ಹೇಳುವ ಮೊದಲು ಮಾಡಿ ತೋರಿಸಬೇಕು…
ಸಾತ್ವಿಕ್ ಎನ್ ವಿ, ಮಂಗಳೂರು
ತಮಿಳರನ್ನು ನಾವು ಭಾಷಾಂಧತೆಗೆ ಉದಾಹರಣೆಯಾಗಿ ಬಳಸುತ್ತೇವೆ. ಆದರೆ ಕನ್ನಡಿಗರಾದ ನಾವು ಅವರಿಂದ ಕಲಿಯಬೇಕಾದ ವಿಷಯಗಳೇ ಇಲ್ಲವೇ? ಇದೆಯೆಂದಾದರೆ ಇಲ್ಲೊಂದು ಪ್ರಸಂಗವಿದೆ.
ದ್ರಾವಿಡರ ಮುಖ್ಯ ಲಕ್ಷಣವಾದ ಕಪ್ಪು ವರ್ಣದ ದೇಹ. ಗುಂಗುರು ಕೂದಲು. ಎಲ್ಲಕ್ಕಿಂತ ತಾನೂ ತಮಿಳನೆಂಬ ಹೆಮ್ಮೆ, ಇಷ್ಟು ಅಂಶಗಳು ಮೇಳೈಸಿದರೆ ನಮ್ಮ ಕಾಲೇಜಿನ ನೌಕರ ರಾಜನ್ ರೆಡಿ. ದೈಹಿಕ ಶಿಕ್ಷಣ ವಿಭಾಗದಲ್ಲಿ ಕೆಲಸ. ಬಿಸಿಲಿನಲ್ಲಿ ರೋಲರ್ ಉರುಳಿಸುತ್ತಾ ಟೆನ್ನಿಸ್ ಪಿಚ್ ಅನ್ನು ಹದ ಮಾಡುವ ಕಾಯಕ. ಮಂಗಳೂರಿನ ಕಡು ಬಿಸಿಲಿನಲ್ಲೂ ಒಂದಿಷ್ಟು ಮುಖ ಸಿಂಡರಿಸದೇ ಮಧ್ಯಾಹ್ನದವರಗೆ ದುಡಿಮೆ. ಅನಂತರ ತಣ್ಣೀರ ಸ್ನಾನ ಮುಗಿಸಿ ಊಟ ಮಾಡಿದ ನಂತರ ಸುಮಾರು ಒಂದು ತಾಸು ಪತ್ರಿಕೆಗಳ ಓದು. ಕರಾವಳಿಯ ಕನ್ನಡ ಸಂಜೆಪತ್ರಿಕೆ ಜಯಕಿರಣ, ತಮಿಳಿನ ದಿನಕರನ್, ದಿನತಂತಿ ಪತ್ರಿಕೆಗಳ ಮೇಲೆ ಕಣ್ಣಾಡಿಸುತ್ತಾರೆ. ಆಮೇಲೆ ಅವುಗಳನ್ನು ತನ್ನಂತೆ ಓದಲು ಆಸಕ್ತರಾದ ಕಾಸು ಕೊಟ್ಟು ಪತ್ರಿಕೆ ಕೊಳ್ಳದ ಕನ್ನಡಿಗರಿಗೆ ಓದಲು ಕೊಡುತ್ತಾರೆ. ಕನ್ನಡಿಗರು ಕನ್ನಡ ಪತ್ರಿಕೆಯನ್ನು ಓದಿಯಾರು. ಆದರೆ ತಮಿಳು ಪತ್ರಿಕೆಯನ್ನು ಓದುವುದು ಹೇಗೆ? ಸಮಸ್ಯೆಯೇ ಇಲ್ಲ, ಅದನ್ನು ಓದಿ ಭಾಷಾಂತರ ಮಾಡಲು ರಾಜನ್ ಯಾವಾಗಲೂ ಸಿದ್ಧ. ತನ್ನ ರಾಜ್ಯದ ವಿವಿಧ ವಿಷಯಗಳನ್ನು ಬಹಳ ಆಸಕ್ತಿಯಿಂದ ವಿವರಿಸುವ ರೀತಿ ಎಂತಹ ವ್ಯಕ್ತಿಯನ್ನು ಒಂದು ಸಲ ತಮಿಳಿನ ವಿಷಯಗಳ ಕುರಿತು ಯೋಚಿಸುವಂತೆ ಮಾಡುತ್ತದೆ.
ಆ ವ್ಯಕ್ತಿಯಲ್ಲಿ ಇರಬಹುದಾದ ಇನ್ನೊಂದು ಆಸಕ್ತಿದಾಯಕ ಸಂಗತಿಯೆಂದರೆ ಇಡೀ ದಕ್ಷಿಣ ಭಾರತೀಯರೆಲ್ಲರೂ ದ್ರಾವಿಡರು, ತಮಿಳು ಎಲ್ಲ ದ್ರಾವಿಡ ಭಾಷೆಗಳ ತಾಯಿಯೆಂಬ ನಂಬಿಕೆ. ಈ ಕುರಿತು ಆತನು ಮಾತಾಡಲು ಆರಂಭಿಸಿದರೆ ಎಂಥವರು ಒಂದು ಕ್ಷಣ ಹೌದಲ್ಲವೇ ಎಂದುಕೊಳ್ಳಬೇಕು, ಹಾಗಿರುತ್ತದೆ ಆತನ ವಾದ ಸರಣಿ. ಇದಿಷ್ಟು ಸಾಮಾನ್ಯ ನೌಕರಿ ಮಾಡುವ ತಮಿಳು ವ್ಯಕ್ತಿಯೊಬ್ಬನ ಭಾಷಾಪ್ರೇಮದ ಗಾಥೆ. ಮತ್ತಷ್ಟು ಓದು 




