” ಸೇವೆಯಲ್ಲೇ ಸಂಘ ದಕ್ಷ”
ರಾಜೇಶ್ ಪದ್ಮಾರ್, ಬೆಂಗಳೂರು
ಅಕ್ಟೋಬರ್ ೨೫ರ ಆರೆಸ್ಸೆಸ್ ಪ್ರಾಂತ ಪ್ರಚಾರಕ್ ಮುಕುಂದ ಅವರ ಲೇಖನಕ್ಕೆ ಪ್ರತಿಯಾಗಿ ನಿನ್ನೆ ಸಚ್ಚಿದಾನಂದ ಜೋಷಿಯವರ ಪ್ರತಿಕ್ರಿಯೆ ಮೂಡಿಬಂದ ರೀತಿ ನೀರಸ ಮಾತ್ರವಲ್ಲ, ಒಂಥರಾ ಚಡಪಡಿಸುವಿಕೆಯಿಂದ ಜನ್ಮ ತಾಳಿದ ಲೇಖನದಂತೆ ಭಾಸವಾಯಿತು. ಸಾರ್ವಜನಿಕವಾಗಿ ತುಸು ಮೌನಿಯಾಗಿರುವ ಆರೆಸ್ಸೆಸ್ ನಂಥಹಾ ಸಂಘಟನೆಯ ಪ್ರಮುಖರು ಮಂಡಿಸಿದ ಸಂಘಟನಾತ್ಮಕ ಅಭಿಪ್ರಾಯಗಳು ಬಿಜೆಪಿ ಮಾತ್ರವಲ್ಲ, ರಾಜಕೀಯ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತನಾಗಿರುವ ಓರ್ವಸಾಮಾನ್ಯ ವ್ಯಕ್ತಿಗೂ ಆಲೋಚನೆಗೀಡುಮಾಡುವ ಅಂಶಗಳನ್ನು ಉದಾಹರಿಸಿತ್ತು.
‘ಸಂಘ ಪ್ರಾರಂಭಿಸಿದ ರಾಜಕೀಯ ಪಕ್ಷ ಹಾಳಾದರೆ ಅದನ್ನು ನಾಶ ಮಾಡುವ ಶಕ್ತಿಯೂ ಸಂಘಕ್ಕೆ ಇದೆ’ ಎಂಬ ಅಂಶವು ಸಣ್ಣ ಮಾತೇನಲ್ಲ. ದಶಕಗಳ ಸಾಮಾಜಿಕ ಸಂಘಟನಾ ಕೌಶಲ್ಯ ಹೊಂದಿರುವ, ಸಾಮಾಜಿಕ ಧ್ಯೇಯಕ್ಕಾಗಿಯೇ ಜೀವನ-ಸಮಯ ಮೀಸಲಿಟ್ಟ ಆರೆಸ್ಸೆಸ್ ಪೂರ್ಣಾವಧಿ ಕಾರ್ಯಕರ್ತರ ಚಿಂತನೆಯಿಂದ ಮೊಗೆದು ಬಂದ ಧೃಡ ಮಾನಸಿಕತೆಯ ಪ್ರತೀಕ ಅದು. ಸೃಷ್ಟಿ-ನಾಶ-ಮರುಸೃಷ್ಟಿ ಈ ಮೂರೂ ಸಾಧ್ಯ ಎಂದು ಆತ್ಮವಿಶ್ವಾಸದಿಂದಲೇ ಆರೆಸ್ಸೆಸ್ ಪ್ರಮುಖರಾದ ಮುಕುಂದ ಹೇಳಿರುವುದನ್ನು ಲೇಖನದಲ್ಲಿ ಗಮನಿಸಬಹುದು. ಸಾರ್ವಜನಿಕವಾಗಿ ಈ ರೀತಿಯ ಹೇಳಿಕೆ ಕೊಡುವ ಮುಂಚೆ ಖಂಡಿತವಾಗಿಯೂ ತನ್ನ ಶಕ್ತಿ-ಸಾಮರ್ಥ್ಯದ, ಹೇಳಿಕೆ ಮಾಡಬಹುದಾದ ಪರಿಣಾಮಗಳ, ಇತರ ಎಲ್ಲಾ ಸಾಧ್ಯಾಸಾಧ್ಯತೆಗಳನ್ನು ಆರೆಸ್ಸೆಸ್ ಯೋಚಿಸುತ್ತದೆ ಎಂದೇಕೆ ಸಚ್ಚಿದಾನಂದ ಜೋಶಿಯವರಿಗೆ ಅನಿಸದು? ಮತ್ತಷ್ಟು ಓದು 
ನೆನಪು ನೆನಪಿಸಲೊಂದು ನೆಪ
ಪ್ರವೀಣ ಚಂದ್ರ ಪುತ್ತೂರು
ನಿನಗೆ ಶೇಷಮ್ಮ ಟೀಚರ್‌ನ ನಂಬರ್ ಬೇಕಾ? ಅಂತ ಸ್ನೇಹಿತನೊಬ್ಬ ಕೇಳಿದಾಗ ನನಗೆ ಅಚ್ಚರಿ. ಸುಮಾರು 12 ವರ್ಷದ ಹಿಂದೆ ನನಗೆ ಪ್ರಾಥಮಿಕ ಶಿಕ್ಷಣ ಕಲಿಸಿದ ಟೀಚರ್ ಅವರು. ಬಾಲ್ಯವೆಂದರೆ ಹಾಗೇ ತಾನೇ. ಅಲ್ಲಿ ಟೀಚರ್, ಮೇಸ್ಟ್ರು, ಊರು, ಕಾಡುಗುಡ್ಡ, ಅಮ್ಮನ ಪ್ರೀತಿ, ಗುರುಗಳು ನೀಡಿದ್ದ ಬೆತ್ತದ ಏಟು, ಸ್ನೇಹಿತನ ಮುನಿಸು, ತಂಟೆ, ತಕರಾರು ಹೀಗೆ ನೆನಪುಗಳ ಜಾತ್ರೆ. ಎಲ್ಲರ ಭೀತಿಯಂತೆ ನನಗೆ ನನ್ನೂರು ಏನೋ ಕಳೆದುಕೊಂಡಂತೆ ಅನಿಸುತ್ತಿಲ್ಲ. ಊರು ವೃದ್ಧಾಶ್ರಮವೂ ಆಗಿಲ್ಲ. ಒಂದಿಷ್ಟು ಅಭಿವೃದ್ಧಿ ಬಿಟ್ಟರೆ ಹಿಂದಿನ ಹಾಗೇ ಇದೆ.
ಬಾಲ್ಯದ ಕನವರಿಕೆಯಿಂದ ಶೇಷಮ್ಮ ಟೀಚರ್‌ಗೆ ಫೋನ್ ಮಾಡಿದೆ. ಮನಸಿನ ತುಂಬಾ ಬಾಲ್ಯದ ಪ್ರವೀಣನೇ ತುಂಬಿಕೊಂಡಿದ್ದ. ಹೆಸರು ಹೇಳಿದಾಕ್ಷಣ ಗುರುತು ಹಿಡಿದು ಮಾತನಾಡಿದ್ದೇ ಮಾತನಾಡಿದ್ದು. ಅಮ್ಮ ಹೇಗಿದ್ದಾರೆ? ಅವರು ಹೇಗಿದ್ದಾರೆ? ಇವರು ಹೇಗಿದ್ದಾರೆ ಅಂತ ಇಡೀ ನನ್ನೂರಿನ ಆರೋಗ್ಯ ವಿಚಾರಿಸಿಕೊಂಡರು. ನಾನು ತಲುಪಿದ ನೆಲೆಯನ್ನು ಕೇಳಿ ಸಂತೋಷ ಪಟ್ಟರು. ಎಲ್ಲ ಅಬ್ಬೆಪಾರಿಯಾಗುತ್ತನೆಂದುಕೊಂಡಿದ್ದ ಹುಡುಗ ಇವನೇನಾ ಅಂತ ಅನಿಸಿರಬೇಕು.
ಶೇಷಮ್ಮ ಟೀಚರ್ ಎಂದರೆ ಮನದಲ್ಲಿ ಮೂಡುವುದು ಹಲವು ಮುಖಗಳು. ಕೋಪಗೊಂಡಾಗ ದುರ್ಗೆ. ಪ್ರೀತಿಯಿಂದ ಮಾತನಾಡುವಾಗ ಅಮ್ಮ. ಲೆಕ್ಕ ಹೇಳಿಕೊಡುವುದರಲ್ಲಿ ಸರಸ್ವತಿ. ಕ್ಲಾಸ್‌ನಲ್ಲಿ ನಾನು ಏನು ತಪ್ಪು ಮಾಡಿದರೂ ಮನೆಗೆ ಬಂದು ದೂರು ಹೇಳುತ್ತಿದ್ದರು. ನಾನು ಏಳನೇ ತರಗತಿ ಮುಗಿಸೋವರೆಗೂ ಅವರಿಗೆ ಮದುವೆಯಾಗಿರಲ್ಲಿಲ್ಲ. ನಂತರ ಮದುವೆಯಾಗಿ ದೂರದೂರಿಗೆ ಟ್ರಾನ್ಸ್‌ಫಾರ್ ಆಗಿದ್ದರು. ಇನ್ನು ಇವರು ನೋಡಲು ಸಿಗಲಾರರು ಅಂತ ಅಂದುಕೊಂಡಿದ್ದೆ. 10-12 ವರ್ಷಗಳ ನಂತರ ಮಾತನಾಡುವ ಅವಕಾಶ ಒದಗಿ ಬಂದಿತ್ತು. ಹೊಡೆಯುವುದನ್ನು ಹೊರತು ಪಡಿಸಿದರೆ ಶೇಷಮ್ಮ ಟೀಚರ್ ಕೆಟ್ಟವರಾಗಿರಲ್ಲಿಲ್ಲ. ಶಾರದ ಪೂಜೆಯಂದು ಅವರ ಮಡಿಲಲ್ಲಿ ಕುಳಿತುಕೊಂಡು ಅಕ್ಕಿಯ ಮೇಲೆ ಮೊದಲಾಕ್ಷರ ಕಲಿತಿದ್ದೆ. ಪ್ರವೀಣ್ ಅನ್ನೋ ಹೆಸರಿಗೆ ಚಂದ್ರನನ್ನು ಸೇರಿಸಿದ್ದು ಕೂಡ ಇವರೇ. ಮತ್ತಷ್ಟು ಓದು 




