” ಸೇವೆಯಲ್ಲೇ ಸಂಘ ದಕ್ಷ”
ರಾಜೇಶ್ ಪದ್ಮಾರ್, ಬೆಂಗಳೂರು
ಅಕ್ಟೋಬರ್ ೨೫ರ ಆರೆಸ್ಸೆಸ್ ಪ್ರಾಂತ ಪ್ರಚಾರಕ್ ಮುಕುಂದ ಅವರ ಲೇಖನಕ್ಕೆ ಪ್ರತಿಯಾಗಿ ನಿನ್ನೆ ಸಚ್ಚಿದಾನಂದ ಜೋಷಿಯವರ ಪ್ರತಿಕ್ರಿಯೆ ಮೂಡಿಬಂದ ರೀತಿ ನೀರಸ ಮಾತ್ರವಲ್ಲ, ಒಂಥರಾ ಚಡಪಡಿಸುವಿಕೆಯಿಂದ ಜನ್ಮ ತಾಳಿದ ಲೇಖನದಂತೆ ಭಾಸವಾಯಿತು. ಸಾರ್ವಜನಿಕವಾಗಿ ತುಸು ಮೌನಿಯಾಗಿರುವ ಆರೆಸ್ಸೆಸ್ ನಂಥಹಾ ಸಂಘಟನೆಯ ಪ್ರಮುಖರು ಮಂಡಿಸಿದ ಸಂಘಟನಾತ್ಮಕ ಅಭಿಪ್ರಾಯಗಳು ಬಿಜೆಪಿ ಮಾತ್ರವಲ್ಲ, ರಾಜಕೀಯ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತನಾಗಿರುವ ಓರ್ವಸಾಮಾನ್ಯ ವ್ಯಕ್ತಿಗೂ ಆಲೋಚನೆಗೀಡುಮಾಡುವ ಅಂಶಗಳನ್ನು ಉದಾಹರಿಸಿತ್ತು.
‘ಸಂಘ ಪ್ರಾರಂಭಿಸಿದ ರಾಜಕೀಯ ಪಕ್ಷ ಹಾಳಾದರೆ ಅದನ್ನು ನಾಶ ಮಾಡುವ ಶಕ್ತಿಯೂ ಸಂಘಕ್ಕೆ ಇದೆ’ ಎಂಬ ಅಂಶವು ಸಣ್ಣ ಮಾತೇನಲ್ಲ. ದಶಕಗಳ ಸಾಮಾಜಿಕ ಸಂಘಟನಾ ಕೌಶಲ್ಯ ಹೊಂದಿರುವ, ಸಾಮಾಜಿಕ ಧ್ಯೇಯಕ್ಕಾಗಿಯೇ ಜೀವನ-ಸಮಯ ಮೀಸಲಿಟ್ಟ ಆರೆಸ್ಸೆಸ್ ಪೂರ್ಣಾವಧಿ ಕಾರ್ಯಕರ್ತರ ಚಿಂತನೆಯಿಂದ ಮೊಗೆದು ಬಂದ ಧೃಡ ಮಾನಸಿಕತೆಯ ಪ್ರತೀಕ ಅದು. ಸೃಷ್ಟಿ-ನಾಶ-ಮರುಸೃಷ್ಟಿ ಈ ಮೂರೂ ಸಾಧ್ಯ ಎಂದು ಆತ್ಮವಿಶ್ವಾಸದಿಂದಲೇ ಆರೆಸ್ಸೆಸ್ ಪ್ರಮುಖರಾದ ಮುಕುಂದ ಹೇಳಿರುವುದನ್ನು ಲೇಖನದಲ್ಲಿ ಗಮನಿಸಬಹುದು. ಸಾರ್ವಜನಿಕವಾಗಿ ಈ ರೀತಿಯ ಹೇಳಿಕೆ ಕೊಡುವ ಮುಂಚೆ ಖಂಡಿತವಾಗಿಯೂ ತನ್ನ ಶಕ್ತಿ-ಸಾಮರ್ಥ್ಯದ, ಹೇಳಿಕೆ ಮಾಡಬಹುದಾದ ಪರಿಣಾಮಗಳ, ಇತರ ಎಲ್ಲಾ ಸಾಧ್ಯಾಸಾಧ್ಯತೆಗಳನ್ನು ಆರೆಸ್ಸೆಸ್ ಯೋಚಿಸುತ್ತದೆ ಎಂದೇಕೆ ಸಚ್ಚಿದಾನಂದ ಜೋಶಿಯವರಿಗೆ ಅನಿಸದು?
ಸ್ವಪನ್ ದಾಸ್ ಗುಪ್ತಾ ತಿಂಗಳುಗಳ ಹಿಂದೆ ಬರೆದ ರಾಜಕೀಯ ವಿಚಾರಗಳ ಬರಹದಿಂದ ಭಾರೀ ಪ್ರಭಾವಿತರಾಗಿರುವ ಜೋಶಿಯವರಿಗೆ ಸ್ವಂತ ಒಳನೋಟಗಳೇ ಇಲ್ಲ ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಅರೆಸ್ಸೆಸ್ ಅನ್ನು ಯಾರದೋ ಲೇಖನದಿಂದಲೋ, ಟೆಲಿವಿಷನ್ ಚರ್ಚೆಯ ಮೂಲಕವೋ, ಇಂಟರ್ನೆಟ್ ಅಥವಾ ಇತರರ ಬಾಯಿಂದ ಅರ್ಥ ಮಾಡಿಕೊಂಡು ಆರೆಸ್ಸೆಸ್ ನ್ನು ವಿಶ್ಲೇಷಿಸಿದರೆ ಆಗುವ ಎಡವಟ್ಟು ಇದು. ಸಂಘದ ಬಗ್ಗೆ ತನಗೆ ಗೊತ್ತಿರುವುದಕ್ಕಿಂತಲೂ ಗೊತ್ತಾಗಬೇಕಾದುದು ಬಹಳಷ್ಟಿದೆ ಎಂಬ ಪ್ರಾಮಾಣಿಕ ಆತ್ಮಾವಲೋಕನ ಜೋಷಿಯವರು ಮಾಡಿಕೊಳ್ಳಬೇಕು. ಅರೆಸ್ಸೆಸ್ಸ್ ನವರು ಬ್ಯಾಂಡ್ ಬಾರಿಸುತ್ತಾರೆ ಎಂದ ಮಾತ್ರಕ್ಕೆ ಅದು ವಾದ್ಯಶಾಲೆಯಲ್ಲ, ಕಬಡ್ಡಿ-ಲಗೋರಿ ಆಡಿದ ಮಾತ್ರಕ್ಕೆ ಕ್ರೀಡಾಸಂಘಟನೆಯೂ ಅಲ್ಲ. ಸೂರ್ಯ ನಮಸ್ಕಾರ ಇತ್ಯಾದಿ ವ್ಯಾಯಾಮ ಮಾಡಿದರೆ ಅದೇನು ವ್ಯಾಯಮಶಾಲೆಯೂ ಅಲ್ಲ. ಹೊರಪದರದಲ್ಲಿ ಕಾಣುವ ಈ ಎಲ್ಲ ಸಂಗತಿಗಳಿಗೂ ಭಿನ್ನವಾಗಿ ಗಹನವಾದ ರಾಷ್ಟೀಯ ಚಿಂತನೆಗಳನ್ನು ಜನಸಾಮಾನ್ಯರಲ್ಲೂ ಮೂಡಿಸುವ ವಿಶಿಷ್ಟ ಕಾರ್ಯಶೈಲಿ ಸಂಘದ್ದು. ಸಕ್ಕರೆಯನ್ನು ನೋಡಿದ ಮಾತ್ರಕ್ಕೆ ಅದರ ಸವಿ ಅರಿಯಲು ಸಾಧ್ಯವೇ? ಸವಿಯನ್ನರಿಯಲು ಸಕ್ಕರೆಯನ್ನು ಬಾಯೊಳಗೆ ಹಾಕಬೇಕು, ಅಂತೆಯೇ ಸಂಘವನ್ನರಿಯಲು, ಅದರ ಬಗ್ಗೆ ಸಾರ್ವಜನಿಕವಾಗಿ ವಿಮರ್ಶಿಸಲು ಸಂಘದೊಳಗೆ ಬರಬೇಕು ಎಂದು ಸರಸಂಘಚಾಲಕರಾಗಿ ಬೆಂಗಳೂರಿಗೆ ತನ್ನ ಮೊದಲ ಭೇಟಿಯಲ್ಲೇ ಮೋಹನ್ ಭಾಗವತ್ ಹೇಳಿದ್ದರು. ಅಲ್ಲದಿದ್ದರೆ ಯಾರದೋ ಲೇಖನ ಓದಿ ಆ ಲೇಖಕರ ವೈಯಕ್ತಿಕ ಹಾಗು ಸೀಮಿತ ಆಲೋಚನೆಯ ಪರಿಧಿಯಲ್ಲಿ ಒಂದು ಅಭಿಪ್ರಾಯಕ್ಕೆ ಜೋತು ಬಿದ್ದು ಸಂಘದ ವಿಮರ್ಶೆಗೆ ಮುಂದಾಗಬಹುದು.
“ಆರೆಸ್ಸೆಸ್ ದೇಶಾದ್ಯಂತ ೧.೫೩ಲಕ್ಷ ಸೇವಾಕಾರ್ಯ ಮಾಡುತ್ತಿದೆ. ಸರ್ಕಾರ ರಚನೆ ಒಂದಂಶ ಅಷ್ಟೆ” ಎಂದು ಅಧಿಕೃತ ಸ್ಪಷ್ಟೀಕರಣವನ್ನು ಸಂಶಯದಿಂದ ನೋಡಿದರೆ, ಅದು ಜೋಶಿಯವರ ವೈಯಕ್ತಿಕ ಅಭಿಪ್ರಾಯ ಅಷ್ಟೇ. ಒಂದು ವೇಳೆ ಸರ್ಕಾರ ರಚನೆಯೇ ಆರೆಸ್ಸೆಸ್ಸಿನ ಧ್ಯೇಯ-ಉದ್ದೇಶ ಆಗಿದ್ದಲ್ಲಿ ಅಧಿಕಾರ ಹಿಡಿಯಲು ೮೫ ವರ್ಷಗಳ ವರೆಗೆ ಕಾಯಬೇಕಾದ್ದೇನೂ ಇಲ್ಲ! ಈಗಾಗಲೇ ಅಧಿಕಾರ ಹಿಡಿಯಬಹುದಿತ್ತು. ಕರ್ನಾಟಕದಲ್ಲೂ ೧೯೪೦ರಲ್ಲೆ ಸಂಘ ಸ್ಥಾಪನೆಯಾಗಿದ್ದರೂ ಇತ್ತೀಚೆಗಷ್ಟೇ ಬಿಜೆಪಿ ಅಧಿಕಾರಕ್ಕೇರಿದೆ. ಸಂಘದ ಕಾರ್ಯಕರ್ತರ ಕೊಡುಗೆಯೂ ಇದರಲ್ಲಿ ಇಲ್ಲದಿಲ್ಲ. ಆದರೆ ಅದೇ ಅಂತಿಮವಲ್ಲ ಎಂದು ಎಳೆ ಎಳೆಯಾಗಿ ಮುಕುಂದ ಹೇಳಿದ್ದಾರೆ. ಬಿಜೆಪಿಯ ತಪ್ಪುಹೆಜ್ಜೆಗಳಿಗೆ ಸಾರ್ವಜನಿಕವಾಗಿ ಯಾವುದೇ ಅಳುಕಿಲ್ಲದೆ ಉತ್ತರಿಸಲು ಮನಸ್ಸು ಮಾಡಿದ್ದೇ, ಪ್ರಸಕ್ತ ರಾಜಕಾರಣ ಇತರ ಸನ್ನಿವೇಶಗಳ ಗಂಭೀರತೆಯನ್ನು ಸಾಕ್ಷೀಕರಿಸುತ್ತದೆ. ಇಲ್ಲಿ ಹುಳುಕು ಹುಡುಕುವುದನ್ನು ಏನೆನ್ನಬೇಕೋ ತಿಳಿಯದು.
ನಾನೂ ಹತ್ತಾರು ವರ್ಷದಿಂದ ಆರೆಸ್ಸೆಸ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿರುವವನು. ಕಾರ್ಯಕರ್ತರ ತರಬೇತಿ ಶಿಬಿರಗಳಲ್ಲನೇಕ ಭಾಗವಹಿಸಿದ್ದೇನೆ. ೨೦ ದಿನಗಳ ಸಂಘಶಿಕ್ಷಾವರ್ಗಗಳು, ೮ ದಿನಗಳ ಪ್ರಾಥಮಿಕ ಶಿಕ್ಷಾವರ್ಗ ಸೇರಿದಂತೆ ಹಲವಾರು ಶಿಬಿರಗಳ ದಿನಪೂರ್ತಿ ಕಾರ್ಯಕಲಾಪಗಳಲ್ಲಿ ಒಮ್ಮೆಯೂ, ಒಂದು ನಿಮಿಷದಷ್ಟೂ ರಾಜಕೀಯ ಚಟುವಟಿಕೆಗಳ ಕುರಿತು ತರಬೇತಿಯಾಗಲೀ, ಚರ್ಚೆ-ಸಂವಾದಗಳಾಗಲೀ ಆಗದು. ಆ ಜಗತ್ತೇ ಬೇರೆ! ಆ ಶಿಬಿರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಏನೇನೂ ಆರೆಸ್ಸೆಸ್ ಹಿನ್ನೆಲೆಯಿಲ್ಲದ ಹೊಸಬರೂ ಬರುತ್ತಾರೆ. ರಾಜಕೀಯ ಹೇಳಿಕೊಡ್ತಾರೇನೋ? ಎಂದು ಕೊಂಡು ಬಂದರೆ ನಿರಾಸೆಯೇಗತಿ. ಕೃಷಿ, ಜಾತಿ – ಭಾಷೆಗಳ ಬಿರುಕಿನ ಗೋಡೆ ಮೀರಿನಿಂತು ಸಾಮರಸ್ಯ ಸಾಧಿಸುವ ಬಗೆ, ಸಮಾಜ ಎದುರಿಸುತ್ತಿರುವ ವಿವಿಧ ಸವಾಲುಗಳು, ವೈಯಕ್ತಿಕ ಚಾರಿತ್ರ್ಯ ನಿರ್ಮಾಣ ಸೇರಿದಂತೆ ಓರ್ವ ಸಾಮಾಜಿಕ ಕಾರ್ಯಕರ್ತನಿಗೆ ಅತಿ ಅಗತ್ಯವಾಗಿ ಬೇಕಾದ ಹತ್ತಾರು ವಿಚಾರಗಳ ಸುತ್ತಲೂ ವಿಸ್ತಾರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ರಾಷ್ಟ್ರೀಯ ವಿಚಾರಗಳನ್ನೇ ಆಧಾರವಾಗಿಟ್ಟುಕೊಂಡ ಈ ಚಟುವಟಿಕೆಗಳ ಮೂಸೆಯಲ್ಲಿ ಅರಳಿದ ಕಾರ್ಯಕರ್ತರನೇಕ ಸಂಘ ಅಥವಾ ಸಂಘ ಸೂಚಿಸಿದ ಸಂಘಟನೆಯಲ್ಲಿ ಕೆಲಸ ಮಾಡುತ್ತಾರೆ. ಅದು ಜನಸಂಪರ್ಕ ತೀರಾ ವಿರಳವಾಗಿರುವ ಜಾರ್ಖಂಡ್-ಮೇಘಾಲಯದಂತಹ ದಟ್ಟ ಗುಡ್ಡಗಾಡು ಪ್ರದೇಶವಿರಬಹುದು. ನಗರದ ಸ್ಲಂ ಇರಬಹುದು, ಗ್ರಾಮೀಣಾಭಿವೃದ್ಧಿಯಿಂದ ಮೊದಲ್ಗೊಂಡು ಶಿಕ್ಷಣ, ಆರೋಗ್ಯ, ಆರ್ಥಿಕ ಸ್ವಾವಲಂಬನೆ, ಸೇರಿದಂತೆ ಹತ್ತಾರು ಆಯಾಮಗಳಲ್ಲಿ ತನ್ನನ್ನು ತಾನು ಸಮಾಜದೆದುರು ತೆರೆದುಕೊಂಡು ಸಂಘಕ್ಕೆ `ಸೇವೆ’ ಹೊಸ ಶಬ್ದ ಅಲ್ಲ. ಸಂಘದ ಹೆಸರಿನಲ್ಲೇ ಸೇವೆ ಇದೆ. ಕಾಶ್ಮೀರದ ಹಿಮಾವೃತ ರಸ್ತೆಗಳಲ್ಲಿ – ಕಣಿವೆ ತೀರಗಳಲ್ಲಿ ಸೈನಿಕರಿಗೆ ಸಹಾಯಮಾಡುವುದರಿಂದ ಮೊದಲ್ಗೊಂಡು ಅಂಡಮಾನ್-ಕನ್ಯಾಕುಮಾರಿಯ ಸುನಾಮಿ ಸಂತ್ರಸ್ತರ ತನಕ, ಗುಜರಾತಿನ ದೊಂಬಿ ಭೂಕಂಪಗಳೆಡೆಯಿಂದ ಬಂಗಾಲದ ಐಲಾ ಚಂಡಮಾರುತ, ಇತ್ತೀಚೆಗೆ ಲೇಹ್ ಪ್ರವಾಹದ ತನಕ ಸೇವೆಯ ಮೂಲಕ ಸಂಘ ಸಕ್ರಿಯವಾಗಿದೆ.
ಇಂದು ಆರೆಸ್ಸೆಸ್ ಶಿಕ್ಷಣಕ್ಷೇತ್ರದಲ್ಲಿ ೫೯,೪೯೮ ಆರೋಗ್ಯ ಕ್ಷೇತ್ರದಲ್ಲಿ ೩೮,೫೮೨ ಸಾಮಾಜಿಕ ಕ್ಷೇತ್ರದಲ್ಲಿ ೪೨,೩೦೪ ಆರ್ಥಿಕ ಸ್ವಾವಲಂಬಿ ಯೋಜನೆಗಳಲ್ಲಿ ೧೩,೩೯೨, ಹೀಗೆ ದೇಶಾದ್ಯಂತ ಒಟ್ಟು ೧ ಲಕ್ಷದ ೫೩,೭೭೬ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದರೆ. ಕರ್ನಾಟಕದ ಇಡ್ಕಿದು, ಕೋಣಾಜೆ, ಬೇಡಗುಡ್ಡೆ, ಅರಳಿ, ಪಾಲ್ತಾಡಿ ಇತ್ಯಾದಿ ಗ್ರಾಮಗಳಲ್ಲಿ ಸೇವಾಯೋಜನೆಯ ಯಶೋಗಾಥೆ ರಾಷ್ಟೀಯ ಮಟ್ಟದಲ್ಲೇ ಗುರುತಿಸಲ್ಪಟ್ಟದೆ. ಮೊನ್ನೆ ಮೊನ್ನೆ ಬಾಗಲಕೋಟೆಯ ಬಾದಾಮಿ ತಾಲೂಕಿನ ಸಬ್ಬಲಹುಣಸಿ ಗ್ರಾಮದಲ್ಲಿ ನೆರೆ ಸಂತ್ರಸ್ತರಿಗೆ `ಸೇವಾಭಾರತಿ’ಯ ಮೂಲಕ ೭೭ ಮನೆ ಹಂಚಲಾಗಿತ್ತು. ಹೊಳೆ ಆಲೂರಿನಲ್ಲಿ ೪೦೦ಕ್ಕೂ ಹೆಚ್ಚು ಮನೆಗಳು ಸಿದ್ಧವಾಗಿದೆ. ದೇಶಾದ್ಯಂತ ಸಂಘದ ಈ ಸಾಮಾಜಿಕ ಚಟುವಟಿಕೆಗಳಿಗೆ ಹಲವಾರು ಖಾಸಗಿ-ಸರ್ಕಾರಿ, ಸಂಘ ಸಂಸ್ಥೆಗಳು ಕೈಜೋಡಿಸಿದೆ. ಹೀಗೆ ಈ ಎಲ್ಲಾ ಬೃಹತ್ ಚಟುವಟಿಕೆಯ ಭಿತ್ತಿಯಲ್ಲಿ ಸರ್ಕಾರ ರಚನೆ ಒಂದಂಶ ಎಂಬುದು ಸ್ಪಟಿಕದಷ್ಟು ಸತ್ಯವೇ.
ಈ ಮೇಲೆ ಹೇಳಿರುವ ಸೇವಾ ಚಟುವಟಿಕೆಗಳಲ್ಲದೆ ನೂರಾರು ವಿಧದ ಕಾರ್ಯಕ್ರಮಗಳಲ್ಲಿ ಸಂಘ ಸಮಾಜದ ಉದ್ದಗಲ ಸಂಪರ್ಕ ಸಾಧಿಸಿದೆ. ಇಡೀ ಭಾರತದಲ್ಲೇ ಅತೀ ಹೆಚ್ಚು ಸಕ್ರಿಯ ಸಂಘಕಾರ್ಯವುಳ್ಳ ರಾಜ್ಯಗಳ ಪೈಕಿ ಕೇರಳವೂ ಒಂದು. ಆದರೆ ಇದುವರೆಗೂ ಅಲ್ಲಿ ಬಿ.ಜೆ.ಪಿ. ಆಡಳಿತವಾಗಲೀ, ಒಬ್ಬನೇ ಒಬ್ಬ ಶಾಸಕನಾಗಲೀ ಆಯ್ಕೆಯಾಗಿಲ್ಲ. ೮೫ವರ್ಷಗಳ ಸಂಘದ ಚಟುವಟಿಕೆಗಳಲ್ಲಿ ರಾಜಕೀಯಕ್ಕೆ ಎಷ್ಟು ಬೇಕೋ ಅಷ್ಟೋ ಮಹತ್ವವನ್ನು ಆರೆಸ್ಸೆಸ್ ಕೊಟ್ಟಿದೆ. ಇದೇ ಫೆಬ್ರವರಿಯಲ್ಲಿ ಕೇರಳದ ಕೊಲ್ಲಂನಲ್ಲಿ ಮೋಹನ್ ಜೀ ಭಾಗವತ್ ಬಂದಾಗ ಮೊತ್ತಮೊದಲ ಬಾರಿಗೆ ಆರೆಸ್ಸೆಸ್ ಗಣವೇಷ ಧರಿಸಿದ್ದ ಒಂದು ಲಕ್ಷಕ್ಕೂ ಮಿಕ್ಕ ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ದೇಶದಲ್ಲೇ ಒಂದು ದಾಖಲೆ ಬರೆದರು. ಅಷ್ಟೂ ಮಂದಿ ರಾಜಕೀಯ ಕ್ಷೇತ್ರದಲ್ಲಿ ಧುಮಕಿ ಕೆಲಸ ಮಾಡಿದರೆ ಕೇರಳದ ಅಧಿಕಾರ ಕೈಗೆ ಬರುವುದು ಅಸಾಧ್ಯವೇನೂ ಅಲ್ಲ-ಆದರೆ ಅಂಥಾ ಜಾಯಮಾನ ಸಂಘದ್ದು ಅಲ್ಲವೇ ಅಲ್ಲ. ಆದ್ದರಿಂದ ಅರೆಗಣ್ಣಿನಿಂದ ಮುಕುಂದರ ಮಾತನ್ನು ಅರ್ಥೈಸಿರುವ ಸಚ್ಚಿದಾನಂದ ಜೋಶಿಯವರು ಬೊಟ್ಟು ಮಾಡಿದ ಅಂಶ ಬಾಲಿಶವೇ ಸರಿ. ಯಾವ ಸರಸಂಘಚಾಲಕರೂ ರಾಜಕೀಯವಾಗಿ ಅತೀ ಆಸಕ್ತಿಯಾಗಲೀ, ಆ ಕುರಿತ ಭಾರೀ ಅಜೆಂಡಾ ಆಗಲೀ ಮುಂದಿಟ್ಟಿದ್ದಿಲ್ಲ. ರಾಜಕೀಯ ವಿಶ್ಷೇಷಣೆ ಏನಿದ್ದರೂ ಅದು ಮನೆಯೊಳಗಿನ ಮಾತುಕತೆ.
ಲೇಖಕರು ಉಲ್ಲೇಖಿಸಿದ ಸ್ವಪನ್ ದಾಸಗುಪ್ತರ ಂ shiಜಿಣ iಟಿ ಠಿosiಣioಟಿ: ಖಿhe ಖSS ಟಿeeಜs ಣo ಡಿeಜisಛಿoveಡಿ ಣhe Iಟಿಜiಚಿ oಜಿ ಣhe ೨೧sಣ ಛಿeಟಿಣuಡಿಥಿ (ಖಿhe ಖಿeಟegಡಿಚಿಠಿh ಓovembeಡಿ ೧೩, ೨೦೦೯) ಲೇಖನಗಳಲ್ಲಿರುವ ತಪ್ಪು ಮಾಹಿತಿಗಳನ್ನೇ ನೋಡಿದರೆ ಆರೆಸ್ಸೆಸ್ಸಿನ ಬಗ್ಗೆ ಕೆಲವು ಸಂಶಯಗಳು ಬರುವುದು ಸಹಜ. ಅಡ್ವಾಣಿಯವರು ಪ್ರತಿಪಕ್ಷ ನಾಯಕ ಸ್ಥಾನದಿಂದ ಶೀಘ್ರವಾಗಿ ಹೊರ ಹೋಗುತ್ತಾರೆ ಇತ್ಯಾದಿಯಾಗಿ ಮೋಹನ್ ಭಾಗವತರು ಹೇಳಿರುವುದಾಗಿ ಉಲ್ಲೇಖವಾಗಿದೆ. ಆ ಹೇಳಿಕೆಯ ತುಣುಕನ್ನು ನೋಡಿದವರಿಗೆ ಮಾತ್ರ ಪತ್ರಿಕೆಗಳಲ್ಲಿ ಉಲ್ಲೇಖವಾಗಿರುವುದಕ್ಕೂ ಹೇಳಿರುವುದಕ್ಕೂ ಇರುವ ವ್ಯತ್ಯಾಸ ತಿಳಿಯುತ್ತದೆ. ರಾಜಕೀಯದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ನೀಡಿದ ಅಭಿಪ್ರಾಯವನ್ನು ಸಂಘದ ನಿರ್ಣಯ ಎಂದು ಭಾವಿಸಿರುವುದು ಇಲ್ಲಿ ತಪ್ಪು ತಿಳುವಳಿಕೆಗೆ ಕಾರಣವಾಗಿದೆ.
ಸಂಘದ ಸರಸಂಘಚಾಲಕರೂ ಕೇವಲ ರಾಜಕೀಯ ಒಂದರ ಬಗ್ಗೆಯೇ ಚಿಂತಿತರಾಗಿದ್ದಾರೆ ಎನ್ನುವುದಕ್ಕಿಂತ ಕೇವಲ ರಾಜಕೀಯದ ಬಗ್ಗೆ ಚಿಂತಿತರಾಗಿರುವುದನ್ನು ಮಾತ್ರ ಮಾಧ್ಯಮಗಳು ಬರೆಯುತ್ತವೆ ಎಂದು ಹೇಳಬಹುದು. ಸಂಘದ ಅಧಿಕಾರಿಗಳು ಎಲ್ಲೇ ಸಿಕ್ಕಿದರೂ ಮಾಧ್ಯಮಗಳು ಹೆಚ್ಚಾಗಿ ಕೇಳುವುದು ರಾಜಕೀಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಮಾತ್ರ. ಆದ್ದರಿಂದ ರಾಜಕೀಯ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಸಂಘದ ಅಭಿಪ್ರಾಯವೇನು ಎನ್ನುವುದು ಮಾಧ್ಯಮಗಳಲ್ಲಿ ಪ್ರಕಟವಾಗುತ್ತದೆ. ಆದರೆ, ಉಳಿದ ವಿಷಯಗಳ ಬಗ್ಗೆ ಪತ್ರಕರ್ತರು ಹೆಚ್ಚಾಗಿ ಪ್ರಶ್ನೆ ಕೇಳುವುದಿಲ್ಲ. ಉದಾಹರಣೆಗೆ, ಇಂದಿನ ಯುವಕರು ಸಮಾಜಸೇವೆ ಮಾಡಲು ಯಾವ ಮಾರ್ಗಗಳನ್ನು ಆರಿಸಿಕೊಳ್ಳಬಹುದು? ನಕ್ಸಲ್ ಸಮಸ್ಯೆಯ ಬಗ್ಗೆ ಸಂಘದ ಅಭಿಪ್ರಾಯವೇನು? ವನವಾಸಿಗಳ ನಡುವೆ ಸಂಘ ಹೇಗೆ ಕೆಲಸ ಮಾಡುತ್ತಿದೆ? ಈಶಾನ್ಯ ರಾಜ್ಯಗಳಲ್ಲಿನ ಪರಿಸ್ಥಿತಿಯನ್ನು ಉತ್ತಮಪಡಿಸಲು ಏನು ಮಾಡಬಹುದು? ಎನ್ನುವ ಪ್ರಶ್ನೆಗಳು ಬರುವುದೇ ವಿರಳ! ಹಾಗಾಗಿ ಆ ವಿಷಯದ ಬಗ್ಗೆ ಸಂಘದ ಸ್ವಯಂಸೇವಕರ ಚಿಂತನೆಯೇನು ಎನ್ನುವ ಬಗ್ಗೆ ಪತ್ರಿಕೆಗಳಲ್ಲಿ ಬರುವುದೂ ಇಲ್ಲ!
ಬಿಜೆಪಿಯ ಕೆಲ ವಿಷಯಗಳಲ್ಲಿ ಸಂಘ ಮಧ್ಯ ಪ್ರವೇಶಿಸುವುದಾಗಿ ಸಂಘ ಹೇಳಿಲ್ಲ. ಸಂಘದ ಸ್ವಯಂಸೇವಕರು ಬಿಜೆಪಿಯಲ್ಲಿರುವುದು ಮಾತ್ರ ಬಿಜೆಪಿಯೊಂದಿಗಿನ ನಮ್ಮ ಸಂಬಂಧ. ಅಂತಹ ಸ್ವಯಂಸೇವಕರು ನಮ್ಮಲ್ಲಿ ಸಲಹೆ ಕೇಳಿದಾಗ ಕೆಲವು ಸಲಹೆಗಳನ್ನು ನೀಡುತ್ತೇವಷ್ಟೇ ಎಂದು ಸರಸಂಘಚಾಲಕರೇ ಸ್ಪಷ್ಟವಾಗಿ ಹೇಳಿದ್ದಾರೆ.
ಬಿಜೆಪಿಗೆ ೩೫೦ ಆರೆಸ್ಸೆಸ್ ಪೂರ್ಣಾವಧಿ ಕಾರ್ಯಕರ್ತರನ್ನು ಕಳುಹಿಸಿಸಲಾಗಿದೆ ಎಂಬ ಲೇಖಕರ ಮಾತು ವಾಸ್ತವಕ್ಕೆ ಭಿನ್ನವಾಗಿದೆ. ಬಿಜೆಪಿಯಲ್ಲಿರುವ ಸಂಘಟನಾ ಮಂತ್ರಿಗಳೆಲ್ಲರೂ ಆರೆಸ್ಸೆಸ್ ಪ್ರಚಾರಕರಲ್ಲ, ಅವರಲ್ಲಿ ಬಹುತೇಕರೂ ನೇರವಾಗಿ ಬಿಜೆಪಿಯಲ್ಲಿ ತೊಡಗಿಸಿಕೊಂಡವರು. ೩೫೦ ಸಂಘಟನಾ ಮಂತ್ರಿಗಳೇ ಬಿಜೆಪಿಯಲ್ಲಿಲ್ಲ, ಅದರ ಅರ್ಧವೂ ಇಲ್ಲ! ಅವರಲ್ಲಿ ಕೆಲವೇ ಜನರು ಮಾತ್ರ ಆರೆಸ್ಸೆಸ್ಸಿನ ಪೂರ್ಣಾವಧಿ ಕಾರ್ಯಕರ್ತರು. ಕರ್ನಾಟಕದಲ್ಲಂತೂ ಒಬ್ಬರೇ. ಇಂತಹವರು ಚುನಾವಣಾ ರಾಜಕೀಯದಿಂದ ದೂರವುಳಿದು ಪಕ್ಷ ಸಂಘಟನೆಯ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ. ಯಾವುದೇ ಸರಕಾರೀ ಹುದ್ದೆಯಲ್ಲಿಲ್ಲದ ಇವರಿಗೆ ಮೊಬೈಲು/ಪೈಜಾಮುಗಳನ್ನು ನೀಡಿ ಯಾವ ಕೆಲಸಗಳನ್ನು ಮಾಡಿಸಿಕೊಳ್ಳಬಹುದೆಂಬುದು ಅರ್ಥವಾಗುವುದಿಲ್ಲ.
ಸಂಘದ ಪ್ರಚಾರಕರಲ್ಲಿ ಪದವಿ, ಸ್ನಾತಕೋತ್ತರಗಳಿಂದ ಹಿಡಿದು ಡಾಕ್ಟರೇಟ್ ಗಳ ವರೆಗೆ ಅನೇಕ ಉನ್ನತ ಶಿಕ್ಷಣ ಪಡೆದವರಿದ್ದು ಅವರು ಬಯಸಿದರೆ ಸಾಕಷ್ಟು ಐಷಾರಾಮಿ ಜೀವನವನ್ನು ನಡೆಸುವ ಉದ್ಯೋಗವನ್ನು ಹೊಂದಬಹುದಿತ್ತು. ಅದೆಲ್ಲವನ್ನೂ ಬಿಟ್ಟು ಪೂರ್ಣಾವಧಿ ಕೆಲಸ ಮಾಡಲು ಬಂದವರು ಪ್ರಾಥಮಿಕ ಶಾಲೆಯ ಶಿಕ್ಷಕರಾಗಲೂ ಯೋಗ್ಯತೆಯಿಲ್ಲದವರೆಂದು ಬಿಜೆಪಿ ನಾಯಕರು ಬಣ್ಣಿಸಿರುವುದು ನಿಜವೇ ಆದಲ್ಲಿ, ಸಂಘಟನೆಯಲ್ಲಿ ಸಂಘದ ಪ್ರಚಾರಕರ ಪಾತ್ರವನ್ನು ಅರ್ಥಮಾಡಿಕೊಳ್ಳುವಲ್ಲಿ ಅವರ ವೈಫಲ್ಯವನ್ನು ತೋರಿಸುತ್ತದೆಯಲ್ಲದೇ ಸಂಘದ್ದಲ್ಲ. ಇನ್ನು ಸಮಾಜಕ್ಕಾಗಿ ತಮ್ಮ ವೈಯಕ್ತಿಕ ಆಕಾಂಕ್ಷೆಗಳನ್ನು ಮೀರಿ ಬಂದವರು ರುಚಿಯಾದ ಊಟಕ್ಕೋ, ಬಟ್ಟೆಗೋ ದೇಶಹಿತವನ್ನು ಮಾರುವರೆಂಬ ಆರೋಪವನ್ನು ಹೇಗೆ ಒಪ್ಪಲು ಸಾಧ್ಯ?
ನರೇಂದ್ರ ಮೋದಿಯಾಗಲೀ ವಸುಂಧರಾ ರಾಜೆಯಾಗಲೀ ಆರೆಸ್ಸೆಸ್ಸಿನೊಂದಿಗೆ ಭಿನ್ನಾಭಿಪ್ರಾಯ ಹೊಂದಿದೆ ಎಂದು ಲೇಖಕರು ಹೇಳಿದ ಮಾತ್ರಕ್ಕೇ ಅದು ಸತ್ಯವಾಗುವುದಿಲ್ಲ.
ಬಿಜೆಪಿಯು ಆರೆಸ್ಸೆಸ್ಸನ್ನು ಮೀರಿ ಬೆಳೆದಿರುವುದಕ್ಕೆ ಲೇಖಕರು ನೀಡುವ ಉಲ್ಲೇಖ, ಬಿಜೆಪಿ ದೇಶದ ಪ್ರಮುಖ ಪ್ರತಿಪಕ್ಷವಾಗಿರುವುದು. ಆದರೆ ಇತರ ಸಂಘಟನೆಗಳಾದ ಎಬಿವಿಪಿ, ಭಾರತೀಯ ಮಜ್ದೂರ್ ಸಂಘ ಮೊದಲಾದವು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮೊದಲ ಸ್ಥಾನಗಳಲ್ಲಿವೆ. ವಿವಿಧ ಹೆಸರಿನಲ್ಲಿ ವಿಶ್ವದ ೪೦ಕ್ಕೂ ಹೆಚ್ಚು ದೇಶಗಳಲ್ಲಿ ಸಂಘದ ಚಟುವಟಿಕೆಗಳಿವೆ. ಪ್ರತಿಪಕ್ಷ ಎಂಬ ನಂ ೨ ಸ್ಥಾನದಿಂದಲೂ ನಂ ೧ ಸ್ಥಾನ ದೊಡ್ಡದೆಂಬುದು ರಾಜಕೀಯವನ್ನು ಮಾತ್ರವೇ ಗಮನಿಸುವ ವಿಮರ್ಶಕರು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ.
ಇನ್ನು ರಾಜಕೀಯ ಆಯಕಟ್ಟಿನ ಸ್ಥಾನ ತನ್ನದಾಗಿಸುವ ಬಯಕೆ ಆರೆಸ್ಸೆಸ್ಸಿಗೆ ಢಾಳಾಗಿಯೇ ಕಂಡುಬರುತ್ತದೆ ಎಂಬ ಜೋಶಿಯವರು, ಸ್ವಪನ್ ಅವರು ಉಲ್ಲೇಖಿಸಿದ ಸಂಘಟನಾ ಕಾರ್ಯದರ್ಶಿಗಳು ಚುನಾವಣೆಗೆ ನಿಲ್ಲುವಂತಿಲ್ಲ ಎಂಬ ನಿಯಮವನ್ನು ಗಮನಿಸಬೇಕು. ಆಯಕಟ್ಟಿನ ಸ್ಥಾನಗಳ ಬಗ್ಗೆ ಪ್ರಚಾರಕರಿಗೆ ವ್ಯಾಮೋಹವಿದ್ದರೆ ಅವರು ಯಾವಅತ್ತೋ ಸರಕಾರದಲ್ಲಿ ಸ್ಥಾನವನ್ನು ಹೊಂದುವ ಅವಕಾಶವನ್ನು ಪಡೆದುಕೊಳ್ಳುತ್ತಿದ್ದರು.
ಆರೆಸ್ಸೆಸ್ ಪ್ರಾಮಾಣಿಕ ಅವಲೋಕನಗಳನ್ನೂ, ತನ್ನ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನೂ ಕಾಲ ಕಾಲಕ್ಕೆ ಮಾಡುತ್ತಲೇ ಬಂದಿದೆ. ಅದು ಸಂಘದ ಕಾರ್ಯಕರ್ತರಿಗೆ ಸ್ಪಷ್ಟವಾಗಿ ಗೋಚರಿಸಿಯೂ ಇದೆ. ಆದರೆ ರಾಜಕೀಯ ಪ್ರಶ್ನೆಗಳು ಬೇಡ ಎಂದು ಮೋಹನ್ ಭಾಗವತರು ವಿನಂತಿಸಿದಾಗಲೂ ಅದರಿಂದ ಹೊರತಾದ ಪ್ರಶ್ನೆಗಳಿಲ್ಲದ, ರಾಜಕೀಯದಿಂದಾಚೆಗೆ ಚಿಂತಿಸಲೂ ಆಗದ ಮಾಧ್ಯಮದ ಒಂದು ವರ್ಗಕ್ಕೆ ಇದೆಲ್ಲವೂ ಕಾಣಿಸಲಿಲ್ಲ ಅಷ್ಟೆ.
ಬಿಜೆಪಿಗೆ ಬರಬೇಕೆನ್ನುವ ಉತ್ಸಾಹ ಸಂಘದ ಕಾರ್ಯಕರ್ತರಲ್ಲಿದೆ ಎನ್ನುವುದನ್ನು ಸ್ವಪನ್ ದಾಸ್ ಗುಪ್ತರವರು ಯಾರನ್ನು ನೋಡಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ, ಹೆಚ್ಚಿನ ಕಾರ್ಯಕರ್ತರಲ್ಲಿ ಸಂಘದ ಕೆಲಸದ ಬಗ್ಗೆ ಆಸಕ್ತಿಯಿದೆಯೇ ಹೊರತು ಹಣ ಮಾಡುವ ಉದ್ದೇಶದಿಂದಾಗಲೀ ಗರಿ ಗರಿ ಜುಬ್ಬಾ ಧರಿಸಿ ಪ್ರತಿಷ್ಠಿತರಂತೆ ಕಾಣಿಸಿಕೊಳ್ಳುವ ಉದ್ದೇಶದಿಂದಾಗಲೀ ರಾಜಕೀಯಕ್ಕೆ ಸೇರಬೇಕೆಂಬ ಆಸಕ್ತಿ ಕಾಣಿಸುತ್ತಿಲ್ಲ. ಸಂಘದ ಕಾರ್ಯಕರ್ತರನ್ನು ಬಲ್ಲ ಜನಸಾಮಾನ್ಯರಿಗೆ ಇದು ಗೊತ್ತಿರುವ ವಿಷಯ.
ಸಂಘದಲ್ಲಿ ಎಲ್ಲರಿಗೂ ನೀಡುವ ಶಿಕ್ಷಣ ಒಂದೇ. ಸಮಾಜಹಿತವೇ ಸಂಘದ ಮೊದಲ ಆದ್ಯತೆ. ಸಂಘದ ಎಲ್ಲ ಚಟುವಟಿಕೆಗಳೂ ಅದಕ್ಕೆ ಅನುಗುಣವಾಗಿ ರೂಪುಗೊಂಡಿರುವಂಥವೇ. ಸಂಘದ ಶಾಖೆಗೆ ಬರುವುದು ಎಷ್ಟು ಮಹತ್ತ್ವವೋ, ಸಂಘದ ವಿಚಾರಗಳನ್ನು ಅರ್ಥಮಾಡಿಕೊಂಡು ಅದನ್ನು ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಅಳವಡಿಸಿಕೊಂಡು ಸಮಾಜೋಪಯಾಗಿ, ನಿಸ್ವಾರ್ಥ ಬುದ್ಧಿಯಿಂದ ಕೆಲಸ ಮಾಡುವುದೂ ಅಷ್ಟೇ ಮುಖ್ಯ. ಸಂಘದ ಸಹವಾಸದಿಂದ ದೊರೆತ ಒಳ್ಳೆಯ ಅಂಶಗಳಲ್ಲಿ ಎಷ್ಟನ್ನು ತಮ್ಮ ಜೀವನದಲ್ಲಿ ಅಳವಡಿಕೊಳ್ಳುತ್ತಾರೆ ಎನ್ನುವುದು ಅವರವರ ಬುದ್ಧಿ ಮನಸ್ಸುಗಳ ಮೇಲೆ, ಅವರವರ ಧ್ಯೇಯನಿಷ್ಠೆಯ ಮೇಲೆ ಅವಲಂಬಿತವಾರಿದೆ. ಹಾಗಾಗಿ, ಒಬ್ಬ ವ್ಯಕ್ತಿ ಕಲಿತದ್ದನ್ನು ಉಪಯೋಗಿಸಿಕೊಳ್ಳುವುದೂ ಬಿಡುವುದೂ ವ್ಯಕ್ತಿಗೇ ಸೇರಿದ್ದಲ್ಲವೇ? ವೈದ್ಯರು ಕೊಟ್ಟ ಮದ್ದನ್ನು ನಿಯಮಿತವಾಗಿ ತೆಗೆದುಕೊಳ್ಳದೇ ಕಾಯಿಲೆ ಗುಣವಾಗಲಿಲ್ಲ ಎಂದು ದೂರಿದರೆ, ಅದಕ್ಕೆ ವೈದ್ಯರನ್ನೋ ಮದ್ದನ್ನೋ ಹೊಣೆ ಮಾಡಲಾಗುತ್ತದೆಯೇ? ಇದೂ ಹಾಗೆಯೇ.
ಆರೆಸ್ಸೆಸ್ ನ ರಾಜಕೀಯ ಒಳನೋಟಗಳು ತೀಕ್ಷ್ಣ ಮತ್ತು ಸಾಮಯಿಕ. ರಾಜಕೀಯದ ಕುರಿತು ತನ್ನದೇ ಅಭಿಪ್ರಾಯ ಹೊಂದಿರುವ ಸಂಘಕ್ಕೆ (ಎಲ್ಲರಿಗೂ ಅವರದೇ ಅಭಿಪ್ರಾಯ ಇರುವಂತೆ)ಕರ್ನಾಟಕ ರಾಜಕಾರಣದ ಪ್ರಚಲಿತ ವಿದ್ಯಮಾನದಿಂದ ನೋವಾಗಿದ್ದನ್ನು ಮುಕುಂದರು ಪ್ರಾರಂಭದಲ್ಲೇ ತಿಳಿಸಿದ್ದರು. ಪ್ರಸಕ್ತ ರಾಜಕೀಯ ಏರುಪೇರನ್ನೇ ಕೇಂದ್ರವಾಗಿರಿಸಿ, ಅದರಲ್ಲಿ ಸಂಘದ ನಿಲುವೇನೆಂದು ನಿರೂಪಿಸಿದ್ದರು. ಆರೆಸ್ಸೆಸ್ ಕಾರ್ಯಕರ್ತರಿಗೆ, ಲಕ್ಷಾಂತರ ಹಿತೈಷಿಗಳಿಗೆ, ರಾಜಕಾರಣವನ್ನು ಚೆನ್ನಾಗಿಬಲ್ಲ ಕನ್ನಡದ ಮಂದಿಗೆ ಮುಕುಂದರು ಹೇಳಿದ ಮಾತುಗಳು ಅಂತರಾಳಕ್ಕಿಳಿದಿದೆ. ಹೇಗೆ ಹೇಳಿದರೂ ಅರ್ಥವಾಗzವರೂ ಇದ್ದಾರೆ!
(ಈ ಲೇಖನ ಇಂದಿನ ವಿಜಯಕರ್ನಾಟಕದಲ್ಲಿ ಪ್ರಕಟಗೊಂಡಿದೆ. ಅಭಿಪ್ರಾಯಗಳು ಲೇಖಕರದ್ದು )
ಚಿತ್ರಕೃಪೆ: ಗೂಗಲ್





ಅಜ್ಮೀರ್ ಸ್ಫೋಟ ಪ್ರಕರಣ ಸಂಬಂಧ ರಾಜಸ್ಥಾನ ಎಟಿಎಸ್ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಆರ್‌ಎಸ್ ಎಸ್‌ನ ಹಿರಿಯ ನಾಯಕನ ಹೆಸರು ಸೇರಿದಂತೆ ಐವರು ಆರೋಪಿಗಳ ಹೆಸರಿವೆ.
2005 ಅಕ್ಟೋಬರ್ 31ರಂದು ಜೈಪುರದ ಗುಜರಾತಿ ಅತಿಥಿ ಗೃಹದಲ್ಲಿ ನಡೆದ ರಹಸ್ಯ ಸಭೆಯಲ್ಲಿ ಆರ್‌ಎಸ್ ಎಸ್ ನಾಯಕ ಇಂದ್ರೇಶ್ ಕುಮಾರ್ ಉಪಸ್ಥಿತರಿದ್ದರು. ಆ ಸಭೆಯಲ್ಲಿ ಇತರ ಆರು ಕಾರ್ಯಕರ್ತರೂ ಭಾಗವಹಿಸಿದ್ದರು ಎಂಬ ಮಾಹಿತಿ ಸೇರಿದಂತೆ 806 ಪುಟಗಳ ಆರೋಪ ಪಟ್ಟಿಯನ್ನು ಎಟಿಎಸ್, ಅಜ್ಮೀರ್ ನ್ಯಾಯಾಲಯಕ್ಕೆ ಶುಕ್ರವಾರ ಸಲ್ಲಿಸಿದೆ.
2007ರ ಅಜ್ಮೀರ್ ಸ್ಫೋಟ ಪ್ರಕರಣದಲ್ಲಿ ಇಂದ್ರೇಶ್ ಅವರ ಪಾತ್ರ ಇದೆಯೇ ಎಂಬುದನ್ನು ತಿಳಿಯಲು ಇನ್ನೂ ಹೆಚ್ಚಿನ ತನಿಖೆ ನಡೆಯಬೇಕಿರುವುದರಿಂದ ಆರೋಪ ಪಟ್ಟಿಯಲ್ಲಿ ಅವರನ್ನು ಆರೋಪಿ ಎಂದು ಪರಿಗಣಿಸಿಲ್ಲ ಎಂದು ಎಟಿಎಸ್ ಮೂಲಗಳು ತಿಳಿಸಿವೆ. ಸತ್ಯ ಇನ್ನೂ ಹೊರಬಂದಿಲ್ಲ, ನಂತರ ಆರ್‌ಎಸ್‌ಎಸ್ ಅದನ್ನು ಒಪ್ಪಿಕೊಳ್ಳಬೇಕು. ಆರೋಪ ಪಟ್ಟಿಯಲ್ಲಿ ಸೂಚಿಸಿರುವ ನಾಯಕನ ಹಿನ್ನೆಲೆ ಸದ್ಯದಲ್ಲೇ ತಿಳಿಯಲಿದೆ. ನ್ಯಾಯಾಂಗದ ಬಗ್ಗೆ ವಿಶ್ವಾಸವಿರಬೇಕು. ಸತ್ಯ ಬಹಿರಂಗವಾಗುವುದು, ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗು ವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.
ಆರೋಪ ಪಟ್ಟಿಯಲ್ಲಿ ಇರುವ ಐವರು ಆರೋಪಿಗಳ ಹೆಸರಿನ ಜತೆ ಅಭಿನವ್ ಭಾರತ್ ಎಂಬ ಹಿಂದೂ ಸಂಘಟನೆಯೊಡನೆ ನಿಕಟ ಸಂಬಂಧ ಹೊಂದಿದ್ದಾರೆ ಎನ್ನಲಾದ ದೇವಂದ್ರ ಗುಪ್ತಾ ಅವರ ಹೆಸರೂ ಇದೆ. ಆರೋಪಿಗಳ ವಿರುದ್ಧ ಕೊಲೆ ಹಾಗೂ ಧಾರ್ಮಿಕ ಸ್ಥಳ ನಾಶ ಪಡಿಸಿರುವ ಆರೋಪ ಮಾಡಲಾಗಿದೆ. ಪ್ರಕರಣದ ಇತರ ಆರೋಪಿಗಳಾದ ಸಂದೀಪ್ ದಂಗೆ ಹಾಗೂ ರಾಮಜೀ ಕಲ್ಸಂಗ್ರೆ ತಲೆ ಮರೆಸಿಕೊಂಡಿದ್ದು, ಮತ್ತೊಬ್ಬ ಆರೋಪಿ ಸುನೀಲ್ ಜೋಶಿ ವಿಚಾರಣೆ ವೇಳೆ ಮೃತಪಟ್ಟಿದ್ದರು.
ಪ್ರಸಾದ್,
ಆರೋಪ ಮಾಡಿದಾಕ್ಷಣ ಅಪರಾಧಿಗಳಾಗುವುದಿಲ್ಲ ಅಲ್ವಾ?, ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸಲಿ ಬಿಡಿ.ಆದ್ರೆ ಒಂದು ಪ್ರಶ್ನೆ ನಿಮ್ಗೆ. ನಿಮ್ಮ ಈ ಕಮೆಂಟು ಲೇಖನಕ್ಕೆ ಪೂರಕವಾಗಿದೆ ಅನ್ನಿಸುತ್ತ?
ರಾಕೇಶ್ ಶೆಟ್ಟಿ 🙂
ಯಾಕೆ ಇಲ್ಲ..
ಸೇವೆಯಲ್ಲೇ ಸಂಘ ದಕ್ಷ ಎ೦ಬ ಮೈನ್ ಹೆಡ್ಡಿ೦ಗ್ ರಾಕಶ್ ರವರು ಕಾಣಲಿಲ್ಲ ಅನ್ನಿಸುತ್ತೆ,, ನನ್ನ ಕಮೆ೦ಟು ಆರ್.ಎಸ್.ಎಸ್ ಯಾವ ಸೇವೆಯಲ್ಲಿ ಇದೆ ಎ೦ಬುವುದು ಹೇಳಿದೆ ಅಸ್ಟೆ,, ದೇಶದ ಸೇವೆಯಾ ಅಥವಾ ದೇಶ ದ್ರೋಹನಾ ಅ೦ತ .
ಮಾಲೆ೦ಗಾವ್ ಸ್ಪೋಟ ದಲ್ಲಿ ಪ್ರಜ್ನಾ ಸಿ೦ಗ್ ಅಪರಾದಿಯಲ್ವಾ ಆತ ಆರ್ .ಎಸ್ .ಎಸ್ ಅಲ್ವಾ?
ಆರ್.ಎಸ್.ಎಸ್ ನ ದೇಶ ದ್ರೋಹ ದ ಬೇರು ಸಮೇತ ಹಿಡಿಯಲು ಹೋದ ಕರ್ಕರೆಯವರನ್ನು ಕೊ೦ದ೦ದು ಯಾರು?
ಪ್ರಸಾದ್,
ನಾನು ಸಂಘದ ಕಾರ್ಯಕರ್ತನೂ ಅಲ್ಲ,ಅಭಿಮಾನಿಯೂ ಅಲ್ಲ.ಆದರೆ ಮೂರನೇ ವ್ಯಕ್ತಿಯಾಗಿ ನೋಡಿದಾಗಲೂ ಸಂಘ ದೇಶ ಕಟ್ಟುವ ಕೆಲಸ ಮಾಡುತ್ತಿಲ್ಲ ಆನುವ ಪೂರ್ವಾಗ್ರಹ ಪೀಡಿತ ಉತ್ತರ ಕೊಡಲು ಸಾಧವಿಲ್ಲ.
ಇನ್ನ “ಮಾಲೆ೦ಗಾವ್ ಸ್ಪೋಟ ದಲ್ಲಿ ಪ್ರಜ್ನಾ ಸಿ೦ಗ್ ಅಪರಾದಿ” ಅಲ್ಲ “ಆರೋಪಿ”.ಮೊದಲು ಅಪರಾಧ ಸಾಬಿತಾಗಲಿ ಇರಿ,ಆಮೇಲೆ ಮಾತಾಡೋಣ.ಹಾಗೆ ಕರ್ಕರೆಯನ್ನ ಕೊಂದವರು ಅಂತ ಹೇಳಿದ ನಿಮಗೆ ಏನು ಅಂತ ಹೇಳಲಿ ಸ್ವಾಮೀ? ಮುಂಬೈ ಮಾರಣ ಹೋಮವನ್ನ ಮಾಧ್ಯಮಗಳು ಬಿತ್ತರಿಸಿವೆ,ಕಾಮ ಆಸ್ಪತ್ರೆಯ ಬಳಿ ಸಾಲಸ್ಕರ್,ಕರ್ಕರೆ,ಕಂತೆಯನ್ನ ಕೊಂದು ಉಳಿದ ಒಬ್ಬೆ ಒಬ್ಬ ಆರೋಪಿಗೆ ಈ ದೇಶದ ನ್ಯಾಯಾಲಯ ‘ನೇಣು ಶಿಕ್ಷೆ’ಯನ್ನು ವಿಧಿಸಿದೆ ಆದ್ರೆ ನೀವ್ ಮಾತ್ರ ಅಂತುಲೆ ಕಥೆ ಹೇಳ್ತಿದ್ದಿರಲ್ಲ,ನಂಬೋರು ಯಾರು?
ಕರ್ಕರೆಯ ಕೊಲೆಯ ಬಗ್ಗೆ ದಿಗ್ವಿಜಯ್ ರವರ ಹೇಳಿಕೆ ನೋಡಿ:
ರವಿವಾರ – ಡಿಸೆಂಬರ್-12-2010:
26/11ರ ಸಂಜೆ 6ರಿಂದ 7ರ ನಡುವೆ ತಾನು ಕರ್ಕರೆಯವರ ಜತೆ ‘ಸುಮಾರು ಮೂರುವರೆ ತಾಸುಗಳ ಕಾಲ ದೂರವಾಣಿಯಲ್ಲಿ ಮಾತನಾಡಿದ್ದೆನು. ಅವರು ಈ ಸಂದರ್ಭದಲ್ಲಿ ತನಗೆ ಹಿಂದೂ ಭಯೋತ್ಪಾದಕರಿಂದ ಜೀವ ಬೆದರಿಕೆಯಿದೆ ಎಂದು ಹೇಳಿದ್ದರು. ಇದಾದ ಎರಡು ಗಂಟೆಯಲ್ಲಿ ಅವರು ಹತ್ಯೆಯಾದರೆಂದು ತಿಳಿದಾಗ ತನಗೆ ಭಾರೀ ಆಘಾತವಾಯಿತು’ ಎಂದು ದಿಗ್ವಿಜಯ್ ಇಂದು ಪತ್ರಕರ್ತರಿಗೆ ತಿಳಿಸಿದರು.
ಕೇಸರಿ ಉಗ್ರರು ಆರೋಪಿಗಳಾಗಿರುವ ಮಾಲೆಗಾಂವ್ ಸ್ಫೋಟದ ತನಿಖೆಯನ್ನು ವಿರೋಧಿಸುತ್ತಿದ್ದುದರಿಂದ ಅವರ ಜೀವಕ್ಕೆ ಬೆದರಿಕೆಯಿದೆಯೆಂಬ ಕುರಿತು ಕರ್ಕರೆ ತನ್ನೊಡನೆ ಹೇಳಿದ್ದರೆಂದು ಅವರು ಪ್ರತಿಪಾದಿಸಿದರು.
ತಾನು ಕರ್ಕರೆಯವರಲ್ಲಿ ಮಾತನಾಡುತ್ತಿದ್ದಾಗ, ತನಗೆ ಬೆದರಿಕೆಯ ಕರೆಗಳು ಬರುತ್ತಿವೆಯೆಂದು ಅವರು ತಿಳಿಸಿದರು. ಅವುಗಳನ್ನು ಯಾರು ಮಾಡುತ್ತಿದ್ದರೆಂಬುದು ಅವರಿಗೆ ತಿಳಿದಿರಲಿಲ್ಲ. ಆರೆಸ್ಸೆಸ್‌ಗೆ ಸಂಬಂಧಿಸಿದ ನಿಯತಕಾಲಿಕೆ ಯೊಂದರಲ್ಲಿ ಕರ್ಕರೆಯವರ ಮಗನ ವಿರುದ್ಧ ಲೇಖನವೊಂದು ಪ್ರಕಟವಾಗಿತ್ತು. ಅವರ ಮಗ ಕೇವಲ 17ರ ಹರೆಯದವನಾಗಿದ್ದಾಗಲೇ ಅವನಿಗೆ ದುಬೈಯಿಂದ ಸುಮಾರು ರೂ. 50 ಕೋಟಿಗಳ ಕಾಂಟ್ರಾಕ್ಟ್ ಒಂದು ಬಂದಿತ್ತೆಂದು ಅದರಲ್ಲಿ ಆರೋಪಿಸಲಾಗಿತ್ತು ಎಂದು ದಿಗ್ವಿಜಯ್ ಹೇಳಿದರು.
ಮಾಲೆಗಾಂವ್ ಸ್ಫೋಟದ ಸಂಬಂಧ ಆರೋಪಿಗಳನ್ನು ಬಂಧಿಸಿದುದಕ್ಕೆ ತಾನವರಿಗೆ ಅಭಿನಂದನೆ ಸಲ್ಲಿಸಿದ ಬಳಿಕ ತಮ್ಮ ನಡುವೆ ನಿಕಟ ಸಂಪರ್ಕ ಉಂಟಾಗಿತ್ತೆಂದ ಅವರು, ರಾಜನಾಥ ಸಿಂಗ್ ಸಹಿತ ಬಿಜೆಪಿಯ ಅಗ್ರ ನಾಯಕರು ತನ್ನ ಪ್ರಾಮಾಣಿಕತೆಯನ್ನು ಪ್ರಶ್ನಿಸಿದುದರಿಂದ ಕರ್ಕರೆ ‘ಸ್ವಲ್ಪ ಹತಾಶೆ’ಗೊಂಡಿದ್ದರೆಂದು ಪ್ರತಿಪಾದಿಸಿದರು.
ಮಾಲೆಗಾಂವ್ ಸ್ಫೋಟದ ಬಳಿಕ ಕರ್ಕರೆ, ತನಗೆ ಮೊದಲೇ ಗೊತ್ತಿದ್ದ ಕೆಲವರನ್ನು ಬಂಧಿಸಿದ್ದರು. ಅವರು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದರು. ಅವರು ಮಾವು ಹಾಗೂ ಭೋಪಾಲ ಸ್ಫೋಟ ಪ್ರಕರಣಗಳಲ್ಲಿ ಒಳಗೊಂಡಿ ದ್ದರು. ಅದೆಲ್ಲ ತನಗೆ ತಿಳಿದಿತ್ತು ಎಂದು ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಹೇಳಿದರು.
ಆ ವೇಳೆ, ಕೆಲವರು ಕರ್ಕರೆಯವರ ಪ್ರಾಮಾಣಿಕತೆಯನ್ನು ಪ್ರಶ್ನಿಸಿರುವುದು ಕರ್ಕರೆಯವರ ಗಮನಕ್ಕೆ ಬಂತು. ಅವರಲ್ಲಿ ರಾಜನಾಥ ಸಿಂಗ್ ಸಹಿತ ಬಿಜೆಪಿಯ ಹಿರಿಯ ನಾಯಕರು ಸೇರಿದ್ದರು. ಇದರಿಂದಾಗಿ ಅವರು ಸ್ವಲ್ಪ ‘ಹತಾಶ’ರಾಗಿದ್ದರು ಎಂದವರು ನುಡಿದರು. ತನಿಖೆ ಸಂಸ್ಥೆಗಳು ಈ ಎಲ್ಲ ವಿಚಾರಗಳ ಬಗ್ಗೆ ಪರಿಶೀಲನೆ ನಡೆಸಬೇಕೆಂದು ದಿಗ್ವಿಜಯ್ ಹೇಳಿದರು.
*****
ದಿಗ್ವಿಜಯ್ ಸಿಂಗ್ ಎನ್ನುವ ಬೇಜವಾಬ್ದಾರಿ ಬಾಯಿಬಡುಕ, ಅಂದು ಪ್ರತ್ಯೇಕತಾವಾದಿಗಳ ಪರ ಹೇಳಿಕೆ ನೀಡಿ ಆರುಂಧತಿ ರಾವ್ ಮಾಡಿದ ದೇಶದ್ರೋಹದ ಕೆಲಸಕ್ಕಿಂತ ಗಂಭೀರವಾದ ದೇಶದ್ರೋಹವೆಸಗಿದ್ದಾನೆ.
ಹುತಾತ್ಮರಾದ ಕರ್ಕರೆಯವರ ಹೆಸರನ್ನು ಈ ರೀತಿಯಾಗಿ ಬಳಸಿಕೊಂಡು ಅವರಿಗೆ ಅವಮಾನ ಮಾಡುತ್ತಿದ್ದಾನೆ.
ಸ್ವತಃ ಶ್ರೀಮತಿ ಕರ್ಕರೆಯವರಿಗೆ ಇದು ಕಿರಿಕಿರಿಯಾಗಿದ್ದು, ಆಕೆ ಈಬಗ್ಗೆ ತನ್ನ ಅಳಲನ್ನು ಈಗಾಗಲೇ ತೋಡಿಕೊಂಡಿರುತ್ತಾರೆ.
ರಾಕೀಯವಾಗಿ ಯಾವುದೇ ಉನ್ನತ ಸ್ಥಾನ ಗಳಿಸುವಲ್ಲಿ ವಿಫಲನಾಗಿರುವ ಈ ದಿಗ್ವಿಜಯ, ಇಂಥ ಹೇಲಿಕೆಗಳನ್ನು ನೀಡಿ ಸುದ್ದಿಯಲ್ಲಿರುವ ವಿಫಲ ಪ್ರಯತ್ನ ಮಾಡುತ್ತಿದ್ದಾನೆ. ಆತನ ಈ ಹೇಳಿಕೆ ಆತನ ಪಕ್ಷಕ್ಕೇ ಮುಳುವಾಗಿ ಪರಿಣಮಿಸಿದೆ.
ಪ್ರಸಾದ್,
ಸ್ವತಃ ಆ ಪುಣ್ಯಾತ್ಮನ ವೋಟ್ ಬ್ಯಾಂಕ್ ಪಕ್ಷ ಕಾಂಗ್ರೆಸ್ಸ್ ಕೂಡ ಅವನ ಹೇಳಿಕೆಗೂ ನಮಗೂ ಸಂಬಂಧ ಇಲ್ಲ ಅಂದಿದೆ, ಕರ್ಕರೆ ಅವ್ರ ಮಡದಿ ಕೂಡ ಮಂಗಳಾರತಿ ಮಾಡಿಯಾಗಿದೆ.ಮತ್ತೆ ಮೊನ್ನೆ ಮೊನ್ನೆ ಸಾಕ್ಷಿ ಇದೆ ಅಂದವ ಈಗ, ಇಲ್ಲ ಸರ್ ಎಲ್ಲೋ ಕಳೆದು ಹೋಗಿದೆ ಅಂತಿದ್ದಾನೆ…!
ನೋಡಿ ಆರೋಪಗಳು ಸಾಬೀತಾದರೆ ಗಲ್ಲಿಗೆರಿಸಲಿ ಯಾರು ಬೇಡ ಅಂದಿದ್ದು.ತಪ್ಪು ಯಾರು ಮಾಡಿದ್ರು ತಪ್ಪೇ