವರಾಜ್ಯ ಸ್ಥಾಪಿಸುವ ಮತ್ತು ಆ ಮೂಲಕ ಜಾಗತೀಕರಣ ಮತ್ತು ವಸಾಹತುಶಾಹಿಗಳಿಂದ ನಮ್ಮ ಪ್ರಕೃತಿದತ್ತವಾದ ಅಮೂಲ್ಯ ಸಂಪನ್ಮೂಲಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ.  ನಾವು ಅವರಿಗೆ ಬೆಂಬಲ ಕೊಡಬೇಕು. ಹೀಗೆ ಹೊರಗಿದ್ದುಕೊಂಡೇ ನಾನಾ ರೀತಿಯಿಂದ ಬೆಂಬಲ ಕೊಟ್ಟ ಆರೋಪದ ಮೇಲೆ ಕೆಲವರನ್ನು ಸರ್ಕಾರ ಬಂಧಿಸಿದಾಗ ನಮ್ಮ ಕನ್ನಡದ  ಕೆಲವು ಬುದ್ಧಿಜೀವಿಗಳು ಆ ಬಂಧಿತರಿಗೆ ಬೆಂಬಲ ಕೊಡಲು ಮತ್ತು ಸರ್ಕಾರದ ನಡೆಯನ್ನು ಟೀಕಿಸಲು ನಾನು ನಗರ ನಕ್ಸಲ(ಅರ್ಬನ್ ನಕ್ಸಲ್) ಎಂಬ ಬೋರ್ಡ್ ಅನ್ನು ಕೊರಳಿಗೆ ನೇತುಹಾಕಿಕೊಂಡು ನಗರದ ರಸ್ತೆ ಬದಿಯಲ್ಲಿ ನಿಂತುಕೊಂಡು ಜನರ ಮತ್ತು ಸುದ್ದಿ ಮಾಧ್ಯಮಗಳ ಗಮನ ಸೆಳೆದರು. ಅದು ಅವರ ಸಾಕ್ಷಿಪ್ರಜ್ಞೆಯ ಪ್ರತೀಕ. ಆ ಮೂಲಕ ಒಂದಷ್ಟು ದಿನ ಇವರುಗಳ ಬಗ್ಗೆಯೇ ಚರ್ಚೆ. 

ಸಾಕ್ಷಿಪ್ರಜ್ಞೆಯ ಮುಂದಾಳುಗಳು ಕನ್ನಡ ಸಾಹಿತ್ಯ ಪರಿಷತ್ತನ್ನು ಮತ್ತು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಿಗ್ಗಾಮುಗ್ಗಾ ಟೀಕಿಸಿದರು. ಕಾರಣ ಅದು ಸಂತೆ, ಜಾತ್ರೆ ಮತ್ತು ಸರ್ಕಾರದ ಕೃಪಾಪೋಷಿತ ನಾಟಕ ಮಂಡಳಿಯಾಗಿ ಹೋಗಿದೆ ಎಂದು. ಅದಕ್ಕೆ ಪರ್ಯಾಯವಾಗಿ ಬಂಡಾಯ ಸಾಹಿತ್ಯ ಸಮ್ಮೇಳನವನ್ನು ಸಹ ನಡೆಸಿದರು. ಅದಕ್ಕೊಂದು ಸೈದ್ಧಾಂತಿಕ ಕಾರಣ ಕೊಟ್ಟರು. ನಂತರದಲ್ಲಿ ಅವರೇ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದರು ಮತ್ತು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆದರೂ. ಆಗ ಅವರ ಸಾಕ್ಷಿಪ್ರಜ್ಞೆ ಕಾಡಲಿಲ್ಲ. ಕಾಲಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವುದು ಸಾಕ್ಷಿಪ್ರಜ್ಞೆಯ ಇನ್ನೊಂದು ಮುಖ. ಅದೇ ರೀತಿ ರಾಜಕೀಯವನ್ನು ಕಂಡರೆ ಉರಿದುಬೀಳುವ ಇವರು ವಿಧಾನ ಪರಿಷತ್ತಿನ ಸದಸ್ಯರೂ ಆದರು. ವ್ಯವಸ್ಥೆಯಿಂದ ದೂರವಿದ್ದಾಗ ಟೀಕಿಸುವುದು ನಂತರದಲ್ಲಿ ತಾವೇ ಅದರ ಭಾಗವಾದಾಗ ಸರ್ಕಾರಿ ಸವಲತ್ತುಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಅನುಭವಿಸುವುದು ಸಾಕ್ಷಿಪ್ರಜ್ಞೆಯ ಮತ್ತೊಂದು ಮುಖ. ಸರ್ಕಾರ ಇಂತಹವರನ್ನು ಯಾವುದಾದರೂ ಅಕಾಡೆಮಿಗೆ ಅಥವಾ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಿದರೆ ಅವರ ಅಭಿಮಾನಿಗಳು ಮತ್ತು ಹಿಂಬಾಲಕರು ‘ಇಂತಹ ಗೌರವ ಅವರಿಗೆ ಕೊಟ್ಟು ಸರ್ಕಾರ ತನ್ನನ್ನು ತಾನೇ ಗೌರವಿಸಿಕೊಂಡಿದೆ ಮತ್ತು ಅವರಿಂದ ಆ ಸ್ಥಾನದ ಘನತೆ ಹೆಚ್ಚಾಗುತ್ತದೆ’ ಎಂದು ಹೇಳಿಕೆ ಕೊಡುತ್ತಾರೆ. ತಮಗೆ ಆಗದವರು ಸ್ಥಾನ ಪಡೆದರೆ ಪಕ್ಷಪಾತ ಮಾಡಿದ ಸರ್ಕಾರದ ನಡತೆ ಇವರ ಗುಂಪಿನವರಿಗೆ ಸಿಕ್ಕಾಗ ನಿಷ್ಪಕ್ಷಪಾತವಾಗಿ ನಡೆದುಕೊಂಡು ಅರ್ಹರನ್ನು ಗೌರವಿಸುವ ಉತ್ತಮ ಪರಂಪರೆಯದ್ದಾಗಿ ಕಾಣುತ್ತದೆ. 

ಆರು ವರ್ಷಗಳ ಹಿಂದೆ ‘ನಮ್ಮ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆಯಾಗುತ್ತಿದೆ ಮತ್ತು ಅಸಹಿಷ್ಣುತೆ’ ಜಾಸ್ತಿಯಾಗಿದೆ ಎಂದು ‘ಪ್ರಶಸ್ತಿ ವಾಪಸ್’ ಎಂಬ ನಾಟಕ ನಡೆಯಿತು. ಕೆಲವು ಸಾಹಿತಿಗಳು ಕೇಂದ್ರ  ಸಾಹಿತ್ಯ ಅಕಾಡೆಮಿ ಕೊಟ್ಟ ಪ್ರಶಸ್ತಿಯನ್ನು ಹಿಂತಿರುಗಿಸಿದರು ಮತ್ತೆ ಕೆಲವರು ಆ ಅಕಾಡೆಮಿಯ  ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟರು. ಅದೇ ರೀತಿ ಕೇಂದ್ರ ಸರ್ಕಾರಾದ ವಿವಿಧ ಸಂಸ್ಥೆಗಳಿಂದ ಕೆಲವರು ಹೊರಬಂದರು. ಈ ಹಿಂದೆಯೂ ಅವರು ಹೇಳಿದ ಅಸಹಿಷ್ಣುತೆ ಇತ್ತು. ಆದರೆ ಆಗ ಅವರ ಸಾಕ್ಷಿಪ್ರಜ್ಞೆ ರಜೆ ತೆಗೆದುಕೊಂಡಿತ್ತು.  ಸುಮಾರು ವರ್ಷಗಳಿಂದ ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತಿದ್ದ ತಮ್ಮ ದರ್ಬಾರನ್ನು ಕೆಲವರು ಪ್ರಶ್ನಿಸಿದ್ದೇ ಇದಕ್ಕೆ ಕಾರಣ ಎಂಬುದು ಈಗ ಗುಟ್ಟಾಗಿಯೇನೂ ಉಳಿದಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ವಕ್ತಾರರಾದ ಇವರಿಗೆ ಭಿನ್ನಾಭಿಪ್ರಾಯ ಕಂಡರೆ ಆಗದು.

ಕೊನೆಯದಾಗಿ ಈ ಸಾಕ್ಷಿಪ್ರಜ್ಞೆಯ ವಕ್ತಾರರಿಗೊಂದು ಮಾತು. ನಾವೇ ಇದೆಲ್ಲವನ್ನೂ ಮೊದಲ ಬಾರಿಗೆ ಮಾಡುತ್ತಿದ್ದೇವೆ ಎಂಬ ಒಣ ಜಂಭವನ್ನು ಬಿಡಿ. ನಮ್ಮಿಂದಲೇ ಪ್ರತಿದಿನ ಸೂರ್ಯ ಚಂದ್ರರು ಬೆಳಕು ನೀಡುತ್ತಿದ್ದಾರೆ ಎಂದು ಹೇಳಿದರೆ ಯಾರೂ ನಂಬುವುದಿಲ್ಲ. ನಿಮ್ಮ ಭ್ರಮೆಗಳಿಂದ ಹೊರಗೆ ಬನ್ನಿ. ನಿಮ್ಮ ಬಣ್ಣ ಬಯಲಾಗಿದೆ. ನಿಮ್ಮ ಸಾಕ್ಷಿಪ್ರಜ್ಞೆಯ ಹಂಗಿಲ್ಲದೆ ಈ ಪ್ರಪಂಚ ನಡೆದಿದೆ, ಈಗಲೂ ನಡೆಯುತ್ತಿದೆ ಮತ್ತು ಮುಂದೂ ನಡೆಯುತ್ತದೆ. 

8
ಫೆಬ್ರ

ಬುದ್ಧಿಜೀವಿ ಮತ್ತು ಸಾಕ್ಷಿ ಪ್ರಜ್ಞೆ ಎಂಬ ಮಾಯಾಲೋಕ (ಪೀಠಿಕೆ )

– ಎಂ. ಎ . ಶ್ರೀರಂಗ

ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಬುದ್ಧಿಜೀವಿ ಮತ್ತು ಸಾಕ್ಷಿಪ್ರಜ್ಞೆ ಎಂಬ ಪದಗಳು ಚಾಲ್ತಿಗೆ ಬಂದಿದ್ದು ನವ್ಯಸಾಹಿತ್ಯ ಮತ್ತು ವಿಮರ್ಶೆ ಭದ್ರವಾಗಿ ಬೇರೂರಿದ 1970ರ ಮಧ್ಯಭಾಗದಲ್ಲಿ. ಈ ವಿಶಿಷ್ಠ ಪದದ ಮಾತಾಪಿತೃಗಳು ಕನ್ನಡದ ನವ್ಯ ಸಾಹಿತಿಗಳು ಮತ್ತು ವಿಮರ್ಶಕರು. ಆಗ ಇವರುಗಳಲ್ಲಿ ಕೆಲವರಿಗೆ ಬುದ್ಧಿಜೀವಿಗಳ ಒಂದು ಪಟ್ಟಿ ತಯಾರಿಸಿ ತಮ್ಮ ಮುಂದಿನ ಪೀಳಿಗೆಗೆ ಅನುಕೂಲ ಮಾಡಿಕೊಡುವ ಉಮೇದು ಹುಟ್ಟಿತು. ನವ್ಯ ಸಾಹಿತ್ಯ ಎಂಬ ಪಂಥ (ಗುಂಪು) ಬರುವುದಕ್ಕಿಂತ ಮುಂಚೆ ಇದ್ದ ನವೋದಯ ಹಾಗು ಪ್ರಗತಿಶೀಲ ಸಾಹಿತಿಗಳನ್ನು ಸೇರಿಸಿಕೊಂಡು ಬುದ್ಧಿಜೀವಿ ಎಂದರೆ ಯಾರು? ಅವರ ಗುಣಲಕ್ಷಣಗಳು ಹೇಗಿರುತ್ತವೆ? ಹೇಗಿರಬೇಕು? ಯಾವ ವಿಷಯವನ್ನು ಯಾವ ಕಾಲದಲ್ಲಿ ವಿರೋಧಿಸಬೇಕು? ಯಾವಾಗ ವಿರೋಧಿಸಬಾರದು? ಇವರುಗಳ ಸಾಹಿತ್ಯ ಪ್ರಗತಿಪರವೊ ವಿರೋಧವೋ? ಎಂಬುದರ ಬಗ್ಗೆ ಚರ್ಚೆ ನಡೆದು ಕೊನೆಗೂ ಒಂದು ಬುದ್ಧಿಜೀವಿ ಮತ್ತು ಸಾಕ್ಷಿ ಪ್ರಜ್ಞೆಯ ಸಾಂಸ್ಕೃತಿಕ ಸಂವಿಧಾನ ತಯಾರಾಯಿತು.

ಆಗ ನಮ್ಮ ಬಹುಪಾಲು ಹಿರಿಯ ಸಾಹಿತಿಗಳು ಈ ಸಾಂಸ್ಕೃತಿಕ ಸಂವಿಧಾನದಲ್ಲಿ ನಿರೂಪಿಸಲ್ಪಟ್ಟ ನಿಯಮಾನುಸಾರ ಅರ್ಹತೆ ಪಡೆಯದ ಕಾರಣ ಬುದ್ಧಿಜೀವಿ ಎಂಬ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಹೊರಗುಳಿಯಬೇಕಾಯಿತು. ಇನ್ನು ಕೆಲವರನ್ನು ನಿರ್ದಿಷ್ಠವಾಗಿ ಇವರು ಪ್ರಗತಿ ಪರರೊ ವಿರೋಧಿಗಳೋ ಎಂದು ನಿರ್ಧರಿಸುವಲ್ಲಿ ಗೊಂದಲ ಮೂಡಿ ಅಮಾನತ್ತು ಮಾಡಿ ಅವರನ್ನು ಬುದ್ಧಿಜೀವಿಗಳು ಹೌದೋ ಅಲ್ಲವೋ ಎಂದು ನಿರ್ಧರಿಸುವ ಕೆಲಸವನ್ನು ತಮ್ಮ ಮುಂದಿನ ಪೀಳಿಗೆಯವರು ಮಾಡಲಿ ಎಂದು ಬಿಟ್ಟುಬಿಟ್ಟರು. ಎಪ್ಪತ್ತರ ದಶಕದ ಹೊತ್ತಿಗಾಗಲೇ ಸಾಕಷ್ಟು ವಯಸ್ಸಾಗಿದ್ದ ಹಿರಿಯ ಸಾಹಿತಿಗಳು ಯಾವ ಪ್ರತಿಭಟನೆಯನ್ನು ಮಾಡದೆ ತಾತ, ತಮ್ಮ ಮೊಮ್ಮಕ್ಕಳ ಆಟ ನೋಡುವಂತೆ ನೋಡಿ ನಕ್ಕು ಸುಮ್ಮನಾದರು. ದೇಹದಲ್ಲಿ ಇನ್ನೂ ಕಸುವಿದ್ದವರು ಪ್ರತಿಭಟಿಸಿದರು. ಮತ್ತೆ ಕೆಲವರು ಈ ಬುದ್ಧಿಜೀವಿಗಳ ಸಂವಿಧಾನವನ್ನೇ ನಿರ್ಲಕ್ಷಿಸಿದರು. ಆಗ ಈ ಬುದ್ಧಿಜೀವಿಗಳಿಗೆ ತಮ್ಮ ಪಂಥ ಪ್ರಚಾರಕ್ಕೆ ತಮ್ಮದೇ ಒಂದು ಸಾಹಿತ್ಯಿಕ ಪತ್ರಿಕೆಯಿದ್ದರೆ ಉತ್ತಮ ಎನಿಸಿತು. ಅದನ್ನೂ ಮಾಡಿದರು. ತಮ್ಮ ತುತ್ತೂರಿಯನ್ನು ತಾವೇ ಊದಿಕೊಂಡರು. ಕಾಲ ಕಳೆದಂತೆ ಇವರಲ್ಲೇ ಬಿರುಕು ಹುಟ್ಟಿ ದಿನ ಬೆಳಗಾದರೆ ಜಾತಿ, ಮತ, ವೈಯಕ್ತಿಕ ವಿಷಯಗಳನ್ನು ಹಿಡಿದುಕೊಂಡು ಪರಸ್ಪರ ಕೆಸರೆರಚಾಟ ಪ್ರಾರಂಭಿಸಿದರು. ಇದು ನಮ್ಮ ಬುದ್ಧಿಜೀವಿಗಳ ಪೂರ್ವಾಶ್ರಮದ ಕಥೆ.

ಇಷ್ಟು ಪ್ರಸ್ತಾವನೆಯಿಂದ ಬುದ್ಧಿಜೀವಿಗಳು ಎಂದರೆ ಸಾಹಿತಿಗಳು ಮಾತ್ರ ಇರುವ ಒಂದು ಸಾಂಸ್ಕೃತಿಕ ಕೂಟ ಎಂದು ಯಾರು ಬೇಕಾದರೂ ಊಹಿಸಬಹುದು. ಅದು ನಿಜವೂ ಆಗಿದ್ದೇ ನಮ್ಮ ಕಾಲದ ದುರಂತ. ಇವರುಗಳಿಗೆ ಗೊತ್ತಿಲ್ಲದ ವಿಷಯ ಈ ಪ್ರಪಂಚದಲ್ಲೇ ಇಲ್ಲ. ಗುಂಡು ಸೂಜಿಯಿಂದ ಹಿಡಿದು ರಾಕೆಟ್ ಸೈನ್ಸ್ ತನಕ ಯಾವ ವಿಷಯ ಕೇಳಿ ಇವರಲ್ಲಿ ಉತ್ತರವಿದೆ. ಇದೇ ಕಾರಣದಿಂದ ಸರ್ಕಾರ ಯಾವ ಕೆಲಸ ಮಾಡಲು ಹೊರಟರೂ ಇವರ ಸಲಹೆ ಪಡೆಯಲೇಬೇಕು. ನೆಲ, ಜಲ, ಭಾಷೆ ಯಾವ ವಿಷಯದ ಸಮಿತಿಯಿರಲಿ, ಅದರಲ್ಲಿ ಇವರಿಗೊಂದು ಸ್ಥಾನ ಖಾಯಂ. ಹಾಗಾದರೆ ವೈದ್ಯ, ವಕೀಲ, ಇಂಜಿನೀಯರ್, ಮುಂತಾದ ವೃತ್ತಿಗಳಲ್ಲಿ ಇರುವವರು ಬುದ್ಧಿಜೀವಿಗಳಲ್ಲವೇ? ಅಲ್ಲ ಎಂದವರಾರು? ದಿನನಿತ್ಯ ವಾಹನ ನಡೆಸುವ ಡ್ರೈವರ್ ಸಹ ಬುದ್ಧಿಜೀವಿಯೇ. ಹಾಗಾದರೆ ಈ ಬುದ್ಧಿಜೀವಿಗಳ ಸಂವಿಧಾನಕ್ಕೆ ಕಳೆದ ಐವತ್ತು ವರ್ಷಗಳಲ್ಲಿ ಏನೂ ತಿದ್ದುಪಡಿಗಳೇ ಆಗಿಲ್ಲವೇ? ಆಗಿದೆ. ತಮ್ಮ ಕೂಟದ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ಇವರು ಒಂದು ತಂತ್ರ ಹೂಡಿದ್ದಾರೆ. ಸಿನಿಮಾ, ನಾಟಕ, ಪತ್ರಿಕೋದ್ಯಮ, ರಾಜಕೀಯ, ವಕೀಲರು,ಸಾಮಾಜಿಕ ಕಾರ್ಯಕರ್ತರು ಹೀಗೆ ಯಾವ ರಂಗದ ಯಾರು ಬೇಕಾದರೂ ಈಗ ಬುದ್ಧಿಜೀವಿಯಾಗಬಹುದು. ಮುಖ್ಯವಾದ ವಿಷಯವೆಂದರೆ ಏನಾದರೊಂದು ವಿವಾದ ಹುಟ್ಟಿಸುವ ಮಾತಾಡಿ ಅಥವಾ ಬರೆದು ಪ್ರಕಟಿಸಿ ಚಾಲ್ತಿಯಲ್ಲಿರಬೇಕಷ್ಟೆ.

ಈಗಂತೂ 24×7 ಸುದ್ದಿವಾಹಿನಿಗಳ ಕಾಲ. ಅಲ್ಲಿ ಯಾವುದೇ ಚರ್ಚೆ ಇರಲಿ ಈ  ಬುದ್ದಿಜೀವಿಗಳ  ಕೂಟದ ಒಬ್ಬ ಸದಸ್ಯರ ಹಾಜರಿ ಖಾತರಿ. ಈಗ ಒಂದೆರೆಡು ವರ್ಷದಿಂದ ಕೋವಿಡ್ ಕಾರಣದಿಂದಲೋ ಏನೋ  ಮಂಕಾಗಿದ್ದ ಬುದ್ಧಿಜೀವಿಗಳಿಗೆ ಕಳೆದ ಹತ್ತು ಹದಿನೈದು ದಿನಗಳಿಂದ ಹೊಸ ವಿಷಯ ಸಿಕ್ಕಿದೆ. ಅದು ಮಾತಾಡುವಾಗ ಲಯ 

ತಪ್ಪುವುದು ಒಳ್ಳೆಯದೋ ಕೆಟ್ಟದ್ದೋ? ಒಳ್ಳೆಯದು ಎಂದು ಬುದ್ಧಿಜೀವಿಗಳು ಈ  ಹಿಂದೆ ನಮ್ಮ  ಹಿರಿಯರು ಯಾವಾಗ ಹೇಗೆ ಲಯ ತಪ್ಪಿ ನಡೆದು ಮಾತಾಡಿ ದೇಶಕ್ಕೆ, ಸಮಾಜಕ್ಕೆ ಒಳಿತು ಮಾಡಿದ್ದಾರೆ ಎಂದು ಸೋದಾಹರಣವಾಗಿ ಉತ್ತರಕೊಟ್ಟಿದ್ದಾರೆ. ಹಾಗಾಗಿ ಈಗ ಯಾರು ಬೇಕಾದರೂ ಲಯ ತಪ್ಪಿ ಮಾತಾಡಿ ನಂತರ ಎದುರಾಗಬಹುದಾದ ಸಿವಿಲ್ ದೂರುಗಳಿಂದ ಪಾರಾಗಬಹುದು. ಇದು ತಮಾಷೆ ಎನಿಸಬಹುದು. ಆದರೆ ವಾಸ್ತವ ಸ್ಥಿತಿ. ಬುದ್ಧಿಜೀವಿಗಳಿಗೆ ಈ ಅಧಿಕಾರ ಕೊಟ್ಟವರು ಯಾರು ಎಂದು ಯಾರಾದರೂ ಕೇಳಿದರೋ ಬಂತು ಕಷ್ಟ. ಆಗ ಕೇಳಿದವರು ಪುರೋಹಿತಶಾಹಿ, ಮನುವಾದಿ, ಬಲಿತ ಜಾತಿವಾದಿ ಮತ್ತು ಮುಖ್ಯವಾಗಿ  ನಮ್ಮ ದೇಶದ ಸಂವಿಧಾನದತ್ತವಾದ ಮಾತಾಡುವ ಹಕ್ಕನ್ನು ಕಸಿದುಕೊಂಡ ನಿರಂಕುಶವಾದಿ ಎಂಬ ನಾನಾ  ಆರೋಪಗಳನ್ನು ಎದುರಿಸಬೇಕಾಗುತ್ತದೆ. 

ನಮ್ಮ ರಾಜ್ಯ/ದೇಶದ ಚುನಾವಣೆಗಳ ಕಾಲ ಬಂತೆಂದರೆ ಅದು ಬುದ್ಧಿಜೀವಿಗಳಿಗೆ ಸುಗ್ಗಿಯ ಕಾಲ.  ಯಾವ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಟಿವಿ ಚರ್ಚೆಗಳಲ್ಲಿ ಭಾಗವಹಿಸಿ ನಿರ್ಧರಿಸುವವರು ಇವರುಗಳೇ . ಹುಮ್ಮಸ್ಸು ಇದ್ದವರು ತಾವೇ ಪಕ್ಷೇತರರಾಗೋ ಇಲ್ಲ ತಮಗೆ ಟಿಕೆಟ್ ಕೊಟ್ಟ  ಪಕ್ಷದಿಂದಲೋ ಚುನಾವಣೆಗೆ ನಿಂತಿದ್ದ ಉದಾಹರಣೆಗಳೂ ಇವೆ.  ಆದರೆ ಇವರುಗಳು ಟಿವಿ ಚರ್ಚೆಗಳಲ್ಲಿ ನಿರ್ಧರಿಸಿದ ರಾಜಕೀಯ ಪಕ್ಷ ಅಧಿಕಾರಕ್ಕೆ ಬರದೇ, ತಾವೂ  ಠೇವಣಿ ಕಳೆದು ಕೊಂಡು ನಿರಾಶರಾಗಿ  ಈ ದೇಶಕ್ಕೆ ಭವಿಷ್ಯವಿಲ್ಲ ಎಂದು ಕೊರಗಿ ಮಂಕಾಗಿರುತ್ತಾರೆ . ಆದರೆ ಅದು ತಾತ್ಕಾಲಿಕ ಅಷ್ಟೇ. ಮತ್ತೆ ಇವರೋ, ಇವರ ಕೂಟದ ಸದಸ್ಯರಲ್ಲಿ ಯಾರಾದರೊಬ್ಬರು ಮಾತಾಡುವಾಗ ಲಯ ತಪ್ಪುತ್ತಾರೆ. ಮತ್ತೆ ಬುದ್ಧಿಜೀವಿಗಳು ಎಂದಿನಂತೆ ಹುರುಪಿನಿಂದ ತಮ್ಮ ಲಯಕ್ಕೆ ಮರಳುತ್ತಾರೆ. ಇದು ಕೊನೆಯಿಲ್ಲದ ಪಯಣ. 

—(ಮುಂದಿನ ಭಾಗದಲ್ಲಿ—ಸಾಕ್ಷಿಪ್ರಜ್ಞೆ  ಎಂದರೇನು.)

1
ಫೆಬ್ರ

VEERA BALLALA III – GREAT VISIONARY

DR SANJAY SUBBAIAH
MS ENT CENTRE

There are certain periods of Indian history which have been styled dark, because of the lack of objective analysis of those periods. One such period is the period of the Hoysalas.

Savarkar wrote of history …to depict as far as possible the feelings, motives, emotions and actions of the actors themselves whose deed he aims to relate….. We ought to read history, not with a view to find out the best excuse perpetuate the old strife and stress, bickering and bloodsheds whether in the name of our blessed motherland, of our Lord God, that divided man from man and race from race, but precisely for the contrary reason of finding out the root causes that contributed to, and the best means to the removal of that stress and strife, of those bickering and bloodsheds, so that man maybe drawn towards man because he is man, the child of common father God”.

The Hoysala’s have been overshadowed by the Chalukyas who preceded them and the Vijayanagara Empire which followed them. Their period was marked by numerous invasions from north. As they plotted and fought of these invasions, their rule saw tremendous development in art, architecture, religion and literature. The various temples with deep and ornate carvings from base to roof are just one example of their accomplishments.They were also great military strategists, like Veera Ballala III [1292 – 1342].

Veera Ballala III, at best gets mentioned as the last king of the Hoyasalas.At that time Muhammed Bin Tughluq led numeroussuccessful expeditions into the Deccan region. He appointed governors to rule over his annexed kingdoms. Somewhere around late 1320’s he had established Sultanates in Devagiri, Warrangal and Madurai. In between these three Sultanates was the kingdom of Veera Ballala III who had been defeated and his capital Dwarasamudra plundered.

Historian William Coelho states “…the defeat of Veera Ballal III made him realize of the need of establishing peace among the Hindu kings. He therefore assumed the powers of a great leader, travelling from place to place, to mobilize the forces and to enlist the sympathy and assistance of the numerous principalities scattered over the whole of South India… He gave greater rights and sometimes partial independence to his minister, generals and feudatories…Ballala relaxed his administrative control over his empire in order that he may be able to assume military leadership of almost all Hindu kingdoms of the south, sort of a temporary confederacy”.

 William Coelhaquotes Firishta … Billala Dew conveyed a meeting of his kinsmen and resolved first to secure the forts of his own country and then to move his seat of government to the mountains. Krishna Naig of Wurungole promised on his part also that when their plans were ripe for execution, to raise all the Hindoos of Wurungole and Tulingana and put himself at their head……Bilal Dew accordingly, built a strong city upon the frontiers of his dominions and called it after his son Beeja… Beejanuggur.He then raised an army and put part of it under the command of Krsihna Naik who reduced Wurrangole and compelled Immad-ool-Mulg the governor to retreat to Dowlatabad”

Veera Ballala III after having secured his northern frontiers appoints Harihara I as Mahamandaleshvara around 1336. The fact that there are so many stories about the origins of Vijayanagar brothers Harihara and Bukka shows that they were not from any royal family. Historian Rev H Heras, who analyzed various epigraphic inscriptions claims that the Vijayanagara kings were the feudatories of Veera Ballal III, and were appointed by him. Heras also claims that Ballala III built the city of Vira Vijaya Virupakshapura which later became Vijayanagara.

Finally, Veera Ballala III marches south to evict the last Southern Sultanate in Madurai. Unfortunately, he is martyred in the ensuing battle. The Vijayanagara army returns defeats the Sultan of Madurai and fulfills Veera Ballal III’s dream of establishing a Hindu kingdom in the South.

Historian RC Majumdar characterizes it as a national revolt backed by a regular army. Why did Veera Ballala III appoint Harihara and not any of his sons? Did he choose the most capable chieftain? Whatever the reason this was a masterstroke. Thus, politically Vijayanagar empire is a continuation of the great Hoyasalas.