ಶಿವು.ಕೆ
(“ವೆಂಡರ್ ಕಣ್ಣು ” ಕೃತಿಯ ಲೇಖಕ)
ಮಹಡಿ ಮನೆಯ ಕಿಟಕಿಯಲ್ಲಿ ನಾನು ಇಣುಕಿದಾಗ ಹಾಲ್‍ನ ಬಲಬದಿಯ ಆಡುಗೆ ಮನೆಯ ಬಾಗಿಲಿನಲ್ಲಿ ಅವರ ನೆರಳು ಕಾಣಿಸಿದ್ದು ನೋಡಿ ನನಗೆ ಸಮಾಧಾನವಾಗಿತ್ತು. “ಸಾರ್” ಅಂತ ಜೋರಾಗಿ ಕೂಗಿದೆ. ಆವರಿಗೆ ಗೊತ್ತಾಗಲಿಲ್ಲ. ಕಾಲಿಂಗ್ ಬೆಲ್ ಒತ್ತಿದೆ, ತಿರುಗಿ ನೋಡಲಿಲ್ಲ. ಬಾಗಿಲು ಬಡಿದೆ. ಹೂಹೂಂ…ಆತ ತಿರುಗಿ ನೋಡಲಿಲ್ಲ. ಇದ್ಯಾಕೋ ಸರಿಬರಲಿಲ್ಲವೆಂದು ಮತ್ತೆ ನಾಲ್ಕೈದು ಬಾರಿ ಬೆಲ್ ಮಾಡಿದೆ. ಬಾಗಿಲು ತಟ್ಟಿದೆ…”ಸಾರ್, ಸಾರ್,” ಜೋರಾಗಿ ಕೂಗಿದೆ. ನನ್ನ ಕೂಗಿಗೆ ಕೆಳಗಿನ ಮನೆಯವರು ಕೇಳಿಸಿಕೊಂಡು ಮಾತಾಡಿದರೇ ಹೊರತು ಆತನಿರಲಿ, ಆತನ ನೆರಳೂ ಕೂಡ ನನ್ನ ಕೂಗಿಗೆ ಓಗೊಡಲಿಲ್ಲ.
ಒಳಗಿನಿಂದ ಲಾಕ್ ಮಾಡಿದ ಬಾಗಿಲ ಹೊರಗೆ ನಿಂತು ಕೂಗಿ,ಬಾಗಿಲು ತಟ್ಟಿ, ಬೆಲ್ ಮಾಡಿದರೂ ಒಳಗೆ ಹಾಲ್‍ನ ಬಲಬದಿಯಲ್ಲಿ ಕೇವಲ ಐದು ಆಡಿ ದೂರದಲ್ಲಿ ನಿಂತಿರುವ ವ್ಯಕ್ತಿಯೊಬ್ಬ ತಿರುಗಿ ನೋಡದಿದ್ದಲ್ಲಿ ಯಾರಿಗೇ ಆದರೂ ಸಿಟ್ಟು ಬರದಿರುತ್ತದೆಯೇ? ನೀವು ಹತ್ತುನಿಮಿಷ ಅಲ್ಲಿಯೇ ನಿಂತು ಕೂಗಿದರೂ ಆ ವ್ಯಕ್ತಿ ತಿರುಗಿನೋಡದಿದ್ದಲ್ಲಿ ಖಂಡಿತವಾಗಿ ನಿಮ್ಮ ಸಿಟ್ಟು ನೆತ್ತಿಗೇರಿಬಿಡುತ್ತಿತ್ತೇನೋ. ಆದ್ರೆ ನಾನು ಸಿಟ್ಟು ಮಾಡಿಕೊಳ್ಳುವಂತಿಲ್ಲ. ಏಕೆಂದರೆ ಆವರಿಗೆ ಕಿವಿ ಕೇಳುವುದಿಲ್ಲ. ಆವರು ತಿರುಗುವವರೆಗೆ ನಾನು ಕೂಗಿ, ಕಿರುಚಿ, ಬಾಗಿಲು ಬಡಿದು….ಇನ್ನೈದು ನಿಮಿಷ ಕಳೆದರೂ ಆತ ನನ್ನ ಕಡೆಗೆ ನೋಡಲು ಏನಾದರೂ ಮಾಡುತ್ತಿರಬೇಕು..” ಮತ್ತೆರಡು ನಿಮಿಷ ಕಳೆಯಿತು. ನಿದಾನವಾಗಿ ಅಡುಗೆ ಮನೆಯ ಬಾಗಿಲಿಗೆ ನೇತುಹಾಕಿದ್ದ ಸಣ್ಣ ಕರವಸ್ತ್ರದಲ್ಲಿ ಆ ನೆರಳು ಕೈವರೆಸಿಕೊಂಡು ಹಾಲ್‍ನೆಡೆಗೆ ಬರುತ್ತಿರುವುದು ಕಾಣಿಸಿತು. ಸದ್ಯ ನಾನು ಇಷ್ಟು ಹೊತ್ತು ಕಾದಿದ್ದಕ್ಕೂ ಸಾರ್ಥಕವಾಯಿತು ಅಂದುಕೊಂಡೆ. ಹಾಲ್‍ಗೆ ಬರುತ್ತಿದ್ದಂತೆ ಕೈಯಾಡಿಸಿದೆ. ಆತ ನನ್ನನ್ನು ನೋಡುತ್ತಿದ್ದರೂ ಏನೂ ಪ್ರತಿಕ್ರಿಯಿಸುತ್ತಿಲ್ಲ. ನನಗ್ಯಾಕೋ ಇವತ್ತು ಗಿಟ್ಟುವ ಕೆಲಸವಲ್ಲ ಎನಿಸಿ ಬೇಸರವಾಗತೊಡಗಿತ್ತು. ಆತ ಮತ್ತೆರಡು ಹೆಜ್ಜೆ ಬಾಗಿಲ ಕಡೆಗೆ ಬಂದರಲ್ಲ! ನಾನು ಕಿಟಕಿಯಾಚೆ ಕೈಯಾಡಿಸುತ್ತಿರುವುದು ಆವರಿಗೆ ಕಾಣಿಸಿತು.
ಯಾರೋ ಬಂದಿರಬಹುದು ಅನ್ನಿಸಿತೇನೋ, ಕಿಟಕಿಯ ಬಳಿಬಂದು ಕನ್ನಡಕವನ್ನು ಸರಿಮಾಡಿಕೊಳ್ಳುತ್ತಾ ನನ್ನನ್ನು ನೋಡಿ ನಾನೇ ಎಂದು ನಿದಾನವಾಗಿ ಖಚಿತಪಡಿಸಿಕೊಂಡು ಬಾಗಿಲು ತೆರೆದು
“ಶಿವುನಾ, ಬನ್ನಿ ಬನ್ನಿ, ಇವತ್ತು ತಾರೀಖು ಎರಡು ಅಲ್ವಾ…ನಾನು ಮರೆತೇಬಿಟ್ಟಿದ್ದೆ ಸಾರಿ” ಎಂದರು.
“ನಾನು ಬಂದು ಹತ್ತು ನಿಮಿಷವಾಯ್ತು,” ಅಂತ ಹೇಳಿ ಬಾಗಿಲಾಚೆ ನಿಂತು ನಾನು ಮಾಡಿದ ಎಲ್ಲಾ ಕೂಗಾಟ, ಕಾಲಿಂಗ್ ಬೆಲ್, ಇತ್ಯಾದಿಗಳನ್ನೆಲ್ಲ ಜೋರಾಗಿ ವಿವರಿಸಿದೆ.
“ಹೌದಾ…ನನಗೆ ಗೊತ್ತಾಗೊಲ್ಲಪ್ಪ, ವಯಸ್ಸು ಆಗಲೇ ಎಪ್ಪತ್ತನಾಲ್ಕು ದಾಟಿದೆ. ಕನ್ನಡಕ ಹಾಕಿಕೊಳ್ಳದಿದ್ದರೆ ಪಕ್ಕದವರು ಕಾಣುವುದಿಲ್ಲ, ನನಗೆ ಕಿವಿಕೇಳುವುದಿಲ್ಲವೆನ್ನುವುದು ನಿನಗೇ ಗೊತ್ತು.” ಎನ್ನುತ್ತಾ ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುತ್ತಾ ನನಗಾಗಿ ದಿನಪತ್ರಿಕೆ ಹಣತರಲು ಒಳಗೆ ಹೋದರು. ಅವರು ಒಳಗೆ ಹೋದರೆಂದರೆ ಮುಗಿಯಿತು. ನೆನಪಿನ ಶಕ್ತಿ ಕಡಿಮೆಯಾಗಿರುವುದರಿಂದ ಇಟ್ಟಿರುವ ಹಣವನ್ನು ಹುಡುಕಿ ತಡಕಿ, ನನಗೆ ತಂದುಕೊಡಲು ಕಡಿಮೆಯೆಂದರೂ ಹತ್ತು ನಿಮಿಷಬೇಕು.
ಅವರ ಸೋಫಾ ಮೇಲೆ ಕುಳಿತುಕೊಳ್ಳುತ್ತಿದ್ದ ಹಾಗೆ ಹಳೆಯ ನೆನಪುಗಳು ಮರುಕಳಿಸಿದವು. ಹದಿನೈದು ವರ್ಷಗಳ ಹಿಂದೆ ನಾನು ಹೀಗೆ ಅವರ ಮನೆಗೆ ತಿಂಗಳ ಮೊದಲ ಒಂದನೇ ಅಥವ ಎರಡನೇ ತಾರೀಖು ಸರಿಯಾಗಿ ದಿನಪತ್ರಿಕೆಯ ಹಣವಸೂಲಿಗೆ ಹೋಗುತ್ತಿದ್ದೆ. ನನ್ನ ನಿರೀಕ್ಷೆಯಲ್ಲಿಯೇ ಇದ್ದರೇನೋ ಎಂಬಂತೆ ವಯಸ್ಸಾದ ದಂಪತಿ ಒಳಗೆ ಕರೆದು ಕೂಡಿಸಿ ಪ್ರೀತಿಯಿಂದ ಮಾತಾಡಿ ನನ್ನ ಬಗ್ಗೆಯೆಲ್ಲಾ ವಿಚಾರಿಸಿಕೊಂಡು ಅವರ ವಿಚಾರಗಳನ್ನು ಹೇಳುತ್ತಾ ಸಂತೋಷಪಡುತ್ತಿದ್ದರು. ಕೆಲವೊಮ್ಮೆ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಬಂದಿದ್ದಾಗ ನನ್ನನ್ನು ಒಳಗೆ ಕರೆದು ಕೂಡಿಸಿ ಹಣಕೊಡುವಾಗ ನನಗೊಂಥರ ಸಂಕೋಚವಾಗುತ್ತಿತ್ತು. ಅವರದು ತುಂಬು ಕುಟುಂಬದ ಸಂಸಾರ. ದಿನಕಳೆದಂತೆ ಅವರಿಗೆ ನಿವೃತ್ತಿಯಾಯಿತು. ವಯಸ್ಸಾದಂತೆ ರೋಗಗಳು ಹೆಚ್ಚಾಗುತ್ತವಲ್ಲ, ನಿದಾನವಾಗಿ ಇವರಿಗೆ ಕಿವಿ ಕೇಳದಂತಾಗತೊಡಗಿತ್ತು. ಹತ್ತು ಬಾರಿ ಕೂಗಿದರೆ ಒಮ್ಮೆ ತಿರುಗಿನೋಡುವ ಸ್ಥಿತಿಗೆ ಬಂದಿದ್ದರು ಆತ. ಆದರೂ ಕಳೆದ ಹತ್ತು ವರ್ಷಗಳಿಂದ ಆತ ಓದುತ್ತಿದ್ದುದ್ದು ಶಿವು ತಂದುಕೊಡುವ ಡೆಕ್ಕನ್ ಹೆರಾಲ್ಡ್ ಪೇಪರ್ ಮಾತ್ರ! ನಮ್ಮ ಜೀವನ ಪರ್ಯಾಂತ ಶಿವುನೇ ನಮಗೆ ಪೇಪರ್ ತಂದುಕೊಡಬೇಕು! ಹಾಗಂತ ದಂಪತಿಗಳಿಬ್ಬರೂ ತಮಾಷೆ ಮಾಡುವುದರ ಜೊತೆಗೆ ತುಂಬು ಪ್ರೀತಿಯಿಂದ ನನ್ನ ಬಳಿಯೇ ಹೇಳುತ್ತಿದ್ದರು.
ನನ್ನಂಥ ಸಾವಿರಾರು ವೆಂಡರುಗಳು ಇಂಥ ಗ್ರಾಹಕರ ದೆಸೆಯಿಂದಲೇ ಇವತ್ತು ಹೊಟ್ಟೆತುಂಬ ಉಂಡು…ನೆಮ್ಮದಿಯಾಗಿ ಮಲಗಿ ಕಣ್ತುಂಬ ನಿದ್ರಿಸುವುದು!
ಮತ್ತೆ ಮೂರು ವರ್ಷ ಕಳೆಯಿತು. ಚೆನ್ನಾಗಿರುವವರನ್ನು ಕಂಡರೆ ದೇವರಿಗೂ ಹೊಟ್ಟೆ ಕಿಚ್ಚಂತೆ ಅನ್ನುವ ಹಾಗೆ ಒಂದು ದಿನ ಇದ್ದಕ್ಕಿದ್ದ ಹಾಗೆ ಅವರ ಶ್ರೀಮತಿಗೆ ಬೆನ್ನು ಮೂಳೆಯ ತೊಂದರೆಯಿಂದಾಗಿ ಸೊಂಟ ಬಿದ್ದುಹೋಯಿತು. ಚುರುಕಾಗಿ ಮನೆತುಂಬಾ ಓಡಾಡಿಕೊಂಡಿದ್ದ ಆಕೆ ವಯಸ್ಸು ಅರವತ್ತೆಂಟರ ಸನಿಹದ ಇಳಿವಯಸ್ಸಿನಲ್ಲಿ ಇನ್ನುಳಿದ ಬದುಕಲ್ಲಿ ಊಟ, ತಿಂಡಿ, ಒಂದು ಎರಡು ಎಲ್ಲಾ ಹಾಸಿಗೆಯಲ್ಲೇ ಅಂತಾದರೆ ಆಕೆಯ ಸ್ಥಿತಿ ಹೇಗಿರಬಹುದು!. ಕಿವಿಕೇಳದ ಕಣ್ಣು ಮಂಜಾದ ತನಗಿಂತ ನಾಲ್ಕು ವರ್ಷ ದೊಡ್ಡವರಾದ ಗಂಡನನ್ನು ಈಕೆಯೇ ನೋಡಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಆಕೆಗೆ ಹೀಗೆ ಸೊಂಟ ಬಿದ್ದು ಹೋದರೆ ಗತಿಯೇನು! ಮುಂದೆ ಆತ ಯಾವ ಸ್ಥಿತಿಯಲ್ಲಿದ್ದರೋ ಅದೇ ಸ್ಥಿತಿಯಲ್ಲಿ ಹೆಂಡತಿಯನ್ನು ನೋಡಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿತ್ತು. ಇವರಿಗಿದ್ದ ಮೂರು ಮಕ್ಕಳಲ್ಲಿ ಒಬ್ಬಳು ಅಮೇರಿಕಾದಲ್ಲಿ ಸೆಟ್ಲ್ ಆಗಿದ್ದರೆ, ಮತ್ತೊಬ್ಬಳು ದೆಹಲಿಯಲ್ಲಿ ಕೆಲಸದ ನಿಮಿತ್ತ ನೆಲೆಸಿಬಿಟ್ಟಿದ್ದಳು. ಮಗ ತಮಿಳುನಾಡಿನಲ್ಲಿ. ಇಂಥ ಸ್ಥಿತಿಯಲ್ಲಿ ವಾಪಸ್ಸು ಇವರ ಬಳಿಗೆ ಬರಲಾಗದ ಮಟ್ಟಿಗೆ ಮಕ್ಕಳು ಅವರವರ ಜೀವನದಲ್ಲಿ ಸೆಟ್ಲ್ ಆಗಿಬಿಟ್ಟಿದ್ದರು. ಬಂದರೂ ಆಗೊಮ್ಮೆ ಹೀಗೊಮ್ಮೆ ಬರುವಂತ ಅತಿಥಿಗಳು. ಇಲ್ಲೆ ಇವರನ್ನು ನೋಡಿಕೊಳ್ಳಲು ಉಳಿದರೆ ನಮ್ಮ ಕೆಲಸ, ಮಕ್ಕಳು, ಜೀವನದ ಗತಿಯೇನು ಎನ್ನುವ ಪ್ರಶ್ನೆಗಳೊಳಗೆ ಸಿಲುಕಿ ಅವರವರ ಬದುಕು ಅವರಿಗೆ ಎನ್ನುವಂತಾಗಿತ್ತು. ಬದುಕಿನಲ್ಲಿ ಜಿಗುಪ್ಸೆ, ವಿಷಾಧ, ಆತಂಕಗಳು ಬಂದರೆ ಬೇಗನೇ ಮಾಯವಾಗಿಬಿಡಬೇಕು. ಅದು ಬಿಟ್ಟು ಇನ್ನುಳಿದ ಜೀವನದುದ್ದಕ್ಕೂ ಜೊತೆಗೆ ಅಂಟಿಕೊಂಡುಬಿಟ್ಟರೇ…..ಸೊಂಟವಿಲ್ಲದ ಆಕೆಯ ಸ್ಥಿತಿ ಹಾಗಾಗಿ ಆರುತಿಂಗಳೊಳಗೆ ದೇವರ ಪಾದ ಸೇರಿಕೊಂಡು ಬಿಟ್ಟರು.
ಇನ್ನು ಮುಂದೆ ಕಣ್ಣು ಸರಿಯಾಗಿ ಕಾಣದ, ಕಿವಿಕೇಳದ, ಬಿಪಿ ಮತ್ತು ಶುಗರ್ ಕಾಯಿಲೆ ಮೈತುಂಬಿಕೊಂಡ, ಎಪ್ಪತ್ತನಾಲ್ಕ ವಯಸ್ಸಿನ ಹಿರಿಯಜ್ಜನೇ ಆ ಮನೆಗೆ ರಾಜ, ರಾಣಿ, ಸೇವಕ, ಸೈನಿಕ. ಇಂಥ ಪರಿಸ್ಥಿತಿಯಲ್ಲೂ ಅವರ ಅಚಾರ ವಿಚಾರಗಳು ವ್ಯತ್ಯಾಸವಾಗಿಲ್ಲ. ನಿತ್ಯ ಬೆಳಿಗ್ಗೆ ಆರು-ಆರುವರೆಗೆ ಎದ್ದು ಬಾಲ್ಕನಿಯಲ್ಲಿ ನಮ್ಮ ಹುಡುಗ ಹಾಕುವ ಡೆಕ್ಕನ್ ಹೆರಾಲ್ಡ್ ಪೇಪರಿಗಾಗಿ ಕಾಯುತ್ತಿರುತ್ತಾರೆ. ಪೇಪರ್ ಕೈಗೆ ಸಿಕ್ಕಮೇಲೆ ಎಂಟುಗಂಟೆಯವರೆಗೆ ದಪ್ಪಕನ್ನಡದ ಹಿಂದಿನ ಮಬ್ಬು ಕಣ್ಣಿನಲ್ಲೇ ಓದುತ್ತಾರೆ. ಆಮೇಲೆ ಒಂಬತ್ತುವರೆಗೆ ಸ್ನಾನ, ಮಡಿ, ಶಿವನಪೂಜೆ. ಆ ಸಮಯದಲ್ಲಿ ಯಾರು ಹೋದರೂ ಬಾಗಿಲು ತಟ್ಟಿದರೂ ಬಾಗಿಲು ತೆಗೆಯುವುದಿಲ್ಲ. ನಾನೇ ಅನೇಕ ಬಾರಿ ಹಣವಸೂಲಿಗೆ ಅಂತ ಎಂಟು ಗಂಟೆ ದಾಟಿದ ಮೇಲೆ ಹೋಗಿ ಬಾಗಿಲು ತಟ್ಟಿ ವಾಪಸ್ಸು ಬಂದಿದ್ದೇನೆ. ಒಬ್ಬಂಟಿಯಾದ ಮೇಲೆ ಅಡುಗೆ ಮಾಡಿಕೊಳ್ಳುತ್ತಾರೆ. ನಂತರ ಬೇರೆ ಪುಸ್ತಕದ ಓದು…ಸಣ್ಣ ನಿದ್ರೆ. ಕಣ್ಣು ಸ್ವಲ್ಪ ಕಾಣಿಸಿದರೂ ಕಿವಿ ಕೇಳಿಸುವುದಿಲ್ಲವಾದ್ದರಿಂದ ಟಿ.ವಿ ನೋಡುವುದಿಲ್ಲ. ಸಂಜೆ ಮತ್ತೆ ಪೂಜೆ, ಸಣ್ಣ ಮಟ್ಟಿನ ಊಟ…ನಿದ್ರೆ…ಹೀಗೆ ಜೀವನ ಸಾಗಿತ್ತು.
ಆತ ನನ್ನ ವೆಂಡರ್ ಕಣ್ಣು ಪುಸ್ತಕವನ್ನು ಓದಿದ್ದಾರೆ. ಎರಡನೆ ಪುಸ್ತಕ “ಗುಬ್ಬಿ ಎಂಜಲು”ನ್ನು ಬಿಡುಗಡೆಯಾದ ಒಂದು ವಾರಕ್ಕೆ ಕೊಟ್ಟುಬಂದಿದ್ದೆ. ಅವರು ಎರಡೇ ದಿನದಲ್ಲಿ ಓದಿ ಮುಗಿಸಿ ನನಗೆ ಫೋನ್ ಮಾಡಿ ಹೇಳಿದ್ದು ಹೀಗೆ,
“ಶಿವು, ನಿನ್ನ ಗುಬ್ಬಿ ಎಂಜಲು ಓದುತ್ತಿದ್ದೆ. ನಾವು ಮದುವೆಯ ನಂತರ ಹೊಸಮನೆಯಲ್ಲಿ ಸಂಸಾರ ನಡೆಸುತ್ತಿದ್ದ ಆ ದಿನಗಳು ನೆನಪಾದವು. ಅದನ್ನು ನನ್ನ ಶ್ರೀಮತಿಯೊಂದಿಗೆ ಹಂಚಿಕೊಳ್ಳೋಣವೆಂದರೆ ಅವಳೇ ಇಲ್ಲ” ಎಂದು ಭಾವುಕತೆಯಿಂದ ಹೇಳಿದಾಗ ನನಗೂ ಕಣ್ಣು ತುಂಬಿಬಂದಿತ್ತು.
ಇನ್ನೂ ಏನೇನೋ ಅಲೋಚನೆಗಳು ಬರುತ್ತಿದ್ದವು ಅಷ್ಟರಲ್ಲಿ ಆವರು ನನಗೆ ಕೊಡಬೇಕಾದ ಒಂದು ತಿಂಗಳ ದಿನಪತ್ರಿಕೆ ಹಣ ಹಿಡಿದುಕೊಂಡು ಬಂದರಲ್ಲ, ನಾನು ಅವರದೇ ಬದುಕಿನ ನೆನಪಿನ ಲೋಕದಿಂದ ಹೊರಬಂದೆ.
“ಶಿವು ತಡವಾಯ್ತು, ಹಣ ಎಲ್ಲಿಟ್ಟಿರುತ್ತೇನೆ ಅನ್ನೋದ ನೆನಪಾಗೋಲ್ಲ.” ನನಗೆ ಹಣಕೊಡುತ್ತಾ ಹಾಗೆ ನಿದಾನವಾಗಿ ಸೋಪಾ ಮೇಲೆ ಕುಳಿತರು.
ಸ್ವಲ್ಪ ತಡೆದು “ನೋಡು ಶಿವು, ಕೆಲವೊಂದು ವಿಚಾರವನ್ನು ನಿನ್ನಲ್ಲಿ ಹೇಳಬೇಕಿದೆ. ಎರಡು ತಿಂಗಳ ಹಿಂದೆ ನಾನು ನಮ್ಮ ಮನೆಯ ಮೆಟ್ಟಿಲಿಳಿಯುವಾಗ ಕೆಳಗೆ ಜಾರಿಬಿದ್ದೆ ಅಷ್ಟೆ. ಪ್ರಜ್ಞೆತಪ್ಪಿತ್ತು. ಒಂದು ದಿನದ ನಂತರ ನನಗೆ ಪ್ರಜ್ಞೆ ಬಂದಾಗ ಆಸ್ಪತ್ರೆಯ ಬೆಡ್ ಮೇಲಿದ್ದೆ. ನನ್ನ ಕೆಳಗಿನ ಮನೆಯವರು ಆಸ್ಪತ್ರೆಗೆ ಸೇರಿಸಿದ್ದರು. ಅಷ್ಟರಲ್ಲಿ ನನ್ನ ದೆಹಲಿಯ ಮಗಳು ಬಂದು ನನ್ನನ್ನು ಮಾತಾಡಿಸಿ ಏನು ಆಗೋಲ್ಲ ನಾನಿದ್ದೇನೆ ಅಂತ ದೈರ್ಯ ಹೇಳಿದಳು. ಮತ್ತೆ ಯಾರೋ ಬಂದು ನನಗೆ ಅನಾಸ್ತೇಶಿಯ ಇಂಜೆಕ್ಷನ್ ಕೊಟ್ಟು ಅಪರೇಷನ್ ಮಾಡಿದರಂತೆ. ನನಗೆ ಪ್ರಜ್ಞೆ ಬಂದಾಗ ನನ್ನ ಉಸಿರಾಟದಲ್ಲಿ ಏನೋ ವ್ಯತ್ಯಾಸವಾದಂತೆ ಅನ್ನಿಸುತ್ತಿತ್ತಾದರೂ ಗೊತ್ತಾಗಲಿಲ್ಲ. ಅಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಹೊತ್ತಿಗೆ ಗೊತ್ತಾಗಿತ್ತು ಕೃತಕ ಉಸಿರಾಟಕ್ಕಾಗಿ ನನಗೆ ಫೇಸ್ ಮೇಕರ್ ಹಾಕಿದ್ದಾರೆಂದು. ಕೆಲವು ದಿನಗಳಲ್ಲಿ ನನ್ನ ಮಗಳು ದೆಹಲಿಗೆ ಅವಳ ಜೀವನಕ್ಕಾಗಿ ಹೊರಟೇಬಿಟ್ಟಳು. ಅಮೇರಿಕಾದಿಂದ ಮತ್ತೊಬ್ಬ ಮಗಳು ಅಳಿಯ ಮಕ್ಕಳು ಎಲ್ಲಾ ಬಂದು ನನ್ನನ್ನು ನೋಡಿಕೊಂಡು ಒಂದು ವಾರವಿದ್ದು ವಾಪಸ್ಸು ಹೊರಟು ಹೋದರು. ಇನ್ನು ನನ್ನ ಮಗನಂತೂ ನನ್ನಿಂದ ಕಿತ್ತುಕೊಳ್ಳಲು ಬರುತ್ತಾನೆ ಹೊರತು, ಇಂಥ ಸಮಯದಲ್ಲೂ ನನ್ನ ಸಹಾಯಕ್ಕೆ ಬರಲಿಲ್ಲ. ಕೆಲವೇ ದಿನಗಳಲ್ಲಿ ನಾನು ಮತ್ತೆ ಎಂದಿನಂತೆ ಈ ಮನೆಗೆ ನಾನೇ ರಾಜ ರಾಣಿ, ಸೈನಿಕ ಸೇವಕ ಎಲ್ಲಾ ಆಗಿಬಿಟ್ಟೆ.” ಹೇಳುತ್ತಾ ಮಾತು ನಿಲ್ಲಿಸಿದರು.
ಸ್ವಲ್ಪ ಸುಧಾರಿಸಿಕೊಳ್ಳುತ್ತಾ, “ಅದಾದ ಮೇಲೆ ನನಗೆ ಆಡಿಗೆ ಮಾಡಿಕೊಳ್ಳಲು ಆಗಲಿಲ್ಲ. ಸದ್ಯ ಕೆಳಗಿನ ಮನೆಯ ಬಾಡಿಗೆಯವರು ಒಳ್ಳೆಯವರು. ನೀನು ಹಾಕಿದ ಡೆಕ್ಕನ್ ಹೆರಾಲ್ಡ್ ಓದಿದ ಮೇಲೆ ಎತಾ ಸ್ಥಿತಿ ಸ್ನಾನ ಶಿವನ ಪೂಜೆ ಮುಗಿಸಿದ ಮೇಲೆ ಅವರು ಮೇಲೆ ಬಂದು ನನ್ನನ್ನು ನಿದಾನವಾಗಿ ಕೆಳಗೆ ಕರೆದುಕೊಂಡು ಹೋಗಿ ತಿಂಡಿ ಕೊಡುತ್ತಾರೆ. ಅಮೇಲೆ ಅಲ್ಲೇ ನಿದ್ರೆ ಮಾಡುತ್ತೇನೆ. ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ಅವರು ನನ್ನನ್ನು ಎಚ್ಚರಗೊಳಿಸಿ ಚಪಾತಿ ಅನ್ನ ಸಾಂಬರು ಇತ್ಯಾದಿ ಊಟಕೊಡುತ್ತಾರೆ. ಊಟ ಮಾಡಿದ ಮೇಲೆ ನಿದಾನವಾಗಿ ಮೇಲೆ ಬಂದುಬಿಡುತ್ತೇನೆ. ಸಂಜೆ ಒಂದು ಕಾಫಿ ಕಳಿಸುತ್ತಾರೆ. ರಾತ್ರಿ ಎಂಟುಗಂಟೆಗೆ ಚಪಾತಿಯನ್ನು ಚೂರು ಚೂರು ಮಾಡಿ ಒಂದು ಲೋಟ ಹಾಲಿಗೆ ಹಾಕಿ ನೆನಸಿ ಜೊತೆಗೊಂದು ಬಾಳೆಹಣ್ಣು ಕೆಲಸದವಳ ಕೈಲಿ ಮೇಲೆ ಕಳಿಸುತ್ತಾರೆ. ಅದನ್ನು ತಿಂದು ಮಲಗಿಬಿಡುತ್ತೇನೆ” ಎಂದರು.
“ನೋಡು ಶಿವು ಇಲ್ಲಿ ಗಟ್ಟಿಯಾಗಿದೆಯಲ್ಲಾ, ಅದೇ ಜಾಗದಲ್ಲಿ ಫೇಸ್ ಮೇಕರ್ ಹಾಕಿದ್ದಾರೆ. ನಿನ್ನೆಯಲ್ಲಾ ನೋವು ಹೆಚ್ಚಾಗಿ ಇಲ್ಲಿ ಉಬ್ಬಿಕೊಂಡು ಇಡೀ ದಿನ ಒದ್ದಾಡಿಬಿಟ್ಟೆ. ಇವತ್ತು ಸ್ವಲ್ಪ ಪರ್ವಾಗಿಲ್ಲ. ಅಂತ ನನ್ನ ಕೈಯನ್ನು ಅವರ ಎದೆಯ ಎಡಭಾಗಕ್ಕೆ ಮುಟ್ಟಿಸಿಕೊಂಡರು. ಮೂರುತಿಂಗಳಿಗೊಮ್ಮೆ ದೆಹಲಿಯಲ್ಲಿರುವ ಮಗಳು ಮತ್ತು ಅಳಿಯ ಬಂದು ನೋಡಿಕೊಂಡು ಹೋಗುತ್ತಾರೆ. ಮಗನಂತೂ ಹತ್ತಿರದ ತಮಿಳುನಾಡಿನಲ್ಲಿದ್ದರೂ ಒಮ್ಮೆಯೂ ಬರುವುದಿಲ್ಲ. ನನ್ನ ಮೇಲೆ ತುಂಬಾ ಪ್ರೀತಿಯಿರುವ ಅಮೆರಿಕಾದ ಮೊದಲ ಮಗಳು ಎರಡು ದಿನಕ್ಕೊಮ್ಮೆ ಫೋನ್ ಮಾಡುತ್ತಾಳೆ, ನನ್ನ ದುರಾದೃಷ್ಟಕ್ಕೆ ಅವಳ ಮಾತನ್ನು ಕೇಳಿಸಿಕೊಳ್ಳಲು ನನಗೆ ಕಿವಿಯೇ ಇಲ್ಲ” ಎಂದು ಭಾವುಕರಾಗಿ ಕಣ್ಣೀರಾದಾಗ ನನ್ನ ಕಣ್ಣು ತುಂಬಿಬಂದಿತ್ತು.
“ಆಯಸ್ಸು ಕರಗುವ ಸಮಯದಲ್ಲಿ ಮನಸ್ಸಿಗಾಗುವ ಕೊರಗನ್ನು ಮರೆಯಲು ಪೂಜೆ, ಪುಸ್ತಕಗಳು, ನಿನ್ನ ಡೆಕ್ಕನ್ ಹೆರಾಲ್ಡ್ ಪೇಪರ್……..ಅಷ್ಟಕ್ಕೆ ಮಾತು ನಿಲ್ಲಿಸಿ, “ಸರಿಯಪ್ಪ ನೀನು ಹೋಗಿಬಾ, ಆದ್ರೆ ನೀವು ಮಾತ್ರ ನನಗೆ ಡೆಕ್ಕನ್ ಹೆರಾಲ್ಡ್ ಹಾಕುವುದನ್ನು ತಪ್ಪಿಸಬೇಡ….ಎಂದು ಹೇಳುತ್ತಾ ಮತ್ತೆ ನಿದಾನವಾಗಿ ಪೂಜೆಗೆ ಒಳಗೆ ಹೋದರು.
ನಾನು ನಿದಾನವಾಗಿ ಮೆಟ್ಟಿಲಿಳಿಯುತ್ತಿದ್ದೆ. ಹಳ್ಳಿಯಲ್ಲಿ ವಯಸ್ಸಾದವರ ಕೊನೆದಿನಗಳನ್ನು ಮನಮುಟ್ಟುವಂತೆ ಚಿತ್ರಿಸಿರುವ ಕಾಡುಬೆಳದಿಂಗಳು ಸಿನಿಮಾ ನೆನಪಾಗಿತ್ತು. ಹಳ್ಳಿಯಷ್ಟೇ ಏಕೆ ಇಂಥ ಮೆಟ್ರೋಪಾಲಿಟನ್ ನಾಡಿನಲ್ಲಿರುವ ಹಿರಿಯರಿಗೆ ಕೊನೆದಿನಗಳಲ್ಲಿ ಬೆಳದಿಂಗಳು ತೋರಿಸುವವರು ಯಾರು? ಎನ್ನುವ ಪ್ರಶ್ನೆ ನನ್ನಲ್ಲಿ ಕಾಡತೊಡಗಿತ್ತು.
[ವೆಂಡರ್ ಮತ್ತು ಗ್ರಾಹಕರ ಕಥೆಗಳು ಮುಗಿಯಿತು ಎಂದುಕೊಳ್ಳುತ್ತಿದ್ದ ಹಾಗೆ ಇಂಥ ಘಟನೆಗಳು ಇನ್ನಷ್ಟು ಮತ್ತಷ್ಟು ವೆಂಡರ್ ಲೇಖನಗಳನ್ನು ಬರೆಯಲು ಪ್ರೇರೇಪಿಸುತ್ತಿವೆ….ಬಹುಶಃ ಇವೆಲ್ಲಾ ಮುಗಿಯದ ಕತೆಗಳಾ? ಬ್ಲಾಗ್ ಗೆಳೆಯರಾದ ನೀವೇ ಉತ್ತರಿಸಬೇಕು]
ಚಿತ್ರಕೃಪೆ: ಗೂಗಲ್ ಇಮೇಜ್