ಕೋಮುವಾದವೂ ಮೂಲಭೂತವಾದವೂ
ದಕ್ಷಿಣ ಕನ್ನಡದಲ್ಲಿ ಈಚಿನ ವರ್ಷಗಳಲ್ಲಿ ಹಿಂದೂ- ಮುಸ್ಲಿಂ ಸಂಘರ್ಷಗಳು ಹೆಚ್ಚಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಬಗ್ಗೆ ಸಾಕಷ್ಟು ಲೇಖನಗಳು ಕಾಲಕಾಲಕ್ಕೆ ವಿವಿಧ ಪತ್ರಿಕೆಗಳಲ್ಲಿ ಬಂದಿವೆ. ಪುಸ್ತಕಗಳೂ ಬಂದಿವೆ. ಆದರೆ , ಹೆಚ್ಚಿನ ಲೇಖನಗಳು ಸಮಸ್ಯೆಯ ಆಳಕ್ಕಿಳಿದು ಚರ್ಚಿಸುವುದಿಲ್ಲ. ಮೇಲು ಮೇಲಿಂದ ನೊಡಿ ಎಲ್ಲ ಕೋಮುವಾದಿಗಳನ್ನು ಖಂಡಿಸಬೇಕು ಎಂದು ಹೇಳಿದಾಕ್ಷಣ ಸಮಸ್ಯೆ ಪರಿಹಾರವಾಗದು.
ವಾಸ್ತವವಾಗಿ ಹಿಂದೂ ಮತ್ತು ಮುಸ್ಲಿಂ ಸಂಸ್ಕೃತಿಗಳು ಬದುಕನ್ನು ಗ್ರಹಿಸುವ ಬಗೆಯಲ್ಲಿಯೇ ವ್ಯತ್ಯಾಸಗಳಿವೆ.
ಹಿಂದೂ ಎಂಬೊಂದು ಏಕರೂಪಿ ಘಟಕ ಇಲ್ಲ ನಿಜ. ಆದರೆ ಸೃಷ್ಟಿ ಮತ್ತು ಸೃಷ್ಟಿಕರ್ತ ಇವೆಲ್ಲ ಪೂಜನೀಯ ಎಂದು ಗ್ರಹಿಸುವ ,ಅಂಥ ನಂಬಿಕೆಗಳನ್ನು ಹೊಂದಿರುವುದೇ ಈ “ಹಿಂದು” ಎಂದು ನಾವು ಅನುಕೂಲಕ್ಕಾಗಿ ಕರೆಯುವ ಗುಂಪುಗಳ ನಡುವೆ ಇರುವ ಸಾಮ್ಯತೆ ಎನ್ನಬಹುದು. ಇಂಥ ನಂಬಿಕೆಗಳು ಬಹುಸಂಸ್ಕೃತಿಗಳ ಅಸ್ತಿತ್ವಕ್ಕೆ ಪೂರಕ ಎಂದು ಬೇರೆ ಹೇಳಬೇಕಾಗಿಲ್ಲ. ಹಿಂದೂ ಧರ್ಮಗಳ ಒಳಗೇ ಭೇದಭಾವ ಇತ್ಯಾದಿ ಸಮಸ್ಯೆಗಳಿವೆ.ಅದು ಸಾಕಷ್ಟು ಚರ್ಚಿತವಾದ ವಿಷಯವೇ ಆಗಿದೆ.
ವಾಸ್ತವವಾಗಿ ಹಿಂದೂ-ಮುಸ್ಲಿಂ ಸಂಘರ್ಷವೆಂದರೆ ಅದು ಆಧುನಿಕತೆಗೆ ತೆರೆದುಕೊಂಡ ಮತ್ತು ಹಾಗೆ ತೆರೆದುಕೊಳ್ಳಲು ಹಿಂಜರಿಯುವ ಸಂಸ್ಕೃತಿಗಳ ನಡುವಿನ ಸಂಘರ್ಷವೂ ಹೌದು.ಅವರವರು ಅವರವರಷ್ಟಕ್ಕೇ ಇರಲಿ ಏನು ಸಮಸ್ಯೆ ಎನ್ನಲು ಸಾಧ್ಯವಿಲ್ಲ ಯಾಕೆಂದರೆ ಇವೆರಡೂ ಸಂಸ್ಕೃತಿಗಳೂ ಒಟ್ಟಿಗೇ ಬದುಕಬೇಕಾಗಿದೆ ಇಲ್ಲಿ.
ದಕ್ಷಿಣ ಕನ್ನಡದಲ್ಲಿ “ಹಿಂದೂ ಹುಡುಗಿ ” ಮತ್ತು “ಮುಸ್ಲಿಂ ಹುಡುಗ” ಜತೆಯಾಗಿ ಬಸ್ಸಲ್ಲಿ ಪ್ರಯಾಣಿಸಿದರೆ ಅಥವಾ ಪರಸ್ಪರ ಮಾತನಾಡಿದರೆ ಹಲ್ಲೆಗೆ ಒಳಗಾಗುವ ಪ್ರಸಂಗಗಳು ವರದಿಯಾಗುತ್ತವೆ.ಇಂಥ ಹಲ್ಲೆಗಳು ಖಂಡನೀಯವೇ ಹೌದು. ಇದರ ಹಿಂದೆ ಪುರುಷಾಹಂಕಾರದ ಪ್ರವೃತ್ತಿ ಇದೆ ಎನ್ನುವುದು ಎಲ್ಲರಿಗೂ ಅರ್ಥವಾಗುವ ವಿಚಾರ. ಆದರೆ ಇಂಥ ಪ್ರಸಂಗಗಳ ಬಗ್ಗೆ ಚಿಂತಿಸುವಾಗ ಇನ್ನಷ್ಟು ಸೂಕ್ಷ್ಮವಾಗಿ ನೋಡಬೇಕಾದ ಅಗತ್ಯವಿದೆ. ಉದಾಹರಣೆಗೆ ಮಂಗಳೂರಿನ ಕುಪ್ರಸಿದ್ಧ ಪಬ್ ದಾಳಿಯ ನಂತರ ಮಂಗಳೂರು ಹೇಗೆ ಕೋಮುವಾದಿಗಳ ತಾಣವಾಗುತ್ತಿದೆ ಎನ್ನುವ ಲೇಖನ ದ ವೀಕ್ ಪತ್ರಿಕೆಯಲ್ಲಿ ಪ್ರಕಟವಾಯಿತು. ( ಎನ್, ಭಾನುತೇಜ್, ವೀಕ್, ಫೆಬ್ರವರಿ -೨೦೦೯). ಎಲ್ಲ ಸರಿ; ಆದರೆ ಅದರಲ್ಲಿದ್ದ ಕೆಲವು ಸಾಲುಗಳು ಹೀಗಿದ್ದವು.”ಮುಸ್ಲಿಂ ಹುಡುಗರು ಮತ್ತು ಹಿಂದೂ ಹುಡುಗಿಯರ ನಡುವಿನ ಸ್ನೇಹಕ್ಕೆ ಗರಿಷ್ಟ ಶಿಕ್ಷೆ. ಹಿಂದು ಹುಡುಗ-ಮುಸ್ಲಿಂ ಹುಡುಗಿ ಸ್ನೇಹದ ವಿರುದ್ಧ ಯಾವುದೇ ಅಟ್ಯಾಕ್ ಆದ ಬಗ್ಗೆ ವರದಿಗಳಿಲ್ಲ.”(ಪು.೧೬). ಈ ಹೇಳಿಕೆ ನಿಜವಾಗಿ ಮಿಸ್ ಲೀಡ್ ಮಾಡುವಂಥದ್ದು. ದ.ಕ.ದಲ್ಲಿ ಹಿಂದು ಹುಡುಗ ಮತ್ತು ಮುಸ್ಲಿಂ ಹುಡುಗಿ ಝತೆಯಾಗಿ ಓಡಾಡುವ ಸನ್ನಿವೇಶಗಳು ಇಲ್ಲವೆಂಬಷ್ಟು ಕಡಮೆ ಎನ್ನುವ ಸತ್ಯವನ್ನು ಈ ಹೇಳಿಕೆ ಮರೆಮಾಚುತ್ತದೆ. ಮತ್ತಷ್ಟು ಓದು 





