ದೇಶವನ್ನು ಆತಂಕಕ್ಕೀಡು ಮಾಡಿರುವ ಮರ್ಯಾದ ಹತ್ಯೆ ಪ್ರಕರಣ
-ಶಂಶೀರ್, ಬುಡೋಳಿ
ಪತ್ರಕರ್ತ
ದೇಶದಲ್ಲಿ ಆತಂಕಕ್ಕೀಡು ಮಾಡಿರುವ ಪ್ರಕರಣವೆಂದರೆ ಮರ್ಯಾದ ಹತ್ಯೆ ಪ್ರಕರಣ. ಚಂಡೀಗಢದ ವಕೀಲರಾದ ಅನಿಲ್ ಮಲೋತ್ರ ಮತ್ತು ರಂಜಿತ್ ಮಲೋತ್ರ ಮರ್ಯಾದ ಹತ್ಯೆ ಪ್ರಕರಣಕ್ಕೆ ಕುರಿತಾದ ವರದಿಯೊಂದನ್ನು ಬಿಡುಗಡೆಗೊಳಿಸಿದೆ. ಉತ್ತರಪ್ರದೇಶ, ಹರ್ಯಾಣ, ಪಂಜಾಬ್‌ಗಳಲ್ಲಿ ವರ್ಷಕ್ಕೆ ೯೦೦ ರಷ್ಟು ಮರ್ಯಾದ ಹತ್ಯೆಗಳು ನಡೆಯುತ್ತಿದೆ. ಮಾತ್ರವಲ್ಲ, ಇತರ ರಾಜ್ಯಗಳಲ್ಲಿ ೨೦೦ರಿಂದ ೩೦೦ರಷ್ಟು ಮರ್ಯಾದ ಹತ್ಯೆಗಳು ನಡೆಯುತ್ತದೆ ಎಂಬ ಆತಂಕಕಾರಿ ವಿಚಾರ ಕೂಡಾ ಬಹಿರಂಗಗೊಂಡಿದೆ. ಅಂತರ್‌ಜಾತಿ, ಸಗೋತ್ರ ಮದುವೆಯ ಕಾರಣದಿಂದಾಗಿ ಹಾಗೂ ಕುಟುಂಬ ಮತ್ತು ಸಮುದಾಯದ ಮರ್ಯಾದೆ, ಗೌರವ, ಪ್ರತಿಷ್ಠೆಗಳನ್ನು ಕಾಯ್ದುಕೊಳ್ಳುವುದಕ್ಕಾಗಿ ಮರ್ಯಾದೆ ಹತ್ಯೆಗಳು ನಡೆಯುತ್ತಿದ್ದು ಇದು ಆತಂಕಕಾರಿ ವಿಚಾರವಾಗಿದೆ.
ಮರ್ಯಾದೆ ಹತ್ಯೆ ಪ್ರಕರಣಕ್ಕೊಳಗಾದವರು ಇವತ್ತು ಸಾಮಾಜಿಕವಾಗಿ ಅವಮಾನಕ್ಕೊಳಗಾಗುತ್ತಿದ್ದಾರೆ. ಖಾಪ್ಸ್ ಪಂಚಾಯತಿಗಳು ಅಣ್ಣ-ತಂಗಿಯೆಂದು ಘೋಷಿಸಿ ಹೆಣ್ಣು- ಗಂಡನ್ನು ಸಗೋತ್ರದ ಹಿನ್ನೆಲೆಯಲ್ಲಿ ಪ್ರತ್ಯೇಕ ಮಾಡುತ್ತಿದ್ದಾರೆ. ಒಟ್ಟಾರೆ ಮರ್ಯಾದೆ ಹತ್ಯಾ ಪ್ರಕರಣಗಳು ಭೀಕರತೆಯನ್ನು ಸೃಷ್ಟಿಸುತ್ತಿದೆ ಎಂದು ಹೇಳಬಬುದು. ಈ ಮರ್ಯಾದ ಹತ್ಯೆಯೆಂಬುದು ಇವತ್ತು ನಿನ್ನೆಯ ರೋದನವಲ್ಲ. ರೋಮಿಯೋ-ಜೂಲಿಯೆಟ್ ಘಟನೆಯಿಂದಲೂ ಇವರೆಗೆ ಹೆಚ್ಚುತ್ತಾ ಬಂದಿರುವ ಆತಂಕಕಾರಿ ವಿಚಾರವಾಗಿದೆ. ಹೀಗಾಗಿ ಮರ್ಯಾದ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಮರ್ಯಾದೆ ಎಂಬ ಪದದ ಪರಿಕಲ್ಪನೆಯನ್ನು ಮರು ವ್ಯಾಖ್ಯಾನಕ್ಕೊಳಪಡಿಸುವ ಅಗತ್ಯವಿದೆ. ಈ ಕುರಿತು ವಿವಿಧ ಮಾನವ ಹಕ್ಕು ಸಂಘಟನೆಗಳು, ಜನಪರ ಸಂಘಟನೆಗಳು ದಿ ಇಂಡಿಯನ್ ಎವಿಡೆನ್ಸ್ ಆಕ್ಟ್, ದಿ ಇಂಡಿಯನ್ ಸಿವಿಲ್ ಕೋಡ್ ಆಕ್ಟ್, ಸ್ಪೆಷಲ್‌ಮ್ಯಾರೇಜ್ ಆಕ್ಟ್‌ನಲ್ಲಿ ಬದಲಾವಣೆಗಳನ್ನು ಹಾಗೂ ಹತ್ಯೆಗಳನ್ನು ತಡೆಗಟ್ಟಲು ವಿವಿಧ ಮಾರ್ಗಗಳನ್ನು ಸೂಚಿಸಬೇಕೆಂದು ಕೇಂದ್ರ ಸರಕಾರದ ಮುಂದೆ ಬೇಡಿಕೆಯಿಟ್ಟಿವೆ.
೨೦೦೭ರ ಜೂನ್ ನಿಮಗೆ ನೆನಪಿರಬೇಕು. ಹರ್ಯಾಣ ರಾಜ್ಯದ ಕೈತಾಲ್ ಜಿಲ್ಲೆಯಲ್ಲಿ ಒಂದು ಘಟನೆ ನಡೆಯಿತು. ಬಾಬ್ಲಿ-ಮನೋಜ್ ಇವರು ಸ್ವಗೋತ್ರದವರು. ಇವರಿಬ್ಬರು ಮದುವೆಯಾದ ಒಂದೇ ಒಂದು ಕಾರಣಕ್ಕಾಗಿ ಇವರಿಬ್ಬರನ್ನು ಕೊಲೆ ಮಾಡಲಾಯಿತು. ಆಗ ಖಾಪ್ಸ್ ಪಂಚಾಯತಿ ಪ್ರಶ್ನೆಗೊಳಗಾಗಿತ್ತು. ಇವರನ್ನು ಕೊಂದ ಕೊಲೆಗಾರರಿಗೆ ಶಿಕ್ಷೆಯಾಯಿತಾದರೂ ಅಮಾಯಕ ಎರಡು ಜೀವ ಬಲಿಯಾದದ್ದು ಮಾತ್ರ ದೇಶವನ್ನೇ ತಲ್ಲಣಗೊಳಿಸಿತ್ತು.
ಈ ಘಟನೆಯಾದ ನಂತರ ಶಕ್ತಿವಾಹಿನಿ ಎಂಬ ಸರಕಾರೇತರ ಸೇವಾ ಸಂಸ್ಥೆಯೊಂದು ಉಚ್ಚ ನ್ಯಾಯಾಲಯಕ್ಕೆ ಫಿರ್ಯಾದು ಸಲ್ಲಿಸಿ, ಮರ್ಯಾದ ಹತ್ಯೆಯನ್ನು ತಡೆಗಟ್ಟಲು ಹಾಗೂ ಈ ಕುರಿತು ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಡವಿದೆ ಎಂದು ಹೇಳಿತು. ತದ ನಂತರ ಈ ಫಿರ್ಯಾದನ್ನು ಗಂಭೀರವಾಗಿ ಪರಿಗಣಿಸಿದ ಉಚ್ಚ ನ್ಯಾಯಾಲಯ ಕೇಂದ್ರ ಸರಕಾರದ ಜೊತೆಗೆ ಹಿಮಾಲಯ ಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶ, ರಾಜಸ್ತಾನ್, ಉತ್ತರಪ್ರದೇಶ, ಬಿಹಾರ್, ಪಂಜಾಬ್, ಹರ್ಯಾಣ ರಾಜ್ಯಗಳಿಗೆ ನೋಟಿಸು ಜಾರಿ ಮಾಡಿತು. ಮಾತ್ರವಲ್ಲ, ಮರ್ಯಾದ ಹತ್ಯೆ ತಡೆಯಲು ರಾಜ್ಯದಲ್ಲಿ ಯಾವ ರೀತಿಯ ಕ್ರಮ ಕೈಗೊಂಡಿದ್ದೀರಿ ಎಂಬ ವಿವರಣೆ ನೀಡಬೇಕೆಂದು ಆದೇಶಿಸಿತು. ಈ ಬೆಳವಣಿಗೆಯ ನಂತರ ಕೇಂದ್ರ ಸರಕಾರವು ಸಹ ಮಂತ್ರಿಗಳ ನಿಯೋಗವೊಂದನ್ನು ರಚಿಸಿ ಕಾನೂನು ಸುಧಾರಣೆ ಮಾಡಲು ಪ್ರಯತ್ನಿಸಿತು.
ಸಮಾಜದಲ್ಲಿ ಮರ್ಯಾದ ಹತ್ಯೆಯೆಂಬುದು ಸಾಂಕ್ರಾಮಿಕ ರೋಗದ ತರಹ ಹರಡುತ್ತಿದೆ. ಊಳಿಗಮಾನ್ಯ ವ್ಯವಸ್ಥೆಯನ್ನು ಪ್ರೋತ್ಸಾಹಿಸುವವರು ಆಧುನೀಕತೆಗೆ ಸಡ್ಡು ಹೊಡೆಯುತ್ತಿದೆ. ಒಂದೆಡೆ ನಗರೀಕರಣ ಹೆಚ್ಚಾದಂತೆ ಸಂಸ್ಕೃತಿಯ ಬೇರುಗಳು ಸಹ ವಿಸ್ತಾರವಾಗುತ್ತಿದೆ. ಹೀಗಾಗಿ ಮಹಿಳೆಯರ ಆರ್ಥಿಕ ಸ್ವಾತಂತ್ರದ ಹಿನ್ನೆಲೆಯಲ್ಲಿ ಟ್ಯಾಬೂಗಳು, ಸಂಪ್ರಾದಾಯಗಳು ವಿವಿಧ ರೀತಿಯ ಸವಾಲುಗಳನ್ನು ಎದುರಿಸುತ್ತಿದೆ. ಪ್ರತಿಯೊಬ್ಬರ ಹಕ್ಕಿನ ಪ್ರಜ್ಞೆಯಲ್ಲಿ ಇವತ್ತು ಅನೇಕ ರೀತಿಯ ಬದಲಾವಣೆಗಳಾಗುತ್ತಿದೆ. ಇದು ಒಂದು ರೀತಿಯಲ್ಲಿ ಸಾಮುದಾಯಿಕ ಹಕ್ಕು, ಕೌಟುಂಬಿಕ ಮಾರ್ಯದೆಗಳೊಂದಿಗೆ ಹೋರಾಡುತ್ತಿದೆ. ಯಾಕೆಂದರೆ ಮದುವೆಯ ಸಂದರ್ಭದಲ್ಲಿ ಕುಟುಂಬದ ಹಕ್ಕು, ಮರ್ಯಾದೆಯೆಂಬುದು ಜಾತಿಯ ಸಂಪ್ರದಾಯದ ನಡುವೆ ತಳಕು ಹಾಕಿಕೊಂಡಿರುವುದನ್ನು ಕಾಣುವುದನ್ನು ನಾವು ನೋಡಬಹುದು.ಇವತ್ತು ಜಾತಿಯ ಶುದ್ಧತೆಯನ್ನು ಹಾಳು ಮಾಡುತ್ತಿರುವ ಅಸ್ತ್ರವಾಗಿ ಅಂತರ್ಜಾತಿ ವಿವಾಹವೆಂಬುದು ಕಾಣಿಸಿಕೊಳ್ಳುತ್ತಿದೆ. ಈಗ ನಾವು ಕಾಲ ಬದಲಾಗುತ್ತಿದೆ ಎನ್ನುತ್ತಿದ್ದೇವೆ. ಇದರ ಜೊತೆಗೆ ವಿವಿಧ ಹಕ್ಕುಗಳ ಕುರಿತಾದ ಪ್ರಶ್ನೆ ಸಹ ಬದಲಾವಣೆಯ ರೂಪ ಪಡೆಯುತ್ತಿದೆ.
ಆದರೆ ಖೇದನಿಯವೆಂದರೆ ಮರ್ಯಾದೆಯ ಪ್ರಶ್ನೆಯೆಂಬುದು ಮತಾಂಧತೆ, ಪಿತೃಪ್ರಧಾನ, ಊಳಿಗಮಾನ್ಯ ಮತ್ತು ಜಾತಿಯೊಂದಿಗೆ ತಳುಕು ಹಾಕಿಕೊಂಡೆ ಮುಂದುವರಿಯುತ್ತಿದ್ದು ಹೀಗಾಗಿ ಹತ್ಯೆ ಪ್ರಕರಣಗಳು ನಡೆಯುತ್ತಿದೆ ಎಂದು ಹೇಳಬಹುದು. ಹೀಗಾಗಿ ಸಂಪ್ರಾದಾಯ, ಸಾಂಸ್ಕೃತಿಕ ಮೌಲ್ಯಗಳೆಲ್ಲಾ ಜೀವನದ ದಾರಿ, ರೀತಿ ನೀತಿಗಳಿಗಾಗಿ ಬದಲಾವಣೆಗೊಳ್ಳಬೇಕಾಗಿದೆ. ಸತಿ ಪದ್ದತಿ ಹಿಂದೊಮ್ಮೆ ಸಮಾಜದ ಮರ್ಯಾದೆಯ ಪ್ರಶ್ನೆಯಾಗಿತ್ತು. ಇದು ಇಂದು ಕಾನೂನು ಬಾಹಿರವಾಗಿದೆ. ಇವತ್ತು ಏನಾಗುತ್ತಿದೆಯೆಂದರೆ ಊಳಿಗಮಾನ್ಯ ಪದ್ದತಿಗಳೊಂದಿಗೆ ಮರ್ಯಾದ ಹತ್ಯೆ ನಡೆಸುತ್ತಾ ಹಿಂಸೆಯನ್ನು ಪ್ರಚೋದಿಸುವ ಜೊತೆಗೆ ಮುಂದುವರಿಯುತ್ತಿದೆ ಎಂದು ಹೇಳಬಹುದು. ಇದು ನಮ್ಮ ಸಮಾಜದ ಅಸ್ತಿತ್ವವನ್ನು ಹಾಗೂ ಕಾಲಮಾನದ ಕುರಿತು ಪ್ರಶ್ನಿಸುವಂತೆ ಮಾಡಿದೆ. ನಿಮಗೆ ಗೊತ್ತಿರುವಂತೆ ಖಾಫ್ ಪಂಚಾಯತ್‌ಗಳಲ್ಲಿ ಯುವಕರು, ಮಹಿಳೆಯರು ಸದಸ್ಯರಾಗಿರುವುದಿಲ್ಲ. ಇಂತಹ ಅಮಾನಯ ಘಟನೆಗಳು ನಡೆಯುವ ಸಂದರ್ಭದಲ್ಲಿ ಈ ಪಂಚಾಯತ್‌ಗಳು ಸ್ವಯಂ ಆಗಿ ಜಾತಿ ಸಾಂಸ್ಕೃತಿಕ ವಕ್ತಾರನನ್ನಾಗಿ ಘೋಷಿಸಿಕೊಂಡಿದೆ ಎಂದೆನಿಸುತ್ತದೆ. ಖಾಫ್ ಪಂಚಾಯತ್, ಮುಖಂಡರನ್ನು ಮೀರಿದರೆ ಶಿಕ್ಷಿಸುತ್ತದೆ. ಇದು ಎಷ್ಟರ ಮಟ್ಟಿಗೆ ಸರಿ? ಇವು ಸಗೋತ್ರ ಹಾಗೂ ಅಂತರ್ಜಾತಿ ವಿವಾಹ ಮೇಲೆ ನಿಷೇಧ ಹೇರಿದೆ. ಆದರೂ ಕೆಲವು ರಾಜಕಾರಣಿಗಳು ಈ ಪಂಚಾಯತ್‌ನ ಕಾರ್ಯವಿಧಾನಗಳನ್ನು ಸಮರ್ಥಿಸಿದ್ದಾರೆ. ಗುರುಗಳ ಹಿನ್ನೆಲೆ ಹಾಗೂ ಉದ್ಯೋಗದ ಹಿನ್ನೆಲೆಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಗೋತ್ರವನ್ನು ತಡೆಯುವುದು ಖಾಫ್‌ಗಳ ಗುರಿ.
ಈ ಸಗೋತ್ರಗಳು ಬೇರೆ ಬೇರೆ ಜಾತಿಗಳಲ್ಲೂ ಇದೆ. ೧೦-೧೨ತ ಲೆಮಾರುಗಳಲ್ಲಿ ಈ ಎಲ್ಲಾ ಅಂಶಗಳು ಬದಲಾವಣೆ ತಂದಿದ್ದು, ಒಂದೇ ಜೀನ್ಸ್‌ಗಳಿಂದ ಬಂದ ಕುಟುಂಬಗಳ ಸದಸ್ಯರು ಸಹೋದರ-ಸಹೋದರಿಯರಾಗುತ್ತಾರೆ. ಸಗೋತ್ರ ವಿವಾಹವನ್ನು ಬೆಂಬಲಿಸುವುದಕ್ಕೆ ಕಾರಣವೊಂದಿದೆ. ಹುಟ್ಟುವ ಮಕ್ಕಳಲ್ಲಿ ವಿಕಲಚೇತನ ಇರುತ್ತದೆ ಎಂಬ ಕಾರಣವೂ ಇದೆ.
ಮನುಷ್ಯರ ಮೂಲಭೂತ ಹಕ್ಕುಗಳಿಗೆ ಚ್ಯುತಿಯನ್ನು ಈ ಮರ್ಯಾದೆ ಹತ್ಯೆಗಳು ಉಂಟು ಮಾಡುತ್ತಿದೆ. ಮಹಿಳೆಯರ ಹಕ್ಕುಗಳನ್ನು ಅರಿತುಕೊಂಡರೆ, ಹೆಂಗಸರ ಮೇಲಿನ ಈ ಮರ್ಯಾದ ಹತ್ಯೆಗಳನ್ನು ವಿರೋಧಿಸಲು ಸಾಧ್ಯ. ದೇಶದಲ್ಲಿ ಮಹಿಳೆ ಯಾವತ್ತೂ ಸಮಾನ ಹಕ್ಕುಗಳನ್ನು ಹೊಂದಿರುವ ಜೀವಿ ಎಂಬ ವಿಚಾರ ನಾವೆಲ್ಲಾ ತಿಳಿಯಬೇಕಾಗಿದೆ. ಭಾರತೀರ ಹಕ್ಕು, ಸ್ವಾತಂತ್ರಗಳನ್ನು ರಕ್ಷಿಸುವ ಹೊಣೆಗಾರಿಕೆ ಹೊಂದಿರುವ ಭಾರತ ದೇಶವು ಯೂನಿವರ್ಸಲ್ ಡಿಕ್ಲರೇಶನ್ ಆಫ್ ಹ್ಯೂಮನ್ ರೈಟ್ಸ್‌ನ ಸದಸ್ಯತ್ವ ಹೊಂದಿದೆ. ಆದರೂ ಮರ್ಯಾದ ಹತ್ಯೆ ಪ್ರಕರಣಗಳನ್ನು ತಡೆಯಲು ರಾಜ್ಯ ಹಾಗೂ ಕೇಂದ್ರ ಸರಕಾರ ವಿಫಲವಾಗುತ್ತಿರುವುದು ಅನೇಕ ಕಡೆ ಸ್ಪಷ್ಟವಾಗಿದ್ದು, ರಾಜಕೀಯ ಇಚ್ಛಾಶಕ್ತಿಯೊಂದಿದ್ದರೆ ಇವನ್ನು ತಡೆಗಟ್ಟಬಹುದು. ಆದರೆ ಇವಕ್ಕೆ ಅನೇಕ ಕಾರಣಗಳು ತಡೆಯೊಡ್ಡುತ್ತಿವೆ. ಅದೇನೆಂದರೆ ಒಂದೆಡೆ ಓಟು ಬ್ಯಾಂಕಿನ ರಾಜಕಾರಣ. ಇವನ್ನು ನಂಬಿಕೊಂಡಿರುವ ರಾಜಕಾರಣಿಗಳು. ಇವರು ಅಧಿಕಾರಕ್ಕಾಗಿ ಜಾತಿಯನ್ನೇ ಆಧಾರವಾಗಿಟ್ಟುಕೊಂಡದ್ದರಿಂದ ಹತ್ಯೆ ಕುರಿತು ಸ್ಪಷ್ಟವಾದ ನಿಲುವು ತಾಳಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿ ನಿರ್ಮಾಣವಾದ್ದರಿಂದ ರಾಜ್ಯ ಸರಕಾರಗಳು ಮಾರ್ಯದ ಹತ್ಯೆಯಂತಹ ಹಿಂಸೆಯನ್ನು ಮೌನವಾಗಿದ್ದುಕೊಂಡು ನೋಡುವಂತಾಗಿದೆ. ಈ ಕುರಿತು ಕೇಂದ್ರ ಸರಕಾರ ಗಂಭೀರ ಕ್ರಮ ತೆಗೆದುಕೊಂಡು ಮರ್ಯಾದ ಹತ್ಯೆ ಕುರಿತು ಅಮೂಲಾಗ್ರ ತನಿಖೆ ಮಾಡುವುದರ ಜೊತೆಗೆ ತಪ್ಪಿತಸ್ಥಿರಿಗೆ ಶಿಕ್ಷೆ ನೀಡಬೇಕು. ಇದು ಸದ್ಯದ ಬೇಡಿಕೆಯಾಗಿದೆ.




