ಬೀಟ್ ಬಾಯ್ಸ್…ಇವರು ಬೀಟೆಡ್ ಬಾಯ್ಸ್!
ಇರ್ಷಾದ್ ವೇಣೂರು
ಜಗತ್ತೇ ಮಲಗಿರುವಾಗ ಬುದ್ದನೊಬ್ಬ ಎದ್ದ ಎನ್ನುವುದು ಹಳೇ ಮಾತು. ಆದರೆ ಈ ಮಾಡರ್ನ್ ಯುಗದಲ್ಲಿ ಎಲ್ಲರೂ ಮಲಗಿರುವಾಗ ಎದ್ದು ಕಾಯಕವೇ ಕೈಲಾಸ ಎಂದು ದುಡಿಯುವವರು ಯಾರು ಗೊತ್ತಾ? ಸ್ವಲ್ಪ ಬುದ್ದಿಗೆ ಕೆಲಸ ಕೊಡಿ. ಇನ್ನೂ ತಿಳೀಲಿಲ್ವಾ? ಈ ಪತ್ರಿಕೆ ನಿಮ್ಮ ಮನೆ ಬಾಗಿಲಿಗೆ ತಲುಪಿಸಿದ್ದು ಯಾರು? ಹಾ…. ಅವರೇ…. ದಿನಪತ್ರಿಕೆ ಹಂಚುವವರು.
ಮಧ್ಯರಾತ್ರಿಯ ಹೊತ್ತಿಗೆ ಪತ್ರಿಕಾ ಮುದ್ರಣಾಲಯ ಬಿಟ್ಟ ಪ್ರೆಸ್ ವಾಹನ ತನ್ನ ಸಂಚಾರವನ್ನು ಆರಂಭಿಸಿರುತ್ತದೆ. ತನ್ನ ರೂಟ್ ಗಳಲ್ಲಿ ಬರುವ ವೆಂಡರ್ ಅರ್ಥಾತ್ ಪತ್ರಿಕಾ ಏಜೆಂಟ್ ನಿಗೆ ನಸುಕಿನ ಜಾವ 3ರ ಹೊತ್ತಿಗೆ ಪತ್ರಿಕೆಗಳ ಬಂಡಲ್ ಇಳಿಸಿ ಹೋಗಿರುತ್ತದೆ. ಅಲ್ಲಿಂದ ಶುರು. ಹೊಸ ಪ್ರಪಂಚವೊಂದು ತೆರೆದುಕೊಳ್ಳುತ್ತದೆ. ನಿಶ್ಯಬ್ದವಾಗಿ ಮಲಗಿರುವ ಫುಟ್ಪಾತ್ ಗಳು ಎಚ್ಚರಗೊಳ್ಳುತ್ತವೆ. ದಿನಪತ್ರಿಕೆ ಬಂಡಲ್ ಗಳು ಬಿಚ್ಚತೊಡಗುತ್ತವೆ. ಪತ್ರಿಕೆಗಳು ಎಷ್ಟು ಬಂದಿವೆ ಎಂಬ ಎಣಿಕೆ ಪ್ರಾರಂಭವಾಗುತ್ತದೆ. ಅಷ್ಟಾಗುವಾಗ ಬೀಟ್ ಬಾಯ್ಸ್ ಆಗಮನವಾಗುತ್ತದೆ. ಬೇರೆಯಾಗಿಯೇ ಇರುವ ಪುರವಣಿಗಳನ್ನು ದಿನ ಪತ್ರಿಕೆಯ ಮುಖ್ಯ ಆವೃತ್ತಿಯ ಜೊತೆ ಸೇರಿಸುವ ಕೆಲಸ ಚಾಲನೆ ಪಡೆದುಕೊಳ್ಳುತ್ತದೆ. ಸುಮಾರು 6 ಗಂಟೆಯಾಗುವ ಹೊತ್ತಿಗೆ ಅಷ್ಟೂ ಪತ್ರಿಕೆಗಳ ಜೋಡಣೆ ಮುಗಿದು ಬಸ್ ಗಳಲ್ಲಿ ಕಳಿಸುವ ಪಾರ್ಸಲ್, ಬೀಟ್ ಬಾಯ್ಸ್ ಪಾರ್ಸಲ್ ಹೀಗೆ ಹಂಚಿಕೆ ಪ್ರಾರಂಭವಾಗುತ್ತದೆ. ಬಳಿಕ ಬೀಟ್ ಬಾಯ್ಸ್ ಗಳ ಕಾರುಬಾರು ಶುರುವಾಗುತ್ತದೆ.
ಒಂದು ಏರಿಯಾಕ್ಕೆ ದಿನಪತ್ರಿಕೆ ಹಾಕುವವರನ್ನು ಪತ್ರಿಕಾ ಏಜನ್ಸಿ ಏಜೆಂಟ್ ಅರ್ಥಾತ್ ನ್ಯೂಸ್ ಪೇಪರ್ ವೆಂಡರ್ಗಳು ಬೀಟ್ ಬಾಯ್ಸ್ ಎಂದು ಕರೆಯುತ್ತಾರೆ. ತಮ್ಮ ತಮ್ಮ ಸೈಕಲ್ ಗಳಿಗೆ ಚೀಲಗಳಲ್ಲಿ ದಿನಪತ್ರಿಕೆ ಕಟ್ಟಿಕೊಂಡು ಹತ್ತಿದರೆಂದರೆ ಮತ್ತೆ ಕೆಳಗಿಳಿಯುವುದು ತಮ್ಮ ಏರಿಯಾದ ಕೊನೆಯಲ್ಲಿ. ಅಷ್ಟೂ ನಾಜೂಕಿನಿಂದ ಸೈಕಲ್ ನಲ್ಲೇ ಕುಳಿತು ಜಾದೂ ಮಾಡಿದವರಂತೆ, ಏಕಲವ್ಯ ಬಿಟ್ಟ ಬಾಣದಂತೆ ಪೇಪರ್ ಗುರಿ ಇಟ್ಟು ಎಸೆಯುವ ಇವರ ಗುರಿ ಮುಟ್ಟಿರುತ್ತದೆ. ಎಸೆದ ಪೇಪರ್ ಯಾವ ಮನೆಯ ಸಿಟ್ಔಟ್ ನಲ್ಲಿ ಬೀಳಬೇಕೋ ಅಲ್ಲೇ ಹೋಗಿ ಬಿದ್ದಿರುತ್ತದೆ. ಕಾಂಪ್ಲೆಕ್ಸ್ ನ ಶಟರ್ ಮುಂದೆ ಕೂತಿರುತ್ತದೆ. ಇನ್ನು ಕೆಲವೆಡೆ ಗೇಟಿನ ಪೈಪ್ ಒಳಗಡೆ ಸೇಫ್ ಆಗಿರುತ್ತವೆ.
ವಾಕಿಂಗ್ ಹೊರಟವರೆಲ್ಲ ಮನೆ ಹಾದಿ ಹಿಡಿಯುವಾಗ ಬೀಟ್ ಬಾಯ್ ಬರುತ್ತಿರುತ್ತಾನೆ. ಅವನ ಸೈಕಲ್ ಅವರ ವಾಕ್ ಲಯಕ್ಕೆ ಸರಿ ಸಾಟಿಯಾಗುವಂತೆ ವೇಗ ತಗ್ಗಿಸಿ ಸಂಚಾರಿಯಾಗಿಯೇ ದಿನ ಪತ್ರಿಕೆ ಕೈಗಿಡುತ್ತಾನೆ. ವಾಕ್’ಮ್ಯಾನ್ ವಾಕಿಂಗ್ ನಲ್ಲೇ ಪತ್ರಿಕೆ ಬಿಡಿಸುತ್ತಾನೆ! ಸಾಮಾನ್ಯವಾಗಿ ನೂರು ಮನೆಗಳಿಗೆ ಒಬ್ಬನಂತೆ ಬೀಟ್ ಬಾಯ್ ಇರುತ್ತಾನೆ. ದಿನಪತ್ರಿಕೆ ಬೇಗ ಓದುಗರಿಗೆ ಸಿಗಲಿ ಎನ್ನುವ ಕಾರಣಕ್ಕಾಗಿ ವೆಂಡರ್ ಗಳು ಹೀಗೆ ಮಾಡಿರುತ್ತಾರೆ. ಮತ್ತಷ್ಟು ಓದು 





