ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 8, 2010

3

ಭಾರತಕ್ಕೆ ಒಬಾಮ ಹಾಕಿದ ಟೋಪಿ!

‍ನಿಲುಮೆ ಮೂಲಕ

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಬಂದಿದ್ದಾರೆ. ತನ್ನ ದೇಶದಲ್ಲಿ ಐವತ್ತು ಸಾವಿರ ಉದ್ಯೋಗಗಳನ್ನು ಸಷ್ಟಿಸಲು 44 ಸಾವಿರ ಕೋಟಿ ರೂಪಾಯಿ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಅಮೆರಿಕದ ರಫ್ತು ದ್ವಿಗುಣ ಮಾಡುವುದೇ ತನ್ನ ಗುರಿ ಎಂದು ಇಂಡಿಯಾಕ್ಕೆ ಭರ್ಜರಿ ಟೋಪಿ ಹಾಕಿದ್ದಾರೆ. ಭಾರತದ ಶಸ್ತ್ರಾಸ್ತ್ರ ಮಾರುಕಟ್ಟೆಯ ಮೇಲೂ ಕಣ್ಣು ಹಾಕಿದ್ದಾರೆ. ನಮ್ಮ ದೇಶವನ್ನು ಇಕ್ಕಟ್ಟಿಗೆ ಸಿಲುಕಿಸಲೆಂದೇ ಪರಮಾಣು ಪೂರೈಕೆದಾರರ ಕೂಟದಲ್ಲಿ (ಎನ್‌ಎಸ್‌ಜಿ) ಭಾರತಕ್ಕೆ ಪೂರ್ಣ ಪ್ರಮಾಣದ ಸದಸ್ಯತ್ವ ದೊರಕಿಸಿಕೊಡುವ ಆಶ್ವಾಸನೆಯನ್ನು ನೀಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಈ ದೇಶದ ಸಂಪನ್ಮೂಲಗಳನ್ನು ಲೂಟಿ ಮಾಡಲು ಏನೇನು ಮಾಡಬೇಕೋ ಅದನ್ನೆಲ್ಲ ಮಾಡಿದ್ದಾರೆ.

ಬರಾಕ್ ಒಬಾಮ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಾಗ ಅಮೆರಿಕಕ್ಕೊಬ್ಬ ಕಪ್ಪು ವರ್ಣಿಯ ವ್ಯಕ್ತಿ ನಾಯಕತ್ವ ವಹಿಸಿದನೆಂದು ಸಂಭ್ರಮ ಪಟ್ಟವರಿದ್ದರು. ನಮ್ಮ ದೇಶದಲ್ಲೂ ಇಂಥ ವಿಜಯೋತ್ಸಾಹ ಕಂಡು ಬಂದಿತ್ತು. ಆದರೆ, ಎಡ ಪಂಥಿಯರಲ್ಲಿ ಯಾವುದೇ ಭ್ರಮೆ ಇರಲಿಲ್ಲ. ಯಾವುದೇ ಬಣ್ಣದ ವ್ಯಕ್ತಿ ಅಧಿಕಾರಕ್ಕೆ ಬಂದನೆಂದ ಮಾತ್ರಕ್ಕೆ ಒಂದು ಸಾಮ್ರಾಜ್ಯಶಾಹಿ ದೇಶದ ನೀತಿ ಧೋರಣೆಗಳು ಒಮ್ಮಿಂದೊಮ್ಮೆಲೆ ಬದಲಾಗಿ ಬಿಡುವುದಿಲ್ಲ. ಬರಾಕ್ ಒಬಾಮ ಒಳ್ಳೆಯವರೇ ಇರಬಹುದು. ವರ್ಣಭೇದದ ಬೆಂಕಿಯಲ್ಲಿ ನಲುಗಿದವರಿರಬಹುದು.

ಆದರೆ, ತಾನು ಪ್ರತಿನಿಧಿಸುವ ಪ್ರಭುತ್ವದ ಆಜ್ಞಾಧಾರಕ ಎಂಬುದನ್ನು ಮರೆಯಬಾರದು. ಬಂಗಾರು ಲಕ್ಷ್ಮಣ, ಕೆ.ಎಸ್. ಈಶ್ವರಪ್ಪ ಪಕ್ಷದ ಅಧ್ಯಕ್ಷರಾದರೆಂಬ ಕಾರಣಕ್ಕೆ ಬಿಜೆಪಿ ದಲಿತ, ಹಿಂದುಳಿದವರ ಪಕ್ಷವಾಗುವುದಿಲ್ಲ. ಮುಮ್ತಾಝ್ ಅಲಿ ಖಾನ್‌ರನ್ನು ಮಂತ್ರಿ ಮಾಡಿದ ಮಾತ್ರಕ್ಕೆ ಅದರ ದೇಹದಲ್ಲಿ ತುಂಬಿಕೊಂಡ ಕೋಮುವಾದಿ ನಂಜು ನಾಶವಾಗುವುದಿಲ್ಲ. ಅದೇ ರೀತಿ ಬರಾಕ್ ಒಬಾಮ ಅಧ್ಯಕ್ಷರಾದ ಮಾತ್ರಕ್ರೆ ಅಮೆರಿಕದ ನರಹಂತಕ ಸಾಮ್ರಾಜ್ಯಶಾಹಿ ನೀತಿ ಬದಲಾಗುವುದಿಲ್ಲ.

ಆ ದೇಶಕ್ಕೆ ಯಾರೇ ಸಾರಥ್ಯವಹಿಸಲಿ, ಅವರು ಡೆಮಾಕ್ರಟಿಕ್ ಇಲ್ಲವೇ ರಿಪಬ್ಲಿಕನ್ ಪಕ್ಷಕ್ಕೆ ಸೇರಿದವರಾಗಿರುತ್ತಾರೆ. ಶೋಷಕ ವರ್ಗಗಳ ಹಿತರಕ್ಷಿಸುವ ಅವರೆಡು ಪಕ್ಷಗಳು ಸರದಿಯಂತೆ ಅಧಿಕಾರ ಹಂಚಿಕೊಳ್ಳುತ್ತ ಬಂದಿವೆ. ಆದರೆ ಅಭಿವದ್ಧಿಶೀಲ ದೇಶಗಳನ್ನು ಮುಕ್ಕಿ ತಿನ್ನುವ ವಾಶಿಂಗ್ಟನ್‌ನ ವಿದೇಶಾಂಗ ನೀತಿ ಬದಲಾಗಿಲ್ಲ. ಸಮಾಜವಾದಿ ಸೋವಿಯತ್ ರಶ್ಯದ ಕುಸಿತದ ನಂತರವಂತೂ ಅದರ ವಿಸ್ತರಣಾವಾದಿ ದಾಹ ಇನ್ನೂ ತೀವ್ರಗೊಂಡಿದೆ. ಬರಾಕ್ ಒಬಾಮ ಆ ದಾಹವನ್ನು ಹಿಂಗಿಸುವ ಹೊಣೆ ಹೊತ್ತು ಬಂದಿರುವ ಕಾರ್ಪೊರೇಟ್ ಕಂಪೆನಿಗಳ ಸೂತ್ರದಗೊಂಬೆ ಮಾತ್ರ.

ಅಂದ ಮಾತ್ರಕ್ಕೆ ಅಮೆರಿಕದ ಹಿಂದಿನ ಅಧ್ಯಕ್ಷ ಜಾರ್ಜ್ ಬುಶ್‌ಗೂ ಈ ಒಬಾಮಗೂ ವ್ಯತ್ಯಾಸವಿಲ್ಲವೆಂದೇನಲ್ಲ. ವ್ಯಕ್ತಿಗತವಾಗಿ ಕೆಲ ಫರಕುಗಳು ಇದ್ದೇ ಇರುತ್ತವೆ. ಅಮೆರಿಕದಂಥ ದೇಶದ ಮೊಟ್ಟ ಮೊದಲ ಕಪ್ಪು ವರ್ಣಿಯ ಅಧ್ಯಕ್ಷ ಒಬಾಮ ಎಂಬುದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. ಅಂತಲೆ ಅವರ ಗೆಲುವಿಗಾಗಿ ಭಾರತವೂ ಸಂಭ್ರಮಿಸಿತ್ತು. ಜಾರ್ಜ್ ವಾಶಿಂಗ್ಟನ್ ಮತ್ತು ಜಾನ್ ಎಫ್ ಕೆನಡಿಗೆ ಇವರನ್ನು ಹೋಲಿಕೆ ಮಾಡಲಾಗುತ್ತಿತ್ತು.

ಅವರ ಆರಂಭದ ಭಾಷಣಗಳು ಉದಾರವಾದಿತ್ವದಿಂದ ಕೂಡಿದ್ದವು. ಜಾರ್ಜ್ ಬುಶ್ ಇರಾಕ್ ಮೇಲೆ ಪೈಶಾಚಿಕ ದಾಳಿ ನಡೆಸಿ ಸಾವಿರಾರು ಜನರನ್ನು ಕೊಂದು ಹಾಕಿದ ಕ್ರಿಮಿನಲ್. ಅದಕ್ಕೆ ಒಬಾಮ ಹೊಣೆ ಅಲ್ಲ. ಆದರೆ ಆ ಬುಶ್ ನೀತಿಯನ್ನೇ ಈ ಒಬಾಮ ಮುಂದುವರಿಸಿದ್ದು ಸುಳ್ಳಲ್ಲ. ಇಂದಿಗೂ ಅಮೆರಿಕದ ಸೇನಾ ಪಡೆಗಳು ಇರಾಕಿನಲ್ಲಿ ದಮನಕಾಂಡ ನಡೆಸುತ್ತಿವೆ.

ತಮ್ಮ ಮೂರು ಸಾವಿರ ಸಿಬ್ಬಂದಿ ಜೊತೆಗೆ ಮುಂಬೈಯ ನೆಲದ ಮೇಲೆ ಬಂದಿಳಿದ ಈ ಅಮೆರಿಕದ ಅಧ್ಯಕ್ಷನನ್ನು ಕಂಡು ಈ ದೇಶದ ವಾಣಿಜ್ಯೋದ್ಯಮ ಚಕ್ರವರ್ತಿಗಳು ಸಂಭ್ರಮ ಪಡುತ್ತಿದ್ದಾರೆ. ಈ ಭೇಟಿ ಎರಡು ಪ್ರಜಾಪ್ರಭುತ್ವ ದೇಶಗಳ ಸಮಾಗಮ ಎಂದು ವ್ಯಾಖ್ಯಾನಿಸಲಾಗುತ್ತಿದೆ. ರಕ್ಷಣೆ, ವ್ಯಾಪಾರ, ಮಾರುಕಟ್ಟೆ, ವಿಜ್ಞಾನ, ತಂತ್ರಜ್ಞಾನ, ಮಾರುಕಟ್ಟೆ ಅವಕಾಶ ಹೀಗೆ ಹಲವಾರು ಅಜೆಂಡಾಗಳನ್ನು ಇಟ್ಟುಕೊಂಡೆ ಒಬಾಮ ಬಂದಿದ್ದಾರೆ. ಆದರೆ ಈ ಬಾರಿ ಅಮೆರಿಕ ಕಷಿಗೆ ಹೆಚ್ಚಿನ ಆದ್ಯತೆ ನೀಡಿದೆ.

ಅಮೆರಿಕದ ಕಷಿ ಉತ್ಪನ್ನಗಳಿಗೆ ಭಾರತದಲ್ಲಿ ವ್ಯಾಪಕವಾದ ಮಾರುಕಟ್ಟೆ ಸೌಕರ್ಯ ಒದಗಿಸುವ ಆಗ್ರಹವೂ ಅದಕ್ಕಿದೆ. ಅದಕ್ಕೆಂತಲೇ ಇದೇ ಪ್ರಥಮ ಬಾರಿ ಅಮೆರಿಕದ ಅಧ್ಯಕ್ಷರು ತಮ್ಮ ಕಷಿ ಮಂತ್ರಿಯನ್ನೂ ಜೊತೆಗೆ ಕರೆ ತಂದಿದ್ದಾರೆ.ಇನ್ನು ಅಮೆರಿಕದ ‘ಪ್ರಜಾಪ್ರಭುತ್ವ’ವು ಲೊಳಲೊಟ್ಟೆ ಎಂಬುದು ಎಲ್ಲರಿಗೂ ಗೊತ್ತಿದೆ. ಭಾರತದಿಂದ ಹೋಗಿ ಕಾಸು ಮಾಡಿಕೊಂಡ ಕೆಲವರು ಅಲ್ಲಿ ಧರೆಯ ಮೇಲಿನ ಸ್ವರ್ಗವೇ ನಿರ್ಮಾಣವಾಗಿದೆ ಎಂದು ಅತಿರಂಜಿತವಾಗಿ ಹೇಳುತ್ತಾರೆ.

ಆದರೆ ಸ್ವದೇಶದಲ್ಲಿ ಜನತಂತ್ರ ನೀತಿ ಅನುಸರಿಸುವ ಅಮೆರಿಕ ಉಳಿದ ದೇಶಗಳೊಂದಿಗೆ ಸಾಮ್ರಾಜ್ಯಶಾಹಿ ಯಜಮಾನಿಕೆ ನೀತಿ ಅನುಸರಿಸುತ್ತಿದೆ. ವಿಶ್ವದ ಇತರ ದೇಶಗಳ ಚುನಾಯಿತ ಸರಕಾರಗಳನ್ನು ಉರುಳಿಸಿದ ‘ರಕ್ತದ ಕಲೆಗಳು’ ಶ್ವೇತಭವನದ ಗೋಡೆಯ ಸುತ್ತಲೂ ಅಂಟಿಕೊಂಡಿವೆ. ಇಂಡೊನೇಶ್ಯದಲ್ಲಿ ಅಧ್ಯಕ್ಷ ಪುಕರ್ಣೊ ಕೊಲೆ, ರಕ್ತ ಪಾತ, ಚೇಲ ಸರಕಾರ ಹೇರಿಕೆ ಚಿಲಿಯಲ್ಲಅ ಅಲೆಂಜೆ ಹತ್ಯೆ ಅಲ್ಲೂ ಕೈಗೊಂಬೆ ಸರಕಾರ ಸ್ಥಾಪನೆ, ಬಾಂಗ್ಲಾದೇಶದಲ್ಲಿ ಶೇಕ್ ಮುಜೀಬುರ್ರಹ್ಮಾನ್ ಹತ್ಯೆ ಹೀಗೆ ವಾಶಿಂಗ್ಟನ್ ಎಲ್ಲೆಡೆ ನಡೆಸಿದ್ದು ಇದೇ ಹೀನ ಕತ್ಯ.

ಭಾರತದೊಂದಿಗೆ ಈಗ ಸ್ನೇಹಕ್ಕೆ ಹಾತೊರೆಯುತ್ತಿರುವ ಅದರ ಉದ್ದೇಶ ಅತ್ಯಂತ ಅಪಾಯಕಾರಿಯಾಗಿದೆ. ಜಗತ್ತಿನೆಲ್ಲೆಡೆ ತನಗೆ ಪೈಪೋಟಿ ನೀಡುತ್ತಿರುವ ಚೀನಾವನ್ನು ಮಣಿಸಲು ಏಶ್ಯಾಖಂಡದ ಮಾರುಕಟ್ಟೆಯನ್ನು ಸ್ವಾಧೀನಪಡಿಸಿಕೊಳ್ಳಲು ಅದು ಹಾತೊರೆಯುತ್ತಿದೆ. ತನ್ನ ಈ ಗುರಿಸಾಧನೆಗಾಗಿ ಭಾರತವನ್ನು ಏಣಿಯಾಗಿ ಬಳಸಿಕೊಳ್ಳಲು ಅದು ಹೊರಟಿದೆ. ಅಫ್ಘಾನಿಸ್ತಾನದಲ್ಲಿ ತಾನು ನಡೆಸಿದ ಅತಿಕ್ರೂರ ದಮನಕಾಂಡವನ್ನು ಸಮರ್ಥಿಸಿಕೊಳ್ಳಲು ಭಾರತದ ಬೆಂಬಲವೂ ಅದಕ್ಕೆ ಬೇಕಾಗಿದೆ. ಅದಕ್ಕಾಗಿ ಒಬಾಮ ಇಲ್ಲಿಗೆ ಓಡಿ ಬಂದಿದ್ದಾರೆ.

ಮುಂಬೈ ಭೇಟಿ ಮುಗಿಸಿ ದಿಲ್ಲಿಗೆ ತಲುಪಿರುವ ಒಬಾಮರಿಗೆ ಕೆಲ ಪ್ರಶ್ನೆಗಳನ್ನು ಕೇಳಬೇಕಾಗಿದೆ. ಇರಾಕ್ ವಿರುದ್ಧ ಯುದ್ಧವನ್ನು ಸಮರ್ಥಿಕೊಳ್ಳಲು ಅಮೆರಿಕದ ಸಾಮ್ರಾಜ್ಯಶಾಹಿಯ ಯತ್ನಗಳೆಲ್ಲವೂ ತಳಬುಡವಿಲ್ಲದವು ಎಂದು ವೆಬ್ ತಾಣ ‘ವಿಕಿಲೀಕ್ಸ್’’ ಅಮೆರಿಕದ ಯುದ್ಧ ದಾಖಲೆಗಳನ್ನು ಒಂದೆ ಸಮನೆ ಬಿಡುಗಡೆಗೊಳಿಸುತ್ತಲೇ ಇದೆ.

ಇರಾಕ್‌ನ ಒಂದು ಲಕ್ಷ ಹತ್ತು ಸಾವಿರ ನಾಗರಿಕರ ಸಾವಿನ ವಿವರಗಳನ್ನು ಇದು ಬಹಿರಂಗಗೊಳಿಸಿದೆ. ಜಗತ್ತಿಗೆಲ್ಲ ಮಾನವ ಹಕ್ಕುಗಳ ಉಪದೇಶ ನೀಡುವ ವಾಶಿಂಗ್ಟನ್ ತಾನು ನಡೆಸಿದ ಅತ್ಯಂತ ಹೇಯವಾದ ಮಾನವಹಕ್ಕು ಉಲ್ಲಂಘನೆಗೆ, ಯುದ್ಧಾಪರಾಧಕ್ಕೆ ಈಗ ಉತ್ತರ ನೀಡಬೇಕಾಗಿದೆ. ಈಗ ಆ ಹೊಣೆಯನ್ನು ಒಬಾಮ ಅಲ್ಲದೆ ಇನ್ಯಾರು ಹೊತ್ತುಕೊಳ್ಳಬೇಕು?

ಇರಾಕ್ ಮಾತ್ರವಲ್ಲ ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಕಂಪೆನಿಯ ವಿಷಾನಿಲ ಸೋರಿಕೆ ಅನಾಹುತ, ಅಲ್ಲಿ ಸಾವಿಗಿಡದವರಿಗೆ ಹಾಗೂ ಅವರ ಸಂಬಂಧಿಕರಿಗೆ ನ್ಯಾಯವಾದ ಪರಿಹಾರ ದೊರಕದಿರುವ ಕುರಿತು ಒಬಾಮ ಸ್ಪಷ್ಟನೆ ನೀಡಬೇಕಾಗಿದೆ. ಪಾತಕಿ ಆ್ಯಂಡರ್ಸನ್‌ನನ್ನು ಭಾರತದ ವಶಕ್ಕೆ ಒಪ್ಪಿಸಬೇಕಾಗಿದೆ.

ಅಮೆರಿಕದ ಅಧ್ಯಕ್ಷರು 26/11ರ ದಾಳಿಗೆ ಸಂಬಂಧಿಸಿದಂತೆ ಮುಂಬೈನ ತಾಜ್ ಹೊಟೇಲ್‌ಗೆ ಹೋಗಿ ಮತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದರೆ ಸಾಲದು. ಈ ದಾಳಿಯಲ್ಲಿ ತನ್ನ ಕೈವಾಡವನ್ನು ಒಪ್ಪಿಕೊಂಡಿರುವ ಡೇವಿಡ್ ಹೆಡ್ಲಿಯ ಬಗ್ಗೆ ಒಬಾಮ ಉತ್ತರಿಸಬೇಕಾಗಿದೆ. ಆತನನ್ನು ಕೂಡ ಭಾರತಕ್ಕೆ ಒಪ್ಪಿಸಬೇಕಾಗಿದೆ. ಹೆಡ್ಲಿ ಪಾಕ್ ಭಯೋತ್ಪಾದಕ ಶಿಬಿರಗಳಲ್ಲಿ ತರಬೇತಿ ಪಡೆಯುತ್ತಿರುವಾಗಲೇ ಇನ್ನೊಂದೆಡೆ ಲಷ್ಕರೆ ತಯ್ಯಿಬಾ ಮೂಲಕ ಅಲ್ ಖೈದಾಕ್ಕೆ ಮತ್ತೊಂದೆಡೆ ಅಮೆರಿಕಾ ಬೇಹುಗಾರಿಕೆ ಸಂಸ್ಥೆಗಳಿಗೆ ಡಬಲ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಸಂಗತಿ ಬಯಲಿಗೆ ಬಂದಿದೆ. ಈ ಬಗ್ಗೆ ಒಬಾಮ ಸ್ಪಷ್ಟನೆ ನೀಡಬೇಕು.

ಭಾರತವನ್ನು ಅಮೆರಿಕದ ಸೇನೆಯ ಪಾಲುದಾರನನ್ನಾಗಿ ಮಾಡುವ ಭಾರತ-ಅಮೆರಿಕ ರಕ್ಷಣಾ ಒಪ್ಪಂದ ಅಪಾಯಕಾರಿಯಾಗಿದೆ. ಅಮೆರಿಕದ ಪರಮಾಣು ಸರಬರಾಜುದಾರರ ಮೇಲಿನ ಪರಮಾಣು ಬಾಧ್ಯತಾ ಹಕ್ಕನ್ನು ಭಾರತ ಬಿಟ್ಟುಕೊಡಬೇಕೆಂದು ಒತ್ತಡವನ್ನು ವಾಶಿಂಗ್ಟನ್ ಹೇರಕೂಡದು. ಕಷಿ, ಚಿಲ್ಲರೆ ವ್ಯಾಪಾರೀಕರಣ ಮತ್ತು ಇತರ ಸೇವೆಗಳನ್ನು ಅಮೆರಿಕದ ಬಹುರಾಷ್ಟ್ರೀಯ ಕಂಪೆನಿಗಳಿಗೆ ಮುಕ್ತಗೊಳಿಸಬೇಕೆಂಬ ವಾಶಿಂಗ್ಟನ್ ಒತ್ತಡಕ್ಕೆ ಭಾರತ ಮಣಿಯಬಾರದು, ದೇಶದ ವಿದೇಶಾಂಗ ನೀತಿ ಹೀಗೇ ಇರಬೇಕೆಂದು ಅಮೆರಿಕ ಭಾರತವನ್ನು ಒತ್ತಾಯಿಸಬಾರದು.

ಇರಾಕ್ ಮೇಲೆ ಜಾರ್ಜ್ ಬುಶ್ ಯುದ್ಧ ಸಾರಿದ್ದೇನೋ ನಿಜ. ಒಬಾಮ ಬಂದ ನಂತರವೂ ಅಮೆರಿಕದ ನೀತಿ ಬದಲಾಗಿಲ್ಲ. ಇಂದಿಗೂ ಅಲ್ಲಿ ಅಮೆರಿಕದ ಐವತ್ತು ಸಾವಿರ ಸೈನಿಕರಿದ್ದಾರೆ. ಅವರನ್ನು ತಕ್ಷಣ ವಾಪಸು ಕರೆಸಿಕೊಳ್ಳಬೇಕು. ಅಫ್ಘಾನಿಸ್ತಾನದಲ್ಲಿ ತಳವೂರಿರುವ ಆಂಗ್ಲೊ ಅಮೆರಿಕನ್ ನ್ಯಾಟೊ ಪಡೆಗಳನ್ನು ತಕ್ಷಣ ಹಿಂದಕ್ಕೆ ಕರೆಸಿಕೊಳ್ಳಬೇಕು. ಅಲ್ಲಿನ ಸಮಸ್ಯೆಗೆ ರಾಜಕೀಯ ಪರಿಹಾರ ಕಂಡು ಹಿಡಿಯಬೇಕು. ಕ್ಯೂಬಾ ಮೇಲಿನ ನಿರ್ಬಂಧಗಳನ್ನು ಕೈ ಬಿಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಫೆಲೆಸ್ತೀನ್ ಹಾಗೂ ಅರಬ್ ಪ್ರದೇಶಗಳನ್ನು ಆಕ್ರಮಿಸಿ ಹಿಂಸಾಕಾಂಡ ನಡೆಸಿರುವ ಇಸ್ರೇಲ್‌ಗೆ ಕಡಿವಾಣ ಹಾಕಬೇಕು. ಅದಕ್ಕೆ ನೀಡುತ್ತಿರುವ ನೆರವನ್ನು ನಿಲ್ಲಿಸಬೇಕು.

ಇಂಥ ಜ್ವಂಲತ ಪ್ರಶ್ನೆಗಳಿಗೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಉತ್ತರ ನೀಡಬೇಕಾಗಿದೆ. ಭಾರತವೆಂದರೆ ಇಲ್ಲಿನ ಬಂಡವಾಳಿಗರ ಕೂಟಗಳು ಮಾತ್ರವಲ್ಲ. ಇಲ್ಲಿನ ನೂರು ಕೋಟಿ ಜನರ ಬದುಕು ಬವಣೆಗಳು ಈ ನೆಲದೊಂದಿಗೆ ಹೆಣೆದುಕೊಂಡಿವೆ. ಎಸ್‌ಇಝೆಡ್ ಮೂಲಕ ಭೂಮಿ ಕಳೆದುಕೊಂಡು ಈಗ ಒಬ್ಬೊಬ್ಬರಾಗಿ ಆತ್ಮಹತ್ಯೆ ಮಾಡಿಕೊಳ್ಳ ತೊಡಗಿದರೆ ನಾಳೆ ಅಮೆರಿಕದ ಕಷಿ ಉತ್ಪನ್ನಗಳಿಗೆ ಇಲ್ಲಿನ ಮಾರಕಟ್ಟೆ ಯನ್ನು ಮುಕ್ತಗೊಳಿಸಿದ್ದಾರೆ. ಇಲ್ಲಿನ ರೈತಾಪಿ ಒಕ್ಕಲು ಮಕ್ಕಳ ಸಾಮೂಹಿಕ ಆತ್ಮಹತ್ಯೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಈಗಾಗಲೇ ಎರಡೂವರೆ ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಲ್ಲಿನ ಕೋಮುವಾದಿ ಸಂಘಟನೆಗಳಿಗೆ ಧನ ಸಾಹಯ ಮಾಡುತ್ತ, ಅಮೆರಿಕದ ಸ್ನೇಹದ ಅಗತ್ಯವನ್ನು ಪ್ರತಿಪಾದಿಸುತ್ತಿರುವ ಸುಖಸಾಗರದಲ್ಲಿ ತೇಲಾಡುತ್ತಿರುವ ಎನ್‌ಆರ್‌ಐಗಳು ತೆಪ್ಪಗೆ ಅಮೆರಿಕದಲ್ಲಿ ಬಿದ್ದುಕೊಂಡಿರಲಿ, ಅಲ್ಲಿನ ನಾಗರಿಕತ್ವ ಪಡೆದು ನಮಗೆ ದೇಶಪ್ರೇಮದ ಉಪದೇಶ ನೀಡುವುದು ಬೇಡ. ಒಬಾಮ ಒಬ್ಬ ಅತಿಥಿಯಾಗಿ ಬಂದು ಹೋಗಲಿ. ಆದರೆ, ಈ ದೇಶವನ್ನು ದಾಸ್ಯದ ನೇಣಿನ ಕುಣಿಕೆಗೆ ಹಾಕುವ ಹುನ್ನಾರ ಬೇಡ.

ಏಶ್ಯದ ದೇಶಗಳ ನಡುವೆ ಕಲಹದ ಕಿಡಿ ಹೊತ್ತಿಸಿ ದ್ವೇಷದ ದಳ್ಳುರಿ ಎಬ್ಬಿಸುವ ಅಮೆರಿಕದ ಹುನ್ನಾರವನ್ನು ವಿಫಲಗೊಳಿಸಬೇಕಾಗಿದೆ. ಈ ದೇಶದ ನೆಲ, ಗುಡ್ಡ, ನದಿ, ಕಾಡುಗಳ ಅಪಹರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಾರಿ ಹೇಳಬೇಕಾಗಿದೆ.

ಕೃಪೆ: ವಾರ್ತಾಭಾರತಿ ದೈನಿಕ

ಚಿತ್ರಕೃಪೆ: ಗೂಗಲ್ ಇಮೇಜ್
3 ಟಿಪ್ಪಣಿಗಳು Post a comment
  1. ಆಸು ಹೆಗ್ಡೆ's avatar
    ನವೆಂ 8 2010

    ನಾನು ಎರಡು ದಿನಗಳ ಹಿಂದೆ ಸ್ನೇಃಇತರಿಗೆ ರವಾನಿಸಿದ್ದ ಸಂದೇಶ:

    ಈ ಬಾರಿಯ ಅತಿ ದೊಡ್ಡ ಪಟಾಕಿ ಒಬಾಮಾ
    ಸದ್ದುಗಳ ಜೊತೆಗೆ ಬಂದಿಹನು ಆ ಮಾಮಾ
    ಬೆಳಕು ಚೆಲ್ಲಿಹುದು ಅಲ್ಲಿ ಇಲ್ಲಿ ಒಂದರೆ ಗಳಿಗೆ
    ನಾಳೆ ದುಷ್ಪರಿಣಾಮ ಖಂಡಿತ ಈ ನಾಡಿಗೆ

    ಉತ್ತರ
  2. Shihab Ullal's avatar
    ನವೆಂ 8 2010

    ” ಭಾರತವೆಂದರೆ ಇಲ್ಲಿನ ಬಂಡವಾಳಿಗರ ಕೂಟಗಳು ಮಾತ್ರವಲ್ಲ. ಇಲ್ಲಿನ ನೂರು ಕೋಟಿ ಜನರ ಬದುಕು ಬವಣೆಗಳು ಈ ನೆಲದೊಂದಿಗೆ ಹೆಣೆದುಕೊಂಡಿವೆ. ಎಸ್‌ಇಝೆಡ್ ಮೂಲಕ ಭೂಮಿ ಕಳೆದುಕೊಂಡು ಈಗ ಒಬ್ಬೊಬ್ಬರಾಗಿ ಆತ್ಮಹತ್ಯೆ ಮಾಡಿಕೊಳ್ಳ ತೊಡಗಿದರೆ ನಾಳೆ ಅಮೆರಿಕದ ಕಷಿ ಉತ್ಪನ್ನಗಳಿಗೆ ಇಲ್ಲಿನ ಮಾರಕಟ್ಟೆ ಯನ್ನು ಮುಕ್ತಗೊಳಿಸಿದ್ದಾರೆ. ಇಲ್ಲಿನ ರೈತಾಪಿ ಒಕ್ಕಲು ಮಕ್ಕಳ ಸಾಮೂಹಿಕ ಆತ್ಮಹತ್ಯೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಈಗಾಗಲೇ ಎರಡೂವರೆ ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.”

    ಖ೦ಡಿತವಾಗಿಯೂ…

    ಮಾಹಿತಿ ನೀಡಿದಕ್ಕಾಗಿ ದನ್ಯವಾದಗಳು, “ನಿಲುಮೆ ” ಗೆ .

    ಉತ್ತರ
  3. ಮಹೇಶ ಪ್ರಸಾದ ನೀರ್ಕಜೆ's avatar
    ಮಹೇಶ ಪ್ರಸಾದ ನೀರ್ಕಜೆ
    ನವೆಂ 26 2010

    “ಇಲ್ಲಿನ ಕೋಮುವಾದಿ ಸಂಘಟನೆಗಳಿಗೆ ಧನ ಸಾಹಯ ಮಾಡುತ್ತ, ಅಮೆರಿಕದ ಸ್ನೇಹದ ಅಗತ್ಯವನ್ನು ಪ್ರತಿಪಾದಿಸುತ್ತಿರುವ ಸುಖಸಾಗರದಲ್ಲಿ ತೇಲಾಡುತ್ತಿರುವ ಎನ್‌ಆರ್‌ಐಗಳು ತೆಪ್ಪಗೆ ಅಮೆರಿಕದಲ್ಲಿ ಬಿದ್ದುಕೊಂಡಿರಲಿ”

    ವಾರ್ತಾಭಾರತಿ ಲೇಖನ ಎಂದ ಮೇಲೆ ಇಂಥವನ್ನು ನಿರೀಕ್ಷಿಸಿದ್ದೆ.. ಈ ಪೇಪರ್ನವರಿಗೆ ಒಬಾಮಾ ನ ಬಗ್ಗೆ ತಕರಾರಿದೆ. ಯಾಕೆ ಅಂತೀರಾ? ಆತ ಭಾರತಕ್ಕೇನು ಕೇಡು ಮಾಡುತ್ತಾನೆ ಎಂಬುದಕ್ಕಿಂತಲೂ ಅಮೆರಿಕ “ಇನ್ನೆಲ್ಲೋ” “ಯಾರಿಗೋ” “ಏನೋ” ತೊಂದರೆ ಮಾಡಿದೆ ಅಂತ.. ಇರಲಿ. ಇಸ್ರೇಲ್ ಬಗ್ಗೆ ಮಾತನಾಡದಿರುವುದೇ ಒಳ್ಳೆದು.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments