ಇರ್ಷಾದ್ ಎಂ.ವೇಣೂರು
ಅವತ್ತು ನಾನು ಪತ್ರಿಕೋದ್ಯಮ ತರಗತಿಯಲ್ಲಿದ್ದೆ. ನಮ್ಮ ತರಗತಿ ಪ್ರಾರಂಭವಾಗುವುದು ದಿನಂಪ್ರತೀ ಯಾರಾದರೊಬ್ಬ ವಿದ್ಯಾರ್ಥಿ ಐದು ನಿಮಿಷ ಮಾತನಾಡಿದ ನಂತರವೇ. ನನ್ನ ಸಹಪಾಠಿ ಮಾತನಾಡಲು ಮುಂದೆ ಹೋದಾಗ ಭಾಸ್ಕರ್ ಸರ್ ನನ್ನನ್ನು ಕರೆದು “ಒಂದ್ನಿಮಿಷ…” ಅಂದ್ರು. ಹೋದೆ. “ಸುವರ್ಣ ನ್ಯೂಸ್ನವ್ರು ಒಂದು ರಿಯಾಲಿಟೀ ಶೋ ಮಾಡ್ತಿದ್ದಾರಂತೆ, ಸ್ಟೂಡೆಂಟ್ ರಿಪೋರ್ಟರ್ ಅಂತ. ನಮ್ಮ ಕಾಲೇಜಿನಿಂದ ಎರಡು ಮಂದಿಯನ್ನು ಕಳುಹಿಸುತ್ತಿದ್ದೇನೆ. ಒಂದು ನಿಮ್ಮ ಹೆಸರನ್ನೇ ನಾನು ಸೂಚಿಸಿದ್ದೇನೆ” ಎಂದು ಬ್ರೇಕಿಂಗ್ ನ್ಯೂಸ್ ಹೇಳಿದಾಗ ಖುಷಿಯಾಯಿತು. ಅಷ್ಟು ಹೊತ್ತಿಗೆ ನನ್ನ ಸಹಪಾಠಿಯ ಮಾತು ಮುಗಿದಿತ್ತು. ಸರ್ ವಿಷಯ ತರಗತಿಯ ಮುಂದಿಟ್ಟರು. ವರದಿಗಾರಿಕೆ, ಛಾಯಾಗ್ರಹಣ, ಪತ್ರಿಕೋದ್ಯಮದಲ್ಲಿ ನಿಮ್ಮ ಆಸಕ್ತಿ ಎಲ್ಲಾ ಗಮನಿಸಿ ಈ ಕಾರ್ಯಕ್ರಮಕ್ಕೆ ಕಳುಹಿಸುತ್ತಿದ್ದೇನೆ. ಒಬ್ಬರನ್ನು ಈಗಾಗಲೇ ಆರಿಸಿದ್ದೇನೆ. ಇನ್ನೊಬ್ಬರು ಬೇಕು. ಆಸಕ್ತಿ ಇದ್ದವರು ಮತ್ತೆ ಭೇಟಿಯಾಗಿ ಎಂದರು. ನನ್ನತ್ತ ತಿರುಗಿ ನಿಮ್ಮ ಬಯೋಡೆಟಾ ಆದಷ್ಟು ಬೇಗ ಕೊಡಿ. ನಾಳೇನೇ ಬೇಕು. ಅದನ್ನು ಸುವರ್ಣ ನ್ಯೂಸ್ ಗೆ ಕಳುಹಿಸಬೇಕು ಎಂದರು.
ಆ ದಿನ ನನಗಂತೂ ಖುಷಿಯೋ ಖುಷಿ. ಬಯಸದೇ ಒಂದು ಅವಕಾಶ ಯಾರನ್ನಾದರೂ ಅರಸಿ ಬಂದರೆ ಏನಾಗುತ್ತೋ ಆ ರೀತಿ ನಾನು ಸಂತಸಪಟ್ಟಿದ್ದೆ. ಮರುದಿನ ನನ್ನ ಪ್ರಕಟವಾದ ಲೇಖನಗಳ ಸಂಖ್ಯೆ, ಇಂಟರ್ನ್ ಶಿಪ್ ಮಾಡಿದ್ದು, ಪ್ರಾಯೋಗಿಕ ಪತ್ರಿಕೆ ಮಾಡಿದ್ದ ಅನುಭವ ಎಲ್ಲಾ ಸೇರಿಸಿ ‘ಡೇಟಾ’ ಹಾರ್ಡ್ ಕಾಪಿ ಸರ್ ಕೈಗಿತ್ತೆ. ನನ್ನ ಸಹಪಾಠಿ ಒಬ್ಬರು ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದರು. ಕೊನೇ ಕ್ಷಣದಲ್ಲಿ ಅವರು ಬರವುದಿಲ್ಲ ಎಂದಿದ್ದರಿಂದ ಸ್ನಾತಕೋತ್ತರ ವಿಭಾಗದ ಸ್ನೇಹಿತರೋರ್ವರು ಭಾಗವಹಿಸುವ ಉತ್ಸುಕತೆ ತೋರಿಸಿದ್ದರು. ಅಂತೂ ನಮ್ಮಿಬ್ಬರ ಹಣೆಬರಹಕ್ಕೆ ಪ್ರತ್ಯುತ್ತರ ಬಂತು. ಸಪ್ಟೆಂಬರ್ 5ಕ್ಕೆ ಬೆಂಗಳೂರಿನ ಗಾರ್ಡನ್ ಸಿಟಿ ಕಾಲೇಜಿನಲ್ಲಿ ಆಡಿಶನ್ ಇದೆ. ರಿಟನ್ ಟೆಸ್ಟ್ ಇರುತ್ತೆ ಬನ್ನಿ ಎಂದು ಕರೆ ಮಾಡಿ ಸೂಚಿಸಿದ್ದರು.ಹೋಗುವುದಕ್ಕೆ ನಾನು ಸಿದ್ಧನಾದೆ. ಹಿಂದಿನ ದಿನ ತರಗತಿಯಲ್ಲಿ ನಮಗೆ ವಿಶ್ ಮಾಡಿ ಕಳುಹಿಸಿದ್ರು. ಜೊತೆಗೆ ಜಯಿಸಿ ಬಾರಪ್ಪ ಎಂಬ ಸೂಚನೆಯೂ ಇತ್ತು. ಅಲ್ಲಿಯವರೆಗೂ ಖುಷಿ ಪಟ್ಟಿದ್ದ ನನಗೆ ತಲೆಬಿಸಿ ಏರತೊಡಗಿತು. ನಾನೇನೋ ಮುದ್ರಣ ಮಾಧ್ಯಮದ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದೇನೆ. ನಮ್ಮ ಕಾಲೇಜಿನ ನಮ್ಮೂರ ವಾರ್ತೆಯಲ್ಲಿ ಒಂದೆರಡು ಬಾರಿ ಭಾಗವಹಿಸಿದ್ದೇನೆ. ರಾಜ್ಯಾದ್ಯಂತ ಪತ್ರಿಕೋದ್ಯಮ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸ್ತಾರೆ. ನಗರ ಪ್ರದೇಶದವರೇ ಹೆಚ್ಚಿರ್ತಾರೆ. ನನ್ ಕತೆ ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಅನ್ನೋ ರೀತಿ ಮಾತ್ರ ಆಗದಿದ್ದರೆ ಸಾಕು ಎಂದು ತಲೆಬಿಸಿಯಲ್ಲೇ ಸ್ನೇಹಿತನೊಂದಿಗೆ ಬೆಂಗಳೂರು ಬಸ್ಸೇರಿದೆ.
ಅದು ಉಪವಾಸದ ಸಮಯ ಬೇರೆ. ನಾಳಿನ ಚಿಂತೆಯಲ್ಲೇ ಒಂದೆರಡು ಗಂಟೆ ನಿದ್ದೆ ಮಾಡಿದೆ. ಮತ್ತೆ ನಿದ್ದೆ ಹತ್ತಲೇ ಇಲ್ಲ. ಅಂತೂ ಕಗ್ಗತ್ತಲಲ್ಲಿ ಕಿಟಕಿಯ ಹೊರಗೆ ನೋಡುತ್ತಾ ಬೆಳಿಗ್ಗೆ 6 ಗಂಟೆಗೆ ಮೆಜಸ್ಟಿಕ್ ನಲ್ಲಿದ್ದೆ. ಫ್ರೆಶ್ ಆಗಿ ಕೆ.ಆರ್.ಪುರಂ ಕಡೆಗೆ ಹೋಗುವ ಬಸ್ ಏರಿದ್ದಾಯಿತು. 30-40 ನಿಮಿಷದ ಹಾದಿ ಅದು. ಅಲ್ಲಿ ಇಳಿದು ಒಂದೂವರೆ ಕಿ.ಮಿ. ಪಾದಯಾತ್ರೆ ಮಾಡಿದ ಬಳಿಕ ಸಿಕ್ತು ಗಾರ್ಡನ್ ಸಿಟಿ ಕಾಲೇಜು. ಸುಸ್ತಾಗಿ ಹೋಗಿತ್ತು. ಸಮಯ ಏಳೂವರೆ. ಸುವರ್ಣ ನ್ಯೂಸ್ ತಂಡ ಅಲ್ಲಿಗೆ ಆಗಮಿಸಿತ್ತು. ಅಂತೂ 9ಗಂಟೆಯ ಹೊತ್ತಿಗೆ ಸ್ಟೂಡೆಂಟ್ ರಿಪೋರ್ಟರ್ ಆಗಬೇಕೆಂದು ಕನಸು ಹೊತ್ತಿದ್ದ ಯುವ ಪತ್ರಕರ್ತರ ದಂಡು ಅಲ್ಲಿ ತುಂಬಿತು. ಒಬ್ಬೊಬ್ಬರನ್ನೇ ಗಮನಿಸತೊಡಗಿದೆ. ಎಲ್ಲರನ್ನೂ ನಾನು ತಲೆ ಮೇಲೆತ್ತಿಯೇ ನೋಡಬೇಕು! ಅಮೇರಿಕಾದಿಂದ ಈಗಷ್ಟೇ ದೇವನಹಳ್ಳಿಯಲ್ಲಿ ಲ್ಯಾಂಡ್ ಆದವರಂತೆ ಇಂಗ್ಲೀಷ್ ಬಿಡುತ್ತಿದ್ದರು. ಬಾಯ್ ಫ್ರೆಂಡ್ ಗೆ ವಿಶ್ ಮಾಡಿ ಕಳುಹಿಸಲು ಬಂದಿದ್ದ ಗರ್ಲ್ ಫ್ರೆಂಡೂ ಅಲ್ಲಿದ್ದಳು. ಪ್ರಿಯತಮೆಗೆ ಕೈಕುಲುಕಿ ಗುಡ್ ಲಕ್ ಹೇಳಲು ಬಂದಿದ್ದ ಅವನೂ ಅಲ್ಲಿದ್ದ! ಕೆಲವರ 2-3 ಪುಟಗಳ ಬಯೋಡೆಟಾ ನೋಡಿ ನನ್ನ ಅರ್ಧ ಪುಟದ ಬಯೋಡೆಟಾ ಜುಜುಬಿ ಎನಿಸಿತ್ತು! ಇವರನ್ನೆಲ್ಲಾ ನೋಡುತ್ತಿದ್ದಂತೆ ನಾಳೆ ಕಾಲೇಜಿಗೆ ಹೋಗಿ, ಸೋತರೆ ಏನು ಕಾರಣ ಕೊಡುವುದು ಎಂದು ಮುಂದಾಲೋಚನೆ ಮಾಡತೊಡಗಿದೆ.
ಅಷ್ಟೊತ್ತಿಗಾಗಲೇ ಕಪ್ಪು ಟೀ ಶರ್ಟ್ ಧರಿಸಿಕೊಂಡು ವಾಟಾಳ್ ಕನ್ನಡಕ ಹಾಕಿದ್ದವರೊಬ್ಬರು ಬಂದು ಸಾಲಾಗಿ ನಿಂತುಕೊಳ್ಳಿ ಅಂದ್ರು. ಅಲ್ಲೊಬ್ರು ಸುವರ್ಣ ತಂಡದವರು ಅವ್ರೇ ‘ಸಿಂಗ್ರಿ’ ವಾಯ್ಸ್ ಎಂದಿದ್ದು ಕೇಳಿಸಿತು. ಎಲ್ಲರಿಗೂ ಚೆಸ್ಟ್ ನಂಬರ್ ಬಂತು. ಕೆಲವರು ನನ್ ಲಕ್ಕಿ ನಂಬರ್ ಅದು, ಇದು ಎಂದು ಬೇಕಾದ್ದೆಲ್ಲ ತೆಗೆದುಕೊಂಡ್ರು. ನಾನು ಅವರು ಕೊಟ್ಟದ್ದನ್ನು ತೆಗೆದುಕೊಂಡೆ. ನನಗೆ ಸಿಕ್ಕಿದ್ದು 37. ಅಂತೂ ರಿಜಿಸ್ಟ್ರೇಷನ್ ಮಾಡಿಸಿ ಹಾಲ್ ನೊಳಗೆ ಕುಳಿತುಕೊಂಡೆ.
ಕೆಲ ಹೊತ್ತು ಬಿಟ್ಟ ನಂತರ ಆಂಗ್ರಿಮ್ಯಾನ್ ‘ಸಿಂಗ್ರಿ’ ಆಡಿಶನ್ ಸೂಚನೆಗಳನ್ನು ಕೊಡತೊಡಗಿದರು. ರಿಟನ್ ಟೆಸ್ಟ್ ಈಗ ಶುರುವಾಗುತ್ತೆ ಎಂಬ ಎಚ್ಚರಿಕೆಯೂ ಬಂತು. ನಿಗದಿಪಡಿಸಿದ್ದ ತರಗತಿಗಳಿಗೆ ನಮ್ಮನ್ನು ಕರೆದುಕೊಂಡು ಹೋಗಿ ಕುಳ್ಳಿರಿಸಿದರು. ಎರಡು ಕ್ಯಾಮೆರಾಗಳು ಹದ್ದುಕಣ್ಣಿನಿಂದ ನಮ್ಮನ್ನು ನುಂಗುತ್ತಿದ್ದವು. ಒಂದು ಬೆಂಚ್ ನಲ್ಲಿ ಇಬ್ಬರೇ. ಕಾಪಿ ಮಾಡಿದರೆ ಬ್ರೇಕಿಂಗ್ ನ್ಯೂಸ್ ಎಂದು ಸುವರ್ಣ ನ್ಯೂಸ್ ನಲ್ಲಿ ಬೀಳುತ್ತೆ ಎಂಬ ಮುನ್ಸೂಚನೆಯೊಂದಿಗೆ ಟೆಸ್ಟ್ ಪೇಪರ್ ಕೈಗಿತ್ತರು. ಅದುವರೆಗೂ ತಲೆ ಬಿಸಿ ಮಾಡುತ್ತಿದ್ದ ನಾನು ಪ್ರಶ್ನೆ ಪತ್ರಿಕೆ ಸಿಕ್ಕಿದ ಕೂಡಲೇ ಪುಟ ತಿರುವ ತೊಡಗಿದೆ. ದಿನಂಪ್ರತೀ ಪತ್ರಿಕೆ ಓದುತ್ತಿದ್ದರಿಂದ ನನಗೆ ಅರೆ… ಇದು ಸುಲಭ ಇದೆ ಅಲ್ವಾ? ಎಂದೆನಿಸಿತು. 25 ಪ್ರಶ್ನೆಗಳಿಗೆ ಉತ್ತರಿಸಲು 30 ನಿಮಿಷ ಸಮಯವಿದ್ದರೂ 5 ನಿಮಿಷದಲ್ಲಿ ಉತ್ತರಿಸಿ ಸಂಶಯವಿದ್ದ ಎರಡು ಪ್ರಶ್ನೆಗಳ ಬಗ್ಗೆ ಯೋಚಿಸುತ್ತಾ ಕುಳಿತಿದ್ದೆ. ಯೋಧರ ಸ್ಮಾರಕ ನಿರ್ಮಾಣವಾಗುವ ಪಾರ್ಕ್ ಯಾವುದು? ಚಿತ್ರದಲ್ಲಿರುವುದು ಮುಖೇಶ್ ಅಂಬಾನಿನೋ ಅಥವಾ ಅನಿಲ್ ಅಂಬಾನಿನೋ ಎಂದು ಯೋಚಿಸುತ್ತಿದ್ದೆ. 25ನೇ ಯಾಗಿ ಪ್ರಶ್ನೆ ಒಟ್ಟು ಎಷ್ಟು ಅಂಕಗಳನ್ನು ನಿರೀಕ್ಷಿಸುತ್ತೀರಿ ಎಂದಿತ್ತು. ಅಂತೂ ಬರೆದು ಕೊಟ್ಟು ಹೊರಬಂದೆ. 22 ಅಂಕ ಬರಬಹುದು ಎಂಬ ಆತ್ಮವಿಶ್ವಾಸ ಇತ್ತು. ಆದರೂ ಹೆದರಿಕೆ ಇತ್ತು. ಮುಂದೇನಾಯ್ತು? ನಾನು ಕಾಲೇಜಿಗೆ ಹೋಗಿ ಕಾರಣ ಕೊಡ್ಬೇಕಾಯ್ತಾ? ಅನ್ನೋದನ್ನು ಸುವರ್ಣ ನ್ಯೂಸ್ 24×7 ನಲ್ಲಿ ಪ್ರಸಾರವಾಗೋ ‘ಸ್ಟೂಡೆಂಟ್ ರಿಪೋರ್ಟರ್’ ರಿಯಾಲಿಟೀ ಶೋ ನೋಡಿ ತಿಳ್ಕೊಳ್ಳಿ. ಮಿಸ್ ಮಾಡ್ಕೋಬೇಡಿ ಪ್ಲೀಸ್…
ಒತ್ತಾಯ ಮಾಡಿರೋದು ನೋಡಿದ್ರೆ, ತಾವು ಅಲ್ಲಿ ಇರೋದು ಖಾತ್ರಿ ಆಯ್ತು!
ತಾವು ಅಲ್ಲಿ ಇಲ್ಲದೇ ಹೋಗಿದ್ರೆ, ಆ ಕಾರ್ಯಕ್ರಮವನ್ನು ನಾವು ನೋಡಿದ್ರೆಷ್ಟು ಬಿಟ್ರೆಷ್ಟು ಅಂತಿದ್ರೇನೋ…
🙂
🙂