ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 25, 2010

ಉಪ್ಪಿಗಿಂತ ರುಚಿಯಿಲ್ಲ, ಅತಿಯಾದರೆ ಅಪಾಯ ತಪ್ಪಿದ್ದಲ್ಲ

‍ನಿಲುಮೆ ಮೂಲಕ

ಡಾ.ಪ್ರಶಾಂತ ನಾಯ್ಕ ಬೈಂದೂರು
ಜೀವವಿಜ್ಞಾನ ವಿಭಾಗ
ಮಂಗಳೂರು ವಿಶ್ವವಿದ್ಯಾನಿಲಯ

‘ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ’ ಎನ್ನುವ ಗಾದೆ ಮಾತು ಸರ್ವತಾ ಸತ್ಯ. ಸಕ್ಕರೆ ಇಲ್ಲದ ಚಹಾ, ಕಹಿಕಹಿ ಎನಿಸಿದರೂ ಕುಡಿಯಬಹುದು. ಆದರೆ ಉಪ್ಪಿಲ್ಲದೆ ಮಾಡಿದ ಅಡುಗೆಯನ್ನು ಊಟ ಮಾಡುವುದು ಬಹಳ ಕಷ್ಟ. ಉಪ್ಪು ಕೇವಲ ರುಚಿಗೆ ಸೀಮಿತವಲ್ಲ. ನಮ್ಮ ದೇಹದಲ್ಲಿ ನಡೆಯುವ ಅನೇಕ ಶಾರೀರಿಕ ಕ್ರಿಯೆಗಳಿಗೆ ಬೇಕಾಗಿರುವ ಸೋಡಿಯಂ ಮತ್ತು ಕ್ಲೋರೈಡ್ ಎನ್ನುವ ಎರಡು ವಿದ್ಯುದ್ವಾಹಕ ಲವಣಗಳನ್ನು ಪೂರೈಸಲು ಉಪ್ಪು ಅಗತ್ಯ. ಶರೀರದಲ್ಲಿ ದ್ರವಗಳ ಸಮತೋಲನೆಯನ್ನು ಕಾಪಾಡಲು, ಆಮ್ಲ-ಪ್ರತ್ಯಾಮ್ಲತೆಯನ್ನು ಸಮಸ್ಥಿತಿಯಲ್ಲಿಡಲು, ನರವ್ಯೂಹದ ಕಾರ್ಯನಿರ್ವಹಣೆಯಲ್ಲಿ, ಸ್ನಾಯುಗಳ ಚಲನಾಕ್ರಿಯೆಗೆ, ರಕ್ತದೊತ್ತಡವನ್ನು ನಿಯಂತ್ರಿಸಲು, ಉಪ್ಪಿನಲ್ಲಿರುವ ಸೋಡಿಯಂ ಮತ್ತು ಕ್ಲೋರೈಡ್ ಲವಣಗಳು ವಹಿಸುವ ಪಾತ್ರ ಮುಖ್ಯವಾದದ್ದು. ಈ ಎಲ್ಲ ಶಾರೀರಿಕ ಕ್ರಿಯೆಗಳಿಗೆ ಅತ್ಯವಶ್ಯವಿರುವ ಈ ಎರಡು ಲವಣಗಳು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಈ ಎರಡು ಲವಣಗಳು ಇತರ ಆಹಾರ ಮೂಲಗಳಿಂದ (ಹಣ್ಣು, ತರಕಾರಿ, ಧಾನ್ಯ, ಹಾಲು, ಮೀನು, ಮಾಂಸ ಇತ್ಯಾದಿ) ಸಿಗುತ್ತದೆಯಾದರೂ,
ದೇಹಕ್ಕೆ ಸಮರ್ಪಕ ಪ್ರಮಾಣದಲ್ಲಿ ಅವುಗಳನ್ನು ಪಡೆಯಲು ಉಪ್ಪನ್ನು ಉಪಯೋಗಿಸಲೇಬೇಕು. ನಾವು ಉಪಯೋಗಿಸುವ ಉಪ್ಪುಗಳಲ್ಲಿ ಮೂರು ವಿಧ. ಐಯೋಡಿನ್‌ಯುಕ್ತ ಉಪ್ಪು (ಇದರಲ್ಲಿ ಸೋಡಿಯಂ-ಕ್ಲೋರೈಡ್ ಜೊತೆಗೆ ಥೈರಾಡ್ ಹಾರ್ಮೋನ್‌ಗಳ ಉತ್ಪತ್ತಿಗೆ ಅವಶ್ಯವಿರುವ ಅಯೋಡಿನ್ ಇರುತ್ತದೆ), ಸಂಸ್ಕರಿಸಿದ/ಶುದ್ಧ ಉಪ್ಪು (ಸೋಡಿಯಂ ಮತ್ತು ಕ್ಲೋರೈಡ್ ಲವಣಗಳನ್ನು ಮಾತ್ರ ಹೊಂದಿರುತ್ತದೆ) ಮತ್ತು ಸಮುದ್ರ ಉಪ್ಪು (ಕಲ್ಲುಪ್ಪು).

ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಕಲ್ಲುಪ್ಪಿಗೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಕಡಿಮೆಯಾಗಿದೆ. ಆದರೆ, ಕಲ್ಲುಪ್ಪು ಸೋಡಿಯಂ-ಕ್ಲೋರೈಡ್ ಜೊತೆಗೆ, ದೇಹಕ್ಕೆ ಅತ್ಯವಶ್ಯವಿರುವ ಪೋಟಾಸಿಯಂ, ಮೆಗ್ನೇಸಿಯಂ ಮತ್ತು ಕ್ಯಾಲ್ಸಿಯಂ ವಿದ್ಯುದ್ವಾಹಿ ಕಣಗಳನ್ನು ಪೂರೈಸುತ್ತದೆ. ಯಾವುದೇ ರೂಪದಲ್ಲಿ ಸಿಗಬಹುದು, ಆದರೆ ನಮ್ಮ ದಿನನಿತ್ಯ ಆಹಾರದಲ್ಲಿ ಉಪ್ಪು ಬೇಕೆಬೇಕು. ‘ಅತಿಯಾದರೆ ಅಮೃತವೂ ವಿಷ’ ಎನ್ನುವ ಸತ್ಯ, ನಮಗೆ ರುಚಿಯನ್ನು ನೀಡುವ ಉಪ್ಪಿಗೂ ಸಹ ಅನ್ವಯವಾಗುತ್ತದೆ. ಹೀಗೆ ಹೇಳುವಾಗ, ಕೆಲವು ವರ್ಷಗಳ ಹಿಂದೆ ಪತ್ರಿಕೆಯಲ್ಲಿ ಓದಿದ ಒಂದು ವಿಷಯ ಘಟನೆಯೊಂದು ನೆನಪಾಗುತ್ತದೆ. ಇಬ್ಬರು ಸ್ನೇಹಿತರು ಪಂಥವೊಂದನ್ನು ಕಟ್ಟಿಕೊಂಡು, ಪಂಥವನ್ನು ಸ್ವೀಕರಿಸಿದ ವ್ಯಕ್ತಿ ಒಂದು ಇಡೀ ಪೊಟ್ಟಣ (250 ಗ್ರಾಂ) ಉಪ್ಪನ್ನು ಒಂದೇ ಸಮನೆ ಬಾಯೊಳಗೆ ತುರುಕಿಸಿಕೊಂಡು ನುಂಗಿ ‘ನೀರು’ ಕುಡಿದ. ಆತ ಪುಡಿಕಾಸಿಗಾಗಿ ಪಂಥವನ್ನೇನೋ ಗೆದ್ದ, ಆದರೆ ಸ್ವಲ್ಪ ಸಮಯದಲ್ಲಿ ಉಪ್ಪಿನ ವಿಷವೇರಿ ಪ್ರಾಣವನ್ನೇ ತ್ಯಜಿಸಿದ. ಆಸ್ಪತ್ರೆಯಲ್ಲಿ ತುರ್ತುಚಿಕಿತ್ಸೆ ನೀಡಿದರೂ, ಬದುಕುಳಿಯಲಿಲ್ಲ. ಪ್ರಾಯೋಗಿಕವಾಗಿ ಕಂಡುಹಿಡಿದ ಉಪ್ಪಿನ ಮಾರಕ ಪ್ರಮಾಣ 3ಗ್ರಾಂ/ಕಿ.ಗ್ರಾಂ ದೇಹ ತೂಕ, ಅಂದರೆ ಪ್ರಮಾಣದಲ್ಲಿ ಉಪ್ಪು ಒಂದೇ ಸಲಕ್ಕೆ ದೇಹವನ್ನು ಸೇರಿದರೆ ಅದರಿಂದ ಶಾರೀರಿಕ ಕ್ರಿಯೆಗಳಲ್ಲಿ ವೈಪರೀತ್ಯ ಉಂಟಾಗಿ, ಅಂಗಾಂಗಳು ಕಾರ್ಯವನ್ನು ನಿಲ್ಲಿಸಿ ಸಾವುಂಟಾಗುತ್ತದೆ. ಆತನ್ಯಾರೋ ಹುಡುಗಾಟಿಕೆ ಮಾಡಲು ಹೋಗಿ ಪ್ಯಾಕೆಟ್  ಉಪ್ಪನ್ನು ಒಂದೇ ಉಸಿರಿನಲ್ಲಿ ತಿಂದು ಪ್ರಾಣ ಬಿಟ್ಟಿರಬಹುದೆಂದು, ಎಲ್ಲರೂ ಹಾಗೆ ಮಾಡುವುದಿಲ್ಲ, ಸರಿ. ಹಾಗಂತ, ಉಪ್ಪಿನಂಶವಿರುವ ಆಹಾರವನ್ನು ಇಷ್ಟಡುವವರು ಅತಿಯಾಗಿ ಅಂತಹ ಆಹಾರವನ್ನು ತಿಂದರೆ ದೇಹದಲ್ಲಿ ಸೋಡಿಯಂ ಅಂಶವು ಹೆಚ್ಚಾಗಿ ತೀಕ್ಷಣವಾದ ಆರೋಗ್ಯ ಸಮಸ್ಯೆಗಳಿಂದ ನರಳಬೇಕಾಗುತ್ತದೆ. ಮುಖ್ಯವಾಗಿ, ರಕ್ತದೊತ್ತಡ ಹೆಚ್ಚಾಗಿ (ಹೈಪರ್ ಟೆನ್ಷನ್/ಏರೊತ್ತಡ) ಅದರಿಂದ ಹೃದಯಘಾತ ಮತ್ತು ಇತರ ಹೃದಯ-ಸಂಬಂಧಿ ಕಾಯಿಲೆಗಳಿಗೆ ಎಡೆಮಾಡಿಕೊಡುತ್ತದೆ. ಇದಕ್ಕೆ ಆಧಾರವಾಗಿ, 2007ರ  ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟವಾಗಿರುವ ಸಂಶೋಧನಾ ಲೇಖನವೊಂದರಿಂದ ತಿಳಿದು ಬರುವ ಸತ್ಯವೇನೆಂದರೆ, ಅಧಿಕ ರಕ್ತದೊತ್ತಡ ಇರುವವರು ತಮ್ಮ ದಿನನಿತ್ಯ ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆಗೊಳಿಸಿದರೆ, ಪಾರ್ಶ್ವವಾಯು ಮತ್ತು ಹೃದಯ-ಸಂಬಂಧಿ ಕಾಯಿಲೆಗಳಿಗೆ ಒಳಗಾಗುವ ಅಪಾಯವನ್ನು
ಕಡಿಮೆಯಾಗಿಸಬಹುದು. ನೀರು ತುಂಬಿಕೊಂಡು ಕೈಕಾಲು, ಹೊಟ್ಟೆ ಊದಿಕೊಳ್ಳುವಂತಹ ಎಡಿಮಾ/ಹೈಡ್ರೋಪ್ಸಿ ಕಾಯಿಲೆಯಿಂದ ನರಳುವವರು ಉಪ್ಪಿನ ಪ್ರಮಾಣವನ್ನು ಕಡಿಮೆಗೊಳಿಸಿ ಸ್ವಲ್ಪ ಮಟ್ಟಿಗೆ ಅದರಿಂದ ಉಪಶಮನಗೊಳಿಸಬಹುದು ಎಂದು ಅಮೇರಿಕಾದ ‘ಟ್ರಾಮನ್ ಮೆಮೋರಿಯಲ್ ವೆಟರನ್ಸ್ ಆಸ್ಪತ್ರೆಯ ಸಂಶೋಧನಾ ತಂಡವು ಕಂಡುಕೊಂಡಿದೆ.

ದೇಹದಲ್ಲಿ ಅತೀಯಾದ ಸೋಡಿಯಂ ಇದ್ದರೆ ಅದರಿಂದ ಉದರದ ಕ್ಯಾನ್ಸರ್ ಕೂಡ ಬರುವ ಸಾಧ್ಯತೆಗಳಿವೆಯೆಂದು ಕೋಲಂಬಿಯಾ ವಿಶ್ವವಿದ್ಯಾನಿಲಯದಿಂದ ಪ್ರಕಟವಾಗಿರುವ ಸಂಶೋಧನಾ ವರದಿಯೊಂದು ತಿಳಿಸಿದೆ. ಹೆಚ್ಚು ಉಪ್ಪಿನಂಶವಿದ್ದರೆ ಅದರಿಂದ ಮೂತ್ರಪಿಂಡದ ಕೆಲಸದ ಮೇಲೆ ಅತಿಯಾದ ಒತ್ತಡ ಉಂಟಾಗಿ, ಮೂತ್ರಪಿಂಡ-ವೈಫಲ್ಯಕ್ಕೂ ಕಾರಣವಾಗುತ್ತದೆ. ಕಳೆದ ವಾರ ಖ್ಯಾತ ಸುಗಮ ಸಂಗೀತಕಾರ ರಾಜು ಅನಂತ ಸ್ವಾಮಿಯವರು ಕಿಡ್ನಿ-ವೈಫಲ್ಯತೆಯಿಂದ ಕಿರಿಯ ವಯಸ್ಸಿನಲ್ಲೇ ಸಾವಿಗೀಡಾಗಿರುವುದು ನಮಗೆಲ್ಲರಿಗೂ ದುಖ:ಕರವಾದ ವಿಷಯ. ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಕಿಡ್ನಿವೈಫಲ್ಯತೆಗೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚೆಗೆ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದ 450 ಗ್ರಾಂ ಮೂತ್ರಪಿಂಡದ ಕಲ್ಲನ್ನು (ಕಿಡ್ನಿ ಸ್ಟೋನ್) ಪತ್ರಿಕೆಗಳಲ್ಲಿ ನೋಡಿ ಹುಬ್ಬೇರಿಸಿದ್ದೇವೆ. ಕಿಡ್ನಿಸ್ಟೋನ್‌ನಿಂದ ಉಂಟಾಗುವ ನೋವು, ಒದ್ದಾಟ ಅದನ್ನು ಅನುಭವಿಸದರಿಗೇ ಗೊತ್ತು. ಕಿಡ್ನಿಸ್ಟೋನ್ ಉಂಟಾಗಲು ಅತಿಯಾಗಿ ಉಪ್ಪಿನಂಶದ ಆಹಾರವನ್ನು ತಿನ್ನುವುದು ಕೂಡ ಒಂದು ಕಾರಣ. ಉಪ್ಪಿಗೂ ಕಿಡ್ನಿಸ್ಟೋನ್‌ಗೂ ಏನು ಸಂಬಂಧ ಎನ್ನಿಸಬಹುದು. ಸಂಬಂಧವಿದೆ. ದೇಹದಲ್ಲಿ ಸೋಡಿಯಂ ಅಂಶ ಮಿತಿಮೀರಿದರೆ, ಮೂತ್ರಪಿಂಡದಲ್ಲಿ ಕ್ಯಾಲ್ಸಿಯಂ ಲವಣದ ವಿಸರ್ಜನಾ ಪ್ರಮಾಣ ಹೆಚ್ಚಾಗುತ್ತದೆ. ಮೂತ್ರಪಿಂಡದಲ್ಲಿ ಕ್ಯಾಲ್ಸಿಯಂನ ಒತ್ತಡ ಜಾಸ್ತಿಯಾದರೆ, ಅದು ಕ್ರಮೇಣ ಶೇಖರಣೆಗೊಂಡು ಕಲ್ಲಿನ ರೂಪ ಪಡೆದು ಮೂತ್ರಪಿಂಡಕಲ್ಲು ಎನ್ನಿಸಿಕೊಳ್ಳುತ್ತದೆ. ಮೂಳೆಗಳನ್ನು ಗಟ್ಟಿ ಮತ್ತು ಆರೋಗ್ಯವಾಗಿಡುವ ಕ್ಯಾಲ್ಸಿಯಂನ ಅವಶ್ಯಕತೆಯ ಬಗ್ಗೆ ಸಾಮಾನ್ಯವಾಗಿ ಗೊತ್ತಿರುವ ವಿಷಯ. ದೇಹದಲ್ಲಿ ಸೋಡಿಯಂ ಅಂಶ ಜಾಸ್ತಿಯಾದರೆ, ಕ್ಯಾಲ್ಸಿಯಂ ವಿಸರ್ಜನೆ ಹೆಚ್ಚಾಗುವುದು, ಇದರಿಂದ ಮೂಳೆಗಳಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆಯಾಗಿ, ಮುಂದೆ ಮೂಳೆಸವೆತ/ಟೊಳ್ಳುಮೂಳೆ (osteoporosis) ಕಾಯಿಲೆಗೂ ಎಡೆಮಾಡಿಕೊಡುತ್ತದೆ. ಮುಖ್ಯವಾಗಿ ಸ್ತ್ರೀಯರು ಈ ಸಮಸ್ಯೆಗೆ ಒಳಗಾಗುತ್ತಾರೆ. ಹೊಟ್ಟೆಹುಣ್ಣು (ಅಲ್ಸರ್) ಉಂಟಾಗಲು ಅತಿಯಾಗಿ ಉಪ್ಪು ತಿನ್ನುವುದು ಒಂದು ಮುಖ್ಯ ಕಾರಣ ಎಂದು ವ್ಶೆದ್ಯ-ವಿಜ್ಞಾನಿಗಳ ಸಂಶೋಧನೆಯಿಂದ ತಿಳಿದುಬರುತ್ತದೆ.
‘ಓಹೋ, ಉಪ್ಪಿನಿಂದ ಇಷ್ಟೆಲ್ಲ ಆರೋಗ್ಯ ಸಮಸ್ಯೆಗಳಿವಿಯೇ’ ಎಂದುಕೊಂಡು, ‘ನಾನು ಇನ್ನು ಮೇಲೆ ಉಪ್ಪೇ ಇಲ್ಲದ ಆಹಾರವನ್ನು ತಿನ್ನುತ್ತೇನೆ’ ಎಂದು ಉಪ್ಪಿನ ‘ಡಯಟಿಂಗ್’ ಮಾಡಲು ಹೋಗದಿರಿ. ಈಗಾಗಲೇ ತಿಳಿಸಿರುವಂತೆ ನಮ್ಮ ಅನೇಕ ಶಾರೀರಿಕ ಕ್ರಿಯೆಗಳಿಗೆ ಅತ್ಯವಶ್ಯವಿರುವ ಸೋಡಿಯಂ ಮತ್ತು ಕ್ಲೋರೈಡ್ ಲವಣಗಳನ್ನು ಸಮರ್ಪಕ ಪ್ರಮಾಣದಲ್ಲಿ ಪೂರೈಸಲು ನಾವು ಉಪ್ಪನ್ನು ಬಳಸಲೇಬೇಕು (ದೇಹಕ್ಕೆ ಅವಶ್ಯವಿರುವ ಪ್ರಮಾಣಕ್ಕಿಂತ ಕಡಿಮೆಯಾದರೂ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ, ಏಕೆಂದರೆ, ಇದರಿಂದ ಕಡಿಮೆ ರಕ್ತದೊತ್ತಡ, ಸ್ನಾಯು ಸೆಳೆತ, ತಲೆಸುತ್ತು, ನಿರ್ಜಲೀಕರಣ (ಡೀಹೈಡ್ರೇಶನ್), ನಿರುತ್ಸಾಹ, ಮತ್ತು ನರವ್ಯೂಹಕ್ಕೆ ಸಂಬಂಧಿಸಿದ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ). ಆದರೆ ನಾಲಿಗೆಯ ಚಪಲತೆಯನ್ನು ತೀರಿಸಲು ಉಪ್ಪಿನಂಶವಿರುವ ತಿಂಡಿ-ತಿನಿಸುಗಳನ್ನು (ಉಪ್ಪಿನಕಾಯಿ, ಒಣ ಮೀನು, ಆಲುಗಡ್ಡೆ ಚಿಪ್ಸ್, ಸಾಸ್, ಚೈನೀಸ್ ಆಹಾರ, ಪ್ಯಾಕೇಟ್ ತಿನಿಸಿಗಳು, ಕರಿದ ಮೀನು ಮತ್ತು ಮಾಂಸ, ಇತ್ಯಾದಿ) ಅತಿಯಾಗಿ ತಿನ್ನದೆ, ಒಂದು ಮಿತಿಯನ್ನು ಕಾಪಾಡಿಕೊಳ್ಳಬೇಕು. ಹಾಗಾದರೆ ನಮ್ಮ ದೇಹದ ಆರೋಗ್ಯವನ್ನು ಕಾಪಾಡಲು ಸಾಕಷ್ಟು ಪ್ರಮಾಣದಲ್ಲಿ ಉಪ್ಪನ್ನು ಬಳಸಬೇಕು…? ಇದರ ಬಗ್ಗೆ ಅನೇಕ ವೈಜ್ಞಾನಿಕ ಅಧ್ಯಯನಗಳ ಅಧಾರದ ಮೇಲೆ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಪ್ರಮಾಣ ಪ್ರತಿದಿನಕ್ಕೆ 6 ಗ್ರಾಂ (ಸುಮಾರು ಒಂದುವರೆ (ಚಿಕ್ಕಗಾತ್ರದ) ಗ್ರಾಂನಷ್ಟು). ಈ ನಿಗದಿತ ಪ್ರಮಾಣ 14 ವರ್ಷ ದಾಟಿದವರಿಗೆ ಮಾತ್ರ ಅನ್ವಯವಾಗುತ್ತದೆ. ಹಸುಗೂಸು ಮತ್ತು ಚಿಕ್ಕ ಮಕ್ಕಳಲ್ಲಿ ಸೋಡಿಯಂನ್ನು ವಿಸರ್ಜಿಸುವ ಕಾರ್ಯಕ್ಷಮತೆ ಕಡಿಮೆ ಇರುವುದರಿಂದ, ಅವರ ಆಹಾರದಲ್ಲಿ ಸಾಕಷ್ಟು ಕಡಿಮೆ ಪ್ರಮಾಣದಲ್ಲಿ (1ರಿಂದ 6 ತಿಂಗಳ ಮಗುವಿಗೆ ದಿನಕ್ಕೆ 1 ಗ್ರಾಂಗಿಂತಲೂ ಕಡಿಮೆ, 1ರಿಂದ 7 ವರ್ಷಗಳವರಗೆ ದಿನಕ್ಕೆ 2ಗ್ರಾಂನಷ್ಟು, ಮತ್ತು 7ರಿಂದ 14 ವರ್ಷದವರಿಗೆ ದಿನಕ್ಕೆ 5ಗ್ರಾಂ) ಉಪಯೋಗಿಸುವುದು ಒಳ್ಳೆಯದು. ಮಕ್ಕಳು ಹಠ ಮಾಡುತ್ತಾರೆಂದು ಉಪ್ಪಿನಂಶವಿರುವ ಪ್ಯಾಕೇಟ್ ತಿಂಡಿಗಳನ್ನು ಕೊಡಿಸುವುದು ಕಡಿಮೆಗೊಳಿಸುವುದು ಸೂಕ್ತ. ಏಕೆಂದರೆ, ಅಂತಹ ತಿಂಡಿಗಳಲ್ಲಿ ಸಾಕಷ್ಟು ಉಪ್ಪಿನಂಶ ಅಡಗಿರುತ್ತದೆ. ಇತ್ತೀಚೆಗೆ ಫಿನ್‌ಲ್ಯಾಂಡ್ ದೇಶದ ವಿಜ್ಞಾನಿಗಳು, ಅತಿಯಾದ ಉಪ್ಪಿನಂಶದ ಆಹಾರವನ್ನು ತಿನ್ನುವುದರಿಂದ ಪರೋಕ್ಷವಾಗಿ ಅದು ಮಕ್ಕಳಲ್ಲಿ ಬೊಜ್ಜು ಬೆಳೆಯಲು ಕಾರಣವಾಗಿ, ಮುಂದೆ ಅವರು ಸಕ್ಕರೆ ಕಾಯಿಲೆ (ಡಯಾಬಿಟೀಸ್ ಟೈಪ್-೨) ಮತ್ತು ಹೃದಯ-ಸಂಬಂಧಿ ಕಾಯಿಲೆಗಳಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು ಎಂದು ಸಂಶೋಧಿಸಿದರು. ಲಂಡನ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಅವರ ದೇಶದಲ್ಲಿ ನಡೆಸಿದ ಅಧ್ಯಯನದಿಂದಲೂ ಇದು ಸತ್ಯವೆಂದು ನಿರೂಪಿತವಾಯಿತು. ದೈನಂದಿನ ಆಹಾರದಲ್ಲಿ ಉಪ್ಪನ್ನು ಅಗತ್ಯಕ್ಕಿಂತ ಹೆಚ್ಚು ಬಳಸಿದರೆ, ಇನ್ನೂ ಕೆಲವು ತೀಕ್ಷ್ಣವಾದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಎಂದು ವ್ಶೆದ್ಯಕೀಯ ಸಂಶೋಧನೆಗಳಿಂದ ತಿಳಿದುಬರುತ್ತಿದೆ. ಉಪ್ಪಿನಂಶವಿರುವ ಆಹಾರವನ್ನು ತುಂಬಾ ಇಷ್ಟಪಡುವವರು ನಾಲಿಗೆಯ ಚಪಲತೆಗಾಗಿ ಅಂತಹ ಆಹಾರವನ್ನು ಕಡಿಮೆಗೊಳಿಸಲು ಸಾಧ್ಯವಾಗದೇ ಇದ್ದರೆ, ಅಂಥಹವರಿಗೆ ಇನ್ನೊಂದು ಸರಳ ಮಾರ್ಗೋಪಾಯವೆಂದರೆ ಯಥೇಚ್ಛವಾಗಿ ನೀರು ಕುಡಿಯುವುದು. ಸಾಕಷ್ಟು ನೀರು ಕುಡಿಯುವುದರಿಂದ ದೇಹದಲ್ಲಿ ಅಗತ್ಯಕ್ಕಿಂತ ಜಾಸ್ತಿ ಇರುವ ಸೋಡಿಯಂ ಬೆವರು ಮತ್ತು ಮೂತ್ರದ ಮೂಲಕ ಹೊರಹೋಗುವುದರಿಂದ ಉಪ್ಪಿನಿಂದ ಉಂಟಾಗುವ ಅಪಾಯಗಳಿಂದ ಪಾರಾಗಬಹುದು. ಪ್ರಾಯಶ: ನಮ್ಮ ಹಿರಿಯರು ಅದಕ್ಕೆ ಹೇಳಿರಬೆಕು, ‘ಉಪ್ಪು ತಿಂದವ ನೀರು ಕುಡಿಯಲೇಬೇಕು’.

Read more from ವಿಜ್ಞಾನ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments