ಹೇಳುವ ಮೊದಲು ಮಾಡಿ ತೋರಿಸಬೇಕು…
ಸಾತ್ವಿಕ್ ಎನ್ ವಿ, ಮಂಗಳೂರು
ತಮಿಳರನ್ನು ನಾವು ಭಾಷಾಂಧತೆಗೆ ಉದಾಹರಣೆಯಾಗಿ ಬಳಸುತ್ತೇವೆ. ಆದರೆ ಕನ್ನಡಿಗರಾದ ನಾವು ಅವರಿಂದ ಕಲಿಯಬೇಕಾದ ವಿಷಯಗಳೇ ಇಲ್ಲವೇ? ಇದೆಯೆಂದಾದರೆ ಇಲ್ಲೊಂದು ಪ್ರಸಂಗವಿದೆ.
ದ್ರಾವಿಡರ ಮುಖ್ಯ ಲಕ್ಷಣವಾದ ಕಪ್ಪು ವರ್ಣದ ದೇಹ. ಗುಂಗುರು ಕೂದಲು. ಎಲ್ಲಕ್ಕಿಂತ ತಾನೂ ತಮಿಳನೆಂಬ ಹೆಮ್ಮೆ, ಇಷ್ಟು ಅಂಶಗಳು ಮೇಳೈಸಿದರೆ ನಮ್ಮ ಕಾಲೇಜಿನ ನೌಕರ ರಾಜನ್ ರೆಡಿ. ದೈಹಿಕ ಶಿಕ್ಷಣ ವಿಭಾಗದಲ್ಲಿ ಕೆಲಸ. ಬಿಸಿಲಿನಲ್ಲಿ ರೋಲರ್ ಉರುಳಿಸುತ್ತಾ ಟೆನ್ನಿಸ್ ಪಿಚ್ ಅನ್ನು ಹದ ಮಾಡುವ ಕಾಯಕ. ಮಂಗಳೂರಿನ ಕಡು ಬಿಸಿಲಿನಲ್ಲೂ ಒಂದಿಷ್ಟು ಮುಖ ಸಿಂಡರಿಸದೇ ಮಧ್ಯಾಹ್ನದವರಗೆ ದುಡಿಮೆ. ಅನಂತರ ತಣ್ಣೀರ ಸ್ನಾನ ಮುಗಿಸಿ ಊಟ ಮಾಡಿದ ನಂತರ ಸುಮಾರು ಒಂದು ತಾಸು ಪತ್ರಿಕೆಗಳ ಓದು. ಕರಾವಳಿಯ ಕನ್ನಡ ಸಂಜೆಪತ್ರಿಕೆ ಜಯಕಿರಣ, ತಮಿಳಿನ ದಿನಕರನ್, ದಿನತಂತಿ ಪತ್ರಿಕೆಗಳ ಮೇಲೆ ಕಣ್ಣಾಡಿಸುತ್ತಾರೆ. ಆಮೇಲೆ ಅವುಗಳನ್ನು ತನ್ನಂತೆ ಓದಲು ಆಸಕ್ತರಾದ ಕಾಸು ಕೊಟ್ಟು ಪತ್ರಿಕೆ ಕೊಳ್ಳದ ಕನ್ನಡಿಗರಿಗೆ ಓದಲು ಕೊಡುತ್ತಾರೆ. ಕನ್ನಡಿಗರು ಕನ್ನಡ ಪತ್ರಿಕೆಯನ್ನು ಓದಿಯಾರು. ಆದರೆ ತಮಿಳು ಪತ್ರಿಕೆಯನ್ನು ಓದುವುದು ಹೇಗೆ? ಸಮಸ್ಯೆಯೇ ಇಲ್ಲ, ಅದನ್ನು ಓದಿ ಭಾಷಾಂತರ ಮಾಡಲು ರಾಜನ್ ಯಾವಾಗಲೂ ಸಿದ್ಧ. ತನ್ನ ರಾಜ್ಯದ ವಿವಿಧ ವಿಷಯಗಳನ್ನು ಬಹಳ ಆಸಕ್ತಿಯಿಂದ ವಿವರಿಸುವ ರೀತಿ ಎಂತಹ ವ್ಯಕ್ತಿಯನ್ನು ಒಂದು ಸಲ ತಮಿಳಿನ ವಿಷಯಗಳ ಕುರಿತು ಯೋಚಿಸುವಂತೆ ಮಾಡುತ್ತದೆ.
ಆ ವ್ಯಕ್ತಿಯಲ್ಲಿ ಇರಬಹುದಾದ ಇನ್ನೊಂದು ಆಸಕ್ತಿದಾಯಕ ಸಂಗತಿಯೆಂದರೆ ಇಡೀ ದಕ್ಷಿಣ ಭಾರತೀಯರೆಲ್ಲರೂ ದ್ರಾವಿಡರು, ತಮಿಳು ಎಲ್ಲ ದ್ರಾವಿಡ ಭಾಷೆಗಳ ತಾಯಿಯೆಂಬ ನಂಬಿಕೆ. ಈ ಕುರಿತು ಆತನು ಮಾತಾಡಲು ಆರಂಭಿಸಿದರೆ ಎಂಥವರು ಒಂದು ಕ್ಷಣ ಹೌದಲ್ಲವೇ ಎಂದುಕೊಳ್ಳಬೇಕು, ಹಾಗಿರುತ್ತದೆ ಆತನ ವಾದ ಸರಣಿ. ಇದಿಷ್ಟು ಸಾಮಾನ್ಯ ನೌಕರಿ ಮಾಡುವ ತಮಿಳು ವ್ಯಕ್ತಿಯೊಬ್ಬನ ಭಾಷಾಪ್ರೇಮದ ಗಾಥೆ.
ತನ್ನ ತಾಯಿ ನುಡಿ-ನಾಡಿನ ಬಗ್ಗೆ ಇರುವ ಕಾಳಜಿಯನ್ನು ನಾನು ಕೇವಲ ಭಾಷಾಂಧತೆ ಎಂಬ ಪದ ಉಪಯೋಗಿಸಿ ನಿರಾಕರಿಸಲಾರೆ. ಒಂದು ವೇಳೆ ಹಾಗೆ ಮಾಡದಿದ್ದಲ್ಲಿ ದ್ರಾವಿಡ ಭಾಷೆಗಳು ‘ರಾಷ್ಟ್ರೀಯ ಭಾಷೆ’ ಎಂಬ ಅಸ್ತ್ರವಿಡಿದು ಹಿಂದಿ ಹೇರಿಕೆಯ ಮಾಡುವ ಕೇಂದ್ರ ಸರ್ಕಾರಕ್ಕೆ ಪಾಠ ಕಲಿಸುವ ಜನರೇ ಇರುತ್ತಿರಲ್ಲಿಲ್ಲ. ಹಿಂದಿ ಹೇರಿಕೆಯಿಂದ ಉತ್ತರ ಭಾರತದ ಹಿಂದಿಯೇತರ ಭಾಷೆಗಳಿಗೆ ಬಂದ ‘ಅವಸ್ಥೆ’ಯೇ ದ್ರಾವಿಡ ಭಾಷೆಗಳಿಗೆ ಬಂದಿರುತ್ತಿತ್ತು. ಪ್ರತಿಯೊಬ್ಬ ತಮಿಳಿನು ತನ್ನ ತಮಿಳು ಐಡೆಂಟಿಟಿಯನ್ನು ಕಾಪಾಡಿಕೊಳ್ಳಬೇಕು ಎಂಬ ಓರಿಯೆಂಟೇಷನ್ ಇದೆಯಲ್ಲ ಅದು ಎಲ್ಲ ದ್ರಾವಿಡ ಭಾಷೆಗಳಿಗೂ ಬೇಕಾದುದು. ಅವರ ದ್ರಾವಿಡ ಕಲ್ಪನೆಯನ್ನು ಎಲ್ಲರೂ ‘ಬೇರೆ ಬೇರೆ’ ಕಾರಣಗಳಿಗೆ ಒಪ್ಪದೇ ಇರಬಹುದು. ಆದರೆ ಸುಮಾರು ಅರ್ಧ ಭಾರತವನ್ನು ಇದು ಸೌಹಾರ್ದಯುತವಾಗಿ ಬಂಧಿಸಬಲ್ಲುದು.
ಅಳದಿದ್ದರೆ ತಾಯಿಯೂ ಮಗುವಿಗೆ ಹಾಲು ಕುಡಿಸುವುದಿಲ್ಲ. ಅಂಥದರಲ್ಲಿ ಕೇಂದ್ರ ಸರ್ಕಾರ ತಾನೇ ಮುಂದೆ ಬಂದು ಕರ್ನಾಟಕಕ್ಕೆ ಕನ್ನಡಿಗರಿಗೆ ಸಹಾಯ ಮಾಡುತ್ತದೆ ಎಂದು ನಂಬಲಾದೀತೆ? ಆಗ ನಮಗೆ ಸಹಾಯಕ್ಕೆ ಒದಗುವುದು ಇಂಥ ತಮಿಳರ ‘ಒರಟು ಮಾದರಿಗಳು’. ಇಡೀ ದ್ರಾವಿಡ ಭಾಷಾ ಸಮುದಾಯಗಳು ಒಂದು ಐಡೆಂಟಿಟಿಯ ಅಡಿಯಲ್ಲಿ ಬಂದವೆಂದು ಭಾವಿಸೋಣ. ಆಗ ಕೇಂದ್ರ ಸರ್ಕಾರ ಅಷ್ಟು ಸುಲಭವಾಗಿ ದಕ್ಷಿಣ ಭಾರತದ ಬಗ್ಗೆ ತಾತ್ಸಾರ ಮಾಡಲು ಸಾಧ್ಯವೇ? ಎಲ್ಲಕ್ಕೂ ತಲೆ ಎಣಿಕೆಯೇ ಮುಖ್ಯವಾಗಿರುವ ಈ ಸಂದರ್ಭದಲ್ಲಿ ಇಂಥ ಸಂಖ್ಯಾಬಲವೂ ಅಗತ್ಯವಾಗುತ್ತದೆ. ಈ ಸಂಖ್ಯಾಬಲವನ್ನು ಆಶ್ರಯಿಸಿ ತಾನೇ ಹಿಂದಿ ರಾಷ್ಟ್ರಭಾಷೆಯಾಗಿರುವುದು.
ನಮಗೆ ತಮಿಳರ, ಮಲೆಯಾಳಿಗಳ, ತೆಲುಗರ ಬಗ್ಗೆ ಇರುವಷ್ಟು ಉದಾಸೀನ ಹಿಂದಿವಾಲಗಳ ಬಗ್ಗೆ ಇಲ್ಲ. ಇವತ್ತು ನಮ್ಮ ನೆರೆಯ ‘ಸೋದರ’ ಭಾಷೆಗಳಿಗಿಂತ ಹೆಚ್ಚು ಹೋರಾಟವಿರುವುದು ಹಿಂದಿಯಿಂದ. ಓರ್ವ ಸಾಹಿತ್ಯ ಮತ್ತು ಭಾಷೆಯ ವಿದ್ಯಾರ್ಥಿಯಾದ ನಾನು ಭಾಷೆಗಳ ಕಾರಣಕ್ಕೆ ಜನರು ಪರಸ್ಪರ ಕಚ್ಚಾಡುವುದನ್ನು ಸಮರ್ಥಿಸಲಾರೆ. ಆದರೆ ‘ರಾಷ್ಟ್ರೀಯ ಭಾಷೆ’ ಎಂಬ ಐಡೆಂಟಿಟಿಯನ್ನು ಬಳಸಿ ಇತರರ ಮೇಲೆ ಸವಾರಿ ಮಾಡುವುದನ್ನು ಯಾವ ಭಾಷಾ ಶೋಷಿತನೂ ಬಯಸಲಾರ.
‘ನಾವೆಲ್ಲರೂ ಒಂದೇ, ನಾವು ಭಾರತೀಯರು’ ಎಂಬ ಭಾವ, ಮಾತಿನಲ್ಲಿ ಅಲ್ಲದೇ ಕೃತಿಯಲ್ಲೂ ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತಂದರೆ ತಮ್ಮ ಚಿಕ್ಕ ಚಿಕ್ಕ ಐಡೆಂಟೀಟಿಗಳನ್ನು ಬಿಟ್ಟು ಜನರು ಏಕತ್ರ ಭಾರತೀಯರಾಗುತ್ತಾರೆ.
ಚಿತ್ರಕೃಪೆ : ಗೂಗಲ್ ಇಮೇಜ್




