ಇರ್ಷಾದ್ ಎಂ.ವೇಣೂರು
ಬೈಕ್ ಯಾವತ್ತೂ ಜಾಲಿ ರೈಡ್ ಗೆ ಫೇಮಸ್. ಬೈಕ್ ಇದ್ರೆ ಬೇಕಾದ ಟೈಮಿಗೆ ಹೋಗಬಹುದು ಬೇಕಾದ ಟೈಮಿಗೆ ಬರಬಹುದು ಎಂಬುದು ಯುವಜನತೆ ಕಂಡುಕೊಂಡ ಸುಲಭ ವಿಧಾನ. ಆಫೀಸ್ ಗೆ ಹೋಗಲು ಯಾವತ್ತೂ ಲೇಟಾಗುತ್ತಿದ್ದ ಹಿರಿತಲೆಗಳೆಲ್ಲಾ ಟ್ರಾಫಿಕ್ ಸಹವಾಸ ಉಸ್ಸಪ್ಪ ಎಂದು ಬೈಕ್ ನಲ್ಲಿ ಸುಯ್ಯನೆ ಟ್ರಾಫಿಕ್ ಪಾಸ್ ಮಾಡುವ ಶಾರ್ಟ್ ಕಟ್ ವಿಧಾನ ಹುಡುಕಿಕೊಂಡು ಫುಲ್ ಖುಷ್ ಆಗಿದ್ದಾರೆ. ಕಾಲೇಜು ಹೋಗುವ ಹುಡುಗಿಯೂ ಸಿಟಿ ಬಸ್ ನಲ್ಲಿ ಉಸಿರುಗಟ್ಟುವಂತೆ ನಿಂತುಕೊಂಡು ಹೋಗುವುದಕ್ಕಿಂತ ಸ್ಕೂಟಿಯಲ್ಲಿ ಹೋಗುವುದೇ ಉತ್ತಮವೆಂದುಕೊಂಡಿದ್ದಾಳೆ.
ಎಲ್ಲಾ ಸರಿ ಸ್ವಾಮಿ ಆದರೆ ಮಳೆ ಬಂದರೆ ಇವರಿಗೆಲ್ಲಾ ಕೊಡೆ ಹಿಡಿಯಲು ಆ ಪರಮಾತ್ಮ ಬರುತ್ತಾನಾ ಎಂದು ಕೇಳಬೇಡಿ. ಇದೆಯಲ್ಲಾ ರೈನ್ ಕೋಟ್. ಹ್ಮ್… ಮಳೆಯಲ್ಲಿ ರೈನ್ ಕೋಟ್ ಹಾಕಿಕೊಂಡು ರೈಡ್ ಮಾಡುವಾಗ ಸಿಗುವ ಮಜಾ ಕೊಡೆ ಹಿಡಿದುಕೊಂಡು ನಡೆದಾಡುವಾಗಲು ಸಿಗುವುದಿಲ್ಲ. ಹೆಲ್ಮೆಟ್ ಹಾಕಿಕೊಂಡು, ಜಾಕೆಟ್ ಝಿಪ್ ಹಾಕಿ, ಪ್ಯಾಂಟ್ ಎಕ್ಸ್ೞ್ೞ್ ಲೇಟರ್ ಕೊಟ್ಟರೆ ಹೊರಗಡೆ ಎಷ್ಟೇ ಮಳೆ ಇದ್ದರೂ ಲೋಕದ ಪರಿವೇ ಇರುವುದಿಲ್ಲ. ಎಲ್ಲೋ ಗಾಜಿನ ಮನೆಯೊಳಗೆ ಕೂತು ಮಳೆಯನ್ನು ನೋಡಿದ ಹಾಗಾಗುಗುತ್ತದೆ.
ರೈನ್ ಕೋಟ್ ನಲ್ಲೂ ಹಲವಾರು ವಿಧವಿದೆ. ಕಾಲೇಜು ಹೋಗುವ ಹುಡುಗ ಮಾತ್ರ ಅಲ್ಲ ಆಫೀಸ್ ಗೆ ಸೀರೆ ಉಟ್ಟಕೊಂಡು ಹೋಗುವ ನಾರಿಯೂ ರೈನ್ ಕೋಟ್ ತೊಡುತ್ತಾಳೆ ಎಂದು ರೈನ್ ಕೋಟ್ ತಯಾರಕರಿಗೆ ಗೊತ್ತಿದೆ. ಹಾಗಾಗಿ ಜಾಕೆಟ್ – ಪ್ಯಾಂಟ್, ಕೋಟ್ ರೀತಿಯ ರೈನ್ ಕೋಟುಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತವೆ. ಕಾಲೇಜು – ಆಫೀಸುಗಳಿಗೆ ಹೋಗುವ ನಾರಿಯರಂತೂ ಉದ್ದನೆಯ ಕೋಟ್ ರೀತಿಯ ರೈನ್ ಕೋಟ್ ಧರಿಸುತ್ತಾರೆ. ಅದರ ಬಟನ್ ಗಳನ್ನು ಹಾಕಿದಷ್ಟೇ ವೇಗವಾಗಿ ಸುಲಭವಾಗಿ ಕಳಚಬಹುದು. ಲೇಟಾಗಿದ್ರೂ ರೈನ್ ಕೋಟ್ ಬೈಕ್ ಮೇಲಿಟ್ಟು ಹೋಗಬಹುದು. ಆದರೆ ಜಾಕೆಟ್ ಪ್ಯಾಂಟ್ ತೊಟ್ಟರೆ ಅದನ್ನು ಕಳಚುವುದು ಅಷ್ಟು ಸುಲಭವಲ್ಲ. ಬೆಲ್ಟ್ ಸ್ಯಾಂಡಲ್ ಹಾಕಿದ್ದರಂತೂ ಚಪ್ಪಲಿ ತೆಗಿಯಲೇಬೇಕು. ಒಂಟಿ ಕಾಲಿನಲ್ಲಿ ನಿಂತು ಸ್ವಲ್ಪ ಸರ್ಕಸ್ ಮಾಡಲೇಬೇಕು. ಸರ್ಕಸ್ಸು ಒಂಟಿಕಾಲು ಏನೇ ಇರಲಿ. ಈ ರೀತಿಯ ರೈನ್ ಕೋಟ್ ತೊಟ್ಟರೆ ಬೆಚ್ಚನೆ ಇರಬಹುದು. ರೈನ್ ಕೋಟ್ ಒಳಗೆ ಸ್ವಲ್ಪವೂ ನೀರು ಬರುವುದಿಲ್ಲ.
ರೈನ್ ಕೋಟ್ ನಲ್ಲಿ ಗಂಡಸರಿಗಾಗಿ – ಹೆಂಗಸರಿಗಾಗಿ ಎಂದೇನೂ ಪ್ರತ್ಯೇಕ ಕೋಟಾಗಳಿಲ್ಲ. ಕೋಟು ಬೇಕಾದರೆ ಕೋಟು – ಜಾಕೆಟ್ ಪ್ಯಾಂಟ್ ಬೇಕಾದರೆ ಜಾಕೆಟ್ ಪ್ಯಾಂಟು ಬೇಕಾದ್ದನ್ನು ಆರಿಸಿಕೊಳ್ಳಬಹುದು. ಬ್ಯೂಸಿ ಮನುಷ್ಯರೆಲ್ಲಾ ಹೆಚ್ಚಾಗಿ ಕೋಟು ತೆಗೆದುಕೊಳ್ಳುತ್ತಾರೆ. ರೈನ್ ಕೋಟು ಸೀಸನ್ ಗಳಲ್ಲಿ ಎಲ್ಲಾ ರೆಡಿಮೇಡ್ ಮಳಿಗೆಗಳು ರೈನ್ ಕೋಟು ಮಳಿಗೆಗಳಾಗುಗುತ್ತವೆ. ಫೂಟ್ ಪಾಟ್ ಗಳೂ ಮಾರಾಟ ಮಳಿಗೆಗಳಾಗಿ ಬಿಡುತ್ತವೆ. ಫುಟ್ ಪಾಟ್ ನಲ್ಲಾದರೆ ಚೌಕಾಶಿಯೂ ನಡೆಯುತ್ತದೆ. ರೈನ್ ಕೋಟ್ ಗಳು ಹೆಚ್ಚಿನ ಬಾಳಿಕೆ ಬರುವಂತಹವು ಬೇಕಾದರೆ ಅವುಗಳ ಬೆಲೆ ಸಾವಿರ ರೂ.ಗಳಿಗಿಂತಲೂ ಮೇಲಿರುತ್ತದೆ.
ರೈನ್ ಕೋಟ್ ಹಾಕಿಕೊಂಡು ರೈಡ್ ಮಾಡುವಾಗ ಮಳೆಯನ್ನು ಅನುಭವಿಸಿದಷ್ಟು ಕೊಡೆ ಹಿಡಿದು ನಡೆದಾಡಿದಾಗಲೂ ಅನುಭವಿಸಲಾಗುವುದಿಲ್ಲ ಎಂದು ಒಂದೇ ಮಾತಿನಲ್ಲಿ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ ಶರ್ವಾನ್. ರೈನ್ ಕೋಟ್ ಕಥೆ ಇಲ್ಲಿಗೇ ಮುಗಿದಿಲ್ಲ. ಶಾಲೆಗೆ ಹೋಗುವ ಮಕ್ಕಳು ಭಾರವಾದ ಬ್ಯಾಗ್ ಜೊತೆ ಛತ್ರಿ ಹಿಡಿಯುವ ಕಷ್ಟ ಪಡುವುದು ಬೇಡ ಎಂದು ಅವರಿಗೂ ರೈನ್ ಕೋಟ್ ಕೊಡಿಸುತ್ತಾರೆ. ಅವರು ಮಳೆಯಲ್ಲಿ ಕುಣಿದು ಕುಪ್ಪಳಿಸುತ್ತಾ ಬರುವುದನ್ನು ನೋಡಿದರೆ ರೈನ್ ಕೋಟ್ ಹಾಕಿಕೊಳ್ಳುವ ಮನಸ್ಸು ಹಿರಿತಲೆಗಳಿಗೂ ಉಂಟಾಗುತ್ತದೆ. ಮಳೆಯ ನೆನಪನ್ನು ಮತ್ತೆ ಬಿಚ್ಚಿಸುವ ರೈನ್ ಕೋಟ್ ಗೆ ಹ್ಯಾಟ್ಸ್ ಆಫ್ ಎನ್ನಲೇ ಬೇಕಲ್ವಾ?
ಚಿತ್ರ ಕೃಪೆ : ಅಂತರ್ಜಾಲ