ವಿಷಯದ ವಿವರಗಳಿಗೆ ದಾಟಿರಿ

Archive for

9
ನವೆಂ

ಮಿಂಚುಳ್ಳಿ

ಹರ್ಷವರ್ಧನ್ ಶೀಲವಂತ್

ನಿಮ್ಮ ಊರಿನ ಕೆರೆ, ಕಟ್ಟ, ಹೊಂಡಗಳು, ತಲಪೂರಿಕೆ ಹಾಗೂ ಮೀನುಗಳನ್ನು ಸಾಕಿಕೊಂಡಿರುವ ಮಾನವ ನಿರ್ಮಿತ ಕೃಷಿ ಹೊಂಡಗಳ ಬದುವುಗಳಲ್ಲಿ, ನೀರಿನಿಂದ ತುಸು ಮೇಲೆ ನೆಲದಿಂದ ಅತಿ ಕಡಿಮೆ ಎತ್ತರದಲ್ಲಿ ಮಣ್ಣನ್ನು ಕೊರೆದು ಪಕ್ಷಿಯೊಂದು ಮನೆ ಕಟ್ಟಿಕೊಂಡಿದ್ದು ಗಮನಿಸಿದ್ದೀರಾ?

ನಮ್ಮ ಊರು ಧಾರವಾಡದ ಹೊರವಲಯದಲ್ಲಿ ಕೆಲ ದಶಕಗಳ ಹಿಂದೆ ಗಣಿಗಾರಿಕೆ ನಡೆಸಲಾಗುತ್ತಿತ್ತು. ಹಾಗೆ ಗಣಿಗಾರಿಕೆ ನಡೆಸಿ, ನಿರ್ಮಿತವಾದ ಹೊಂಡಗಳಲ್ಲಿ ಇತ್ತೀಚಿನ ಮಳೆಯಿಂದಾಗಿ ಚಿಕ್ಕ ಕೆರೆಗಳು ನಿರ್ಮಾಣಗೊಂಡಿವೆ. ಇಲ್ಲಿ ದನಗಾಹಿಗಳು ನಿತ್ಯ ತಮ್ಮ ಜಾನುವಾರುಗಳ ಮೈ ತೊಳೆಯಲು ಆಗಮಿಸುವುದರಿಂದ ಈ ಪಕ್ಷಿ ಗಣಿಯ ಇಕ್ಕೆಲಗಳ ಗೋಡೆಯಂತಹ ಮಣ್ಣಿನಲ್ಲಿ ಅತ್ಯಂತ ಎತ್ತರದಲ್ಲಿ ತನ್ನ ಗೂಡು ಮಾಡಿಕೊಂಡಿದ್ದನ್ನು ನಾನು ಗಮನಿಸಿದ್ದೇನೆ. ಕೆಲವೊಮ್ಮೆ ವಿದ್ಯುತ್ ತಂತಿಯ ಮೇಲೂ ಬೇಟೆಗಾಗಿ ಕಾಯ್ದು ಕುಳಿತು ಈ ಹಕ್ಕಿ ಗಮನ ಸೆಳೆಯುತ್ತದೆ.

ಅತ್ಯಂತ ಚುರುಕಾದ, ಮಿರಿ ಮಿರಿ ಮಿಂಚುವ ನೀಲಿ ಮೈಬಣ್ಣ ಹೊಂದಿದ ಗುಬ್ಬಚ್ಚಿ ಗಾತ್ರದ ಈ ಹಕ್ಕಿಗೆ ‘ಕಿರು ಮಿಂಚುಳ್ಳಿ’- ‘Small Blue Kingfisher’ ಎಂದು ಕರೆಯುತ್ತಾರೆ. ಮೊನ್ನೆ ಛಾಯಾಪತ್ರಕರ್ತ-ಮಿತ್ರ ಜೆ.ಜಿ.ರಾಜ್ ಅವರೊಂದಿಗೆ ಧಾರವಾಡದಿಂದ ಮುಕುಟಖಾನ್ ಹುಬ್ಬಳ್ಳಿ (ಎಂ.ಕೆ. ಹುಬ್ಬಳ್ಳಿ ಸಕ್ಕರೆ ನಾಡು ಕೂಡ ಹೌದು.) ವರೆಗೆ ನೈಸರ್ಗಿಕವಾಗಿ ನಿರ್ಮಾಣಗೊಂಡಿರುವ ಕೆರೆಗಳ ಸ್ಥಿತಿ-ಗತಿ, ಬದುಕು-ಬವಣೆ ಗುರುತಿಸಲು ತೆರಳಿದ್ದೆವು. ಆಗ ಈ ಅಪರೂಪದ ಮಿತ್ರ ಮೀನು ಬೇಟೆಗಾರನಾಗಿ ನಮ್ಮ ಕಣ್ಣಿಗೆ ಕಂಡ. ಐತಿಹಾಸಿಕ ಮಹತ್ವದ ಕಿತ್ತೂರು ಸಮೀಪದ ‘ಕೆಂಪಗೇರಿ ಕಟ್ಟೆ’ ಕೆರೆಯಲ್ಲಿ ಈ ‘ಕಿರು ಮಿಂಚುಳ್ಳಿ’ ಕಿತ್ತೂರಿನ ಮೀನುಗಾರ ಶಿವಪ್ಪ ಅವರೊಂದಿಗೆ ಮೀನು ಬೇಟೆಯಲ್ಲಿ ತೊಡಗಿದ್ದ.

ಕಿರು ಮಿಂಚುಳ್ಳಿ 1

ಬಿಳಿ ಮಿಂಚುಳ್ಳಿ (ಪೈಡ್ ಕಿಂಗಫಿಷರ್), ಗದ್ದೆ ಮಿಂಚುಳ್ಳಿ (ವೈಟ್ ಬ್ರೆಸ್ಟೆಡ್ ಕಿಂಗಫಿಷರ್), ಹೆಮ್ಮಿಂಚುಳ್ಳಿ (ಸ್ಟ್ರೋಕ್ ಬಿಲ್ಡ್ ಕಿಂಗಫಿಷರ್) ಇವುಗಳಲ್ಲಿ ನಾವು ಕೆಂಪಗೇರಿ ಕಟ್ಟೆಯಲ್ಲಿ ಕಂಡ ಕಿರು ಮಿಂಚುಳ್ಳಿ (ಸ್ಮಾಲ್ ಬ್ಲೂ ಕಿಂಗಫಿಷರ್) ಅತ್ಯಂತ ಉಜ್ವಲ ವರ್ಣದ ಆಕರ್ಷಕ ಹಕ್ಕಿ. ಕುತ್ತಿಗೆ ಮತ್ತು ಹೊಟ್ಟೆಗೆ ಹೊಂಬಣ್ಣದ ಚೆಲುವು. ಬಲವಾದ ನೀಲಿ ಮಿಶ್ರಿತ ಕಪ್ಪು ಬಣ್ಣದ ಉದ್ದ ಕೊಕ್ಕು, ಚೋಟುದ್ದ ಕಾಲುಗಳು ಮಿಂಚುಳ್ಳಿಯ ದುಂಡನೆಯ ಆಕೃತಿಗೆ ಮೆರಗು ತೊಡಿಸಿವೆ.

ಭಾರತ, ಪಾಕಿಸ್ತಾನ, ಶ್ರೀಲಂಕಾ ಹಾಗೂ ಭರ್ಮಾಗಳಲ್ಲಿ ಕಾಣಸಿಗುವ ಕಿರು ಮಿಂಚುಳ್ಳಿಯಲ್ಲಿ ಗಂಡು ಮತ್ತು ಹೆಣ್ಣು ಪಕ್ಷಿಗಳಲ್ಲಿ ಹೇಳಿಕೊಳ್ಳುವಂತಹ ವ್ಯತ್ಯಾಸಗಳಿಲ್ಲ. ಮಾರ್ಚ್ ನಿಂದ ಜೂನ್ ತಿಂಗಳುಗಳಲ್ಲಿ ಹೊಳೆ-ಹಳ್ಳಗಳ ಕಡಿದಾದ ದಂಡೆಗಳಲ್ಲಿ ನೆಲಕ್ಕೆ ಸಮಾನಾಂತರವಾಗಿ ಪೊಟರೆ ಕೊರೆದು ಗೂಡು ಕಟ್ಟುತ್ತವೆ. ಸುಮಾರು ೫೦ ಸೆಂ.ಮೀ. ಉದ್ದದ ಈ ಮಣ್ಣಿನ ಪೊಟರೆಯಲ್ಲಿ ೫ ರಿಂದ ೭ ಮೊಟ್ಟೆಗಳನ್ನು ಹೆಣ್ಣು ಮಿಂಚುಳ್ಳಿ ಹಾಕುತ್ತದೆ. ಮೊಟ್ಟೆಗಳು ಶುಭ್ರ ಬಣ್ಣದ, ಮಿರಿ ಮಿರಿ ಮಿಂಚುವ ಗೋಲಿಯಂತೆ ದುಂಡಗಿರುತ್ತವೆ. ಮೊಟ್ಟೆ ಇರುವ ಗೂಡಿನ ಜಾಗ ಮಾತ್ರ ಅಗಲವಾಗಿದ್ದು, ತಾಯಿ-ತಂದೆ ಹಕ್ಕಿ ಜೋಡಿಯಾಗಿ ಮೊಟ್ಟೆಗಳ ಮೇಲೆ ಕುಳಿತು ಕಾವು ಕೊಡಲು ಅನುವಾಗುವಂತೆ ಇರುತ್ತದೆ. ಸಂತಾನೋತ್ಪತ್ತಿ ಕಾಲದಲ್ಲಿ ಮಾತ್ರ ಜೋಡಿಯಾಗಿ ಕಾಣುವ ಕಿರು ಮಿಂಚುಳ್ಳಿ, ಬಹುತೇಕ ಒಂಟಿಯಾಗಿಯೇ ಇರಲು, ಬೇಟೆಯಾಡಲು ಬಯಸುತ್ತದೆ. ಮತ್ತಷ್ಟು ಓದು »