ನಿಮಗೂ ನಿಮ್ಮೂರು ನೆನಪಾಗುತ್ತಾ? ಭಾಗ- ೧
ದೀಪಕ್ ಮದೆನಾಡು
ದಕ್ಷಿಣದ ಕಾಶ್ಮೀರ ಮಡಿಕೇರಿಯಿಂದ ೭ ಕಿ.ಮೀ. ದೂರದಲ್ಲಿ ನನ್ನೂರು ಮದೆನಾಡು. ಹೆದ್ದಾರಿ ಕವಲು ಮಣ್ಣಿನ ದಾರಿ ಹಿಡಿದು ಜಾರುಗುಪ್ಪೆಯ ಮೇಲೆ ನಡೆದಂತೆ, ಹಲವು ಮೈಲು ನಡೆದರೆ ಬೆಟ್ಟದ ತುತ್ತ–ತುದಿಯಲ್ಲಿ ಸಿಗುವುದು ನಮ್ಮ ಮನೆ! ಆಗಸವನ್ನೇ ಮರೆಮಾಚುವಂತೆ ಬೆಳೆದ ಮರಗಳು, ಬೆಟ್ಟ–ಗುಡ್ಡಗಳು… ಸುಂಯನೇ ಬೀಸುತಿದ್ದ ತಂಗಾಳಿ ತಂಪಾದ ಹಾಸಿಗೆ ಹಾಸುತ್ತಿತ್ತು. ನಮ್ಮ ಮನೆಯ ಎಡಭಾಗದ ತೋಟದಿಂದ ಹರಿದ ಝರಿಯು ಭೋ..ಎ೦ದು ತನ್ನದೆ ರಾಗ ಹಾಡುತ್ತಿತ್ತು. ಎಷ್ಟೇ ದೂರ ಕಣ್ಣು ಹಾಯಿಸಿದರೂ ಕಾಣಿಸುತ್ತಿದ್ದುದ್ದು ಪ್ರಕೃತಿಯ ಸೊಬಗೇ ಹೊರತು ಮನೆಗಳಲ್ಲ!.
ರಾತ್ರಿ ಗಡದ್ದಾಗಿ ಬಿಸಿ–ಬಿಸಿ ಊಟ ಮಾಡಿ, ಸ್ವಲ್ಪ ತರಲೆ ಮಾಡಿ, ಓಡಿ ಹಾಸಿಗೆ ಮೇಲೆ ಹಾರಿ ಕಂಬಳಿ ಒಳಗೆ ಸೇರಿಕೊಂಡರೇ ಅಮ್ಮನ ಧ್ವನಿ ಕೇಳಿದಾಗಲೇ ಬೆಳಗಾಯಿತೆಂದು ತಿಳಿಯುವುದು!! ಮುಂಜಾನೆ ಅಮ್ಮ ಪ್ರೀತಿಯಿಂದ ಕರೆದರೆ ಮಿಸುಕಾಡದ ದೇಹ ನನ್ನದು. ಅಮ್ಮ ಕರೆದಾಗ ಎಲ್ಲೋ ಕನಸಿನಲ್ಲಿ, ಯಾರೋ ಕರೆದ ಹಾಗೆ ಭಾಸವಾಗುತ್ತಿತ್ತು. ಅಮ್ಮ ಸಿಟ್ಟನಿಂದ ” ಸಟ್ಟುಗ ಕಾಯಿಸಿ ಇಡುತ್ತೇನೆ” ಎ೦ದಾಗ ಸ್ವಲ್ಪ ನಿದ್ರೆ ಬಿಡುತಿತ್ತು. ಕುಂಬಳಕಾಯಿ ಮುಖ ಮಾಡಿಕೊಂಡು ಹಾಸಿಗೆಯಿಂದ ನೇರ ನನ್ನ ಪ್ರಯಾಣ ಒಲೆಯ ಬುಡದೆಡೆಗೆ! ಆರಾಮವಾಗಿ ಬಿಸಿಕಾಯಿಸಿಕೊಂಡು ಮಲಗಿರುತ್ತಿದ್ದ ಬೆಕ್ಕನ್ನು ಸ್ವಲ್ಪ ತಳ್ಳಿ ನಾನು ಕುಳಿತುಕೊಳ್ಳುತ್ತಿದೆ. ಒಲೆಯ ಬಳಿ ಬಿಸಿ ಕಾಯಿಸಿ–ಕಾಯಿಸಿ ಕಾಲಿನ ಚರ್ಮ ಬಿರುಕು ಬಿಟ್ಟಿರುತ್ತಿದ್ದವು. ಅಮ್ಮನ ವಟ–ವಟ ಅಲ್ಲಿಯು ಮು೦ದುವರಿಯುತ್ತಿತ್ತು. ಕಣ್ಣು ಮುಚ್ಚಿಕೊಂಡು ಬಚ್ಚಲು ಮನೆಗೆ ಹೋಗಿ ಹಲ್ಲುಜ್ಜಿ, ಮುಖತೊಳೆದು ಅಮ್ಮ ಹೇಳಿದ ಕೆಲಸ ಮಾಡಿ ಶಾಲೆಗೆ ಹೊರಡಲು ಸಿದ್ದನಾಗುತ್ತಿದ್ದೆ.
ಮಳೆಗಾಲದಲ್ಲಿ, ಎಲ್ಲಿ ಬಟ್ಟೆ ಒಣಗಿಸುವುದು ಬಲು ಕಷ್ಟದ ಕೆಲಸ. ಒಂದು ಬಟ್ಟಲಿನಲ್ಲಿ ಬೆಂಕಿಯ ಕೆಂಡವನ್ನು ಹಾಕಿ ಅದರ ಮೇಲೆ ಬರ್ಜಿಯನ್ನು(ಬಿದಿರಿನಿಂದ ಮಾಡಿದ ವಸ್ತು) ಬೊರಲು ಹಾಕಿ, ಒದ್ದೆಯಾದ ಬಟ್ಟೆಯನ್ನು ಬರ್ಜಿಯ ಮೇಲೆ ಇಟ್ಟು ಒಣಗಿಸುತ್ತಿದ್ದೆವು. ಇ೦ದಿಗೂ ಈ ಪದ್ದತ್ತಿ ಕೊಡಗಿನಲ್ಲಿ ಜೀವಂತವಾಗಿದೆ. ಟೈಲರ್ ಬಟ್ಟೆ ಹೊಲಿದಾಗ ಮಾಡಿದ ಇಸ್ತ್ರ್ರಿಯೇ, ನನ್ನ ಸಮವಸ್ತ್ರ ಕಂಡ ಮೊದಲ ಮತ್ತು ಕೊನೆಯ ಇಸ್ತ್ರಿ!! ಹೊಗೆಯ ವಾಸನೆ ಬರುತ್ತಿದ್ದ ನನ್ನ ಸಮವಸ್ತ್ರವನ್ನು ಬರ್ಜಿಯಿಂದ ತೆಗೆದು ಧರಿಸಿ, ಒಲೆಯಲ್ಲಿ ಸುಟ್ಟ ಅಕ್ಕಿರೊಟ್ಟಿಯನ್ನು ಜೇನುತುಪ್ಪದಲ್ಲಿ ತಿಂದು, ಮಧ್ಯಾಹ್ಹಕ್ಕೆ ಬುತ್ತಿಕಟ್ಟಿಕೊಂಡು ಶಾಲೆಯೆಡೆಗೆ ಮುಖ ಮಾಡುತ್ತಿದ್ದೆ.
ಮುಂದುವರಿಯುವುದು…






HI SIR…. NIMMA ANUBHAVA VANNU THUMBA CHANDADALLI BAREDIDDIRA……NIMMURA MANJALLI NAMMANNU THELISIDANTHINDE…. JYOTHI, RFOM :BANGALORE
SUPPER SIR…………..!!
ಇದು ಬಹಳ ಚೆನ್ನಾಗಿದೆ… ಮುಂದಿನ ಸಂಚಿಕೆಯನ್ನು ಬಹಳ ಬೇಗನೆ ಪ್ರಕಟಿಸಿ…
channagide….. mundina kantannu yaavaga prakatisuviri????? adastubega prakatisi .. danyavaadagalu