ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 26, 2010

ಬೀಟ್ ಬಾಯ್ಸ್…ಇವರು ಬೀಟೆಡ್ ಬಾಯ್ಸ್!

‍ನಿಲುಮೆ ಮೂಲಕ

ಇರ್ಷಾದ್ ವೇಣೂರು

ಜಗತ್ತೇ ಮಲಗಿರುವಾಗ ಬುದ್ದನೊಬ್ಬ ಎದ್ದ ಎನ್ನುವುದು ಹಳೇ ಮಾತು. ಆದರೆ ಈ ಮಾಡರ್ನ್ ಯುಗದಲ್ಲಿ ಎಲ್ಲರೂ ಮಲಗಿರುವಾಗ ಎದ್ದು ಕಾಯಕವೇ ಕೈಲಾಸ ಎಂದು ದುಡಿಯುವವರು ಯಾರು ಗೊತ್ತಾ? ಸ್ವಲ್ಪ ಬುದ್ದಿಗೆ ಕೆಲಸ ಕೊಡಿ. ಇನ್ನೂ ತಿಳೀಲಿಲ್ವಾ? ಈ ಪತ್ರಿಕೆ ನಿಮ್ಮ ಮನೆ ಬಾಗಿಲಿಗೆ ತಲುಪಿಸಿದ್ದು ಯಾರು? ಹಾ…. ಅವರೇ…. ದಿನಪತ್ರಿಕೆ ಹಂಚುವವರು.

ಮಧ್ಯರಾತ್ರಿಯ ಹೊತ್ತಿಗೆ ಪತ್ರಿಕಾ ಮುದ್ರಣಾಲಯ ಬಿಟ್ಟ ಪ್ರೆಸ್ ವಾಹನ ತನ್ನ ಸಂಚಾರವನ್ನು ಆರಂಭಿಸಿರುತ್ತದೆ. ತನ್ನ ರೂಟ್ ಗಳಲ್ಲಿ ಬರುವ ವೆಂಡರ್ ಅರ್ಥಾತ್ ಪತ್ರಿಕಾ ಏಜೆಂಟ್ ನಿಗೆ ನಸುಕಿನ ಜಾವ 3ರ ಹೊತ್ತಿಗೆ ಪತ್ರಿಕೆಗಳ ಬಂಡಲ್ ಇಳಿಸಿ ಹೋಗಿರುತ್ತದೆ. ಅಲ್ಲಿಂದ ಶುರು. ಹೊಸ ಪ್ರಪಂಚವೊಂದು ತೆರೆದುಕೊಳ್ಳುತ್ತದೆ. ನಿಶ್ಯಬ್ದವಾಗಿ ಮಲಗಿರುವ ಫುಟ್ಪಾತ್ ಗಳು ಎಚ್ಚರಗೊಳ್ಳುತ್ತವೆ. ದಿನಪತ್ರಿಕೆ ಬಂಡಲ್ ಗಳು ಬಿಚ್ಚತೊಡಗುತ್ತವೆ. ಪತ್ರಿಕೆಗಳು ಎಷ್ಟು ಬಂದಿವೆ ಎಂಬ ಎಣಿಕೆ ಪ್ರಾರಂಭವಾಗುತ್ತದೆ. ಅಷ್ಟಾಗುವಾಗ ಬೀಟ್ ಬಾಯ್ಸ್ ಆಗಮನವಾಗುತ್ತದೆ. ಬೇರೆಯಾಗಿಯೇ ಇರುವ ಪುರವಣಿಗಳನ್ನು ದಿನ ಪತ್ರಿಕೆಯ ಮುಖ್ಯ ಆವೃತ್ತಿಯ ಜೊತೆ ಸೇರಿಸುವ ಕೆಲಸ ಚಾಲನೆ ಪಡೆದುಕೊಳ್ಳುತ್ತದೆ. ಸುಮಾರು 6 ಗಂಟೆಯಾಗುವ ಹೊತ್ತಿಗೆ ಅಷ್ಟೂ ಪತ್ರಿಕೆಗಳ ಜೋಡಣೆ ಮುಗಿದು ಬಸ್ ಗಳಲ್ಲಿ ಕಳಿಸುವ ಪಾರ್ಸಲ್, ಬೀಟ್ ಬಾಯ್ಸ್ ಪಾರ್ಸಲ್ ಹೀಗೆ ಹಂಚಿಕೆ ಪ್ರಾರಂಭವಾಗುತ್ತದೆ. ಬಳಿಕ ಬೀಟ್ ಬಾಯ್ಸ್ ಗಳ ಕಾರುಬಾರು ಶುರುವಾಗುತ್ತದೆ.
ಒಂದು ಏರಿಯಾಕ್ಕೆ ದಿನಪತ್ರಿಕೆ ಹಾಕುವವರನ್ನು ಪತ್ರಿಕಾ ಏಜನ್ಸಿ ಏಜೆಂಟ್ ಅರ್ಥಾತ್ ನ್ಯೂಸ್ ಪೇಪರ್ ವೆಂಡರ್ಗಳು ಬೀಟ್ ಬಾಯ್ಸ್ ಎಂದು ಕರೆಯುತ್ತಾರೆ. ತಮ್ಮ ತಮ್ಮ ಸೈಕಲ್ ಗಳಿಗೆ ಚೀಲಗಳಲ್ಲಿ ದಿನಪತ್ರಿಕೆ ಕಟ್ಟಿಕೊಂಡು ಹತ್ತಿದರೆಂದರೆ ಮತ್ತೆ ಕೆಳಗಿಳಿಯುವುದು ತಮ್ಮ ಏರಿಯಾದ ಕೊನೆಯಲ್ಲಿ. ಅಷ್ಟೂ ನಾಜೂಕಿನಿಂದ ಸೈಕಲ್ ನಲ್ಲೇ ಕುಳಿತು ಜಾದೂ ಮಾಡಿದವರಂತೆ, ಏಕಲವ್ಯ ಬಿಟ್ಟ ಬಾಣದಂತೆ ಪೇಪರ್ ಗುರಿ ಇಟ್ಟು ಎಸೆಯುವ ಇವರ ಗುರಿ ಮುಟ್ಟಿರುತ್ತದೆ. ಎಸೆದ ಪೇಪರ್ ಯಾವ ಮನೆಯ ಸಿಟ್ಔಟ್ ನಲ್ಲಿ ಬೀಳಬೇಕೋ ಅಲ್ಲೇ ಹೋಗಿ ಬಿದ್ದಿರುತ್ತದೆ. ಕಾಂಪ್ಲೆಕ್ಸ್ ನ ಶಟರ್ ಮುಂದೆ ಕೂತಿರುತ್ತದೆ. ಇನ್ನು ಕೆಲವೆಡೆ ಗೇಟಿನ ಪೈಪ್ ಒಳಗಡೆ ಸೇಫ್ ಆಗಿರುತ್ತವೆ.
ವಾಕಿಂಗ್ ಹೊರಟವರೆಲ್ಲ ಮನೆ ಹಾದಿ ಹಿಡಿಯುವಾಗ ಬೀಟ್ ಬಾಯ್ ಬರುತ್ತಿರುತ್ತಾನೆ. ಅವನ ಸೈಕಲ್ ಅವರ ವಾಕ್ ಲಯಕ್ಕೆ ಸರಿ ಸಾಟಿಯಾಗುವಂತೆ ವೇಗ ತಗ್ಗಿಸಿ ಸಂಚಾರಿಯಾಗಿಯೇ ದಿನ ಪತ್ರಿಕೆ ಕೈಗಿಡುತ್ತಾನೆ. ವಾಕ್’ಮ್ಯಾನ್ ವಾಕಿಂಗ್ ನಲ್ಲೇ ಪತ್ರಿಕೆ ಬಿಡಿಸುತ್ತಾನೆ! ಸಾಮಾನ್ಯವಾಗಿ ನೂರು ಮನೆಗಳಿಗೆ ಒಬ್ಬನಂತೆ ಬೀಟ್ ಬಾಯ್ ಇರುತ್ತಾನೆ. ದಿನಪತ್ರಿಕೆ ಬೇಗ ಓದುಗರಿಗೆ ಸಿಗಲಿ ಎನ್ನುವ ಕಾರಣಕ್ಕಾಗಿ ವೆಂಡರ್ ಗಳು ಹೀಗೆ ಮಾಡಿರುತ್ತಾರೆ.
ಎಚ್ಚರಿಕೆ! ನಾಯಿ ಇದೆ ಎನ್ನುವ ಮನೆಗಳಲ್ಲಂತೂ ಬೀಟ್ ಬಾಯ್ಸ್ ಒಮ್ಮೊಮ್ಮೆ ಬೀಟೆಡ್ ಬಾಯ್ ಗಳಾಗಬೇಕಾಗುತ್ತದೆ. ಹುಚ್ಚೆದ್ದು ಕುಣಿಯುವ ನಾಯಿಗಳು ತಮ್ಮ ತೃಷೆ ತೀರಿಸಿಕೊಂಡಿರುತ್ತವೆ. ಸ್ವಲ್ಪ ತಡವಾದರೆ ಮನೆಯ ವಾನರ’ನಿಂದ ಹಿಗ್ಗಾಮುಗ್ಗ ಬೈಸಿಕೊಳ್ಳೋಕು ತಯಾರಾಗಬೇಕಾಗುತ್ತದೆ. ಇನ್ಯಾವುದೋ ಕಾರಣದಿಂದ ಮನೆ ಮುಂದಿದ್ದ ಚಪ್ಪಲಿಗಳು ಕಾಣದಂತೆ ಮಾಯವಾದರೆ ಬೀಟ್ ಬಾಯ್ಸ್ ಬಂದ ಕೂಡಲೇ ಇವರೇ ಕೊಂಡು ಹೋದೋರು ಎನ್ನುವ ಮನೆ ಮಂದಿಯೂ ಇದ್ದಾರೆ!
ಸುಮಾರು 6.45 ರಿಂದ 7ರ ಹೊತ್ತಿಗೆ ಬೀಟ್ ಬಾಯ್ ಗಳು ತಮ್ಮ ಕೆಲಸ ಮುಗಿಸಿ ಮನೆ ಕಡೆಗೆ ಹೆಜ್ಜೆ ಹಾಕುತ್ತಾರೆ. ತಿಂಗಳಾಂತ್ಯದಲ್ಲಿ ದಿನ ಪತ್ರಿಕೆ ಬಿಲ್ ಸಂಗ್ರಹ ಮಾಡುವ ಜವಾಬ್ದಾರಿಯೂ ಇವರ ಹೆಗಲಿಗೆ. ಬಿಲ್ ಕೇಳಲು ಹೋದಾಗಿನ ಕಥೆಯೂ ವಿಭಿನ್ನವಾಗಿರುತ್ತದೆ. ಹೋದ ಕೂಡಲೇ ಬಿಲ್ ತೆಗೆದುಕೊಳ್ಳಪ್ಪಾ ಎಂದು ಕೈಗಿಡುವವರೂ ಇದ್ದಾರೆ. ಇನ್ನು ಕೆಲವರು ಹಣ ತೆಗೆದುಕೊಳ್ಳೋಕೆ ಯಾವಾಗ ಬರಬೇಕೂಂತ ಗೊತ್ತಗಲ್ವಾ? ಎಂದು ಮಂಗಳಾರತಿ ಮಾಡುತ್ತಾರೆ. ಈಗಿಲ್ಲ ನಾಳೆ ಬಾ ಎಂದು ನಾಳೆ ಎಂಬುದೇ ಬರದ ‘ನಾಳೆ’ಮಣಿಗಳೂ ಇದ್ದಾರೆ.
ಅಂತೂ ಇಂತೂ ಬಿಲ್ ಸಂಗ್ರಹಿಸಿ ವೆಂಡರ್ ಗೆ ನೀಡಿದಾಗ ಬೀಟ್ ಬಾಯ್ ಗಳ ತಿಂಗಳ ಸಂಬಳ ಬರುತ್ತದೆ. ನಿದ್ದೆ ಬಿಟ್ಟಿದ್ದಕ್ಕೆ ಇನಾಮು ಸಿಗುತ್ತದೆ. ಹೆಚ್ಚಿನ ವೆಂಡರ್ ಗಳು ಒಂದು ದಿನಪತ್ರಿಕೆಯಲ್ಲಿ ಇಷ್ಟು ಎಂಬಂತೆ ಕಮಿಷನ್ ನೀಡುತ್ತಾರೆ. ಇನ್ನು ಕೆಲವರು ತಿಂಗಳಿಗೆ 500-600 ರೂ.ಗಳ ಸಂಬಳ ನೀಡುತ್ತಾರೆ. ಇನ್ನು ಕೆಲವು ವೆಂಡರ್ ಗಳು ದಿನಪತ್ರಿಕೆ ಬಿಲ್ ಸಂಗ್ರಹದಲ್ಲಿ ಕೈ ಜೋಡಿಸಿದ್ದಕ್ಕೆ 100-200 ರೂ. ಹೆಚ್ಚಿಗೆ ಕೊಡುತ್ತಾರೆ. ಬೀಟ್ ಬಾಯ್ ಗೆ ಸಂಬಳ ಕೊಡೋಕೆ ಮೀನ ಮೇಷ ಎಣಿಸೋ ವೆಂಡರ್ ಗಳೂ ಇದ್ದಾರೆ. ಹೇಳ ಹೊರಟರೆ ಅದರದ್ದೊಂದು ಬೇರೆಯೇ ಕಥೆಯಾಗಬಹುದು.
ಬೀಟ್ ಬಾಯ್ ಗಳದ್ದು 365 ದಿನದ ಕೆಲಸ. ಒಂದು ದಿನ ರಜೆ ಮಾಡಿದರೆ ವೆಂಡರ್ ಗಳಿಂದ ಉಗಿಸಿಕೊಳ್ಳಬೇಕಾದ ಸ್ಥಿತಿ. ಭಾರೀ ಕಷ್ಟದಲ್ಲಿ ನಾಲ್ಕೈದು ತಿಂಗಳಿಗೊಮ್ಮೆ ಅತ್ತಿತ್ತ ಸುತ್ತಾಡಲು ಒಂದು ರಜೆ ಸಿಗುತ್ತದೆ. ಬೀಟ್ ಬಾಯ್ಸ್, ವೆಂಡರ್ ಗಳು ರಜೆ ಮಾಡಿದ್ದಾರೆಂದರೆ ಆ ದಿನ ಪತ್ರಿಕೆ ಮನೆಗೆ ಬರುವುದೇ ಕಷ್ಟ!
ಒಂದರ್ಥದಲ್ಲಿ ವೃತ್ತಿಯಲ್ಲಿ ಬೀಟ್ ಬಾಯ್ಸ್ ಆಗಿರೋ ಇವರೆಲ್ಲಾ ನಿಜ ಜೀವನದಲ್ಲೂ ಬೀಟೆಡ್ ಬಾಯ್ಸ್. ಮನೆಯ ಆರ್ಥಿಕ ತೊಂದರೆ, ಕಷ್ಟ ಸಂಕಷ್ಟಗಳನ್ನು ಕಂಡು ತಮ್ಮ ಖರ್ಚು ಹೊಂದಿಸಿಕೊಳ್ಳುವವರು. ಆ ಮೂಲಕ ಶಿಕ್ಷಣಕ್ಕೆ ಹಣ ಹೊಂದಿಸುವವರು. ಬದುಕು ಕಟ್ಟಿಕೊಳ್ಳಬೇಕೆಂಬ ಮಹದಾಸೆಯಿಂದ ನೀಯತ್ತಿನಿಂದ ದುಡಿಯುವವರು. ದಿನಂಪ್ರತೀ ನಾಲ್ಕು ಗಂಟೆಗೆ ಏಳುವ ಇವರೆಲ್ಲಾ ಮತ್ತೆ ಚಾಪೆಗೊರಗುವುದು ರಾತ್ರಿಯೇ. ಪೇಪರ್ ಕೆಲಸ ಮುಗಿಸಿ ಶಾಲೆ – ಕಾಲೇಜು ಕಡೆಗೆ ಹೆಜ್ಜೆ ಹಾಕುತ್ತಾರೆ. ತಿಂಗಳಾಂತ್ಯದಲ್ಲಿ ಬರುವ ಅಲ್ಪ ಆದಾಯದಿಂದಲೇ ಅಂತೂ ದಿನ ಹೋಗುತ್ತದೆ.
ನನ್ನ ಅಪ್ಪ ಅಬಕಾರಿ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದರು. ಐದು ವರ್ಷಗಳ ಹಿಂದೆ ಅವರ ಇಹಲೋಕ ತ್ಯಜಿಸಿದರು. ಅಪ್ಪನ ಪೆನ್ಶನ್ ಹಣ ತಿಂಗಳಿಗಿಷ್ಟು ಬರುತ್ತದೆ. ಆದರೆ ಅದರಿಂದ ಜೀವನ ನಡೆಸುವುದು ಕಷ್ಟ. ಅಮ್ಮ ಬೀಡಿ ಕಟ್ಟುತ್ತಾರೆ. ನಾನು ಬೀಟ್ ಬಾಯ್ ಆಗಿ ಕೆಲಸ ಮಾಡುತ್ತೇನೆ. ಕೆಲಸ ಮುಗಿಸಿ ಕಾಲೇಜಿಗೆ ಹೋಗುತ್ತೇನೆ ಎನ್ನುತ್ತಾರೆ ವೇಣೂರಿನ ಎಸ್ಡಿಎಂ ಐಟಿಐನಲ್ಲಿ ಅಟೋಮೊಬೈಲ್ ವಿಭಾಗದಲ್ಲಿ ಕಲಿಯುತ್ತಿರುವ ಬೆಳ್ತಂಗಡಿಯ ಕಿಶನ್.
ಊರು ಮುಟ್ಟಬೇಕೆಂದು ರೇಸ್ ಟ್ರಾಕ್ ನಲ್ಲಿ ಓಡಿಸಿದಂತೆ ಬೆಳಗಿನ ಜಾವ ನಿದ್ದೆ ಮಂಪರಿನಲ್ಲಿ ವಾಹನ ಓಡಿಸುವ ಚಾಲಕರಿಗೆ ಬೀಟ್ ಬಾಯ್ಸ್ ಬಲಿಯಾಗಬೇಕಾದ ಸಂದರ್ಭಗಳೂ ಒಮ್ಮೊಮ್ಮೆ ಬರುತ್ತದೆ. ಅನ್ನದ ಪಾತ್ರೆ ತುಂಬಿಸ ಹೊರಟ ಮಗುವೊಂದು ಅನ್ಯಾಯವಾಗಿ ಬಲಿಯಾಗಬೇಕಾಗುತ್ತದೆ.
ನಾನು ಎಂಟನೇ ತರಗತಿಯಿಂದ ಬೀಟ್ ಬಾಯ್ ಆಗಿ ಕೆಲಸ ಮಾಡುತ್ತಿದ್ದೇನೆ. ನಮಗೆ ಹೆದರಿಕೆಯಾಗುವುದು ಟೂರಿಸ್ಟ್ ಬಸ್ ಗಳದ್ದು. ಮೈಮೇಲೆ ಬಂದಂತೆ ಒಮ್ಮೊಮ್ಮೆ ಅವು ಬರುವಾಗ ಹೆದರಿಕೆಯಾಗುತ್ತದೆ. ಆದರೆ ಅದಕ್ಕೆಲ್ಲಾ ಹೆದರ ಹೋದರೆ ನನ್ನ ಖರ್ಚನ್ನು ನಾನು ಹೊಂದಿಸಿಕೊಳ್ಳೋದು ಹೇಗೆ? ಎಂದು ಪ್ರಶ್ನಿಸುತ್ತಾರೆ ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಶುಭಕರ.

Read more from ಲೇಖನಗಳು

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments