ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 12, 2010

ಈ ಕಾಯ್ಕಿಣಿ ಖಾಲಿಯಾಗುವುದೇ ಇಲ್ಲವಾ ಅಂತ…

‍ನಿಲುಮೆ ಮೂಲಕ

ರಾಕೇಶ್ ಕುಮಾರ್ ಕಮ್ಮಜೆ

ಅನಿಸುತಿದೆ ಯಾಕೋ ಇಂದು

ನೀನೇನೆ ನನ್ನವಳೆಂದು…

‘ಮಂಗಾರು ಮಳೆ’ ಸಿನಿಮಾದ ಈ ಹಾಡು ಅದೆಷ್ಟು ಪ್ರಖ್ಯಾತಿ ಪಡೆಯಿತೆಂಬುದು ಎಲ್ಲರಿಗೂ ಗೊತ್ತಿದ್ದದ್ದೇ. ಪ್ರತಿಯೊಬ್ಬರ ಬಾಯಲ್ಲೂ ‘ಅನಿಸುತಿದೆ..’ಯದೇ ಅನುರಣನೆ. ಈಗಲೂ ಗುನುಗುವಿಕೆ ನಿಂತು ಹೋಗಿಲ್ಲ. ಯಾರಿಗಾದರೂ ಕರೆ ಮಾಡಿದರೆ ಕೇಳಿಸುವುದು ರಿಂಗ್ ಟೋನಲ್ಲ, ಅನಿಸುತಿದೆ.. ಹಾಡು!

ವಿಷಯ ಅದಲ್ಲ, ಈ ಹಾಡನ್ನು ಬರೆದ ಜಯಂತ ಕಾಯ್ಕಿಣಿ ಇದ್ದಾರಲ್ಲ, ಅವರ ಕಲ್ಪನೆ ಅದೆಷ್ಟು ಸೊಗಸಾಗಿದೆಯೆಂಬುದು! ಅಂದು ಹಾಡು ಬರೆಯಲು ಕೂತ ಕಾಯ್ಕಿಣಿ ಇನ್ನೂ ಅದ್ಭುತ ಅನ್ನಿಸುವಂತಹ ಹಾಡುಗಳನ್ನು ನೀಡುತ್ತಲೇ ಇದ್ದಾರಲ್ಲಾ ಅನ್ನುವುದು!

ನೀವೇ ನೋಡಿ, ಮುಂಗಾರು ಮಳೆಯ ಆ ಹಾಡು ಬಂದ ಕೆಲವೇ ದಿನಗಳಲ್ಲಿ ‘ಈ ಸಂಜೆ ಯಾಕಾಗಿದೆ… ನೀನಿಲ್ಲದೇ..’ ಅನ್ನುವ ನವಿರಾದ ಹಾಡು ಬರೆದರು ಕಾಯ್ಕಿಣಿ. ಅದರ ಗುಂಗು ಮುಗಿಯಿತೆನ್ನುವಷ್ಟರಲ್ಲಿ ‘ಮಿಂಚಾಗಿ ನೀನು ಬರಲು…’ ಅಂದುಬಿಟ್ಟರು. ಅದರ ಛಾಯೆಯಿಂದ ಹೊರಬಂದೆವೆನ್ನುವಷ್ಟರಲ್ಲಿ ‘ನಿನ್ನಿಂದಲೇ…ನಿನ್ನಿಂದಲೇ.. ಕನಸೊಂದು ಶುರುವಾಗಿದೆ…’ ಅನ್ನುವ ಮತ್ತೊಂದು ಅಮೋಘ ಹಾಡನ್ನು ತಯಾರಿಸಿಬಿಟ್ಟರು ಜಯಂತ ಕಾಯ್ಕಿಣಿ. ಅವರ ಸೂಪರ್ ಹಿಟ್ ಹಾಡುಗಳ ಭರಾಟೆ ಅಲ್ಲಿಗೂ ಮುಗಿಯಲಿಲ್ಲ. ಅದೆಲ್ಲಾ ಯಾಕೆ? ಮೊನ್ನೆ ಮೊನ್ನೆ ಬಂದ ‘ಹಾಗೇ ಸುಮ್ಮನೇ’ ಸಿನಿಮಾದ ಅಷ್ಟೂ ಹಾಡುಗಳನ್ನು ಅವರೇ ಬರೆದು ಸೋಜಿಗ ಸೃಷ್ಟಿಸಿದ್ದಾರೆ. ಅಚ್ಚರಿಯೆಂದರೆ ಎಲ್ಲವೂ ಮತ್ತೆ ಮತ್ತೆ ಗುನುಗುವಂಥ ಹಾಡುಗಳೇ! ಇಷ್ಟು ಸಾಲದ್ದಕ್ಕೆ ಈಗ ಬಂದ ‘ಜಂಗ್ಲಿ’ ಸಿನಿಮಾದಲ್ಲೂ ‘ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ…’ ಎಂಬ ಭಲೇ ಹಾಡನ್ನು ರಚಿಸಿ ಯುವಕ-ಯುವತಿಯರೆದೆಯಲ್ಲಿ ಸಂಚಲನ ತಂದಿದ್ದಾರೆ.

ಇಲ್ಲಿ ಹೇಳಿರುವ ಹಾಡುಗಳೆಲ್ಲಾ ಕೇವಲ ಉದಾಹರಣೆಗಳು ಅಷ್ಟೆ. ಇಲ್ಲಿ ಹೇಳದ, ಆದರೆ ಮರಮರಳಿ ಗುನುಗುವಂತಹ ಇನ್ನೂ ಅದೆಷ್ಟೋ ಹಾಡುಗಳನ್ನು ಸಿನಿಮಾ ಜಗತ್ತಿಗೆ ಈಗಾಗಲೇ ನೀಡಿದ್ದಾರೆ ಕಾಯ್ಕಿಣಿ. ಹಾಗಂತ ಆ ಮನುಷ್ಯ ಬಳಲಿಲ್ಲ, ಬರೆಯುತ್ತಲೇ ಇದ್ದಾರೆ!

ಅಲ್ಲ, ಒಬ್ಬ ಮನುಷ್ಯನಿಗೆ ಈ ಪರಿ ಹೃದಯದ ಕಪಾಟಿನೊಳಗೆ ನುಗ್ಗಿ ಬೆಚ್ಚಗೆ ಕೂರಬಲ್ಲ ಹಾಡುಗಳನ್ನು ಪದೇ ಪದೇ ಬರೆಯುವುದಕ್ಕೆ ಸಾಧ್ಯವಾ ಅಂತ?

ಏನೇ ಹೇಳಿ. ಈ ಜಯಂತ ಕಾಯ್ಕಿಣಿ ತುಸು ಮೊದಲೇ ಸಿನಿಮಾ ಜಗತ್ತಿಗೆ ಅಡಿಯಿಟ್ಟಿರುತ್ತಿದ್ದರೆ ಇನ್ನೂ ಅದೆಷ್ಟೋ ‘ಅನಿಸುತಿದೆ..’ಗಳನ್ನು ನಾವು ಈಗಾಗಲೇ ಕೇಳಬಹುದಿತ್ತು ಅನಿಸುತ್ತಿದೆ!

ಏನಂತೀರಿ?

ಚಿತ್ರಕೃಪೆ: ಗೂಗಲ್ ಇಮೇಜ್

Read more from ಲೇಖನಗಳು

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments