ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 31, 2010

ರಾಜ್ಯ ರಾಜಕೀಯ ಗದ್ದಲಕ್ಕೆ ಗುದ್ದು ನೀಡಿದ ಐಟಿ ದಾಳಿ

‍ನಿಲುಮೆ ಮೂಲಕ
ಶಂಶೀರ್ ಬುಡೋಳಿ
 

ರಾಜಕಾರಣ ಕುರಿತಂತೆ ಹರಿಣಿಯವರ ವ್ಯಂಗ್ಯಚಿತ್ರ

ಒಂದೆಡೆ ರಾಜ್ಯ ರಾಜಕೀಯದಲ್ಲಿ ಅಭದ್ರತೆ.  ಇನ್ನೊಂದೆಡೆ  ಸರಕಾರದ ಉಳಿವಿಗಾಗಿ ಅಪರೇಷನ್ ಕಮಲದ ಮೂಲಕ ಇತರ ಪಕ್ಷಗಳ ಶಾಸಕರನ್ನು ದತ್ತು ತೆಗೆದುಕೊಳ್ಳುವ ಹಾವಳಿ. ಇದಕ್ಕಾಗಿ ಕೋಟಿ ಕೋಟಿ ರೂಪಾಯಿಗಳ ವ್ಯಯ. ಇದನ್ನೆಲ್ಲಾ ನೋಡಿ ರೋಸಿ ಹೋಗಿರುವ ಜನತೆಗೆ ರಾಜಕೀಯವೆಂದರೆ ಇದೇನಾ ಎಂಬ ಭಾವನೆ ಹುಟ್ಟಿಕೊಂಡಿದೆ.  ಸರಕಾರದ ಉಳಿವಿಗಾಗಿ  ಮುಖ್ಯಮಂತ್ರಿಯಾದಿಗಳು ಹಣದ ಮೂಲಕ ಶಾಸಕರನ್ನು ಖರೀದಿಸುವ ಬೆನ್ನಲ್ಲೇ  ಆದಾಯ ತೆರಿಗೆ ಇಲಾಖಾಧಿಕಾರಿಗಳು (೩೦೦ ಕ್ಕೂ ಹೆಚ್ಚಿನ ಅಧಿಕಾರಿಗಳಿದ್ದರು)  ರಾಜ್ಯದ ಆರುವತ್ತು ಸ್ಥಳಗಳಲ್ಲಿ ಶಾಸಕರ ನಿವಾಸ, ಕಚೇರಿಗೆ ದಾಳಿ ಮಾಡಿದ್ದಾರೆ.  ಇದನ್ನು ಬಿಜೆಪಿ ಕಾಂಗ್ರೆಸ್ಸಿಗರ ಪಿತೂರಿ ಎಂದು ದೂರುತ್ತಿದ್ದಾರೆ. ಇಂತಹ ದಾಳಿ ಆದ ಸಂದರ್ಭದಲ್ಲಿ  ಇಂತಹ ಆರೋಪಗಳನ್ನು  ರಾಜಕೀಯ ಪಕ್ಷಗಳು ಮಾಡುವುದು ಸಾಮಾನ್ಯವಾಗಿಬಿಟ್ಟಿದೆ.

ಇದೇ  ರೀತಿ ಈ ಹಿಂದೆ ತಾಜ್ ಕಾರಿಡಾರ್ ಪ್ರಕರಣದಲ್ಲಿ ಮಾಯಾವತಿ ವಿರುದ್ಧ  ಅಕ್ರಮ ಸಂಪತ್ತು    ಕ್ರೋಡಿಕರಣದ ಆರೋಪಕ್ಕೆ ಸಂಬಂಧಿಸಿ ಮುಲಾಯಂ ಸಿಂಗ್ ಯಾದವ್ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳಲು  ಕೇಂದ್ರ ಸರಕಾರ ಸಿಬಿ‌ಐಯನ್ನು ದುರುಪಯೋಗಪಡಿಸಿಕೊಂಡಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಐಟಿ ದಾಳಿ ನಡೆದ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟದ ಶಾಸಕರು ಇದೊಂದು ಪಿತೂರಿ, ಷಡ್ಯಂತ್ರ ಎಂದು ಆರೋಪಿಸುವುದು ಎಷ್ಟು ಸರಿ?  ಪ್ರಾಮಾಣಿಕತೆಯಿಂದ ಸಂಪತ್ತು ಗಳಿಸಿದ ಶಾಸಕರು ಈ ರೀತಿಯ ಆರೋಪ  ಮಾಡಲು ಸಾಧ್ಯವೇ? ನಮ್ಮದು ಪ್ರಾಮಾಣಿಕ ಮಾರ್ಗದಲ್ಲಿ ಸಂಗ್ರಹಿಸಿದ ಹಣ, ಸಂಪತ್ತು ಎಂದು ಹೇಳಿಕೊಳ್ಳುವ ಶಾಸಕರು, ಸಚಿವರು  ತಮ್ಮ ತೆರಿಗೆಯ ಪೂರ್ಣ ಪ್ರಮಾಣದ ದಾಖಲೆಗಳನ್ನು ತೆರಿಗೆ ಇಲಾಖಾಧಿಕಾರಿಗಳು ಸಲ್ಲಿಸಲು ಹಿಂದೆಡೆ ಹಾಕುವುದೇಕೆ? ಇದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ. ಕೇವಲ ಅಧಿಕಾರ ಲಾಲಸೆ, ರಾಜಕೀಯದಲ್ಲಿ  ಸರ್ವಾಧಿಕಾರಿ ಮೆರೆಯಲು ಕೋಟಿ ಕೋಟಿ ಹಣ ನೀಡಿ, ರಾಜಕೀಯ ಸಿದ್ಧಾಂತಗಳನ್ನು ಅಪಮೌಲ್ಯ ಮಾಡಿ ಇತರ ಪಕ್ಷದ ಶಾಸಕರನ್ನು ಖರೀದಿಸುವುದು ನೈತಿಕತೆಯೇ? ಅಥವಾ ಸಂವಿಧಾನದ ಪರಿಮಿತಿಯಲ್ಲಿ  ಬರುವ  ಚಟುವಟಿಕೆಯೇ? ಅಲ್ಲ. ಇದೊಂದು ಮಿತಿಮೀರಿದ ಚಟುವಟಿಕೆಯಾಗಿದೆ.
ಐಟಿ ದಾಳಿ ನಡೆಯುವ ಮುನ್ನ ಮಂಗಳೂರಿನಲ್ಲಿ  ಧನಂಜಯ ಕುಮಾರ್ ಬಿಜೆಪಿ ಶಾಸಕರ ವಿರುದ್ಧ ಐಟಿ ದಾಳಿ ನಡೆಯಲಿದೆ ಎಂದು ಕಾರ್ಯಕ್ರಮವೊಂದರಲ್ಲಿ ಸುಳಿವು ನೀಡಿದ್ದರು. ಇದನ್ನು  ಬಿಜೆಪಿ ಶಾಸಕರು, ಸಚಿವರು ಗಮನಿಸಿ ಪ್ರಮುಖವಾದ ಅಕ್ರಮ ದಾಖಲೆಗಳನ್ನು ಬಚ್ಚಿಟ್ಟಿರಬಹುದು. ಈಗ ಐಟಿ ದಾಳಿ ನಡೆದಿರಬಹುದು. ಆದರೆ ಇದು ಮುಖ್ಯವಲ್ಲ. ಇದಕ್ಕಿಂತ ಮುಖ್ಯವಾಗಿದ್ದು ಏನೆಂದರೆ, ಐಟಿ ದಾಳಿಯಲ್ಲಿ ವಶಪಡಿಸಿಕೊಂಡ ಪ್ರಮುಖ ದಾಖಲೆಗಳು ಮುಖ್ಯವಾಗುತ್ತದೆ. ಮಾತ್ರವಲ್ಲ,  ಶಾಸಕರ ಕಡೆಯಲ್ಲಿ ಎಷ್ಟು ಅಕ್ರಮ  ಗಳಿಕೆ ಸಂಗ್ರಹವಾಗಿದೆ ಎಂಬುದರ ಕುರಿತು ಮಾಹಿತಿ ಬಹಿರಂಗವಾಗಬೇಕು. ಮಾತ್ರವಲ್ಲ, ಓರ್ವ ರಾಜಕೀಯ ವ್ಯಕ್ತಿಯೊಬ್ಬರು ಇಂತಹ ಪ್ರಮುಖ ದಾಳಿ ನಡೆಯುವುದರ ಕುರಿತು ಬಹಿರಂಗವಾಗಿ ಹೇಳಿಕೆ ಕೊಡುವುದು  ಬಾಹಿರವಲ್ಲವೇ? ಹೇಳಿಕೆ  ಕೊಡಬಾರದೆಂಬ  ಸಾಮಾನ್ಯ ಜ್ಞಾನ ರಾಜಕೀಯ ವ್ಯಕ್ತಿಗಳಿಗಿಲ್ಲವೆಂದ ಮೇಲೆ ಯಾರನ್ನೂ ದೂರಬೇಕು? ಯಾರನ್ನು  ಹಳಿಯಬೇಕೊ?   ಐಟಿ ದಾಳಿಯ ನಂತರ ಅಪರೇಷನ್ ಕಮಲಕ್ಕೆ  ತಡೆ ಹಾಕಿರುವ ರಾಜ್ಯ ಸರಕಾರ ಸ್ಪಲ್ಪ ಮಟ್ಟಿಗೆ ಐಟಿ ದಾಳಿಯಿಂದ ಆತಂಕಕ್ಕೀಡಾಗಿ   ಪಕ್ಷಾಂತರವು ಪ್ರಜಾತಂತ್ರ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿಕೆ ನೀಡಿದ್ದಾರೆ.   ಇದು ರಾಜ್ಯದ ಮುಖ್ಯಮಂತ್ರಿಯೊಬ್ಬರು ಕುದುರೆ ವ್ಯಾಪಾರ, ಕತ್ತೆ  ವ್ಯಾಪಾರ ಮಾಡಿದ  ನಂತರ ರಾಜ್ಯದ ಜನತೆಗೆ ಬುದ್ದಿ ಹೇಳಿದ ಪರಿ.  ಇದಕ್ಕೆ ಏನೆನ್ನಬೇಕು?
ಪಕ್ಷಾಂತರ ನಿಷೇಧ ಕಾಯ್ದೆ ಬಳಸಿ ಭಿನ್ನಮತ ಶಾಸಕರನ್ನು ಅಮಾನತು ಮಾಡಿ ಕಾಂಗ್ರೆಸ್ಸ್,  ಜೆಡಿ‌ಎಸ್‌ಅನ್ನು ಅಡಿಕತ್ತರಿಯಲ್ಲಿ ಬಂಧಿ ಮಾಡಿದ  ಬಿಜೆಪಿ ಶಾಸಕರು  ಈ ಸಮಯವನ್ನು ಸದುಪಯೋಗಪಡಿಸಿಕೊಂಡು ಆಪರೇಷನ್ ರಾಜಕೀಯ  ಮಾಡಿ ಇತರ ಪಕ್ಷದ ಶಾಸಕರನ್ನು ಖರೀದಿಸಿಕೊಂಡರು.  ಪಕ್ಷಾಂತರವೆನ್ನುವುದು  ನ್ಯಾಯಾಂಗದ ಹಾದಿಯಲ್ಲೇ ಇರಬೇಕೆ  ಹೊರತು ಹಣದಂಧೆಗೊಳಗಾಗಬಾರದು. ಪ್ರಸಕ್ತ ರಾಜ್ಯ ರಾಜಕೀಯ  ಕ್ಷೇತ್ರ ಪಕ್ಷಾಂತರದ ಹಾವಳಿಗೊಳಗಾಗಿದ್ದು ರಾಜಕೀಯದ ಮೌಲ್ಯಗಳಿಗೆ ಬೆಲೆ ಇಲ್ಲದಂತಾಗಿದೆ. ಇದು  ಒಂದು ರೀತಿಯಲ್ಲಿ ರಾಜ್ಯ  ರಾಜಕೀಯವನ್ನು ಅತಂತ್ರಗೊಳಿಸುತ್ತಿದೆ.
ಯಾವುದೇ ಒಂದು ರಾಜಕೀಯ ಪಕ್ಷ ಬುಡಮೇಲು ಆಗುವುದಕ್ಕೆ ಕಾರಣ ಈ ಆಪರೇಷನ್ ರಾಜಕೀಯ. ರಾಜ್ಯದ ಜನತೆ ರಾಜಕೀಯ ವ್ಯಕ್ತಿಗಳನ್ನು ಆಯ್ಕೆ ಮಾಡಿ ಕಳುಹಿಸುವುದು ಅಭಿವೃದ್ದಿ ಕಾರ್ಯಗಳಾಗಲೀ ಅಂತಲ್ಲವೇ. ಅದು ಬಿಟ್ಟು ಆಯ್ಕೆಗೊಳ್ಳುವ ಮುನ್ನ  ಭರವಸೆ ನೀಡಿ ತದನಂತರ ಅಧಿಕಾರ ಲಭಿಸಿದ ನಂತರ ತಾನು ನೀಡಿದ ಭರವಸೆ ಉಳಿಸುವ  ರಾಜಕೀಯ ವ್ಯಕ್ತಿಗಳ ಸಂಖ್ಯೆ ಕಡಿಮೆಯಾಗಿದೆ.  ಜನತೆಯ ಭರವಸೆಗಳನ್ನು ಈಡೇರಿಸುವ  ರಾಜಕೀಯ ವ್ಯಕ್ತಿಗಳ ಅಗತ್ಯ ಇಂದಿನ ರಾಜಕೀಯ ರಂಗಕ್ಕೆ ಬೇಕಾಗಿದ್ದಾರೆ. ಆಪರೇಷನ್‌ನಿಂದ ಪ್ರಜಾತಂತ್ರಕ್ಕೆ ಧಕ್ಕೆಯಾಗುತ್ತದೆ ಎಂಬ ವಿಚಾರ ಮುಖ್ಯಮಂತ್ರಿಗಳಿಗೆ ತಡವಾಗಿ ಗೊತ್ತಾಗಿದ್ದು ನಿಜವೋ , ಸುಳ್ಳೋ? ಅಂತೂ ಇದರಿಂದ ರಾಜಕೀಯ ಅನಿಶ್ಚಿತತೆ ಉಂಟಾಗುತ್ತದೆ ಎಂಬ ಅರಿವು ಇವರಿಗೆ ಬಂತಲ್ಲ , ಅಷ್ಟೇ ಸಾಕು ಎಂದು  ಸ್ಪಲ್ಪ ಮಟ್ಟಿಗೆ ತೃಪ್ತಿ ಕಾಣಬಹುದೇ  ಹೊರತು ಈ ಹಿಂದೆ ಮಾಡಿದ ಅಪರೇಷನ್ ರಾಜಕೀಯವನ್ನು ಮರೆಯಲು ಸಾಧ್ಯವೇ? ಅಥವಾ ಇದನ್ನು ಕ್ಷಮಿಸಲು ಸಾಧ್ಯವೇ?
ಸಾಹಿತ್ಯ ಸಮ್ಮೇಳನ ನಡೆಯಬಹುದೇ?
ಹಾಗೆಯೇ ರಾಜ್ಯ ರಾಜಕಾರಣದಲ್ಲಿ ಅನಿಶ್ಚಿತತೆ ತಾರಕಕ್ಕೇರುತ್ತಿರುವುದು ಮತ್ತೊಂದು ಆತಂಕ ಸೃಷ್ಟಿಯಾಗಿದೆ. ಇದೇ ವರ್ಷದ  ಡಿಸೆಂಬರ್‌ನಲ್ಲಿ ರಾಜಧಾನಿಯಲ್ಲಿ ನಡೆಯಲು ಉದ್ದೇಶಿಸಿರುವ ೭೭ನೆ ಅಖಿಲ ಭಾರತ ಕನ್ನಡ  ಸಾಹಿತ್ಯ ಸಮ್ಮೇಳನ ನಡೆಯುತ್ತದೆಯೇ ಎಂಬ ಆತಂಕ ಕನ್ನಡಿಗರನ್ನು ಕಾಡುತ್ತಿದೆ.  ರಾಜಧಾನಿ ಬೆಂಗಳೂರಿನಲ್ಲಿ ನಡೆಯಲು ಉದ್ದೇಶಿಸಿರುವ  ಸಮ್ಮೇಳನ ನಲ್ವತ್ತು ವರ್ಷಗಳ ನಂತರ ಬರುತ್ತಿದೆ.  ರಾಜಕೀಯ ಗದ್ದಲವಿರುವಾಗ ಸಾಹಿತ್ಯ  ಸಮ್ಮೇಳನವನ್ನು ನಡೆಸಲು ಸಾಧ್ಯವಿಲ್ಲ ಎಂಬ ಮಾತು ಕೇಳಿ ಬರುತ್ತಿರುವುದು ದುರಾದೃಷ್ಟವಾಗಿದೆ. ಇನ್ನು ಕೆಲವೇ ದಿನಗಳು  ಉಳಿದಿರುವುದರಿಂದ್ದ ರಾಜ್ಯದಲ್ಲಿ ಸಾಂಸ್ಕೃತಿಕ  ಹಬ್ಬದ ವಾತವರಣ ಇರಬೇಕಿದ್ದ ಸಂದರ್ಭದಲ್ಲಿ ರಾಜಕೀಯ ಡೊಂಬರಾಟದ ವಾತಾವರಣ  ಗಾಳಿಯಂತೆ ದಿನ  ಕಳೆದಂತೆ ಜಾಸ್ತಿಯಾಗುತ್ತಿದೆ. ಇದು ರಾಜ್ಯದ ದುರಾದೃಷ್ಟವಲ್ಲದೇ ಮತ್ತೇನು?
ರಾಜ್ಯ ರಾಜಕೀಯದ ಅನಿಶ್ಚಿತತೆಗೆ ಕನ್ನಡ   ಸಾಹಿತ್ಯ ಪರಿಷತ್ತು ಕೂಡಾ ಬಡವಾಗಿದೆ ಎಂದೆನಿಸುತ್ತದೆ. ಎಲ್ಲದಕ್ಕೂ ರಾಜ್ಯ ಸರಕಾರದ  ಶ್ರೀರಕ್ಷೆ ಬೇಕೆಂದು ಕೂಗಾಡುತ್ತಿದೆ. ರಾಜ್ಯ ಸರಕಾರದ ಸಹಕಾರವಿಲ್ಲದೇ ಯಾವುದು ನಡೆಯಲ್ಲ ಎಂಬ ಭ್ರಮೆಯನ್ನು ನಂಬಿಕೊಂಡಂತಿದೆ. ಇದು ಎಷ್ಟರ ಮಟ್ಟಿಗೆ ಸರಿ?   ಸಾಹಿತ್ಯ  ಸಮ್ಮೇಳನಕ್ಕೆ ಪೂರ್ವಾಭಾವಿಯಾಗಿ ಇವರೆಗೆ  ಸ್ವಾಗತ ಸಮಿತಿ ರಚನೆಯಾಗಿದೆ ಹೊರತು ಮುಂತಾದ ಪ್ರಮುಖ ಕಾರ್ಯಗಳೇನು ನಡೆದಿಲ್ಲ. ರಾಜ್ಯ ಸರಕಾರ ಇಂತಹ ದೊಡ್ಡ ದೊಡ್ಡ ಕಾರ್ಯಕ್ರಮಗಳ ತಯಾರಿ ಬಗ್ಗೆ ನಿರ್ಲಕ್ಷ ವಹಿಸುತ್ತಿದೆ  ಎಂದು ಹೇಳಬಹುದು. ಸಮ್ಮೇಳನದ ಕಾರ್ಯ ಪ್ರಾರಂಭವಾಗಲು ಒಂದು ಕೋಟಿ ರೂಪಾಯಿ ನೀಡುತ್ತೇನೆ ಎಂದ ರಾಜ್ಯ ಸರಕಾರ ಇವರೆಗೆ ನಯ ಪೈಸೆಯನ್ನು ಕೊಟ್ಟಿಲ್ಲ. ಇದಕ್ಕೆ ಏನೆನ್ನಬೇಕು? ಅಪರೇಷನ್ ರಾಜಕಾರಣ ಮಾಡಲು  ಹಣ ಸುರಿಯುವ ರಾಜ್ಯ ಸರಕಾರ  ಕನ್ನಡ ನಾಡು ನುಡಿಯೆನಿಸಿರುವ ಸಾಹಿತ್ಯ  ಸಮ್ಮೇಳನದಂತಹ ಪ್ರಮುಖ ಕಾರ್ಯಕ್ರಮಗಳನ್ನು ನಿರ್ಲಕ್ಷಿಸುತ್ತಿರುವುದು   ಖೇದಕರವಾಗಿದೆ.  ರಾಜಕೀಯ ಅನಿಶ್ಚಿತತೆಯನ್ನು  ಮುಂದಿಟ್ಟುಕೊಂಡು ರಾಜಧಾನಿಯಲ್ಲಿ ಸಮ್ಮೇಳನ ನಡೆಸದೇ ಹೋದರೆ ಅದು ದೊಡ್ಡ ತಪ್ಪಾಗುತ್ತದೆ.  ಸೀಮಿತ ದಿನಗಳಿರುವುದರಿಂದ ರಾಜ್ಯ ಸರಕಾರ ಅದಷ್ಟು ಬೇಗನೆ ಸಾಹಿತ್ಯ ಸಮ್ಮೇಳನ ನಡೆಸಲು ಅನುದಾನ ಬಿಡುಗಡೆ ಮಾಡಿ ತನ್ನ ಬದ್ದತೆಯನ್ನು ಪ್ರದರ್ಶಿಸುವುದ ಎಂದು? ಕನ್ನಡ ನಾಡು ನುಡಿಯ ಪ್ರತೀಕವಾಗಿರುವ ಸಾಹಿತ್ಯ  ಸಮ್ಮೇಳನ ನಡೆಯದೇ ಹೋದರೆ  ಅದು  ಅಪಮಾನ. ಕನ್ನಡ ರಾಜ್ಯೋತ್ಸವ ನಂತರ  ರಾಜಧಾನಿಯಲ್ಲಿ ಸಾಹಿತ್ಯ ಹಬ್ಬದ ಕಳೆ ಮೂಡಿದರೆ ಚೆನ್ನ. ಈಗಾಗಲೇ ಕೆಲ ಕಡೆ ತಾಲೂಕು ಸಾಹಿತ್ಯ ಸಮ್ಮೇಳನ, ಆಳ್ವಾಸ್ ನುಡಿಸಿರಿಗೆ ಚಾಲನೆ ದೊರಕಿದೆ. ರಾಜಕೀಯ ಗದ್ದಲಕ್ಕೆ ಸಾಹಿತ್ಯ ಸಮ್ಮೇಳನ ಬಲಿಯಾಗಬಾರದು. ಇದು ರಾಜ್ಯದ  ಜನತೆಯ ಆಶಯ.  ರಾಜಕೀಯ ಹಾಗೂ ಸಾಹಿತ್ಯವನ್ನು ಒಂದೆ ತಕ್ಕಡಿಯಲ್ಲಿ ತೂಗುವುದು ಸರಿಯಾದುದಲ್ಲ.  ಹೀಗೆ ಮಾಡಿದರೆ ಅದು ಸಾಹಿತ್ಯಕ್ಕೆ ಮಾಡುವ ಅಪಚಾರವಾಗಿದೆ. ಹೀಗಾಗಿ ಸಾಹಿತ್ಯವನ್ನು ರಾಜಕೀಯದಿಂದ ಹೊರಗಿಟ್ಟು  ಸಾಹಿತ್ಯ  ಸಮ್ಮೇಳನ ನಡೆಸಲು ರಾಜ್ಯ ಸರಕಾರ ಅನುವು ಮಾಡಿಕೊಡಬೇಕು. ಹಾಗೆಯೇ  ಸರಕಾರದ ವತಿಯಿಂದ ನಡೆಯಬೇಕಾದ  ಸಾಹಿತ್ಯ ಹಬ್ಬದ ತಯಾರಿಗೆ  ಬರ  ಬಂದಿದೆ ಎಂಬ ಪ್ರಶ್ನೆಗೆ ಉತ್ತರ ಯಾರಲ್ಲಿ  ಕೇಳಬೇಕು?

ಚಿತ್ರಕೃಪೆ: harinigallery.blogspot.com

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments